Homeಕರೋನಾ ತಲ್ಲಣFAQ's: ಕೊರೊನಾ ವ್ಯಾಕ್ಸಿನ್: ನಿಮಗೆ ಗೊತ್ತಿರಬೇಕಾದ ಸಂಗತಿಗಳು

FAQ’s: ಕೊರೊನಾ ವ್ಯಾಕ್ಸಿನ್: ನಿಮಗೆ ಗೊತ್ತಿರಬೇಕಾದ ಸಂಗತಿಗಳು

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟು ಭಾರತದಲ್ಲಿ ಬಿಗಡಾಯಿಸಿರುವ ಸಂದರ್ಭದಲ್ಲಿ, ಒಕ್ಕೂಟ ಸರ್ಕಾರ ಲಸಿಕಾ ಅಭಿಯಾನವನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ. ಲಸಿಕೆ ತೆಗೆದುಕೊಳ್ಳುವ ಬಗ್ಗೆ ಹಲವು ರೀತಿಯ ಗೊಂದಲಗಳು ನಾಗರಿಕರಲ್ಲಿ ಮನೆ ಮಾಡಿವೆ. ಆದುದರಿಂದ ಲಸಿಕೆ ಬಗ್ಗೆ ಇರುವ ಕೆಲವು ಪ್ರಾಥಮಿಕ ಪ್ರಶ್ನೆಗಳಿಗೆ ಹಲವು ಅಧಿಕೃತ ಮೂಲಗಳಿಂದ ವಿಷಯ ಸಂಗ್ರಹಿಸಿ ಉತ್ತರ ನೀಡುವುದಕ್ಕೆ ಇಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಶ್ನೆಗಳು ಇದ್ದಲ್ಲಿ ನ್ಯಾಯಪಥ ಪತ್ರಿಕೆಯ ಈಮೇಲ್ ವಿಳಾಸಕ್ಕೆ ([email protected]) ಬರೆಯಿರಿ. ನುರಿತ ತಜ್ಞರಿಂದ ಅವಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಲಾಗುವುದು.

1. ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಸದ್ಯಕ್ಕೆ ನೀಡಲಾಗುತ್ತಿರುವ ಕೋವಿಡ್ ಲಸಿಕೆಗಳು ಯಾವುವು?
ಇಡೀ ಭಾರತದಲ್ಲಿ ಸದ್ಯಕ್ಕೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಹೆಸರಿನ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ತೆಗೆದುಕೊಳ್ಳುವ ಆಯ್ಕೆ ಸಾಮಾನ್ಯವಾಗಿ ನೀಡಲಾಗಿರುವುದಿಲ್ಲ. ನಾಗರಿಕರು ತಾವು ತೆರಳುವ ಆಸ್ಪತ್ರೆಯಲ್ಲಿ/ಲಸಿಕಾ ಕೇಂದ್ರದಲ್ಲಿ ಅಂದು ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

2. ಅನ್ಯ ದೇಶಗಳಲ್ಲಿ ಬಳಸಲಾಗುತ್ತಿರುವ ಲಸಿಕೆಗಳು ಭಾರತದಲ್ಲಿ ಲಭ್ಯವೇ?
ಇಂದಿಗೆ ಲಭ್ಯವಿರುವ ಮಾಹಿತಿಯಂತೆ ರಶ್ಯಾ ದೇಶದಲ್ಲಿ ಬಳಕೆಯಲ್ಲಿರುವ ಸ್ಪುಟ್ನಿಕ್ ಲಸಿಕೆ ಭಾರತದಲ್ಲಿ ಎಮರ್ಜೆನ್ಸಿ ಬಳಕೆಗಾಗಿ ಪರವಾನಗಿ ಸಿಕ್ಕಿದೆ. ಆದರೆ ಈ ಲಸಿಕೆಗಳು ಇನ್ನೂ ಲಭ್ಯವಾಗಿಲ್ಲ. ಕೆಲವು ರಾಜ್ಯಗಳು ಈ ಲಸಿಕೆಗಳಿಗೆ ಬೇಡಿಕೆಯಿಟ್ಟಿದ್ದು ಮೇ ತಿಂಗಳ ಮಧ್ಯ ಭಾಗದಲ್ಲಿ ಇದು ಲಭ್ಯವಾಗುವ ಸೂಚನೆಗಳಿವೆ.
ಸ್ಪುಟ್ನಿಕ್ ಲಸಿಕೆಯನ್ನು ಯುರೋಪಿಯನ್ ಯೂನಿಯನ್ ಅಥವಾ ಅಮೆರಿಕಾ ’ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅಪ್ರೂವ್ ಮಾಡಿಲ್ಲ.

