ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು ಶೇಕಡ ಪೂರ್ಣಗೊಂಡಂತಾಗಿದೆ. ಮುಂದಿನ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಈಗಲೇ ಸಿದ್ದತೆಗಳನ್ನು ಶುರು ಮಾಡಿವೆ.
ಆದರೆ, 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಕೆಲವು ಗೊಂದಲಗಳು ಇನ್ನೂ ಕೂಡ ಬಗೆಹರಿದಿಲ್ಲ. ಚುನಾವಣಾ ತಕರಾರರು ಅರ್ಜಿಗಳು ಇನ್ನೂ ನ್ಯಾಯಾಲಯಗಳಲ್ಲಿವೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೋಲಾರ ಜಿಲ್ಲೆಯ ಮಾಲೂರು, ಮೈಸೂರು ಜಿಲ್ಲೆಯ ವರುಣಾ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮತ್ತು ಗೌರಿಬಿದನೂರು, ಬೆಂಗಳೂರು ನಗರ ಜಿಲ್ಲೆಯ ಶಾಂತಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ತಕರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಸದ್ಯಕ್ಕೆ ಮಾಲೂರು ಕ್ಷೇತ್ರದ ಪ್ರಕರಣವೊಂದು ಮಾತ್ರ ಇತ್ಯರ್ಥಗೊಂಡಿದೆ.
ಚುನಾವಣಾ ತಕರಾರು ಅರ್ಜಿಯಿಂದ ಪ್ರಸ್ತುತ ದೇಶದ ಗಮನ ಸೆಳೆದಿರುವ ಪ್ರಮುಖ ಕ್ಷೇತ್ರ ಶೃಂಗೇರಿ. ಇಲ್ಲಿ ಕಾಂಗ್ರೆಸ್‌ನ ಟಿ.ಡಿ ರಾಜೇಗೌಡ ಅವರು ಪ್ರಸ್ತುತ ಶಾಸಕರಾಗಿದ್ದಾರೆ. ರಾಜೇಗೌಡರೇ ಶಾಸಕರಾಗಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಮೇ.12) ಆದೇಶಿಸಿದೆ.
ಇ ತರ ಕ್ಷೇತ್ರಗಳ ಪ್ರಕರಣಗಳಿಗಿಂತ ಶೃಂಗೇರಿ ಕ್ಷೇತ್ರದ ಪ್ರಕರಣ ಅತ್ಯಂತ ಕುತೂಹಲಕಾರಿಯಾಗಿದೆ. ಏಕೆಂದರೆ, ಮಹತ್ವದ ಬೆಳವಣಿಗೆಯಲ್ಲಿ 2023ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪರಾಭವಗೊಂಡಿದ್ದ ಬಿಜೆಪಿ ಅಭ್ಯರ್ಥಿ ಡಿ. ಎನ್. ಜೀವರಾಜ್ ಅವರು ಮೇ 6ರಂದು ಶಾಸಕರಾಗಿ ಸ್ಪೀಕರ್ ಮುಂದೆ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಕೇವಲ 5 ದಿನಗಳಲ್ಲಿ ಅವರ ಶಾಸಕತ್ವಕ್ಕೆ ಕುತ್ತು ಬಂದಿದೆ. 2023ರ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ರಾಜೇಗೌಡ ಅವರನ್ನೇ ಶಾಸಕರಾಗಿ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ. ಡಿ. ರಾಜೇಗೌಡ ಅವರು ಬಿಜೆಪಿಯ ಡಿ. ಎನ್. ಜೀವರಾಜ್ ಅವರ ವಿರುದ್ಧ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಚುನಾವಣೆ ಬಳಿಕ ಸೋತ ಅಭ್ಯರ್ಥಿ ಜೀವರಾಜ್ ಅವರು ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು.
