Homeಮುಖಪುಟ2020ರಲ್ಲೂ ಮಾತನಾಡುತ್ತಿದ್ದಾರೆ ಗೌರಿ! -ಗೀತಾ ಹರಿಹರನ್

2020ರಲ್ಲೂ ಮಾತನಾಡುತ್ತಿದ್ದಾರೆ ಗೌರಿ! -ಗೀತಾ ಹರಿಹರನ್

2017ರಿಂದ ನಾವು ಗೌರಿಗೆ ತೋರಿಸಬಹುದಿದ್ದ ಪ್ರತಿಭಟನೆಯ ಹಲವಾರು ದೃಶ್ಯಗಳಿವೆ: ಆಕೆ ಅಷ್ಟೊಂದು ಪ್ರೀತಿಸಿದ ಯುವಜನರು ಕ್ಯಾಂಪಸ್‍ಗಳಲ್ಲಿ, ನ್ಯಾಯಾಲಯಗಳಲ್ಲಿ, ಆನ್‍ಲೈನ್‍ನಲ್ಲಿ, ಬೀದಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗಳು.

- Advertisement -
- Advertisement -

ಸೆಪ್ಟೆಂಬರ್ 5, 2007ರಲ್ಲಿ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ಮನೆಯ ಮುಂಭಾಗದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಏಕೆ? ಇದಕ್ಕೆ ಸಾಧ್ಯವಿರುವ ಒಂದೇ ಒಂದು ಉತ್ತರವೆಂದರೆ: ಅವರು ಪತ್ರಕರ್ತರಾಗಿ ಅಥವಾ ಹೋರಾಟಗಾರರಾಗಿ ತನ್ನ ಕೆಲಸವನ್ನು ಅತ್ಯುತ್ತಮವಾಗಿ ಮಾಡುತ್ತಿದ್ದರು. ಅವರು ವಿವೇಕದ ಧ್ವನಿಯಾಗಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಅವರು ಭಿನ್ನಮತದ ಧ್ವನಿಯಾಗಲು ಆಗ್ರಹಿಸಿದ್ದರು. ಅನ್ಯಾಯ ಮತ್ತು ಅಸಮಾನತೆಗಳನ್ನು ಕಂಡಾಗ ಅವರು ಪ್ರತಿರೋಧ ತೋರಿಸಲು, ಆ ಕುರಿತು ಕಾರ್ಯಪ್ರವೃತ್ತರಾಗಲು ಆಗ್ರಹಿಸಿದ್ದರು. ಅದಕ್ಕಾಗಿ ಕ್ರೂರವಾಗಿ ಅವರನ್ನು ದಮನಿಸಿ ಅವರ ಬಾಯಿ ಮುಚ್ಚಿಸಲಾಯಿತು- ಅವರಿಗಿಂತಲೂ ಮೊದಲು ಕೆಲವು ವಿಚಾರವಾದಿಗಳು, ವಿದ್ವಾಂಸರು ಮತ್ತು ಹೋರಾಟಗಾರರಿಗೆ ಮಾಡಿದಂತೆಯೇ. ನರೇಂದ್ರ ಧಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿಯವರಿಗೆ ಮಾಡಿದಂತೆಯೇ. ನಾವು ಈ ಹೆಸರುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಥವಾ ಈ ವ್ಯಕ್ತಿಗಳು ಏನು ಮಾಡಿದ್ದರು, ಅವರು ಯಾವುದರ ಪರವಾಗಿ ಎದ್ದುನಿಂತಿದ್ದರು ಎಂಬದನ್ನೂ ನಾವು ಎಂದಿಗೂ ಮರೆಯಲಾರೆವು.

ವಾಸ್ತವವಾಗಿ ಹಾಗೆ ಮರೆತುಬಿಡುವ ಅಪಾಯವಿಲ್ಲ. ಎರಡು ಕಾರಣಗಳಿಗಾಗಿ: ಒಂದು ಕೆಟ್ಟದ್ದು. ಇನ್ನೊಂದು ಒಳ್ಳೆಯದು. ಮೂರು ವರ್ಷಗಳ ನಂತರ, 2020ರಲ್ಲಿ ಪರಿಸ್ಥಿತಿಯು ಹಾಗೆಯೇ ಇದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇನ್ನಷ್ಟು ಹದಗೆಟ್ಟಿದೆ.