ಇನ್ನು ಅಮೆರಿಕದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ಫೈಜರ್-ಬಯೋಎನ್‌ಟೆಕ್ ಸಂಸ್ಥೆಯ ಲಸಿಕೆಗಳು ಇನ್ನೂ ಭಾರತದಲ್ಲಿ ಲಭ್ಯವಿಲ್ಲ. ಮೇ 2, 2021ರಂದು ಆ ಸಂಸ್ಥಯೆ ಸಿಇಒ ಮತ್ತು ಚೇರ್ಮನ್ ಆಲ್ಬರ್ಟ್ ಬೌರ್ಲಾ ಅವರು ನೀಡಿದ ಒಂದು ವಿಡಿಯೋ ಮೆಸೇಜ್‌ನಲ್ಲಿ, ಸುಮಾರು 70 ಮಿಲಿಯನ್ ಡಾಲರ್ ಮೌಲ್ಯದ ಔಷಧಿಯನ್ನು ಕೋವಿಡ್ ರೋಗಿಗಳಗೆ ನೆರವಾಗಲು ಭಾರತಕ್ಕೆ ಉಚಿತವಾಗಿ ಕಳಿಸಿಕೊಡುತ್ತಿದ್ದೇವೆ ಎಂದಿದ್ದರು. ಆದರೆ ಭಾರತದಲ್ಲಿ ನಮ್ಮ ಲಸಿಕೆ ಬಳಕೆಗೆ ಸಾಧ್ಯವಾಗಲು ನಾವು ಬಹಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಇನ್ನು ಪರವಾನಗಿ ಸಿಕ್ಕದೆ ಇರುವುದು ದುರದೃಷ್ಟಕರ ಎಂದು ಕೂಡ ಅದೇ ವಿಡಿಯೋದಲ್ಲಿ ಅವರು ಹೇಳಿದ್ದಾರೆ.
ಈ ಲಸಿಕೆಯನ್ನು -70ಡಿಗ್ರೀ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿ ಇಡಬೇಕಿರುವುದರಿಂದ ಅದರ ಲಾಜಿಸ್ಟಿಕ್ಸ್ ಸಮಸ್ಯೆಯೂ ಇದೆ ಎನ್ನುವುದು ಮತ್ತೊಂದು ಅಂಶ.

ಚೀನಾದಲ್ಲಿ ಸಿನೋಫರ್ಮ್ ಮತ್ತು ಸಿನೋವಾಕ್ ಎಂಬ ಲಸಿಕೆಗಳು, ಹಲವು ಪಶ್ಚಿಮ ದೇಶಗಳಲ್ಲಿ ಮಾಡರ್ನಾ, ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳು ಬಳಕೆಯಲ್ಲಿವೆ.
ಸದ್ಯಕ್ಕೆ ಇವ್ಯಾವುವೂ ಭಾರತದಲ್ಲಿ ಲಭ್ಯವಿಲ್ಲ.