ಹೈಕೋರ್ಟ್ ಆದೇಶದಂತೆ ಮೇ 2, 2026ರಂದು ನಡೆದ ಅಂಚೆ ಮತಗಳ ಮರುಎಣಿಕೆಯಲ್ಲಿ ಡಿ. ಎನ್. ಜೀವರಾಜ್ ಅವರು ರಾಜೇಗೌಡ ಅವರಿಗಿಂತ 52 ಮತಗಳ ಮುನ್ನಡೆ ಸಾಧಿಸಿ ಗೆಲುವು ದಾಖಲಿಸಿದರು. ಇದರ ಬೆನ್ನಲ್ಲೇ ಅವರು ಶಾಸಕರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು.
ಮರುಎಣಿಕೆ ವೇಳೆ ತನಗೆ ಬಂದಿದ್ದ ಸುಮಾರು 255 ಅಂಚೆ ಮತಗಳನ್ನು ಅಸಿಂಧುಗೊಳಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ ರಾಜೇಗೌಡ ಸುಪ್ರೀಂ ಕೋರ್ಟ್ ಮಟ್ಟಿಲೇರಿದ್ದರು. ಸ್ಟ್ರಾಂಗ್ ರೂಂಗಳ ಸೀಲ್ ಸರಿಯಾಗಿರಲಿಲ್ಲ, ಬ್ಯಾಲೆಟ್ ಬಾಕ್ಸ್‌ಗಳನ್ನು ಮೊದಲೇ ತೆರೆಯಲಾಗಿತ್ತು ಎಂಬ ಗಂಭೀರ ಆರೋಪಗಳನ್ನು ಅವರು ಮಾಡಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೇ 11, 2026ರಂದು ಮರುಎಣಿಕೆ ಫಲಿತಾಂಶಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ಕ್ಷೇತ್ರದಲ್ಲಿ ‘ಯಥಾಸ್ಥಿತಿ’ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಟಿ. ಡಿ. ರಾಜೇಗೌಡ ಅವರ ಶಾಸಕತ್ವ ಮರುಸ್ಥಾಪನೆಯಾಗಿದೆ. ಡಿ. ಎನ್. ಜೀವರಾಜ್ ಅವರು ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಮೇ 21ಕ್ಕೆ ನಿಗದಿಪಡಿಸಿದೆ.
ಮಾಲೂರು ಕ್ಷೇತ್ರ (ಕೆ. ವೈ. ನಂಜೇಗೌಡ ವಿರುದ್ಧ ಮಂಜುನಾಥ ಗೌಡ)
ಕೋಲಾರದ ಮಾಲೂರು ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಪ್ರಕರಣ ಸದ್ಯಕ್ಕೆ ಇತ್ಯರ್ಥಗೊಂಡಿದೆ. ಆದರೆ, ಇದೂ ಕೂಡ ಗಮನಸೆಳೆದ ಪ್ರಕರಣವಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ವೈ. ನಂಜೇಗೌಡರು ಕೇವಲ 248 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥಗೌಡ ಅವರ ವಿರುದ್ಧ ಜಯಗಳಿಸಿದ್ದರು. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಂಜುನಾಥಗೌಡರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಮೊದಲು ನಂಜೇಗೌಡರ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ತೀರ್ಪಿಗೆ ತಡೆ ನೀಡಿ, ಪಾರದರ್ಶಕತೆಗಾಗಿ ಮರು ಮತ ಎಣಿಕೆಗೆ ಆದೇಶಿಸಿತ್ತು. ನವೆಂಬರ್ 11, 2025 ರಂದು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಮರು ಮತ ಎಣಿಕೆ ನಡೆಯಿತು.
ಫೆಬ್ರವರಿ 2026ರಲ್ಲಿ ಹೊರಬಂದ ವರದಿಗಳ ಪ್ರಕಾರ, ಮರು ಎಣಿಕೆಯಲ್ಲಿ ಕೆ.ವೈ. ನಂಜೇಗೌಡ ಅವರು ಬಿಜೆಪಿಯ ಮಂಜುನಾಥಗೌಡರಿಗಿಂತ 250 ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿ ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ.
