Homeದಿಟನಾಗರಫ್ಯಾಕ್ಟ್‌ಚೆಕ್‌: ಬಬಿಯಾ ಮೊಸಳೆ ಸಸ್ಯಾಹಾರಿಯಲ್ಲ; ವೈರಲ್‌ ಫೋಟೋ ಬಬಿಯಾದ್ದಲ್ಲ

ಫ್ಯಾಕ್ಟ್‌ಚೆಕ್‌: ಬಬಿಯಾ ಮೊಸಳೆ ಸಸ್ಯಾಹಾರಿಯಲ್ಲ; ವೈರಲ್‌ ಫೋಟೋ ಬಬಿಯಾದ್ದಲ್ಲ

ಶೋಭಾ ಕರಂದ್ಲಾಜೆ ಮತ್ತು ಮತ್ತಿತರರು ಸಂತಾಪ ಸೂಚಿಸಿರುವ ಮೊಸಳೆಯ ಕುರಿತು ಆಸಕ್ತಿಕರ ಸಂಗತಿಗಳು ಇಲ್ಲಿವೆ...

- Advertisement -
- Advertisement -

“ಕಾಸರಗೋಡು ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಸಸ್ಯಹಾರಿ ಮೊಸಳೆ ಬಬಿಯಾ ಭಾನುವಾರ ರಾತ್ರಿ ಮೃತಪಟ್ಟಿದೆ. 75 ವರ್ಷದ ಮೊಸಳೆಯು ಭಕ್ತರನ್ನು ಆಕರ್ಷಿಸುತ್ತಿತ್ತು. ದೇವಾಲಯದಿಂದ ನೀಡಲಾಗುತ್ತಿದ್ದ ಅಕ್ಕಿ ಮತ್ತು ಬೆಲ್ಲವನ್ನು ಮಾತ್ರ ಸೇವಿಸುತ್ತಿತ್ತು” ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಕ್ತರು ದಿನಕ್ಕೆರಡು ಬಾರಿ ಪ್ರಸಾದವನ್ನು ಅರ್ಪಿಸುತ್ತಿದ್ದರು. 1945ರಲ್ಲಿ ಬ್ರಿಟಿಷ್ ಸೈನಿಕನೊಬ್ಬ ಈ ಲೇಕ್‌ ದೇವಾಲಯದಲ್ಲಿದ್ದ ಮೊಸಳೆಯ ಮೇಲೆ ಗುಂಡು ಹಾರಿಸಿದನು. ಕೆಲವೇ ದಿನಗಳಲ್ಲಿ ಬಬಿಯಾ ದೇವಾಲಯದ ಕೊಳದಲ್ಲಿ ಕಾಣಿಸಿಕೊಂಡಿತು ಎಂಬ ನಂಬಿಕೆಗಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೊಸಳೆಗಳು ಮೂಲತಃ ಮಾಂಸಾಹಾರಿ ಪ್ರಾಣಿಗಳಾಗಿದ್ದು, ಎಂದಿಗೂ ಬಬಿಯಾ ಯಾರನ್ನೂ ಹೆದರಿಸಲಿಲ್ಲ. ಸಸ್ಯಾಹಾರಿ ಮೊಸಳೆ ಎಂಬ ಹೆಸರನ್ನೂ ಪಡೆಯಿತು. ಕಳೆದ ಕೆಲವು ದಿನಗಳಿಂದ ಈ ಮೊಸಳೆಯ ಆರೋಗ್ಯ ಸರಿಯಿಲ್ಲದ ಕಾರಣ ಪಶುವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು ಎಂದು ದೇವಸ್ಥಾನದ ಧರ್ಮದರ್ಶಿ ಉದಯಕುಮಾರ್ ಆರ್ ಗಟ್ಟಿ ತಿಳಿಸಿದ್ದಾರೆ.

“ಕಳೆದ ಎರಡು ದಿನಗಳ ಹಿಂದೆ ಬಬಿಯಾ ಆಹಾರಕ್ಕಾಗಿ ಬಂದಿರಲಿಲ್ಲ. ನಾವು ಹುಡುಕಾಟ ನಡೆಸಿದೆವು. ಆದರೆ ಅದು ಪತ್ತೆಯಾಗಲಿಲ್ಲ. ಭಾನುವಾರ ರಾತ್ರಿ ಅದು ಕೆರೆಯಲ್ಲಿ ಸತ್ತಿರುವುದನ್ನು ನಾವು ನೋಡಿದೆವು” ಎಂದು ಅವರು ಹೇಳಿದ್ದಾರೆ.

