ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ: ಮೀಟಿಂಗ್‌ ಮೇಲೆ ಮೀಟಿಂಗ್‌

ರಾಜ್ಯದಲ್ಲಿ ಡಿಸೆಂಬರ್‌ ೫ರಂದು ರಾಜ್ಯದಲ್ಲಿ ೧೫ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈಗ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಉಪಚುನಾವಣೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಟ್ಟಿದೆ. ಈ ಮಧ್ಯೆ ಉಪ ಚುನಾವಣೆಯಲ್ಲಿ ಬಿಜೆಪಿ ಪಾಳಯಕ್ಕೆ ಸೋಲುವ ಆತಂಕ ಶುರುವಾಗಿದೆ. ಅದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ನೇತೃತ್ವದಲ್ಲಿ ದಕ್ಷಿಣ ಕರ್ನಾಟಕದ ೮ ವಿಧಾನಸಭೆ ಕ್ಷೇತ್ರಗಳ ಕುರಿತು ಸಭೆ ನಡೆಯುತ್ತಿದೆ.

ಬೈ ಎಲೆಕ್ಷನ್‌ ಅನರ್ಹ ಶಾಸಕರಿಗೆ ಸವಾಲಾಗಿ ಪರಿಣಮಿಸಿದೆ. ಅನರ್ಹ ಶಾಸಕರಿಗೆ ಮೂಲ ಬಿಜೆಪಿಗರು ಕಗ್ಗಂಟಾಗಿದ್ದಾರೆ. ಈ ಹಿನ್ನೆಲೆ ಇಂದು ಕ್ಷೇತ್ರದ ಪ್ರಮುಖರು, ಟಿಕೆಟ್ ಆಕಾಂಕ್ಷಿಗಳ ಜತೆ ಸಂಜೆ ಐದು ಗಂಟೆಯವರೆಗೂ ಬಿಜೆಪಿ ರಾಜ್ಯಾಧ್ಯಕ ನಳೀನ್ ಕುಮಾರ್‌ ಕಟೀಲ್ ಸಭೆ ನಡೆಸುತ್ತಿದ್ದಾರೆ. ಆರ್‌.ಅಶೋಕ್, ಡಾ.ಅಶ್ವತ್ಥ್‌ ನಾರಾಯಣ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ಸಭೆಯ ಬಳಿಕ ಸಂಜೆ ಆರು ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಯಲಿದೆ.

ಉಪಚುನಾವಣೆಯ ಸಿದ್ಧತೆ ಕುರಿತು ಕೋರ್ ಕಮಿಟಿಯಲ್ಲಿ ಚರ್ಚಿಸಲಾಗುತ್ತದೆ. ಅನರ್ಹ ಶಾಸಕರ ಭವಿಷ್ಯ ಕೋರ್ಟ್‌‌ನಲ್ಲಿ ಏನಾಗುತ್ತದೆ ಎಂಬುದರ ಮೇಲೆ ಬಿಜೆಪಿ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಬಂಡಾಯವೆದ್ದಿರುವ ಮೂಲ ಬಿಜೆಪಿಗರನ್ನು ಸಮಾಧಾನ ಮಾಡುವ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ. ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಉಪ ಚುನಾವಣೆ ಸವಾಲು ಎದುರಿಸಲಿದ್ದಾರೆ.

ಉಪಚುನಾವಣೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಭೆಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ದೂರವುಳಿದಿದ್ದಾರೆ. ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ದಕ್ಷಿಣ ಕರ್ನಾಟಕದ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಬೆಂಗಳೂರಿನಲ್ಲೇ ಇದ್ದರೂ ಸಹಿತ ಸಿಎಂ ಯಡಿಯೂರಪ್ಪ, ಸಭೆಗೆ ಹಾಜರಾಗದಿರುವುದು ಹಲವು ಭಿನ್ನಾಭಿಪ್ರಾಯ, ಮುಸುಕಿನ ಗುದ್ದಾಟ, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತಿದೆ. ಸಿಎಂ ಬದಲಿಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ ಸಭೆಯಲ್ಲಿ ಭಾಗಿ‌ಯಾಗಿದ್ದಾರೆ.