ಎಲ್ಲಾ ರೀತಿಯ ವಿರೋಧಗಳ ದಮನವನ್ನು ಪರಿಗಣಿಸಿ. 2018ನ್ನು ಪರಿಗಣಿಸಿ. 2018ರ ಜನವರಿ 1 ದಲಿತ ಸಮುದಾಯದ ಗೌರವದ ಸಂಕೇತವಾದ, ಮತ್ತು ಅದರ ಏಕತೆಯ ಪ್ರಬಲ ಸಂಕೇತವಾದ ಭೀಮಾ ಕೋರೆಗಾಂವ್ ಕದನದ ದ್ವಿಶತಮಾನೋತ್ಸವದ ದಿನವಾಗಿತ್ತು. ದೊಡ್ಡ ಪ್ರಮಾಣದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದರ ಸಂಚಾಲಕರು ಪುಣೆಯ ಗೌರವಾರ್ಹ ನಿವೃತ್ತ ನ್ಯಾಯಾಧೀಶರಾದ ಬಿ.ಜಿ. ಕೋಲ್ಸೆ-ಪಾಟೀಲ್ ಮತ್ತು ಪಿ.ಬಿ.ಸಾವಂತ್ ಅವರಾಗಿದ್ದರು. ಅವರು ಹಿಂದೆಯೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು: ಅದು ಕೋಮುವಾದದ ವಿರುದ್ಧ ಆಗಿರಲಿ; ಅಥವಾ ಸಂವಿಧಾನದ ರಕ್ಷಣೆಗಾಗಿರಲಿ. ಈ ಬಾರಿ ಅವರು ಈ ಕಾರ್ಯಕ್ರಮವನ್ನು ಎಲ್ಗಾರ್ ಪರಿಷದ್ ಎಂದು ಕರೆಯಲು ನಿರ್ಧರಿಸಿದ್ದರು. ಎಲ್ಗಾರ್ ಪದವು ಆ ಸಂದರ್ಭಕ್ಕೆ ತಕ್ಕುದಾಗಿತ್ತು. ಅದರ ಅರ್ಥ ಗಟ್ಟಿಯಾದ ಘೋಷಣೆ.

ಕಾರ್ಯಕ್ರಮದ ಆಯೋಜಕರ ಮನಸ್ಸಿನಲ್ಲಿದ್ದ ‘ಘೋಷಣೆ’ ಎಂದರೆ, ಹಿಂದೂತ್ವ ಗುಂಪುಗಳ ಹಿಂಸೆಗೆ ಪ್ರತಿರೋಧ, ಅದರಲ್ಲೂ ಮುಖ್ಯವಾಗಿ ಸ್ವಯಂಘೋಷಿತ ‘ಗೋ ರಕ್ಷಕ’ರ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿತ್ತು. ಆ ಪ್ರತಿಕ್ರಿಯೆ ಇದಾಗಿತ್ತು: ಕೋಮುಶಕ್ತಿಗಳ ವಿರುದ್ಧ ಹೋರಾಡುವುದು. ಆ ಘೋಷಣೆಯು ಇದಾಗಿತ್ತು: ಬಲಪಂಥೀಯ ಶಕ್ತಿಗಳು ಸಂವಿಧಾನವನ್ನು ಸ್ವೀಕರಿಸುವುದಿಲ್ಲ. ಅದು ಭರವಸೆ ನೀಡುವಂತಹ ಪ್ರಜಾಪ್ರಭುತ್ವವನ್ನು ಅವರು ಗೌರವಿಸುವುದಿಲ್ಲ; ಅಥವಾ ಅದು ಕಟ್ಟಲು ಬಯಸುವ ಸಮಾಜವಾದವನ್ನಾಗಲೀ, ಅದರ ಆಧಾರವಾಗಿರುವ ಜಾತ್ಯತೀತತೆಯನ್ನಾಗಲೀ ನಂಬುವುದಿಲ್ಲ. ಇದು ಆ ಎಲ್ಗಾರ್ ಅಥವಾ ಘೋಷಣೆಯಾಗಿತ್ತು. ಅದು ಭಾರತೀಯ ಸಂವಿಧಾನವನ್ನು ಉಳಿಸಲು ಭಾರತೀಯ ಗಣರಾಜ್ಯದ ಅಡಿಪಾಯದ ಸುತ್ತ ನಾಗರಿಕರನ್ನು ಒಟ್ಟುಗೂಡಿಸುವ ಘೋಷಣೆಯಾಗಿತ್ತು. ಅದು ಭಾರತದ ಜನರನ್ನು ರಕ್ಷಿಸುವ ಘೋಷಣೆಯಾಗಿತ್ತು.