3. ಕೋವ್ಯಾಕ್ಸಿನ್ ಬಗ್ಗೆ..
ಭಾರತದ ಜನಪ್ರಿಯ ಲಸಿಕಾ ಉತ್ಪಾದಕ ಸಂಸ್ಥೆ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಸಿದ್ಧಪಡಿಸಿದೆ. ಸುಮಾರು 123 ರಾಷ್ಟ್ರಗಳಿಗೆ 16 ವಿಭಿನ್ನ ಲಸಿಕೆಗಳನ್ನು ರಫ್ತು ಮಾಡುವ ಅನುಭವ ಹೊಂದಿರುವ ಈ ಸಂಸ್ಥೆ ಭಾರತದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರತ್ಯೇಕಿಸಿದ್ದ ಕೊರೊನಾವೈರಸ್ ಸ್ಯಾಂಪಲ್ ಬಳಸಿ ಈ ಲಸಿಕೆಯನ್ನು ಸಿದ್ಧಪಡಿಸಿದೆ.

ಸತ್ತ ಕೊರೊನಾ ವೈರಸ್‌ನಿಂದ ಮಾಡಿರುವ ಈ ಲಸಿಕೆಯನ್ನು ಮನುಷ್ಯನ ದೇಹಕ್ಕೆ ಇಂಜೆಕ್ಟ್ ಮಾಡಿದಾಗ, ಅದು ರೋಗನಿರೋಧಕಗಳನ್ನು ಉತ್ಪಾದಿಸುವಂತೆ ಪ್ರಚೋದಿಸುತ್ತದೆ. ಆದರೆ ಈ ಸತ್ತ ಬಲಹೀನ ವೈರಸ್‌ಗಳು ಸೋಂಕು ಹರಡುವುದಿಲ್ಲ.

ಈ ಲಸಿಕೆಯನ್ನು ಸುಮಾರು 2-8 ಡಿಗ್ರೀ ಸೆಂಟಗ್ರೇಡ್‌ನಲ್ಲಿ ಸಂರಕ್ಷಿಸಬೇಕಿದ್ದು, ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕಿದೆ.

ಇದರ ಮೂರನೇ ಹಂತಹ ಟ್ರಯಲ್ ನಡೆಯುತ್ತಿರುವಾಗಲೇ ಈ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಜನವರಿಯಲ್ಲಿ ಅನುಮತಿಸಲಾಗಿದೆ.

ಅಡ್ಡಪರಿಣಾಮಗಳ ಬಗ್ಗೆ: ದೀರ್ಘಕಾಲಿಕ ಅಡ್ಡಪರಿಣಾಮಗಳೇನಾಗಬಹುದು ಇತ್ಯಾದಿ ಹಲವು ಸಂಗತಿಗಳು ಇನ್ನೂ ಶೋಧನೆಗೊಳಪಟ್ಟಿಲ್ಲ.

ಆದರೆ ಇದನ್ನು ತೆಗೆದುಕೊಂಡಾಗ ಜ್ವರ, ಮೈ ಕೈ ನೋವು, ಇಂಜೆಕ್ಷನ್ ತೆಗೆದುಕೊಂಡ ಜಾಗದಲ್ಲಿ ಉರಿಯೂತದ ಕಾರಣದಿಂದ ನೋವು ಇತ್ಯಾದಿಗಳು ಇರಲಿವೆ. ಇವುಗಳು ಪ್ರಾಥಮಿಕ ಆರೈಕೆಯಿಂದ ಸುಲಭವಾಗಿ ವಾಸಿಯಾಗುತ್ತವೆ.

