Homeಕರ್ನಾಟಕಅನ್ಯಾಯಕ್ಕೆ ಒಳಗಾದವರು ಇಲ್ಲದಿದ್ದಾಗ ತೆರಳಿ ಕ್ಷಮೆ ಯಾಚಿಸಿದ ತೇಜಸ್ವಿ ಸೂರ್ಯ: ಸಾರ್ವಜನಿಕ ಕ್ಷಮೆ ಯಾಚನೆಗೆ ಒತ್ತಾಯ

ಅನ್ಯಾಯಕ್ಕೆ ಒಳಗಾದವರು ಇಲ್ಲದಿದ್ದಾಗ ತೆರಳಿ ಕ್ಷಮೆ ಯಾಚಿಸಿದ ತೇಜಸ್ವಿ ಸೂರ್ಯ: ಸಾರ್ವಜನಿಕ ಕ್ಷಮೆ ಯಾಚನೆಗೆ ಒತ್ತಾಯ

- Advertisement -
- Advertisement -

‘ನಾನು ನನಗೆ ಕೊಟ್ಟಿದ್ದ ಪಟ್ಟಿಯನ್ನು ಓದಿದ್ದೇನೆ, ತಪ್ಪಾಯ್ತು ಕ್ಷಮಿಸಿ’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್‌ರೂಮಿಗೆ ಮತ್ತೆ ಭೇಟಿ ನೀಡಿದಾಗ ಬೇಡಿಕೊಂಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಆದರೆ, ರಾತ್ರೋರಾತ್ರಿ ನಡೆದ ಈ ಕ್ಷಮೆ ಯಾಚನೆ ಸಂದರ್ಭದಲ್ಲಿ, ತೇಜಸ್ವಿ ಮತ್ತು ಅವರ ಪಟಾಲಂ ಅವತ್ತು ಹೆಸರಿಸಿದ 16 ಮುಸ್ಲಿಂ ಉದ್ಯೋಗಿಗಳು ಅಲ್ಲಿ ಇರಲೇ ಇಲ್ಲ. ಈ ಸಂಸದರ ಆರ್ಭಟ, ಹುಂಬತನದ ಪರಿಣಾಮವಾಗಿಯೇ ಅವರು ತಾತ್ಕಾಲಿಕವಾಗಿ ಕೆಲಸ ಕಳೆದುಕೊಂಡಿದ್ದಾರೆ.

ಬಿಜೆಪಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ (ಮೇ 5) ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರು ದಕ್ಷಿಣ ಕೋವಿಡ್ ವಾರ್‌ರೂಮಿಗೆ ಭೇಟಿ ನೀಡಿ, ಕ್ಷಮೆ ಯಾಚಿಸಿದ್ದಾರೆ. ಮಂಗಳವಾರದಂದು ವಾರ್‌‌ರೂಂಗೆ ಮೇಲೆ ’ದಾಳಿ’ ನಡೆಸಿದ್ದ ತೇಜಸ್ವಿ ಅಲ್ಲಿ ಕೆಲಸ ಮಾಡುತ್ತಿದ್ದ 16 ಮುಸ್ಲಿಂ ಸಿಬ್ಬಂದಿಗಳ ಹೆಸರನ್ನು ಓದಿದ್ದು, ಅವರು ಕೋವಿಡ್ ಬೆಡ್ ಬ್ಲಾಕ್ ಮಾಡುವ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದಾಗಿ ಈ ಉದ್ಯೋಗಿಗಳನ್ನು ಬಲಪಂಥೀಯರು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ್ದರು.