ಆ ಕಾರ್ಯಕ್ರಮದಲ್ಲಿ ಸಂಘ ಪರಿವಾರವೂ ಹಾಜರಿತ್ತು: ಸಂವಿಧಾನದ ರಕ್ಷಣೆಗಾಗಿ ಅಲ್ಲ; ಅದರ ಮೇಲೆ ದಾಳಿ ಮಾಡುವ, ಅದು ರಕ್ಷಿಸುತ್ತಿರುವ ಜನರ ಮೇಲೆ ದಾಳಿ ಮಾಡುವ ಸಲುವಾಗಿ. ಅಲ್ಲಿ ಕತೆ ಬದಲಾಯಿತು. ಅದು ಪುಣೆ ಪೊಲೀಸರು ಕಲ್ಪಿಸಿದ ಒಂದು ದುರುದ್ದೇಶದ ಕಟ್ಟುಕತೆಯಾಯಿತು. ಅದೆಂದರೆ, ‘ಬಂಡಾಯದ ಚಿಂತನೆಗಳು’ ಮತ್ತು ಕ್ರಾಂತಿಕಾರಿ ಭಾಷಣಗಳು ಹಿಂಸಾಚಾರಕ್ಕೆ ಕಾರಣವಾದವು ಎಂಬುದು. ಇದು ಸಾಕಷ್ಟು ತೂಕದ ಕತೆಯೆಂದು ಮನವರಿಕೆಯಾಗದಿದ್ದರೆ ಬೇಕಾದೀತು ಎಂದು ಅದಕ್ಕೆ ಪ್ರಧಾನಿ ಹತ್ಯೆ ಸಂಚಿನ ಅಡಿಟಿಪ್ಪಣಿಯನ್ನು ಸೇರಿಸಲಾಯಿತು. ಕವಿಗಳು, ವಿದ್ವಾಂಸರು, ವಕೀಲರು- ಅವರೆಲ್ಲರೂ ಮಾನವ ಹಕ್ಕು ಹೋರಾಟಗಾರು – ಅವರೆಲ್ಲರ ಮೇಲೆ ಮುಗಿಬೀಳಲಾಯಿತು; ಅವರ ಮನೆಗಳನ್ನು ಶೋಧಿಸಲಾಯಿತು; ಅವರ ಪುಸ್ತಕಗಳು, ಕಂಪ್ಯೂಟರ್‍ಗಳಲ್ಲಿ “ಬಂಡಾಯದ ಚಿಂತನೆ”ಗಳಿಗಾಗಿ ಹುಡುಕಾಟ ನಡೆಸಲಾಯಿತು; ಮಾಮೂಲಿಯಾಗಿ ಇದಕ್ಕೆ “ಮಾವೋವಾದಿಗಳ ಜೊತೆ ಸಂಪರ್ಕ” ಎಂಬ ಹೆಸರಿಡಲಾಯಿತು.

ನಾವೀಗ ಇನ್ನೊಂದು ಪಟ್ಟಿಯ ಹೆಸರುಗಳ ಜೊತೆ ಬದುಕಬೇಕಾಗಿದೆ. ಕವಿ ವರವರ ರಾವ್, ‘ಜನರ ವಕೀಲ’ರಾದ ಸುಧಾ ಭಾರದ್ವಾಜ್ ಹಾಗೂ ನಮಗೆ ಬಾಯಿ ಮುಚ್ಚಿ ಕುಳಿತಿರುವಂತೆ ಎಚ್ಚರಿಕೆ ನೀಡುವಂತಹ ಕ್ರೂರ ಉದಾಹರಣೆಗಳಾಗಬೇಕೆಂದು ಇತರ ವಿದ್ವಾಂಸರು, ಲೇಖಕರು, ಹೋರಾಟಗಾರರ ಬೆನ್ನುಹತ್ತಲಾಯಿತು. ಎಚ್ಚರಿಕೆ ಇದು: ಸರಕಾರವನ್ನು ಟೀಕಿಸಬೇಡಿ; ಹಿಂದುತ್ವವನ್ನು ಪ್ರಶ್ನಿಸಬೇಡಿ; ಜನರ ಹಕ್ಕುಗಳ ಕುರಿತು ಮಾತನಾಡಬೇಡಿ.

