Homeಕರ್ನಾಟಕಗೌರಿ ಹತ್ಯೆ ಪ್ರಕರಣ| ಜನವರಿ ತಿಂಗಳ ವಿಚಾರಣೆಯಲ್ಲಿ ಒಂಬತ್ತು ಸಾಕ್ಷಿಗಳು ಹೇಳಿದ್ದೇನು?

ಗೌರಿ ಹತ್ಯೆ ಪ್ರಕರಣ| ಜನವರಿ ತಿಂಗಳ ವಿಚಾರಣೆಯಲ್ಲಿ ಒಂಬತ್ತು ಸಾಕ್ಷಿಗಳು ಹೇಳಿದ್ದೇನು?

- Advertisement -
- Advertisement -

ಗೌರಿ ಹತ್ಯಾ ಪ್ರಕರಣದ ಈ ತಿಂಗಳ ವಿಚಾರಣೆಯು ಜನವರಿ 17 ರಿಂದ 20ರವರೆಗೆ ನಡೆಯಿತು. ತನಿಖಾಧಿಕಾರಿಗಳ ವಿಶೇಷ ಮನವಿಯ ಮೇರೆಗೆ ಇನ್ನುಮುಂದೆ ಈ ವಿಚಾರಣೆಯು ಬಹಿರಂಗ ಕೋರ್ಟಿನಲ್ಲಿ ನಡೆಯುವುದಿಲ್ಲ. ಪತ್ರಕರ್ತರಿಗೆ ಮತ್ತು ಸಾರ್ವಜನಿಕರಿಗೆ ವಿಚಾರಣೆಯನ್ನು ವೀಕ್ಷಿಸುವ ಅವಕಾಶ ಇರುವುದಿಲ್ಲ.

ಆದರೆ ವಿಚಾರಣೆಯಲ್ಲಿ ಸಾಕ್ಷಿಗಳು ಹೇಳಿದ್ದು ಮತ್ತು ಪಾಟಿ ಸವಾಲಿನ ವಿವರಗಳನ್ನು – Deposition – ಆಯಾ ದಿನವೇ ecourt ವೆಬ್ ಸೈಟಿನಲ್ಲಿ ಅಪ್ಲೋಡ್ ಮಾಡುತ್ತಾರೆ. ಹೀಗಾಗಿ ವಿಚಾರಣೆಯ ಅಧಿಕೃತ ವಿವರಗಳು ecourt ವೆಬ್ ಸೈಟಿನ Public Domainನಲ್ಲಿ ಲಭ್ಯವಿದೆ. ಈ ವರದಿಯು ನ್ಯಾಯಾಲಯವು ಲಭ್ಯಗೊಳಿಸಿರುವ ಆ ಅಧಿಕೃತ ಮಾಹಿತಿಯನ್ನು ಆಧರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ತಿಂಗಳು ಒಟ್ಟು ಒಂಬತ್ತು ಸಾಕ್ಷಿಗಳ ವಿಚಾರಣೆ ನಡೆಯಿತು.

  • ಅಬ್ದುಲ್ ಲತೀಫ್, ಜಾಲಿ ಮೊಹಲ್ಲಾ , ಬೆಂಗಳೂರು -ಇವರು ತನಿಖಾಧಿಕಾರಿಗಳು ಕಲಾಸಿಪಾಳ್ಯದಲ್ಲಿರುವ ಸಿಟಿ ಗನ್ ಹೌಸ್ ತನಿಖೆಗೆ ತೆರಳುವಾಗ ಪಂಚನಾಗಿ ಸಹಕರಿಸಿದ್ದ ಬಗ್ಗೆ ಸಾಕ್ಷ್ಯ ನುಡಿದರು ಮತ್ತು ಆರೋಪಿ ನವೀನ್ ಕುಮಾರ್ ಅಂದು ಪೋಲೀಸರ ಜೊತೆಗಿದ್ದರು ಎಂದು ಹೇಳಿದರಲ್ಲದೆ ಪರಪ್ಪನ ಅಗ್ರಹಾರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿದ್ದ ಆರೋಪಿಯನ್ನು ಗುರುತು ಹಿಡಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯ ಹಿನ್ನೆಲೆಯ ಬಗ್ಗೆ ಮತ್ತು ಆತನಿಗೆ ಕಾಟನ್ ಪೇಟೆ ಪೊಲೀಸರು ಹೇಗೆ ಪರಿಚಯ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಮತ್ತು ಸಿಟಿ ಗನ್ ಶಾಪ್ ಬಗ್ಗೆ ವಿವರಗಳು ಕೇಳಿದರು. ಸಾಕ್ಷಿ ಲತೀಫ್ ಅದಕ್ಕೆ ಉತ್ತರ ನೀಡಿದರು. ಪೋಲೀಸರ ಮರ್ಜಿ ಮತ್ತು ಬೆದರಿಕೆಗೆ ಮಣಿದು ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೀರೆಂದು ಮಾಡಿದ ಆರೋಪವನ್ನು ನಿರಾಕರಿಸಿದರು.