ಇದನ್ನೂ ಓದಿ: FAQ’s: ಕೊರೊನಾ ವ್ಯಾಕ್ಸಿನ್: ನಿಮಗೆ ಗೊತ್ತಿರಬೇಕಾದ ಸಂಗತಿಗಳು

ಇದನ್ನು ಅನುಸರಿಸಿ, ಈ ವಾರ್‌ರೂಮಿನಲ್ಲಿ ಕೆಲಸ ಮಾಡುವ 205 ಜನರ ಹೆಸರುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾದ ನಂತರ ಸಂಸದ ತೇಜಸ್ವಿಯ ಕೋಮುವಾದಿ ಧೋರಣೆ ಬೆತ್ತಲಾಗಿತ್ತು. ಅಲ್ಲಿ ಶೇ. 90 ಕ್ಕಿಂತ ಹೆಚ್ಚು ಹಿಂದೂಗಳೇ ಇದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಸಂಸದರ ವಿರುದ್ಧ ಜಾಲತಾಣದಲ್ಲಿ ಅಭಿಯಾನ ಶುರುವಾಗಿ, ತೇಜಸ್ವಿ ರಾಜೀನಾಮೆ ನೀಡಿ ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿತ್ತು.

ತೇಜಸ್ವಿಯ ಕ್ಷಮೆಯಾಚನೆ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, “ಇದೆಂತಹ ಕ್ಷಮೆಯಾಚನೆ? ಯಾರ ವಿರುದ್ಧ ಆರೋಪ ಮಾಡಿದ್ದರೋ ಅವರೇ ಇಲ್ಲದ ಸಂದರ್ಭದಲ್ಲಿ ಕ್ಷಮೆಯಾಚನೆ ಮಾಡಿದ್ದು ಒಂದು ನಾಟಕದಂತೆ ಕಾಣುತ್ತಿದೆ. ಸಂಸದರು ಅವತ್ತು ದಾಳಿ ಮಾಡಿದ್ದು ಕೋಮು ಸಾಮರಸ್ಯ ಹಾಳು ಮಾಡುವ ಪಿತೂರಿ ಹೊಂದಿತ್ತು. ಅವರಿಗೆ ಆ ಘಟನೆ ಬಗ್ಗೆ ನಿಜಕ್ಕೂ ಖೇದವಾಗಿದ್ದರೆ, ಅವರು ಸಾರ್ವಜನಿಕವಾಗಿ ಬಹಿರಂಗ ಕ್ಷಮೆ ಯಾಚಿಸಬೇಕು ಮತ್ತು ಇನ್ನು ಮುಂದೆ ಸಮಾಜದ ಸಾಮರಸ್ಯ ಕದಡುವ ಹೇಳಿಕೆ ನೀಡುವುದಿಲ್ಲ ಎಂದು ವಾಗ್ದಾನ ಮಾಡಬೇಕು. ಹಾಗೆ ಮಾಡದಿದ್ದರೆ, ಈ ಕ್ಷಮೆಯಾಚನೆ ಕೂಡ ಅವರ ಪಿತೂರಿಯ ಒಂಂದು ಭಾಗ ಮತ್ತು ಹೊಸ ನಾಟಕ ಎಂದೇ ಪರಿಗಣಿಸ ಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.

ಇಂಥದ್ದೇ ಅಭಿಪ್ರಾಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಗೆ ಬರುತ್ತಿವೆ. ಸಂಸದರು ಬಹಿರಂಗ ಕ್ಷಮೆ ಕೇಳಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ತೇಜಸ್ವಿ ಅವರ ವಾರ್‌ರೂಮ್ ದಾಳಿ ಯಡಿಯೂರಪ್ಪ ಸರ್ಕಾರವಷ್ಟೇ ಅಲ್ಲ ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯ ವೈಫಲ್ಯವನ್ನೇ ಎತ್ತಿ ತೋರಿಸಿತ್ತು.