2019ರಲ್ಲಿ, ಚುನಾವಣಾ ಫಲಿತಾಂಶವು ಹಿಂದೂ ಶ್ರೇಷ್ಟತಾ ವ್ಯಸನಿಗಳಲ್ಲಿ ಪೂರ್ಣ ಪ್ರಮಾಣದ ದಾಳಿ ಮಾಡುವ ಧೈರ್ಯ ಹುಟ್ಟಿಸಿತು. ಕಾಶ್ಮೀರಿ ಜನರಿಗೆ ನೀಡಲಾಗಿದ್ದ ಮುರಿದ ಭರವಸೆಗಳ ಮೇಲೆ ಒಂದರ ನಂತರ ಇನ್ನೊಂದರಂತೆ ದಾಳಿಗಳು ನಡೆದವು. ಸಂವಿಧಾನದ 370ನೇ ವಿಧಿಯನ್ನು ಕಿತ್ತುಹಾಕಲಾಯಿತು; ರಾಜ್ಯದ ಸ್ಥಾನಮಾನವನ್ನು ಕಸಿದುಕೊಳ್ಳಲಾಯಿತು; ಅಸ್ಸಾಮಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‌ಸಿ)ಯ ಭಯಂಕರ ಪರಿಣಾಮಗಳ ಹೊರತಾಗಿಯೂ ಅಖಿಲ ಭಾರತ ಮಟ್ಟದಲ್ಲಿ ಅದನ್ನು ನಡೆಸಲು ಕ್ರಮ ಯೋಜಿಸಲಾಯಿತು.

photo courtesy:The Quint

ನಂತರ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಬಂತು. ಅದನ್ನು ಪೌರತ್ವ ತಿದ್ದುಪಡಿ ಕಾಯಿದೆಯಾಗಿ (ಸಿಎಎ) ಅಂಗೀಕರಿಸಲಾಯಿತು. ಸಿಎಎ, ಮೂಲಭೂತವಾಗಿ ಪೌರತ್ವವನ್ನು ಧರ್ಮಕ್ಕೆ ತಳಕುಹಾಕುವ ಮೂಲಕ ಪೌರತ್ವದ ಪರಿಕಲ್ಪನೆಯನ್ನೇ ಬದಲಿಸಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ, ಅಂದರೆ ಹಿಂದೂಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವವನ್ನು ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಿ ಪೌರತ್ವ ಕಾಯಿದೆ 1955ನ್ನು ಅದು ಬದಲಿಸಿದೆ. ಮುಸ್ಲಿಮರನ್ನು ಇದರಿಂದ ಹೊರತುಪಡಿಸಿರುವುದು ನಿರುಪದ್ರವಿಯೇನಲ್ಲ. ಅದು ಪ್ರತಿಯೊಬ್ಬ ಮುಸ್ಲಿಮ್ ವ್ಯಕ್ತಿಯ ತಲೆಯ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿದೆ; ಗೋಲ್ವಾಲ್ಕರ್ ಕಲ್ಪಿಸಿದ್ದಂತೆ ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಸಾಧ್ಯತೆಯನ್ನು ಜೀವಂತಗೊಳಿಸಿದೆ. ಈ ಪರೋಕ್ಷ ಬೆದರಿಕೆಯನ್ನು ಇಡೀ ಭಾರತಕ್ಕೆ ಎನ್‍ಆರ್‍ಸಿಯನ್ನು ವಿಸ್ತರಿಸುವ ಯೋಜನೆಯ ಜೊತೆಯಲ್ಲಿಯೇ ನೋಡಬೇಕು. ಒಟ್ಟಿನಲ್ಲಿ 2019ರ ಏಪ್ರಿಲ್ ಚುನಾವಣೆಯ ನಂತರ ಹಿಂದೂ ಶ್ರೇಷ್ಟತಾ ವ್ಯಸನಿಗಳು ತೆಗೆದುಕೊಂಡ ಪ್ರತಿಯೊಂದು ಕ್ರಮವೂ ಹೆಚ್ಚು ಹೆಚ್ಚು ಪ್ರಜೆಗಳನ್ನು ಪ್ರಭುತ್ವದೊಂದಿಗಿನ ಒಪ್ಪಂದದಿಂದ ಹೊರತುಪಡಿಸುವ ಹೆಜ್ಜೆಗಳಾಗಿವೆ.

