Homeಕರ್ನಾಟಕಪ್ರವಾಹ: ಅಭಿವೃದ್ಧಿಯ ಭ್ರಷ್ಟಾಚಾರ ಮತ್ತು ಅಸಂಬದ್ಧತೆಗಳಿಂದ ಬೆಂಗಳೂರನ್ನು ಕಾಪಾಡಿ!

ಪ್ರವಾಹ: ಅಭಿವೃದ್ಧಿಯ ಭ್ರಷ್ಟಾಚಾರ ಮತ್ತು ಅಸಂಬದ್ಧತೆಗಳಿಂದ ಬೆಂಗಳೂರನ್ನು ಕಾಪಾಡಿ!

- Advertisement -
- Advertisement -

ನಾವು ವಿದ್ವಾಂಸರಾದ ಡಾ. ಎಸ್. ರಾಧಾಕೃಷ್ಣನ್ ಅವರ ನೆನಪಿನಲ್ಲಿ ಶಿಕ್ಷಕರ ದಿನವನ್ನು ಆಚರಿಸುತ್ತಿರುವಾಗ ಒಂದು ಅರ್ಹ ಪ್ರಶ್ನೆಯನ್ನು ಕೇಳಬೇಕಿದೆ: ತನಗೆ ಈಗಾಗಲೇ ಗೊತ್ತಿದೆ ಎಂದು ಹೇಳಿಕೊಳ್ಳುವ ಅಥವಾ ಸರಳವಾಗಿ ಹೇಳುವುದಾದರೆ, ಕಲಿಕೆಯೇ ಅಪಥ್ಯವಾಗಿರುವ ವ್ಯಕ್ತಿಗೆ/ಸಂಸ್ಥೆಗೆ ಜ್ಞಾನವನ್ನು ದಾಟಿಸುವುದು ಹೇಗೆ? ಬೆಂಗಳೂರಲ್ಲಿ ನೆರೆ ಬಂದಾಗಲೆಲ್ಲಾ, ಅಥವಾ ಅದರ ಭಯಂಕರ ಪರಿಣಾಮಗಳನ್ನು ಅನುಭವಿಸಿದಾಗಲೆಲ್ಲಾ ಮನಸ್ಸಿನಲ್ಲಿ ಹಾದುಹೋಗುವ ಭಾವನೆಯಿದು.

ಸಮುದ್ರ ಮಟ್ಟಕ್ಕಿಂತ 1,000 ಮೀಟರ್ ಎತ್ತರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಬೆಂಗಳೂರಿಗೆ ನೀರು ಹರಿದುಹೋಗಲು ಮೂರು ಕಣಿವೆಗಳ ಭಾಗ್ಯವಿದೆ. ಇದರೊಳಗಿನ ಪ್ರತಿಯೊಂದು ತೊರೆ ಮತ್ತು, ತೋಡಿನ ವ್ಯವಸ್ಥೆಯನ್ನು ನೂರಾರು ತಲೆಮಾರುಗಳಿಂದ ಕಾಯ್ದುಕೊಂಡು ಬರಲಾಗಿದೆ. ತಲೆಮಾರುಗಳಿಂದ ಜನರು ಜತನದಿಂದ ಮತ್ತು ಬುದ್ಧಿವಂತಿಕೆಯಿಂದ ಕಟ್ಟಿರುವ ರಕ್ಷಿತ ಕಾಲುವೆಗಳಿಂದ ಮಳೆಯ ನೀರು ಸರಾಗವಾಗಿ, ನಾವೀಗ ಕೆರೆಗಳೆಂದು ಕರೆಯುವ ನೀರಾವರಿ ಟ್ಯಾಂಕುಗಳಿಗೆ ಹರಿದುಹೋಗುತ್ತದೆ. ಈ ರಚನೆಗಳು ಕೆಲವು ತಿಂಗಳುಗಳ ಕಾಲ ನೀರನ್ನು ತಾತ್ಕಾಲಿಕವಾಗಿ ಹಿಡಿದಿರುವಂತೆ ಕಟ್ಟಲಾಗಿದೆ. ಬೇಸಿಗೆಯಲ್ಲಿ ಇವು ಒಣಗಿಹೋಗಿ ಮುಂದಿನ ಮಳೆಗಾಲದಲ್ಲಿ ನೀರನ್ನು ಸ್ವೀಕರಿಸಲು ಸಿದ್ಧವಾಗುತ್ತವೆ. ಈ ರೀತಿಯಾಗಿ ಅರೆ ಒಣ ಭೂಭಾಗವನ್ನು ಬದುಕುಕಟ್ಟಲು ಸಾಧ್ಯವಾಗುವ ರೀತಿಯಲ್ಲಿ ಬದಲಾಯಿಸಲಾಗಿತ್ತು. ಅದು ಅತ್ಯುತ್ತಮವಾದ ಬೆಳೆಗಳ ವೈವಿಧ್ಯ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಕಾರಣವಾಗಿತ್ತು.