ಇದನ್ನೂ ಓದಿ: `ನಿಮ್ಮ ಜೋಳಿಗೆ ಎತ್ತಿಕೊಂಡು ಹೊರಟು ಬಿಡಿ!’ – ಪ್ರಧಾನಿ ಮೋದಿಗೆ ಅರುಂಧತಿ ರಾಯ್

‘ಕ್ಷಮಿಸಿ, ಇದು ನನ್ನ ಕಡೆಯಿಂದ ತಪ್ಪಾಗಿದೆ. ನನಗೆ ಒಂದು ಪಟ್ಟಿಯನ್ನು ನೀಡಲಾಯಿತು ಮತ್ತು ನಾನು ಅದನ್ನು ಓದಿದ್ದೇನೆ. ವಾರ್‌ರೂಮ್‌ನಲ್ಲಿ ನಡೆದ ಘಟನೆಯಿಂದ ಬೇಸರವಾಗಿದೆ ಎಂದು ನನಗೆ ತಿಳಿದಿದೆ’ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

“ವಾರ್‌ರೂಂ ದಾಳಿಯ ಸಮಯದಲ್ಲಿ ವಾರ್‌ರೂಮಿನಲ್ಲಿ ಇದ್ದವರು ನನಗೆ ನೀಡಿದ್ದ ಪಟ್ಟಿಯಲ್ಲಿನ ಹೆಸರುಗಳನ್ನು ಸುಮ್ಮನೆ ಓದಿದ್ದೇನೆ. ನನಗೆ ಕೋಮುವಾದಿ ಎನಿಸಿಕೊಳ್ಳುವ ಇರಾದೆ ಇಲ್ಲ. ನಾನು ಓದಿದ ಜನರ ಹೆಸರುಗಳು ಒಂದೇ ಸಮುದಾಯದವರು ಎಂದು ಕೂಡಾ ಗಮನ ಹರಿಸಿರಲಿಲ್ಲ…ಅವರನ್ನು ಹಿಂದೂ ಅಥವಾ ಮುಸ್ಲಿಂ ಎಂದು ನಾನು ನೋಡಲಿಲ್ಲ” ಎಂದು ಅವರು ಹೇಳಿದ್ದಾರೆ.

ಪ್ರಶ್ನೆಗಳು ಇನ್ನೂ ಇವೆ…

ತೇಜಸ್ವಿ ಆ ಪಟ್ಟಿಯನ್ನು ಎಲ್ಲಿಂದ ಪಡೆದರು ಅಥವಾ ಅದನ್ನು ಓದುವ ಮೊದಲು ಅದನ್ನು ಹೇಗೆ ಪರಿಶೀಲಿಸಿದರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಅವರು ಮಂಗಳವಾರ ಹೆಸರಿಸಿದ 16 ಉದ್ಯೋಗಿಗಳ ಬಳಿ ಕ್ಷಮೆ ಯಾಚಿಸಿಲ್ಲ.

‘ಇದರಲ್ಲಿ ಹೆಚ್ಚಿನವರು 20 ರ ವಯಸ್ಸಿನ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು. ಇವರೆಲ್ಲ ಸಮಾಜಸೇವೆಯ ತುಡಿತ ಮತ್ತು ತಾತ್ಕಾಲಿಕ ಆರ್ಥಿಕ ನೆರವಿನ ಕಾರಣಕ್ಕೆ ವಾರ್‌ರೂಮಿಗೆ ಕೆಲಸಕ್ಕೆ ಸೇರಿದವರು’ ಎಂದು ಅವರನ್ನು ನೇಮಕ ಮಾಡಿದ ಹೊರಗುತ್ತಿಗೆ ಕಂಪನಿ ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಹೇಳಿದ್ದಾಗಿ ನ್ಯೂಸ್ ಮಿನಿಟ್‌ ವರದಿ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶವ ಸುಡಲೂ ಸೌದೆಯ ಕೊರತೆ: ಬೆಡ್ ಎತ್ತಿಕೊಂಡು ಸಂಸದ ಸೂರ್ಯ ನಾಪತ್ತೆ!