ಇದೇ ಹೊತ್ತಿಗೆ, ಎಲ್ಲಾ ಭಿನ್ನಮತಗಳನ್ನು- ಎಲ್ಲಾ ವಾಕ್‍ಸ್ವಾತಂತ್ರ್ಯಗಳನ್ನು ಹೊಸಕಿಹಾಕುವುದು ಮುಂದುವರಿದಿದೆ. ಪಟ್ಟಿಯು ಬೆಳೆಯುತ್ತಿದೆ, ಉದ್ದಗಲಗಳಿಗೆ ಚಾಚಿಕೊಳ್ಳುತ್ತಿದೆ, ಮುನ್ನುಗ್ಗುತ್ತಿದೆ- ಸುಧಾ ಭಾರದ್ವಾಜ್ ಮತ್ತು ವರವರ ರಾವ್‍ರಿಂದ ಆನಂದ ತೇಲ್ದುಂಬ್ಡೆ ಮತ್ತು ಗೌತಮ್ ನವ್ಲಖಾರವರೆಗೆ.

ಆನಂದ ತೇಲ್ದುಂಬ್ಡೆಯವರು 2017ರಲ್ಲಿ ಗೌರಿ ಮತ್ತು ಅವರ ಪತ್ರಿಕೆಯ ಬಗ್ಗೆ ಹೀಗೆ ಹೇಳಿದ್ದರು: “ಲಂಕೇಶ್ ಪತ್ರಿಕೆಯು ದಲಿತರು ಮತ್ತು ಮಹಿಳೆಯರೂ ಸೇರಿದಂತೆ ಸಮಾಜದ ದಮನಿತ ಮತ್ತು ಮೂಲೆಗೆ ತಳ್ಳಲ್ಪಟ್ಟ ದುರ್ಬಲ ಜನವರ್ಗಗಳ ವೇದಿಕೆಯಾಗಿತ್ತು. ಅದು ಇತರ ಅನೇಕರಿಗೆ ಸ್ಫೂರ್ತಿಯಾಗುವಂತಹ ಪತ್ರಿಕಾ ವೃತ್ತಿಯ ಸ್ವರೂಪವನ್ನು ನೀಡಿತ್ತು. ಅದು ರೈತ ಚಳವಳಿ, ದಲಿತ ಚಳವಳಿ, ಗೋಕಾಕ್ ಚಳವಳಿಯಂತಹ ಅನೇಕ ಪ್ರಗತಿಪರ ಚಳವಳಿಗಳ ಮುಖವಾಣಿಯಾಗಿತ್ತು.”

ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಪತ್ರಕರ್ತರು ಮಾಡಬೇಕಾದುದು ಇದನ್ನು. ನಾಗರಿಕರು, ಪ್ರಜ್ಞಾವಂತ ನಾಗರಿಕರು ಮಾಡುವುದು ಇದನ್ನೇ. ಇದನ್ನು ನಂಬಿದ್ದಕ್ಕಾಗಿ, ಇದನ್ನು ಅನುಸರಿಸಿದ್ದಕ್ಕಾಗಿ ಆನಂದ ತೇಲ್ದುಂಬ್ಡೆಯವರೂ ಜೈಲಿಗೆ ಹೋಗಬೇಕಾಗಿ ಬಂತು. ಇತರ ಹೋರಾಟಗಾರಂತೆ ಅವರೂ ಸರಳುಗಳ ಹಿಂದೆ ಬಂಧಿಯಾಗಿದ್ದಾರೆ. ನಮ್ಮ ರಾಜಕೀಯ ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅವರ ವಿರುದ್ಧ ಇದೆ ಎಂದು ಹೇಳಲಾಗುವ “ಸಾಕ್ಷ್ಯ”ಗಳಿಂದ ನಕಲಿತನದ ವಾಸನೆ ಹೊಡೆಯುತ್ತಿದ್ದರೂ, ಅವರಲ್ಲಿ ಅನೇಕರು ವೃದ್ಧರು, ಅನಾರೋಗ್ಯಪೀಡಿತರು ಆಗಿದ್ದರೂ, ಜೈಲುಗಳಲ್ಲಿ ಕೊರೊನಾ ಹರಡುತ್ತಿದ್ದರೂ ಅವರ ವಿಚಾರಣೆಯ ಮಾತೇ ಇಲ್ಲ.

ಹಾಗಾದರೆ ಎಲ್ಲವೂ ಮುಗಿದುಹೋಯಿತೆ? ಎಲ್ಲವೂ ಕಗ್ಗತ್ತಲಲ್ಲಿ ಮುಳುಗಿಹೋಯಿತೆ? ಗೌರಿಗೆ ಕೊಡಲು ಕೆಟ್ಟ ಸುದ್ದಿಯ ಹೊರತಾಗಿ ನಮ್ಮ ಬಳಿ ಏನೂ ಇಲ್ಲವೆ? ಖಂಡಿತವಾಗಿಯೂ ಅಲ್ಲ.