ಈ ಪ್ರದೇಶದ ಒಂದು ಪ್ರಾಕೃತಿಕ ನಕ್ಷೆಯನ್ನು ನೋಡಿದಲ್ಲಿ ಇಡೀ ಮೇಲ್ಮೈಯು ಚಿಕ್ಕ, ಮಧ್ಯಮ ಗಾತ್ರದ ನೀರಿನ ಸಂಗ್ರಹಗಳನ್ನು ಮತ್ತು ಅಪರೂಪದಲ್ಲಿ ಹೊಸ ಕಟ್ಟೆ ಅಥವಾ ಕೆರೆಗಳನ್ನು ಕಟ್ಟಬೇಕೆಂದರೆ ಬೇಕಾದ ಜಾಗಗಳನ್ನು ಕಾಣಬಹುದು. ನೀರನ್ನು ಈ ರೀತಿಯಲ್ಲಿ ಸಂಗ್ರಹಿಸುವ ಪಾರಂಪರಿಕ ವಿಧಾನದ ಪ್ರಕೃತಿಯನ್ನು ಆಧರಿಸಿದ ಈ ವಿಶಾಲವಾದ ಪ್ರದೇಶವನ್ನು ಮೆಟ್ರೋ ನಗರವನ್ನಾಗಿ ಪರಿವರ್ತಿಸಿದ ಮೇಲೆ ಈಗ ಪ್ರತೀ ಬಾರಿ ಮಳೆ ಬಂದಾಗಲೂ ಪ್ರವಾಹಕ್ಕೆ ಎಡೆಮಾಡಿಕೊಡುತ್ತಿದೆ. ಇದು ಈ ಪ್ರದೇಶದಲ್ಲಿ ಯೋಜನೆ ಮತ್ತು ಆಡಳಿತದ ವ್ಯವಸ್ಥೆಯ ಭಾಗವೇ ಆಗಿಹೋಗಿರುವ ಮೂರ್ಖತನ, ಅತಿಯಾದ ಆತ್ಮವಿಶ್ವಾಸದ ಮತ್ತು ಭ್ರಷ್ಟಾಚಾರದ ಪರಿಣಾಮವಾಗಿದೆ. ಇದು ಅಭೂತಪೂರ್ವವಾದ ಮಳೆಯ ಕಾರಣದಿಂದ ಆಗಿದೆ ಎಂಬ ಯಾವುದೇ ಸಬೂಬನ್ನು ನಾವು ಒಪ್ಪಿಕೊಳ್ಳಬಾರದು. ಯಾಕೆಂಬುದಕ್ಕೆ ಕಾರಣಗಳು ಇಲ್ಲಿವೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳು, ಇಂಜಿನಿಯರ್‌ಗಳು, ಕಾರ್ಪೋರೇಟರ್‌ಗಳು ಮತ್ತು ಬೆಂಗಳೂರಿನ ಶಾಸಕರು, ದಶಕಗಳಿಂದ ಇರುವ ಪಾರಂಪರಿಕ ಅರಿವು ಮತ್ತು ವಿವೇಕದ ಕುರಿತು ಗೌರವವನ್ನು ತಮ್ಮೊಳಗೆ ಇಟ್ಟುಕೊಂಡಿದ್ದೇ ಆಗಿದ್ದರೆ, ಅದಕ್ಕೆ ಅನುಗುಣವಾಗಿ ಪಾರಿಸರಿಕವಾಗಿ ಕಾರ್ಯಸಾಧುವಾದ ತಳಮಟ್ಟದ ಯೋಜನೆಯನ್ನು ರೂಪಿಸಿದ್ದಿದ್ದರೆ, ಪ್ರಾದೇಶಿಕ ಸಮುದಾಯಗಳ ಜೊತೆಗೆ ಕೆಲಸ ಮಾಡಿ, ಈ ಭೂಪ್ರದೇಶದ ಬಗ್ಗೆ ಆಳವಾದ ತಿಳಿವಳಿಕೆ ಪಡೆದಿರುವ ನಾಗರಿಕ ಸಮಾಜ ಹಾಗೂ ಅಕೆಡಿಮಿಕ್‌ಗಳಿಂದ ತಿಳಿದುಕೊಳ್ಳುವ ಇರಾದೆ ಇದ್ದಿದ್ದರೆ ಅಥವಾ ನ್ಯಾಯಾಂಗದ ನಿರ್ದೇಶನಗಳನ್ನು ಪಾಲಿಸುವ (ಅತಿಕ್ರಮಣ ಮತ್ತು ಮಾಲಿನ್ಯದಿಂದ ನೀರಿನ ಮೂಲಗಳನ್ನು ಹಾಗೂ ಕೆರೆಗಳನ್ನು ಉಳಿಸುವ ಬಗ್ಗೆ) ವಿನಯವನ್ನು ತೋರಿದ್ದೇ ಆಗಿದ್ದಲ್ಲಿ ಬಹುಶಃ ನಾವೀಗ ಕಾಣುತ್ತಿರುವ ಸಂಕಷ್ಟದ ದುರಂತವನ್ನು ಕಾಣಬೇಕಾಗಿ ಬರುತ್ತಿರಲಿಲ್ಲ. ನಾವೀಗ ಆಗಸದಿಂದ ಬರುವ ವರವು ಕ್ಷಣಮಾತ್ರದಲ್ಲಿ ಕಾಲನಷ್ಟ, ಮನೆ ನಾಶ, ಆರೋಗ್ಯ ಹಾನಿ, ಮೂಲ ಸೌಕರ್ಯಗಳ ನಾಶ, ಅವಕಾಶಗಳ ನಾಶ ಮತ್ತು ಜೀವಹಾನಿ ಕೂಡಾ ಉಂಟುಮಾಡುವ ಶಾಪವಾಗಿ ಪರಿಣಮಿಸುವಂತ ಮಹಾನಗರವನ್ನು ಹೊಂದಿದ್ದೇವೆ. ಎಂದಿನಂತೆಯೇ ಬಡವರು ಮಾತ್ರವೇ ಹೆಚ್ಚು ಬಾಧಿತರಾಗುವವರು. ಆದರೀಗ ಈ ಹಾನಿಯು ಮಧ್ಯಮ ವರ್ಗದವರು ಮತ್ತು ಶ್ರೀಮಂತರು ವಾಸಿಸುವ ಬಡಾವಣೆಗಳಿಗೂ ವಿಸ್ತರಿಸಿದೆ.

ಸರಳವಾಗಿ ಪರಿಸ್ಥಿತಿಯನ್ನು ವಿವರಿಸಬೇಕಾದರೆ, ಹೀಗೆನ್ನಬಹುದು: ಮಾನವ ವಸತಿಯನ್ನು ಬೆಂಬಲಿಸುವ ಮತ್ತು ಕಾಯ್ದುಕೊಳ್ಳುವ ಜೌಗು ಮುಂತಾದ ಒದ್ದೆಭೂಮಿಗಳ ಪಾತ್ರದ ಕುರಿತು ಸಂಪೂರ್ಣವಾದ ಮತ್ತು ಅಜಾಗರೂಕತೆಯ ಅಸಡ್ಡೆ. ಈ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ 1970ರಿಂದಲೂ ಕಾಣಬಹುದಾಗಿದೆ; ಮಲೇರಿಯಾ ಹರಡುತ್ತದೆ ಎಂದು ಕೆರೆಗಳನ್ನು ಒಣಗಿಸುವುದು ಮತ್ತು ಅವುಗಳನ್ನು ಮುಚ್ಚಿ, ವಸತಿ ಬಡಾವಣೆಗಳನ್ನು, ಸಾರ್ವಜನಿಕ ಸ್ಥಳಗಳನ್ನು ಮತ್ತು ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸುವ ವಿದ್ಯಮಾನಗಳನ್ನು ಸ್ಪಷ್ಟವಾಗಿ ಕಾಣಬಹುದು. ದಶಕಗಳಿಂದ ಕೊಳಚೆ ನೀರು, ಕೈಗಾರಿಕಾ ತ್ಯಾಜ್ಯಗಳನ್ನು ಕಾಲುವೆಗಳಿಗೆ ಬಿಟ್ಟು ಮಲಿನಗೊಳಿಸಲಾಗುತ್ತಿದೆ. ಈ ಮಲಿನಗೊಂಡ ನೀರು ಕೆರೆಗಳನ್ನು ಸೇರುತ್ತದೆ. ಈ ಪ್ರಕ್ರಿಯೆಯು ಮೇಲ್ಮೈಯಲ್ಲಿ ಇರುವ ನೀರನ್ನು ಕಲುಷಿತಗೊಳಿಸುವುದೇ ಅಲ್ಲದೆ, ಅಂತರ್ಜಲವನ್ನೂ ಪ್ರವೇಶಿಸಿ ಸಾರ್ವಜನಿಕ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ.

