ಕಳೆದ 11 ತಿಂಗಳ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 1,91,000 ಕೋಟಿ ರೂಪಾಯಿ ಸಾಲ ಮಾಡಿದೆ. ಈ ಮೂಲಕ ಪ್ರತಿ ಕನ್ನಡಿಗನ ತಲೆ ಮೇಲೆ 31, 833 ರೂ. ಸಾಲ ಹೊರಿಸಿದೆ. ಐದು ವರ್ಷದಲ್ಲಿ ಪ್ರತಿ ಕನ್ನಡಿಗನ ತಲೆ ಮೇಲೆ 1.5 ಲಕ್ಷ ಸಾಲ ಹೊರೆಸುವುದು ಪಕ್ಕಾ ಎಂದು ಸುವರ್ಣ ನ್ಯೂಸ್ ಚಾನೆಲ್‌ನ ಡಿಬೆಟ್ ಒಂದೆ ವಿಡಿಯೋವನ್ನು ಹಂಚಿಕೊಳ್ಳಲಾಗ್ತಿದೆ. ವಿಡಿಯೋದಲ್ಲಿ ಬಿಜೆಪಿ ವಕ್ತಾರರೊಬ್ಬರು ಕೇವಲ 11 ತಿಂಗಳ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ 1, 91,000 ಕೋಟಿ ರೂ. ಸಾಲ ಮಾಡಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಪ್ರಧಾನಿ ಮೋದಿ ಬೆಂಬಲಿಗರು ಈ ಹೇಳಿಕೆ ಆಧರಿಸಿ ಪೋಸ್ಟರ್‌ಗಳನ್ನು ಕೂಡ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: ಮೇಲೆ ಉಲ್ಲೇಖಿಸಿದ ಸುದ್ದಿಯ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ನಡೆಸಿದೆ. ರಾಜ್ಯ ಸರ್ಕಾರಗಳು ಮಾಡಿದ ಸಾಲದ ಮಾಹಿತಿ ತಿಳಿಯಲು ನಾವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ವೆಬ್‌ಸೈಟ್‌ನಲ್ಲಿ ಕೊಡಲಾದ ಮಾಹಿತಿಯನ್ನು ಪರಿಶೀಲಿಸಿದ್ದೇವೆ.
ಆರ್‌ಬಿಐ ಮಾಹಿತಿ ಪ್ರಕಾರ, ಸಿದ್ದರಾಮಯ್ಯನವರು 2018 ರವರೆಗೆ ಮುಖ್ಯಮಂತ್ರಿ ಆಗಿದ್ದ 5 ವರ್ಷದ ಅವಧಿಯಲ್ಲಿ ರಾಜ್ಯದ ಯೋಜನೆಗಳಿಗಾಗಿ 1,33,284 ಕೋಟಿ ರೂ. ಸಾಲ ಮಾಡಿದ್ದರು.
2023ರಲ್ಲಿ ಬಸವರಾಜ ಬೊಮ್ಮಾಯಿಯವರು ಅಧಿಕಾರದಿಂದ ಕೆಳಗಿಳಿದ ಸಂದರ್ಭದಲ್ಲಿ ರಾಜ್ಯದ ಮೇಲಿದ್ದ ಒಟ್ಟು ಸಾಲ 5,35,156.7 ಕೋಟಿ ರೂಪಾಯಿ ಆಗಿತ್ತು.
ಅಂದರೆ, ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಒಟ್ಟು 5 ವರ್ಷದಲ್ಲಿ (2018-23) ಮಾಡಿದ ಸಾಲ 2,48,828 ಕೋಟಿ ರೂ.
2024 ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಸಾಲ ಮಾಡುವುದಾಗಿ ಘೋಷಿಸಿರುವ ಮೊತ್ತ 1,05,246 ಕೋಟಿ ರೂಗಳು. ಅಲ್ಲಿಗೆ ರಾಜ್ಯದ ಒಟ್ಟು ಸಾಲ 6.4 ಲಕ್ಷ ಕೋಟಿಗಳಾಷ್ಟಾಗುತ್ತದೆ.
ಆದ್ದರಿಂದ, 11 ತಿಂಗಳಲ್ಲಿ ಸಿದ್ದರಾಮಯ್ಯನವರು 1,91,000 ಕೋಟಿ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳಾಗಿದೆ.
ಇದನ್ನೂ ಓದಿ : Fact Check: ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ವಿತರಿಸುವ ಹಾಲಿನಲ್ಲಿ ಸ್ನಾನ ಮಾಡಿದ್ದಾರೆ ಎಂಬುವುದು ಸುಳ್ಳು