2017ರಿಂದ ನಾವು ಗೌರಿಗೆ ತೋರಿಸಬಹುದಿದ್ದ ಪ್ರತಿಭಟನೆಯ ಹಲವಾರು ದೃಶ್ಯಗಳಿವೆ: ಆಕೆ ಅಷ್ಟೊಂದು ಪ್ರೀತಿಸಿದ ಯುವಜನರು ಕ್ಯಾಂಪಸ್‍ಗಳಲ್ಲಿ, ನ್ಯಾಯಾಲಯಗಳಲ್ಲಿ, ಆನ್‍ಲೈನ್‍ನಲ್ಲಿ, ಬೀದಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗಳು. 2018ರಲ್ಲಿ ರೈತರು ಮುನ್ನಡೆಯುತ್ತಾ, ಹಾದಿಬೀದಿ, ಮೈದಾನಗಳನ್ನು ತುಂಬುತ್ತಾ, ಹಳ್ಳಿಗಳಿಂದ ನಗರಗಳಿಗೆ ಸಾಗುತ್ತಾ, ನಿಮಗೆ ಅನ್ನ ಉಣಿಸುವವರು ಯಾರು ಎಂದು ಕಾರ್ಪೊರೇಟ್ ಮುಂಬಯಿಗೂ, ಆಡಳಿತ ನಡೆಸುವ ದಿಲ್ಲಿಗೂ ನೆನಪಿಸಿದ ದೃಶ್ಯಗಳನ್ನು ಗೌರಿ ಎಷ್ಟೊಂದು ಇಷ್ಟಪಡಬಹುದಿತ್ತು!

2019ರಲ್ಲಿ ಇನ್ನಷ್ಟು ನಡೆಯುವುದಿತ್ತು. ನಾವು ಈ ತನಕ ಭೇಟಿಯಾಗದ ಜನರು, ಎಳೆಯ ವಿದ್ಯಾರ್ಥಿಗಳು, ವಯಸ್ಸಾದ ಅಜ್ಜಿಯರು ಭಾಷಣ, ಘೋಷಣೆ ಮತ್ತು ಹಾಡುಗಳ ಮೂಲಕ ನಮ್ಮನ್ನು ಮುನ್ನಡೆಸಿದರು. ದೇಶದಾದ್ಯಂತ ಜನರ ಧ್ವನಿ, ಮಹಿಳೆಯರ ಧ್ವನಿ ಕೇಳುವಂತೆ ಮಾಡಿದ ಸಿಎಎ ವಿರೋಧಿ ಹೋರಾಟಗಳಲ್ಲಿ ಗೌರಿ ಹೇಗೆ ತನ್ನ ಶಕ್ತಿ ಮೀರಿ ಭಾಗವಹಿಸಬಹುದಿತ್ತು! ಮೆರವಣಿಗೆಗಳು, ಬೀದಿಗಳಲ್ಲಿ ಕಲೆ, ಬೀದಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು; ಜನರು ಮತ್ತೆ ಎತ್ತಿಕೊಂಡ ತ್ರಿವರ್ಣ ಧ್ವಜ ಮತ್ತು ಸಂವಿಧಾನ! ಕಾವ್ಯದ ಮೂಲಕ ಎನ್‍ಆರ್‍ಸಿ ಬೇಡವೆಂದು ಧಿಕ್ಕರಿಸುವ ಜನರು; ಹಮ್ ಕಾಗಜ್ ನಹೀಂ ದಿಖಾಯೇಂಗೆ- ನಾವು ದಾಖಲೆ ತೋರಿಸಲಾರೆವು ಎನ್ನುವ ಜನರು; ಭಾರತ ಯಾರಪ್ಪನ ಸ್ವತ್ತೂ ಅಲ್ಲ ಎಂದು ತಮ್ಮ ಭಾರತವನ್ನು ಮರಳಿ ಪಡೆಯುತ್ತಿರುವ ಜನರು; ನಾವು ಇಲ್ಲಿದ್ದೇವೆ, ನಾವು ನೋಡುತ್ತೇವೆ ಎಂದು ತಮಗೆ, ಬೇರೆಯವರಿಗೆ ಮತ್ತು ಹಿಂದೂ ಶ್ರೇಷ್ಟತಾ ವ್ಯಸನಿಗಳಿಗೆ ಕೂಗಿಹೇಳುತ್ತಿರುವ ಜನರು: ಹಮ್ ದೇಖೇಂಗೆ. ನಾವು ನೋಡೋಣ. ನಾಮ್ ಪಾರ್‍ಪೋಮೆ.

