Homeಮುಖಪುಟಫಾರ್ಬಿಡನ್‌ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ಸರಣಿಗೆ ಗೌರಿ ಲಂಕೇಶ್‌ ಸ್ಫೂರ್ತಿ; ಗಾರ್ಡಿಯನ್‌ ಉಲ್ಲೇಖ

ಫಾರ್ಬಿಡನ್‌ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ಸರಣಿಗೆ ಗೌರಿ ಲಂಕೇಶ್‌ ಸ್ಫೂರ್ತಿ; ಗಾರ್ಡಿಯನ್‌ ಉಲ್ಲೇಖ

- Advertisement -
- Advertisement -

ಪ್ರಖ್ಯಾತ ತನಿಖಾ ಸಂಸ್ಥೆಯಾಗಿರುವ ‘ಫಾರ್ಬಿಡನ್‌ ಸ್ಟೋರೀಸ್‌’ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ವಿಶೇಷ ಸರಣಿಗೆ ‘ಗೌರಿ ಲಂಕೇಶ್‌’ ಅವರು ಸ್ಫೂರ್ತಿಯಾಗಿದ್ದಾರೆ ಎಂದು ‘ದಿ ಗಾರ್ಡಿಯನ್‌’ ವರದಿ ಮಾಡಿದೆ.

ಸುಳ್ಳು ಸುದ್ದಿಗಳಿಂದ ಆಗಿರುವ ಅನಾಹುತಗಳನ್ನು, ಕೊಲೆ, ಹಿಂಸೆಗಳನ್ನು ಈ ಸರಣಿ ಬಿಚ್ಚಿಡುತ್ತಿದೆ. ಗೌರಿ ಲಂಕೇಶ್ ಅವರ ಕುರಿತು ವಿಶೇಷ ವರದಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಗಾರ್ಡಿಯನ್ ತನ್ನ ವರದಿಯಲ್ಲಿ, “ಸುಳ್ಳು ಮಾಹಿತಿಗಳನ್ನು ನಮ್ಮ ಮಾಹಿತಿ ಪರಿಸರ ವ್ಯವಸ್ಥೆಯಲ್ಲಿನ ಪರಮಾಣು ಬಾಂಬ್‌ಗೆ ಹೋಲಿಸಲಾಗಿದೆ. ಸುಳ್ಳು ಮಾಹಿತಿಯು ಗಂಭೀರ ಸಮಸ್ಯೆಯಾಗಿದೆ. ಏಕೆಂದರೆ ಸತ್ಯಕ್ಕಿಂತ ವೇಗವಾಗಿ ದ್ವೇಷ, ಕೋಪ ಮತ್ತು ಪಿತೂರಿ ಸಿದ್ಧಾಂತಗಳು ಹರಡಲು ಸುಳ್ಳು ಮಾಹಿತಿಗಳು ಕಾರಣವಾಗುತ್ತವೆ. ಪತ್ರಕರ್ತೆ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ರೆಸ್ಸಾ ಅವರ ಹೇಳುವಂತೆ- ‘ಪ್ರಜಾಪ್ರಭುತ್ವ ಎಂಬುದು ಕನಸಷ್ಟೇ” ಎಂಬ ಸಾಲುಗಳನ್ನು ಉಲ್ಲೇಖಿಸಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಕ್ರೂರ ಆಕ್ರಮಣ, ಅಮೆರಿಕದ ಸಂಸತ್‌ ಮೇಲೆ ದಾಳಿ, ಕೋವಿಡ್ -19ರ ಸುತ್ತ ಹುಟ್ಟಿದ ಸುಳ್ಳುಗಳು- ಇವೆಲ್ಲ ತಪ್ಪು ಮಾಹಿತಿಯ ಪ್ರಮುಖ ಜಾಗತಿಕ ಘಟನೆಗಳಾಗಿ ಕಾಣುತ್ತವೆ ಎಂದಿದೆ.

