ಅನಿಲಕುಮಾರನ ಕತೆ

ರಾಜಶೇಖರ್‍ ಅಕ್ಕಿ |

ಇಬ್ಬರು ಅಕ್ಕರಾದ ನಂತರ ಹುಟ್ಟಿದ ಅನಿಲುಕಮಾರನ ಹಟ್ಟು, ಬಾಲ್ಯದ ಬಗ್ಗೆ ಯಾರಿಗೂ ಹೆಚ್ಚು ನೆನಪಿಲ್ಲ. ರೋಗ ಸೂಸಿದ ಕೂಸಿನಂತಿದ್ದರೂ ರೋಗಿಷ್ಟನಾಗಿರಲಿಲ್ಲ. ತೆಳ್ಳಗೆ, ಕರ್ರಗೆ ಇದ್ದಿದ್ದರಿಂದ ಯಾರೂ ಗಮನ ಕೊಡಲಿಲ್ಲ. ಅಕ್ಕಪಕ್ಕದ ಗುಡಿಸಿಲಿನವರು ಮಕ್ಕಳನ್ನು ಪ್ರೀತಿಸುತ್ತಿದ್ದರೂ ಅನಿಲನನ್ನು ಯಾರೂ ಅಷ್ಟಾಗಿ ಹಚ್ಚಿಕೊಳ್ಳಲಿಲ್ಲ. ತೆಳ್ಳಗೆ, ಕರ್ರಗೆ ಹುಟ್ಟಿ ತೆಳ್ಳಗೆ ಕರ್ರಗೆ ಬೆಳೆದ ಅನಿಲುಕುಮಾರ. ಅವನ ಹುಟ್ಟಿದ ಒಂದೂವರೆ ವರ್ಷಕ್ಕೆ ತಮ್ಮನೊಬ್ಬ ಹುಟ್ಟಿದ, ಆಗಂತೂ ಅವನ ಕಡೆ ಇದ್ದ ಗಮನ ಇನ್ನಷ್ಟು ಕಡಿಮೆಯಾಯಿತು. ಅನಿಲಕುಮಾರ ಯಾವುದಕ್ಕೂ ಅಷ್ಟು ತಲೆಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಇತರ ಎಲ್ಲಾ ಹುಡುಗರು ಆಡುತ್ತಿದ್ದರೆ ಇವನೊಬ್ಬನೆ ಎಲ್ಲಾದರೂ ಕುಳಿತಿರುತ್ತಿದ್ದ. ಇತರ ಹುಡುಗರು ಆಡಲು ಕರೆಯದಿದ್ದಕ್ಕೆ ಅವನಿಗ್ಯಾವಗಲೂ ಬೇಜಾರಾಗುತ್ತಿರಲಿಲ್ಲ. ತನ್ನವ್ವ ಕೊಟ್ಟಾಗ ಊಟ ಮಾಡುತ್ತಿದ್ದ, ನಂತರ ಏನು ಮಾಡುತ್ತಿದ್ದ ಎನ್ನೋದು ಇತರರಿಗಷ್ಟೇ ಅಲ್ಲ, ಅವನಿಗೂ ಗೊತ್ತಿರಲಿಲ್ಲ. ಇನ್ಯಾರಾದರೂ ತಿನ್ನಲು ಕೊಟ್ಟರೆ ತಿನ್ತಿದ್ದ. ತಮ್ಮನನ್ನು ಆಡಿಸೋ ಎಂದು ಅವ್ವ ಹೇಳಿದರೆ, ಮರಮಾತನಾಡದೇ ಸುಮ್ಮನೇ ಎದ್ದು ಹೊರಹೋಗುತ್ತಿದ್ದ. ಅಪ್ಪ ಕೆಲವು ಸಲ ಹೊಡೆಯುತ್ತಿದ್ದ, ಆಗಷ್ಟು ಸ್ವಲ್ಪ ಅತ್ತು ಸುಮ್ಮನಾಗುತ್ತಿದ್ದ. ಯಾಕೆ ಹೊಡೆದ ಎಂದು ಚಿಂತಿಸುತ್ತಿರಲಿಲ್ಲ. ಹೊಡೆಯುವುದಕ್ಕೆ ಕಾರಣ ಒಂದಿರುತ್ತೆ ಅನ್ನೋದೇ ಅವನಿಗೆ ಹೊಳೆದಿದ್ದಿಲ್ಲ. ಅಪ್ಪ ಯಾವಾಗಾದರೂ ಒಂದು ಸಲ ಹೊಡೀತಾನೆ ಅಂತ ತಿಳಕೊಂಡಿದ್ದ. ಆದರೆ ಅನಿಲಕುಮಾರ ತನ್ನ ತಂದೆತಾಯಿಗೆ ಹೆಚ್ಚು ಕಾಡಿಸುತ್ತಿರಲಿಲ್ಲ. ಇತರ ಮೂರು ಮಕ್ಕಳಷ್ಟು ಕಾಡಿಸೋಲ್ಲ ಎಂದು ನಿಧಾನವಾಗಿ ಅನಿಲಕುಮಾರನ ತಂದೆತಾಯಿಗಳೂ ಅವನ ತಂಟೆಗೆ ಹೋಗುವುದನ್ನು ಬಿಟ್ಟಿದ್ದರು. ಸಿಕಿದ್ದನ್ನು ತಿಂದು, ಅತ್ತ ಇತ್ತ ತಿರುಗಾಡಿ, ಅದನ್ನು ಇದನ್ನು ನೋಡುತ್ತಾ ನಾಲ್ಕೈದು ವರ್ಷಗಳಾದ ನಂತರ ಯಾರೋ ಹೋಗಿ ಅವನನ್ನು ಶಾಲೆಗೆ ಸೇರಿಸಿದರು.
ಅಂದಹಾಗೆ ಅವನ ಊರು, ಕಲ್ಬುರ್ಗಿಯಿಂದ ಇಪ್ಪತ್ತು ಕಿಲೋಮೀಟರ ದೂರದ ಹಳ್ಳಿ. ಊರಪಕ್ಕದಲ್ಲಿ ಕೆಲವು ಸಣ್ಣಪುಟ್ಟ ಕಾರ್ಖಾನೆಗಳು ಅನಿಲಕುಮಾರ ಹುಟ್ಟೂಕಿಂತ ಕೆಲವಯ ವರ್ಷ ಮುಂಚೆ ತಲೆಯೆತ್ತಿದ್ದವು. ಅವನಪ್ಪ ಅಲ್ಲೇ ಕೆಲಸ ಮಾಡುತ್ತಿದ್ದ. ಹಳ್ಳಿಯ ಪಕ್ಕದಲ್ಲೆ ಇನ್ನೊಂದು ಊರಿತ್ತು. ಆ ಊರು ವಾರದ ಸಂತೆಯಾಗುವಷ್ಟು ದೊಡ್ಡದಿತ್ತು. ಇತರ ಕೆಲಹಳ್ಳಿಗಳಿಗೆ ಕೇಂದ್ರವಾಗಿತ್ತು. ಹೈಸ್ಕೂಲು, ಒಂದು ವಿಡಿಯೋ ಥಿಯೇಟರ್, ಹೋಟೆಲುಗಳು ಮತ್ತು ಕೆಲವು ಟೇಲರ ಅಂಗಡಿ, ಬಟ್ಟೆ ಅಂಗಡಿಗಳೂ ಇದ್ದವು ಆ ಪಕ್ಕದೂರಿನಲ್ಲಿ.

