Homeಅಂಕಣಗಳುಸರ್ವಾಧಿಕಾರಿಗಳಿಗೆ ಸತ್ಯವಲ್ಲ, ಗೆಲುವು ಮುಖ್ಯ!

ಸರ್ವಾಧಿಕಾರಿಗಳಿಗೆ ಸತ್ಯವಲ್ಲ, ಗೆಲುವು ಮುಖ್ಯ!

- Advertisement -
- Advertisement -

“ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!” ಇದು ಕುಖ್ಯಾತ ನರಹಂತಕ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ತನ್ನ ಕಟ್ಟಾ ಬೆಂಬಲಿಗರಿಗೆ ಹೇಳಿದ ಮಾತು.
ಅತ ತನ್ನ ಪಕ್ಷದ ನಾಯಕರಿಗೆ ಇನ್ನೊಂದು ಮಾತನ್ನೂ ಹೇಳಿದ್ದ. ಅದೆಂದರೆ, “ಜನರು ಹೇಳಿದಂತೆ ಕೇಳಲು ನಾವಿರುವುದಲ್ಲ; ನಾವು ಹೇಳಿದ್ದನ್ನು ಅವರು ಕೇಳುವಂತೆ ಮಾಡಬೇಕು!”
ಇಂತದ್ದೇ ಮಾತನಾಡುತ್ತಾ, ಸಾವಿರಾರು ಸುಳ್ಳುಗಳನ್ನು ಹೇಳುತ್ತಾ, ಕಮ್ಯೂನಿಸ್ಟರು, ಯಹೂದಿಗಳು ಮುಂತಾಗಿ ಬೇರೆ ಬೇರೆ ಜನವಿಭಾಗಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸುತ್ತಾ, ಪೋಲೆಂಡ್, ಫ್ರಾನ್ಸ್ ಮುಂತಾದ ನೆರೆಯ ದೇಶಗಳನ್ನು ಚಿರಶತ್ರುಗಳು ಎಂದು ಕಾಣಿಸುತ್ತಾ, ಬಣ್ಣ ಬಣ್ಣದ ಕನಸುಗಳನ್ನು ಬಿತ್ತುತ್ತಾ, ಮೆಲ್ಲಮೆಲ್ಲನೆ ಅಧಿಕಾರಕ್ಕೇರಿ, ನಂತರ ಒಂದೇ ಏಟಿಗೆ ಎಲ್ಲಾ ಅಧಿಕಾರಗಳನ್ನು ತನ್ನ ಮುಷ್ಟಿಯೊಳಗೆ ಮಾಡಿಕೊಂಡು ಲಕ್ಷಾಂತರ ಜನರ ಯಾತನಾಮಯ ಸಾವಿಗೆ ಕಾಣನಾದ ಹಿಟ್ಲರನ ಕತೆ ಮೇಲುಮೇಲಿಗೆ ಎಲ್ಲರಿಗೂ ಗೊತ್ತಿರುವಂತದ್ದೇ!
ಇಲ್ಲಿ ನಮ್ಮದೇ ದೇಶದಲ್ಲಿಯೂ ಇಂತಹ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ಎಚ್ಚರಿಕೆಯಿಂದ ನೋಡಬೇಕಾದ ಅಗತ್ಯವಿದೆ ಎಂದು ಹೇಳಿದರೆ ಇದು ಪ್ಯಾರನಾಯ್ಡ್ (ಹುಚ್ಚು ಭಯ) ಚಿಂತನೆ ಎಂದು ಹೇಳುವವರು ಅನೇಕರಿರಬಹುದು! ಆದರೆ, ಹಿಟ್ಲರ್ ಮೇಲೇರಿದ ರೀತಿಗೂ, ಇಲ್ಲಿಯೂ ಕಣ್ಣಿಗೆ ರಾಚುವಂತೆ ನಡೆಯುತ್ತಿರುವ ಕೆಲವು ಯೋಜಿತ ವಿದ್ಯಮಾನಗಳಿಗೂ ಇರುವ ಸಾಮ್ಯತೆಗಳನ್ನು ನಾವು ಸ್ವಲ್ಪ ಹೆಚ್ಚು ಸೂಕ್ಷ್ಮವಾಗಿ ಗಮನಿಸಿ ಹೋಲಿಸಿ ನೋಡಿದರೆ, ಇಂತಹ ಭಯ ಸಂಪೂರ್ಣ ಅಕಾರಣವಲ್ಲ ಎಂಬುದು ಗೊತ್ತಾಗುತ್ತದೆ.