ವರುಣಾ ಕ್ಷೇತ್ರ (ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅರ್ಜಿ)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿದೆ.
ವರುಣಾ ಕ್ಷೇತ್ರದ ಮತದಾರ ಕೆ.ಎಂ. ಶಂಕರ್ ಎಂಬುವವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ‘ಐದು ಗ್ಯಾರಂಟಿ’ ಯೋಜನೆಗಳ ಭರವಸೆಯು ಜನರಿಗೆ ನೀಡಿದ ಆಮಿಷ ಮತ್ತು ಲಂಚದಂತಿದೆ, ಇದು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ‘ಚುನಾವಣಾ ಅಕ್ರಮ’ (Corrupt Practice) ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮೊದಲು ಈ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ವೈಯಕ್ತಿಕ ಅಭ್ಯರ್ಥಿಯ ಭ್ರಷ್ಟಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ಏಪ್ರಿಲ್ 22, 2025 ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಶಂಕರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಡಿಸೆಂಬರ್ 8, 2025 ರಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.
ಈ ಪ್ರಕರಣವು ಈಗ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿದ್ದು, ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿಗಳು ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ ಎಂಬ ಬಗ್ಗೆ ನ್ಯಾಯಾಲಯವು ಕಾನೂನುಬದ್ಧವಾಗಿ ವಿಶ್ಲೇಷಿಸುತ್ತಿದೆ.
ಜಯನಗರ ಕ್ಷೇತ್ರ (ಸಿ.ಕೆ ರಾಮಮೂರ್ತಿ ವಿರುದ್ಧ ಸೌಮ್ಯ ರೆಡ್ಡಿ ಅರ್ಜಿ)
2023ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಕೆಯಾದ ಮತ್ತೊಂದು ಪ್ರಮುಖ ಕ್ಷೇತ್ರ ಬೆಂಗಳೂರು ನಗರ ಜಿಲ್ಲೆಯ ಜಯನಗರ.
2023ರ ಚುನಾವಣೆಯಲ್ಲಿ ಬಿಜೆಪಿಯ ಸಿ. ಕೆ. ರಾಮಮೂರ್ತಿ ಅವರು ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ವಿರುದ್ಧ ಕೇವಲ 16 ಮತಗಳ ಅತ್ಯಲ್ಪ ಅಂತರದಿಂದ ಜಯಗಳಿಸಿದ್ದರು. ಮತ ಎಣಿಕೆ ಮತ್ತು ಮರುಎಣಿಕೆ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿ ಸೌಮ್ಯ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಅರ್ಜಿಯ ವಿಚಾರಣೆಗೆ ತಡೆ ನೀಡುವಂತೆ ಕೋರಿ ಶಾಸಕ ಸಿ. ಕೆ. ರಾಮಮೂರ್ತಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜನವರಿ 29, 2026 ರಂದು ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಈ ಹಿಂದೆ ಮಾರ್ಚ್ 2025ರಲ್ಲಿ, ಸೌಮ್ಯ ರೆಡ್ಡಿ ಅವರು ಮತ ಎಣಿಕೆ ಕೇಂದ್ರದ ವಿಡಿಯೋ ಕ್ಲಿಪ್‌ಗಳು ಮತ್ತು ಡಿವಿಡಿಗಳನ್ನು ಸಾಕ್ಷ್ಯವಾಗಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ರಾಮಮೂರ್ತಿ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರಾದರೂ, ಅಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ರಾಮಮೂರ್ತಿ ಅವರ ಆಕ್ಷೇಪಣೆಗಳನ್ನು ವಜಾಗೊಳಿಸಿರುವುದರಿಂದ, ಹೈಕೋರ್ಟ್‌ನಲ್ಲಿ ಸೌಮ್ಯ ರೆಡ್ಡಿ ಅವರ ತಕರಾರು ಅರ್ಜಿಯ ವಿಚಾರಣೆ ಮುಂದುವರಿದಿದೆ. ಇತ್ತೀಚೆಗೆ (ಏಪ್ರಿಲ್ 2026) ನ್ಯಾಯಾಲಯವು ಸಾಕ್ಷಿಗಳ ವಿಚಾರಣೆಯನ್ನು ನಡೆಸುತ್ತಿದೆ.
