Homeಕರ್ನಾಟಕ’ಹಸಿ ಸುಳ್ಳು' ಎಂದರೆ ಎಲ್ಲರಿಗೂ ಇಷ್ಟ.. (ಎವರಿಬಡಿ ಲವ್ಸ್ ಎ ಬ್ಲೇಟೆಂಟ್ ಲೈ)

’ಹಸಿ ಸುಳ್ಳು’ ಎಂದರೆ ಎಲ್ಲರಿಗೂ ಇಷ್ಟ.. (ಎವರಿಬಡಿ ಲವ್ಸ್ ಎ ಬ್ಲೇಟೆಂಟ್ ಲೈ)

- Advertisement -
- Advertisement -

ಅಂದು 2017ರ ಡಿಸೆಂಬರ್ 6. ಹದಿನೆಂಟು ವಯಸ್ಸಿನ ಒಬ್ಬ ಹುಡುಗ ಕಾಣದಾದ. ಅದೇ ದಿನ ಊರಲ್ಲಿ ಏನೋ ಗದ್ದಲ. ಅವನ ಮನೆಯವರು ಪೊಲೀಸರ ಬಳಿ ಹೋಗಿ ’ಕಾಣೆಯಾಗಿದ್ದಾನೆ’ ಎಂದು ದೂರುಕೊಟ್ಟರು. ಎರಡು ದಿನಗಳ ನಂತರ ಆ ಹುಡುಗ ಶವವಾಗಿ ಪತ್ತೆಯಾದ.

ಆ ಹುಡುಗನ ಹೆಸರು ಪರೇಶ್ ಮೇಸ್ತಾ. ಊರು ಹೊನ್ನಾವರ. ಉತ್ತರ ಕನ್ನಡ ಜಿಲ್ಲೆ. ಇನ್ನೂ ಪೊಲೀಸರು ಸಾವಿನ ತನಿಖೆ ಶುರು ಮಾಡಬೇಕು. ಅಷ್ಟರಲ್ಲಾಗಲೇ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಡೀ ಘಟನೆಯ ’ಗ್ರಾಫಿಕ್ಸ್ ಡೀಟೇಲ್ಸ್’ ರೆಡಿ ಇದ್ದವು. ಪಕ್ಷದ ದೊಡ್ಡದೊಡ್ಡ ನಾಯಕರು ಏರಿದ ದನಿಯಲ್ಲಿ ಪರೇಶ್ ಮೇಸ್ತಾ ಎಂಬ ಮೊಗವೀರರ ಹುಡುಗನನ್ನು ಮುಸಲ್ಮಾನ ಹುಡುಗರು ಚಿತ್ರಹಿಂಸೆ ಕೊಟ್ಟುಕೊಂದರು; ಅವನ ಕೈಯ ಮೇಲೆ ’ಜೈ ರಾಮ್’ ಎಂಬ ಹಚ್ಚೆ ಇತ್ತು. ಅದನ್ನು ನೋಡಲಾಗದೆ ಆ ಕ್ರೂರಿಗಳು ಅವನ ಕೈಯನ್ನೇ ಕತ್ತರಿಸಿದರು. ಆ ನಂತರ ದೇಹವನ್ನು ಸುಟ್ಟು ಹಾಕಿದರು ಎಂದೆಲ್ಲಾ.. ಸುದ್ದಿಗೋಷ್ಠಿಗಳಲ್ಲಿ ಒಂದೇ ಸಮನೆ ವರದಿ ಒಪ್ಪಿಸಿದರು.

ರೋಚಕತೆಗೆ ಸದಾ ಹಾತೊರೆಯುವ ಮಾಧ್ಯಮಗಳಿಗೆ ಅಂದು ’ಹಬ್ಬದೂಟ’ ಸಿಕ್ಕಿತ್ತು. ಇನ್ನೇನು ಮೂರ್ನಾಲ್ಕು ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ. ಹಾಗಿರುವಾಗ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ’ಹಿಂದೂ ವಿರೋಧಿ’ ಎಂದು ಬಿಂಬಿಸಲು ಇದಕ್ಕಿಂತ ಇನ್ನೇನು ಬೇಕು?