  • ಗಂಗಯ್ಯ , ಕಡಬಗೆರೆ ಕ್ರಾಸ್, ಬೆಂಗಳೂರು -ಎಂಬುವರು ಪ್ಲಾಸ್ಟಿಕ್ ಡೋರ್ ಬಿಸಿನೆಸ್ ಮಾಡುತ್ತಿದ್ದು 2017 ರಲ್ಲಿ ಕಡಬಗೆರೆಯ ಲಕ್ಷ್ಮಿ ಲೇ ಔಟ್ ನಲ್ಲಿ ತಳ ಅಂತಸ್ತಿನಲ್ಲಿ ಮೂರು ಮಳಿಗೆಗಳನ್ನು ಮತ್ತು ಮೇಲಂತಸ್ತಿನಲ್ಲಿ ವಾಸದ ಮನೆಯನ್ನೂ ಕಟ್ಟಿಕೊಂಡಿದ್ದರು. ಮತ್ತು ತಮ್ಮ ಫೋನ್ ನಂಬರ್ ನಮೂದಿಸಿ ಆ ಮಳಿಗೆಗಳ ಮೇಲೆ ಬಾಡಿಗೆ ಇದೆ ಎಂದು ತೂಗು ಫಲಕ ಹಾಕಿದ್ದರು.

2017ರ ಜೂನ್ ತಿಂಗಳಲ್ಲಿ ಸುರೇಶ್ ಎಂಬುವರೊಬ್ಬರು ಫೋನ್ ಮಾಡಿ ತಮಗೆ ಕಾರ್ಪೆನಟರಿ ಬಿಸಿನೆಸ್ ಮಾಡಲು ಮಳಿಗೆಯನ್ನು ಬಾಡಿಗೆಗೆ ಬೇಕೆಂದು ಕೇಳಿದರು. ಅದರಂತೆ ಹಣದ ಚೌಕಾಸಿ ನಡೆಸಿ 30,000 ಅಡ್ವಾನ್ಸ್ ಮತ್ತು 2,200 ರೂ. ತಿಂಗಳ ಬಾಡಿಗೆಯ ಕರಾರಿನಲ್ಲಿ ಮಳಿಗೆಯನ್ನು ಬಾಡಿಗೆಗೆ ಕೊಟ್ಟರು.

ಇದನ್ನೂ ಓದಿರಿ: ಗೌರಿ ಹತ್ಯೆ ವಿಚಾರಣೆ: ಹಿಟ್ ಲಿಸ್ಟ್‌‌ನಲ್ಲಿ 8 ವಿಚಾರವಾದಿಗಳ ಹೆಸರಿತ್ತು; ಐದು ಸಾಕ್ಷಿಗಳು ನುಡಿದಿದ್ದೇನು?

ಅಲ್ಲಿಂದಾಚೆಗೆ ಸುರೇಶ್ ಆಗಾಗ ವಾಹನದಲ್ಲಿ ಮರದ ಸಾಮಾನುಗಳನ್ನು ತಂದು ಮಳಿಗೆಯಲ್ಲಿ ಇರಿಸಿ ಹೋಗುತ್ತಿದ್ದರು. ಆದರೆ 2017 ಅಕ್ಟೊಬರ್ ನಲ್ಲಿ ದಿಢೀರನೆ ಮನೆ ಖಾಲಿ ಮಾಡುವುದಾಗಿಗೆ ಕೇಳಿ ಅಡ್ವಾನ್ಸ್ ವಾಪಸ್ ಮಾಡಲು ಕೇಳಿದರು. ಮೊದಲಿಗೆ ಕರಾರಿನಂತೆ ಕೂಡಲೇ ಕೊಡಲಾಗುವುದಿಲ್ಲ ಎಂದು ಹೇಳಿದರೂ ಪದೇ ಪದೇ ಮನವಿ ಮಾಡಿದನುಸಾರ ಸ್ವಲ್ಪ ಹಣ ಕಡಿತ ಮಾಡಿಕೊಂಡು ಅಡ್ವಾನ್ ವಾಪಸ್ ಮಾಡಿದರು.

2018ರ ಜೂನ್‌ ನಲ್ಲಿ ಪೊಲೀಸರು ಈ ಸುರೇಶ್ ಅವರನ್ನು ಕರೆದುಕೊಂಡು ಬಂದು ಆತ ಬಾಡಿಗೆಗೆ ಇದ್ದ ಮಳಿಗೆಯ ಪಂಚನಾಮೆ ಮಾಡಬೇಕೆಂದರು. ಆಗಲೇ ಆತ ಗೌರಿ ಅವರ ಕೊಲೆಯಲ್ಲಿ ಭಾಗಿಯಾಗಿದ್ದ ಎಂದು ತನಗೆ ಗೊತ್ತಾಯಿತು ಎಂದು ಅವರು ಹೇಳಿದರು.

