Homeಮುಖಪುಟಗೊಗೋಯ್ ಬಿಜೆಪಿ ರಾಜಕಾರಣ ಈ ಇಬ್ಬರು `ನ್ಯಾಯ' ಪಟುಗಳು ಏನು ಹೇಳ್ತಾರೆ

ಗೊಗೋಯ್ ಬಿಜೆಪಿ ರಾಜಕಾರಣ ಈ ಇಬ್ಬರು `ನ್ಯಾಯ’ ಪಟುಗಳು ಏನು ಹೇಳ್ತಾರೆ

- Advertisement -
- Advertisement -

ಜನವರಿ 2018: ದೇಶದ ಅತಿ ಹೆಚ್ಚು ನಂಬಿಕಸ್ಥ ಸಂಸ್ಥೆ ಮತ್ತು ಬಿಕ್ಕಟ್ಟನ ಸಮಯದಲ್ಲಿ ಕೊನೆಯ ಅಶಾವಾದ ಎಂದು ಪರಿಗಣಿಸಲಾಗುವ ಸುಪ್ರೀಂಕೋರ್ಟ್‍ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಅಂದಿನ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರ ಅವರು ಕೋರ್ಟ್ ಪ್ರಕರಣಗಳ ವಿಚಾರಣೆಯಲ್ಲಿ ನ್ಯಾಯಪೀಠಗಳನ್ನು ರಚಿಸುತ್ತಿರುವ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಾವು ಬರೆದಿದ್ದ ಪತ್ರದ ಬಗ್ಗೆ ಮಾಧ್ಯಮಗಳ ಜೊತೆ ಹಂಚಿಕೊಂಡಾಗ, ಅನ್ಯಾಯದ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸುವ ಗುಣ ಸುಪ್ರೀಂಕೋರ್ಟ್‍ನಂತಹ ಸಂಸ್ಥೆಯ ಹಿರಿಯ ನ್ಯಾಯಮೂರ್ತಿಗಳಿಗೂ ಇರುವ ಬಗ್ಗೆ ಬಹುತೇಕರಿಗೆ ಮೆಚ್ಚುಗೆಯಾಗಿತ್ತು. ಅಂದು ಪತ್ರಿಕಾಗೋಷ್ಠಿ ನಡೆಸಿದ್ದ ನಾಲ್ವರು ನ್ಯಾಯಮೂರ್ತಿಗಳು: ಕುರಿಯನ್ ಜೋಸೆಫ್, ಚಲಮೇಶ್ವರ್, ರಂಜನ್ ಗೊಗೋಯ್ ಮತ್ತು ಮದನ್ ಲೋಕೂರ್.

