ಗೃಹಬಂಧನ
PC: ANI

ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಶನಲ್‌ ಕಾನ್ಫರೆನ್ಸ್ ‌ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು, ತನ್ನನ್ನು ಸೇರಿದಂತೆ, ತನ್ನ ತಂದೆ ಫಾರೂಕ್ ಅಬ್ದುಲ್ಲಾ ಮತ್ತು ಸೋದರಿ ಹಾಗೂ ಅವರ ಮಕ್ಕಳನ್ನು ಅಧಿಕಾರಿಗಳು ಗೃಹಬಂಧನದಲ್ಲಿಟ್ಟಿದ್ದಾರೆಂದು ಭಾನುವಾರ ಆರೋಪಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟರ್‌ ಮೂಲಕ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಅವರು, “ಇದು ಆಗಸ್ಟ್ 2019 ರ ನಂತರದ ಹೊಸ ಜಮ್ಮೂ ಕಾಶ್ಮೀರವಾಗಿದೆ. ಯಾವುದೇ ವಿವರಣೆಯಿಲ್ಲದೆ ನಾವು ನಮ್ಮ ಮನೆಗಳಲ್ಲಿ ಬಂಧಿಸಲ್ಪಟ್ಟಿದ್ದೇವೆ. ಅವರು ಪ್ರಸ್ತುತ ಸಂಸದರಾಗಿರುವ ನನ್ನ ತಂದೆಯನ್ನು, ನನ್ನನ್ನು ನಮ್ಮ ಮನೆಯಲ್ಲಿ ಬಂಧನದಲ್ಲಿ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರು ನನ್ನ ಸಹೋದರಿ ಮತ್ತು ಅವರ ಮಕ್ಕಳನ್ನೂ ಗೃಹಬಂಧನದಲ್ಲಿ ಇಟ್ಟಿದ್ದಾರೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಬಿಜೆಪಿ ಸೇರುತ್ತೇನೆ: ಗುಲಾಂ ನಬಿ ಆಜಾದ್

“ನಿಮ್ಮ ಹೊಸ ಪ್ರಜಾಪ್ರಭುತ್ವದ ಮಾದರಿ ಎಂದರೆ ನಮ್ಮನ್ನು ನಮ್ಮ ಮನೆಗಳಲ್ಲಿ ವಿವರಣೆಯಿಲ್ಲದೆ ಇರಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಅನುಮತಿಸಲಾಗುತ್ತಿಲ್ಲ” ಎಂದ ಬರೆದಿದ್ದಾರೆ.

ಇದಕ್ಕೆ ಶ್ರೀನಗರ ಪೊಲೀಸ್ ಎಂಬ ಟ್ವಿಟರ್‌ ಹ್ಯಾಂಡಲ್ ಉತ್ತರ ನೀಡಿದ್ದು, “2019 ರ ಇಂದು ಭೀಕರ ಪುಲ್ವಾಮಾ ಭಯೋತ್ಪಾದಕ ಘಟನೆಯ 2 ವರ್ಷ ಪೂರ್ಣಗೊಂಡ ಕಾರಣ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಐಪಿಗಳು ಹಾಗೂ ಸಂರಕ್ಷಿತ ವ್ಯಕ್ತಿಗಳ ಚಲನ-ವಲನವನ್ನು ತಡೆಯಲಾಗಿದೆ” ಎಂದು ಉತ್ತರಿಸಿದ್ದಾರೆ.

ಇದಕ್ಕೆ ಮರು ಪ್ರತಿಕ್ರಿಯಿಸಿರುವ ಒಮರ್‌ ಅಬ್ದುಲ್ಲಾ, “ಈ ಟ್ವಿಟರ್‌ ಹ್ಯಾಂಡಲ್ ಪೊಲೀಸರದೆ ಎಂಬ ಬಗ್ಗೆ ನನಗೆ ಅನುಮಾನ ಇದೆ, ಯಾಕೆಂದರೆ ಇದನ್ನು ವೇರಿಫೈಡ್ ಮಾಡಿಲ್ಲ. ದಯವಿಟ್ಟು ಯಾವ ಕಾನೂನಿನ ಅಡಿಯಲ್ಲಿ ನನ್ನನ್ನುಗೃಹಬಂಧಿಯಾಗಿಸಲಾಗಿದೆ ಎಂದು ಹೇಳಿ? ಮನೆಯಿಂದ ಹೊರ ಹೋಗದಂತೆ ನೀವು ನನಗೆ ಸಲಹೆ ಮಾಡಬಹುದು. ಆದರೆ ಒತ್ತಾಯಪೂರ್ವಕವಾಗಿ ಭದ್ರತೆ ಒದಗಿಸಲು ಸಾಧ್ಯವಿಲ್ಲ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ರೈತ ಪ್ರತಿಭಟನೆ ಕುರಿತು ಸುಪ್ರೀಂ ಮಧ್ಯಸ್ಥಿಕೆ: ‘ಜಮ್ಮು ಕಾಶ್ಮೀರದ ಕುರಿತೇಕೆ ಸಾಧ್ಯವಿಲ್ಲ?’ – ಓಮರ್ ಅಬ್ದುಲ್ಲಾ

 

LEAVE A REPLY

Please enter your comment!
Please enter your name here