ತಮ್ಮ ಸಮಕ್ಷಮದಲ್ಲೇ ಮಳಿಗೆಯ ಬೇಗ ತೆಗೆದು ಪೊಲೀಸರು ಪಂಚನಾಮೆ ಮಾಡಿದರು. ಒಂದು ಇಸ್ತ್ರಿ ಪೆಟ್ಟಿಗೆ, ಒಂದು ಟ್ರಂಕ್ , ಸೂಟ್ ಕೇಸ್, ಒಂದು ಶಾಲ್ ಮತ್ತು ಅದಕ್ಕೆ ಅಂಟಿಕೊಂಡಿದ್ದ ತಲೆಗೂದಲುಗಳನ್ನು ಸಂಗ್ರಹಿಸಿ ಅವಕ್ಕೆ ತನ್ನ ಸಹಿ ಪಡೆದರು ಎಂದು ಹೇಳಿದರು. ಮತ್ತು ಕೋರ್ಟಿನಲ್ಲಿ ಹಾಜರಿ ಪಡೆದ ಆ ವಸ್ತುಗಳನ್ನು ಮತ್ತು ವಿಡಿಯೋ ಕಾನ್ಫರೆನ್ಸ್ ನಲ್ಲಿದ್ದ ಸುರೇಶ್ ಅವರನ್ನು ಗುರುತಿಸಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯು ಯಾರಿಂದ ಸೈಟನ್ನು ಖರೀದಿ ಮಾಡಿದ್ದು , ಹಾಗೂ ಕಟ್ಟಡ ಕಟ್ಟಲು ಗ್ರಾಮ ಪಂಚಾಯತಿಯ ಅನುಮತಿ ಪಡೆದುಕೊಂಡಿದ್ದಿರೆ ಎಂದು ಕೇಳಿದರು . ಅದಕ್ಕೆ ಸಾಕ್ಷಿಯು ಅನುಮತಿ ಪಡೆದುಕೊಂಡಿಲ್ಲವೆಂದರು. ಮಳಿಗೆಗಳು ಯಾವ ಸಾಲಿನಲ್ಲಿ ಕಟ್ಟಲಾಗಿದೆ ಎಂದು ಆರೋಪಿ ಪರ ವಕೀಲರು ಪ್ರಶ್ನಿಸಿದರು.

ಪೊಲೀಸರು ವಶ ಪಡಿಸಿಕೊಂಡ ಟ್ರಂಕಿನೊಳಗಿದ್ದ ಸೂಟ್ ಕೇಸಿನ ಬಣ್ಣ, ಶಾಲಿನ ಬಣ್ಣ , ವಶಪಡಿಸಿಕೊಂಡ ಕೂದಲುಗಳ ಸಂಖ್ಯೆ ಮತ್ತು ಅದರ ಉದ್ದ , ಇತ್ಯಾದಿ ನಿಖರ ವಿವರಗಳನ್ನು ಪಾಟಿ ಸವಾಲಿನಲ್ಲಿ ಕೇಳಲಾಯಿತು.

ಒಟ್ಟು ಆರು ಕೂದಲನ್ನು ವಶಪಡಿಸಿಕೊಂಡರೆಂದು ಹೇಳಿದ ಸಾಕ್ಷಿಯು ಕೂದಲಿನ ಉದ್ದ ಅಥವಾ ಶಾಲಿನ ಬಣ್ಣ ಇತ್ಯಾದಿಗಳು ನೆನಪಿಲ್ಲ ಎಂದು ಉತ್ತರಿಸಿದರು. ಹಾಗೂ ಆರೋಪಿ ಪರ ವಕೀಲರು ಸುಳ್ಳು ಸಾಕ್ಷ್ಯ ಹೇಳುತ್ತಿದ್ದೀರಾ ಎಂದು ಮಾಡಿದ ಆರೋಪವನ್ನು ನಿರಾಕರಿಸಿದರು.

  • ರಾಜಾರಾಮ್, ಕಡಬಗೆರೆಯಲ್ಲಿ ” ಚಂಪಾ ಹೋಮ್ ಅಪ್ಲಿಯನ್ಸ್ ” ಎಂಬ ಅಂಗಡಿ ಇಟ್ಟುಕೊಂಡು 7-8 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದಾರೆ. . ವಿಚಾರಣೆಯಲ್ಲಿ ಹಾಜರು ಪಡಿಸಿದ ಇಸ್ತ್ರಿ ಬಾಕ್ಸು ತಮ್ಮ ಅಂಗಡಿಯಿಂದ ಖರೀದಿಯಾದ ಇಸ್ತ್ರಿ ಪೆಟ್ಟಿಗೆ ಎಂದು ಗುರುತಿಸಿದರು. ಮತ್ತು ಅದನ್ನು ಖರೀದಿ ಮಾಡಿದವರು ಬಿಲ್ ಬೇಡವೆಂದಿದ್ದರಿಂದ 700 ರೂ. ಮಾಲನ್ನು 600 ಕ್ಕೆ ಮಾರಿದನೆಂದು ಹೇಳಿದರು. ಹಾಗೂ ಖರೀದಿ ಮಾಡಿದ ವ್ಯಕ್ತಿಯಾದ ಸುರೇಶ್ ಅನ್ನು ವಿಡಿಯೋ ಕಾನ್ಫರೆನ್ಸ್ ನಲ್ಲಿ ಗುರುತಿಸಿದರು.

