ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ವಿರುದ್ಧ ಧ್ವನಿ ಎತ್ತುವ ವಿದ್ಯಾರ್ಥಿಗಳನ್ನು ಶಿಕ್ಷೆಗೊಳಪಡಿಸುವ ಪರಂಪರೆ ನಮ್ಮ ದೇಶದಲ್ಲಿ  ದಿನನಿತ್ಯದ ಘಟನೆಯಾಗಿ ಮಾರ್ಪಟ್ಟಿದೆ. ಜಾಮಿಯಾ, ಜೆಎನ್‌ಯು, ದೆಹಲಿ ವಿಶ್ವವಿದ್ಯಾನಿಲಯ, ಹೈದರಾಬಾದ್ ಯುನಿವರ್ಸಿಟಿ, ಐಐಟಿ ಮದ್ರಾಸ್ ಹೀಗೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿಯೇ ವಿದ್ಯಾರ್ಥಿಗಳ ಸಂವಿಧಾನಬದ್ಧ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಕ್ರಿಯೆ ದೀರ್ಘ ಕಾಲದಿಂದ ಚಾಲ್ತಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ  ಮಾಧ್ಯಮಗಳಲ್ಲಿ ಒಂದಾದರೂ ವಿದ್ಯಾರ್ಥಿ ಪ್ರತಿಭಟನೆಗಳು ವರದಿಯಾಗುತ್ತವೆ ಮತ್ತು ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯಗಳು ನಡೆದ ಘಟನೆ ದೇಶದಲ್ಲಿ ಸಾಕಷ್ಟು ನಡೆದಿದೆ. ವಿದ್ಯಾರ್ಥಿ ಚಳುವಳಿಗಳ ತೊಟ್ಟಿಲು ಎಂದು ಪರಿಗಣಿಸಲ್ಪಡುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿ ಹೋರಾಟ ದಿನ ನಿತ್ಯದ ಸರ್ವೇ ಸಾಮಾನ್ಯ ಸಂಗತಿ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ವಿದ್ಯಾರ್ಥಿ ವೃಂದದ ಹೋರಾಟಕ್ಕೆ ದೆಹಲಿಯಲ್ಲಿ ದೀರ್ಘ ಪರಂಪರೆ ಮತ್ತು ಇತಿಹಾಸವಿದೆ. ಕೋವಿಡ್ ಕಾರಣಗಳಿಂದ ಇಂದು ವಿದ್ಯಾರ್ಥಿ ಪ್ರತಿಭಟನೆಗಳು ಹೆಚ್ಚು ಬಹಿರಂಗವಾಗಿ ನಡೆಯುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಶುಲ್ಕ ಏರಿಕೆ, ದುರಾಡಳಿತ, ತಾರತಮ್ಯ ಖಂಡಿಸಿ ಅಭಿಯಾನಗಳು ಸತತವಾಗಿ ನಡೆಯುತ್ತಲೇ ಇವೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಅಂಬೇಡ್ಕರ್ ವಿಶ್ವವಿದ್ಯಾಲಯ ಮತ್ತೊಮ್ಮೆ ಅಂತದ್ದೊಂದು ಪ್ರತಿಭಟನೆಗೆ ಸುದ್ದಿಯಾಗಿದ್ದು, ವಿಶ್ವವಿದ್ಯಾಲಯದ ಆಡಳಿತವನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿಯೊಬ್ಬರಿಗೆ ದಂಡ ವಿಧಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.

ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ತಾರತಮ್ಯದ ವಿರುದ್ಧ ಆನ್‌ಲೈನ್ ಅಭಿಯಾನದಲ್ಲಿ ಭಾಗವಹಿಸಿದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರಿಗೆ ದಂಡ ವಿಧಿಸಿ ಯುನಿವರ್ಸಿಟಿ ಅಡ್ಮಿನಿಸ್ಟ್ರೇಶನ್ ಜೂನ್‌ 30 ರಂದು  ಆದೇಶ ಹೊರಡಿಸಿದೆ. ಡಿಸೆಂಬರ್ 20 ರಂದು ನಡೆದ  ಆನ್‌ಲೈನ್ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಡ ಕೂಗಿದ ಕಾರಣ ನೀಡಿ ಅಂತಿಮ ವರ್ಷದ ಎಂಎ ಪ್ರದರ್ಶನ ಕಲೆ ವಿಭಾಗದ ವಿದ್ಯಾರ್ಥಿನಿ ನೇಹಾ ಅವರಿಗೆ ಅಂಬೇಡ್ಕರ್ ವಿಶ್ವ ವಿದ್ಯಾಲಯ 5000 ರೂ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಅನರ್ಹಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದೆ. ನೇಹಾ ಆಲ್‌ ಇಂಡಿಯಾ ಸ್ಟುಡೆಂಟ್ ಅಸೋಸಿಯೇಷನ್‌ (AISA) ಉಪಾಧ್ಯಕ್ಷೆ ಕೂಡ ಆಗಿದ್ದಾರೆ.

ಇದನ್ನೂ ಓದಿ: ಸರ್ಕಾರವು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುವಂತಿಲ್ಲ: JNU ಶುಲ್ಕ ಹೆಚ್ಚಳಕ್ಕೆ ಹೈಕೋರ್ಟ್‌ ವಿರೋಧ.

ಡಿಸೆಂಬರ್ 23 ರಂದು ಯೂಟ್ಯೂಬ್ ಮೂಲಕ ನಡೆದ ಘಟಿಕೋತ್ಸವದಲ್ಲಿ ನೇಹಾ ಅವರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ತಾರತಮ್ಯ ನಡೆಯುತ್ತಿದೆ. ಶುಲ್ಕ ಹೆಚ್ಚಳದ ಮೂಲಕ ಯುನಿವರ್ಸಿಟಿ ಆಡಳಿತ ಬಡವರನ್ನು ಶಿಕ್ಷಣದಿಂದ ವಂಚಿತಗೊಳಿಸುತ್ತಿದೆ ಎಂದು ಆರೋಪಿಸಿದ್ದರು ಮತ್ತು ಪ್ರತಿಭಟನೆಗೆ ಕರೆ ನೀಡಿದ್ದರು ಎಂದು ಹೇಳಲಾಗಿದೆ. ಸಂವಿಧಾನ ನೀಡಿದ ಮೀಸಲಾತಿಯ ಹಕ್ಕಿನಲ್ಲಿ ಬದಲಾವಣೆಗಳನ್ನು ತಂದು ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತುವಂತೆ ನೆಹಾ ಕರೆ ನೀಡಿದ್ದರು. ಹಾಗೇ ಘಟಿಕೋತ್ಸವದಲ್ಲಿ ಅತಿಥಿಯಾಗಿದ್ದ ಅರವಿಂದ್ ಕೇಜ್ರಿವಾಲ್‌ ಅವರಿಗೆ ವಿದ್ಯಾರ್ಥಿಗಳ ಮೇಲೆ ಕನಿಷ್ಠ ಕಾಳಜಿಯಿಲ್ಲ ಎಂಬ ಆರೋಪ ಸಹ ಅವರು ಮಾಡಿದ್ದರು ಎನ್ನಲಾಗಿದೆ. ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಮೇಲೆ ತಾರತಮ್ಯ ನಡೆಯುತ್ತಿದೆ ಎಂಬ ಆರೋಪ ಈ ಹಿಂದೆ ಕೂಡ ಕೇಳಿಬಂದಿತ್ತು.