ಸದ್ಯಕ್ಕೆ ಸಿ. ಕೆ. ರಾಮಮೂರ್ತಿ ಅವರೇ ಶಾಸಕರಾಗಿ ಮುಂದುವರಿದಿದ್ದಾರೆ, ನ್ಯಾಯಾಲಯದ ಅಂತಿಮ ತೀರ್ಪು ಬರಬೇಕಿದೆ.
ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ವಿರುದ್ದ ಅರ್ಜಿ
ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅವರು ತಮ್ಮ ಆಸ್ತಿ ವಿವರಗಳನ್ನು ಮರೆಮಾಚಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅವರ ಶಾಸಕತ್ವದ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಪೀಠವು ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿತ್ತು. ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮತ್ತು ಹೊಣೆಗಾರಿಕೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಅವರು ಸಲ್ಲಿಸಿದ ಅರ್ಜಿಯ ಪ್ರಕಾರ, ಸುಬ್ಬಾರೆಡ್ಡಿ ಅವರು ಸುಮಾರು 1.33 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಹೊಂದಿದ್ದರೂ ಅದನ್ನು ‘ಶೂನ್ಯ’ ಎಂದು ಘೋಷಿಸಿದ್ದರು. ಅಲ್ಲದೆ, ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿದ್ದ ಹಲವು ಬ್ಯಾಂಕ್ ಖಾತೆಗಳು ಮತ್ತು ವ್ಯವಹಾರಗಳ ವಿವರಗಳನ್ನು ಮರೆಮಾಚಿದ್ದಾರೆ ಎಂಬ ಗಂಭೀರ ಆರೋಪಗಳಿದ್ದವು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆಯಿಂದಾಗಿ ಎಸ್. ಎನ್. ಸುಬ್ಬಾರೆಡ್ಡಿ ಅವರು ಸದ್ಯಕ್ಕೆ ಶಾಸಕರಾಗಿ ಮುಂದುವರಿಯಲಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2026ಕ್ಕೆ ನಿಗದಿಪಡಿಸಿದೆ.
ಇದರ ಹೊರತಾಗಿ, ಜುಲೈ 2025ರಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಸುಬ್ಬಾರೆಡ್ಡಿ ಅವರಿಗೆ ಸಂಬಂಧಿಸಿದ ವಿದೇಶಿ ಆಸ್ತಿಗಳ ಅಕ್ರಮದ ಆರೋಪದ ಮೇಲೆ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು ಎಂಬುದು ಗಮನಾರ್ಹ.
ಗೌರಿಬಿದನೂರು ಶಾಸಕ ಕೆ. ಎಚ್. ಪುಟ್ಟಸ್ವಾಮಿ ಗೌಡ ವಿರುದ್ಧ ಅರ್ಜಿ
ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಕೆ. ಎಚ್. ಪುಟ್ಟಸ್ವಾಮಿ ಗೌಡ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಚುನಾವಣಾ ತಕರಾರು ಅರ್ಜಿ ಸಲ್ಲಿಕೆಯಾಗಿದೆ.
2023ರ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಮತ್ತು ಮಾಜಿ ಶಾಸಕ ಎನ್. ಎಚ್. ಶಿವಶಂಕರರೆಡ್ಡಿ ಅವರು ಈ ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಪುಟ್ಟಸ್ವಾಮಿ ಗೌಡ ಅವರು 2023ರ ಚುನಾವಣಾ ನಾಮಪತ್ರದ ವೇಳೆ ಸಲ್ಲಿಸಿದ ಫಾರ್ಮ್ ಸಂಖ್ಯೆ 26ರ ಅಫಿಡವಿಟ್‌ನಲ್ಲಿ, ತಮ್ಮ ವಿರುದ್ಧ ಬಾಕಿ ಇದ್ದ Crime No. 120/2018 (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 ಮತ್ತು 420 ಅಡಿಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ) ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಶಿವಶಂಕರರೆಡ್ಡಿ ಆರೋಪಿಸಿದ್ದಾರೆ.
ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 33A ಪ್ರಕಾರ, ಅಭ್ಯರ್ಥಿಗಳು ತಮ್ಮ ವಿರುದ್ಧದ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಕಡ್ಡಾಯವಾಗಿ ಘೋಷಿಸಬೇಕು. ಇದನ್ನು ಮರೆಮಾಚುವುದು ಚುನಾವಣಾ ಭ್ರಷ್ಟಾಚಾರದ (Corrupt Practice) ವ್ಯಾಪ್ತಿಗೆ ಬರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಪ್ರಕರಣವು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಶಾಸಕ ಪುಟ್ಟಸ್ವಾಮಿ ಗೌಡ ಅವರು ತಮ್ಮ ಅಫಿಡವಿಟ್‌ನಲ್ಲಿ ‘0’ ಕ್ರಿಮಿನಲ್ ಪ್ರಕರಣಗಳಿವೆಯೆಂದು ಘೋಷಿಸಿದ್ದರು. ಅರ್ಜಿದಾರರು ನೀಡಿರುವ ಮಾಹಿತಿಯನ್ನು ಆಧರಿಸಿ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದೆ.
ಇದರ ಹೊರತಾಗಿ, ಪುಟ್ಟಸ್ವಾಮಿ ಗೌಡ ಅವರ ಮೇಲೆ ಇತ್ತೀಚೆಗೆ (ಸೆಪ್ಟೆಂಬರ್ 2025) ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಹೊಸ ಆರೋಪವೂ ಕೇಳಿಬಂದಿತ್ತು, ಈ ಸಂಬಂಧ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸದ್ಯಕ್ಕೆ ಪುಟ್ಟಸ್ವಾಮಿ ಗೌಡ ಗೌರಿಬಿದನೂರು ಶಾಸಕರಾಗಿ ಮುಂದುವರಿಯುತ್ತಿದ್ದು, ಹೈಕೋರ್ಟ್‌ನ ಅಂತಿಮ ತೀರ್ಪಿನ ಮೇಲೆ ಅವರ ಶಾಸಕತ್ವದ ಭವಿಷ್ಯ ನಿರ್ಧಾರವಾಗಲಿದೆ.
ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್ ವಿರುದ್ಧ ಅರ್ಜಿ
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್. ಎ. ಹ್ಯಾರಿಸ್ ಅವರ ವಿರುದ್ಧ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ. ಶಿವಕುಮಾರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ (EP No. 09/2023) ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ.
ಎನ್. ಎ. ಹ್ಯಾರಿಸ್ ಅವರು ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆಸ್ತಿ ವಿವರಗಳನ್ನು ಮರೆಮಾಚಿದ್ದಾರೆ ಮತ್ತು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಕೆ. ಶಿವಕುಮಾರ್ ಆರೋಪಿಸಿದ್ದಾರೆ. ನಾಮಪತ್ರದ ಸರಿಯಾದ ಕ್ರಮ ಪಾಲಿಸದ ಕಾರಣ ಹ್ಯಾರಿಸ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಈ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಎನ್. ಎ. ಹ್ಯಾರಿಸ್ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಮತ್ತು ಮುಖ್ಯ ಅರ್ಜಿಯ ವಿಚಾರಣೆಯನ್ನು ಮುಂದುವರಿಸಲು ನಿರ್ಧರಿಸಿದೆ.
