Homeಕರ್ನಾಟಕಕಲುಷಿತ ನೀರಿಗೆ ನಾಲ್ವರು ಬಲಿ; ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಕಲ್ಯಾಣ ಕರ್ನಾಟಕ ಆಡಳಿತ?

ಕಲುಷಿತ ನೀರಿಗೆ ನಾಲ್ವರು ಬಲಿ; ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಕಲ್ಯಾಣ ಕರ್ನಾಟಕ ಆಡಳಿತ?

- Advertisement -
- Advertisement -

ಜೂನ್ 10ರಂದು ನಾವು ಕುಷ್ಟಗಿಯಿಂದ ದೋಟಿಹಾಳದ ಮಾರ್ಗದಲ್ಲಿ ಸಿಗುವ ಬಿಜಕಲ್ ಗ್ರಾಮದತ್ತ ಪ್ರಯಾಣ ಬೆಳೆಸಿದ್ದೆವು. ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಆಂಬ್ಯುಲೆನ್ಸ್ ಒಂದು ನಮ್ಮ ಪಕ್ಕಕ್ಕೇ ಸಾಗಿಹೋಯಿತು. ಆಂಬ್ಯುಲೆನ್ಸ್ ಸಾಗಿ ಬಂದ ಹಾದಿಯನ್ನೇ ಹಿಡಿದು ಮುಂದಕ್ಕೆ ಸಾಗಿದರೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪೆಂಡಾಲು ಹಾಕಿದ್ದ ದೃಶ್ಯ ಕಂಡುಬಂತು. ಗಂಡಸರೊಂದಷ್ಟು ಜನ ಅದರ ನೆರಳಿನಲ್ಲಿ ಕುಳಿತಿದ್ದರೆ, ಮೂರ್ನಾಲ್ಕು ಆಶಾ ಕಾರ್ಯಕರ್ತೆಯರು ಶಾಲೆಯ ಮುಂಬಾಗಿಲಿನ ಬಳಿಯ ನೆರಳನ್ನು ಆಶ್ರಯಿಸಿದ್ದರು. ಆ ಶಾಲೆಯ ಕಾಂಪೌಂಡಿಗೆ ಅಂಟಿಕೊಂಡಂತಿದ್ದ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ಹತ್ತಾರು ಮಹಿಳೆಯರು-ಮಕ್ಕಳು ಕೊಡಗಳನ್ನು ಹಿಡಿದು ತಮ್ಮ ಸರದಿಗಾಗಿ ಕಾಯುತ್ತಿದ್ದರು.

ಇದಕ್ಕೆ ಕಾರಣ, ಅದೇ ಗ್ರಾಮದ 9 ವರ್ಷದ ಹುಡುಗಿ ನಿರ್ಮಲಾಳ ಸಾವು. ನಾವು ಭೇಟಿ ಕೊಟ್ಟ ಸಮಯದಲ್ಲಿ ಗ್ರಾಮದ ಮಧ್ಯಭಾಗದಲ್ಲಿರುವ ಸಂಗೊಳ್ಳಿರಾಯಣ್ಣನ ಪ್ರತಿಮೆಯ ಹಿಂದಿನ ಮನೆಯಲ್ಲಿದ್ದ ಈರಪ್ಪನವರು ಮತ್ತು ಅವರ ಕುಟುಂಬಸ್ಥರೆಲ್ಲರೂ ದಣಿದು ಮಲಗಿದ್ದರು. ಮಗಳ ಸಾವಿನ ನಂತರ ಅಧಿಕಾರಿಗಳು ಹಿಂಡುಹಿಂಡಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಕಾರಣ ನಮ್ಮನ್ನೂ ಸರ್ಕಾರಿ ಅಧಿಕಾರಿಗಳೆಂದೇ ಕುಟುಂಬಸ್ಥರು ಮೊದಲು ಬಗೆದರು. ನಾವು ಭೇಟಿ ನೀಡುವ ಮೊದಲೇ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳೂ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಆದೇಶಿಸಿದ್ದರೂ, ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಲು ಮಾತ್ರ ಯಾರೂ ಮುಂದಾಗಿರಲಿಲ್ಲ ಎಂಬ ನೋವನ್ನು ಕುಟುಂಬದವರು ತೋಡಿಕೊಂಡರು.