ಪೊಲೀಸರು ಅವರಿಗೆ ಕ್ಲೀನ್ ಚಿಟ್ ನೀಡುವವರೆಗೂ ವಾರ್‌ರೂಮಿಗೆ ಬರಬಾರದೆಂದು ನಿರ್ಬಂಧ ಹೇರಲಾಗಿದೆ.
ತೇಜಸ್ವಿಯ ದಾಳಿ ನಂತರ ವಾರ್‌ರೂಮ್‌ನಲ್ಲಿ ಕೆಲಸ ಮಾಡುವವರ ನಂಬರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಉದ್ಯೋಗಿಗಳು ದೂರವಾಣಿಯಲ್ಲಿ ಅಪರಿಚಿತರು ನಿರಂತರ ಕಿರುಕುಳವನ್ನು ಎದುರಿಸುತ್ತಿದ್ದಾರೆ.

ಕೆಲವರು ಅವರ ಮನೆಗೂ ಹೋಗಿ ಆಸ್ಪತ್ರೆಯ ಹಾಸಿಗೆಗಳಿಗೆ ಒತ್ತಾಯಿಸುತ್ತಿದ್ದಾರೆ ಮತ್ತು ಆಸ್ಪತ್ರೆಯ ಹಾಸಿಗೆಗಳನ್ನು ನೀಡಲು ನೀವು ಎಷ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ. ನಿರಂತರ ಫೋನ್ ಕರೆಗಳಿಂದಾಗಿ ಹಲವಾರು ಉದ್ಯೋಗಿಗಳು ತಮ್ಮ ಫೋನ್ ಸಂಖ್ಯೆಯನ್ನು ನಿಷ್ಕ್ರಿಯಯಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಉದ್ದೇಶಿಸಿ ಮಾತನಾಡಿದ್ದ ತೇಜಸ್ವಿ ಸೂರ್ಯ, “ನನ್ನ ಮೊಬೈಲ್ ನಂಬರ್ ಕೂಡ ಸೋರಿಕೆಯಾಗಿದ್ದು, ನಾನು ಕೂಡ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ. ಚಿಂತಿಸಬೇಡಿ, ಇದು ಒಂದು ವಾರದಲ್ಲಿ ಮುಗಿಯುತ್ತದೆ. ನಾನು ನಿಮ್ಮೊಂದಿಗಿದ್ದೇನೆ.. ನಿಮ್ಮ ಸಂಖ್ಯೆಯನ್ನು ಸೋರಿಕೆ ಮಾಡಿದವರಿಗೆ ನಾನು ಪಾಠ ಕಲಿಸುತ್ತೇನೆ” ಎಂದು ಹೇಳಿದ್ದು, ವಾರ್‌ರೂಮ್ ಉದ್ಯೋಗಿಗಳಿಗೆ ಹೊಸ ಸಿಮ್ ಕಾರ್ಡ್‌ಗಳನ್ನು ಕೊಡುವ ಭರವಸೆ ನೀಡಿದ್ದಾರೆ. ಆದರೆ ಅವರು ತಮ್ಮ ಕಚೇರಿಯಿಂದಲೇ ಈ ವಿವರಗಳು ಸೋರಿಕೆಯಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

“ನನ್ನ ಮೂಲಕ ಬಹಳಷ್ಟು ಒಳ್ಳೆಯದು ಸಂಭವಿಸಿದೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾನು ಜಾತಿವಾದಿ ಅಥವಾ ಕೋಮುವಾದಿ ಅಲ್ಲ. ನಾನು ಜನರಿಗೆ ಒಳ್ಳೆಯದನ್ನು ಮಾಡುತ್ತಿದ್ದೇನೆ. ನನಗೆ ಯಾವುದೇ ಕೆಟ್ಟ ಉದ್ದೇಶಗಳಿಲ್ಲ” ಎಂದು ಅವರು ತಿಳಿಸಿದ್ದಾರೆ ಎಂದು ವಾರ್‌ರೂಂ ಮೂಲಗಳು ತಿಳಿಸಿವೆ.