ಕೆ.ಎಸ್.ಈಶ್ವರಪ್ಪ

ವಿರೋಧ ಪಕ್ಷದ ಹೋರಾಟದ ಫಲವಾಗಿ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು. ವರ್ಷಗಳ ಕಾಲ ತನಿಖೆ ಮಾಡಿ, ಸಿಬಿಐ ಪೊಲೀಸರು 2022ರಲ್ಲಿ ಈ ಪ್ರಕರಣಕ್ಕೆ ಅಂತ್ಯ ಹಾಡಬೇಕೆಂದು ಹೊನ್ನಾವರದ ನ್ಯಾಯಾಲಯಕ್ಕೆ ವರದಿ ಕೊಟ್ಟರು. ಕಾರಣ, ಅವರು ಮೇಸ್ತಾನ ಸಾವಿಗೆ ಯಾರನ್ನೂ ಹೊಣೆ ಮಾಡಲು ಆಗಿರಲಿಲ್ಲ. ಅದೊಂದು ಆಕಸ್ಮಿಕ ಸಾವು. ಯಾರೂ ಹಲ್ಲೆ ಮಾಡಿರಲಿಲ್ಲ. ಆ ಹುಡುಗನ ಮೇಲೆ ಗಾಯದ ಗುರುತುಗಳೇನೂ ಇರಲಿಲ್ಲ ಎಂದು ತನಿಖಾ ಸಂಸ್ಥೆ ಹೇಳಿತು.

ಈ ವರದಿ ಬರುವಷ್ಟರಲ್ಲಿ ಈ ಪ್ರಕರಣ ನಡೆದು ಐದು ವರ್ಷಗಳಾಗಿದ್ದವು. ಮೊದಲು ಏರಿದ ದನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ಈಗ ಮೌನದ ಮೊರೆ ಹೋಗಿದ್ದರು. ’ಜೈ ರಾಮ್’ ಎಂದು ಬರೆದುಕೊಂಡಿದ್ದ ’ಕೈ’ ಕತ್ತರಿಸಿದ್ದು ಅವರಿಗೆ ಮರೆತೇಹೋಗಿತ್ತು. ಅಲ್ಲ ಆಗ ಕತ್ತರಿಸಲಾಗಿದ್ದ ಕೈ ಸಿಬಿಐ ಕಣ್ಣಿಗೇಕೆ ಕಾಣಲಿಲ್ಲ ಎಂದೂ ಕೇಳಲಿಲ್ಲ.

ಒಬ್ಬ ಅಮಾಯಕ ಹುಡುಗನ ಆಕಸ್ಮಿಕ ಸಾವು ಚುನಾವಣಾ ರಾಜಕಾರಣಕ್ಕೆ ಪ್ರಮುಖ ಅಸ್ತ್ರವಾಗಿ ಬಳಕೆಯಾಗಿತ್ತು. ಇದೊಂದೇ ಅಲ್ಲ, ಕರಾವಳಿಯಲ್ಲಿ ಕಾಂಗ್ರೆಸ್ ಕಾಲದಲ್ಲಿ ನಡೆದ ಹಲವು ಸಾವು, ಕೊಲೆ ಪ್ರಕರಣಗಳು ಇದೇ ರೀತಿ ಚುನಾವಣೆಯ ವಿಷಯಗಳಾಗಿ ಮತದಾರರ ಮೇಲೆ ಭಾರೀ ಪ್ರಭಾವ ಬೀರಿದ್ದವು. ವಿರೋಧ ಪಕ್ಷ ಪ್ರತಿ ಘಟನೆಯನ್ನೂ ’ಹಿಂದೂ ಹತ್ಯೆ’ ಎಂದು ಬಿಂಬಿಸಿತು. ಹಾಗೂ ಆ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೆಂದು ’ಸಾರಿ’, ಅಂತ ಸಾವುಗಳ ದೊಡ್ಡ ಪಟ್ಟಿಯನ್ನೇ ಮಾಡಿ ಗಲ್ಲಿಗಲ್ಲಿಯಲ್ಲಿ ಪ್ರಚಾರ ಮಾಡಿದರು. ಆದರೆ ಆ ಪಟ್ಟಿಯಲ್ಲಿದ್ದ ಒಬ್ಬರು ಇನ್ನೂ ಬದುಕಿದ್ದರು. ಒಂದಿಬ್ಬರು ಹತರಾಗಿದ್ದು ಕೌಟುಂಬಿಕ ಕಾರಣಗಳಿಗೆ. ಉಳಿದವರ ಹತ್ಯೆ ಹಿಂದೆ ವೈಯಕ್ತಿಕ ವೈಷಮ್ಯದಂತಹ ಕಾರಣಗಳಿದ್ದವು. ಒಂದೆರಡು ಪ್ರಕರಣಗಳಲ್ಲಿ ಆರೋಪಿಗಳು ಇದೇ ಹಿಂದೂ ಪರ ಕೋಮುವಾದಿ ಸಂಘಟನೆಗಳಿಗೆ ಸೇರಿದ್ದವರೇ ಆಗಿದ್ದರು. ಆದರೆ ಪ್ರತಿಘಟನೆಯ ಹಿನ್ನೆಲೆ ಹುಡುಕಿ, ಸವಿವರವಾದ ಮಾಹಿತಿಯನ್ನು ಜನರಿಗೆ ತಲುಪಿಸುವಹೊತ್ತಿಗೆ ಸುಳ್ಳು-ಸುದ್ದಿ ಪ್ರಪಂಚ ಪರ್ಯಟನಯನ್ನು ಯಶಸ್ವಿಯಾಗಿ ಮುಗಿಸಿತ್ತು.

