Homeಮುಖಪುಟಜನಾಂದೋಲನಗಳ ಹಾಗೂ ರಾಜಕೀಯ ಪಕ್ಷಗಳ ಶಕ್ತಿಯನ್ನು ಜೋಡಿಸುವ ಅಗತ್ಯ: ಯೋಗೇಂದ್ರ ಯಾದವ್

ಜನಾಂದೋಲನಗಳ ಹಾಗೂ ರಾಜಕೀಯ ಪಕ್ಷಗಳ ಶಕ್ತಿಯನ್ನು ಜೋಡಿಸುವ ಅಗತ್ಯ: ಯೋಗೇಂದ್ರ ಯಾದವ್

ಇದಕ್ಕಿಂತ ಮುನ್ನ ಎಂದೂ ನಮ್ಮ ಮೇಲೆ ಇಷ್ಟು ನಿರ್ಲಜ್ಜತೆಯಿಂದ ದ್ವೇಷ, ವಿಭಜನೆ ಹಾಗೂ ಭೇದಭಾವಗಳನ್ನು ಹೇರಲಾಗಿದ್ದಿಲ್ಲ. ಇದಕ್ಕಿಂತ ಮುಂಚಿತವಾಗಿ ಎಂದೂ ನಾವು ಈ ಮಟ್ಟಿಗೆ ಬೇಹುಗಾರಿಕೆ, ಪ್ರೊಪಗಾಂಡಾ ಹಾಗೂ ಮಿಥ್ಯಾತಂತ್ರಕ್ಕೆ (ಸುಳ್ಳಿನ ತಂತ್ರಗಾರಿಕೆ) ಬಲಿಯಾಗುವ ಪರಿಸ್ಥಿತಿ ಇದ್ದಿಲ್ಲ.

- Advertisement -
- Advertisement -

ಸಂಯುಕ್ತ ಕಿಸಾನ್ ಮೋರ್ಚಾದ ಸಮನ್ವಯ ಸಮಿತಿಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂಬ ಸುದ್ದಿ ಹರಡಲು ಶುರುವಾದ ಕೂಡಲೇ ಹಲವಾರು ಶುಭಚಿಂತಕರು ಕರೆ ಮಾಡಲು ಶುರು ಮಾಡಿದರು.

“ಏನಾಯ್ತು? ಏನಾದರೂ ಮನಸ್ತಾಪವಾಯಿತೇ? ಮೋರ್ಚಾದಲ್ಲಿ ಒಡಕು ಉಂಟಾಗಿದೆಯೇ?” ಖಂಡಿತವಾಗಿಯೂ ಇಲ್ಲ ಎಂದು ನಾನು ಹೇಳಿದೆ. ನಾನು ಸ್ವಇಚ್ಛೆಯಿಂದ ನನ್ನನ್ನು ಸಮನ್ವಯ ಸಮಿತಿಯಿಂದ ತೆಗೆಯಬೇಕು ಎಂಬ ಪ್ರಸ್ತಾಪ ಇಟ್ಟಿದ್ದೆ. ಅದನ್ನು ಸೆಪ್ಟೆಂಬರ್ 4ರಂದು ನಡೆದ ಸಭೆಯಲ್ಲಿ ಇಡಲಾಗಿತ್ತು. ನನ್ನ ಸ್ಥಾನದಲ್ಲಿ ’ಜೈ ಕಿಸಾನ್ ಆಂದೋಲನ’ದ ಅಧ್ಯಕ್ಷ ಅವಿಕ್ ಸಾಹಾ ಅವರು ಸಮಿತಿಯ ಕೆಲಸ ಮಾಡಲು ಲಭ್ಯವಿರುತ್ತಾರೆ. ನನ್ನ ಸಂಘಟನೆ ’ಜೈ ಕಿಸಾನ್ ಆಂದೋಲನ್’ ನಿಸ್ಸಂದೇಹವಾಗಿಯೂ ಸಂಯುಕ್ತ ಕಿಸಾನ್ ಮೋರ್ಚಾದ ಒಂದು ಸ್ಥಾಪಕ ಸಂಘಟನೆಯಾಗಿದೆ. ಮೋರ್ಚಾದ ಯಾವುದೇ ತೀರ್ಮಾನವನ್ನು ಅನುಷ್ಠಾನಗೊಳಿಸುವಲ್ಲಿ ಒಬ್ಬ ಸೈನಿಕನಂತೆ ನಾನು ಸದಾ ಲಭ್ಯವಿರುವೆ.