ಗೌರಿ ಪತ್ರಕರ್ತರಾಗಿ, ನಾಗರಿಕರಾಗಿ ತನ್ನ ಕರ್ತವ್ಯಗಳನ್ನು ರಾಜಿಯಿಲ್ಲದ ಪ್ರಾಮಾಣಿಕತೆಯಿಂದ ಮಾಡಿದರು. ಅವರು ವಿಭಜನೆ ಮತ್ತು ದ್ವೇಷದ ವಿರುದ್ಧ ಧ್ವನಿಯೆತ್ತಿ ಮಾತನಾಡುವುದು ಪ್ರತೀ ನಾಗರಿಕನ ಹಕ್ಕು ಎಂದು ಪ್ರತಿಪಾದಿಸುವ ಭಾರತದ ಪ್ರಜಾಸತ್ತಾತ್ಮಕ, ಜಾತ್ಯತೀತ ಮೌಲ್ಯಗಳನ್ನು ಅನುಸರಿಸಿದರು. 2020ರಲ್ಲಿ ಭಯಾನಕವಾದ ಹಿಂಸೆಯ ಹೊರತಾಗಿ, ಬಹುತ್ವದ ಮೇಲೆ, ವೈವಿಧ್ಯತೆಯ ಮೇಲೆ, ಮುಸ್ಲಿಮರ ಮೇಲೆ, ದಲಿತರ ಮೇಲೆ, ಆದಿವಾಸಿಗಳ ಮೇಲೆ, ಮಹಿಳೆರ ಮೇಲೆ, ಸಮಾನತೆಯ ಮೇಲೆ ದಾಳಿಗಳ ಹಿಮಪಾತವಾಗುತ್ತಿದ್ದರೂ ನಾವು ಇನ್ನೂ ಗಟ್ಟಿಯಾಗಿ ಮಾತನಾಡುವ ಧ್ವನಿಗಳನ್ನು ಹೊಂದಿದ್ದೇವೆ. ಎನ್‍ಐಎ, ಯುಎಪಿಎ, ದೇಶದ್ರೋಹದ ಆರೋಪ, ಕಿರುಕುಳ, ಟ್ರೋಲ್ ಮಾಡುವುದು ಇತ್ಯಾದಿಗಳ ಹೊರತಾಗಿಯೂ ಮಾತನಾಡುವ ಧ್ವನಿಗಳವು ಇವು. ಮಾರ್ಚ್ 2020ರಿಂದ ಕೋವಿಡ್-19 ಬಂದ ಬಳಿಕ ಈ ಧ್ವನಿಗಳನ್ನು ಪರಿಣಾಮಕಾರಿಯಾಗಿ ಅಡಗಿಸಬಹುದು ಎಂದು ಅಧಿಕಾರಸ್ಥರು ಭಾವಿಸಿರಬೇಕು. ಆದರೆ, ತಮ್ಮ ಧ್ವನಿಗಳು ಕೇಳುವಂತೆ ಮಾಡಲು ಜನರು ಹೊಸಹೊಸ ಹಾದಿಗಳನ್ನು ಹುಡುಕುತ್ತಿದ್ದಾರೆ. ಪ್ರಶಾಂತ್ ಭೂಷಣ್ ಅವರ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ದಿನ ಆನ್‍ಲೈನ್‍ನಲ್ಲೇ ಆಗಿರಲಿ- ಜನರು ತಮ್ಮ ಅಸ್ತಿತ್ವ ಭಾಸವಾಗುವಂತೆ ಮಾಡಿದರು. ಇದೀಗ ಗೌರಿಯ ಮರಣದ ವಾರ್ಷಿಕ ದಿನ ಹತ್ತಿರ ಬರುತ್ತಿರುವಂತೆ ಆಗಸ್ಟ್ 28ರಿಂದ ಸೆಪ್ಟೆಂಬರ್ 5ರ ತನಕ ಒಂದು ವಾರದ ಪ್ರತಿಭಟನೆ ನಡೆಸುವ ಪಿಯುಸಿಎಲ್ ಕರೆಗೆ 70ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಆಗಸ್ಟ್ 28ಕ್ಕೆ ಭೀಮಾ ಕೋರೆಗಾಂವ್ ಸಂಚು ಪ್ರಕರಣದಲ್ಲಿ ಹಲವಾರು ಮಾನವಹಕ್ಕು ಕಾರ್ಯಕರ್ತರನ್ನು ಬಂಧಿಸಿ ಎರಡು ವರ್ಷ ತುಂಬಿದೆಯಾದರೆ, ಸೆಪ್ಟೆಂಬರ್ 5ಕ್ಕೆ ಗುಂಡಿನ ಮುಖಾಂತರ ಗೌರಿಯ ಧ್ವನಿಯನ್ನು ಅಡಗಿಸಿ ಮೂರು ವರ್ಷಗಳಾಗುತ್ತವೆ. ಆದರೆ, ಗೌರಿಯ ಧ್ವನಿ ಅಡಗಿದೆಯೇ?