‘Disinfo black ops’ ಎಂಬ ವಿಶೇಷ ತನಿಖೆಯು ಪ್ರಪಂಚದಾದ್ಯಂತ ಆಗುತ್ತಿರುವ ಸುಳ್ಳು ಮಾಹಿತಿಯ ಉದ್ದೇಶಪೂರ್ವಕ ಹರಡುವಿಕೆಯ ಕುರಿತು ಬಹಿರಂಗಪಡಿಸುತ್ತಿದೆ. ಇದು ಸ್ಟೋರಿ ಕಿಲ್ಲರ್ಸ್‌ ಸರಣಿಯ ಭಾಗವಾಗಿದೆ. ಗಾರ್ಡಿಯನ್, ಅಬ್ಸರ್ವರ್, ಹಾರೆಟ್ಜ್, ಲೆ ಮಾಂಡೆ, ಡೆರ್ ಸ್ಪೀಗೆಲ್, ರೇಡಿಯೋ ಫ್ರಾನ್ಸ್, ದಿ ಮಾರ್ಕರ್, ಪೇಪರ್ ಟ್ರಯಲ್ ಮೀಡಿಯಾ ಮತ್ತು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ 30 ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಒಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಸಹಯೋಗದಲ್ಲಿ ನಡೆಯುತ್ತಿರುವ ಯೋಜನೆ ಇದಾಗಿದೆ.

ಲಾಭದ ಉದ್ದೇಶದಿಂದ ಅಂತರ್ಜಾಲದಾದ್ಯಂತ ನಕಲಿ ಮಾಹಿತಿಯನ್ನು ಹರಡುವ ಸರ್ಕಾರಿ-ಪ್ರಾಯೋಜಿತ ಘಟಕಗಳು ಅಥವಾ ಖಾಸಗಿ ಸಂಸ್ಥೆಗಳು ಹರಡುವ ಸುಳ್ಳು ಮಾಹಿತಿಗಳ ಬಗ್ಗೆ ಈ ತನಿಖೆ ಬೆಳಕು ಚೆಲ್ಲುತ್ತಿದೆ.

ಡ್ಯಾಫ್ನೆ ಪ್ರಾಜೆಕ್ಟ್ ಮತ್ತು ಪೆಗಾಸಸ್ ಪ್ರಾಜೆಕ್ಟ್‌ನ ಹಿಂದಿರುವ ‘ಫೋರ್ಬಿಡನ್ ಸ್ಟೋರೀಸ್’ (ಲಾಭೋದ್ದೇಶವಿಲ್ಲದ ಫ್ರೆಂಚ್ ಮೂಲದ ಸಂಸ್ಥೆ) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹತ್ಯೆಗೀಡಾದ, ಬೆದರಿಕೆ ಅಥವಾ ಜೈಲಿನಲ್ಲಿರುವ ಪತ್ರಕರ್ತರ ಆಶಯಗಳನ್ನು ಮುಂದುವರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

2017ರಲ್ಲಿ ತಮ್ಮ ಬೆಂಗಳೂರಿನ ಮನೆಯ ಹೊರಗೆ ಹತ್ಯೆಯಾದ ಗೌರಿ ಲಂಕೇಶ್ ಅವರ ನಿರ್ಭೀತ ಕೆಲಸಗಳೇ ಈ ಎಂಟು ತಿಂಗಳ ಕಾಲ ನಡೆಸಿರುವ ತನಿಖೆಗೆ ಸ್ಫೂರ್ತಿಯಾಗಿದೆ ಎಂದು ‘ಗಾರ್ಡಿಯನ್‌’ ಉಲ್ಲೇಖಿಸಿದೆ.

ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಗೌರಿ ಲಂಕೇಶ್ ಅವರು ‘ಸುಳ್ಳು ಸುದ್ದಿಗಳ ಯುಗದಲ್ಲಿ’ ಎಂಬ ಲೇಖನಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ಫೇಕ್‌ನ್ಯೂಸ್ ಪ್ಯಾಕ್ಟರಿಗಳು ಹೇಗೆ ಭಾರತದಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂಬುದನ್ನು ಈ ಲೇಖನ ಚರ್ಚಿಸಿದೆ ಎಂಬ ಸಂಗತಿಯನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

‘ಇನ್ ಏಜ್ ಆಫ್ ಫಾಲ್ಸ್ ನ್ಯೂಸ್’ ಲೇಖನವು ಗೌರಿಯವರ ಸಾವಿನ ನಂತರ ಪ್ರಕಟವಾಯಿತು. ಗೌರಿ ತಮ್ಮ ಅಂತಿಮ ವಾಕ್ಯದಲ್ಲಿ, “ನಕಲಿ ಸುದ್ದಿಗಳನ್ನು ಬಹಿರಂಗಪಡಿಸುವ ಎಲ್ಲರಿಗೂ ನಾನು ಸೆಲ್ಯೂಟ್ ಮಾಡಲು ಬಯಸುತ್ತೇನೆ. ಅಲ್ಲಿ ಇನ್ನೂ ಹೆಚ್ಚಿನವರು ಇರಬೇಕೆಂದು ನಾನು ಬಯಸುತ್ತೇನೆ” ಎಂದಿದ್ದರು.