ಮೊದಲಿಗೆ ಹಿಟ್ಲರ್ ಅಧಿಕಾರಕ್ಕೆ ಬಂದ ಮತ್ತು ನಂತರ ಬೆಳೆದ ರೀತಿಯನ್ನು ಗಮನಿಸೋಣ. ಆತ ಒಮ್ಮಲೇ ಅಧಿಕಾರಕ್ಕೆ ಏರಿದವನಲ್ಲ. ಸೇನಾ ಹಿನ್ನೆಲೆ ಇದ್ದರೂ ಯಾವುದೇ ಸೇನಾ ಕ್ಷಿಪ್ರ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದವನೂ ಅಲ್ಲ! ಆತ ಮೊದಲನೆಯ ಜಾಗತಿಕ ಯುದ್ಧದಲ್ಲಿ ಸೋಲಿನ ಬಳಿಕ ಜರ್ಮನಿಯಲ್ಲಿ ಇದ್ದ ವೈಮರ್ ರಿಪಬ್ಲಿಕ್ ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ರೈಕ್‍ಸ್ಟಾಗ್ ಎಂಬ ಸಂಸತ್ತಿನ ವ್ಯವಸ್ಥೆಯನ್ನೇ ಚಾಣಾಕ್ಷತನದಿಂದ ಬಳಸಿಕೊಂಡು ಅಧಿಕಾರದ ಹಜಾರದೊಳಗೆ ಜಿರಳೆಯಂತೆ ಮೀಸೆ ತೂರಿಸಿ, ನಂತರ ಇಡೀ ಹಜಾರವನ್ನೇ ಆಕ್ರಮಿಸಿದವ! ಅದೂ ಜನರ ಮೂಗಿನ ಅಡಿಯಲ್ಲಿಯೇ, ಮತ್ತು ಅವರ ಬೆಂಬಲದ ಜೊತೆಗೆಯೇ!
ಹಿಟ್ಲರ್ ಸಂದರ್ಶನವೊಂದರಲ್ಲಿ ಆಡಿದ ಮಾತನ್ನು ನಾವು ಗಮನಿಸಬೇಕು. “ಹತ್ತು ವರ್ಷಗಳ ಹಿಂದೆ ನಾನು ಜರ್ಮನಿಯನ್ನು ಆಳುತ್ತೇನೆ ಎಂದಾಗ ಜನರು ನಕ್ಕಿದ್ದರು. ನಂತರ ನಾನು ಅಧಿಕಾರಕ್ಕೆ ಬಂದಾಗಲೂ ಜನರು ನಕ್ಕಿದ್ದರು. ನಾನು ಮುಂದೆಯೂ ಅಧಿಕಾರದಲ್ಲಿ ಇರಲಿದ್ದೇನೆ ಎಂದಾಗಲೂ ಜನರು ನಗುತ್ತಲೇ ಇದ್ದಾರೆ!” ಅಂದರೆ, ಏನು ಮಾಡಿದರೂ ಮೂರ್ಖ ಜನರು ವಿರೋಧಿಸುವುದಿಲ್ಲ; ಅವರನ್ನು ಮೂರ್ಖರನ್ನಾಗಿಯೇ ಇರಿಸುವ ಕಲೆ ತನಗೆ ಸಿದ್ಧಿಸಿದೆ ಎಂಬ ಅಹಂಕಾರ ಈ ಮಾತಿನಲ್ಲಿ ಕಾಣಿಸುತ್ತಿಲ್ಲವೆ? ಇಂತಹ ಅಹಂಕಾರವನ್ನು ನೀವು ನಮ್ಮ ದೇಶದಲ್ಲಿ ಕಂಡಿದ್ದೀರಾ? ಗಮನಿಸಿದ್ದೀರಾ?!