ಪಾಟಿ ಸವಾಲಿನಲ್ಲಿ ಸಾಕ್ಷಿಯು ತಾವು ನಡೆಸುತ್ತಿದ್ದ ಅಂಗಡಿಯು ತಮ್ಮ ಸಹೋದರಿಯದೆಂದು, ತಾವಲ್ಲದೆ ತಮ್ಮ ಅಂಗಡಿಯನ್ನು ತನ್ನ ಸಹೋದರ ಕೂಡ ನಡೆಸುತ್ತಾನೆಂದು ಹೇಳಿದರು. ತಮ್ಮ ಅಂಗಡಿಗೆ GST ನಂಬರ್ ಇದ್ದರೂ ಆದಿಲ್ಲದೆ ಸರಕುಗಳನ್ನು ಮಾರಿದ್ದವೆಂದು ಒಪ್ಪಿಕೊಂಡರು. ಪೋಲೀಸರ ಮುಂದೆ ಎರಡು ಬಾರಿ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ಒಮ್ಮೆ ಹೇಳಿಕೆ ನೀಡಿರುವುದಾಗಿ ಹೇಳಿದರು.

ಹಾಗೂ ಕಳೆದ ಏಳೆಂಟು ವರ್ಷಗಳಲ್ಲಿ ಸಾವಿರಾರು ಜನ ತಮ್ಮ ಅಂಗಡಿಗೆ ಬಂದುಹೋಗಿದ್ದರು ಸುರೇಶ್ ಅವರನ್ನು ಮಾತ್ರ ಹೇಗೆ ಗುರುತು ಹಿಡಿದಿರಿ ಎಂದು ಕೇಳಿದಾಗ ಖರೀದಿ ಮಾಡಿದಾಗ ಆತ ತುಂಬಾ ಸಮಯ ಮಾಡಿದ ಚೌಕಾಸಿ ಇಂದಾಗಿ ನೆನಪಿನಲ್ಲಿದ್ದಾರೆ ಎಂದು ಉತ್ತರಿಸಿದರು.

  • ರೂಪಾವತಿ ಎಂಬುವರು ಗಂಗಯ್ಯನವರ ಮಗಳಾಗಿದ್ದು ಭಾರತ್ ನಗರದಲ್ಲಿ ವಾಸಿಸುತ್ತಾರೆ. ಸೀಗೇಹಳ್ಳಿಯ ಗೆಟ್ ಬಳಿಯ ಅರ್ಕಾವತಿ ನಗರದಲ್ಲಿ ತಂದೆ ಕೊಟ್ಟ ಸೈಟಿನಲ್ಲಿ ಮತ್ತೊಂದು ಮನೆಯನ್ನು ಬಾಡಿಗೆಗೆ ಕೊಡಲು 2015 ರಲ್ಲಿ ಕಟ್ಟಿದ್ದಾರೆ. ಸೀಗೇಹಳ್ಳಿಯ ತನ್ನ ಸಹೋದರಿ ಭಾರತೀಯ ಫೋನ್ ನಂಬರ್ ಕೊಟ್ಟು ಮನೆ ಬಾಡಿಗೆಗೆ ಇದೆ ಎಂದು ಜಾಹಿರಾತು ಕೊಟ್ಟಿದ್ದರು. 2017 ರ ಮೇ ತಿಂಗಳಲ್ಲಿ ಸುರೇಶ್ ಎಂಬುವರು ಎರಡನೇ ಮಹಡಿಯಲ್ಲಿರುವ ಮನೆ ಬಾಡಿಗೆಗೆ ಬೇಕೆಂದು ಹೇಳಿ 25,000 ಅಡ್ವಾನ್ಸ್ ಮತ್ತು ರೂ. 4100 ಬಾಡಿಗೆಗೆ ಕರಾರು ಮಾಡಿಕೊಂಡು ಮೇ ತಿಂಗಳಿಂದಲೇ ವಾಸಿಸಲಾರಂಭಿಸಿದರು. ಇಪ್ಪತ್ತು ದಿನಗಳ ತರುವಾಯ ತಾನು ಮನೆಗೆ ಹೋದಾಗ ಸುರೇಶ್ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿದ್ದ ಅವರ ಕುಟುಂಬದವರಿಗೆ ಮನೆಯನ್ನು ಶುಭ್ರವಾಗಿಟ್ಟುಕೊಳ್ಳಲು ತಿಳಿಸಿದೆ. ಒಂದು ವರ್ಷದ ನಂತರ ಅವರು ಮನೆ ಖಾಲಿ ಮಾಡಿದರು. ಅದಾದ ಸ್ವಲ್ಪ ದಿನಗಳಲ್ಲಿ ಪೊಲೀಸರು ಗೌರಿ ಲಂಕೇಶ್ ಕೊಲೆಯ ಸಂಬಂಧ ವಿಚಾರಣೆ ಮಾಡಲು ಸುರೇಶ್ ಮನೆಗೆ ಬಂದಿದ್ದರೆಂದು ನನ್ನ ತಂಗಿ ತಿಳಿಸಿದಳು ಎಂದು ಅವರು ಸಾಕ್ಷ್ಯ ನುಡಿದರು.