4. ಕೋವಿಶೀಲ್ಡ್ ಬಗ್ಗೆ..
ಆಕ್ಸ್‌ಫರ್ಡ್ – ಆಸ್ಟ್ರಾಜೆನೆಕಾ ಸಂಸ್ಥೆಯ ಈ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ.
ಅಡಿನೋವೈರಸ್ ಎಂಬ ಸಾಮಾನ್ಯ ನೆಗಡಿ ವೈರಸ್‌ಅನ್ನು ಬಲಹೀನಗೊಳಿಸಿ, ಅದನ್ನು ಬದಲಾಯಿಸಿ ಅದರೊಳಗೆ ಕೊರೊನಾ ವೈರಸ್‌ನ ಮುಳ್ಳಿನ ಪ್ರೋಟೀನ್ ಸೇರಿಸಿ ಈ ಲಸಿಕೆಯನ್ನು ಸಿದ್ಧಪಡಿಸಲಾಗಿದೆ.
ಇದನ್ನು ಮನುಷ್ಯರಿಗೆ ನೀಡಿದಾಗ ರೋಗನಿರೋಧಕತೆಯನ್ನು ಉದ್ದೀಪನಗೊಳಿಸುತ್ತದೆ. ಇದೂ ಕೂಡ ಎರಡು ಡೋಸ್‌ಗಳಲ್ಲಿ ತೆಗೆದುಕೊಳ್ಳಬೇಕಿದ್ದು, ನಾಲ್ಕರಿಂದ 12 ವಾರಗಳ ಅಂತರದಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕಿದೆ.
ಅಡ್ಡಪರಿಣಾಮಗಳ ಬಗ್ಗೆ: ಕೋವ್ಯಾಕ್ಸೀನ್‌ಗೆ ಇದ್ದಂತೆಯೇ..

5. ಸ್ಪುಟ್ನಿಕ್ ಬಗ್ಗೆ..
ಮಾಸ್ಕೋದ ಗೆಮೆಲಿಯಾ ಇನಸ್ಟಿಟ್ಯೂಟ್ ಸಿದ್ಧಪಡಿಸಿರುವ ಲಸಿಕೆ ಇದು. ಮೂರನೇ ಹಂತದ ಟ್ರಯಲ್ ಮುಗಿಸಿದ್ದು 92% ರಕ್ಷಣೆ ನೀಡುತ್ತದೆ ಎಂದು ಪ್ರತಿಪಾದಿಸಲಾಗಿದೆ.

ಇದೂ ಸಹಾ ಕೋವಿಶೀಲ್ಡ್‌ನಂತೆಯೇ ನೆಗಡಿ ವೈರಸ್‌ನೊಳಗೆ ಕೊರೊನಾವೈರಸ್‌ನ ತುಣುಕನ್ನು ಸೇರಿಸಿ ಮಾಡಿದ ವ್ಯಾಕ್ಸಿನ್ ಆಗಿದೆ. ಅದಕ್ಕೆ ದೇಹದಲ್ಲಿ ರೋಗನಿರೋಧಕತೆಯನ್ನು ಉಂಟು ಮಾಡುವುದರಿಂದ ಮುಂದೆ ಕೊರೊನಾ ವೈರಸ್ ದೇಹದೊಳಗೆ ಬಂದರೆ, ಅದನ್ನು ಗುರುತಿಸಿ ಪ್ರತಿರೋಧ ಒಡ್ಡುತ್ತದೆ.

ಇತರ ವ್ಯಾಕ್ಸಿನ್‌ಗಳಂತಲ್ಲದೇ, ಇಲ್ಲಿ 21 ದಿನಗಳ ಅಂತರದಲ್ಲಿ ನೀಡುವ ಎರಡು ಡೋಸ್‌ಗಳು ಭಿನ್ನವಾದುದಾಗಿರುತ್ತವೆ. ಅಂದರೆ ಮೊದಲ ಡೋಸ್ ಒಂದು ರೀತಿಯದ್ದು; ಎರಡನೇ ಡೋಸ್ ಇನ್ನೊಂದು ರೀತಿಯದ್ದು. ಎರಡೂ ಸಹಾ ಕೊರೊನಾ ವೈರಸ್‌ನ ಮುಳ್ಳು ಪ್ರೋಟೀನ್‌ಅನ್ನು ಹೊಂದಿರುತ್ತದಾದರೂ, ಅದನ್ನು ಹೊತ್ತುಕೊಳ್ಳುವ ಇನ್ನೊಂದು ವೈರಸ್‌ಅನ್ನು ಬೇರೆ ಬೇರೆಯಾಗಿ ಉಪಯೋಗಿಸಿರುತ್ತಾರೆ. ಇದರಿಂದ ಇನ್ನೂ ಹೆಚ್ಚಿನ ಪ್ರತಿರೋಧ ಶಕ್ತಿಯು ಒದಗುತ್ತದೆಂದು ಹೇಳಲಾಗಿದೆ.