ನಾವೀಗ ಮಾತನಾಡುತ್ತಿದ್ದರೆ ಗೌರಿ ಮಾತು ಮುಂದುವರಿಸುತ್ತಾರೆ

2017ರಲ್ಲಿ ಗೌರಿಯ ಹತ್ಯೆಯಾದಾಗ ಬರಹಗಾರ ಬೊಳುವಾರು ಮೊಹಮ್ಮದ್ ಕುಂಞಯವರು ಆಕೆಗೆ ಒಂದು ಮಾತು ಹೇಳಿದ್ದರು: “ಈಗ ನೀವೆಲ್ಲೇ ಇದ್ದರೂ, ಎಲ್ಲರೂ ನಿಮ್ಮ ಜೊತೆಗಿದ್ದಾರೆ. ನೀವು ನಮ್ಮ ಜೊತೆಗಿದ್ದಾಗ ನೀವು ಹೇಗೆ ಯೋಚಿಸಿದ್ದಿರೋ ಹಾಗೆಯೇ ಯೋಚಿಸಿ.”

ನಾವು ಮಾತನಾಡಿದರೆ, ಗೌರಿಯೂ ನಮ್ಮ ಮೂಲಕ ಮಾತನಾಡುವುದನ್ನು ಮುಂದುವರಿಸುತ್ತಾರೆ. ನಮ್ಮ ಧ್ವನಿಗಳು ಹೇಗಾಗಬೇಕೋ ಹಾಗೆಯೇ ಜೊತೆಗೂಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಅದಕ್ಕಾಗಿಯೇ ಸೆಪ್ಟೆಂಬರ್ 2020ರಲ್ಲಿ ಮುಕ್ತ ಅಭಿವ್ಯಕ್ತಿ ಮತ್ತು ಬಹುತ್ವದ ಭಾರತದ ದ್ವೇಷಿಗಳ ವಿರುದ್ಧ ಗೌರಿಯ ಹೋರಾಟವನ್ನು ಮುಂದುವರಿಸುವ ಸಂಕಲ್ಪ ಮಾಡುತ್ತೇವೆ. ನಾವು ಆಕೆಯ ಪರವಾಗಿ ಮತ್ತು ಮತ್ತು ನಮ್ಮೆಲ್ಲರ ಪರವಾಗಿ ಮಾತನಾಡುವುದನ್ನು ಮುಂದುವರಿಸುತ್ತೇವೆ. ನಮ್ಮೆಲ್ಲರ ಬಾಯಿ ಮುಚ್ಚಿಸುವುದಕ್ಕೆ ಅವರಿಗೆ ಸಾಧ್ಯವಿಲ್ಲ!

  • ಗೀತಾ ಹರಿಹರನ್, ಖ್ಯಾತ ಕಥೆಗಾರ್ತಿ ಮತ್ತು ಕಾದಂಬರಿಕಾರ್ತಿ. ಅವರ ಮೊದಲ ಕಾದಂಬರಿ ’ದ ಥೌಸೆಂಡ್ ಫೇಸಸ್ ಆಫ್ ನೈಟ್’ಗೆ 1993ರಲ್ಲಿ ಕಾಮನ್‌ವೆಲ್ತ್‌ ರೈಟರ್ಸ್‌ ಪ್ರಶಸ್ತಿ ದೊರಕಿತ್ತು.
  • ಅನುವಾದ: ನಿಖಿಲ್ ಕೋಲ್ಪೆ

ಇದನ್ನು ಓದಿ: ಗಾಂಧಿ ಪ್ರತಿಮೆ ಇರುವ ಪ್ರದೇಶ ಧಾರ್ಮಿಕ ಸ್ಥಳವಲ್ಲ: ಕರ್ನಾಟಕ ಹೈಕೋರ್ಟ್

Also Read: Gauri Speaks in 2020: Githa Hariharan

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...