ಅನಿಲಕುಮಾರನ ಶಾಲೆ ಕತೆಗೆ ಮರಳಿ ಬರುವ. ಶಾಲೆಯ ಮೊದಲದಿನಗಳಲ್ಲಿ ಇತರ ಮಕ್ಕಳಲ್ಲಿ ಕೆಲವರು ಅಳುತ್ತಿದ್ದರೆ ಕೆಲವರು ಹುರುಪಿನಿಂದ ಆಡುತ್ತಿದ್ದರು. ಅನಿಕುಮಾರ ಸುಮ್ಮನೇ ಕುಳಿತ. ಮೇಷ್ಟ್ರು ಪಾಠ ಮಾಡುವಾಗ ಎಷ್ಟಾಗುತ್ತೋ ಅಷ್ಟು ಕೇಳಿಸಿಕೊಂಡ. ಒಂದು ಸಲ ಹೆಡ್‍ಮಾಷ್ಟ್ರು ಬಂದು ಏನೇನೋ ಕೇಳಿ ಕೆಲವರಿಗೆ ಕೋಲಿನಿಂದ ಬಾರಿಸಿಬಿಟ್ರು. ಇವನಿಗೂ ಸಮನಾಗಿ ಬಿದ್ದಾಗ, ಓ ಇಲ್ಲಿಯೂ ಕೆಲಸಲ ಹೊಡೆತ ತಿನ್ಬೇಕಾಗುತ್ತೆ ಎಂದು ಅರಿತುಕೊಂಡ. ಹಾಗೇಯೇ ಇಲ್ಲಿಯೂ ಹೊಡೆತಕ್ಕೆ ಕಾರಣಗಳಿರುತ್ತವೆ ಎನ್ನುವುದು ಅವನ ಲಕ್ಷಕ್ಕೆ ಬರಲಿಲ್ಲ. ಒಂದು ಸಲ ಒಬ್ಬ ಟೀಚರು ‘ಏ ಅನಿಲ..’ ಎಂದು ಏನೋ ಬಯ್ದಾಗ ಒಂತರಾ ಅನಿಸಿತು ಅವನಿಗೆ, ಮನೆಯ ಹೊರಗೆ ಅವನನ್ನು ಅನಿಲ ಎಂದು ಮೊದಲ ಸಲ ಕರೆದದ್ದು ಅನಿಸುತ್ತೆ. ಇತರ ಕೆಲವು ಹುಡುಗರು ಕೆಲವೊಂದು ಸಲ ಅವನ ಹೆಸರು ತೆಗೆದುಕೊಂಡು ಏನಾದರೂ ಅನ್ನುತ್ತಿದ್ದರು, ಹೆಚ್ಚಿನ ಸಲ ‘ಈಕಡೆ ಹೋಗಿ, ಸರಿ ಇಲ್ಲಿಂದ, ಅಲ್ಲಿ ಕೂತ್ಕೋ’ ಎನ್ನು ಚಿಕ್ಕ ವಾಕ್ಯಗಳೇ ಅವನ ಪಾಲಿಗೆ ಇದ್ದವು. ಕೆಲವು ಜಗಳಗಂಟ ಹುಡುಗರು ಇವನಿಗೂ ಕೆಲಸಲ ಕಾಡಿಸುತ್ತಿದ್ದರು, ಆದರೆ ಇವನಿಂದ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿಲ್ಲವಾದುದರಿಂದ ಇವನಿಗೆ ಕಾಡಿಸಲು ಆ ಹಡುಗರಿಗೆ ಹೆಚ್ಚು ಮಜಾ ಬರ್ತಿರಲಿಲ್ಲ. ಹಾಗಾಗಿ ಕಾಡಿಸಲು ಯಾರು ಸಿಗದಾಗ ಮಾತ್ರ ಇವನನ್ನೂ ಕಾಡಿಸುತ್ತಿದ್ದರು.
ನಿಧಾನವಾಗಿ ಅನಿಕುಮಾರನ ವರ್ಗದಲ್ಲಿ ಕೆಲವು ಗುಂಪುಗಳು ರಚನೆಯಾದವು. ಕೆಲವು ಹುಡುಗರು ಚೆನ್ನಾಗಿ ಓದುತ್ತಿದ್ದರೆ, ಕೆಲವರು ಆಟದಲ್ಲಿ ಮುಂದಿದ್ದರು, ಇನ್ನೂ ಕೆಲವರು ಜಗಳವಾಡುವುದರಲ್ಲಿ, ಹೊಡೆಯುವುದರಲ್ಲಿ ಹೆಸರು ಮಾಡಿದ್ದರೆ, ಇನ್ನೂ ಕೆಲವರಿಗೆ ಇತರರಿಗೆ ಕೀಟಲೆ ಮಾಡುವುದೇ ಕೆಲಸವಾಗಿತ್ತು. ಅನಿಲಕುಮಾರ ಯಾವ ಗುಂಪಲ್ಲೂ ಸೇರಲಿಲ್ಲ. ಕೇರಿಯಲ್ಲೂ ಇದೇ ರೀತಿ ಕೆಲಗುಂಪುಗಳಾದವು, ಅಲ್ಲೂ ಇವನು ಸೇರಲಿಲ್ಲ. ಒಂದುಸಲ ಒಬ್ಬ ಹುಡುಗ ‘ಏಯ ಅನಿಲ, ಆಡಕ್ಕೆ ಬರ್ತೀಯಾ’ ಎಂದು ಕೇಳಿದಾಗ, ಇವನಿಗೆ ಏನು ಹೇಳಬೇಕೆನ್ನುವುದು ಗೊತ್ತಾಗದೇ ಸುಮ್ಮನೇ ಅವನನ್ನು ನೋಡುತ್ತ ನಿಂತ. ಕೆಲವು ಕ್ಷಣ ಇವನ ಉತ್ತರಕ್ಕೆ ಕಾದು, ಅನಿಲಕುಮಾರನ ಯಾವ ಅಂಗವೂ ಯಾವದೇ ಬದಲಾವಣೆ ತೋರಿಸದಿದ್ದಾಗ ಅವನು ಅಲ್ಲಿಂದ ಓಡಿ ಹೋದ.