ಡಿಸೆಂಬರ್‌ 23 ರಂದು ನಡೆದ ಆನ್‌ಲೈನ್ ಘಟಿಕೋತ್ಸವದಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಅಗೌರವಯುತ ಹೇಳಿಕೆಯನ್ನು ನೇಹಾ ನೀಡಿದ್ದಾರೆ ಎಂದು ಅಂಬೇಡ್ಕರ್ ವಿಶ್ವವಿದ್ಯಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಈ ಸಂಬಂಧ ನೇಹಾ ಅವರಿಗೆ ನೋಟಿಸ್‌ ಕೂಡ ನೀಡಲಾಗಿದೆ. ವಿಶ್ವವಿದ್ಯಾಲಯದ ಶಿಸ್ತು ಸಂಹಿತೆಯನ್ನು ವಿದ್ಯಾರ್ಥಿನಿ ಉಲ್ಲಂಘನೆ ಮಾಡಿರುವುದು ತನಿಖಾ ಸಮಿತಿಯ ವರದಿಯಿಂದ ಸ್ಪಷ್ಟವಾಗಿದೆ. ತನಿಖಾ ಸಮಿತಿ ಮತ್ತು ನೇಹಾ ಅವರ ನಡುವೆ ಏಪ್ರಿಲ್ 6 ರಂದು ನಡೆದ ಸಮಾಲೋಚನೆಯಲ್ಲಿ ಈ ಹೇಳಿಕೆ ತಮ್ಮದೆಂದು ಒಪ್ಪಿಕೊಂಡಿದ್ದಾರೆ ಮತ್ತು  ಸಮರ್ಥಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯು ವಿಶ್ವವಿದ್ಯಾಲಯ, ಮುಖ್ಯ ಅತಿಥಿ ಮತ್ತು ಗೌರವ ಅತಿಥಿಗಳ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದೆ ಮತ್ತು ಯುನಿವರ್ಸಿಟಿ ಸಮುದಾಯಕ್ಕೆ ಕಳಂಕವನ್ನು ತರುವ ಪ್ರಯತ್ನವಾಗಿ ಕಂಡು ಬಂದಿದೆ ಎಂದು ಅಂಬೇಡ್ಕರ್ ವಿಶ್ವವಿದ್ಯಾಲಯ ಹೇಳುತ್ತಿದೆ.

ಇದನ್ನೂ ಓದಿ: ದಿಢೀರ್‌ ಶುಲ್ಕ ಡಬಲ್: ಪುಣೆ FTTI ನಲ್ಲಿ ವಿದ್ಯಾರ್ಥಿಗಳಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭ

ತಮ್ಮ ಮೇಲಿನ ದಂಡ ಮತ್ತು ಆರೋಪಗಳಿಗೆ ಪ್ರತಿಕ್ರಿಯಿಸಿರುವ ನೇಹಾ ಆ ದಿನ 12 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ನನ್ನ ಮೇಲೆ ವಿಶ್ವವಿದ್ಯಾಲಯದ ಯಾವ ನಿರ್ದಿಷ್ಟ ನಿಯಮಗಳಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಪದೇ ಪದೇ ಕೇಳುತ್ತಿದ್ದೇನೆ. ಈ ಸಂಬಂಧ ವಿಶ್ವವಿದ್ಯಾಲಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದಕ್ಕೆ ಹೆದರುವುದಿಲ್ಲ ಮತ್ತು ತಾರತಮ್ಯದ ವಿರುದ್ಧದ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಅಂಬೇಡ್ಕರ್‌ ವೀಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ವ್ಯವಸ್ಥಿತವಾಗಿ ತಾರತಮ್ಯ ನಡೆಯುತ್ತಿದ್ದು ವಿಶ್ವ ವಿದ್ಯಾಲಯವು ಪ್ರಜಾಪ್ರಭುತ್ವ ದತ್ತ ಹಕ್ಕುಗಳಡಿ ನ್ಯಾಯವನ್ನು ಕೇಳಿದಾಗ ಕ್ರಮ ಕೈಗೊಳ್ಳಲು ಮುಂದಾಗಿದೆ. ನೇಹಾ ಅವರ ಮೇಲಿನ ಎಲ್ಲಾ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಪ್ರಜಾಪ್ರಭುತ್ವ ವಿಧಾನದಲ್ಲಿನ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ AISA ಎಚ್ಚರಿಸಿದೆ.

ಡಿಸೆಂಬರ್‌ 23 ರ ಘಟಿಕೋತ್ಸವದಲ್ಲಿ ನೀಡಿದ ತಮ್ಮ ಹೇಳಿಕೆಯಿಂದ ನೇಹಾ ಅವರು ವಿದ್ಯಾರ್ಥಿಯ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: ವಿಶ್ವವಿದ್ಯಾಲಯಗಳಲ್ಲಿ ಮೋದಿಗೆ ಧನ್ಯವಾದ ಸಲ್ಲಿಸುವ ಬ್ಯಾನರ್‌ ಹಾಕಲು ಯುಜಿಸಿ ಸೂಚನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here