ಈರಪ್ಪನವರ ಕುಟುಂಬ ಬಿಜಕಲ್ಲಿನಲ್ಲಿ ಸುಮಾರು 5 ಎಕರೆ ಜಮೀನು ಹೊಂದಿದ್ದಾರೆ. ಬೇಸಿಗೆಯಲ್ಲಿ ಮಾತ್ರ ದಿನಗೂಲಿ ಕೆಲಸವನ್ನರಸಿ ಕೇರಳಕ್ಕೆ ವಲಸೆ ಹೋಗುತ್ತಾರೆ ಈರಪ್ಪನವರ ಕುಟುಂಬದ ಸದಸ್ಯರು. ಆದ್ದರಿಂದ, ಬೇಸಿಗೆಯಲ್ಲಿ ಬಿಜಕಲ್ಲಿನಿಂದ ಸುಮಾರು ಎರಡು ಕಿಲೋಮೀಟರ್ ದೂರವಿರುವ ತಮ್ಮ ಬೀಗರ ಊರಿನಲ್ಲಿ ನಿರ್ಮಲಾಳನ್ನು ಬಿಟ್ಟು ಹೋಗಿದ್ದಾರೆ. ಶಾಲೆ ಪುನರಾರಂಭವಾದ ಕಾರಣ ನಿರ್ಮಲಾ ಬಿಜಕಲ್ಲಿಗೆ ಹಿಂದಿರುಗಿ ಊರಿನ ಸರ್ಕಾರಿ ಶಾಲೆಗೆ ನಾಲ್ಕೈದು ದಿನ ಹಾಜರಾಗಿದ್ದಾಳೆ. ಜೂನ್ 6ರ ರಾತ್ರಿ ವಾಂತಿ-ಭೇದಿಯಿಂದ ತನ್ನನ್ನು ಬಾಧಿಸುತ್ತಿದ್ದ ವಿಚಾರವನ್ನು ಬಾಲಕಿ ಮನೆ ಹಿರಿಯರ ಗಮನಕ್ಕೆ ತಂದಿದ್ದಾಳೆ. ಮುಂಜಾನೆ ದವಾಖಾನೆಗೆ ಕರೆದುಕೊಂಡು ಹೋದರಾಯಿತು ಎಂದು ಮಗಳನ್ನು ಮಲಗಿಸಿಕೊಂಡಿದ್ದಾರೆ ಹಿರಿಯರು. ಬೆಳಗ್ಗೆ ಸುಮಾರು 8 ಕಿಲೋಮೀಟರ್ ದೂರವಿರುವ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ನಿರ್ಮಲಾಳ ಸ್ಥಿತಿ ಬಹಳ ಚಿಂತಾಜನಕವಾಗಿತ್ತು ಮತ್ತು ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಅಸುನೀಗಿದ್ದಾಳೆ.

ವೈದ್ಯಾಧಿಕಾರಿಗಳು ಹೇಳುವುದೇನು?

ತಾಲ್ಲೂಕು ವೈದ್ಯಾಧಿಕಾರಿ ಆನಂದ್ ಅವರು ಒದಗಿಸಿರುವ ಮಾಹಿತಿಯಂತೆ ಜೂನ್ 1ರಿಂದ 4ನೇ ತಾರೀಖಿನವರೆಗೂ ಒಂದು ಅಥವಾ ಎರಡು ಕಾಲರಾ ರೀತಿಯ ಪ್ರಕರಣಗಳು ಬಿಜಕಲ್ ಗ್ರಾಮದಿಂದ ವರದಿಯಾಗುತ್ತಿದ್ದವು. ಜೂನ್ 4ರ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಂಡುಬಂದ ಕೂಡಲೇ ಎಚ್ಚೆತ್ತುಕೊಂಡ ಇಲಾಖೆ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದಿತ್ತು. ಜೂನ್ 10ರ ವೇಳೆಗೆ ಬಿಜಕಲ್ ಗ್ರಾಮವೊಂದರಲ್ಲೇ 88 ವಾಂತಿ-ಭೇದಿ ಪ್ರಕರಣಗಳು ಕಂಡುಬಂದಿದ್ದವು ಎಂಬುದನ್ನು ವೈದ್ಯಾಧಿಕಾರಿಗಳು ಖಾತ್ರಿಪಡಿಸಿದರು. ಅದರಲ್ಲಿ ಬಹಳಷ್ಟು ಜನರಿಗೆ ಚಿಕಿತ್ಸೆಯನ್ನು ಗ್ರಾಮದಲ್ಲಿಯೇ ತೆರೆಯಲಾಗಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ನೀಡಲಾಗಿತ್ತಾದುರೂ ಸುಮಾರು 20 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು ಎಂದು ತಿಳಿಸಿದರು.

ಅಷ್ಟೇ ಅಲ್ಲದೇ, ಇದೇ ರೀತಿಯ ವಾಂತಿ-ಭೇದಿ ಸಮಸ್ಯೆಯಿಂದ ಬಳಲುತ್ತಿರುವ 27 ಪ್ರಕರಣಗಳು ಬಿಜಕಲ್ಲಿನಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಜುಮಲಾಪುರ ಗ್ರಾಮದಿಂದ ವರದಿಯಾಗಿದ್ದವು; ಅಲ್ಲಿಯೂ ಬಿಜಕಲ್ಲಿನಂತೆ ಕಲುಷಿತ ನೀರಿನದ್ದೇ ಸಮಸ್ಯೆಯೆಂದು ವೈದ್ಯಾಧಿಕಾರಿಗಳು ತಿಳಿಸಿದರು.

