ದೀಪಾವಳಿಗೆ ಎಲ್ಲರೂ ದೀಪ ಹಚ್ಚಿ, ಪಟಾಕಿ, ಸುರು ಸುರು ಬತ್ತಿ ಹಚ್ಚಿ ಸಂಭ್ರಮಿಸಿದರೆ, ಉತ್ತರ ಪ್ರದೇಶದ ಬರೇಲಿಯಲ್ಲಿ ಉದ್ಯಮಿಯೊಬ್ಬರು ಪಿಸ್ತೂಲ್ ಹಿಡಿದು ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬರೇಲಿಯ ಉದ್ಯಮಿ ಅಜಯ್ ಮೆಹ್ತಾ, ಇಜ್ಜತ್ ನಗರದ ಮನೆಯಲ್ಲಿ ಗುಂಡು ಹಾರಿಸಿ ದೀಪಾವಳಿ ಆಚರಿಸಿದ್ದಾರೆ.

ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬ ಪಿಸ್ತೂಲ್ ಹಿಡಿದು ಗುಂಡು ಹಾರಿಸಿದೆ. ಪಕ್ಕದಲ್ಲೇ ಮಕ್ಕಳು ನಿಂತಿದ್ದಾರೆ. ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅಜಯ್ ಮೆಹ್ತಾ ಮತ್ತು ಪತ್ನಿಗೆ ಜನ ಛೀಮಾರಿ ಹಾಕಿದ್ದಾರೆ. ಶೋಲೋ ಚಿತ್ರದ ತೇರಾ ಕ್ಯಾ ಹೋಗಾ ಕಾಲಿಯಾ ( ನಿಂದೇನಾಗುತ್ತೆ ಕಾಲಿಯಾ..?) ಎಂದು ಡೈಲಾಗ್ ಹೇಳುತ್ತಾ ಗುಂಡು ಹಾರಿಸುತ್ತಿರುವ ವಿಡಿಯೋದಲ್ಲಿದೆ.

ಆದರೆ ಅಷ್ಟಕ್ಕೆ ಪೊಲೀಸರು ಅವರ ಮೇಲೆ ತನಿಖೆ ಮಾಡುತ್ತಿದ್ದಾರೆ. ಅಯ್ಯೊ ಪಟಾಕಿ ಹೊಡೆದರೆ ತನಿಖೆಯೇಕೆ ಎಂದು ನೀವು ಕೇಳಬಹದು. ಆದರೆ ಅವರು ಪಟಾಕಿ ಹೊಡೆಯುವ ಬದಲಿಗೆ ನಿಜ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ನೆರೆಹೊರೆಯವರು ದೂರು ನೀಡಿದ ಕಾರಣ ಈ ದಂಪತಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಇನ್ನು ಇಜ್ಜತ್ ನಗರದಲ್ಲಿ ಅನೇಕ ಮನೆಗಳಿವೆ. ಅಜಯ್ ಮೆಹ್ತಾ ಹೀಗೆ ಗುಂಡು ಹಾರಿಸಿದ್ದರ ಕುರಿತು ನಿವಾಸಿಗಳು ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಪಿಸ್ತೂಲ್ ಹಿಡಿದು ನಿವಾಸಿಗಳಲ್ಲಿ ಭಯ ಹುಟ್ಟಿಸಿದ್ದು ಮತ್ತು ಫೈರ್ ಮಾಡಿದ್ದರ ವಿರುದ್ಧ ವಿಚಾರಣೆ ನಡೆದಿದೆ.

ಇನ್ ಸ್ಪೆಕ್ಟರ್ ಕೆ.ಕೆ. ವರ್ಮಾ ಮಾತನಾಡಿ, ಉದ್ಯಮಿ ಅಜಯ್ ಮೆಹ್ತಾ ಬಳಿ ಪಿಸ್ತೂಲ್ ಇದೆ. ಅವರು ಲೈಸೆನ್ಸ್ ಹೊಂದಿದ್ದರೂ ಸಹ ಲೈಸೆನ್ಸ್ ರದ್ದುಗೊಳಿಸಲಾಗುವುದು. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಪಿಸ್ತೂಲ್ ಹೊಂದುವುದು ಮತ್ತು ಗುಂಡು ಹಾರಿಸುವುದನ್ನು ನಿಷೇಧಿಸಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here