ಜರ್ಮನಿಯಲ್ಲಿ ಲೆಕ್ಕಕ್ಕೇ ಇಲ್ಲದಿದ್ದ ಪಕ್ಷವೊಂದು ಕೆಲವು ಜನಮರುಳು ಮತ್ತು ಕುತಂತ್ರಿ ಯೋಜನೆಗಳ ಮೂಲಕ ಹೇಗೆ ಪ್ರಬಲ ಪಕ್ಷವಾಗಿ ಬೆಳೆಯಿತು ಎಂಬುದನ್ನು ನೋಡಿದರೆ ಭಾರತದಲ್ಲಿಯೂ ಇದಕ್ಕೆ ಸಮಾನಾಂತರವಾದ ಉದಾಹರಣೆ ಸಿಗುತ್ತದೆ. ತಂತ್ರಗಳಲ್ಲಿಯೂ ನೀವು ಹೋಲಿಕೆ ಕಾಣಬಹುದು.
1920ರ ತನಕ ಜರ್ಮನಿಯಲ್ಲಿ ಜರ್ಮನ್ ವರ್ಕರ್ಸ್ ಪಾರ್ಟಿ ಎಂಬ ಹೆಸರಿಗೆ ಮಾತ್ರ ಕಾರ್ಮಿಕರ, ಅದರೆ ಅಂತರಂಗದಲ್ಲಿ ತೀರಾ ಬಲಪಂಥೀಯವಾಗಿದ್ದ ಪಕ್ಷವೊಂದಿತ್ತು. ನಂತರ ಇದು ಹಿಟ್ಲರನ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ (ಜರ್ಮನಿಯಲ್ಲಿ ಎನ್‍ಎಸ್‍ಡಿಎಪಿ) ಎಂದಾಯಿತು. ಆಂಟನ್ ಡ್ರೆಕ್ಸರ್ ಎಂಬಾತ ಇದರ ಸ್ಥಾಪಕ. ಕಮ್ಯುನಿಸ್ಟ್ ವಿರೋಧಿಗಳ ಈ ಕೂಟವೂ ಸಮಾಜವಾದಿ ಪದವನ್ನು ರಾಷ್ಟ್ರೀಯತೆಯ ಜೊತೆ ಬೆರೆಸಿತ್ತು! ನಮ್ಮಲ್ಲಿಯೂ ಗಾಂಧೀಜಿಯನ್ನು ಕೊಂದವರ ಬೆಂಬಲಿಗ ಪಕ್ಷವೊಂದು ಕೆಲ ಸಮಯ ರಾಷ್ಟ್ರೀಯವಾದಿ ಗಾಂಧಿಯನ್ ಸಮಾಜವಾದದ ಸ್ಲೋಗನ್ ಹಿಡಿದು ನೇತಾಡಿರಲಿಲ್ಲವೆ? “ಒಂದು ದೇಶ, ಒಂದು ಜನ, ಏಕೈಕ ನಾಯಕ” ಎಂಬುದು ಅದರ ಏಕೈಕ ಘೋಷಣೆ.