ಈ ನೀರಿನ ಆಶ್ರಯಗಳ ಮಾಲಿನ್ಯದ ಮತ್ತು ಒದ್ದೆಭೂಮಿಯ ನಾಶದ ವಿಷವರ್ತುಲವು ಬೆಂಗಳೂರಿನಲ್ಲಿ ಐಟಿ ಕ್ಷೇತ್ರದ ವಿಸ್ತರಣೆಯ ಜೊತೆಗೆ ಇನ್ನಷ್ಟು ಉಲ್ಬಣಿಸಿತು. ಈ ಕ್ಷೇತ್ರಕ್ಕೆ ಸುರಿಯಲಾದ ಭಾರೀ ಪ್ರಮಾಣದ ಹಣವು ಜಮೀನನ್ನು ಚಿನ್ನದ ಬೆಲೆಯ ರಿಯಲ್ ಎಸ್ಟೇಟ್ ಆಗಿ ಪರಿವರ್ತಿಸಿತು. ಹೂಡಿಕೆ ಮೇಲಿನ ಲಾಭವೇ ಮಾರ್ಗದರ್ಶಿ ಸೂತ್ರವಾದಾಗ ಮಹಾನಗರದ ಸುಸ್ಥಿರತೆ ಮತ್ತು ಕಾರ್ಯಸಾಧ್ಯತೆಯ ಯೋಚನೆಯನ್ನೇ ಮಾಡದೆ, ಭಾರೀ ಪ್ರಮಾಣದ ಜಮೀನನ್ನು ಹುಚ್ಚುಹುಚ್ಚಾಗಿ ನಗರೀಕರಣಗೊಳಿಸಲಾಯಿತು. ಬೇರೆಬೇರೆ ಮುಖ್ಯಮಂತ್ರಿಗಳು ನಿರ್ದೇಶನದಂತೆ ನಡೆಯುತ್ತಿದ್ದ ನಿರಂಕುಶ ಬಿಡಿಎಯ ನಾಯಕತ್ವ, ಯಾವುದೇ ಸಾರ್ವಜನಿಕ ಕಣ್ಗಾವಲೂ ಪರಿಣಾಮವಾಗಿ ಇರದೇ ಇದ್ದಾಗ, ಬೃಹತ್ತಾದ ಕಾರ್ಪೊರೆಟ್ ಕಟ್ಟಡ ಸಂಕೀರ್ಣಗಳನ್ನು ಎಲ್ಲೆಂದರಲ್ಲಿ ಕಟ್ಟಲು, ಬಡಾವಣೆಗಳನ್ನು ನಿರ್ಮಿಸಲು ಅನುಮತಿ ನೀಡಿತು. ಈ ಪ್ರಕ್ರಿಯೆಯಲ್ಲಿ ಹೂವು ಹಣ್ಣು ತರಕಾರಿಗಳ ತೋಟಗಾರಿಕೆಯ ಹೊಲಗಳನ್ನು ಮತ್ತು ಒದ್ದೆಜಮೀನುಗಳನ್ನೇ (ಸಾಮಾನ್ಯವಾಗಿ ಭತ್ತ ಬೆಳೆಯುತ್ತಿದ್ದ), ಒತ್ತೊತ್ತಾಗಿ ನಿರ್ಮಿಸಿದ ರಿಯಲ್ ಎಸ್ಟೇಟ್ ಸರಕಾಗಿ ಬದಲಾಯಿಸಲಾಯಿತು. ನೈಸರ್ಗಿಕವಾಗಿ ನೀರು ಇಂಗುವ ರಾಜಕಾಲುವೆಗಳ ಮತ್ತು ಕೆರೆಗಳು ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನೆಲಸಮಗೊಳಿಸಲಾಯಿತು. ಯೋಜಿತ ಅಭಿವೃದ್ಧಿಯು ಬೀದಿಬದಿಗೆ ಬಿತ್ತು. ಮಳೆ ನೀರನ್ನು ಇಂಗಿಕೊಳ್ಳುವ ಸ್ಪಾಂಜುಗಳಂತೆ ಕೆಲಸ ಮಾಡುತ್ತಿದ್ದ ಕಾಲುವೆಗಳನ್ನು ಇಕ್ಕಟ್ಟಾದ ಕಸಕಡ್ಡಿ, ತ್ಯಾಜ್ಯ, ಕೊಳೆನೀರು ಮತ್ತು ಘನತ್ಯಾಜ್ಯ ಇತ್ಯಾದಿಗಳನ್ನು ಹೊತ್ತೊಯ್ಯಬೇಕಾದ ತೋಡುಗಳಾಗಿ ಪರಿವರ್ತಿಸಲಾಯಿತು. ಇವೆಲ್ಲವೂ ಕೆರೆಗಳ ತಳವನ್ನು ಮುಚ್ಚಿದವು. ಇಂಥಾ ನಗರೀಕಣದ ಪರಿಣಾಮವಾಗಿ- ಮಳೆ ಬಂದಾಗ, ನೆರೆ ಬರುತ್ತದೆ. ಯಾಕೆಂದರೆ, ನೀರು ಹರಿದು ಹೋಗಲು ಜಾಗವಿಲ್ಲ ಮತ್ತು ನೀರನ್ನು ತುಂಬಿಸಿಕೊಳ್ಳಲು ಕೆರೆಗಳ ಹೊಟ್ಟೆಯಲ್ಲಿ ಜಾಗವಿಲ್ಲ. ಯಾಕೆಂದರೆ ಅವು ಕೊಳಚೆ, ಕಸಕಡ್ಡಿ, ತ್ಯಾಜ್ಯಗಳಿಂದ ತುಂಬಿದೆ.