ಹೈದರಾಬಾದ್ ಮೂಲದ ರೆಡ್ಡಿ ಲ್ಯಾಬೊರೇಟರೀಸ್ ಈ ಲಸಿಕೆಯ ಸುಮಾರು 12.5 ಕೋಟಿ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ವರದಿಯಾಗಿದ್ದು, ನಿರ್ದಿಷ್ಟವಾಗಿ ಎಂದಿನಿಂದ ಮತ್ತು ಎಲ್ಲೆಲ್ಲಿ ಲಭ್ಯವಾಗಲಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯಿಲ್ಲ.

6. ಲಸಿಕೆ ಯಾರ್ಯಾರು ತೆಗೆದುಕೊಳ್ಳಬಹುದು ಮತ್ತು ಅದಕ್ಕಾಗಿ ಎಲ್ಲಿಗೆ ಹೋಗಬೇಕು?
ಈಗ ಎಲ್ಲ ರಾಜ್ಯ ಸರ್ಕಾರಗಳು ಮೇ 1ರಿಂದ 18 ವರ್ಷಗಳ ಮೇಲ್ಪಟ್ಟ ತಮ್ಮ ನಾಗರಿಕರಿಗೆ ಲಸಿಕೆ ನೀಡಬಹುದೆಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಮೇ 1ರಿಂದ ಹಲವು ಕಡೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಪ್ರಾರಂಭವಾಗಬೇಕಿತ್ತು. ಆದರೆ ಇನ್ನೂ 45 ವರ್ಷಗಳ ಮೇಲಿನವರಿಗೇ ಎಲ್ಲರಿಗೂ ವ್ಯಾಕ್ಸೀನ್ ಲಭ್ಯವಾಗಿಲ್ಲದಿರುವುದರಿಂದ ಇದನ್ನು ಈಗಲೇ ಕೊಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಅದನ್ನು ಜಾರಿಗೆ ತಂದ ನಂತರ 18 ವರ್ಷದ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದಾಗಿದ್ದು ಅದಕ್ಕಾಗಿ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಬಹುದಾಗಿದೆ. ಅದಕ್ಕೂ ಮೊದಲು ಕೋವಿನ್ ಪ್ಲಾಟ್‌ಫಾರ್ಮ್ ಅಥವಾ ಆರೋಗ್ಯ ಸೇತು ಆಪ್‌ನಲ್ಲಿ ನೊಂದಾಯಿಸಿಕೊಳ್ಳಬೇಕಿದೆ ಎಂದು ಸರ್ಕಾರ ತಿಳಿಸಿದೆ.