ಇದಕ್ಕಿಂತ ಮುಂಚೆ ಬವೇರಿಯಾದ ಅರಸ ಲುಡ್ವಿಗ್ III ಎಂಬಾತನ ಕಾಲದಲ್ಲಿ ಮೊದಲ ಮಹಾಯುದ್ಧ ಆರಂಭವಾಗಿತ್ತು! ಇದು 1914ರಲ್ಲಿ ಆರಂಭವಾಗಿ ಜರ್ಮನಿಯ ಹೀನಾಯ ಸೋಲಿನೊಂದಿಗೆ ಕೊನೆಗೊಂಡಿತು. ಜರ್ಮನಿಯು 1918ರಲ್ಲಿ ಅವಮಾನಕಾರಿ ಶರತ್ತುಗಳಿದ್ದ ಶರಣಾಗತಿ ಒಪ್ಪಂದಕ್ಕೆ ಸಹಿಹಾಕಬೇಕಾಯಿತು. ಇದನ್ನೇ ಮುಂದೆ ಹಿಟ್ಲರ್ ಜರ್ಮನರಲ್ಲಿ ಹುಸಿ ದೇಶಪ್ರೇಮ ಬಡಿದೆಬ್ಬಿಸಲು ಬಳಸಿಕೊಂಡ. ನಮ್ಮಲ್ಲಿ ದೇಶ ವಿಭಜನೆ, ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಯುದ್ಧವನ್ನು ಈಗಲೂ ದ್ವೇಷವನ್ನು ಜೀವಂತವಾಗಿಡಲು ಬಳಸಿಕೊಳ್ಳುತ್ತಿರುವ ಮಾದರಿಯೇ ಇದು! ಜರ್ಮನಿಯಲ್ಲಿ ಮೇಲ್ನೋಟಕ್ಕೆ ಪ್ರಜಾಪ್ರಭುತ್ವ ಎನಿಸಿಕೊಂಡ ವೈಮರ್ ರಿಪಬ್ಲಿಕ್ ಸ್ಥಾಪನೆಯಾಯಿತು.
ಜರ್ಮನರ ಮೇಲೆ ಸವಾರಿ ಮಾಡಿದ್ದ ಹಿಟ್ಲರ್ ಮೂಲತಃ ಆಸ್ಟ್ರಿಯಾದವನು. ಆತ ಜರ್ಮನ್ ಪ್ರಜೆಯೂ ಆಗಿರಲಿಲ್ಲ. ಅದರೆ, ರಾಜ ಲುಡ್ವಿಗ್‍ನ ಶಿಫಾರಸು ಪಡೆದು ಸೇನೆಯ ಬವೇರಿಯನ್ ರೆಜಿಮೆಂಟ್ ಒಂದಕ್ಕೆ ಸೇರಿದ. ನಂತರ ಗುಪ್ತಚರ ಅಧಿಕಾರಿಯಾದ. ಇಲ್ಲಿ ಪಡೆದ ಸೇನಾಧಿಕಾರಿಗಳ ಗುಪ್ತ ಸಂಪರ್ಕಗಳನ್ನು ಆತ ಮುಂದೆ ಚೆನ್ನಾಗಿ ಬಳಸಿಕೊಂಡ. ಇಲ್ಲಿಯೂ ಕೆಲವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾವು ವೇಷ ಮರೆಸಿ ಪಕ್ಷದ ಗುಪ್ತಚರನಾಗಿ ತಿರುಗಾಡುತ್ತಿದ್ದಾಗಿ ಹೇಳಿಕೊಳ್ಳುತ್ತಾರೆ!
ಯುದ್ಧ ಮುಗಿದ ತಕ್ಷಣವೇ ಆತ 1919ರಲ್ಲಿಯೇ ಜರ್ಮನ್ ವರ್ಕರ್ಸ್ ಪಾರ್ಟಿ ಸೇರಿದ. ಅದು ಎನ್‍ಎಸ್‍ಡಿಎಪಿ ಆದಾಗ, ಅವನ ಪ್ರಭಾವ ಬೆಳೆಯಿತು. 1920ರಲ್ಲಿ ಕೇವಲ ಅರವತ್ತಕ್ಕೂ ಕಡಿಮೆ ಇದ್ದ ಸದಸ್ಯ ಬಲವನ್ನು ಆತ 1945ರ ಹೊತ್ತಿಗೆ 85 ಲಕ್ಷಕ್ಕೆ ಏರಿಸಿದ್ದ. ಜನರನ್ನು ಉದ್ರೇಕಿಸಿ, ಸುಳ್ಳುಹೇಳಿ ರೊಚ್ಚಿಗೆಬ್ಬಿಸುವ ಕಲೆ ಆತನಿಗೆ ಸಿದ್ದಿಸಿತ್ತು. ಆತನ ಭಾಷಣ ನಾಟಕೀಯವಾಗಿರುತ್ತಿತ್ತು. ಕೈಕಾಲು ಆಡಿಸುತ್ತಾ ಭಯಂಕರ ಹಾವಭಾವ, ಅಣಕಗಳೊಂದಿಗೆ ಜನರನ್ನು ಹುಚ್ಚೆಬ್ಬಿಸಿ ಮೈಮರೆಯುವಂತೆ ಮಾಡುತ್ತಿದ್ದ. ಇದರಿಂದ ಅವನ ಜನಪ್ರಿಯತೆ ಹೆಚ್ಚಿತು.