ಇನ್ನೂ ಬೇರೆ ತರಹದ ಕರೆಗಳೂ ಇದ್ದವು:

“ನೀವು ಮೋರ್ಚಾದೊಂದಿಗೆ ಇದ್ದೀರಿ ಅಂದಮೇಲೆ ಸಮನ್ವಯ ಸಮಿತಿಯಿಂದ ಹೊರಬರುವ ಅವಶ್ಯಕತೆ ಏನಿದೆ? ನೀವೂ ರಾಜಕೀಯ ಮಾಡಬಯಸುತ್ತೀರಿ ಎಂಬ ಮಾತುಗಳು ಕೇಳಿಬರುತ್ತಿವೆ?” ಕೆಲವ್ಯಾವೋ ಮಾಧ್ಯಮಗಳಲ್ಲಿ ನಾನು ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದೇನೆ ಎಂಬ ವದಂತಿ ಹಬ್ಬಿಸಿದ್ದರು. ಈ ಮಿತ್ರರಿಗೂ ನನ್ನ ಉತ್ತರ ನೇರವಾಗಿತ್ತು; ರಾಜಕೀಯದಲ್ಲಿ ನಾನು ಈಗಲ್ಲ ಕನಿಷ್ಠ ಹತ್ತು ವರ್ಷದಿಂದ ಇದ್ದೇನೆ. ನಾನು ಯಾವಾಗಲೂ ಹೇಳಿದ್ದೇನೆಂದರೆ, ಶುಭವನ್ನು ವಾಸ್ತವದಲ್ಲಿ ಬದಲಿಸುವುದಕ್ಕೆ ಇರುವ ಹೆಸರೇ ರಾಜಕಾರಣ. ಹಾಗಾಗಿ ರಾಜಕಾರಣ ನಮ್ಮ ಯುಗಧರ್ಮವಾಗಿದೆ. ಒಂದು ವೇಳೆ ದೇಶ ಸುಧಾರಣೆ ಆಗಬೇಕಾದರೆ, ಪ್ರಜಾಪ್ರಭುತ್ವ ಉಳಿಸಬೇಕಾದರೆ ರಾಜಕಾರಣ ಮಾಡಬೇಕಾಗುತ್ತದೆ. ಸ್ವರಾಜ್ ಇಂಡಿಯಾ ಹೆಸರಿನ ರಾಜಕೀಯ ಪಕ್ಷದ ಸಂಸ್ಥಾಪಕ ಸದಸ್ಯನಾಗುವ ಸೌಭಾಗ್ಯವೂ ಸಿಕ್ಕಿದೆ. ಅಲ್ಲದೆ ಇಂದಿಗೂ ನಾನು ನನ್ನ ರಾಜಕೀಯ ಮನೆಯಲ್ಲಿಯೇ ಇದ್ದೇನೆ. ಕಾಂಗ್ರೆಸ್ ಆಯೋಜಿಸುತ್ತಿರುವ “ಭಾರತ ಜೋಡೊ ಯಾತ್ರಾ”ಗೆ ಸಮರ್ಥನೆ ನೀಡುವ ನಿರ್ಣಯ ನನ್ನ ವೈಯಕ್ತಿಕ ನಿರ್ಣಯವಾಗಿಲ್ಲ. ಇದು ನನ್ನ ಪಕ್ಷದ ಎಲ್ಲಾ ಸಂಗಾತಿಗಳ ಸಾಮೂಹಿಕ ನಿರ್ಣಯವಾಗಿದೆ.