ರಾಜ್ಯ ಸರಕಾರವು 1988ರಷ್ಟು ಹಿಂದೆಯೇ ಲಕ್ಮಣ ರಾವ್ ಸಮಿತಿಯನ್ನು ರಚಿಸಿತ್ತು. ಬೆಂಗಳೂರಿನ ಅಭಿವೃದ್ಧಿಗೆ ನಿರ್ಣಾಯಕವಾದ ಅರಣ್ಯ ನಾಶ, ಒದ್ದೆ ಭೂಮಿಯ ಸಂರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ವರದಿ ನೀಡುವಂತೆ ಕೇಳಲಾಗಿತ್ತು. ಸರಕಾರವು ಈ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ಅಂಗೀಕರಿಸಿತ್ತು. ಆದರೆ, ಅದನ್ನು ಆನುಷ್ಠಾನಗೊಳಿಸಲಿಲ್ಲ.

ಇದೇ ಹೊತ್ತಿನಲ್ಲಿ ಬಿಡಿಎಯು ತನ್ನ ಮೂಲಯೋಜನೆ ಅಥವಾ ಮಾಸ್ಟರ್ ಪ್ಲಾನ್‌ನಲ್ಲಿ ಒದ್ದೆ ಭೂಮಿಗಳ ಮಹತ್ವವನ್ನಾಗಲೀ, ನೀರು ಪೂರೈಕೆಯ ಅಗತ್ಯವನ್ನಾಗಲೀ, ನೆರೆಯಿಂದ ನಗರವನ್ನು ರಕ್ಷಿಸುವುದರ ಕುರಿತಾಗಲೀ ಯಾವುದೇ ಚಿಂತನೆಯನ್ನು ಮಾಡಲಿಲ್ಲ. ಜನರಿಗೆ ಉತ್ತರದಾಯಿಯಾಗದಿರುವ, ಮುಖ್ಯಮಂತ್ರಿಯವರಿಗೆ ಮಾತ್ರ ಉತ್ತರಿಸಬೇಕಿರುವ ಈ ನಿರಂಕುಶ ಪ್ರಾಧಿಕಾರವು ಕೆರೆ, ಕಾಲುವೆ, ತೋಡು, ಹಳ್ಳಗಳಿಂದ ಕಿಕ್ಕಿರಿದಿದ್ದ ಈ ಪ್ರದೇಶವನ್ನು ಒಂದು ರಿಯಲ್ ಎಸ್ಟೇಟ್ ಸರಕಾಗಿ ಮಾರ್ಪಡಿಸಿತು. ಬ್ರೋಕರುಗಳು ಮತ್ತು ಬಿಲ್ಡರುಗಳು ಭೂ ಪರಿವರ್ತನೆಯನ್ನು ಎಷ್ಟು ಸುಲಭವಾಗಿ ಮಾಡಿದರು ಎಂದರೆ, ಕಾನೂನುಬದ್ಧವಾಗಿ ಇದನ್ನು ಮಾಡಲು ಹೊರಟವರು ದಿಗ್ಭ್ರಾಂತರಾಗಿ, ಹತಾಶರಾಗಿ ಕುಳಿತಿರಬೇಕಾಯಿತು. ಮುಖ್ಯವಾಗಿ ಬೆಂಗಳೂರು ಬೆಳೆಯುವುದಕ್ಕೆ ಮುಂಚಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಂದಾಯ ಅಧಿಕಾರಿಗಳಾಗಿ ಜಿಲ್ಲಾಧಿಕಾರಿಗಳು ಪಕ್ಕವಾದ್ಯ ನುಡಿಸಿದರು.

ಭ್ರಷ್ಟಾಚಾರವು ಆಡಳಿತ ನಡೆಸಿತು. ಎಲ್ಲಾ ನಗರ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ, ಎಲ್ಲಾ ಪಾರಿಸರಿಕ ತತ್ವಗಳನ್ನು ಮತ್ತು ಮಿತಿಗಳನ್ನು ಮೀರಿ, ಕೃಷಿ ಮತ್ತು ಹೈನುಗಾರಿಕೆಯ ಜೀವನವನ್ನು ಅವಲಂಬಿಸಿರುವ ಜನರ, ನಗರದ ಬಡವರ ಬಗ್ಗೆ ಯಾವುದೇ ಕಾಳಜಿ ತೋರದೇ ಕಂದಾಯ ಅಧಿಕಾರಿಗಳಾಗಿರುವ ತಹಶೀಲ್ದಾರರು, ತಾವು ಹೊಂದಿರುವ ಭೂಪರಿವರ್ತನೆಯ ಅಧಿಕಾರವನ್ನು ಬಲಶಾಲಿಯಾದ ಅಸ್ತ್ರವನ್ನಾಗಿ ಬಳಸಿಕೊಂಡರು. ಹಣ ಕಕ್ಕಲು ಸಿದ್ಧವಿದ್ದವರು, ಹೊಲ, ಗದ್ದೆ, ಗೋಮಾಳ, ಜೌಗು ಇತ್ಯಾದಿ ಒದ್ದೆಭೂಮಿಗಳನ್ನು “ಅಭಿವೃದ್ಧಿ ಹೊಂದಿದ” ನಗರ ಪ್ರದೇಶಗಳಾಗಿ ಪರಿವರ್ತಿಸಲು ಶಕ್ತರಾದರು. ಅದು, ಭೌಗೋಳಿಕವಾಗಿ ಮೌಲ್ಯಮಾಪನ ಮಾಡಲಾದ ಜಮೀನಿನ ಮೌಲ್ಯವನ್ನು ತಿರಸ್ಕರಿಸುವುದಕ್ಕೆ ಸಂಕಷ್ಟದಲ್ಲಿದ್ದ ರೈತರಿಗೆ ಬಹಳ ಕಷ್ಟದ ಆಯ್ಕೆಯಾಗಿತ್ತು. ಇದರ ಪರಿಣಾಮವನ್ನು ಮತ್ತು ಅದರ ಅಯೋಜಿತ, ಅಡ್ಡಾದಿಡ್ಡಿ ವಿಸ್ತರಣೆಯು ಹೇಗೆ ಬೆಂಗಳೂರಿನ ಕತ್ತು ಹಿಸುಕುತ್ತಿದೆ ಎಂಬುದನ್ನು ಅಲ್ಲಿನ ಅರೆ ನಗರ ಪ್ರದೇಶಗಳ ಗೂಗಲ್ ಮ್ಯಾಪ್ ನಕ್ಷೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ.