7. ಎರಡು ಡೋಸ್‌ಗಳು ಅಂದರೆ ಏನು? ಎರಡು ಡೋಸ್‌ಗಳು ಕೊಡುವುದು ಯಾತಕ್ಕಾಗಿ? ಎರಡೂ ಡೋಸ್‌ಗಳಲ್ಲೂ ಒಂದೇ ಅಂಶ ಇರುತ್ತದೆಯೇ? ಒಂದು ಡೋಸ್ ಒಂದು ವ್ಯಾಕ್ಸಿನ್ ತೆಗೆದುಕೊಂಡು ಮತ್ತೊಂದು ಡೋಸ್ ಬೇರೆಯ ಬ್ರಾಂಡ್ ಲಸಿಕೆ ತೆಗೆದುಕೊಳ್ಳಬಹುದೇ?
ಪೋಲಿಯೋ, ಡಿಪಿಟಿಯಂತೆಯೇ ಈ ವ್ಯಾಕ್ಸಿನ್ ಸಹಾ ಒಂದಕ್ಕಿಂತ ಹೆಚ್ಚು ಡೋಸ್ ಕೇಳುತ್ತದೆ. ಏಕೆಂದರೆ ಮೊದಲನೇ ಡೋಸ್‌ನಿಂದಲೇ ಅಗತ್ಯವಿರುವ ಪ್ರಮಾಣದ ರೋಗನಿರೋಧಕತೆ ಉತ್ಪತ್ತಿಯಾಗುವುದಿಲ್ಲ. ಸ್ಫುಟ್ನಿಕ್ ಬಿಟ್ಟು ಉಳಿದೆಲ್ಲಾ ವ್ಯಾಕ್ಸಿನ್‌ಗಳಲ್ಲೂ ಎರಡೂ ಡೋಸ್‌ಗಳಲ್ಲಿ ಒಂದೇ ರೀತಿಯ ಅಂಶ ಇರುತ್ತದೆ. ಒಂದು ಡೋಸ್ ವ್ಯಾಕ್ಸಿನ್ ಯಾವುದನ್ನು ತೆಗೆದುಕೊಂಡಿರುತ್ತೇವೋ ಅದನ್ನೇ ಎರಡನೇ ಬಾರಿಯೂ ತೆಗೆದುಕೊಳ್ಳಬೇಕು.

8. ವ್ಯಾಕ್ಸಿನ್ ತೆಗೆದುಕೊಂಡ ಮೇಲೂ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆಯೇ?
ಹಲವು ಲಸಿಕೆಗಳು ತಮ್ಮ ಯಶಸ್ಸಿನ ಪರಿಣಾಮವನ್ನು ವಿಭಿನ್ನ ರೀತಿಯಲ್ಲಿ ಹೇಳಿಕೊಂಡಿವೆ. ಫೈಜರ್ ಟ್ರಯಲ್‌ನಲ್ಲಿ 92% ಯಶಸ್ಸನ್ನು ಪ್ರತಿಪಾದಿಸಿದರೆ, ಕೋವಿಶೀಲ್ಡ್ ಯಶಸ್ಸು ಸುಮಾರು 76% ಎನ್ನಲಾಗುತ್ತದೆ.
ಅಂದರೆ ಲಸಿಕೆ ಹಾಕಿಸಿಕೊಂಡ ನಂತರವೂ ಸೋಂಕು ತಗಲುವ ಸಾಧ್ಯತೆ ಇದ್ದರೂ ಅದು ಬಹಳ ಕಡಿಮೆ, ಅದರ ತೀವ್ರತೆಯೂ ಕಡಿಮೆ ಇರುತ್ತದೆ ಎನ್ನಲಾಗುತ್ತದೆ. ಅಂದರೆ ಲಸಿಕೆಯಿಂದ ಒಟ್ಟಾರೆಯಾಗಿ ದೊರಕುವ ಲಾಭ ಅದರಿಂದ ಉಂಟಾಗುವ ಅಡ್ಡಪರಿಣಾಮಗಳಿಗಿಂತ ಹೆಚ್ಚಿರುವುದರಿಂದ ಇದನ್ನು ಶಿಫಾರಸ್ಸು ಮಾಡಲಾಗಿದೆ.