ಇಲ್ಲಿ ನನ್ನ ರಾಜೀನಾಮೆಗೆ ಸಂಬಂಧಿಸಿದ ಈ ಎರಡು ಪ್ರತಿಕ್ರಿಯೆಗಳನ್ನು ಉಲ್ಲೇಖಿಸುವ ಉದ್ದೇಶ ನನ್ನ ಒಂದು ನಿರ್ಣಯದ ಮೇಲೆ ಬೆಳಕು ಚೆಲ್ಲುವುದು ಅಲ್ಲ. ಈ ಪುಟ್ಟ ಉದಾಹರಣೆಯು ನಮ್ಮ ಸಾರ್ವಜನಿಕ ಜೀವನದ ಒಂದು ದೊಡ್ಡ ಅಸಂಗತತೆಯ ಕಡೆಗೆ ಬೊಟ್ಟು ಮಾಡುತ್ತದೆ. ಇಂದು ನಮ್ಮ ದೇಶದಲ್ಲಿ ಲೋಕತಾಂತ್ರಿಕ ರಾಜಕಾರಣದ ಶಕ್ತಿಯು ಎರಡು ಭಾಗಗಳಲ್ಲಿ ವಿಂಗಡನೆಯಾಗಿದೆ. ಒಂದು ಕಡೆ ರಾಜಕೀಯ ಪಕ್ಷಗಳಿವೆ, ಅವುಗಳು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವ ಮಶೀನ್‌ಗಳಾಗಿವೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಸರಾಸರಿ ಕಾರ್ಯಕರ್ತರು ಒಂದೋ ಅಧಿಕಾರದ ಸುಖ ಭೋಗಿಸುತ್ತಾನೆ/ಳೆ ಅಥವಾ ಅಧಿಕಾರದಲ್ಲಿ ಬರಲು ಕಾಯುತ್ತಾನೆ/ಳೆ ಹಾಗೂ ಅದಕ್ಕಾಗಿ ಶ್ರಮಿಸುತ್ತಾಳೆ/ನೆ. ಈ ಎರಡರ ತೀರ್ಮಾನವೂ ಚುನಾವಣೆಗಳಲ್ಲಿ ಆಗುವುದರಿಂದ, ಪಕ್ಷದ ಎಲ್ಲಾ ಗಮನ ಮತ್ತು ಶಕ್ತಿ ಚುನಾವಣೆಯ ಕೇಂದ್ರಿತವಾಗಿಯೇ ಇರುತ್ತವೆ. ಮೊದಲು ಹೇಳಲಾಗುತ್ತಿತ್ತು, ರಾಜಕೀಯ ಪಕ್ಷ ರಚಿಸುವ ಅರ್ಥವೇನೆಂದರೆ: ಕಾರ್ಯಕರ್ತ, ಕಾರ್ಯಕ್ರಮ, ಕಾರ್ಯಾಲಯ ಹಾಗೂ ಕೋಷ. ಹೇಗೆ ರಾಜಕೀಯ ಪಕ್ಷಗಳು ಪೊಳ್ಳಾಗುತ್ತ ಹೋದವೋ, ಹಾಗೆಯೇ ರಾಜಕಾರಣದ ಈ ನಾಲ್ಕೂ ಛಾಯೆಗಳು ಕಣ್ಮರೆಯಾದವು. ಇಂದು ರಾಜಕೀಯ ಪಕ್ಷಗಳ ಬಳಿ ವಿಶಾಲವಾದ ಜನ ಸಮರ್ಥನೆಯಿದೆ, ದುಡ್ಡು ಮತ್ತು ಮೀಡಿಯಾದ ದೊಡ್ಡ ತಂತ್ರವಿದೆ, ಮುಖಂಡರುಗಳ ದೊಡ್ಡ ದರಬಾರುಗಳಿವೆ ಆದರೆ ಅಲ್ಲಿ ವಿಚಾರವೂ ಇಲ್ಲ ಹಾಗೂ ಆ ವಿಚಾರಗಳನ್ನು ಅನುಷ್ಠಾನಗೊಳಿಸಬಲ್ಲ ಸಂಘಟನೆಯೂ ಇಲ್ಲ.