ಪಾಟಿ ಸವಾಲು ಮಾಡಿದ ಆರೋಪಿ ಪರ ವಕೀಲರಿಗೆ ಉತ್ತರಿಸುತ್ತಾ ಸಾಕ್ಷಿಯು ತನ್ನ ಗಂಡ ಪೊಲೀಸ್ ಅಧಿಕಾರಿಯಾಗಿದ್ದು ಎಸಿಬಿಯಲ್ಲಿ ಕೆಲಸ ಮಾಡುತ್ತಾರೆಂದು ಹೇಳಿದರು. ಬಾಡಿಗೆ ಕರಾರಿನಲ್ಲಿ ಹಲವಾರು ವಿವರಗಳು ಇಲ್ಲದಿರುವುದನ್ನು ಒಪ್ಪಿಕೊಂಡ ಸಾಕ್ಷಿಯನ್ನು ಕರಾರು ಪತ್ರವೇ ಸುಳ್ಳೆಂದೂ , ಗಂಡನೂ ಪೊಲೀಸ್ ಅಧಿಕಾರಿಯಾಗಿರುವುದರಿಂದ ಪೊಲೀಸರಿಗೆ ಸಹಾಯ ಆಗಲೆಂದು ಸುಳ್ಳು ಸಾಕ್ಷ್ಯ ನುಡಿಯುತ್ತೀದ್ದೀರೆಂದು ಆರೋಪಿ ಪರ ವಕೀಲರು ಮಾಡಿದ ಆರೋಪವನ್ನು ನಿರಾಕರಿಸಿದರು.

  • ಭಾರತಿ, ಗೃಹಿಣಿ, ರೂಪಾವತಿಯವರ ಸಹೋದರಿ. ರೂಪಾವತಿಯವರು ಭಾರತ್ ನಗರದಲ್ಲಿ ವಾಸ ಮಾಡಲು ಹೋದ ಮೇಲೆ ಅವರ ಮನೆಗಳ ಬಾಡಿಗೆ ವ್ಯವಹಾರಗಳನ್ನು ತಾನೇ ನೋಡಿಕೊಳ್ಳುತ್ತಿದ್ದೇನೆಂದು ಭಾರತಿಯವರು ಸಾಕ್ಷ್ಯ ನುಡಿದರು. ಹಾಗೂ 2017ರ ಮೇ ತಿಂಗಳಲ್ಲಿ ಸುರೇಶ್ ಎಂಬುವರು ತನಗೆ ಫೋನ್ ಮಾಡಿ ಮನೆ ಬಾಡಿಗೆಗೆ ಬೇಕೆಂದು ಕೇಳಿದರು. ಅದರಂತೆ 25,000 ಅಡ್ವಾನ್ಸ್ ಹಾಗೂ ರೂ. 4100 ಬಾಡಿಗೆಯ ಕರಾರಿಗೆ ತಾನು ಭಾರತ್ ನಗರದಲ್ಲಿರುವ ಸಹೋದರಿ ರೂಪಾವತಿಯ ಸಹಿ ಪಡೆದುಕೊಂಡು ಬಂದೆ ಎಂದು ಸಾಕ್ಷ್ಯ ಹೇಳಿದರು. ಆ ನಂತರ 2018ರ ಜೂನ್ ತಿಂಗಳಲ್ಲಿ ಪೊಲೀಸರು ಸುರೇಶ್ ಅವರನ್ನು ಗೌರೀ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಹುಡುಕಿಕೊಂಡು ಬಂದರು. ಗೌರೀ ಲಂಕೇಶ್ ಹತ್ಯೆ ಆದಾಗ ಆರೋಪಿ ಸುರೇಶ್ ಇದೆ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದರು ಮತ್ತು ಆರೋಪಿ ಸುರೇಶ್ ಅವರನ್ನು ವಿಡಿಯೋ ಕಾನ್ಫರೆನ್ಸ್‌‌ನಲ್ಲಿ ಗುರುತಿಸಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಬಾಡಿಗೆ ಕರಾರಿನಲ್ಲಿ ಪ್ರತ್ಯೇಕ ಸಾಕ್ಷಿ ಇಲ್ಲದಿರುವುದರ ಬಗ್ಗೆ ಪ್ರಶ್ನಿಸಿದರು. ಸಾಕ್ಷಿಯು ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಆರೋಪಿಸಿದಾಗ ಅದನ್ನು ಸಾಕ್ಷಿಯು ನಿರಾಕರಿಸಿದರು.