ಶಾಲೆಯಲ್ಲಿ ಆಟದ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪರೀಕ್ಷೆಗಳು, ಪಾಠಗಳು, ಹಾಡು, ನಾಟಕ, ಇತರ ಅನೇಕ ಚಟುವಟಿಕೆಗಳು ನಡೆಯುತ್ತಿದ್ದವು. ಅನಿಲನೂ ಕೆಲವು ಸಲ ಕೆಲಹೊತ್ತಿನವರಗೆ ಇವುಗಳನ್ನು ನೋಡುತ್ತಿದ್ದ; ಇವ್ಯಾವೂ ಅವನಿಗೆ ಆಸಕ್ತಿ ಹುಟ್ಟಿಸುವಲ್ಲಿ ವಿಫಲವಾದವು. ಆದರೂ ಅವಿನಗೂ ಕಲವು ಗೆಳೆಯರಾದರು. ಗೆಳೆಯರಂದರೆ ಅವರೆಲ್ಲರೂ ಹೋದಲ್ಲಿ ಇವನೂ ಹೋಗುತ್ತಿದ್ದ, ಕೆಲಸಲ ಅವರು ಮಾಡುವುದನ್ನು ಮಾಡುತ್ತಿದ್ದ. ಕಳ್ಳತನ ಮಾಡೋದೂ ಈ ಗುಂಪಿನ ಒಂದು ಚಟುವಟಿಕೆ; ಅಂದರೆ ಇವರೇನೂ ಕಳ್ಳರಾಗಿದ್ದಿಲ್ಲ. ಯಾರ ಮನೆಯ ಹಿತ್ತಲಿನಲ್ಲಿ ಯಾವುದಾದರೂ ಹಣ್ಣು ಬಿಟ್ಟಿದ್ದರೆ ಹೋಗಿ ಕದಿಯುವುದು. ಆದರೆ ತೆಳ್ಳಗೆ, ಅಶಕ್ತನಂತಿದ್ದ ಅನಿಲಕುಮಾರ ಗಿಡಮರಗಳನ್ನು ಹತ್ತುತ್ತಿರಲಿಲ್ಲ. ಮನೆಯ ಮಾಲೀಕರು ಬಂದರೆ ಎಚ್ಚರಿಸಿ ಎಂದು ಇತರರು ಇವನಿಗೆ ಹೇಳಿ ಕೆಳಗೇ ನಿಲ್ಲಿಸುತ್ತಿದ್ದರು. ಒಂದು ಸಲ ಮನೇ ಮಾಲೀಕರು ಬಂದೇ ಬಿಟ್ಟರು, ಇವನು ನೋಡಿ ಸುಮ್ಮನೇ ನೋಡುತ್ತ ನಿಂತುಬಿಟ್ಟ. ಇವನು ಎಚ್ಚರಿಸುವುದಕ್ಕಿಂತ ಮುಂಚೆಯೇ ಗುಂಪಿನ ಒಬ್ಬ ಹುಡುಗ ಮನೆಯ ಮಾಲೀಕನನ್ನು ನೋಡಿ, ಉಳಿದವರಿಗೆ ಎಚ್ಚರಿಸಿ, ಮರದಿಂದ ಇಳಿದು ಹೇಗೋ ಪರಾರಿಯಾದರು. ಅನಿಲಕುಮಾರ ತನ್ನ ಗುಂಪಿನವರಿಗೆ ಹೇಗೆ ಎಚ್ಚರಿಸಬೇಕು ಎನ್ನುವ ಗೊಂದಲದಲ್ಲಿ ಮನೆಯ ಮಾಲೀಕನ್ನು ನೋಡುತ್ತ ಫ್ರೀಜ್ ಆಗಿ ನಿಂತುಬಿಟ್ಟ. ‘ಓ ಹೋಡಿತಾನೆ’ ಎಂದುಕೊಂಡ. ಆ ಮನೆಯವನು ಸಿಟ್ಟಿನಿಂದಲೇ ಬಂದು ಇವನೆದುರಿಗೆ ನಿಂತ. ಇವನ ಆಕಾರ, ರೋಗಿಷ್ಟನಂತಿರುವ ಮುಖ ನೋಡಿ, ಕೆಲಕ್ಷಣ ನಿಂತು, ಪ್ರೀತಿಯಿಂದ ಮಾತನಾಡಿಸಿ, ಮನೆಯೊಳಕ್ಕೆ ಕರೆದುಕೊಂಡು ಹೋದ. ತೊಗೋ ಎಂದು ಕೆಲವು ಹಣ್ಣುಗಳನ್ನು ಕೊಟ್ಟ. ಹೇಸರೇನು ಎಂದು ಕೇಳಿದಾಗ ಅನಿಲಕುಮಾರ ಸುಮ್ಮನೇ ನಿಂತ. ಆಮೇಲೇನಾಯಿತೋ ಅವನಿಗೆ ನೆನಪಿಲ್ಲ.
ಮಾಡಲೇಬೇಕಾದ ಕೆಲಸಗಳನ್ನು ಮಾಡುತ್ತ ಅನಿಲಕುಮಾರ ಸಣ್ಣಗೆ ಬೆಳೆದ. ಸಾಧಾರಣ ಎತ್ತರವಾದ, ಅಲ್ಪಸ್ವಲ್ಪ ಮೀಸೆ ಬಂತು. ಶಾಲೆಯಲ್ಲಿ ಕುಳಿತು ಕುಳಿತು ಕೆಲವು ಅಕ್ಷರಗಳು ತನ್ನಿಂತಾನೇ ತಲೆಯೊಳಗೆ ಹೊಕ್ಕವು. ಹೊಸ ಶಿಕ್ಷಕರು ಯಾರಾದರೂ ಬಂದರೆ ಒಂದು ಸಲ ಇವನನ್ನು ಮಾತನಾಡಿಸುವರು, ಆಮೇಲೆ ಇವನ ಗೋಜಿಗೆ ಬರುತ್ತಿರಲಿಲ್ಲ. ಇವನನ್ನು ಹೊಡಯಬೇಕಾದರೂ ಉತ್ತರ ಹೇಳದಿರುವುದರಿಂದ ಇತರರಿಗೆ ಏಟು ಬಿದ್ದಾಗಿದೆ ಹಾಗಾಗಿ ಇವನಿಗೂ ಕಾಟಾಚಾರಕ್ಕೆ ಒಂದೇಟು ನೀಡಿ ಮುಂದೆ ಹೋಗುತ್ತಿದ್ದರು. ಒಂದು ಸಲ ಒಂದು ಹುಡುಗಿಯನ್ನು ಸುಮ್ಮನೇ ನೋಡುತ್ತ ಕುಳಿತಿದ್ದಾಗ, ಸಹಪಾಠಿಯೊಬ್ಬ ಬಂದು ಅನಿಲಕುಮಾರನ ಕಪಾಳಿಗೆ ಬಾರಿಸಿದ. ಎಲ್ಲರೂ ಗೊಳ್ಳೆಂದು ನಕ್ಕರು. ಅವನು ಹೊಡೆದಿದ್ದೇತಕ್ಕೆ, ಇತರರು ನಕ್ಕಿದ್ದೇತಕ್ಕೆ ಎನ್ನುವ ಪ್ರಶ್ನೆ ಕೇಳುವ ಗೋಜಿಗೆ ಹೋಗಲಿಲ್ಲ ಅನಿಲಕುಮಾರ. ಪರೀಕ್ಷೆಗಳಿಗೆ ಅಟಂಡ್ ಆಗಿ ಇತರರು ಏನೇನೋ ಬರೆಯುವುದನ್ನು ನೋಡಿ ತಾನೂ ಗೀಚಿದ. ಪಕ್ಕದ ಊರಿನ ಹೈಸ್ಕೂಲು ತಲುಪಿದ. ಎಸ್ಸೆಸ್ಸೆಲ್ಸಿ ಫೇಲಾಗಿ ಮನೇಲಿ ಕೂತ. ಓದುಬರಹ ಕಲಿಯದ ಅಪ್ಪ ಅಮ್ಮ ಇವನು ಫೇಲಾದದ್ದಕ್ಕೆ ಬೇಸರ ವ್ಯಕ್ತಪಡಿಸಲಿಲ್ಲ.