ಪಕ್ಷವನ್ನು ಬೆಳೆಸಲು ಹಲವು ಕುಟಿಲ ತಂತ್ರಗಳನ್ನು ಬಳಸಿಕೊಂಡ. ಹಿಂದೆ ರಾಜಸತ್ತೆ ಇದ್ದ ಬವೇರಿಯಾದಲ್ಲಿ ಕ್ಯಾಥೊಲಿಕ್ ಕ್ರೈಸ್ತರು ಪ್ರಬಲರಾಗಿದ್ದರು. ಅವರಿಗೆ ಪ್ರೊಟೆಸ್ಟೆಂಟ್ ಪ್ರಾಬಲ್ಯ ಇರುವ ಬರ್ಲಿನ್ ಆಡಳಿತದ ಮೇಲೆ ಅಸಮಾಧಾನವಿತ್ತು. ಅದನ್ನು ಬಳಸಿಕೊಂಡ. ಕಮ್ಯುನಿಸ್ಟ್ ಮತ್ತು ಯಹೂದಿ ವಿರೋಧಿ ನಿಲುವನ್ನು ತೀವ್ರಗೊಳಿಸಿದ. ಸಂಘರ್ಷ-ಹೊಡೆದಾಟಗಳೂ ತೀವ್ರಗೊಂಡವು. ಪರಿಣಾಮವಾಗಿ 1920ರಲ್ಲಿ ನಡೆದ ಚುನಾವಣೆಯಲ್ಲಿ ಆತನ ಪಕ್ಷ 555 ಸದಸ್ಯ ಬಲದ ರೈಖ್‍ಸ್ಟಾಗ್‍ನಲ್ಲಿ 101 ಸ್ಥಾನ ಗಳಿಸಿತು. ಇದಕ್ಕೆ ಕಾರಣ ಜನರಲ್ಲಿ ಯುದ್ಧದ ಸೋಲಿನ ಅವಮಾನವಿದ್ದು, ದೇಶಪ್ರೇಮದ ಹೆಸರು ಹೇಳಿ ಮತ ಪಡೆಯುವುದು ಸುಲಭವಾಗಿತ್ತು!
ನಂತರ ಆತನ ಪ್ರಭಾವ ಪಕ್ಷದೊಳಗೆ ಎಷ್ಟು ಹೆಚ್ಚಾಯಿತೆಂದರೆ, ಹಿಟ್ಲರ್ ಅಂದರೆ ಪಕ್ಷ, ಪಕ್ಷ ಎಂದರೆ ಹಿಟ್ಲರ್ ಎಂಬಂತಾಯಿತು. ನಮ್ಮಲ್ಲಿಯೂ ವ್ಯಕ್ತಿಯ ಹೆಸರಿನಲ್ಲಿ ಬ್ರಿಗೇಡುಗಳು, ಟೀಮುಗಳು, ಕಿಡಿಗೇಡಿ ಪುಂಡರ ಪಡೆಗಳು ಸ್ಥಾಪನೆ ಆಗಿರುವಂತೆಯೇ ಅಲ್ಲಿಯೂ ಹಿಟ್ಲರ್ ಯೂತ್ ಲೀಗ್, ಮಹಿಳೆಯರ ಲೀಗ್, ಕಾರ್ಮಿಕರ ಲೀಗ್, ಶಿಕ್ಷಕರ ಲೀಗ್ ಇತ್ಯಾದಿ ಸ್ಥಾಪನೆಯಾದವು.