ಪರೇಶ್ ಮೇಸ್ತಾ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಕೊಪ್ಪಳದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯೊಂದರಲ್ಲಿ ’ಬಿಜೆಪಿ ಸಾಧನೆ ಬಗ್ಗೆ ಹೇಳೋಕೆ ನಿಮಗೇನೂ ಗೊತ್ತಾಗದಿದ್ದರೆಸುಳ್ಳೋ..ಪಳ್ಳೋ..ಹೇಳಿ ಬನ್ನಿ’ ಎಂದು ಕರೆಕೊಟ್ಟಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯ, ಸತ್ಯವನ್ನೇ ಹೇಳಬೇಕು ಎನ್ನುವ ತತ್ತ್ವವಲ್ಲ.

ವಂಚನೆ

ಯಾರಾದರೂ ಸುಳ್ಳುಗಳನ್ನು ಯಾಕೆ ಹೇಳುತ್ತಾರೆ. ಒಂದೋ ಮೆಚ್ಚಿಸಲು, ಇಲ್ಲಾ ವಂಚಿಸಲು. ಅದರಾಚೆಗೆ ಸುಳ್ಳಿನ ಉದ್ದೇಶ ಬೇರೆ ಇರಲಿಕ್ಕಿಲ್ಲ. ದೇಶದ ಜನ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಶತ್ರು ’ಸುಳ್ಳು’. ಚುನಾವಣೆಗೆ ಮುನ್ನ ರಾಜಕಾರಣಿಗಳು ಅಸಾಧ್ಯವಾದುದನ್ನೆಲ್ಲಾ ಆಶ್ವಾಸನೆಗಳ ರೂಪದಲ್ಲಿ ಹೇಳಿ, ಜನರನ್ನು ಮೆಚ್ಚಿಸುತ್ತಾರೆ. ಆ ನಂತರ ಅವುಗಳನ್ನು ಈಡೇರಿಸಲಾಗದೆ ಮತ್ತೊಂದಿಷ್ಟು ಸುಳ್ಳು ಹೇಳಿ ವಂಚಿಸುತ್ತಾರೆ. ಹಾಗೂ ಎದುರಾಳಿಯನ್ನು ಮಣಿಸಲು ಸುಳ್ಳು ಹರಡುವುದು ಇದಕ್ಕಿಂತ ಅಪಾಯಕಾರಿ. ಹೇಗಾದರೂ ಮಾಡಿ ಜನರನ್ನು ತಮ್ಮತ್ತ ಸೆಳೆಯಲು ಹವಣಿಸುವವರಿಗೆ ಸುಲಭವಾಗಿ ಹೊಳೆಯುವ ಮಂತ್ರ ಗೋಬೆಲ್ಸ್ ಮಾದರಿಯದ್ದು.