ಇನ್ನೊಂದು ಕಡೆ ಜನ ಆಂದೋಲನಗಳಿವೆ, ಅವುಗಳ ಬಳಿ ಶಕ್ತಿ ಇದೆ, ವಿಚಾರಗಳಿವೆ, ಪ್ರತಿರೋಧ ಮಾಡುವ ಕ್ಷಮತೆ ಇದೆ. ಆದರೆ ಅವುಗಳು ಇಂದಿನ ಲೋಕತಾಂತ್ರಿಕ ರಾಜಕಾರಣದಲ್ಲಿ ಪರಿಣಾಮ ಬೀರಲು ಸಾಧ್ಯವಿಲ್ಲ. ಇತ್ತೀಚಿಗೆ, ರೈತರ ಚಳವಳಿಯ ಶಕ್ತಿಯ ಒಂದು ಮಾದರಿಯನ್ನು ದೇಶ ನೋಡಿದೆ. ಆದರೆ, ದೇಶದಲ್ಲಿ ಇಂತಹ ಇತರ ಸಂಘಟನೆಗಳೂ ಇವೆ, ಈ ಸಂಘಟನೆಗಳಲ್ಲಿಯೂ ಇಂತಹ ಶಕ್ತಿಯಿದೆ. ಆದರೆ ತಮ್ಮ ಎಲ್ಲಾ ಶಕ್ತಿಯನ್ನು ಬಳಸಿ ದೆಹಲಿಯಲ್ಲಿ ಅಂತಹ ಮೋರ್ಚಾ ಕಟ್ಟುವಲ್ಲಿ ಸಮರ್ಥರಾಗಿಲ್ಲ. ಇದರಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಆಂದೋಲನ, ನಿರುದ್ಯೋಗಿ ಯುವಕರ ಅಂದೋಲನ, ಮಹಿಳಾ ಸಬಲೀಕರಣದ ಚಳವಳಿ, ದಲಿತ ಆದಿವಾಸಿ ಹಾಗೂ ಇತರ ಹಿಂದುಳಿದ ವರ್ಗಗಳ ಆಂದೋಲನ ಅಥವಾ ಮದ್ಯ ನಿಷೇಧದಂತಹ ವಿಷಯಗಳನ್ನಿಟ್ಟುಕೊಂಡು ನಡೆಯುವ ಆಂದೋಲನಗಳೂ ಇವೆ. ಈ ದೇಶದ ಚಳವಳಿಗಳಲ್ಲಿ ನೆಲಮಟ್ಟದಲ್ಲಿ ಜನರನ್ನು ಸೇರಿಸದೇ ಇರುವಂತಹ ಯಾವುದೇ ಒಂದು ಮೂಲೆ ಇರಲಾರದು. ಈ ಚಳವಳಿಗಳು ಚುನಾವಣೆಯಿಂದ ಅಂತರ ಕಾಯ್ದುಕೊಳ್ಳುತ್ತವೆ. ಆದರೆ ಇವುಗಳು ರಾಜಕೀಯೇತರ ಚಳವಳಿಗಳಲ್ಲ. ಇವರುಗಳ ವಿಚಾರಧಾರೆ, ದೇಶ ಮತ್ತು ಜಗತ್ತಿನ ಪ್ರಶ್ನೆಗಳ ಬಗ್ಗೆ ಇವರುಗಳ ಧೋರಣೆ ಹಾಗೂ ಆಡಳಿತದ ಪ್ರತಿರೋಧ ಮಾಡುವ ಇವರ ಸಾಮರ್ಥ್ಯ ಈ ಆಂದೋಲನಗಳನ್ನು ಆಳವಾಗಿ ರಾಜಕೀಯವಾಗಿಸುತ್ತವೆ. ಆದರೆ, ಈ ನೆಲಮಟ್ಟದ ಚಳವಳಿಗಳ ಇತಿಹಾಸವೇ ಹೇಗಿದೆಯೆಂದರೆ ಅದು ಒಂದು ಪುಟ್ಟ ಪ್ರದೇಶ ಅಥವಾ ಸಣ್ಣ ವರ್ಗದಲ್ಲಿಯೇ ದಟ್ಟವಾಗಿ ಹೊರಹೊಮ್ಮುತ್ತವೆ. ಹಾಗಾಗಿಯೇ ಮತ ರಾಜಕಾರಣದ ಪ್ರಶ್ನೆ ಉದ್ಭವಿಸಿದಾಗ ಈ ಚಳವಳಿಗಳ ನೇರ ಪರಿಣಾಮ ಆ ಅಧಿಕಾರದ ಚುನಾವಣಾ ಆಟದಲ್ಲಿ ಪ್ರಭಾವಕಾರಿಯಾಗಿರುವುದಿಲ್ಲ.