ಹೈಕೋರ್ಟ್‌ನ ಈ ನಿರ್ಧಾರವನ್ನು ಪ್ರಶ್ನಿಸಿ ಹ್ಯಾರಿಸ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ, ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಯಾವುದೇ ತಡೆ ನೀಡಿಲ್ಲ. “ಎಲ್ಲಾ ವಾದಗಳನ್ನು ಹೈಕೋರ್ಟ್ ಮುಂದೆಯೇ ಮಂಡಿಸಿ” ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಹ್ಯಾರಿಸ್ ಅವರಿಗೆ ಹಿನ್ನಡೆಯಾಗಿರುವುದರಿಂದ, ಹೈಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ಮುಂದುವರಿಯುತ್ತಿದೆ. ಪ್ರಕರಣವು ಸಾಕ್ಷ್ಯಾಧಾರಗಳ ಪರಿಶೀಲನೆಯ ಹಂತದಲ್ಲಿದ್ದು, ಹೈಕೋರ್ಟ್‌ನ ಅಂತಿಮ ತೀರ್ಪಿನ ಮೇಲೆ ಹ್ಯಾರಿಸ್ ಅವರ ಶಾಸಕತ್ವ ನಿರ್ಧಾರವಾಗಲಿದೆ.
ಶಾಸಕತ್ವದ ಹಾವು-ಏಣಿಯಾಟದಿಂದ ಜನರು ಹೈರಾಣ
ವಿಧಾನಸಭೆಯ ಅವಧಿ ಮುಗಿಯುತ್ತಾ ಬಂದರೂ ಶಾಸಕತ್ವದ ಜಟಾಪಟಿಗಳು ಮುಗಿಯದ ಹಿನ್ನೆಲೆ, ಮತ ಹಾಕಿದ ಜನರು ಗೊಂದಲಕ್ಕೀಡಾಗಿದ್ದಾರೆ. ಅಸಲಿಗೆ ನಮ್ಮ ಶಾಸಕರು ಯಾರು ಎಂಬ ಖಾತರಿ ಇನ್ನೂ ಆದಂತಿಲ್ಲ. ಶೃಂಗೇರಿ ಕ್ಷೇತ್ರದ ಬೆಳವಣಿಗೆಯಂತೂ ಸಿನಿಮೀಯವಾಗಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಗಮನಾರ್ಹ ವಿಷಯವೆಂದರೆ ನ್ಯಾಯಾಂಗ ಪ್ರಕ್ರಿಯೆಯ ವಿಳಂಬ. ನಾವು ಈಗಾಗಲೇ ಹೇಳಿದಂತೆ ಮಾಲೂರು ಹೊರತುಪಡಿಸಿ, ಉಳಿದ ಕ್ಷೇತ್ರಗಳ ಚುನಾವಣಾ ಅರ್ಜಿಗಳು ಇನ್ನೂ ಇತ್ಯರ್ಥಗೊಂಡಿಲ್ಲ. ಮೂರು ವರ್ಷಗಳಲ್ಲಿ ಆಗದ್ದು, ಇನ್ನು ಎರಡು ವರ್ಷಗಳಲ್ಲಿ ಆಗುತ್ತದೆ ಎಂಬ ಭರವಸೆಯಿಲ್ಲ.
ನ್ಯಾಯಾಲಯದ ಆದೇಶ ಹಾಲಿ ಶಾಸಕರ ಪರ ಬಂದರೆ ಪರವಾಗಿಲ್ಲ. ಒಂದು ವೇಳೆ ಪರಾಜಿತ ಅಭ್ಯರ್ಥಿ ಪರ ಬಂದು ಅವರು ಪ್ರಮಾಣವಚನ ಸ್ವೀಕರಿಸಿದರೂ, ಅವರಿಗೆ ಕೆಲಸ ಮಾಡಲು ಹೆಚ್ಚಿನ ಸಮಯ ಸಿಗುವುದಿಲ್ಲ. ಹೃಸ್ವ ಅವಧಿಯಲ್ಲಿ ಅವರು ಏನು ಕೆಲಸ ಮಾಡಿಯಾರು ಎಂಬ ಪ್ರಶ್ನೆ ಮೂಡುತ್ತದೆ. ನ್ಯಾಯಾಂಗ ಸಮರದಲ್ಲಿ ಗೆದ್ದ ಅಭ್ಯರ್ಥಿ ವಿಪಕ್ಷದವರಾದರೆ, ಅವರಿಗೆ ಕಡಿಮೆ ಅವಧಿಯಲ್ಲಿ ಅನುದಾನ ತರುವುದು ಸವಾಲಾಗಬಹುದು.