ಹತ್ಯೆಗೆ ಸಂಬಂಧಿಸಿದಂತೆ 17 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಗಳು ಮುಂದುವರಿದಿವೆ.

ಇಸ್ರೇಲ್‌ನ ಬೆನ್-ಗುರಿಯನ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ನಿರ್ ಗ್ರಿನ್‌ಬರ್ಗ್ ಪ್ರತಿಕ್ರಿಯಿಸಿ, “ತಪ್ಪು ಮಾಹಿತಿಗಳ ಕುರಿತು ಸ್ಟೋರಿ ಕಿಲ್ಲರ್ಸ್ ಯೋಜನೆಯಲ್ಲಿ ಬಹಿರಂಗವಾಗುತ್ತಿರುವ ಸಂಗತಿಗಳು ನವೀನವಾಗಿದೆ” ಎಂದಿದ್ದಾರೆ.

“ನಾಗರಿಕ ಸಮಾಜವು ಈ ಆನ್‌ಲೈನ್ ವೇದಿಕೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಪುನಾ ರಚಿಸದ ಹೊರತು, ಈ ವೇದಿಕೆಗಳನ್ನು ಹೊಣೆಗಾರರನ್ನಾಗಿ ಮಾಡದ ಹೊರತು, ಅಂತಹ ತಪ್ಪು ಮಾಹಿತಿಯ ಪ್ರಚಾರಗಳಿಗೆ ಯಾರಾದರೂ ಬಲಿಯಾಗಬಹುದೆಂಬ ಭವಿಷ್ಯವನ್ನು ನಾವು ನೋಡುತ್ತಿದ್ದೇವೆ” ಎಂದಿದ್ದಾರೆ ಗ್ರಿನ್‌ಬರ್ಗ್.

ಈ ಸುಳ್ಳು ಸುದ್ದಿಗಳಿಂದಾಗಿ ವಿಶೇಷವಾಗಿ ಜಗತ್ತಿನಾದ್ಯಂತ ಮಹಿಳಾ ಪತ್ರಕರ್ತರು ಟಾರ್ಗೆಟ್ ಆಗಿದ್ದಾರೆ. ರೆಸ್ಸಾ ಅವರು ತಮ್ಮ ‘ರಾಪ್ಲರ್’ ಡಿಜಿಟಲ್‌ ವೇದಿಕೆಯ ಮೂಲಕ ಮಾಡಿದ ವರದಿಗಳ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.

‘ಫಿಲಿಪೈನ್ಸ್‌ನ ಮುಕ್ತ ಪತ್ರಿಕಾ ಮುಖ’ ಎಂದೇ ಖ್ಯಾತರಾಗಿರುವ ರೆಸ್ಸಾ, ತೆರಿಗೆ ವಂಚನೆ ಆರೋಪಗಳಿಂದ ಖುಲಾಸೆಗೊಂಡರು, ಒಂದು ಪ್ರಕರಣದಲ್ಲಿ ಅವರು ಕಿರುಕುಳ ಎದುರಿಸಿದ್ದಾರೆ. ಫಿನ್‌ಲ್ಯಾಂಡ್‌ನ ಪತ್ರಕರ್ತೆ ಜೆಸ್ಸಿಕ್ಕಾ ಅರೋ ಅವರು ಫೇಕ್‌ನ್ಯೂಸ್‌ಗಳ ದಾಳಿಗೆ ಗುರಿಯಾಗಿದ್ದಾರೆ. ಹೀಗೆ ಸುಳ್ಳು ಸುದ್ದಿಗಳಿಂದ ತೊಂದರೆಗೊಳಗಾದ ಪತ್ರಕರ್ತರ ಕುರಿತು ‘ಫಾರ್ಬಿಡನ್‌ ಸ್ಟೋರೀಸ್‌’ ಸರಣಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ.

ಮಾಹಿತಿ ಕೃಪೆ: ದಿ ಗಾರ್ಡಿಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...