ಈ ರೀತಿಯ ಘಟನೆಗೆ ಕಾರಣವೇನು ಎಂದು ವಿವರಿಸುತ್ತಾ “ಕಲುಷಿತ ಕುಡಿಯುವ ನೀರಿನ್ನು ಕುಡಿದರೆ ಹೀಗಾಗುತ್ತದೆ. ಶುದ್ಧ ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಸೇರಿ ಹೀಗಾಗಿರಬಹುದು. ಜಲ್ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಕಂಡುಬಂದಿರುವ ಲೋಪಗಳು ಇದಕ್ಕೆ ಕಾರಣವಿರಬಹುದು. ಎಲ್ಲಾದರು ಪೈಪುಗಳು ಒಡೆದು ಹೋಗಿ ಹೀಗಾಗಿರಬಹುದು” ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ತಿಳಿಸಿದರು. ಆದರೆ, ಪೈಪು ಎಲ್ಲಿ ಒಡೆದಿದೆ, ಅದಕ್ಕೆ ಕಾರಣವೇನು ಎಂಬುದು ನಮಗೆ ತಿಳಿದಿಲ್ಲ ನೀವು ಸಂಬಂಧಪಟ್ಟ ಅಧಿಕಾರಿಗಳನ್ನೇ ವಿಚಾರಿಸಬೇಕು ಎಂದರು.

ವೈದ್ಯಾಧಿಕಾರಿಗಳು ಬಿಜಕಲ್ ಮತ್ತು ಜುಮಲಾಪುರ ಗ್ರಾಮದಲ್ಲಿನ ಪ್ರಕರಣಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿದರೂ, ಮಾಧ್ಯಮ ವರದಿಗಳ ಪ್ರಕಾರ ಕೊಪ್ಪಳ ಜಿಲ್ಲೆಯ ಕೇಸೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಲಕೇರಿ ಗ್ರಾಮ, ಸಾಸ್ವಿಹಾಳ ಗ್ರಾಮ, ಕೆ. ಬೋದೂರ, ಕೆ. ಬೋದೂರ ತಾಂಡಾ, ಕುಕನೂರು ತಾಲೂಕಿನ ಗಾವರಾಳ ಗ್ರಾಮ ಸೇರಿದಂತೆ ಇತರೆ ಕಡೆಗಳಲ್ಲಿಯೂ ಇದೇ ಸಮಸ್ಯೆ ವರದಿಯಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಜಲ್ ಜೀವನ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಲು ಅಧಿಕಾರಿಗಳು ವಿಫಲವಾಗಿರುವುದು ಹಾಗೂ ಈ ಯೋಜನೆಯಡಿ ಹಾಕಲಾಗಿದ್ದ ಪೈಪುಗಳು ಒಡೆದು ಅದರಲ್ಲಿ ಚರಂಡಿ ನೀರು ಕೂಡ ಮಿಶ್ರಣಗೊಂಡಿರುವುದೇ ಇದಕ್ಕೆ ಕಾರಣ ಎಂದು, ಹಲವು ಬಾರಿ ಸಮಸ್ಯೆಯನ್ನು ಜಲ್ ಜೀವನ್ ಮಿಷನ್ ಯೋಜನಾಧಿಕಾರಿಗಳ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿರುವುದೇ ಇದಕ್ಕೆ ಕಾರಣವೆಂದು ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಪಿಡಿಒಗಳು ಎಲ್ಲೆಡೆ ಆರೋಪಿಸುತ್ತಿರುವುದನ್ನು ರಾಜ್ಯದ ಹಲವು ಮಾಧ್ಯಮಗಳು ವರದಿ ಮಾಡಿವೆ. ಕುಷ್ಟಗಿ ತಾಲೂಕು ಮಾತ್ರವಲ್ಲದೇ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕೂಡ ಒಂದೂವರೆ ವರ್ಷದ ಮಗು ಹಾಗೂ 55 ವರ್ಷದ ಮಹಿಳೆ ಸೇರಿದಂತೆ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಇಂತಹದ್ದೇ ಪ್ರಕರಣ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿಯೂ ನಡೆದಿದ್ದು ಬಾಲಕನೊಬ್ಬ ಸಾವನಪ್ಪಿದ್ದಾನೆ. ಯಾವುದೇ ಸಾವು ಸಂಭವಿಸದಿದ್ದರೂ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಜನರು ಬಳಲುತ್ತಿರುವ ಪ್ರಕರಣಗಳು ಲಿಂಗಸುಗೂರಿನ ಗೊರೇಬಾಳ ಗ್ರಾಮದಲ್ಲಿಯೂ ವರದಿಯಾಗಿವೆ.

ಘಟನೆಯ ನಂತರ ಬಿಜಕಲ್ ಗ್ರಾಮದಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳೇನು?

ಘಟನೆಯು ಬೆಳಕಿಗೆ ಬಂದ ನಂತರದಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು ಪ್ರತಿ ಮನೆಗೂ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ವಿಚಾರವನ್ನು ನಾವು ಗಮನಿಸಿದೆವು ಮಾತ್ರವಲ್ಲ ತಾಲ್ಲೂಕು ವೈದ್ಯಾಧಿಕಾರಿಗಳು ಸಹ ಮುನ್ನೆಚ್ಚರಿಕೆಯ ಕ್ರಮವಾಗಿ ಇದನ್ನು ಮಾಡಲಾಗುತ್ತಿದೆ ಎಂದು ದೃಢಪಡಿಸಿದರು.

ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಬಾಲಕ ಸಾವು: ನ್ಯಾಯಾಂಗ ತನಿಖೆಗೆ ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹ

ಗ್ರಾಮದಲ್ಲಿನ ಬಹುತೇಕರು ಕುಡಿಯುವ ನೀರಿಗಾಗಿ ಬಹಳ ಹಿಂದಿನಿಂದಲೂ ಗ್ರಾಮದಲ್ಲಿನ ಟ್ಯಾಂಕುಗಳನ್ನೇ ಅವಲಂಬಿಸಿದ್ದರು. ಅದರೆ, ಗ್ರಾಮದಲ್ಲಿನ ಯಾವುದೇ ಟ್ಯಾಂಕನ್ನು ದಶಕಗಳಿಂದಲೂ ಸ್ವಚ್ಛಗೊಳಿಸಲಾಗಿರಲಿಲ್ಲ. ನಾವು ಗ್ರಾಮಕ್ಕೆ ಭೇಟಿ ನೀಡಿದ ದಿನದಂದೇ ಗ್ರಾಮದ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಸುಣ್ಣ ಬಳಿಯಲಾಗುತ್ತಿತ್ತು. ಇದಕ್ಕೆ ಪ್ರೇರಣೆ ನಿರ್ಮಳದಂತೆ ಮತ್ಯಾರನ್ನೂ ನಾವು ಕಳೆದುಕೊಳ್ಳಬಾರದು ಎಂಬ ಮುನ್ನೆಚ್ಚರಿಕೆಯೋ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡುತ್ತಾರೆ ಎಂಬ ಭಯವೋ ಎಂಬುದು ಮಾತ್ರ ತಿಳಿಯದಾಗಿತ್ತು.

ಅಲ್ಲದೇ, “ಗ್ರಾಮದಲ್ಲಿರುವ 5 ನೀರಿನ ಮೂಲಗಳ ಪೈಕಿ 4 ಮೂಲಗಳಲ್ಲಿ ಸಿಗುವ ನೀರು ಕುಡಿಯಲು ಯೋಗ್ಯವಲ್ಲ. ಆದ್ದರಿಂದ ಅದರಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದೇವೆ. ಕುಡಿಯಲು ಯೋಗ್ಯವಿರುವ ಒಂದು ನೀರಿನ ಮೂಲವಾದ ಶಾಲೆಯ ಮುಂದಿರುವ ಆರ್‌ಓ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎಲ್ಲರಿಗೂ ಉಚಿತವಾಗಿ ನೀರು ಒದಿಗಿಸುವಂತೆ ತಿಳಿಸಿದ್ದೇವೆ” ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಆದರೆ, ಬಿಜಕಲ್ ಗ್ರಾಮದ ಜನಸಂಖ್ಯೆ 3000ಕ್ಕೂ ಹೆಚ್ಚಿದೆ. ಇಷ್ಟು ದೊಡ್ಡ ಗ್ರಾಮದ ನೀರಿನ ಅಗತ್ಯತೆಯನ್ನು ಕೇವೆಲ ಒಂದು ನೀರಿನ ಘಟಕ ಪೂರೈಸಬಹುದೇ? ಅಲ್ಲದೇ, ಕೆಳಗಿನ ಫೋಟೋದಲ್ಲಿ ಕಾಣುವಂತೆ ಈ ಕುಡಿಯುವ ನೀರಿನ ಘಟಕದ ಮುಂದೆಯೇ ಚರಂಡಿ ಹಾದುಹೋಗುತ್ತದೆ. ಇಷ್ಟೆಲ್ಲಾ ಆದ ಮೇಲೂ, ಕನಿಷ್ಟ ಚರಂಡಿಗೆ ಚಪ್ಪಡಿ ಕಲ್ಲು ಹಾಸಿ ಮುಚ್ಚಬೇಕು ಎಂಬುದನ್ನೂ ಗಮನಿಸದ ಗ್ರಾಮ ಪಂಚಾಯಿತಿಯದ್ದು ನಿರ್ಲಕ್ಷ್ಯವಲ್ಲದೇ ಮತ್ತೇನು?