ಮನೆಯಲ್ಲಿ ಊಟ ಮಾಡುತ್ತಿದ್ದ, ಸುಮ್ಮನೇ ಕುಳಿತಿರುತ್ತಿದ್ದ. ಮನೆಯಲ್ಲಿ ತಮ್ಮ, ಅಕ್ಕಂದಿರು ಏನಾದರೂ ಗಲಾಟೆ ಎಬ್ಬಿಸಿದಾಗ ಹೊರಗೆ ಹೋಗುತ್ತಿದ್ದ. ಕೆಲಸಲ ಪಕ್ಕದ ಊರಿಗೆ ಹೋಗಿ ಎಲ್ಲೆಂದರೆಲ್ಲಿ ಕುಳಿತು ಊಟದ ಸಮಯಕ್ಕೆ ವಾಪಸ್ ಬರುತ್ತಿದ್ದ. ಅವ್ವ, ಅಕ್ಕಂದಿರು ಏನಾದರೂ ಕೆಲಸ ಹೇಳಿದರೆ ಹ್ಮೂ ಎಂದು ಸುಮ್ಮನೆ ಕುಳಿತಿರುತ್ತಿದ್ದ, ಜೋರು ಮಾಡಿದಾಗ ಕೈಲಾದಷ್ಟು ಮಾಡಿ ಮತ್ತೇ ಸುಮ್ಮನಾಗುತ್ತಿದ್ದ. ತಮ್ಮ ಇವನಿಗಿಂತ ಎತ್ತರವಾದ, ಎದಯುಬ್ಬಿಸಿ ನಡೆಯುತ್ತಿದ್ದ. ಅನಿಲಕುಮಾರದ ಅಪ್ಪ ಅಮ್ಮ ಹೇಗೋ ಮಾಡಿ ಅಕ್ಕಂದಿರ ಮದುವೆ ಮಾಡಿದರು. ಬೀಗರು ಮನೆಗೆ ಬಂದಾಗ ಇವನನ್ನು ಒಂದು ಸಲ ನೋಡಿ ತಮ್ಮ ಇತರ ಕೆಲಸಗಳನ್ನು ಮುಂದುವರೆಸುತ್ತಿದ್ದರು. ಯಾರಾದರೂ ಏನಾದರೂ ಅಂದಾಗ ‘ಹೆಹ್ಹೆ’ ಎಂದು ಹೆಡ್ಡಾಗಿ ನಗುವುದನ್ನು ಅಭ್ಯಾಸಮಾಡಿಕೊಂಡ.
ಏನಾದರೂ ಕೆಲಸ ಮಾಡು ಎಂದು ಅವ್ವ ಆಗಾಗ ತಿವಿಯುತ್ತಿದ್ದಳು. ಕೊನೆಗೆ ಒಂದು ಕಾರ್ಖಾನೆಯಲ್ಲಿ ಅನಿಲಕುಮಾರನ ಅಪ್ಪನೇ ಒಂದು ಕೆಲಸ ಕೊಡಿಸಿದ. ಅಲ್ಲಿ ಹೋಗಿ ಹೇಳಿದ್ದನ್ನು ಮಾಡಲಾರಂಭಿಸಿದ. ಕೆಲದಿನ ರೆಗ್ಯುಲರ್ ಆಗಿ ಕೆಲಸಕ್ಕೆ ಹೋದ ಅನಿಲಕುಮಾರ ನಂತರ ಮನೆಯಿಂದ ಹೊರಟು ಎಲ್ಲೋ ಕುಳಿತು ಟೈಮ್‍ಪಾಸ್ ಮಾಡಿ ಮನೆಗೆ ಬರಲಾರಂಭಿಸಿದ. ಎರಡೇ ತಿಂಗಳಲ್ಲಿ ಅವನನ್ನು ಕೆಲಸದಿಂದ ಕಿತ್ತುಹಾಕಲಾಯಿತು. ಅಪ್ಪ ಒಂದೆರಡು ಸಲ ಒದರಾಡಿ ಸುಮ್ಮನಾದ. ಆಮೇಲೆ ಇನ್ನೊಂದು ಕಡೆ ಕೆಲಸಕ್ಕೆ ಸೇರಿಸಿದ. ಒಂದು ತಿಂಗಳ ನಂತರ ಸಂಬಳ ಬಂದಿದ್ದು ಅನಿಲಕುಮಾರನಿಗೆ ಖುಷಿ ತಂದುಕೊಟ್ಟಿರಬೇಕು, ಹೀಗಾಗಿ ಕೆಲವು ತಿಂಗಳು ರೆಗ್ಯುಲರ್ ಆಗಿ ಕೆಲಸಕ್ಕೆ ಹೋದ. ಅಲ್ಲಿ ಪ್ರತಿದಿನ ಬೈಸಿಕೊಳ್ಳುವದು ಅನಿಲಕುಮಾರನಿಗೆ ಅಷ್ಟೊಂದು ಬೇಸರದ ಸಂಗತಿಯಾಗಿರಲಿಲ್ಲ. ನಾಲ್ಕು ತಿಂಗಳ ನಂತರ ಒಂದು ದಿನ ಕೆಲಸಕ್ಕೆ ಹಾಜರಾದಾಗ, ಅವನ ಬಾಕಿ ಇದ್ದ ಸಂಬಳ ಕೈಗೆ ಕೊಟ್ಟು ನೀನು ನಾಳೆಯಿಂದ ಬರಬೇಡ ಎಂದು ಅನಿಲಕುಮಾರನಿಗೆ ಅಲ್ಲಿಯ ಕಾರಕೂನ ಹೇಳಿ ಕಳಿಸಿದ.