ಇದು ಬರೀ ಅಧಿಕಾರಶಾಹಿಯ ಕೆಲಸವಾಗಿರಲು ಸಾಧ್ಯವಿಲ್ಲ. ಅವರು ಕೇವಲ ರಿಯಲ್ ಎಸ್ಟೇಟ್ ದಂಧೆಯಲ್ಲಿರುವ ಆದೇಶಗಳನ್ನು ಪಾಲಿಸಿದ್ದಾರಷ್ಟೇ. (ಇವರಲ್ಲಿ ಅನೇಕರು ಹಿಂದಿನ ಪಾಳೇಗಾರಿ ಜಮೀನುದಾರರು). ಅದು ಬಹಳ ದೊಡ್ಡ ಕಮಿಷನ್ನಿಗಾಗಿ ಮಾಡಿದ ಕೆಲಸವಾಗಿತ್ತು. ಈ ಬ್ರೋಕರುಗಳಲ್ಲಿ ಕೆಲವರು ಕಾಲ ಕಳೆದಂತೆ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಹಣಕಾಸು ಒದಗಿಸುವಷ್ಟು ಶಕ್ತರಾದರು. ಹೆಚ್ಚಿನ ಕಾರ್ಪೊರೇಟರುಗಳು, ಶಾಸಕರು ಮತ್ತು ಸಂಸದರ ಹಿನ್ನೆಲೆಯನ್ನು ನೀವು ಗಮನಿಸಿ. ಅವರು ಕೂಡಿಹಾಕಿದ ರಾಜಕೀಯ ಶಕ್ತಿಯು ತಮ್ಮ ಅತ್ಯಂತ ಯಶಸ್ವಿ ವ್ಯಾಪಾರ ವಹಿವಾಟುಗಳನ್ನು ಬೆಂಬಲಿಸುವ ಜಮೀನು ಬಳಕೆಯನ್ನು ರೂಪಿಸುವ ಯೋಜನೆ ಮತ್ತು ಕಾನೂನುಗಳನ್ನು ಮಾಡುವವರಲ್ಲಿ ತೊಡಗಿಸಿಕೊಂಡವರು: ಅದು ಎಷ್ಟೇ ಭ್ರಷ್ಟವಾಗಿದ್ದರೂ ಸರಿಯೇ ಎಂದು.

ಕಾಲಾನುಕ್ರಮದಲ್ಲಿ ಇಂಥ ಕೊಳಕು ರಿಯಲ್ ಎಸ್ಟೇಟ್ ಹಣವು ರಾಜಕೀಯದ ಸ್ವರೂಪವನ್ನೇ ಬದಲಾಯಿಸದೆ. ಇದರ ಫಲವನ್ನು ತಮ್ಮದಾಗಸಿಕೊಂಡವರು ’ಜಾಗತಿಕ ಮಟ್ಟದ’ ಅನುಕೂಲತೆಗಳನ್ನು ಐಟಿ/ಬಿಟಿ ಕ್ಷೇತ್ರದವರಿಗೆ ನೀಡಿದ ’ಸೌಲಭ್ಯ ಒದಗಿಸುವ ಮೆಗಾ ವ್ಯವಸ್ಥಾಪಕರು’. ಭಾರೀ ಪ್ರಮಾಣದ ಹಣಕಾಸು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ಹರಿದುಬಂದು ಗುರಿಗಳು ಬಲೂನಿನಂತೆ ಉಬ್ಬಿದವು. ಬೆಂಗಳೂರನ್ನು ’ಏರೋಸ್ಪೇಸ್ ಹಬ್’ ಆಗಿ ಬದಲಾಯಿಸಲಾಯಿತು. ಲಕ್ಷಾಂತರ ಅನಿವಾಸಿ ಭಾರತೀಯರಿಗೆ ಅತಿರಂಜಿತವಾಗಿ ಹೆಸರಿಸಿದ ಗೇಟೆಡ್ ಸಮುದಾಯಗಳು ಎರಡನೇ ಮನೆಯಾಯಿತು. ಇಂಥ ಯೋಜನೆಗಳಿಗೆ ಪಾರಿಸಾರಿಕ-ಸಾಮಾಜಿಕ ಪರಿಣಾಮ ಮತ್ತು ನಿರ್ವಹಣೆಯ ಚಿಂತೆಯಿಲ್ಲದೆ ಬೇಜವಾಬ್ದಾರಿಯಿಂದ ಜಮೀನನ್ನು ಒದಗಿಸಿಕೊಡಲಾಯಿತು.

ಆಡಳಿತ ವರ್ಗ-ರಾಜಕೀಯ-ರಿಯಲ್ ಎಸ್ಟೇಟ್-ಹೂಡಿಕೆದಾರ ವರ್ಗಗಳ ದುಷ್ಟಕೂಟ ಬೆಂಬಲಿಸುತ್ತಿರುವ ಈ ದೈತ್ಯ ’ಅಭಿವೃದ್ಧಿ’ ಎಲ್ಲ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿತು. ಪಾರಂಪರಿಕ ವಿವೇಕವನ್ನು ಬದಿಗೆ ತಳ್ಳಲಾಯಿತು ಮತ್ತು ಕೆಲವು ಉದಾಹರಣೆಗಳಲ್ಲಿ, ಬೊಮ್ಮನಹಳ್ಳಿ-ಕೋರಮಂಗಲ-ಬೆಳ್ಳಂದೂರು-ವರ್ತೂರು-ವೈಟ್‌ಫೀಲ್ಡ್-ಸರ್ಜಾಪುರ ಪ್ರದೇಶಗಳಲ್ಲಿ ಪರಿಸರ ಸುಸ್ಥಿರತೆಯ ಬಗ್ಗೆ ಯಾವುದೇ ಗಮನಹರಿಸದೆ ಒದ್ದೆ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಅವಕಾಶ ನೀಡಿ ಕಾಂಕ್ರೀಟ್ ತುಂಬಲಾಯಿತು. ಜಗತ್ತಿನ ಎರಡನೇ ಸಿಲಿಕಾನ್ ವ್ಯಾಲಿಯಾಗುವ ಹಾದಿಯಲ್ಲಿದ್ದ ಭಾರತದ ಐಟಿ ರಾಜಧಾನಿಗೆ, ಎಚ್ಚರಿಕೆಯ ಮತ್ತು ಒಳಗೊಳ್ಳುವ ಯೋಜಿತ ಬೆಂಗಳೂರಿಗೆ ಕಾಯಲು ಸಮಯವಿರಲಿಲ್ಲ.