  • ಶ್ರೀನಿವಾಸಮೂರ್ತಿ, ನೆಲಗುಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ – ಇವರನ್ನು ಪೊಲೀಸರು ಪಂಚರಾಗಿ ಸಹಕರಿಸಲು ಅಧಿಕೃತವಾಗಿ ಕೋರಿ ಜೊತೆಗೆ ಕರೆದೊಯ್ದಿದ್ದರು.

ಮೊದಲು ತಾವೆಲ್ಲರೂ ಸೀಗೇಹಳ್ಳಿ ಗೆಟ್ ಬಳಿ ಹೋದಾಗ ಅಲ್ಲಿ ಆರೋಪಿ ಸುರೇಶ್ ಅವರ ಜೊತೆಗೆ ತನಿಖಾಧಿಕಾರಿ ಇದ್ದರು ಎಂದಿದ್ದಲ್ಲದೆ ವಿಡಿಯೋ ಕಾನ್ಫರೆನ್ಸ್‌‌ನಲ್ಲಿದ್ದ ಸುರೇಶ್ ಅವರನ್ನು ಗುರುತಿಸಿದರು. ಆಮೇಲೆ ಎಲ್ಲರೂ ಎರಡನೇ ಮಹಡಿಯಲ್ಲಿ ಸುರೇಶ್ ಬಾಡಿಗೆಗಿದ್ದ ಮನೆಗೆ ಹೋದರು. ಸುರೇಶ್ ಬಾಗಿಲನ್ನು ತೆರೆದರು. ಒಂದು ಮಲಗುವ ಕೊನೆ, ಒಂದು ಹಾಲ್ ಮತ್ತು ಪೂಜಾ ಸ್ಥಳ ಇದ್ದ ಆ ಮನೆಯಲ್ಲಿ ಒಂದು ಡಬಲ್ ಬೆಡ್ ಕಾಟ್ ಇತ್ತು.

2017 ಸೆಪ್ಟೆಂಬರ್ 2 ರಿಂದ 9 ರವರೆಗೆ ತಾನು ಈ ಮನೆಯಲ್ಲಿ ಇರಲಿಲ್ಲವೆಂದು ಹೇಳಿದ ಸುರೇಶ್ , ‘ಸರ್’ ಎಂದು ಕರೆಸಿಕೊಳ್ಳುತ್ತಿದ್ದ ಹಿಂದಿ ಮಾತಾಡುವ ವ್ಯಕ್ತಿ ಆ ದಿನಗಳಲ್ಲಿ ಇಲ್ಲಿದ್ದರೆಂದೂ ಸುರೇಶ್ ಹೇಳಿದುದಾಗಿ ಸಾಕ್ಷ್ಯ ನುಡಿದರು. ಸುರೇಶ್ ಅವರು ಸೆಪ್ಟೆಂಬರ್ 9ರಂದು ಮನೆಗೆ ವಾಪಸ್ ಬಂದಾಗ ಮನೆ ಅಸ್ತವ್ಯಸ್ತವಾಗಿತ್ತೆಂದು ತನಿಖಾಧಿಕಾರಿ ಮುಂದೆ ತನ್ನ ಸಮಕ್ಷಮದಲ್ಲಿ ಹೇಳಿದರೆಂದು ಸಾಕ್ಷ್ಯ ಹೇಳಿದರು. ಮತ್ತು ಸುರೇಶ್ ಹೇಳಿದ್ದೆಲ್ಲವನ್ನು ತನ್ನೆದುರಿಗೆ ಪೊಲೀಸರು ಬರೆದುಕೊಂಡು ತನ್ನ ಸಹಿಯನ್ನೂ ಪಡೆದುಕೊಂಡರೆಂದು ಸಾಕ್ಷ್ಯ ನುಡಿದರು.

ಆ ನಂತರ ಅಲ್ಲಿಂದ ಕಡಬಗೆರೆ ಕ್ರಾಸ್‌ನಲ್ಲಿ ಶ್ರೀಲಕ್ಷಿ ಲೇಔಟ್‌‌ನಲ್ಲಿರುವ ಅಂಗಡಿ ಮಳಿಗೆಗೆ ಹೋಗಿ ಎಲ್ಲರ ಸಮಕ್ಷಮ ಸುರೇಶ್ ಬಾಗಿಲು ತೆರೆದರೆಂದು ಹೇಳಿದರು. ಮಳಿಗೆಯಲ್ಲಿ ಟ್ರಂಕ್, ಟ್ರಂಕ್ ಒಳಗೆ ಸೂಟ್ ಕೇಸ್, ಶಾಲ್ ಮತ್ತು ಸೂಟ್ ಕೇಸ್ ಮತ್ತು ಶಾಲಿನ ಮೇಲೆ ಇದ್ದ ತಲೆಗೂದಲುಗಳನ್ನು ವಶಕ್ಕೆ ಪಡೆದುಕೊಂಡರೆಂದು ಹೇಳಿದರು.