ದೀಪಕ್ ಮಿಶ್ರಾ ಅವರ ನಿವೃತ್ತಿ ನಂತರ ಮುಖ್ಯ ನ್ಯಾಯಾಧೀಶರ ಸ್ಥಾನ ಅಲಂಕರಿಸಿದ್ದು ರಂಜನ್ ಗೊಗೋಯ್. ಅಧಿಕಾರ ಸ್ವೀಕರಿಸಿದ ನಂತರದ ಅವರ ಮುಂದಿನ ನಡೆಗಳು ಅವರು ಪತ್ರಿಕಾಗೋಷ್ಠಿಯಲ್ಲಿ ತಳೆದಿದ್ದ ನಿಲುವಿಗೆ ಬಹುತೇಕ ತದ್ವಿರುದ್ಧವಾಗಿ ಕಂಡಿದ್ದು, ಈಗ ಪ್ರಸಕ್ತ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನೇಮಕ ಮಾಡಿರುವುದು ಹಲವು ಪ್ರಶ್ನೆಗಳಿಗೆ, ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇಂತಹ ನೇಮಕಾತಿಗಳು ಇಡೀ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅನುಮಾನ ತಳೆಯುವಂತೆ ಮಾಡುತ್ತವೆ ಕೂಡ. ಇದರ ಬಗ್ಗೆ ಅಂದು ಪತ್ರಿಕಾ ಗೋಷ್ಠಿಯಲ್ಲಿ ಜತೆಯಾಗಿದ್ದ ಮತ್ತೊಬ್ಬ ನ್ಯಾಯಾಧೀಶ (ನಿವೃತ್ತ) ಪ್ರತಿಕ್ರಿಯಿಸಿದ್ದು “ನ್ಯಾಯಮೂರ್ತಿ ಗೊಗೋಯ್ ಅವರಿಗೆ ಸಿಗುವ ಗೌರವದ ಬಗ್ಗೆ ಹಲವು ದಿನಗಳಿಂದ ಊಹೆ ಇತ್ತು. ಆ ನಿಟ್ಟಿನಲ್ಲಿ ಈ ನೇಮಕ ಅಷ್ಟು ಆಶ್ಚರ್ಯಕರವಾದುದ್ದಲ್ಲ. ಆದರೆ ಅದು ಇಷ್ಟು ತ್ವರಿತವಾಗಿ ಆಗಿದ್ದು ಅಚ್ಚರಿ. ಇದು ನ್ಯಾಯಾಂಗದ ಸ್ವಾಯತ್ತತೆ, ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕತೆಯನ್ನು ಮರುವ್ಯಾಖ್ಯಾನ ಮಾಡುತ್ತದೆ. ಕೊನೆಯ ನಂಬಿಕೆಯೂ ಕಳಚಿತೆ?” ಎಂದು ಹೇಳಿರುವುದಾಗಿ ದ ಇಂಡನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಈ ಮೊದಲೂ ಎನ್‍ಡಿಎ ಸರ್ಕಾರ ನ್ಯಾಯಮೂರ್ತಿಗಳನ್ನು ಅವರ ನಿವೃತ್ತಿಯ ತಕ್ಷಣವೇ ಕಾಯಾರ್ಂಗ ಹುದ್ದೆಗಳಿಗೆ ನೇಮಕ ಮಾಡಿದ ಉದಾಹರಣೆಗಳಿವೆ. 2014 ರಲ್ಲಿ ಎನ್‍ಡಿಎ ಸರ್ಕಾರ ನಿವೃತ್ತ ನ್ಯಾಯಾಧೀಶ ಪಿ ಸದಾಶಿವಂ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿತ್ತು.

“ಇದು ನ್ಯಾಯಾಂಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತಕ್ಕೆ ಒದಗಿದ ಧಕ್ಕೆ. ಸರ್ಕಾರದ ಇಂತಹ ಉಡುಗೊರೆಗಳನ್ನು ಇತ್ತೀಚೆಗಷ್ಟೇ ನಿವೃತ್ತರಾದ ನ್ಯಾಯಮೂರ್ತಿಗಳು ಒಪ್ಪಿಕೊಂಡುಬಿಟ್ಟರೆ, ನಮ್ಮ ಕಾನೂನು ವಿದ್ಯಾರ್ಥಿಗಳಿಗೆ, ನಮ್ಮ ವಕೀಲರಿಗೆ, ನಮ್ಮ ಕಕ್ಷೀದಾರರಿಗೆ ನ್ಯಾಯಾಲಯದ ಸ್ವಾಯತ್ತತೆಯ ಬಗ್ಗೆ ಏನು ಉತ್ತರ ನೀಡುವುದು. ಈ ಹಿಂದೆ ಎನ್‍ಡಿಎ ಸರ್ಕಾರ ನಿವೃತ್ತ ನ್ಯಾಯಾಧೀಶ ಸದಾಶಿವನ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿತ್ತು. ಈಗ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ನೇಮಿಸಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಗೆ ನ್ಯಾಯಮೂರ್ತಿಗಳನ್ನು ನೇಮಿಸಬೇಕು ಎಂದಿದ್ದರೆ, ಹತ್ತು ಬೇರೆ ನ್ಯಾಯಾಧೀಶರುಗಳು ಇದ್ದರು. ಇತ್ತೀಚೆಗಷ್ಟೇ ನಿವೃತ್ತರಾದ ನ್ಯಾಯಮೂರ್ತಿ ಗೊಗೋಯ್ ಅವರನ್ನು ನೇಮಿಸಿದ್ದು ಏಕೆ? ಕೇಂದ್ರ ಸರ್ಕಾರ ತಾನು ಗೆದ್ದ ಕೇಸುಗಳಿಗೆ ಇದನ್ನು ಉಡುಗೊರೆಯಾಗಿ ನೀಡುತ್ತಿರುವ ಅನುಮಾನ ಮೂಡುವುದಿಲ್ಲವೇ? ನಿವೃತ್ತರಾದರೂ ನಾವು ಇವರನ್ನೆಲ್ಲಾ ನ್ಯಾಯಮೂರ್ತಿಗಳು ಮತ್ತು ಯುವರ್ ಹಾನರ್ ಎಂದೇ ಸಂಬೋಧಿಸುವುದು. ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಇರಬೇಕಾದ ಗೋಡೆಯ ಬಗ್ಗೆ ಯಾರು ಹೇಳಬೇಕು” ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಸಂಜಯ್ ಹೆಗಡೆ ನ್ಯಾಯಪಥದೊಂದಿಗೆ ತಮ್ಮ ಆಕ್ರೋಶವನ್ನು ಹಂಚಿಕೊಂಡಿದ್ದಾರೆ.

ಹೀಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರು ನಿವೃತ್ತಿ ಪಡೆದ ಕೆಲವೇ ತಿಂಗಳುಗಳಲ್ಲಿ ಸರ್ಕಾರ ಇಂತಹ ನೇಮಕ ಮಾಡಿರುವುದು ಇದೇ ಮೊದಲು ಎನ್ನುವ ಸಂಜಯ್ ಹೆಗಡೆ “ಈ ಹಿಂದೆ ಕಾಂಗ್ರೆಸ್ ವಿರೋಧಪಕ್ಷದಲ್ಲಿ ಇದ್ದಾಗ ನಿವೃತ್ತ ನ್ಯಾಯಾಧೀಶ ರಂಗನಾಥ್ ಮಿಶ್ರ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿತ್ತು. ಅದು ಕೂಡ ತಪ್ಪು ನಡೆಯೇ ಆದರೂ, ಕನಿಷ್ಟ ಪಕ್ಷ ಆ ನ್ಯಾಯಾಧೀಶರ ನಿವೃತ್ತಿಗೂ ಮತ್ತು ರಾಜ್ಯಸಭೆಯ ನಾಮಕರಣಕ್ಕೂ ಎಂಟು ವರ್ಷಗಳ ಅಂತರವಿತ್ತು” ಎನ್ನುತ್ತಾರೆ.

ಮಾಜಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ತಮ್ಮ ಕಾಲಾವಧಿಯಲ್ಲಿ ನಡೆಸಿದ ವಿಚಾರಣೆಗಳು ಮತ್ತು ನೀಡಿದ ತೀರ್ಪುಗಳು ಕೂಡ ಇಂತಹ ಅನುಮಾನಗಳಿಗೆ ಪುಷ್ಠಿ ಕೊಟ್ಟಿದೆ. ರಫೇಲ್ ವಿಮಾನಗಳ ಖರೀದಿಯಲ್ಲಿ ಭ್ರಷ್ಟಚಾರ ನಡೆದಿದೆ ಎಂಬ ಕೇಂದ್ರ ಸರ್ಕಾರದ ವಿರುದ್ಧದ ಆರೋಪ ಆಗಲಿ, ಸಿಬಿಐ ನಿರ್ದೇಶಕರನ್ನು ಕೇಂದ್ರ ಸರ್ಕಾರ ವಜಾ ಮಾಡಿದ್ದ ವಿವಾದವಾಗಲೀ, ನ್ಯಾಯಮೂರ್ತಿ ಗೊಗೋಯ್ ತಮ್ಮ ಅವಧಿಯಲ್ಲಿ ವಿಚಾರಣೆಗಳನ್ನು ಮುಂದೂಡಿದ ಬಗೆ ಅಥವಾ ಅವರು ನೀಡಿದ ಹಲವು ತೀರ್ಪುಗಳು ಕೇಂದ್ರ ಸರ್ಕಾರದ ಪರವಾಗಿತ್ತು ಎಂಬ ಟೀಕೆ ಹಲವು ವಲಯಗಳಿಂದ ಕೇಳಿಬರುತ್ತಲೇ ಇತ್ತು. ಹಾಗೆಯೇ ಅಸ್ಸಾಮಿನಲ್ಲಿ ನಾಗರಿಕರ ನೊಂದಣಿಗೆ ನೀಡಿದ್ದ ರಂಜನ್ ಗೊಗೋಯ್ ಅವರ ಆದೇಶ ಮುಂದೆ ಕೇಂದ್ರ ಸರ್ಕಾರಕ್ಕೆ ವಿವಾದಾತ್ಮಕ ಸಿಎಎ ತರಲು ಸಹಾಯ ಮಾಡಿತ್ತು.