ಈ ರೀತಿಯಾಗಿ ಅಡ್ಡಾದಿಡ್ಡಿಯಾಗಿ ಐಟಿ/ಬಿಟಿ ಕ್ಷೇತ್ರದ ಬೇಡಿಕೆಗಳನ್ನು ಪೂರೈಸಲಾಯಿತು. ಯೋಜನೆಯ ನಿಯಮಗಳನ್ನು ತಿರುಚಲಾಗಿ, ಭೂಮಿಯ ಬಳಕೆಯ ನಿಯಂತ್ರಣವನ್ನು ರಿಯಲ್ ಎಸ್ಟೇಟ್‌ನವರಿಗೆ ಮತ್ತವರ ಹೂಡಿಕೆದಾರರಿಗೆ ಬೇಕಾಂದಂತೆ ಬದಲಾಯಿಸಿಕೊಂಡಿದ್ದಕ್ಕೆ, ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಬ್ಲ್ಯಾಕ್ ರಾಕ್, ವಿ ವರ್ಕ್ ಇತ್ಯಾದಿ ಸಂಸ್ಥೆಗಳು ಧಾರಾಳ ಹೂಡಿಕೆ ಮಾಡಿದವು. ಅದೇ ಹೊತ್ತಿಗೆ ಭಾರತದ ಭಾರೀ ಡೆವಲಪರ್‌ಗಳು ಅಂದರೆ, ಪ್ರೆಸ್ಟೀಜ್, ಶೋಭಾ, ಪೂರ್ವಾಂಕರ, ಸಾಲಾರ್‌ಪುರಿಯಾ, ಬ್ರಿಗೇಡ್, ಮಂತ್ರಿ ಇತ್ಯಾದಿಗಳು ಸೇರಿಕೊಂಡವು. ಹಿಂದಿನ ಎಲ್ಲಾ ಪಾರಂಪರಿಕ ಗದ್ದೆ, ತೋಟಗಳನ್ನು ಮಹಾನಗರವಾಗಿ ಬದಲಾಯಿಸಲಾಯಿತು. ಸರಳವಾಗಿ ಹೇಳುವುದಾದರೆ, ಸಾರಿಗೆ, ಶಿಕ್ಷಣ, ವಸತಿ, ಆರೋಗ್ಯ, ಕುಡಿಯುವ ನೀರು ಇತ್ಯಾದಿಗಳಿಗೆ ಯಾವುದೇ ಮೂಲಭೂತ ಹೂಡಿಕೆ ಮಾಡಲಾಗಿಲ್ಲ. ನೀರು ಮತ್ತು ಪರಿಸರ ನಿರ್ವಹಣೆಯಂತೂ ಇಲ್ಲವೇ ಇಲ್ಲ. ಈ ಸಾರಿಗೆ ಸಂಕಷ್ಟಗಳು ಈ ಮಹಾಪ್ರಮಾದದ ಒಂದು ಸೂಚನೆಯಷ್ಟೇ.

ನಾವು ಈಗ ಚಿಂತಿಸಬೇಕಾದ ವಿಷಯವೆಂದರೆ ಹೇಗೆ ಈ ವಿಷವರ್ತುಲದಿಂದ ಹೊರಬರುವುದೆಂಬುದು. ಇರುವುದೆಲ್ಲವನ್ನೂ ಕಳೆದುಕೊಳ್ಳುತ್ತಿರುವ ಬಡ ಕುಟುಂಬಗಳಿಗೆ – ಇದು ಬಡವರು ಮತ್ತು ಕಾರ್ಮಿಕ ವರ್ಗ- ಮತ್ತು ಇವರಿಂದ ಲಾಭ ಪಡೆದ ಐಟಿ/ಬಿಟಿ ವಲಯದಲ್ಲಿ ನೌಕರಿ ಮಾಡುತ್ತಿರುವವರ ಸಮಯ, ಆರೋಗ್ಯ, ಅವಕಾಶ ಮತ್ತು ಸಂಪನ್ಮೂಲ ನಷ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುತ್ತಿರುವ ಭರವಸೆಯೇನೆಂದರೆ ಕಾಲುವೆ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ನಂತರ ಕಾಲುವೆಗಳನ್ನು ಕಾಂಕ್ರೀಟ್‌ನಿಂದ ತುಂಬುವುದು. ಇದು ಮುಂದೆ ಸಹಾಯಕ್ಕೆ ಬರುವುದೆಂದು ಅವರು ನಂಬಿರಬಹುದು. ಈ ಯೋಜನೆಗಾಗಿ ಸುಮಾರು 1500 ಕೋಟಿಯನ್ನು ನೀಡಲು ಸಿದ್ಧರಾಗಿದ್ದಾರೆ. ಆದರೆ ಈ ಯೋಜನೆ ಪರಿಹಾರ ನೀಡುವುದಿಲ್ಲವಷ್ಟೇ ಅಲ್ಲ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ, ಏಕೆಂದರೆ..