ಇತ್ತ ಸಿಎಂ ಬಿಎ‌ಸ್‌ವೈ ಬಿಜೆಪಿ ಕಚೇರಿಗೆ ಬರುತ್ತಾರೆಂದು ಸ್ವಾಗತಿಸಲು ಬಾಗಿಲ ಬಳಿಯೇ ಕಾದು ನಿಂತಿದ್ದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೇಸರದಿಂದ ಒಳ ನಡೆದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡ ಅಭ್ಯರ್ಥಿಗಳ ಆಯ್ಕೆ ಸಭೆಯಿಂದ ಹೊರ ಉಳಿದಿದ್ದು, ಕೋರ್‌ ಕಮಿಟಿ ಸಭೆಯಲ್ಲಿ ಮಾತ್ರ ಭಾಗವಹಿಸಲಿದ್ದಾರೆ. ಸಿಟ್ಟಿನಿಂದಲೇ ಬಿಜೆಪಿ ಕಚೇರಿಗೆ ಆಗಮಿಸಿದ ಯಡಿಯೂರಪ್ಪ, ಯಾಕೆ ಇಷ್ಟು ಅರ್ಜೆಂಟ್ ಎಂದು ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ಗೆ ಕೇಳಿದರು. ಎರಡು ಬಹುಮುಖ್ಯ ಸಭೆಗಳಿವೆ ಸರ್‌ ಎಂದು ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಉತ್ತರಿಸಿದ್ದಾರೆ.

ಇನ್ನು ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ವಿಚಾರಕ್ಕೆ ಬಿಜೆಪಿ ನಾಯಕರಲ್ಲೇ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸಾವರ್ಕರ್‌ಗೆ ಭಾರತ ರತ್ನ ನೀಡುತ್ತಿರುವ ಹೈಕಮಾಂಡ್‌ ನಿರ್ಧಾರಕ್ಕೆ ಲಿಂಗಾಯತ ನಾಯಕರು ಗರಂ ಆಗಿದ್ದಾರೆ. ಇಡೀ ರಾಜ್ಯ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಕೇಳಿಕೊಳ್ಳುತ್ತಿದೆ. ಆದರೆ ಇವರು ನೋಡಿದ್ರೆ, ಸಾವರ್ಕರ್‌ಗೆ ಭಾರತ ರತ್ನ ಕೊಡಬೇಕು ಅಂತಿದ್ದಾರೆ. ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು, ನಮ್ಮ ಬಾಯಿ ಮುಚ್ಚಿಸುತ್ತಿದ್ದಾರೆ. ಸಾವರ್ಕರ್‌ಗೆ ಭಾರತ ರತ್ನ ಕೊಡಿ ಎಂದು ನಾವು ಹೇಗೆ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ನಳಿನ್‌ ಕುಮಾರ್‌ ಕಟೀಲ್‌, ಅನರ್ಹ ಕ್ಷೇತ್ರಗಳಿಗೆ ಇಬ್ಬರು ಅಭ್ಯರ್ಥಿಗಳ ಹೆಸರು ಕಳುಹಿಸಲು, ಕೇಂದ್ರ ಚುನಾವಣಾ ಸಮಿತಿಗೆ, ಅನರ್ಹ ಶಾಸಕರ ಹೆಸರಿನೊಂದಿಗೆ ಮತ್ತೊಂದು ಹೆಸರು ಸೇರಿಸಲು ಕಟೀಲ್ ಮುಂದಾಗಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸಿಎಂ ಬಿಎಸ್‌ವೈ ದಿಢೀರನೇ ಬಿಜೆಪಿ ಕಚೇರಿಗೆ ಆಗಮಿಸಿದರು. ನಂತರ ಒಂದು ಕ್ಷೇತ್ರಕ್ಕೆ ಒಂದೇ ಹೆಸರಿರಲಿ, ಅದೂ ಅನರ್ಹ ಶಾಸಕರ ಹೆಸರನ್ನು ಮಾತ್ರ ನಗದಿ ಮಾಡುವಂತೆ ತಾಕೀತು ಮಾಡಿದರು.

ಜನರ ನಿಲುವು ಬೇರೆ ಇರುವಾಗ ನಾವೇನು ಉತ್ತರ ಕೊಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಬಿಎಸ್‌ವೈ ಕೂಡ ಸಾವರ್ಕರ್ ವಿಚಾರದಲ್ಲಿ ಹೆಚ್ಚು ಮಾತನಾಡಿಲ್ಲ. ಜತೆಗೆ ಲಿಂಗಾಯತ ಸಚಿವರಿಗೂ ಹೈಕಮಾಂಡ್ ಮೇಲೆ ಬೇಸರ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಬೈ ಎಲೆಕ್ಷನ್‌ಗೆ ನವೆಂಬರ್‌ ೧೧ರಿಂದ ನಾಮಪತ್ರ ಸಲ್ಲಿಕೆ ಕೆಲಸ ಆರಂಭವಾಗಲಿದ್ದು, ೧೮ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಡಿಸೆಂಬರ್‌ ೫ಕ್ಕೆ ಮತದಾನ ನಡೆದು, ಡಿಸೆಂಬರ್‌ ೧೧ರಂದು ಫಲಿತಾಂಶ ಪ್ರಕಟವಾಗಲಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here