ಇನ್ನು ಶಾಲೆಯನ್ನು ಒಳಹೊಕ್ಕಿ ನೋಡಿದರೆ ಅಲ್ಲಿನ ದಯನೀಯ ಸ್ಥಿತಿ ಮನ ಕಲಕುವಂತಿತ್ತು. ನಾವು ಭೇಟಿ ನೀಡಿದಾಗ, ಶಾಲೆಗೆ ರಜೆ ಘೋಷಿಸಿ ಅಲ್ಲಿಯೇ ಚಿಕಿತ್ಸಾ ಕೇಂದ್ರವನ್ನು ನಡೆಸಲಾಗುತ್ತಿತ್ತು. ಕೇಂದ್ರದ ಹೊರಗೆ ಬಿಸಿಲಿನ ಬೇಗೆ ತಡೆಯಲು ಹಾಕಿದ್ದ ಶಾಮಿಯಾನವು ಸುರಿದ ಸಣ್ಣ ಮಳೆಯನ್ನೂ ತಡೆಯದೆ ಮಗುಚಿಬಿದ್ದಿತ್ತು. ಒಳಗೆ ಕೊಠಡಿಯೊಂದರಲ್ಲಿದ್ದ ಮೂರ್ನಾಲ್ಕು ಸಿಬ್ಬಂದಿಗಳು ಬಂದ ರೋಗಿಗಳ ವಿಚಾರಣೆ ನಡೆಸಿ ಮಾತ್ರೆ ಕೊಡುತ್ತಿರುವ ದೃಶ್ಯ ಕಂಡುಬಂತು. ಹೆಚ್ಚಿನ ಚಿಕಿತ್ಸೆಯೆಂದರೆ ನೆಲದ ಮೇಲೆಯೇ ಮಲಗಿಸಿ ಡ್ರಿಪ್ಸ್ ಹಾಕುವುದೇ ಆಗಿತ್ತು. ನಾವು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದಾಗ ಗರ್ಭಿಣಿಯೊಬ್ಬರು, ವಯಸ್ಸಾದ ಅಜ್ಜಿಯವರೂ ಸೇರಿದಂತೆ ನಾಲ್ಕು ಜನರಿಗೆ ಡ್ರಿಪ್ಸ್ ಹಾಕಲಾಗಿತ್ತು. ಕನಿಷ್ಟ ಒಂದು ಹಾಸಿಗೆ ಕೂಡ ಅಲ್ಲಿ ಲಭ್ಯವಿರದಿದ್ದರೂ ಅಲ್ಲಿದ್ದ ವೈದ್ಯರಾದ ದೇವರಾಜು ಮತ್ತವರ ತಂಡ ಜನರಿಗೆ ಸೂಕ್ತ ರೀತಿಯಲ್ಲಿಯೇ ಸ್ಪಂದಿಸುತ್ತಿದ್ದರು.

ಅಲ್ಲದೇ, ಗ್ರಾಮದಲ್ಲಿನ ಮೂರು ಅಂಗನವಾಡಿಗಳ ಕಾರ್ಯಕರ್ತೆಯರನ್ನು ಪ್ರತಿ ಮನೆಗೂ ತೆರಳಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಅಗತ್ಯವಿದ್ದವರಿಗೆ ಓಆರ್‌ಎಸ್ ಕೊಟ್ಟು ವಾಂತಿ-ಭೇದಿ ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸಾ ಕೇಂದ್ರಕ್ಕೆ ಬರಬೇಕು ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿತ್ತು. ಅಲ್ಲದೇ, ಊರಿನಲ್ಲಿದ್ದ ಬಜ್ಜಿ-ಬೋಂಡಾ ಅಂಗಡಿ ಹಾಗೂ ಸಣ್ಣ ಪುಟ್ಟ ಹೋಟಲುಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿತ್ತು.

ಒಟ್ಟಿನಲ್ಲಿ ಹೇಳುವುದಾದರೆ, ನಾವು ಕಂಡಂತೆ ಬಿಜಕಲ್ ಗ್ರಾಮದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ಇದು ಸಮಸ್ಯೆಯನ್ನು ತಕ್ಷಣಕ್ಕೆ ನಿವಾರಿಸುವ ನಿಟ್ಟಿನಲ್ಲಿತ್ತೇ ಹೊರತು ಸಮಸ್ಯೆಯ ಮೂಲವನ್ನು ಕಂಡುಹಿಡಿದು ಅದನ್ನು ಸರಿಪಡಿಸುವ ದೃಷ್ಟಿಯನ್ನು ಹೊಂದಿರಲಿಲ್ಲ.

ಒಂದೆರಡು ಗ್ರಾಮಗಳಲ್ಲಿ ಈ ಸಮಸ್ಯೆ ವರದಿಯಾಗಿದ್ದರೆ ಪೈಪುಗಳು ಒಡೆದುಹೋಗಿ ಇಂತಹ ಅವಘಡಗಳು ಸಂಭವಿಸಿರಬಹುದು ಎಂದು ಬಗೆಯಬಹುದಿತ್ತು. ಆದರೆ, ಕೊಪ್ಪಳದ ಕುಷ್ಟಗಿ, ಕನಕಗಿರಿ ಮತ್ತು ಕುಕನೂರು ತಾಲೂಕಿನ ಗ್ರಾಮಗಳಲ್ಲಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸಗೂರು ತಾಲುಕಿನ ಬೇರೆಬೇರೆ ಗ್ರಾಮಗಳಲ್ಲಿ ಹೀಗಾಗಲು ಒಂದೋ ಇವೆಲ್ಲ ಗ್ರಾಮಗಳಿಗೂ ಒಂದೇ ನೀರಿನ ಮೂಲವಿರಬೇಕು. ಹಾಗಾಗಿದ್ದರೆ ಬೇರೆ ಹಳ್ಳಿಗಳಲ್ಲಿಯೂ ಇದು ಸಮಸ್ಯೆಯಾಗಬೇಕಿತ್ತು ಅಲ್ಲವೇ? ಹಾಗಾಗಿಲ್ಲ. ಆದ್ದರಿಂದ, ಮತ್ತೊಂದು ಸಾಧ್ಯತೆಯೆಂದರೆ, ನೀರಿನ ಸರಬರಾಜು ಮಾಡಬೇಕಿದ್ದ ಕೇಂದ್ರ ಸರ್ಕಾರದ ಯೋಜನೆಯಾದ ಜಲ ಜೀವನ ಮಿಷನಿನ್ನ ರೂಪುರೇಷೆ ಅಥವಾ ಅನುಷ್ಟಾನದ ಲೋಪದಿಂದ ಹೀಗಾಗಿರಬೇಕು. ಅಲ್ಲಿಯೂ ಇದು ಕಣ್ತಪ್ಪಿನಿಂದ ಉಂಟಾಗಿರುವ ಸಾಧ್ಯತೆಗಳು ಕಡಿಮೆಯಿದ್ದು, ಜಲ ಜೀವನ ಮಿಷನ್ನಿನ ಟೆಂಡರುಗಳು-ಕಾಂಟ್ರಾಕ್ಟುಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡಿರಬಹುದಾದ ಸಾಧ್ಯತೆಗಳೇ ಹೆಚ್ಚು. ಈ ಬಗ್ಗೆ ಸಮಗ್ರ ತನಿಖೆ ನಡೆಯಲೇಬೇಕು.