ದೇಶದ ರಾಜಕಾರಣದಲ್ಲಿ ಈ ದ್ವಂದ್ವತೆ ಹೊಸದೇನಲ್ಲ. ಎಂಭತ್ತರ ದಶಕದಿಂದಲೇ ಭಾರತೀಯ ರಾಜಕಾರಣದ ವಿದ್ವಾಂಸರು ಪಕ್ಷವಲ್ಲದ ರಾಜಕಾರಣದ ಪ್ರವೃತ್ತಿಯನ್ನು ಗುರುತಿಸಲು ಪ್ರಾರಂಭಿಸಿದರು. ಪ್ರೊ. ರಜನಿ ಕೊಠಾರಿಯಂತಹ ವಿದ್ವಾಂಸರ ನಿಲುವಿನ ಪ್ರಕಾರ, ಇತಿಹಾಸದ ಈ ಘಟ್ಟದಲ್ಲಿ ಸಾಮಾಜಿಕ ಬದಲಾವಣೆಗೆ ಪಕ್ಷಗಳ ರಾಜಕೀಯಕ್ಕೆ ಬದಲಿಗೆ ಪಕ್ಷಗಳಿಗೆ ಸೇರದ ರಾಜಕೀಯವೇ ಹೆಚ್ಚು ಪ್ರಸ್ತುತ ಎಂಬುದಾಗಿತ್ತು. ಆದರೆ ಇಂದು ಆ ಪರಿಸ್ಥಿತಿ ಉಲ್ಟಾ ಆಗಿದೆ. ಲೋಕತಾಂತ್ರಿಕ ರಾಜಕೀಯದೊಳಗೆ ಪಕ್ಷಾತೀತ ರಾಜಕಾರಣದ ಸ್ವಾಯತ್ತತೆಯನ್ನು ಉಳಿಸುವುದು ಇಂದಿನ ಮುಖ್ಯ ಸವಾಲಾಗಿಲ್ಲ. ಬದಲಿಗೆ ಲೋಕತಾಂತ್ರಿಕ ರಾಜಕಾರಣವನ್ನು ಉಳಿಸುವುದು ಇಂದಿನ ಸವಾಲಾಗಿದೆ. ಇಂತಹ ಸಮಯದಲ್ಲಿ ನಮ್ಮ ಸವಾಲು ಸಂಸದೀಯ ವಿರೋಧಪಕ್ಷ ಹಾಗೂ ಬೀದಿ ಹೋರಾಟಗಳ ಸಮನ್ವಯ ಸಾಧಿಸಿ ಒಂದು ನಿಜವಾದ ವಿರೋಧಪಕ್ಷವನ್ನು ಕಟ್ಟುವುದೇ ಆಗಿದೆ.