ಬಬಿಯಾ ದೇವಾಲಯದ ಎಲ್ಲಾ ಸ್ಥಳಗಳಿಗೆ ಪ್ರವೇಶಿಸುತ್ತಿತ್ತು. ದೇವಾಲಯದ ಸುತ್ತಲಿನ ಕೊಳದಲ್ಲಿ ಅಥವಾ ದೇವಾಲಯದ ಮೆಟ್ಟಿಲುಗಳ ಮೇಲೆ ತಿರುಗಾಡುತ್ತಿತ್ತು. ಬಬಿಯಾ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಜೊತೆಗೆ ಇದನ್ನು ಸಸ್ಯಾಹಾರಿ ಮೊಸಳೆಯೆಂದೇ ಬಿಂಬಿಸಿದ್ದಾರೆ. ಯಾವುದೋ ಮೊಸಳೆಯ ಚಿತ್ರವನ್ನು ಬಬಿಯಾ ಎಂದು ತೋರಿಸಿ ಹಂಚಿಕೊಳ್ಳುತ್ತಿದ್ದಾರೆ.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ, “ಅನಂತಪುರ ಲೇಕ್‌ ದೇವಸ್ಥಾನದ ದೇವರ ಮೊಸಳೆ ಬಬಿಯಾ ವಿಷ್ಣು ಪಾದಕ್ಕೆ ಸೇರಿಕೊಂಡಿದೆ. ದೈವಿಕ ಮೊಸಳೆಯು ಅನಂತಪದ್ಮನಾಭ ಸ್ವಾಮಿಯ ಅನ್ನ ಮತ್ತು ಬೆಲ್ಲದ ಪ್ರಸಾದವನ್ನು ತಿನ್ನುವ ಮೂಲಕ 70 ವರ್ಷಗಳ ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು ಮತ್ತು ದೇವಾಲಯವನ್ನು ಕಾಪಾಡಿತು. ಆಕೆಗೆ ಸದ್ಗತಿ ಸಿಗಲಿ, ಓಂ ಶಾಂತಿ” ಎಂದು ಬರೆದಿದ್ದಾರೆ.

ಮೊಸಳೆಗೆ ಬಾಗಿ ನಮಿಸುತ್ತಿರುವ ವ್ಯಕ್ತಿಯೊಬ್ಬರ ಫೋಟೋ ಸೇರಿದಂತೆ ಬಬಿಯಾ ಹಾಗೂ ದೇವಸ್ಥಾನದ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಅನೇಕರು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಬಿಯಾ ಮೊಸಳೆ ಸಸ್ಯಾಹಾರಿಯಾಗಿತ್ತು ಎಂದೇ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ.

ಮೊಸಳೆಗೆ ನಮಿಸುತ್ತಿರುವ ವ್ಯಕ್ತಿಯೊಬ್ಬರ ಚಿತ್ರ ಬಬಿಯಾ ಹೆಸರಲ್ಲಿ ವೈರಲ್ ಆಗುತ್ತಿದೆ. ಇದು ಬಬಿಯಾ ಮೊಸಳೆಗೆ ಸಂಬಂಧಿಸಿದ್ದಲ್ಲ ಎಂದು ‘ಫ್ಯಾಕ್ಟ್‌ಚೆಕ್’ ವೆಬ್‌ಸೈಟ್‌ ‘ಆಲ್ಟ್‌ ನ್ಯೂಸ್‌’ ಸಹಸಂಸ್ಥಾಪಕ ಜುಬೇರ್‌ ಟ್ವೀಟ್ ಮಾಡಿದ್ದಾರೆ.

ಶೋಭಾ ಕರಂದ್ಲಾಜೆಯವರಿಗೆ ವಿಡಿಯೊವೊಂದನ್ನು ಟ್ಯಾಗ್ ಮಾಡಿ ಪ್ರತಿಕ್ರಿಯೆ ನೀಡಿರುವ ಜುಬೇರ್‌, “ಎರಡನೇ ಚಿತ್ರವು ಬಬಿಯಾಗೆ ಸಂಬಂಧಿಸಿಲ್ಲ. ಇದು ಕೋಸ್ಟಾ ರಿಕನ್ ಮೊಸಳೆ ‘ಪೊಚೊ’ ಆಗಿದೆ. ಅದರ ಮಾಸ್ಟರ್ ‘ಗಿಲ್ಬರ್ಟೊ ಶೆಡ್ಡೆನ್’ ಜೊತೆಗಿದ್ದಾರೆ” ಎಂದು ಸ್ವಷ್ಟಪಡಿಸಿದ್ದಾರೆ.

