Homeಕರ್ನಾಟಕಗಾಂಧಿ ಚಿಂತನೆಗಳ ಕುರಿತು ಪ್ರಬಂಧ ಸ್ಪರ್ಧೆ; ಶಿಕ್ಷಣ ಸಚಿವರಿಗೆ ಪತ್ರ ಬರೆದ ಸಿಎಂ

ಗಾಂಧಿ ಚಿಂತನೆಗಳ ಕುರಿತು ಪ್ರಬಂಧ ಸ್ಪರ್ಧೆ; ಶಿಕ್ಷಣ ಸಚಿವರಿಗೆ ಪತ್ರ ಬರೆದ ಸಿಎಂ

- Advertisement -
- Advertisement -

’21ನೇ ಶತಮಾನದ ಕಳವಳಗಳು ಮತ್ತು ಗಾಂಧಿ ಚಿಂತನೆ ನೀಡಿದ ಪರಿಹಾರಗಳು’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸೂಚನೆ ನೀಡಿದ್ದಾರೆ.

ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳು, ‘ಬೋರ್ಡ್ ಪರೀಕ್ಷೆಗೆ ಹಾಜರಾಗುವ 10 ಮತ್ತು 12 ನೇ ತರಗತಿಯನ್ನು ಹೊರತುಪಡಿಸಿ 6 ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಈ ತಿಂಗಳ ಅಂತ್ಯದೊಳಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲು ಶೀಘ್ರ ವ್ಯವಸ್ಥೆ ಮಾಡುವಂತೆ’ ಕೋರಿದ್ದಾರೆ.

‘ಮಹಾತ್ಮ ಗಾಂಧಿಯವರ ಹತ್ಯೆಯ ನಂತರ, ದೇಶವು ಅವರ ತತ್ವಗಳನ್ನು ಸಾಧ್ಯವಾದಷ್ಟು ಜಾರಿಗೆ ತಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಶಕ್ತಿಗಳು ವಿಕೇಂದ್ರೀಕರಣವನ್ನು ಅಧೀನಗೊಳಿಸುವ ಮೂಲಕ ಕೇಂದ್ರೀಕರಣಕ್ಕೆ ಒತ್ತು ನೀಡುತ್ತವೆ. ದೀನದಲಿತರು, ದಲಿತರು, ಮಹಿಳೆಯರು, ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ರೈತರು, ಕಾರ್ಮಿಕರು ಮತ್ತು ಯುವಕರು ಕ್ರಿಯಾಶೀಲರಾಗುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

’21ನೆ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು” ಎಂಬ ವಿಷಯದ ಕುರಿತಾದ ಪ್ರತಿ ಶಾಲೆಗಳ 6ನೆ ತರಗತಿ ನಂತರದ ವಿದ್ಯಾರ್ಥಿಗಳಿಗೆ ( ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು, ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ವರೆಗೆ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದರಿಂದ ಗಾಂಧೀಜಿಯವರನ್ನು ಅರಿತುಕೊಳ್ಳಲು ಇನ್ನೂ ಹೆಚ್ಚಿನ ಅವಕಾಶ ನೀಡಿದಂತಾಗುತ್ತದೆ. ಹಾಗಾಗಿ, ಈ ತಿಂಗಳ ಅಂತ್ಯದೊಳಗೆ ಸ್ಪರ್ಧೆಗಳನ್ನು ನಡೆಸಲು ಕ್ರಮ ವಹಿಸಬೇಕು ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಸೂಚಿಸಿದ್ದೇನೆ’ ಎಂದು ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?

‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಯಾಗಿ ಏಳೂವರೆ ದಶಕಗಳು ಮುಗಿದಿದ್ದು, ಗಾಂಧೀಜಿಯವರು ತಮ್ಮ ಜೀವಿತಾವಧಿಯುದ್ಧಕ್ಕೂ ಶಾಂತಿ, ಅಹಿಂಸೆ, ಸತ್ಯ, ವಿಕೇಂದ್ರೀಕರಣ, ಸಾಮಾಜಿಕ ಸಮಾನತೆಯಂತಹ ಮುಂತಾದ ಜೀವಪರ ನಿಲುವುಗಳನ್ನು ಆಚರಿಸಿ ಪ್ರತಿಪಾದಿಸಿದ್ದರು. ಅದೇ ಸಂದರ್ಭದಲ್ಲಿ ದೇಶದ ವೈವಿಧ್ಯತೆ ಹಾಗೂ ಎಲ್ಲರನ್ನೂ ಒಳಗೊಂಡು ಬಾಳುವ ಅನಿವಾರ್ಯತೆಯನ್ನು ಪ್ರತಿಪಾದಿಸಿದ್ದರು. ಇಂಥ ಮಹಾನ್‌ ವ್ಯಕ್ತಿಯನ್ನು ಕೆಲವು ದುರುಳರು ಪಿತೂರಿ ಮಾಡಿ ಹತ್ಯೆ ಮಾಡಿದರು.