ಅಖ್ಲಾಕ್‌

ಒಂದು ಸುಳ್ಳನ್ನು ಹತ್ತು ಬಾರಿ ಹೇಳು, ಅದು ಸತ್ಯವಾದೀತು. ಸತ್ಯ ಆಗದಿದ್ದರೂ ಪರವಾಗಿಲ್ಲ, ಅಷ್ಟು ಕಾಲ ಜನರನ್ನು ಅದು ಆಕರ್ಷಿಸುತ್ತದಲ್ಲ. ಚುವಾವಣೆಯಲ್ಲಿ ನಿಂತವರಿಗೆ ಅಷ್ಟು ಸಾಕು. ತಮಗೆ ಆಗದವನೊಬ್ಬ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರೆ ಅವನಿಗೆ ಹಾನಿ ಉಂಟುಮಾಡುವುದು ತುಂಬಾ ಸುಲಭ. ಅವನ ಎದುರು ನಿಂತು ಹೋರಾಡಬೇಕಿಲ್ಲ. ’ಅವನು ಕಳ್ಳ. ಪಿಕ್‌ಪಾಕೆಟ್ ಮಾಡುವುದೇ ಅವನ ಕಸುಬು’ ಎಂದು ಎಲ್ಲರಿಗೂ ಕೇಳುವಂತೆ ಕೂಗಿ, ಬಸ್ ಇಳಿದುಹೋದರೆ ಸಾಕು. ಅವನ ಮೇಲೆ ಕೇಳಿ ಬಂದ ಆರೋಪ ಸುಳ್ಳೋ, ನಿಜವೋ ಎಂದು ಅರಿಯುವ ವ್ಯವಧಾನ ಯಾರಿಗೂ ಇರುವುದಿಲ್ಲ. ಆ ಕ್ಷಣ ಆ ಮನುಷ್ಯನಿಗೆ ನಾಲ್ಕು ಏಟು ಕೊಡುವುದಷ್ಟೇ ಸದ್ಯಕ್ಕೆ ತೋರಬಹುದಾದ ’ಸಾಮಾಜಿಕ ಕಳಕಳಿ’ ಎಂದು ಆಳವಾಗಿ ನಂಬಿರುವ ಜನ ನಮ್ಮ ಮುಂದಿದ್ದಾರೆ.

ಇದನ್ನೂ ಓದಿ: ‘ಉರಿಗೌಡ, ನಂಜೇಗೌಡ ಕಾಲ್ಪನಿಕ ಎಂದವರು ಕ್ಷಮೆಯಾಚಿಸಲಿ’: ಚುಂಚನಶ್ರೀ ಹೇಳಿಕೆ ಬಳಿಕ ಸಿ.ಟಿ.ರವಿ ಪ್ರತಿಕ್ರಿಯೆ

ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಪ್ರಚಾರ ಮಾಡುವಾಗ ಬಿಜೆಪಿಯ ನೇತಾರರು ಅಲ್ಲಿ ಸ್ಮಶಾನಗಳಿಗಿಂತ, ಖಬರಸ್ತಾನಗಳು ಹೆಚ್ಚಿವೆ ಎಂದರು. ಅವರು ರಾಜಕೀಯ ವಿರೋಧಿಗಳನ್ನು ಹಣಿಯಲು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯನ್ನಾಗಿಟ್ಟುಕೊಂಡು ಟೀಕೆಗೆ ಇಳಿದಿದ್ದರು. ಅಷ್ಟೇ ಅಲ್ಲ, ಕಳೆದ ಮೂವತ್ತು ವರ್ಷಗಳಲ್ಲಿ ಇಂತಹ ಹಲವು ಪ್ರಕರಣಗಳು ಈ ದೇಶದಲ್ಲಿ ನಡೆದುಹೋಗಿವೆ. ಸಂಖ್ಯಾದೃಷ್ಟಿಯಿಂದ ಕಡಿಮೆ ಇರುವವರನ್ನು ’ಅನ್ಯ’ರನ್ನಾಗಿಸಿ ಉಳಿದವರನ್ನೆಲ್ಲಾ ’ನಮ್ಮವರನ್ನಾಗಿಸಿಕೊಳ್ಳುವ’ ಹುನ್ನಾರ ಕೆಲವರಿಗೆ ಹಲವು ಸಂದರ್ಭಗಳಲ್ಲಿ ಲಾಭವನ್ನೇ ತಂದುಕೊಟ್ಟಿದೆ.