ಎನ್‌ಡಿಟಿವಿ, ರಿಪಬ್ಲಿಕ್ ಟಿವಿ ಸೇರಿದಂತೆ ಕೆಲವು ಮಾಧ್ಯಮಗಳು ನಕಲಿ ಫೋಟೋವನ್ನು ವರದಿ ಮಾಡಿರುವ ಕುರಿತು ಅವರು ಗಮನ ಸೆಳೆದಿದ್ದಾರೆ.

‘ಇದು ಸಸ್ಯಾಹಾರಿ ಮೊಸಳೆಯೇ?’ ಎಂಬ ಪ್ರಶ್ನೆ ಎದ್ದಿದೆ. ಜುಬೇರ್‌ ಮತ್ತೊಂದು ಹಳೆಯ ವಿಡಿಯೊವನ್ನು ಟ್ವೀಟ್‌ ಮಾಡಿ ಕುತೂಹಲ ಹುಟ್ಟಿಸಿದ್ದಾರೆ. ಈ ವಿಡಿಯೊದಲ್ಲಿ ‘ಬಬಿಯಾ’ ಮೊಸಳೆಗೆ ‘ಕೋಳಿ’ಯನ್ನು ಆಹಾರವಾಗಿ ನೀಡುತ್ತಿರುವುದು ದಾಖಲಾಗಿದೆ.

ಫೆಬಿನ್‌ ಎಂಬವರು ಈ ಕುರಿತು ಟ್ವೀಟ್ ಮಾಡಿದ್ದು, “ಹಳೆಯ ಫೇಸ್‌ಬುಕ್ ಪೋಸ್ಟ್‌ವೊಂದರ ಲಿಂಕ್ ಲಗತ್ತಿಸಿದ್ದಾರೆ”. ಕಳೆದ ಜುಲೈ ವೇಳೆ ಇ.ಉನ್ನಿಕೃಷ್ಣನ್ ಅವರು ಮಲಯಾಳಂನಲ್ಲಿ ಬರೆದಿರುವ ಪೋಸ್ಟ್‌ ಬಬಿಯಾ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತದೆ.

ಕಾಲು ಶತಮಾನದ ಮೊದಲು ಅಂದರೆ 1997ರಲ್ಲಿ ಮಾಧ್ಯಮ ಶಿಕ್ಷಣದ ಭಾಗವಾಗಿ ಪ್ರಾಣಿಗಳ ಕುರಿತು ತಯಾರಿಸಿದ ಡಾಕ್ಯುಮೆಂಟರಿಯನ್ನು ಅವರು ಪೋಸ್ಟ್‌ ಮಾಡಿರುವುದನ್ನು ಕಾಣಬಹುದು. “ಕೋಳಿ ತಿನ್ನುವ ಮೊಸಳೆಯನ್ನು ಶುದ್ಧ ಸಸ್ಯಾಹಾರಿಯಾಗಿ ದೇವಾಲಯದ ಜೀರ್ಣೋದ್ಧಾರದ ನಂತರ ಪರಿವರ್ತಿಸಲಾಗಿದೆ” ಎಂದು ಅವರು ಉಲ್ಲೇಖಿಸಿದ್ದಾರೆ. ಬಬಿಯಾ ಮೊಸಳೆಯು ಕೋಳಿ ತಿನ್ನುತ್ತಿರುವುದನ್ನು ಈ ಸಾಕ್ಷ್ಯಚಿತ್ರದ ಹತ್ತನೇ ನಿಮಿಷದ ನಂತರ ಗಮನಿಸಬಹುದು.

ಇದನ್ನೂ ಓದಿರಿ: ಭಾರತ್‌ ಜೋಡೋ ಯಾತ್ರೆ: ರಾಹುಲ್‌ ಕುರಿತು ಸಾಲುಸಾಲು ಸುಳ್ಳುಸುದ್ದಿ ಹರಿಬಿಟ್ಟ ಬಿಜೆಪಿ