ಈ ನಿಟ್ಟಿನಲ್ಲಿ ನೋಡಿದರೆ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿನ ನೀರಿನ ಸಮಸ್ಯೆ ಹೊಸದೇನು ಅಲ್ಲ. ನೀರಿನ ಸಮಸ್ಯೆ ಹೆಚ್ಚಿರುವ ಕೊಪ್ಪಳದ ಜನರಲ್ಲಿ ಬಹುತೇಕರು ಬೋರ್‌ವೆಲ್ ನೀರಿನ ಮೇಲೆಯೇ ಅವಲಂಬಿತರು. ಆದ್ದರಿಂದ, ಬಹಳಷ್ಟು ಜನರು ಕಿಡ್ನಿ ಸ್ಟೋನ್ ಸಮಸ್ಯೆ, ದೇಹದಲ್ಲಿ ಕ್ಯಾಲ್ಷಿಯಮ್ ವ್ಯತ್ಯಯ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೇ ರೀತಿಯ ಸಮಸ್ಯೆಗಳನ್ನು ನಾವು ರಾಯಚೂರು ಜಿಲ್ಲೆಯಲ್ಲಿಯೂ ಕಾಣಬಹುದು. ಅಂದರೆ, ಒಂದು ಹಂತದ ಸಮಸ್ಯೆ ನೀರಿನ ಮೂಲದಲ್ಲಿದ್ದರೆ, ಮತ್ತೊಂದು ಹಂತದ ಸಮಸ್ಯೆಯು ಯೋಜನೆಗಳ ರೂಪುರೇಷೆ ಮತ್ತು ಅದರ ಅನುಷ್ಠಾನದಲ್ಲಿ ಅಡಗಿದೆ. ಇವೆರಡನ್ನೂ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಯೋಜನೆಗಳನ್ನು ರೂಪಿಸುವ ತುರ್ತು ಅಗತ್ಯವಿದೆ. ಈಗಾಗಲೇ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಈ ಬಗ್ಗೆ ಎಚ್ಚರಿಸಿದ್ದಾರೆ. ಅಲ್ಲದೇ ಎರಡು ಹಂತದ ತನಿಖೆಗೆ ಆದೇಶಿಸಿದ್ದಾರೆ. ಈ ತನಿಖೆಗಳ ವರದಿ ಆದಷ್ಟು ಬೇಗ ಹೊರಬಿದ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮಾತ್ರವಲ್ಲ, ಶುದ್ಧ ಕುಡಿಯುವ ನೀರು ಸಿಗಲಿಲ್ಲವೆಂದು ಮತ್ತೊಂದು ಜೀವ ಕಷ್ಟಕ್ಕೊಳಗಾಗಬಾರದು. ಈ ನೈತಿಕ ನಿಲುವನ್ನು ಸರ್ಕಾರ ಮತ್ತದರ ಅಧಿಕಾರಿ ವರ್ಗ ತಾಳುವಂತೆ ಒತ್ತಾಯಿಸಬೇಕಿದೆ. ಕಾರಣ, ಇದು ಸಾಂವಿಧಾನಿಕ ಮೌಲ್ಯವೂ ಹೌದು.

ಸಂವಿಧಾನವು ಅನುಚ್ಛೇದ 21ರ ಅಡಿಯಲ್ಲಿ ಬದುಕುವ ಹಕ್ಕನ್ನು ಎಲ್ಲಾ ನಾಗರಿಕರಿಗೆ ನೀಡಿರುವಾಗ ಅದರಲ್ಲಿ ಶುದ್ಧ ಕುಡಿಯುವ ನೀರಿನ ಹಕ್ಕೂ ಕೂಡ ಅಂತರ್ಗತವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯವು 1999ರ ಎ.ಪಿ. ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ II ವರ್ಸಸ್ ಪ್ರೊ. ಎಮ್.ವಿ. ನಾಯ್ಡು, 2000ದ ನರ್ಮದಾ ಬಚಾವೋ ಆಂದೋಲನ್ ವರ್ಸರ್ಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಸ್ಟೇಟ್ ಆಫ್ ಕರ್ನಾಟಕ ವರ್ಸಸ್ ಸ್ಟೇಟ್ ಆಫ್ ಆಂಧ್ರ ಪ್ರದೇಶ್ ಪ್ರಕರಣಗಳಲ್ಲಿ ಎತ್ತಿಹಿಡಿದಿದೆ. ಅಲ್ಲದೇ, 2001ರ ಪಿ.ಆರ್ ಸುಭಾಷ್ ಚಂದ್ರನ್ ವರ್ಸಸ್ ಸ್ಟೇಟ್ ಆಫ್ ಆಂಧ್ರ ಪ್ರದೇಶ್ ಅಂಡ್ ಅದರ್ಸ್ ಪ್ರಕರಣದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು “ನಾಗರಿಕರೆಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಪ್ರಭುತ್ವದ ಕರ್ತವ್ಯ” ಎಂದು ಶುದ್ಧ ಕುಡಿಯುವ ನೀರಿನ ಹಕ್ಕನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ.