ಇನ್ನು ಚುನಾವಣಾ ತಕರಾರಿನ ಎಲ್ಲಾ ಪ್ರಕರಣಗಳು ದೇಶದ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಪ್ರಶ್ನೆಯನ್ನು ಮೂಡಿಸುತ್ತದೆ. ಮತ ಎಣಿಕೆ ಸರಿಯಾಗಿಲ್ಲ, ಮತ ಎಣಿಕೆ ಪಕ್ಷಪಾತದಿಂದ ಕೂಡಿದೆ, ಅಫಿಡವಿಟ್ ಸಲ್ಲಿಕೆ ಸರಿಯಾಗಿಲ್ಲ ಎಂಬ ಆರೋಪಗಳು ಚುನಾವಣಾ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಮೂಡಿಸುತ್ತದೆ.
ವಿಧಾನಸಭೆ ಅವಧಿ ಮುಗಿದ ಮೇಲೆ ಪರಾಜಿತರಾಗಿದ್ದ ಅಭ್ಯರ್ಥಿ ಪರ ತೀರ್ಪು ಬಂದರೆ, ಆರಂಭದಲ್ಲಿ ಗೆದ್ದವರು 5 ವರ್ಷಗಳಲ್ಲಿ ಅನ್ಯಾಯವಾಗಿ ಶಾಸಕ ಸ್ಥಾನ ಅನುಭವಿಸಿದಂತಾಗುತ್ತದೆ. ಈ ಸಂದರ್ಭದಲ್ಲಿ ಜನಾದೇಶಕ್ಕೆ, ಸಂವಿಧಾನದ ಆದೇಶಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಪರಾಜಿತರಾಗಿದ್ದ ಅಭ್ಯರ್ಥಿ ಅನ್ಯಾಯವಾಗಿ ಶಾಸಕ ಸ್ಥಾನದ ಅವಕಾಶ ಕಳೆದುಕೊಂಡಂತಾಗುತ್ತದೆ.
ಇವೆಲ್ಲದರ ನಡುವೆ ಜನರು 5 ವರ್ಷಗಳ ಕಾಲ ನಮ್ಮ ಶಾಸಕರು ಯಾರು ಎಂಬ ಗೊಂದಲದಲ್ಲೇ ದಿನದೂಡಬೇಕಾಗಿದೆ. ಶೃಂಗೇರಿ ಕ್ಷೇತ್ರದ ಉದಾಹರಣೆಯನ್ನೇ ನೋಡುವುದಾರೆ, ಅಲ್ಲಿ 2023ರ ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೂರು ವರ್ಷ ತುಂಬುವಾಗ, ಅಂದರೆ ಮೇ 6ರಂದು ನ್ಯಾಯಾಲಯದ ಆದೇಶದಂತೆ ಬಿಜೆಪಿಯ ಡಿ.ಎನ್. ಜೀವರಾಜ್ ಪ್ರಮಾಣವಚನ ಸ್ವೀಕರಿಸಿದರು. ಮೇ 12ರಂದು ಸುಪ್ರೀಂ ಕೋರ್ಟ್ ಆದೇಶದಂತೆ ಅವರ ಶಾಸಕ ಸ್ಥಾನ ರದ್ದಾಗಿದೆ. ಹಾಗಾಗಿ, ಜನರಿಗೆ ದಿನಕ್ಕೊಬ್ಬರು ಶಾಸಕರು ಎಂಬಂತಾಗಿದೆ.