ಇದನ್ನೂ ಓದಿ:  ಬೆಂಗಳೂರು ‘ಬೆಡ್‌ ಬ್ಲಾಕ್’ ಹಗರಣ; ವಾಸ್ತವ ಏನು? ಹೊಣೆಗಾರರು ಯಾರು?

ಇತರ ಮೂರು ಬಿಜೆಪಿ ಮುಖಂಡರೊಂದಿಗೆ ವಾರ್‌ರೂಮಿಗೆ ದಾಳಿ ಮಾಡಿದ್ದ ತೇಜಸ್ವಿ ಅದರ ಲೈವ್‌‌ ಪ್ರಸಾರವನ್ನು ಮಾಡಿದ್ದರು. ಆದರೆ ಕ್ಷಮೆಯಾಚನೆ ಸಂದರ್ಭದಲ್ಲಿ ಯಾವುದೇ ಲೈವ್‌‌ ಪ್ರಸಾರ ಇರಲಿಲ್ಲ ಮತ್ತು ವಾರ್‌ರೂಮಿನಲ್ಲಿದ್ದವರಿಗೆ ವೀಡಿಯೊಗಳನ್ನು ಚಿತ್ರೀಕರಿಸದಂತೆ, ಫೋಟೊ ತೆಗೆಯದಂತೆ ಕೋರಲಾಗಿತ್ತು.

ನ್ಯೂಸ್ ಮಿನಿಟ್ ವೆಬ್‌ಸೈಟ್‌‌ ವಾರ್‌ರೂಮಿಲ್ಲಿ ಕೆಲಸ ಮಾಡುವ ಮೂರು ಜನರೊಂದಿಗೆ ಮಾತನಾಡಿದ್ದು, ಅವರೆಲ್ಲರೂ ತಮ್ಮ 16 ಸಹೋದ್ಯೋಗಿಗಳಿಗೆ ಸಂಭವಿಸಿರುವುದು ದುರದೃಷ್ಟಕರ ಮತ್ತು ಅನಗತ್ಯ ಎಂದು ಹೇಳಿದ್ದಾರೆ.

“ನಾವು ಇಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಾಗಿ ಕೆಲಸ ಮಾಡುತ್ತೇವೆ. ತೇಜಸ್ವಿ ಹೆಸರಿಸಿದ ಇವರೆಲ್ಲರೂ ಚಿಕ್ಕ ಹುಡುಗರು. ಅವರನ್ನು ಭಯೋತ್ಪಾದಕರು ಎಂದು ಅವರು ಹೇಗೆ ಕರೆಯುತ್ತಾರೆ? ಬಂದೂಕುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಕೂಡಾ ಈ ಹುಡುಗರಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ತೇಜಸ್ವಿಯ ಈ ಕ್ಷಮೆಯಾಚನೆಯು ನಾಮಕಾವಾಸ್ತೆಗೆ ನಡೆದಿದೆ. ಅವರು ಹುಡುಗರ ಹೆಸರನ್ನು ಓದುವ ಮೂಲಕ ಅವರಿಗೆ ದೊಡ್ಡ ಅನ್ಯಾಯ ಎಸಗಿದ್ದಾರೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಧಾರ: ದಿ ನ್ಯೂಸ್ ಮಿನಿಟ್

ಇದನ್ನೂ ಓದಿ: ಬೆಡ್‌‌ಗೆ ಪರದಾಟ; ತನ್ನ ಪತಿಗಾಗಿ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟಿಸಿದ ಮಹಿಳೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಪಕ್ಷಾತೀತವಾಗಿ ಒಗ್ಗೂಡಿದ ಸಮುದಾಯದ ನಾಯಕರು

0
ಜನಸಂಖ್ಯಾಗನುಗುಣವಾಗಿ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಹೋರಾಟದ ಸೂಚನೆ ನೀಡಿದೆ. ಈ ಕುರಿತು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಸಭೆ ನಡೆದಿದೆ. ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ,...