ಬಬಿಯಾ ಕುರಿತು ಕೃಷ್ಣಕುಮಾರ್‌ ಹೆಗ್ಡೆ ಎಂಬವರು ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದು ಕನ್ನಡದಲ್ಲಿಯೇ ಮಾಹಿತಿ ಒದಗಿಸಿದ್ದಾರೆ. “ತನ್ನ ಶಾಂತ ಸ್ವಭಾವದಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಅನಂತಪುರ ಸರೋವರ ಕ್ಷೇತ್ರದ ಕೇಂದ್ರಬಿಂದು ಮೊಸಳೆ ಬಬಿಯಾ ವಯೋಸಹಜ ಕಾರಣಗಳಿಂದಾಗಿ ಮೃತಪಟ್ಟಿದೆ. ‘ದೇವರ ಮೊಸಳೆ’ ಎಂದೇ ಕರೆಯಲ್ಪಡುತ್ತಿದ್ದ ಬಬಿಯಾ ಜೀವಂತವಿದ್ದಾಗಲೇ ಅದರ ಬಗ್ಗೆ ಹಲವಾರು ದಂತಕಥೆಗಳಿದ್ದವು. ಅದರಲ್ಲಿ ಬಹಳಷ್ಟು ಸತ್ಯವೂ ಕೂಡ. ಆದರೆ ಅದು ಶುದ್ಧ ಸಸ್ಯಾಹಾರಿ ಎನ್ನುವ ವಿಚಿತ್ರ ಸುದ್ದಿ ಮಾತ್ರ ಶುದ್ದಸುಳ್ಳು” ಎಂದಿದ್ದಾರೆ.

“ಹಿಂದೆ ಭಕ್ತರ ವತಿಯಿಂದ ಬಬಿಯಾನಿಗೆ ಕೋಳಿಗಳನ್ನು ಅರ್ಪಿಸಲಾಗುತ್ತಿತ್ತು. ಅದನ್ನು ಶಾಕಾಹಾರಿಯಾಗಿ ಪರಿವರ್ತಿಸುವ ಹೆಣಗಾಟಗಳ ನಡುವೆ ಅದು ಸರೋವರಕ್ಕೆ ಬರುತ್ತಿದ್ದ ಚಿಕ್ಕ ಪುಟ್ಟ ಹಕ್ಕಿಗಳನ್ನು ಹಿಡಿಯುತ್ತಿದ್ದದ್ದನ್ನೂ ಕಂಡವರು ಧಾರಾಳ ಮಂದಿ ಇದ್ದಾರೆ. ಮಾಂಸಾಹಾರಿಯಾದೊಡನೆ ಅದರ ದಿವ್ಯತೆಯೋ ಭವ್ಯತೆಯೋ ಕಡಿಮೆಯಾಗಲಾರದು. ಮಾಂಸಾಹಾರಿಯಾಗಿಯೂ ಅದು ಅನಂತಪುರ ಕ್ಷೇತ್ರದ ಹೆಮ್ಮೆಯೂ ಹೌದು. ಹೆಗ್ಗುರುತೂ ಹೌದು.. ಅದನ್ನು ಮರೆಮಾಚಿ ನೈಜತೆಯನ್ನು ಬಚ್ಚಿಟ್ಟು ರೋಚಕವಾಗಿಸುವುದರಲ್ಲಿ ಅರ್ಥವಿಲ್ಲ. ಅದೂ ಒಂದು ರೀತಿಯ ವೈದಿಕಶಾಹಿ ಮಾನಸೀಕತೆಯ ಉದಾಹರಣೆಯಷ್ಟೇ” ಎಂದಿರುವ ಅವರು ಹಳೆಯ ಫೋಟೋವೊಂದನ್ನು ಲಗತ್ತಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿವಾಹವಾದ ಕಾರಣಕ್ಕೆ ಸೇನಾ ಮಹಿಳಾ ಅಧಿಕಾರಿಯ ವಜಾ; ‘ಲಿಂಗ ತಾರತಮ್ಯ’ ಎಂದ ಸುಪ್ರೀಂಕೋರ್ಟ್‌

0
ವಿವಾಹವಾದ ಕಾರಣಕ್ಕೆ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಖಾಯಂ ನಿಯೋಜಿತ ಅಧಿಕಾರಿಯನ್ನು ವಜಾ ಮಾಡಿರುವುದು ಸ್ವೇಚ್ಛೆಯ ಹಾಗೂ ಸೂಕ್ಷ್ಮತೆ ಇಲ್ಲದ ಲಿಂಗ ತಾರತಮ್ಯ ಹಾಗೂ ಅಸಮಾನತೆಯನ್ನು ಬಿಂಬಿಸುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗ‌ಳಾದ ಸಂಜೀವ್ ಖನ್ನಾ...