ಇದನ್ನೂ ಓದಿರಿ: ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಶ್ರೀನಿವಾಸ ಮೂರ್ತಿಯವರು ತಾನು ಭಾಗವಹಿಸಿದ ಪಂಚನಾಮೆ ನಡೆದ ಎರಡು ಕಟ್ಟಡಗಳು ತಾನು ಕೆಲಸ ಮಾಡುತ್ತಿರುವ ಮಾಚೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವುದಿಲ್ಲವೆಂದು ಉತ್ತರಿಸಿದರು. ಇದಲ್ಲದೆ ಮನೆ ಮತ್ತು ಮಳಿಗೆಗಳ ವಿವರ ಹಾಗೂ ವಶಪಡಿಸಿಕೊಂಡ ವಸ್ತುಗಳ ನಿಖರ ವಿವರಗಳನ್ನು ಕೇಳಿದಾಗ ಕೆಲವು ನೆನಪಿಲ್ಲವೆಂದು ಹೇಳಿದರು ಮತ್ತು ಪೊಲೀಸರಿಗೆ ಅನುಕೂಲವಾಗಲೆಂದು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆಂಬ ಆರೋಪವನ್ನು ಅಲ್ಲಗೆಳೆದರು.

  • ಡಾ. ಶೈಲೇಶ್ ದೇಶಪಾಂಡೆ– ಇವರು ವಿಜಯಪುರದಲ್ಲಿ ಕಳೆದ 22 ವರ್ಷಗಳಿಂದ ಪ್ರಾಕ್ಟೀಸ್ ಮಾಡುತ್ತಿರುವ Orthopedic Surgeon. 2014ರಿಂದ ಅವರು ವಿಜಾಪುರದಲ್ಲಿ ‘ವಾಸುದೇವ ಆಸ್ಪತ್ರೆ’ಯನ್ನು ನಡೆಸುತ್ತಿದ್ದಾರೆ. ಅವರು ಸಾಕ್ಷ್ಯ ನುಡಿಯುತ್ತಾ 2018ರ ಫೆಬ್ರವರಿ 10 ರಂದು ಪರಶುರಾಮ್ ವಾಘಮೋರೆ ಎಂಬುವರು ಮೂಗಿನ ಸಮಸ್ಯೆ ಗಾಗಿ ತಮ್ಮ ಬಳಿ ಬಂದರು, ಅವರಿಗೆ ಮೂಗಿನ ಸರ್ಜರಿ ಮಾಡಿದ್ದಾಗಿ ಹೇಳಿದರು ಮತ್ತು ವಿಡಿಯೋ ಕಾನ್ಫರೆನ್ಸಿನಲ್ಲಿ ವಾಘಮೋರೆಯನ್ನು ಗುರುತು ಹಿಡಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಾ ಆರೋಪಿಯು ಸರ್ಜರಿ ಬಿಲ್ಲಿನಲ್ಲಿ ರಿಯಾಯತಿ ಕೇಳಿದಾಗ ಯಾವುದಾದರೂ ಸಂಘಟನೆಯ ಹೆಸರು ಹೇಳಿದ್ದರ ಬಗ್ಗೆ ತನಗೆ ನೆನಪಿಲ್ಲವೆಂದು ಹೇಳಿದರು ಮತ್ತು ರಿಯಾಯತಿ ಕೊಡುವ ಪದ್ಧತಿಯನ್ನು ಆರೋಪಿ ಪರ ವಕೀಲರು ಪ್ರಶ್ನಿಸಿದಾಗ ವಿವರಗಳನ್ನು ಒದಗಿಸಿದರು. ಹಾಗೂ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆಂಬ ಆರೋಪವನ್ನು ಸಾರಾ ಸಗಟು ನಿರಾಕರಿಸಿದರು.