ಇಂದು ನಮ್ಮ ದೇಶ ಒಂದು ಅಭೂತಪೂರ್ವ ಸಂಕಷ್ಟವನ್ನು ಹಾದುಹೋಗುತ್ತಿದೆ. ದೇಶದ ಪ್ರಮುಖ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ಒಂದು ಹೇಳಿಕೆಯಲ್ಲಿ ಈ ಅಪಾಯವನ್ನು ಅಕ್ಷರರೂಪಕ್ಕಿಳಿಸಿದ್ದಾರೆ: “ಇಂದು ಸಂವಿಧಾನಿಕ ಮೌಲ್ಯಗಳನ್ನು ಹಾಗೂ ಲೋಕತಾಂತ್ರಿಕ ಮಾನದಂಡಗಳನ್ನು ನಿರ್ಲಜ್ಜತೆಯಿಂದ ಧ್ವಂಸಗೊಳಿಸಲಾಗುತ್ತಿದೆ. ಇಂದು ಭಾರತದ ಸ್ವಧರ್ಮವು ಒಂದು ನಿಯೋಜಿತ ದಾಳಿಯನ್ನು ಎದುರಿಸುತ್ತಿದೆ. ಇದಕ್ಕಿಂತ ಮುನ್ನ ನಮ್ಮ ಗಣತಂತ್ರದ ಎಲ್ಲಾ ಮೌಲ್ಯಗಳ ಮೇಲೆ ಒಂದೇ ಸಮಯದಲ್ಲಿ ಇಷ್ಟು ದೊಡ್ಡ ಘೋರವಾದ ದಾಳಿ ಆಗಿದ್ದಿಲ್ಲ. ಇದಕ್ಕಿಂತ ಮುನ್ನ ಎಂದೂ ನಮ್ಮ ಮೇಲೆ ಇಷ್ಟು ನಿರ್ಲಜ್ಜತೆಯಿಂದ ದ್ವೇಷ, ವಿಭಜನೆ ಹಾಗೂ ಭೇದಭಾವಗಳನ್ನು ಹೇರಲಾಗಿದ್ದಿಲ್ಲ. ಇದಕ್ಕಿಂತ ಮುಂಚಿತವಾಗಿ ಎಂದೂ ನಾವು ಈ ಮಟ್ಟಿಗೆ ಬೇಹುಗಾರಿಕೆ, ಪ್ರೊಪಗಾಂಡಾ ಹಾಗೂ ಮಿಥ್ಯಾತಂತ್ರಕ್ಕೆ (ಸುಳ್ಳಿನ ತಂತ್ರಗಾರಿಕೆ) ಬಲಿಯಾಗುವ ಪರಿಸ್ಥಿತಿ ಇದ್ದಿಲ್ಲ. ಇದಕ್ಕಿಂತ ಮೊದಲು ಎಂದೂ ನಾವು ಜನರ ದುರ್ದಶೆಗೆ ಪ್ರತಿಕ್ರಿಯೆಯಾಗಿ ಇಷ್ಟು ನಿಷ್ಠುರ ಆಡಳಿತವನ್ನು ನೋಡಿದ್ದಿಲ್ಲ, ಅಸ್ತವ್ಯಸ್ತವಾಗಿರುವ ಆರ್ಥಿಕತೆಯನ್ನು ಕೆಲವೇ ಕೆಲವು ಹಣವುಳ್ಳವರ ನೆರವಿನಿಂದ ನಡೆಸಲಾಗಿರಲಿಲ್ಲ”. ಇಂದು ನಮಗೆ ಈ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸಬಲ್ಲ ಒಂದು ಸಾಧನದ ಅವಶ್ಯಕತೆ ಇದೆ.