ಗಾಂಧೀಜಿಯವರ ಹತ್ಯೆಯ ನ೦ತರವೂ ದೇಶ ನಿರಂತರವಾಗಿ ಅವರ ಆದರ್ಶಗಳನ್ನು ಸಾಧ್ಯವಾದ ಮಟ್ಟಿಗೆ ಅನುಷ್ಠಾನ ಮಾಡಿಕೊಂಡೇ ಬಂದಿದೆ. ಆದರೆ, ಇತ್ತೀಚೆಗೆ ದ್ವೇಷ-ಹಿಂಸೆಯನ್ನು ಪ್ರತಿಪಾದಿಸುವ. ವಿಕೇಂದ್ರೀಕರಣವನ್ನು ದಮನಿಸಿ, ಕೇ೦ದ್ರೀಕರಣಕ್ಕೆ ಒತ್ತು ನೀಡುವ, ದೀನ-ದಲಿತ, ಮಹಿಳೆ, ಆದಿವಾಸಿ, ರೈತ, ಕಾರ್ಮಿಕ ಮತ್ತು ಯುವಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರವೃತ್ತಿಯುಳ್ಳ ಶಕ್ತಿಗಳು ಕ್ರಿಯಾಶೀಲವಾಗುತ್ತಿವೆ. ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ ಶಕ್ತಿಗಳು ಪ್ರವರ್ಧಮಾನಕ್ಕೆ ಬರಲು ಪ್ರಯತ್ನಿಸುತ್ತಿವೆ.

ಇಂದು ಜಾಗತಿಕ ಪರಿಸರದ ಬಿಕ್ಕಟ್ಟುಗಳು, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಹಿಂಸಾ ವಿನೋದ ಮುಂತಾದವುಗಳಿಂದಾಗಿ ಮನುಷ್ಯರು ಈ ಭೂಮಿಯ ಮೇಲಿಂದಲೆ ಅಳಿಸಿ ಹೋಗುವ ದುಸ್ಥಿತಿಗೆ ತಲುಪಿಯಾಗಿದೆ ಎಂದು ಸ್ಟೀಫನ್‌ ಹಾಕಿಂಗ್‌ ಸೇರಿದಂತೆ ಮುಂತಾದ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸ೦ದರ್ಭದಲ್ಲಿ ದೊಡ್ಡ ಭಾಷೆಗಳು ಸಣ್ಣ ಸಣ್ಣ ಭಾಷೆಗಳನ್ನು ನುಂಗಿ ಹಾಕುತ್ತಿವೆ. ಯಾವುದೆ ಸಮಾಜ ಸಮುದಾಯಗಳು ತಮ್ಮ ಭಾಷೆಗಳನ್ನು ಕಳೆದುಕೊಳ್ಳುವುದೆಂದರೆ, ತಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುವುದು ಎಂದರ್ಥ ಎಂಬುದು ಈಗಾಗಲೆ ಸಾಬೀತಾದ ವಿಚಾರವಾಗಿದೆ.

ಆದರೆ, ಗಾಂಧೀಜಿಯವರ ಚಿಂತನೆಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರವಿದೆ. ಆದ್ದರಿಂದ ’21ನೆ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು’ ಎಂಬ ವಿಷಯವನ್ನು ಪ್ರತಿ ಶಾಲೆ [6ನೆ ಶರಗತಿಯ ನ೦ತರ] ಮತ್ತು ಪ್ರತಿ ಕಾಲೇಜಿನ ಪ್ರತಿ ವಿದ್ಯಾರ್ಥಿಗಳಿಗೆ (ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ, ಕಾಲೇಜು-ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳವರೆಗೆ. ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಸ್‌.ಎಸ್‌.ಎಲ್‌.ಸಿ ಮತ್ತು ಪಿ.ಯು.ಸಿ ಮಕ್ಕಳನ್ನು ಹೊರತುಪಡಿಸಿ) ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗಾಂಧೀಜಿಯವರನ್ನು ಅರಿತುಕೊಳ್ಳಲು ಅವಕಾಶ ಒದಗಿಸಿದಂತಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿ ತರಗತಿಯ ಮಕ್ಕಳಿಗೆ ಸೂಕ್ತ ಬಹುಮಾನವನ್ನು ನೀಡುವುದು, ಉಳಿದವರ ಭಾಗವಹಿಸುವಿಕೆಗಾಗಿ ಪ್ರಶ೦ಸನಾ ಪತ್ರಗಳನ್ನು ನೀಡಲು ಕ್ರಮವಹಿಸುವುದು.

ಈ ನಿಟ್ಟಿನಲ್ಲಿ ತಾವುಗಳು ತುರ್ತಾಗಿ ಕಾರ್ಯಯೋಜನೆಯನ್ನು ರೂಪಿಸಿ, ಈ ತಿ೦ಗಳ ಅಂತ್ಯದೊಳಗೆ ಸ್ಪರ್ಧೆಗಳನ್ನು ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸುತ್ತೇನೆ.

ಇದನ್ನೂ ಓದಿ; ಕಲಬುರಗಿ: ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಖಂಡಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...