ಇಂತಹ ಘನತೆವೆತ್ತ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರಲು ಸರ್ಕಾರಗಳು ಪ್ರಯತ್ನ ಮಾಡುತ್ತಲೇ ಇರುತ್ತವೆ. ಈ ಹಿಂದೆ ರಾಜಕೀಯದಿಂದ ನ್ಯಾಯಾಂಗಕ್ಕೆ ಹೋಗಿ ಮತ್ತೆ ರಾಜಕೀಯಕ್ಕೆ ಹಿಂದಿರುಗಿದ ಉದಾಹರಣೆಗಳು ಇವೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಬಹುರುಲ್ ಇಸ್ಲಾಮ್ ಅವರು ರಾಜ್ಯಸಭೆಗೆ ರಾಜೀನಾಮೆ ನೀಡಿ ಗೌಹಾಟಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಅವರು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ತಮ್ಮ ಅವಧಿಯಲ್ಲಿ ನ್ಯಾಯಾಧೀಶ ಬಹುರುಲ್ ಇಸ್ಲಾಮ್ ಅವರು ಅಂದಿನ ಕಾಂಗ್ರೆಸ್ ಬಿಹಾರ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರನ್ನು ನಗರ ಕೋಆಪರೆಟಿವ್ ಬ್ಯಾಂಕಿನ ಹಗರಣದ ಆರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿದ್ದರು. ನಂತರ ಸುಪ್ರೀಂಕೋರ್ಟ್‍ಗೆ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದರು.

ಸರ್ಕಾರಗಳ ಆಮಿಷಗಳನ್ನು- ಕೊಡುಗೆಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳ ಉದಾಹರಣೆಗಳು ಕೂಡ ಹೇರಳವಾಗಿದೆ. ಪಶ್ಚಿಮ ಬಂಗಾಳದಲ್ಲಿ ಟಾಟ ಮೋಟಾರ್ಸ್ ಸಂಸ್ಥೆಗೆ ನೀಡಲು ಸಾವಿರ ಎಕರೆ ಜಮೀನನ್ನು 2006ರಲ್ಲಿ ರೈತರಿಂದ ವಶಪಡಿಸಿಕೊಂಡಿದ್ದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಸರ್ಕಾರದ ನಡೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ಇದನ್ನೆ ಪ್ರಮುಖ ವಿಷಯವನ್ನಾಗಿಸಿ ಹೋರಾಡಿ ಮಮತಾ ಬ್ಯಾನರ್ಜಿ ಅವರ ಪಕ್ಷ ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಬಾರಿಸಿ, ಮಮತಾ ಮುಖ್ಯಮಂತ್ರಿಯಾದರು. ಆದರೆ 2016ರಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಇದರ ವಿಚಾರಣೆ ನಡೆದು, ನ್ಯಾಯಮೂರ್ತಿ ವಿ ಗೋಪಾಲ ಗೌಡ ಅವರನ್ನು ಒಳಗೊಂಡ ನ್ಯಾಯಪೀಠ ಜಮೀನು ವಶಪಡಿಸಿಕೊಂಡಿರುವುದು ಅಕ್ರಮ ಎಂದು ತೀರ್ಪು ಕೊಟ್ಟು, 12 ವಾರಗಳೊಳಗೆ ರೈತರಿಗೆ ಜಮೀನನ್ನು ಹಿಂದಿರುಗಿಸುವಂತೆ ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೂಚಿಸಿತ್ತು. ಇದಾದ ಕೆಲವೇ ತಿಂಗಳುಗಳಲ್ಲಿ ನ್ಯಾಯಮೂರ್ತಿ ಗೋಪಾಲಗೌಡ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಅವರನ್ನು ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಲು ಪಶ್ಚಿಮ ಬಂಗಾಳ ಸರ್ಕಾರದಿಂದ ಪರೋಕ್ಷವಾಗಿ ಬಂದ ಕೊಡುಗೆಯನ್ನು ನಿರಾಕರಿಸಿದ್ದನ್ನು ನೆನಪಿಸಿಕೊಳ್ಳುವ ನ್ಯಾಯಾಧೀಶ ಗೋಪಾಲಗೌಡ ಅವರು “ಮಾನವ ಹಕ್ಕುಗಳ ಕಮಿಶನ್ ಮುಖ್ಯಸ್ಥನ ಹುದ್ದೆ ಆಗಲೀ, ಅಥವಾ ಸರ್ಕಾರ ನೀಡುವ ಇನ್ಯಾವುದೇ ಹುದ್ದೆಯನ್ನು ನಾನು ಒಪ್ಪಿಕೊಳ್ಳುವುದಿಲ್ಲ” ಎಂದು ತಮಗೆ ಸಂದೇಶ ನೀಡಿದವರಿಗೆ ತಿಳಿಸಿದ್ದನ್ನು ನ್ಯಾಯಪಥದೊಂದಿಗೆ ಹಂಚಿಕೊಂಡರು.