1923ರಲ್ಲಿ ಪಕ್ಷದಲ್ಲಿ ಸೆಕ್ಯುರಿಟಿ ಗಾರ್ಡ್‍ಗಳಂತೆ ನಿರುದ್ಯೋಗಿ ಯುವಕರ ಗೂಂಡಾ ಪಡೆಯನ್ನು ಸ್ಥಾಪಿಸಲಾಯಿತು. ಜೊತೆಗೆ ಸಶಸ್ತ್ರ ಸೇನಾ ವಿಭಾಗವಾಗಿ ಶುಟ್ಝ್ ಸ್ಟಾಫೆಲ್ (Sಣಚಿಜಿಜಿ ಉuಚಿಡಿಜ) ಎಂಬ ಅಂಧ ಭಕ್ತರ ಕ್ರೂರ ಪಡೆಯನ್ನು ಸ್ಥಾಪಿಸಲಾಯಿತು. ಇದುವೇ ಮುಂದೆ ಎಸ್‍ಎಸ್ ಎಂದು ಕುಖ್ಯಾತವಾಗಿ ಮೊದಲಿಗೆ ಯಹೂದಿ ಮತ್ತಿತರ ಅಲ್ಪಸಂಖ್ಯಾತ ಜನಾಂಗಗಳು ಮತ್ತು ಕಮ್ಯುನಿಷ್ಟರ ಮೇಲೆ ಗೂಂಡಾಗಿರಿಗೆ ಬಳಕೆಯಾಯಿತು. ಹಿಟ್ಲರ್ ಅಧಿಕಾರಕ್ಕೆ ಬಂದ ಮೇಲೆ ಸೇನೆಯ ಭಾಗವಾಗಿ ವರ್‍ಮ್ಯಾಷ್ ಎನ್ನಲಾಗುತ್ತಿದ್ದ, ಅಧಿಕೃತ ಸೇನೆಯ ಅಧಿಕಾರಿಗಳೂ ಹೆದರುತ್ತಿದ್ದಂತೆ ಕೊಲೆಗಡುಕ ವಿಭಾಗವಾಯಿತು!
ಇದೇ ಹೊತ್ತಿಗೆ ಯುದ್ದದಲ್ಲಿ ಹಿಟ್ಲರನ ಸಾಹಸಗಳ ಬಗ್ಗೆ ಕಟ್ಟುಕತೆಗಳನ್ನು ಹರಿದುಬಿಡಲಾಯಿತು. ಆತ ಹಿಂದೊಮ್ಮೆ ಪ್ಯಾರಿಸ್‍ನಲ್ಲಿ ಚಿತ್ರಕಲಿಯಲು ಹೋಗಿ ಅರ್ಧದಲ್ಲೇ ಬಿಟ್ಟುಬಂದಿದ್ದ. ಅದನ್ನೇ ಉತ್ಪೇಕ್ಷಿಸಿ ಆತ ಮಹಾನ್ ಕಲೆಗಾರ, ಕವಿ ಹೃದಯಿ ಇತ್ಯಾದಿ ಬೊಗಳೆಗಳನ್ನು ಹರಿಯಬಿಡಲಾಯಿತು. ನಮ್ಮಲ್ಲಿಯ ಚಹಾ ಮಾರಾಟ, ಹಿಮಾಲಯದಲ್ಲಿ ತಿರುಗಾಟ, ಮೊಸಳೆಯೊಂದಿಗೆ ಹೋರಾಟ, ಎಂಟೈರ್ ಪೊಲಿಟಿಕಲ್ ಸಾಯನ್ಸ್ ಇತ್ಯಾದಿಗಳು ಓದುಗರಿಗೆ ನೆನಪಿಗೆ ಬಂದರೆ ಅಚ್ಚರಿಯಿಲ್ಲ!