9. ಈಗ ಇರುವ ಸೌಲಭ್ಯದಲ್ಲಿ ಬಹುತೇಕ ನಾಗರಿಕರು ವ್ಯಾಕ್ಸಿನೇಟೇಡ್ ಆಗುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು?
ಇದರ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದಾದರೂ, ಅತ್ಯದ್ಭುತವಾಗಿ ಎಲ್ಲವೂ ನಡೆದರೆ ಬಹುತೇಕರಿಗೆ ವ್ಯಾಕ್ಸೀನ್ ಕೊಡಲು ಈ ವರ್ಷದ ಕೊನೆಯವರೆಗೆ ಬೇಕಾಗಬಹುದು. ಆದರೆ ಆ ರೀತಿ ಸುಸೂತ್ರವಾಗಿ ಲಸಿಕೆ ಅಭಿಯಾನ ನಡೆಯುವ ಸಾಧ್ಯತೆ ಕಡಿಮೆ ಇದೆ.

10. ಯಾವುದಾದರೂ ನಿರ್ದಿಷ್ಟ ಸಂದರ್ಭಗಳಲ್ಲಿ (ಮಹಿಳೆಯರು ಪೀರಿಯಡ್ಸ್ ಸಮಯದಲ್ಲಿ, ಗರ್ಭಿಣಿಯರು, ಬಾಣಂತಿಯರು) ಲಸಿಕೆ ತೆಗೆದುಕೊಳ್ಳಬಾರದೇ?
ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಕೊರೊನಾ ವ್ಯಾಕ್ಸೀನ್‌ಅನ್ನು ಪೂರ್ಣವಾಗಿ ಪರಿಶೀಲಿಸಿಲ್ಲ. ಹಾಗಾಗಿ ಅದು ಸುರಕ್ಷಿತವೋ ಅಲ್ಲವೋ ಹೇಳಲು ಬರುವುದಿಲ್ಲ. ರಿಸ್ಕ್ ಆಧರಿಸಿ ತೀರ್ಮಾನ ಮಾಡಬೇಕಿದೆ. ಪೀರಿಯಡ್ಸ್‌ಗೂ ಇದಕ್ಕೂ ಸಂಬಂಧವಿಲ್ಲವಾದರೂ, ಸುಸ್ತು ಹೆಚ್ಚಾಗುವುದರಿಂದ ಸಾಧ್ಯವಿದ್ದರೆ ಮುಂದೂಡಿ ತೆಗೆದುಕೊಳ್ಳಬಹುದು.

11. ಲಸಿಕೆಯ ಮೊದಲನೇ ಡೋಸ್ ತೆಗೆದುಕೊಂಡ ನಂತರ ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಎರಡನೇ ಡೋಸ್ ಅಗತ್ಯ ಇದೆಯೇ?
ಒಮ್ಮೆ ರೋಗಲಕ್ಷಣಗಳು ಇರುವಷ್ಟು ಪ್ರಮಾಣದಲ್ಲಿ ಕೊರೊನಾ ಬಂದವರಿಗೆ ಮತ್ತೆ ಕೊರೊನಾ ಬರುವ ಸಾಧ್ಯತೆ ಕಡಿಮೆ. ಆದರೆ ಇಲ್ಲವೇ ಇಲ್ಲವೆಂದು ಹೇಳಲಾಗದು. ಹಾಗಾಗಿ ಅವರು ವ್ಯಾಕ್ಸಿನ್ ಪಡೆಯಲು ಮಿಕ್ಕವರಿಗೆ ಮೊದಲು ಅವಕಾಶ ಮಾಡಿಕೊಟ್ಟರೆ ಒಳ್ಳೆಯದು. ಮೊದಲನೇ ಡೋಸ್ ತೆಗೆದುಕೊಂಡ ನಂತರ ಸೋಂಕು ಬಂದರೆ ಎರಡನೇ ಡೋಸ್ ಅಗತ್ಯವಿಲ್ಲ.


ಇದನ್ನೂ ಓದಿ: ‘ಮೋದಿಯೇ ಕೊರೋನಾ ಸೂಪರ್ ಸ್ಪ್ರೆಡರ್, 2ನೆ ಅಲೆಗೆ ಅವರೇ ಕಾರಣ’: ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷರ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....