ಮತ್ತಿನ್ನೇನೋ ಮಾಡಿ ಇನ್ನೊಂದು ಕೆಲಸಕ್ಕೆ ಸೇರಿಕೊಂಡ. ಕೆಲಸಕ್ಕೆ ಸೇರಿಕೊಳ್ಳುವುದು ಬಿಡುವುದು ಅನಿಲಕುಮಾರನಿಗೆ ಸಾಮಾನ್ಯವಾಗಿತ್ತು. ಹಾಗೇ ಕೆಲವು ವರ್ಷಗಳು ಕಳೆದವು. ಯಾವುದೋ ಒಂದು ಸರಕಾರಿ ಯೋಜನೆಯಡಿ ಒಂದು ಪುಟ್ಟಮನೆ ಇವರಿಗೆ ಸಿಕ್ಕಿತು. ಅನಿಲಕುಮಾರ, ಅಪ್ಪ, ಅವ್ವ ಮತ್ತು ತಮ್ಮ ಅಲ್ಲಿ ವಾಸಿಸಲಾರಂಭಿಸಿದರು. ತಮ್ಮ ತನ್ನ ಡಿಗ್ರಿ ಮುಗಿಸಿ, ಗುಂಪು ಕಟ್ಟಿಕೊಂಡು ತಿರುಗುತ್ತಿದ್ದ. ಅವ್ವ ಹೇಗೋ ಮಾಡಿ ತನ್ನ ಸಂಬಂದಿಕರ ಹುಡುಗಿಯನ್ನು ಹುಡುಕಿ ಇವನೊಂದಿಗೆ ಮದುವೆ ಮಾಡಿಸಿದಳು. ಕಡುಬಡತನದಿಂದ ಬಂದು ಅನಿಲಕುಮಾರನ ಹೆಂಡತಿಗೆ ವಯಸ್ಸು ಹದಿನೇಳೇ ಆಗಿದ್ದರೂ, ಚಿಕ್ಕವಳಿದ್ದಾಗಿಂದ ದನದಂತೆ ದುಡಿದಿದ್ದರಿಂದ ಗಟ್ಟಿಯಾದ ಹೆಂಗಸಾಗಿದ್ದಳು. ಊಟಕ್ಕೂ ಗತಿಯಿಲ್ಲದ ಮೆನಯಿಂದ ಬಂದಿದ್ದರಿಂದ ತನ್ನ ತವರುಮನೆಗಿಂತ ಕೆಟ್ಟದಾಗಿರುವುದಿಲ್ಲ ಎಂದು ಸಂತೋಷದಿಂದಲೇ ಮನೆಯಲ್ಲಿ ಕಾಲಿಟ್ಟಿದ್ದಳು. ಪುಟ್ಟಮನೆಯಾದುದರಿಂದ ಅನಿಲಕುಮಾರನಿಗೆ ತನ್ನ ಹೆಂಡತಿಯೊಂದಿಗೆ ಏನೂ ಮಾಡಲಾಗಲಿಲ್ಲ. ಅವನ ಕೆಲವು ಸಂಗಾತಿಗಳು ತನ್ನ ದಾಂಪತ್ಯ ಜೀವನದ ಬಗ್ಗೆ ಕೇಳಿದಾಗ ‘ಹೆಹ್ಹೆ’ ಎಂದು ಹೆಡ್ಡಾಗಿ ನಕ್ಕು ಸುಮ್ಮನಾಗುತ್ತಿದ್ದ.
ತಮ್ಮ ಗುಂಪು ಕಟ್ಟಿ ತಿರುಗಾಡಿದ್ದಷ್ಟೇ ಅಲ್ಲ. ಅಲ್ಪ ಸ್ವಲ್ಪ ದುಡ್ಡನ್ನು ತಂದು ಮನೆಗೆ ಕೊಡುತ್ತಿದ್ದ. ಅಣ್ಣನ ಮದುವೆಯಾಗಿದ್ದರಿಂದ, ಮನೆಯಲ್ಲಿ ಜಾಗ ಸಾಲದಾಗಿ, ಹೇಗೋ ಮಾಡಿ ಅಣ್ಣನಿಗೂ ಅಂಥದೇ ಒಂದು ಪುಟ್ಟ ಗ್ರ್ಯಾಂಟ್ ಮನೆಯನ್ನು ಕೊಡಿಸುವಲ್ಲಿ ಯಶಸ್ವಿಯಾದ. ಅನಿಲಕುಮಾರ, ಅವನ ಹೆಂಡತಿ ಹೊಸಮನೆಗೆ ಕಾಲಿಟ್ಟರು. ಅನಿಲಕುಮಾರನ ಅಶಕ್ತ ದೇಹ, ಅವನ ಕಲ್ಪನೆಗೆ ತಕ್ಕಂತೆ ದಾಂಪತ್ಯ ಜೀವನ ಶುರುವಾಯಿತು. ರಾತ್ರಿ ಕಾಮಿಸುವಾಗ ಹೆಚ್ಚು ಹೊತ್ತು ತಾಳದೇ ಶೀಘ್ರವೇ ಮುಗಿಸಿಬಿಡುತ್ತಿದ್ದ. ಅದನನ್ನು ಹೊರತುಪಡಿಸಿ ಹೊಸದೊಂದು ಶುರುವಾಯಿತು ಅನಿಲಕುಮಾರನ ಜೀವನದಲ್ಲಿ. ಅವನು ತನ್ನ ಹೆಂಡತಿಯ ಮೇಲೆ ರೇಗುತ್ತಿದ್ದ. ಅವಳು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದಳು. ರಾತ್ರಿ ಕೆಲವು ಸಲ ಅವಳಿಗೆ ಹೊಡೆದೂ ತನ್ನ ತೀಟೆಯನ್ನು ತೀರಿಸಿಕೊಳ್ಳತ್ತಿದ್ದ. ಆದರೆ ಹಗಲೊತ್ತಿನಲ್ಲಿ ಇವ್ಯಾವ ಆಟಗಳೂ ಅವಳ ಮುಂದೆ ನಡೆಯುತ್ತಿರಲಿಲ್ಲ. ಇವನೊಂದು ಸಲ ಬೆಳಗ್ಗೆ ರೇಗಿದಾಗ ಅವನಿಗಿಂತಲೂ ಜೋರುಮಾಡಿಬಿಟ್ಟಳು ಹೆಂಡತಿ. ಅಂದಿನಿಂದ ರಾತ್ರಿ ಮಲಗುವಾಗ ಮಾತ್ರ ಸ್ವಲ್ಪ ರೇಗಾಡಿ, ತಿಕ್ಕಾಡಿ ಮಲಗುತ್ತಿದ್ದ.