  • ಡಾ. ಪ್ರಹ್ಲಾದ್ ಪಾಟೀಲ್ ವಿಜಯಪುರದ ವಾಸುದೇವ ಆಸ್ಪತ್ರೆಯ ಅರಿವಳಿಕೆ ತಜ್ಞರು. ಇವರು ಸಾಕ್ಷ್ಯ ನುಡಿಯುತ್ತಾ ಪರಶುರಾಮ ವಾಘಮೋರೆ ಮೂಗಿನ ಸಮಸ್ಯೆಗಾಗಿ ಸರ್ಜರಿ ಮಾಡಿಸಿಕೊಳ್ಳಲು ತಮ್ಮ ಆಸ್ಪತ್ರೆಯಲ್ಲಿ ದಾಖಲಾದ ಬಗ್ಗೆ ಸಾಕ್ಷ್ಯ ನುಡಿದರು. ಮತ್ತು ವಿಡಿಯೋ ಕಾನ್ಫರೆನ್ಸಿನಲ್ಲಿ ವಾಘಮೋರೆಯನ್ನು ಗುರುತಿಸಿದರು. ಹಾಗೂ ಬಿಲ್ಲಿನಲ್ಲಿ ರಿಯಾಯಿತಿ ಕೇಳುವಾಗ ಆತ ತಾನು ಹಿಂದೂ ಸಂಘಟನೆಗೆ ಸೇರಿದವನೆಂದು ಹೇಳಿದ್ದಾಗಿ ತಿಳಿಸಿದರು. ಆತನ ಜೊತೆಗೆ ರಾಕೇಶ್ ಮಠ್ ಎಂಬ ಆತನ ಸಂಬಂಧಿಯೂ ಜೊತೆಗಿದ್ದುದಾಗಿ ಹೇಳಿದರು.

ಇದನ್ನೂ ಓದಿರಿ: ಗೌರಿ ಲಂಕೇಶ್ ಹತ್ಯೆ ವಿಚಾರಣೆ: ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗುರುತಿಸಿದ ಸಾಕ್ಷಿಗೆ ಜೀವ ಬೆದರಿಕೆ

ಪಾಟಿ ಸವಾಲು ಮಾಡುತ್ತಾ ಆರೋಪಿ ಪರ ವಕೀಲರು ವಾಸುದೇವ ಆಸ್ಪತ್ರೆ ಖಾಸಗಿ ಆಸ್ಪತ್ರೆಯಾಗಿದ್ದು ರೋಗಿಯೊಬ್ಬನಿಗೆ ರಿಯಾಯತಿ ಕೊಡುವುದು ಆಸ್ಪತ್ರೆಯ ನಿರ್ದೇಶಕರ ಸಭೆಯಲ್ಲಿ ತೀರ್ಮಾನವಾಗಬೇಕಲ್ಲವೇ ಎಂದು ಕೇಳಿದರು. ಅಂಥ ಒಂದು ಪದ್ಧತಿ ತಮ್ಮ ಆಸ್ಪತ್ರೆಯಲ್ಲಿ ಇರುವ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ಸಾಕ್ಷಿಯು ಉತ್ತರಿಸಿದರು. ಆರೋಪಿ ಪರ ವಕೀಲರು ವಾಘಮೋರೆ ತಮ್ಮ ಆಸ್ಪತ್ರೆಗೆ ಬಂದಿದ್ದೇ ಸುಳ್ಳು ಹಾಗೂ ತಾವು ಸುಳ್ಳು ಸಾಕ್ಷ್ಯ ಹೇಳುತ್ತಿದ್ದೇವೆ ಎಂದು ಮಾಡಿದ ಆರೋಪವನ್ನು ಸಾರಾ ಸಗಟು ತಿರಸ್ಕರಿಸಿದರು.

  • ಡಾ. ಬಸವರಾಜ್ ವಾಲೀಕಾರ್, ENT ತಜ್ಞರು, ವಾಸುದೇವ ಆಸ್ಪತ್ರೆ, ವಿಜಾಪುರ – ಪರುಶುರಾಮ ವಾಘಮೋರೆಗೆ ಸರ್ಜರಿ ಮಾಡಿದ ಈ ವೈದ್ಯರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಾಘಮೋರೆಯನ್ನು ಗುರುತಿಸಿದರು. ಆತನಿಗಿದ್ದ ಸಮಸ್ಯೆ ಮತ್ತು ಮಾಡಿದ ಸರ್ಜರಿಯ ವಿವರಗಳನ್ನೂ ಹೇಳಿದರು. ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ತಾವು ಸುಳ್ಳು ಸಾಕ್ಷ್ಯ ಹೇಳುತ್ತಿರುವುದಾಗಿ ಮಾಡಿದ ಆರೋಪವನ್ನು ನಿರಾಕರಿಸಿದರು.

ಫೆಬ್ರವರಿ ತಿಂಗಳ ವಿಚಾರಣೆ ಫೆಬ್ರವರಿ 14ರಿಂದ ನಡೆಯಲಿದೆ. ಅಂದ ಹಾಗೆ, ಹಾಲಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ರಾಮಚಂದ್ರ ಹುದಾರ್ ಅವರನ್ನು ಸುಪ್ರೀಂ ಕೋರ್ಟಿನ ಕೊಲಿಜಿಯಂ, ಹೈಕೋರ್ಟಿನ ನ್ಯಾಯಾಧೀಶರನ್ನಾಗಿ ಬಡ್ತಿ ಮಾಡಲು ಶಿಫಾರಸ್ಸು ಮಾಡಿದೆ.

ವರದಿ: ಶಿವಸುಂದರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...