ಈಗ ಹೊಲಗದ್ದೆಗಳು, ಒದ್ದೆಭೂಮಿ ಮತ್ತು ಕೆರೆಗಳು ನಾಶಗೊಂಡಿರುವುದರಿಂದ ನೀರನ್ನು ಇಂಗುವ ಸ್ಪಾಂಜ್‌ನಂತೆ ಕೆಲಸ ನಿರ್ವಹಿಸಲು ಉಳಿದಿರುವುದು ಕಾಲುವೆಗಳು ಮಾತ್ರ. ಬಹುಷಃ ಹವಾಮಾನ ಬದಲಾವಣೆಯ ಕಾರಣದಿಂದ ಉಂಟಾಗಿರುವ ಏರುಪೇರುಗಳಿಂದ ಈ ವರ್ಷದ ಮೇ ತಿಂಗಳಿಂದಲೂ ಸುರಿಯುತ್ತಿರುವ ಮಳೆ ಮತ್ತು ಈಗ ನಾವು ನೋಡುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಇದು ಬಹಳ ಗಂಭೀರವಾದ ಸಮಸ್ಯೆ. ಇಂತಹ ಮಳೆ ಪದೇಪದೇ ಬರುವ ಸಾಧ್ಯತೆಯಿದೆ. ಇಂತಹ ಸನ್ನಿವೇಶದಲ್ಲಿ, ಕಾಲುವೆಗಳನ್ನು ಕಾಂಕ್ರೀಟ್‌ನಿಂದ ತುಂಬುವುದು ಅವುಗಳು ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ತೀವ್ರವಾಗಿ ಕುಗ್ಗಿಸುತ್ತದೆ ಮತ್ತು ನೀರನ್ನು ಈ ಕಾಂಕ್ರೀಟ್ ನೆಲದ ಮೇಲೆ ನುಗ್ಗುವಂತೆ ಮಾಡಿ ಕೆರೆಗಳ ಕಡೆಗೆ ಹರಿಸುತ್ತದೆ. ಆದರೆ, ಸಾಮಾನ್ಯವಾಗಿ ಒಣಗುವ ಮತ್ತು ಹೊಸ ನೀರನ್ನು ತುಂಬಿಸಿಕೊಳ್ಳುವ ಪ್ರಕ್ರಿಯೆಯಲ್ಲಿರಬೇಕಾದ ಕೆರೆಗಳು ಈಗ ಯಾವಾಗಲೂ ತುಂಬಿರುತ್ತವೆ ಮತ್ತು ಕಸ ಹಾಗೂ ಕೊಳಚೆ ನೀರಿನಿಂದ ಭರ್ತಿಯಾಗಿವೆ. ಇದು ಕೆರೆಗಳನ್ನು ಉಕ್ಕಿಹರಿಯುವಂತೆ ಮಾಡಿ, ಹಿಂದೆ ತಗ್ಗಿನಲ್ಲಿ ಗದ್ದೆಗಳಾಗಿದ್ದ ಪ್ರದೇಶಕ್ಕೆ ನೀರು ಹರಿಯುವಂತೆ ಮಾಡುತ್ತದೆ. ಕೆರೆಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಅವುಗಳು ಸುಲಭಕ್ಕೆ ಕೋಡಿ ಹರಿಯಬಹುದು. ಆದುದರಿಂದ ಕಾಂಕ್ರೇಟ್‌ನಿಂದ ತುಂಬುವ ಮತ್ತು ಕಾಲುವೆಗಳ ಸುತ್ತ ಗೋಡೆಗಳನ್ನು ಕಟ್ಟುವುದು ಈ ಪ್ರವಾಹವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಹೊರ ವರ್ತುಲ ರಸ್ತೆಯ ಪ್ರದೇಶದಲ್ಲಿ ಈಗ ಆಗಿರುವುದು ಅದೇ. ಇಲ್ಲಿ ಸಮಸ್ಯೆಗೆ ತುತ್ತಾಗಿರುವವರು ಪ್ರವಾಹದಿಂದ ಹೊರಬರಲು ಟ್ರ್ಯಾಕ್ಟರ್‌ಗಳು ಅಥವಾ ಬೋಟ್‌ಗಳನ್ನು ಅವಲಂಬಿಸಬೇಕಿದೆ ಮತ್ತು ಇದನ್ನು ಹೊರ ನದಿಯ ರಸ್ತೆ ಎಂದು ಕರೆಯಲು ಪ್ರಾರಂಭಿಸಿದ್ದಾರೆ.

ನೀರನ್ನು ಸಂಗ್ರಹಿಸುವ ಸಂಪ್‌ಗಳು ಪ್ರವಾಹದ ನೀರಿನಿಂದ ಕಲುಷಿತವಾದರೆ ಸಮಸ್ಯೆ ಇನ್ನೂ ಗಂಭೀರವಾಗಬಹುದು. ಇದು ಕಾಲೆರಾ ಸಂಕ್ರಾಮಿಕಕ್ಕೆ ಎಡೆಮಾಡಿಕೊಡಬಹುದು. ಬೆಂಗಳೂರಿಗೆ ನೀರು ಒದಗಿಸುವ ಮಂಡ್ಯ ನೀರು ಸರಬರಾಜು ಸ್ಟೇಷನ್ ಕೂಡ ಪ್ರವಾಹಪೀಡಿತವಾಗಿದೆ ಮತ್ತು ಮಾಮೂಲಿಯಂತೆ ನೀರು ಸರಬರಾಜಿಗೆ ಮತ್ತೆ ಚಾಲನೆ ಸಿಗುವುದಕ್ಕೆ ಇನ್ನೂ ಹಲವು ದಿನಗಳು ಹಿಡಿಯಬಹದು. ಸಾರ್ವಜನಿಕ ಆರೋಗ್ಯ ಹಿತಾಸಕ್ತಿಯ ದೃಷ್ಟಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂದಿನ ಹಲವು ದಿನಗಳವರೆಗೆ ಶುದ್ಧ ನೀರಿನ ಪೂರೈಕೆ ಅತ್ಯಗತ್ಯವಾಗಿದೆ.

ಈ ಎಲ್ಲಾ ಸಮಸ್ಯೆಯಿಂದ ಬಿಡಿಸಿಕೊಳ್ಳುವುದು ಉತ್ತರದಾಯಿತ್ವದ ರಾಜಕೀಯವನ್ನು ಬಯಸುತ್ತದೆ. ಎಚ್ಚರಿಕೆಯಿಂದ ಕಂಡುಕೊಂಡ ಮಧ್ಯಪ್ರವೇಶಿಕೆಗೆ ಅಲ್ಲಿ ಜಾಗಸಿಗಬೇಕಿದೆ. ಬಹಳ ಎಚ್ಚರಿಕೆಯ ಪರಿಹಾರಗಳನ್ನು ಈಗಾಗಲೇ ಬರೆದಿಡಲಾಗಿದೆ ಮತ್ತು ಅವಕ್ಕೆ ಕಾನೂನಿನ ಒಪ್ಪಿಗೆಯೂ ಸಿಕ್ಕಿದೆ: 2008ರಲ್ಲಿ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಮೂಡಿಬಂದ 2012ರ ಜಸ್ಟಿಸ್ ಎನ್.ಕೆ ಪಾಟೀಲ್ ಸಮಿತಿ ವರದಿ ಸಮಗ್ರವಾಗಿದೆ. ಒಂಭತ್ತು ಸರ್ಕಾರದ ಪ್ರಾಧಿಕಾರಗಳು ಇದನ್ನು ಒಪ್ಪಿಕೊಂಡು ದಶಕವೇ ಕಳೆದಿದ್ದರೂ, ಅವುಗಳು ಈ ವರದಿಯನ್ನು ರೂಪಿಸುವಲ್ಲಿ ಭಾಗವಾಗಿದ್ದರೂ, ಕೋರ್ಟ್‌ನ ಉನ್ನತ ಪೀಠ ಸಮಿತಿಯ ಶಿಫಾರಸ್ಸುಗಳನ್ನು ಪಾಲಿಸಲು ನಿರ್ದೇಶನ ನೀಡಿದ್ದರೂ, ರಾಜ್ಯ ಸರ್ಕಾರ ಮತ್ತು ನಾಗರಿಕ ಪ್ರಾಧಿಕಾರಗಳು ಉಪೇಕ್ಷಿಸುತ್ತಲೇ ಬಂದಿವೆ.