ದೇಶದಲ್ಲಿ ಪ್ರತಿರೋಧ ಮಾಡುವ ಸಾಮರ್ಥ್ಯ ನಶಿಸಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ನಾವು ಸ್ವತಂತ್ರ ಭಾರತದಲ್ಲಿ ಪ್ರಜಾಸತ್ತಾತ್ಮಕ ಪ್ರತಿರೋಧದ ಕೆಲವು ಅತ್ಯದ್ಭುತ ಕ್ಷಣಗಳನ್ನು ನೋಡಿದ್ದೇವೆ. ರೈತರ ಚಳವಳಿ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಇದರ ಹೊರತಾಗಿ ಲಕ್ಷಾಂತರ ಜನರು ಸಮಾನ ನಾಗರಿಕತೆಯ ಬೇಡಿಕೆಯನ್ನಿಟ್ಟುಕೊಂಡು ಬೀದಿಗಿಳಿದಿದ್ದರು. ಅನೇಕ ಕಾರ್ಯಕರ್ತರು, ಪತ್ರಕರ್ತರು, ವಕೀಲರು, ಲೇಖಕರು ಹಾಗೂ ಸಾಮಾನ್ಯ ನಾಗರಿಕರು ಯಾವುದೇ ಬೆದರಿಕೆಗಳನ್ನು ಲೆಕ್ಕಿಸದೆ, ಜೈಲು ಪಾಲಾಗುವದನ್ನು ಸ್ವೀಕರಿಸಿದರು ಹಾಗೂ ಅಧಿಕಾರದ ಎದುರಿಗೆ ಸತ್ಯವನ್ನು ನುಡಿಯುವ ಸಲುವಾಗಿ ಎಲ್ಲವನ್ನೂ ಪಣಕ್ಕಿಟ್ಟರು.

ಇಂದು ಜನ ಎದ್ದೇಳುತ್ತಿರುವ ಈ ಶಕ್ತಿಯನ್ನು ನಮ್ಮ ಸಂವಿಧಾನಿಕ ಲೋಕತಂತ್ರದ ರಕ್ಷಣೆಗೆ ಬದ್ಧರಾಗಿರುವ ರಾಜಕೀಯ ಪಕ್ಷಗಳೊಂದಿಗೆ ಜೋಡಿಸುವ ಅವಶ್ಯಕತೆ ಇದೆ. ಹಾಗಾಗಿಯೇ ನಾನು ರೈತರ ಚಳವಳಿಯ ಜೊತೆಜೊತೆಗೆ ಇತರ ಆಂದೋಲನಗಳೊಂದಿಗೂ ಸಂಪರ್ಕದಲ್ಲಿರುವೆ. ನನ್ನ ಪಕ್ಷ ’ಸ್ವರಾಜ್ ಇಂಡಿಯಾ’ದ ಜೊತೆಜೊತೆಗೆ ಇತರ ವಿಪಕ್ಷೀಯ ರಾಜಕೀಯ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುವ ಪ್ರಯತ್ನದಲ್ಲಿದ್ದೇನೆ. ಆ ಕಾರಣಕ್ಕಾಗಿಯೇ ನಾನು ಸಂಯುಕ್ತ ಮೋರ್ಚಾದ ಹೊಣೆಗಾರಿಕೆಯಿಂದ ಮುಕ್ತನಾಗುವ ಮನವಿ ಮಾಡಿದ್ದೇನೆ. ಆದರೆ, ಈ ಮಿಷನ್ ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ. ಹೇಗೆ ದೇಶವನ್ನು ಸ್ವತಂತ್ರಗೊಳಿಸಲು ಸಾವಿರಾರು ’ಹುಚ್ಚ’ರು ಮನೆಮಠ ಬಿಟ್ಟು ಹೊರಬಂದರೋ, ಅದೇ ರೀತಿ ದೇಶದ ಎರಡನೆಯ ಸ್ವತಂತ್ರಕ್ಕೂ ಸಾವಿರಾರು ’ಆಂದೋಲನಜೀವಿ’ಗಳು ಈ ಸವಾಲನ್ನು ತಮ್ಮ ಜೀವನದ ಮಿಷನ್ ಮಾಡಿಕೊಳ್ಳಬೇಕಾಗಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


ಇದನ್ನೂ ಓದಿ: ಹಿಂದೂತ್ವದ ವ್ಯಾಖ್ಯಾನ ನೀಡಲು ಸೋತಿದ್ದೇಕೆ?: ವಿ.ಡಿ ಸಾವರ್ಕರ್ ಕುರಿತು ಹೊಸ ಪುಸ್ತಕದ ಬಗ್ಗೆ ಯೋಗೇಂದ್ರ ಯಾದವ್ ಟಿಪ್ಪಣಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...