ಆದ್ದರಿಂದ ಶುದ್ಧ ಕುಡಿಯುವ ನೀರು ಜನರ ಹಕ್ಕು ಮಾತ್ರವಲ್ಲ ಅದನ್ನು ಒದಗಿಸುವ ಜವಾಬ್ದಾರಿ ಸರ್ಕಾರದ್ದೇ ಆಗಿದೆ.

ಆದರೆ, ಇವೆಲ್ಲದರ ನಡುವೆ ನಾವು ಗಮನಿಸಬೇಕಾದ ಮುಖ್ಯ ಅಂಶವೊಂದನ್ನು ಬಿಜಕಲ್ ಗ್ರಾಮದ ಹಿರಿಯರೂ ಹಾಗೂ ಮಾಜಿ ಪಂಚಾಯತಿ ಸದಸ್ಯರೂ ಆಗಿದ್ದವರು, “ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಸುಮಾರು 20 ವರ್ಷಗಳ ಹಿಂದೆಯೂ ಇಂತದ್ದೇ ಸಮಸ್ಯೆಗಳಿಂದಾಗಿ ಬಹಳಷ್ಟು ಜನ ವಾಂತಿ-ಭೇದಿಯಿಂದ ಬಳಲಿದ್ದರು” ಎಂದು ನೆನಪಿಸಿಕೊಂಡರು. ಅಷ್ಟೇ ಏಕೆ, ತೀರಾ ಇತ್ತೀಚಿಗೆ, ಅಂದರೆ 2017ರಲ್ಲಿಯೂ ಇದೇ ಬಿಜಕಲ್ ಗ್ರಾಮದಲ್ಲಿ ಇಂಥದ್ದೇ ಸಮಸ್ಯೆಗಳು ಕೇಳಿಬಂದಿದ್ದವು ಮಾತ್ರವಲ್ಲ, ಜನರು ಚರಂಡಿ ನೀರನ್ನೇ ಆಶ್ರಯಿಸುವಂತಾಗಿತ್ತು. ಅದು ನಾಡಿನ ಮುಖ್ಯ ದೈನಿಕಗಳಲ್ಲಿ ಒಂದಾದ ಪ್ರಜಾವಾಣಿಯಲ್ಲಿ ವರದಿಯೂ ಆಗಿತ್ತು. ಅಂದರೆ ಐದು ವರ್ಷಗಳ ನಂತರವೂ ನಾವು ಜನರನ್ನು ಮತ್ತದೇ ಕೊಳಚೆಯ ಕೂಪಕ್ಕೆ ತಳ್ಳುತ್ತಿದ್ದೇವೆ. ಹೀಗಿರುವಾಗ, ಸದರಿ ಸಮಸ್ಯೆಯನ್ನು ನಾವು ಅಭಿವೃದ್ಧಿ ಹೊಂದದ ಹಿಂದುಳಿದ ಪ್ರದೇಶದ ಸಮಸ್ಯೆಯೆಂದು ತಿಳಿಯಲು ಸಾಧ್ಯವೇ ಇಲ್ಲ. ಬದಲಿಗೆ ಇಂತಹ ಘಟನೆಗಳನ್ನು ಈ ದೇಶದಲ್ಲಿನ ಅಸಮಾನತೆ ಮತ್ತು ಅಧಿಕಾರಸ್ಥರ ಹಿತಾಸಕ್ತಿಗಳು ಜನರ ಜೀವವನ್ನೂ ಲೆಕ್ಕಿಸದೆ, ಅವರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ ಎಂಬುದರ ಸೂಚಕದಂತೆಯೇ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇನ್ನಾದರು ಅಧಿಕಾರಸ್ಥರ ಹಿತಾಸಕ್ತಿಗಳನ್ನು ಬದಿಗೆ ಸರಿಸಿ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವಂತೆ ನಾವೆಲ್ಲರೂ ಸರ್ಕಾರವನ್ನು ಒತ್ತಾಯಿಸಬೇಕಿದೆ. ಸರ್ಕಾರಗಳ ಹಾಗೂ ಅಧಿಕಾರಸ್ಥರ ಬೇಜವಾಬ್ದಾರಿತನಕ್ಕೆ ಅವರನ್ನೇ ಹೊಣೆಗಾರರನ್ನಾಗಿಸಬೇಕಿದೆ. ನಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ನಾವೇ ಮುಂದು ನಿಂತು ಹೋರಾಡಬೇಕಿದೆ.