ಏಪ್ರಿಲ್ 2019ರಲ್ಲಿ ತಮ್ಮ ವಿರುದ್ಧ ಬಂದ ಲೈಂಗಿಕ ದೌರ್ಜನ್ಯದ ಆರೋಪದ ವಿರುದ್ಧ ನ್ಯಾಯಮೂರ್ತಿ ರಂಜನ್ ಗೊಗೋಯ್ ನಡೆದುಕೊಂಡ ಬಗೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ತಮ್ಮ ವಿರುದ್ಧದ ಆರೋಪದ ವಿಚಾರಣೆಯನ್ನು ನಡೆಸುವ ಪೀಠಕ್ಕೆ ತಾವೇ ಮುಖ್ಯಸ್ಥರಾಗಿದ್ದರು. ಆಗಸ್ಟ್ 2019ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತ್ವರಿತ ವಿಚಾರಣೆಗೆ ಉತ್ಸುಕರಾಗಿ, ಪ್ರತಿದಿನ ವಿಚಾರಣೆಯನ್ನು ನಡೆಸಲು ಮುಂದಾದರು. ಇದರ ನಡುವೆ ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ ಅಲ್ಲಿ ತೀವ್ರ ನಿರ್ಭಂಧ ಹೇರಿದ್ದನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್‍ಗೆ ಅರ್ಜಿ ಬಂದಾಗ, ಬಾಬ್ರಿ ಪ್ರಕರಣದಲ್ಲಿ ಕಾರ್ಯನಿರತನಾಗಿರುವ ಕಾರಣ ಹೇಳಿ ಆ ಅರ್ಜಿಯನ್ನು ಬೇರೆ ಪೀಠಕ್ಕೆ ಗೊಗೋಯ್ ವರ್ಗಾಯಿಸಿದ್ದರು. ನಂತರ ಬಾಬ್ರಿ ಮಸೀದಿ ಧ್ವಂಸದ ತೀರ್ಪು ಕೂಡ ಹಲವು ವಲಯಗಳಿಂದ ಭಾರಿ ಟೀಕೆಗೆ ಗುರಿಯಾಗಿತ್ತು. ತೀರ್ಪುಗಳನ್ನು ಬರೆದವರ ನ್ಯಾಯಮೂರ್ತಿಗಳ ಹೆಸರನ್ನು ಕೂಡ ತಿಳಿಸದೆ, ಬಾಭ್ರಿ ಮಸೀದಿ ಧ್ವಂಸ ಕಾನೂನು ಬಾಹಿರ ಅಂತ ಹೇಳಿಯೂ ಅಲ್ಲಿ ರಾಮಮಂದಿರ ಕಟ್ಟಲು ಅವಕಾಶ ನೀಡಿದ ತೀರ್ಪಿನ ಉದ್ದೇಶಗಳು ಗೊಂದಲಮಯವಾಗಿದ್ದವು.

ಸುಪ್ರೀಂಕೋರ್ಟ್‍ನ ಸ್ವಾಯತ್ತತೆ ಉಳಿಸಿಕೊಳ್ಳುವ ಸಲುವಾಗಿ ಹಿಂದೆಂದೂ ಕಂಡರಿಯದ ಪತ್ರಿಕಾಗೋಷ್ಠಿಯ ಭಾಗವಾಗಿದ್ದ ರಂಜನ್ ಗೊಗೋಯ್ ಅವರು, ಅವರೇ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ನಡೆಸಿದ ವಿಚಾರಣೆಗಳು, ಕೊಟ್ಟ ತೀರ್ಪುಗಳು ಮತ್ತು ಈಗ ನಿವೃತ್ತಿಯ ನಂತರ ಸರ್ಕಾರದ ನೇಮಕವನ್ನು ಒಪ್ಪಿಕೊಂಡಿರುವ ಪ್ರಥಮದವರೆಗೂ ವಿವಾದಾತ್ಮಕ ನ್ಯಾಯಾಧೀಶರಾಗಿ ಇತಿಹಾಸದಲ್ಲಿ ಉಳಿಯಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...