ಹಾಗೆಯೇ ಅಖ್ಲಾಕ್‌ನ ಮನೆಯಲ್ಲಿ ಬೇಯಿಸಿದ್ದು ದನವೋ, ಕೋಳಿಯೋ, ಕುರಿಯೋ ಗೊತ್ತಿಲ್ಲ. ಆದರೆ ದನ ಎಂದು ಒಬ್ಬ ಬೊಬ್ಬೆಹಾಕಿದ. ಜನ ಸೇರಿ ಆತನನ್ನು ಕೊಂದರು. ಅವನ ಮನೆಯಲ್ಲಿ ಅವನು ಏನನ್ನಾದರೂ ಬೇಯಿಸಿಕೊಂಡು ತಿನ್ನಲಿ ಅದರಿಂದ ತಮಗೇನು ಆಗಬೇಕು ಎಂಬ ವಿವೇಚನೆ ಅವರಾರಿಗೂ ಇರಲಿಲ್ಲ. ಊರಿಗೆ ಬಂದ ಯಾವುದೋ ಅಪರಿಚಿತ ವಾಹನದಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ಮಾತನಾಡಿದರೂ ಸಾಕು, ಜನ ಸೇರಿ ಅಪರಿಚಿತರನ್ನು ಹುಡುಕಿ ಅಟ್ಟಾಡಿಸಿದ ಉದಾಹರಣೆಗಳು ಎಷ್ಟು ಬೇಕು? ಸಾಮಾನ್ಯ ಜನರಲ್ಲಿ ಇರಬಹುದಾದ ಇಂತಹ ’ಸುಲಭವಾಗಿ ನಂಬುವ’ ಹಾಗೂ ’ಯೋಚನೆ ಮಾಡದೆ ಪ್ರತಿಕ್ರಿಯಿಸುವ’ ಮನೋಭಾವವೇ ರಾಜಕಾರಣಿಗಳ ಕೆಲಸವನ್ನು ಸುಲಭ ಮಾಡಿವೆ.

ಜನ ’ಸುಳ್ಳು’ಗಳನ್ನು ಇಷ್ಟ ಪಡಲು ಕಾರಣಗಳಿವೆ. ’ಸುಳ್ಳು’ಗಳು ಸಾವಿರಾರು ವರ್ಷಗಳಿಂದ ನಮ್ಮ ಬದುಕಿನ ಭಾಗವಾಗಿವೆ. ಮನುಷ್ಯನಲ್ಲದೆ ಬೇರೆ ಜೀವಿಗಳ ಮನೋವಿಕಾಸದಲ್ಲಿ ಈ ಸುಳ್ಳಿನ ಪಾತ್ರವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮನುಷ್ಯನನ್ನಂತೂ ’ಸುಳ್ಳುಗಳು’ ಬಹಳವಾಗಿ ಕಾಡಿವೆ. ನಮ್ಮ ಹಿರಿಯರು ನಮ್ಮಲ್ಲಿ ಹಲವು ಸುಳ್ಳುಗಳನ್ನು ಬಿತ್ತಿಹೋಗಿದ್ದಾರೆ. ಎಷ್ಟೋ ಜ್ಯೋತಿರ್ವರ್ಷಗಳಷ್ಟು ದೂರ ಇರುವ ನಕ್ಷತ್ರ ಈಗಷ್ಟೇ ಹುಟ್ಟಿದ ಮಗುವಿನ ಮೇಲೆ ಪರಿಣಾಮ ಬೀರಬಲ್ಲದು ಎಂದು ನಾವು ನಂಬುತ್ತೇವೆ. ಹಾಗಾಗಿ, ಆಧುನಿಕ ವ್ಯವಸ್ಥೆಗಳಿರುವ ಆಸ್ಪತ್ರೆಗಳಲ್ಲಿ ಈ ಸಮಯ ನೋಡಿ ಹೆರಿಗೆ ಮಾಡಿಸುವ ಸವಲತ್ತೂ ಇದೆ.

ಮದುವೆಗೆ ಮುಹೂರ್ತ ನೋಡುತ್ತೇವೆ. ಅಮಾವಾಸ್ಯೆ ದಿನ ಮದುವೆ ಆದವರ ಬದುಕಿನ ಪೂರಾ ಕತ್ತಲು ಎಂದು ಸುಖಾಸುಮ್ಮನೆ ನಂಬುತ್ತೇವೆ. ನೂರು ಅರ್ಚಕರನ್ನು ಕರೆಯಿಸಿ ಹೋಮ ಮಾಡಿಸಿದರೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ನಮ್ಮನ್ನಾಳುವ ಜನ ನಂಬುತ್ತಾರೆ. ಅವರ ನಂಬಿಕೆಗಳ ಬಗ್ಗೆ ನಮಗೆ ಮೆಚ್ಚುಗೆ ಇದೆ.