ಇಷ್ಟರಲ್ಲಿ ಇನ್ನೊಂದು ಶುರುವಾಗಿತ್ತು ಅನಿಲಕುಮಾರನ ಜೀವನದಲ್ಲಿ; ಹೆಂಡ. ಅನಿಲಕುಮಾರನ ಸಂಗಾತಿಗಳಿಬ್ಬರು ಒಂದೆರಡು ಸಲ ಇವನನ್ನು ಕರೆದುಕೊಂಡು ಹೋಗಿ ಕುಡಿಸಿಬಿಟ್ಟರು. ಅವರೇನೂ ಬಲವಂತ ಮಾಡಲಿಲ್ಲ, ಕುಡಿ ಚೆನ್ನಾಗಿರುತ್ತೆ ಅಂದರು, ಇವನು ಕುಡಿದ. ಮತ್ತು ಅನಿಲಕುಮಾರನಿಗೆ ಕುಡಿದ ನಂತರದ ಆ ಫೀಲಿಂಗು ಇಷ್ಟ ಆಯ್ತು. ಹಾಗಾಗಿ ಕೆಲಸ ಮುಗಿಸಿ ಕೈಯಲ್ಲಿ ದುಡ್ಡಿದ್ದರೆ ಹೋಗಿ ಕುಡಿಯಲಾರಂಭಿಸಿದ. ದುಡ್ಡಿಲ್ಲದಾಗ ಯಾರಾದರೂ ಕುಡಿಸುವರೇ ಎಂದು ಆಸೆಗಣ್ಣಿನಿಂದ ನೋಡುತ್ತ ಕಾಲಕಳೆಯುತ್ತಿದ್ದ. ಕೆಲಸಲ ಬಿಟ್ಟಿ ಕುಡಿಯಲು ಸಿಗುತ್ತಿದ್ದರಿಂದ ಹೆಂಡದಂಗಡಿಯ ಸುತ್ತ ಸುತ್ತಾಡುವುದನ್ನು ಅಭ್ಯಾಸಮಾಡಿಕೊಂಡ. ಕುಡಿದು ಬಂದು, ಹೆಂಡತಿಯ ಮೇಲೆ ರೇಗಾಡಿ, ಆದರೆ ಒಂದೆರಡು ಏಟು ಹಾಕಿ ಮಲಗುವದು ಅವನ ದಿನಚರಿಯಾಯಿತು.
ಅನಿಲಕುಮಾರನ ಕೆಲಸ ಹೆಚ್ಚುದಿನ ಉಳಿಯಲಿಲ್ಲ. ಆದರೆ ಅವನ ಹೆಂಡತಿ ಅಷ್ಟರಲ್ಲಿ ಕೂಲಿಕೆಲಸಕ್ಕೆ ಹೋಗುವುದನ್ನು ಶುರುಮಾಡಿದ್ದಳು. ದುಡಿದೇ ಬೆಳದ ದೇಹಕ್ಕೆ ಇಬ್ಬರಿಗೆ ಅಡುಗೆ ಮಾಡಿ, ಕೆಲಸ ಮಾಡಿ ಬರುವುದು ಭಾರವಾಗಲಿಲ್ಲ. ಅನಿಲಕುಮಾರ ಅತ್ತಿತ್ತ ತಿರುಗಾಡಿ ಕಾಲಕಳೆಯಲಾರಂಭಿಸಿದ. ರಾತ್ರಿ ಕುಡಿಯುವ ಇಚ್ಛೆ ಪ್ರಬಲವಾದಾಗ ಕಾಲುಗಳು ತನ್ನಿಂತಾನೆ ಹೆಂಡದಂಗಡಿಗೆ ಎಳೆದೊಯ್ಯುತ್ತಿದ್ದವು. ತನ್ನ ಕೇರಿಯ ಪುಢಾರಿಯೊಬ್ಬ ಕೆಲಸವಿಲ್ಲದಾಗ ಗುಂಪೊಂದನ್ನು ಕಟ್ಟಿಕೊಂಡು ಅಲ್ಲಿಯೇ ಕಾಲಕಳೆಯುತ್ತಿದ್ದ. ಅನಿಲಕುಮಾರನೂ ಅವನ ಗುಂಪಿನ ತಂಡದ ಸದಸ್ಯರಂತೆ ಅವರೊಂದಿಗೆ ಕುಳಿತುಕೊಳ್ಳುತ್ತಿದ್ದ. ಅನಿಲಕುಮಾರನ ಮೇಲೆ, ಕೆಲಸಲ ಅವನ ಹೆಂಡತಿಯ ಮೇಲೆ ಹಾಸ್ಯ ಮಾಡಿ ನಗುವುದನ್ನು ಕೆಲಸಲ ಆ ಪುಢಾರಿ ಮಾಡುತ್ತಿದ್ದ. ಆದರೆ ಕೆಲಸಲ ಹೆಂಡಕ್ಕೂ ದುಡ್ಡು ಕೊಡುತ್ತಿದ್ದರಿಂದ ಅನಿಲಕುಮಾರ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಕೆಲಸಲ ಕಾದು ಕಾದು ಸುಸ್ತಾಗಿ, ಅನಿಲಕುಮಾರ ಹೆಡ್ಡಾಗಿ ನಕ್ಕು ಏನಾದರೂ ಕುಡಿಸಿ ಎಂದು ಬೇಡಿಕೊಳ್ಳುತ್ತಿದ್ದ. ಆಗ ಪುಢಾರಿ ಬೈದು ಕಳಿಸಿದ್ದೂ ಉಂಟು.
ಹೌದು, ಅವನಿಗೆರಡು ಮಕ್ಕಳೂ ಆದವು. ತಮ್ಮ ಪಾಡಿಗೆ ತಾವು ಬೆಳೆಯುತ್ತಿದ್ದವು.