ಕಳೆದ ಒಂದು ವರ್ಷದಲ್ಲಿ ಕಲುಷಿತ ನೀರು ಸೇವಿಸಿದ ಪ್ರಕರಣಗಳು

  •  2022ರ ಜೂನ್ ತಿಂಗಳಿನಲ್ಲಿ ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮಲ್ಲಮ್ಮ, ಅಬ್ದುಲ್ ಗಫಾರ್ ಮತ್ತು ಮೊಹಮದ್ ನೂರ್ ಎಂಬ ಮೂವರು ಸಾವನ್ನಪ್ಪಿದ್ದರು. ಹಲವು ಮಂದಿ ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
  •  ಜೂನ್ 17, 2022ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50 ಜನರು ಅಸ್ವಸ್ಥರಾಗಿದ್ದರು.
  •  ಜುಲೈ 07, 2022ರಂದು ರಾಯಚೂರು ತಾಲ್ಲೂಕಿನ ಮಾನ್ವಿ ತಾಲ್ಲೂಕಿನ ವಲ್ಕಂದಿನ್ನಿ ಮತ್ತು ಜುಕೂರುಗಳಲ್ಲಿ ಕಲುಷಿತ ನೀರು ಸೇವಿಸಿ 40 ಮಂದಿ ಅಸ್ವಸ್ಥರಾಗಿದ್ದರು.
  •  2022ರ ಜುಲೈ 25ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ನಲ್ಲಿ ನೀರಿನಲ್ಲಿ ಬಂದ ಕಲುಷಿತ ನೀರನ್ನು ಸೇವಿಸಿ 11 ವರ್ಷದ ಬಾಲಕಿ ಮೃತಪಟ್ಟು 20ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದರು.
  •  ಜುಲೈ 30, 2022ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹನುಮಂತ ದೇವರ ಕಣಿವೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ನೀರು ಸೇವಿಸಿದ 28 ವಿದ್ಯಾರ್ಥಿಗಳು ಆರೋಗ್ಯ ತಪ್ಪಿದ್ದರು.
  •  10 ಸೆಪ್ಟಂಬರ್ 2022ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಕೊಳಕು ನೀರು ಸೇವಿಸಿ ಒಬ್ಬರು ಮೃತಪಟ್ಟರೆ 46 ಜನರು ಅನಾರೋಗ್ಯ ಪೀಡಿತರಾಗಿದ್ದರು.
  •  19 ಸೆಪ್ಟಂಬರ್ 2022ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೆಂಚನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 23 ಮಂದಿ ಅಸ್ವಸ್ಥರಾಗಿದ್ದರು.
  •  28 ಅಕ್ಟೋಬರ್ 2022ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರಿನಿಂದಾಗಿ ಇಬ್ಬರು ಮೃತಪಟ್ಟಿದ್ದರು. 180 ಜನ ಅಸ್ವಸ್ಥರಾಗಿದ್ದರು.
  •  2023ರ ಜನವರಿ 12ರಂದು ಹೊಸಪೇಟೆ ರಾಣಿಪೇಟಿ ಕಾಲೋನಿಯಲ್ಲಿ ಕಲುಷಿತ ನೀರು ಸೇವಿಸಿ ಒಬ್ಬ ಮಹಿಳೆ ಮೃತಪಟ್ಟರೆ, 170 ಜನ ಅಸ್ವಸ್ಥರಾಗಿದ್ದರು.
  •  2023ರ ಫೆಬ್ರವರಿ 15ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಆನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದರು. 76ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರು.
  •  ಏಪ್ರಿಲ್ 3, 2022ರಂದು ಬಳ್ಳಾರಿ ಜಿಲ್ಲೆಯ ಕುಂಟಣಾಳ ಗ್ರಾಮದಲ್ಲಿ ಕಲುಷಿತ ನೀರಿನಿಂದಾಗಿ 18 ಜನ ಅಸ್ವಸ್ಥರಾಗಿದ್ದರು.
  •  ಜೂನ್ 09, 2023ರಂದು ಕಲುಷಿತ ನೀರು ಸೇವನೆಯಿಂದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚೂಡಸಂದ್ರದಲ್ಲಿರುವ ಮಹಾವೀರ್ ರಾಂಚೆಸ್ ಅಪಾರ್ಟ್ಮೆಂಟ್‌ನ 118 ಮಂದಿ ನಿವಾಸಿಗಳು ಅಸ್ವಸ್ಥರಾಗಿದ್ದರು.
  •  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಿಜಕಲ್ ಗ್ರಾಮದಲ್ಲಿ ಬಾಲಕಿ ಸಾವನಪ್ಪಿದ್ದಾರೆ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಯಾಗಿ ಒಂದೂವರೆ ವರ್ಷದ ಮಗು ತಾವರಗೇರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು.

ಪ್ರವೀಣಕುಮಾರ ಜಿ ಕೊರಡಕೇರಾ
ಕುಷ್ಟಗಿ ತಾಲೂಕು ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಶಶಾಂಕ್ ಎಸ್ ಆರ್
ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾರ್ಥಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...