ಕೊರೋನಾ ನಿಯಂತ್ರಣಕ್ಕೆ ಅಮೆರಿಕ 1.2 ಟ್ರಿಲಿಯನ್ ಡಾಲರ್, ಇಂಗ್ಲೆಂಡ್ 39 ಬಿಲಿಯನ್ ಡಾಲರ್, ಫ್ರಾನ್ಸ್ 45 ಬಿಲಿಯನ್ ಡಾಲರ್, ನ್ಯೂಜಿಲ್ಯಾಂಡ್ 8 ಬಿಲಿಯನ್ ಡಾಲರ್, ಇಟಲಿ 28 ಬಿಲಿಯನ್ ಡಾಲರ್, ಕೆನಡಾ 56 ಬಿಲಿಯನ್ ಡಾಲರ್, ದ,ಕೋರಿಯಾ 10 ಬಿಲಿಯನ್ ಡಾಲರ್ ಹಣ ಮೀಸಲಿಟ್ಟಿವೆ.
ಪಕ್ಕದ ಪುಟ್ಟ ರಾಜ್ಯ ಕೇರಳ 20 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಿದೆ. ಖಜಾನೆಯಲ್ಲಿ ಸಾಕಷ್ಟು ದುಡ್ಡಿಲ್ಲದಿದ್ದರೂ ಯಡಿಯೂರಪ್ಪ ಎರಡು ತಿಂಗಳ ರೇಷನ್ ಕೊಡುವುದಾಗಿ ಹೇಳಿದ್ದಾರೆ.
ಆದರೆ, ಮೋದಿಯವರು ಯಾವ ಪ್ಯಾಕೇಜನ್ನೂ ಘೋಷಣೆ ಮಾಡಿಲ್ಲ. ನಿಮ್ಮ ಕೈ ಬಳಸಿ ಚಪ್ಪಾಳೆ ಹೊಡೆಯಿರಿ, ನಿಮ್ಮ ಮನೆ ಗಂಟೆ ಮತ್ತು ಗಂಗಾಳ (ಪ್ಲೇಟು) ಬಾರಿಸಿ ಎಂದಷ್ಟೇ ಹೇಳಿದ್ದಾರೆ. ಪರೋಕ್ಷವಾಗಿ ಅವರು ಬಡವರಿಗೆ ಶಂಖಾ ಹೊಡಿರಿ ಎಂದಿದ್ದಾರಷ್ಟೆ.
ಯಾಕೆ ಹಣ ಬಿಚ್ಚುತ್ತಿಲ್ಲ? ಹಣ ಇದ್ದರೆ ತಾನೇ? ಪುಟ್ಟಾಪೂರಾ ದೋಸ್ತ್‌ಗಳಾದ ಅಂಬಾನಿ, ಅದಾನಿಗಳಿಗೆ, ಯೆಸ್ ಬ್ಯಾಂಕಿನ ಮಿತ್ರ ಕಪೂರ್‌ಗಳಿಗೆಲ್ಲ ಮೋದಿ ಗಳಿಸಲು ಬಿಟ್ಟು ಖಜಾನೆ ಖಾಲಿ ಮಾಡುತ್ತ ಹೊರಟಿದ್ದಾರೆ. ಹೀಗಾಗಿ ಅವರ ಬಳಿ ಈಗ ಉಳಿದಿರುವುದು ಬಿಟ್ಟಿ ಬೋಧನೆಯಷ್ಟೇ!
20 ದಿನದ ಜನತಾ ಕರ್ಫ್ಯೂ
ನಿಜಕ್ಕೂ ಕಾಳಜಿ ಇದ್ದಿದ್ದರೆ, 20 ದಿನಗಳ ಜನತಾ ಕರ್ಫ್ಯೂ ಘೋಷಿಸಿ, ಸಂಬಳ ಪಡೆಯದ ಜನರಿಗೆಲ್ಲ ಕೇರಳದಂತೆ ಪ್ಯಾಕೇಜ್ ಘೋಷಿಸಬಹುದಿತ್ತು. ಅದು ಬಿಟ್ಟು ಗಂಟೆ ಬಾರಿಸಿ ಎಂದು ಹೇಳಲು ಪ್ರಧಾನಿಯೇ ಬೇಕಿತ್ತಾ? ಭಕ್ತರು ಆ ಕೆಲಸವನ್ನು ನಿರಂತರವಾಗಿ ಮಾತಾಡ್ತಾನೇ ಇದ್ದಾರಲ್ಲ?
ಜನತಾ ಕರ್ಫ್ಯೂ ಉಲ್ಲಂಘಿಸಿದ ಮೋದಿ ಭಕ್ತರು!
ಒಂದು ದಿನದ ಮಟ್ಟಿಗಾದರೂ ಹೊರಬರದೇ ಮನೆಯಲ್ಲಿಯೇ ಇದ್ದು ಚಪ್ಪಾಳೆ ಹೊಡೆಯಿರಿ ಎಂದು ಮೋದಿ ಹೇಳಿದರೆ ಹಲವು ಮೋದಿ ಭಕ್ತರು ಗುಂಪು ಗುಂಪಾಗಿ ಬೀದಿಗೆ ಬಂದು ಚಪ್ಪಾಳೆ ಹೊಡೆಯುವ ಮೂಲಕ ಮೋದಿಯವರ ಉದ್ದೇಶವನ್ನೇ ಹಾಳುಗೆಡವಿರುವ ವಿಡಿಯೋಗಳು ವೈರಲ್ ಆಗಿವೆ.
ಕೊರೋನಾದ ಬಗ್ಗೆ ಇಷ್ಟು ಲಘುವಾದ ಧೋರಣೆ ಬೆಳೆಸಿಕೊಂಡರೆ, ಅಪಾಯಕ್ಕೆ ಈಡಾಗುವವರು ಈ ದೇಶದ ಬಡವರು ಅಲ್ಲವೇ? ಹೀಗಾಗಿ ಶ್ರೀಮಂತರು, ಮೇಲ್ ಮಧ್ಯಮ ಮತ್ತು ಮಧ್ಯಮ ವರ್ಗಗಳ ಜನ ಒಂಥರಾ ರೋಮ್ಯಾಂಟಿಕ್ ಆಗಿ ಇದನ್ನೆಲ್ಲ ಅನುಭವಿಸುತ್ತಿರಬಹುದೇ ಎಂಬ ಸಂಶಯ ಕಾಡತೊಡಗಿದೆ.
-ಪಿ.ಕೆ. ಮಲ್ಲನಗೌಡರ್