ಒಂದು ದಿನ ಇದ್ದಕ್ಕಿಂದಂತೆ ಅನಿಲಕುಮಾರನ ತಮ್ಮ ಮನೆಗೆ ಬಂದು ಅನಿಲಕುಮಾರನಿಗೆ ಚೆನ್ನಾಗಿ ಕೈಕಾಲು ಮುರಿದುಹೋಗವುಂತೆ ಹೊಡೆದು ವಾಪಸ್ ಹೋದ. ಏನಕ್ಕೆ ಹೊಡೆದ ಅಂತ ಬಾಯಿಬಿಡಲಿಲ್ಲ. ತನಗೆ ಸುಸ್ತಾಗುವವರೆಗೂ ಹೊಡೆದು ಏನೂ ಹೇಳದೆ ಹೋದ. ಆದರೆ ಈ ಸಲ ಅವನು ಹೊಡೆದ್ದೇಕೆ ಎನ್ನೋದು ಅನಿಲಕುಮಾರನಿಗೆ ಗೊತ್ತಾಯಿತು. ಅಪ್ಪ ಅಮ್ಮನ ಮನೆಗೆ ಹೋದಾಗೊಮ್ಮೆ ಯಾರೂ ನೋಡುತ್ತಿಲ್ಲವೆಂದು ಖಾತ್ರಿಪಡಿಸಿಕೊಂಡು ಸಲ ತಮ್ಮನ, ಅಪ್ಪನ ಜೇಬಿನಲ್ಲಿದ್ದ ದುಡ್ಡಿನಲ್ಲಿ ಸ್ವಲ್ಪ ದುಡ್ಡನ್ನು ತೆಗೆದುಕೊಳ್ಳುವುದನ್ನು ರೂಢಿಮಾಡಿಕೊಂಡಿದ್ದ. ಅಲ್ಲಿಂದ ದುಡ್ಡು ಹಾರಿಸುವುದು ನಿಂತಾಗ ಹೆಂಡತಿಗೆ ಜೋರು ಮಾಡಿ, ಅವಳಿಂದಲೂ ಕೆಲಸಲ ಅಲ್ಪಸ್ವಲ್ಪ ದುಡ್ಡನ್ನು ಕಿತ್ತುಕೊಳ್ಳುತ್ತಿದ್ದ. ಆದರೆ ಅದೂ ಹೆಚ್ಚುಕಾಲ ನಡೆಯಲಿಲ್ಲ. ಒಂದು ದಿನ ಗಂಡನ ಕಿರುಕುಳಕ್ಕೆ ರೋಸಿಹೋಗಿ, ಅವಳೂ ಅನಿಲಕುಮಾರನನ್ನು ಓಣಿಯಲ್ಲಿ ಓಡ್ಯಾಡಿಸಿ ಹೊಡೆದುಬಿಟ್ಟಳು. ಹೆಂಡತಿಯಿಂದ ಹೊಡೆಸಿಕೊಂಡ ಗಂಡ ಎಂದು ಎಲ್ಲರಿಗೂ ಗೊತ್ತಾಗಿ, ಅವನನ್ನು ನೋಡಿ ಜನ ನಗುತ್ತಿದ್ದರು. ನಮ್ಮ ಅನಿಲಕುಮಾರ ಅದಕ್ಕೇನೂ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ. ಹೇಗಾದರೂ ಮಾಡಿ ರಾತ್ರಿ ಕುಡಿಯುವುದಕ್ಕೆ ದುಡ್ಡನ್ನು ಹೊಂದಿಸಿಕೊಳ್ಳುವುದೇ ಅವನ ಜೀವನದ ಗುರಿಯಾಗಿತ್ತು.

ಅಂದು ಅಭ್ಯಾಸಬಲದಿಂದ ಹೆಂಡದಂಗಡಿಗೆ ಹೋದಾಗ, ಆ ಪುಢಾರಿ ಅಲ್ಲೇ ಕುಳಿತಿದ್ದ. ಬಾ ಎಂದು ಕರೆದು ಪಕ್ಕಕ್ಕೆ ಕುಳಿಸಿಕೊಂಡ. ಅವನ ಪಕ್ಕದಲ್ಲಿ ಕುಳಿತುಕೊಳ್ಳಲು ಮುಜುಗರವಾದರೂ ಕುಡಿಯಕ್ಕೆ ಸಿಗಬಹುದು ಎಂದು ಹೆಡ್ಡಾಗಿ ನಕ್ಕು ಕುಳಿತುಕೊಂಡ. ಆ ಪುಢಾರಿ ಅನಿಲಕುಮಾರನ ಹೆಂಡತಿಯ ಬಗ್ಗೆ ಜೋಕು ಮಾಡಿ ಗಟ್ಟಿಯಾಗಿ ನಕ್ಕ. ಉಳಿದವರೆಲ್ಲರೂ ನಕ್ಕರು. ಗುಂಪಿನಲ್ಲಿದ್ದ ಯಾರೋ ಒಬ್ಬರು ಅನಿಲಕುಮಾರನ ಹೆಂಡತಿ ಮತ್ತು ಅವನ ತಮ್ಮನ ನಡುವೆ ಏನೋ ಸಂಬಂದವಿದಯೆಂದು ಅನಿಲಕುಮಾರನಿಗೆ ಸ್ಪಷ್ಟವಾಗಿ ತಿಳಿಯದಂತೇ ಚಟಾಕಿ ಹಾರಿಸಿದ. ಎಲ್ಲರೂ ನಕ್ಕರು. ಅನಿಲಕುಮಾರನೂ ಹೆಡ್ಡಾಗಿ ನಕ್ಕ. ‘ಏ ಏ, ಹಂಗೆಲ್ಲಾ ಮಾತನಾಡಬಾರದು ಎಂದು ಪುಢಾರಿ ಗದರಿಸಿದ. ಎಲ್ಲರೂ ಸುಮ್ಮನಾದರು. ‘ಪಾಪ ಇವಂಗೆ ಮಾಡಕ್ಕಾಗದೇ ಇದ್ದರೇ ಏನು ಮಾಡಬೇಕು ಅವರಾದರೂ’ ಎಂದಾಗ ಇನ್ನಷ್ಟು ಜೋರಾದ ನಗೆಬುಗ್ಗೆ ಎದ್ದಿತು. ‘ಕುಡಿತಿಯೇನೋ?’ ಎಂದು ಕೇಳಿದ. ಅನಿಲಕುಮಾರ ಹ್ಮೂ ಎಂದು ತಲೆಯಲ್ಲಾಡಿಸಿದ. ‘ಎಷ್ಟು ಕುಡಿದರೂ ನಿನ್ ಕೈಯಲ್ಲಿ ಆಗಲ್ಲ ಬಿಡು’ ಎಂದ. ಅನಿಲಕುಮಾರನಿಗೆ ಪುಢಾರಿಯ ಮಾತು, ಎಲ್ಲರ ನಗೆಯನ್ನು ಹೇಗೆ ಸಹಿಸಬೇಕೆನ್ನುವುದು ತಲೆಯಲ್ಲಿದ್ದಿಲ್ಲ. ಹಿಂದೆ ಹೀಗೆ ಅವಮಾನ ಮಾಡಿದಾಗೆಲ್ಲ ಧಾರಾಳವಾಗಿ ಕುಡಿಸಿದ್ದಾನೆ ಎನ್ನುವದು ಅನಿಲಕುಮಾರನ ತಲೆಯಲ್ಲಿ ಓಡುತ್ತಿತ್ತು. ಹಾಗಾಗಿ ಅವರೆಲ್ಲರ ಜೋಕುಗಳಿಗೆ ತಾನೂ ಹೆಡ್ಡಾಗಿ ನಕ್ಕು ಯಾವಾಗ ಹೆಂಡ ಕೊಡಿಸುತ್ತಾನೋ ಎಂದು ಕಾಯತೊಡಗಿದ. ಹೆಂಡವನ್ನೇನೋ ಪುಢಾರಿ ತೆಗೆದುಕೊಂಡ, ಆದರೆ ಅನಿಲಕುಮಾರನಿಗೆ ಕೊಡಲಿಲ್ಲ. ‘ಕುಡಿತೀಯೇನೋ?’ ಎಂದು ಕೇಳುವುನು, ಹೆಂಡದ ಬಾಟಲಿಯನ್ನು ಅನಿಲಕುಮಾರನಿಗೆ ಕೊಟ್ಟಂತೆ ಮಾಡಿ, ಕೊಡದೇ ಸತಾಯಿಸವುದು ನಡದೇ ಇತ್ತು, ಸತಾಯಿದಷ್ಟೂ ಇಂದು ಕುಡಿಸೇ ಕುಡಿಸುತ್ತಾನೆ ಎನ್ನುವ ನಂಬಿಕೆ ಅನಿಲಕುಮಾರ ಇಟ್ಟುಕೊಂಡಿದ್ದ. ಆದರೆ ಅಂದಿನ ರಾತ್ರಿ ಹಾಗಾಗಲಿಲ್ಲ. ಅನಿಲಕುಮಾರನಿಗೆ ಸತಾಯಿಸಿ, ಎಲ್ಲರೂ ನಕ್ಕು ಸುಸ್ತಾದ ನಂತರ, ‘ಏ ಹೋಗಲೋ, ಬಿಟ್ಟಿ ಕುಡಿಯೋಕೆ ಬಂದ ಸೂಳೇಮಗ’ ಎಂದು ಕೂತಲ್ಲಿಂದ ಎಬ್ಬಿಸಿ ಕಳುಹಿಸಿದ. ಆಗಲೂ ಅನಿಲಕುಮಾರ ಹಾಸ್ಯ ಮಾಡುತ್ತಿದ್ದಾನೆ, ಈಗ ಕುಡಿಸುತ್ತಾನೆ ಎಂತಲೇ ನಂಬಿದ್ದ. ಕುಂಡೆ ಮೇಲೆ ಒದೆ ಬಿದ್ದಾಗಲೇ ಅವನು ಅಲ್ಲಿಂದ ಜಾಗ ಖಾಲಿ ಮಾಡಿದ.
ಅಂತೂ ಹಾಗೂ ಹೀಗೂ ಮಾಡಿ ತನ್ನ ಜೀವನ ಸಾಗಿಸಿದ ಅನಿಲಕುಮಾರ. ಕೈಲಾದ ಕೆಲಸಗಳನ್ನೂ ಮಾಡಿದ. ತೆಳ್ಳಗೆ ದುರ್ಬಲ ದೇಹವುಳ್ಳ ಅನಿಲಕುಮಾರನಿಗೆ ಕೂಲಿ ಕೆಲಸ ಮಾಡಲಾಗುತ್ತಿದ್ದಿಲ್ಲ. ಇನ್ನಿತರ ಕೆಲಸಗಳಿಗೆ ಇರಬೇಕಾದ ಅರ್ಹತೆ ಇದ್ದಿಲ್ಲ. ಹಾಗಾಗಿ, ಸಿಕ್ಕ ಕೆಲಸಗಳಲ್ಲಿ ತನಗಾದಷ್ಟು ಮಾಡುತ್ತಿದ್ದ. ಸಂಜೆ ಕುಡಿಯಲು ಅಷ್ಟಿಷ್ಟು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ. ಹೆಂಡತಿ ಹೇಗೋ ಮನೆಯನ್ನು ನೋಡಿಕೊಳ್ಳುತ್ತಿದ್ದಳು. ಇತ್ತೀಚಿಗೆ ಕೂಲಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೂ ಮನೆಯಲ್ಲಿ ತನಗೆ, ಮಕ್ಕಳಿಗೆ ಊಟಕ್ಕೆ ಕೊರತೆಯಿರಲಿಲ್ಲ. ತಮ್ಮ ಆಗಲೇ ಒಂದು ಮೋಟರ್‍ಸೈಕಲ್ ತೆಗೆದುಕೊಂಡು ತಿರುಗಾಡಲಾರಂಭಿಸಿದ್ದ. ಅಪ್ಪಅಮ್ಮಂಗೆ ಒಂದು ಮನೆಕಟ್ಟಿಸುವುದಾಗಿ ಮಾತನಾಡುತ್ತಿದ್ದ.
ಕುಡಿದೂ ಕುಡಿದೂ ಅನಿಲಕುಮಾರನಿಗೆ ಹೊಟ್ಟೆ ಬಂದಿತ್ತು. ತೆಳ್ಳಗಿನ ದೇಹಕ್ಕೆ ಉಬ್ಬಿದ ಹೊಟ್ಟೆ ವಿಕಾರವಾಗಿ ಕಾಣಿಸುತ್ತಿತ್ತು. ಆದರೂ ಕುಡಿಯೋದನ್ನು ಬಿಡಲಿಲ್ಲ. ಕುಡಿದು ಮನೆಗೆ ಬಂದು ಹೆಂಡತಿ ಹಾಕಿದ್ದಷ್ಟನ್ನು ತಿಂದು ಮಲಗಿಬಿಡುತ್ತಿದ್ದ. ಕೆಲಸಲ ವಾಂತಿ ಮಾಡಿಕೊಳ್ಳುತ್ತಿದ್ದ. ಊಟ ರುಚಿಸುತ್ತಿದ್ದಿಲ್ಲ, ಕ್ರಮೇಣ ಉಸಿರಾಟಕ್ಕೂ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ತನ್ನ ನೋವು, ತೊಂದರೆಗಳನ್ನು ಎಂದಿನಂತೆ ಅನಿಲಕುಮಾರ ಗಂಭೀರವಾಗಿ ಪರಿಗಣಿಸಲಿಲ್ಲ. ನಿನ್ನ ಲಿವರ್ ಕೆಟ್ಟಿದೆ, ಡಾಕ್ಟರ್‍ಗೆ ತೋರಿಸು ಎಂದು ಕೆಲವರು ಹೇಳಿದರು. ಜೀವನದಲ್ಲಿ ಎಂದೂ ಆಸ್ಪತ್ರೆಯ ಮುಖ ನೋಡದ ಅನಿಲಕುಮಾರನಿಗೆ ಅಲ್ಲಿಗೆ ಹೋಗುವಷ್ಟು ಧೈರ್ಯವಿರಲಿಲ್ಲ. ಇನ್ನೂ ಹೆಚ್ಚಿನ ಭವಿಷ್ಯವಿದ್ದಾಗಲೇ ತನ್ನ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ಒಂದು ದಿನ ಅನಿಲಕುಮಾರ ಸತ್ತುಹೋದ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here