ಅಷ್ಟೇ ಏಕೆ, ಈಗಲೂ ಢಾಳಾಗಿ ಚಾಲ್ತಿಯಲ್ಲಿರುವ ಅಸ್ಪೃಶ್ಯತೆ, ಜಾತೀಯತೆ, ಶೋಷಣೆ ಇವೆಲ್ಲಾ ಯಾವುದೋ ಕಾಲಘಟ್ಟದಲ್ಲಿ ಸೃಷ್ಟಿಯಾದ ’ಸುಳ್ಳು’ಗಳ ಪರಿಣಾಮವೇ. ಎಲ್ಲಾ ಮನುಷ್ಯರು ಹೋಮೋ-ಸೇಪಿಯನ್ಸ್ ಎಂಬ ಸರಳ ಹಾಗೂ ವೈಜ್ಞಾನಿಕ ಸತ್ಯವನ್ನು ಇದುವರೆಗೂ ನಾವು ಒಪ್ಪಿಕೊಂಡಿಲ್ಲ. ಪರಿಸ್ಥಿತಿ ಹೀಗಿರುವಾಗ ನಮ್ಮನ್ನಾಳುವ ಜನ ಕೂಡಾ ಸುಳ್ಳುಗಳ ಮೊರೆ ಹೋಗಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಇಲ್ಲವಾಗಿದ್ದಲ್ಲಿ ’ರಾಮ ಹುಟ್ಟಿದ್ದು ಇದೇ ಜಾಗದಲ್ಲಿ’ ಎಂಬ ನಂಬಿಕೆಯ ಮಾತನ್ನೇ ಇಟ್ಟುಕೊಂಡು ದೇಶಾದ್ಯಂತ ರಥಯಾತ್ರೆ ನಡೆಸಿ ಮಸೀದಿ ಉರುಳಿಸಲು ಸಾಧ್ಯವಿತ್ತೆ? ಸಾವಿರಾರು ಜನರ ಸಾವು-ನೋವಿಗೆ ಮುನ್ನುಡಿ ಬರೆಯಲು ಸಾಧ್ಯವಿತ್ತೆ?

ಈಗ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಉರಿಗೌಡ ಮತ್ತು ನಂಜೇಗೌಡ ಎಂಬ ಎರಡು ಪಾತ್ರಗಳನ್ನು ಟಿಪ್ಪು ಹತ್ಯೆ ಮಾಡಿದವರು ಎಂಬ ಕತೆ ಕಟ್ಟಿ ಸಾಧಿಸಲು ಹೊರಟಿರುವುದಾದರೂ ಏನನ್ನು? ಇದುವರೆಗೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಲಾಗಿಲ್ಲ. ಹಾಗಾಗಿ ಅವರನ್ನು ಓಲೈಸಿಕೊಳ್ಳಲು, ಟಿಪ್ಪುವನ್ನು ಎಳೆತಂದು ಆತನ ಎದುರು ಒಕ್ಕಲಿಗರನ್ನು ನಿಲ್ಲಿಸುವ ಪ್ರಯತ್ನ. ಟಿಪ್ಪು ಯುದ್ಧ ಮಾಡಿ ಸಾಯುವ ಕಾಲಕ್ಕೆ ನಮ್ಮ ದೇಶದಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆಗಳೇ ಇದ್ದವು. ಆಂಗ್ಲರ ಸರಕಾರಕ್ಕೆ ವರದಿ ಮಾಡುವವರೂ ಇದ್ದರು. ಆ ಎಲ್ಲಾ ದಾಖಲೆಗಳು ಹೇಳದ ಸಂಗತಿಯನ್ನು ಈಗ ಕಲ್ಪಿಸಿ, ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಅವರ ಮಾತಿಗೆ ಸೂಕ್ತ ಸಾಕ್ಷಿಗಳು ಸಿಗದೇ ಸಣ್ಣಪುಟ್ಟ ಹುಲುಕಡ್ಡಿ ಸಿಕ್ಕರೂ ಅದನ್ನೇ ದೊಡ್ಡ ಸಾಕ್ಷಿ ಎಂಬಂತೆ ಬಿಂಬಿಸಿದ್ದಾರೆ. ಆದರೆ ಅವರು ಅಂದುಕೊಂಡ ಮಟ್ಟಿಗೆ ಬೆಂಬಲ ಸಿಕ್ಕಂತೆ ಕಾಣುತ್ತಿಲ್ಲ. ಹಾಗಾಗಿ ಅವರು ಪದೇಪದೇ ಅದೇ ಸುಳ್ಳನ್ನು ರಿಪೀಟ್ ಮಾಡುತ್ತಿದ್ದಾರೆ. ಎಷ್ಟೇ ಆಗಲಿ ಗೋಬೆಲ್ಸ್‌ನ ಅನುಯಾಯಿಗಳಲ್ಲವೆ?

ಜಿತೇಶ್ ಎಸ್.
ಪತ್ರಕರ್ತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...