ಪ್ರವಾಹದ ಸಮಯದಲ್ಲಿ ನೀರು ಇಂಗುವ ಮತ್ತು ಬೇರೆ ಸಮಯದಲ್ಲಿ ನೀರು ಶುದ್ಧೀಕರಿಸುವ ಕೆಲಸ ಮಾಡುತ್ತಿದ್ದ ಕಾಲುವೆಗಳನ್ನು ಹೇಗೆ ಕಿರಿದುಗೊಳಿಸಲಾಯಿತು ಮತ್ತು ಹೇಗೆ ಕಾಂಕ್ರೀಟ್ ಇಂದ ತುಂಬಲಾಯಿತು ಎಂಬುದು ಸ್ಪಷ್ಟವಾಗಿದೆ. ಕೆರೆಗಳ ಸುತ್ತ ನಡೆಯಲು ಮಾರ್ಗಗಳನ್ನು ರಚಿಸಿ ಬೇಲಿ ಹಾಕಿರವುದು ಕೂಡ ನೀರಿನ ಮೂಲಗಳಿಗೆ ನೀರು ಹರಿಯುವುದಕ್ಕೆ ಅಡ್ಡಿಪಡಿಸುವುದು ಸ್ಪಷ್ಟವಾಗಿದೆ. ಇದು ಕೋಡಿ ಹರಿಯುವುದಕ್ಕೂ ಕಾರಣವಾಗುತ್ತದೆ. ಕೆರೆಗಳು, ಕಾಲುವೆಗಳು ಮತ್ತು ಇತರೆ ಒದ್ದೆ ಭೂಮಿಗಳನ್ನು, ಸಮುದಾಯಗಳನ್ನು ಒಳಗೊಂಡು ಉಳಿಸುವ ಯಾವುದೇ ಆಸಕ್ತಿ ಆಡಳಿತಕ್ಕೆ ಇಲ್ಲದಿರುವುದನ್ನು ಸುಲಭವಾಗಿ ತಿಳಿಯಬಹುದು. ಬದಲಿಗೆ ಪ್ರವಾಹಗಳನ್ನು ಮೇಗಾ ಯೋಜನೆಗಳನ್ನು ನಿರ್ಮಿಸಲು ಅವಕಾಶವನ್ನಾಗಿ ಬಳಸಲಾಗುತ್ತಿದೆ; ಅದು ಕಾಲುವೆಗಳ ಮೇಲೆ ಕಾಂಕ್ರೀಟ್ ತುಂಬುವುದಿರಬಹುದು, ರಸ್ತೆಗಳ ’ವೈಟ್ ಟಾಪಿಂಗ್’ ಇರಬಹುದು ಸ್ಪಷ್ಟವಾಗಿ ಎದ್ದುಕಾಣುತ್ತಿದೆ. ಇವೆಲ್ಲವೂ ಪ್ರವಾಹಕ್ಕೆ ಕೊಡುಗೆಯನ್ನು ನೀಡಿವೆ. ಮುಂದಿನ ವರ್ಷಗಳಲ್ಲಿ ಪ್ರವಾಹವನ್ನು ಇನ್ನಷ್ಟು ಭೀಕರಗೊಳಿಸಬಲ್ಲ ಇಂತಹ ಯೋಜನೆಗಳ ಮೇಲೆ ಅಮೂಲ್ಯ ಸಂಪನ್ಮೂಲಗಳನ್ನು ವ್ಯಯಿಸುವುದರ ಬದಲು, ಆಳವಾದ ಪ್ರಾದೇಶಿಕ ಪ್ರಜಾಪ್ರಭುತ್ವದ ಮಾರ್ಗದಿಂದ ಸಾರ್ವಜನಿಕರನ್ನು ಒಳಗೊಳ್ಳುವುದು ಮತ್ತು ಪ್ರತಿ ವಾರ್ಡ್ ಹಾಗೂ ಉಪ ವಾರ್ಡ್‌ಗಳ ಮಟ್ಟದಲ್ಲಿ ಇಂತಹ ಭೀಕರ ಪ್ರವಾಹಗಳನ್ನು ತಡೆಗಟ್ಟಲು ಮಾತ್ರವಲ್ಲದೆ ನಗರ ರೂಪಾಂತರಗಳು ಇಂತಹ ಬದಲಿಸಲಾಗದ ದುರಂತಗಳಾಗಿ ಮಾರ್ಪಡದೆ ಇರಲು ಯೋಜನೆ ರೂಪಿಸಲು ಸಹಕರಿಸುವಲ್ಲಿ ವ್ಯಯಿಸಬೇಕಿದೆ.

ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ದುಃಖದ ನೆನಪಿನ ದಿನವೇ ಶಿಕ್ಷರ ದಿನವನ್ನೂ ಆಚರಿಸುತ್ತಿರುವಾಗ, ಕೆಲವು ಸರಳ ವಿವೇಕದ ನಡೆಗಳು ಬೆಂಗಳೂರಿನ ಆಡಳಿತ ವ್ಯವಸ್ಥೆಯ ಭಾಗವಾಗಬಲ್ಲವು ಎಂದು ನಿರೀಕ್ಷಿಸಬಹುದೇ?

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಪರಿಸರ ಸಂರಕ್ಷಕ ಕಾರ್ಯಕರ್ತರು ಹಾಗೂ ’ಭಾರತದಲ್ಲಿ ಪರಿಸರಕ್ಕಾಗಿ ನ್ಯಾಯ’ ಮೈತ್ರಿ ಬಳಗದ ಭಾಗವಾಗಿದ್ದಾರೆ.


ಇದನ್ನೂ ಓದಿ: ಜನಾಂದೋಲನಗಳ ಹಾಗೂ ರಾಜಕೀಯ ಪಕ್ಷಗಳ ಶಕ್ತಿಯನ್ನು ಜೋಡಿಸುವ ಅಗತ್ಯ: ಯೋಗೇಂದ್ರ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...