ಇಷ್ಟು ಹೊತ್ತಿಗೆ ಹಿಟ್ಲರ್ ಒಂದು ದುಸ್ಸಾಹಸಕ್ಕೆ ಕೈ ಹಾಕಿದ. 1923ರಲ್ಲಿ ಸಶಸ್ತ್ರವಾಗಿ ಅಧಿಕಾರ ಪಡೆಯುವ ಈ ವಿಫಲ ಯತ್ನವನ್ನು ಬಿಯರ್ ಹಾಲ್ ದಂಗೆ ಎಂದು ಕರೆಯಲಾಗುತ್ತದೆ. ತನ್ನ ವಿರುದ್ದ ನಡೆದ ದೇಶದ್ರೋಹದ ವಿಚಾರಣೆಯನ್ನು ಚೆನ್ನಾಗಿ ಬಳಸಿಕೊಂಡ ಆತ, ನಾನು ಯುದ್ಧದಲ್ಲಿ ಹೋರಾಡಿದ ವೀರನೆಂದೂ, ತನ್ನನ್ನೇ ರಾಷ್ಟ್ರದ್ರೋಹಿ ಎಂದು ಜೈಲಿಗಟ್ಟುವ ಸಂಚು ನಡೆಯುತ್ತಿದೆ ಎಂದೂ ಬಿಂಬಿಸಿದ. ಆದರೂ ಆತನಿಗೆ ಐದು ವರ್ಷ ಜೈಲಾಯಿತು. ಅದರೆ, ಆತ ಪ್ರಾಸಿಕ್ಯೂಟರ್‍ಗಳ ವಿರೋಧದ ನಡುವೆಯೂ 1924ರಲ್ಲೇ ಹೊರಬಂದ.
ಜೈಲಿನಲ್ಲಿ ಇದ್ದ ಅವಧಿಯನ್ನು ಚೆನ್ನಾಗಿ ಬಳಸಿಕೊಂಡು ‘ಮೈನ್ ಕಾಂಫ್’ ಎಂಬ ಅತ್ಮಚರಿತ್ತಾತ್ಮಕ ಪುಸ್ತಕ ಬರೆದು ತನ್ನನ್ನು ಮಹಾತ್ಮನಂತೆ ಚಿತ್ರಿಸಿದ್ದಲ್ಲದೇ, ತನ್ನ ದ್ವೇಷದ ವಿಚಾರಧಾರೆಗೆ ದೇಶಪ್ರೇಮ ಮತ್ತು ರಾಷ್ಟ್ರೀಯತೆಯ ಬಣ್ಣ ನೀಡಿ ಅದಕ್ಕೊಂದು ತತ್ವದ ರೂಪ ನೀಡಿದ. ಅದು ಯುವಜನರಲ್ಲಿ ದ್ವೇಷದ ಬೀಜ ಬಿತ್ತಿತು.
ಇಷ್ಟಿದ್ದರೂ 1928ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅತ ಸ್ಪರ್ಧಿಸಿದಾಗ ಸಿಕ್ಕಿದ ಮತ ಕೇವಲ 1.1 ಶೇಕಡಾ ಮಾತ್ರ. ಆದರೂ ಮುಂದಿನ ಕೆಲವೇ ವರ್ಷಗಳಲ್ಲಿ ಆತ ಆ ಮಟ್ಟಕ್ಕೆ ಅಪಾಯಕಾರಿಯಾಗಿ ಬೆಳೆದದ್ದು ಹೇಗೆ? ಇದಕ್ಕೆ ಕಾರಣಗಳೇನು!? ಐತಿಹಾಸಿಕ ಪರಿಸ್ಥಿತಿ ಹಾಗಿತ್ತು ಎನ್ನೋಣವೆ? ಜರ್ಮನ್ ಜನರ ಮೂರ್ಖತನ ಎನ್ನೋಣವೇ? ಆತನ ಚಾಣಾಕ್ಷತನ ಎನ್ನೋಣವೇ? ಅಥವಾ ಬಂಡವಾಳಿಗರ ಸಂಚು ಎನ್ನೋಣವೆ? ವಿರೋಧಿಗಳ ಅಸಡ್ಡೆ ಅಥವಾ ನಿಷ್ಕ್ರಿಯತೆ ಎನ್ನೋಣವೆ!? ಈ ಕುರಿತು ಮುಂದೆ ನೋಡೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...