Homeಮುಖಪುಟಸರ್ಕಾರಿ ಫ್ಯಾಕ್ಟ್‌ಚೆಕ್‌: ಐಟಿ ನಿಯಮಗಳ ತಿದ್ದುಪಡಿಗೆ ಪ್ರತಿಪಕ್ಷಗಳ ಆಕ್ರೋಶ

ಸರ್ಕಾರಿ ಫ್ಯಾಕ್ಟ್‌ಚೆಕ್‌: ಐಟಿ ನಿಯಮಗಳ ತಿದ್ದುಪಡಿಗೆ ಪ್ರತಿಪಕ್ಷಗಳ ಆಕ್ರೋಶ

- Advertisement -
- Advertisement -

ಸುಳ್ಳು ಸುದ್ದಿಗಳ ಪತ್ತೆಗಾಗಿ ಹೊಸ ಫ್ಯಾಕ್ಟ್‌ಚೆಕ್ ಸಂಸ್ಥೆ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ನಿರ್ಧರಿಸಿರುವುದು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. “ಬಿಜೆಪಿಗಿರುವ ತೀವ್ರತರನಾದ ಅಭದ್ರತೆಯನ್ನು ಇದು ತೋರಿಸುತ್ತದೆ” ಎಂದು ಪ್ರತಿಪಕ್ಷಗಳು ಟೀಕಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಸರ್ಕಾರದ ಫ್ಯಾಕ್ಟ್‌ಚೆಕ್‌ ಸಂಸ್ಥೆಯು ಯಾವುದನ್ನು ಫೇಕ್‌ ಎಂದು ಗುರುತಿಸುತ್ತದೆಯೋ ಅದನ್ನು ನಿರ್ದಾಕ್ಷಿಣ್ಯವಾಗಿ ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುವ ಕ್ರಮವನ್ನು ಸರ್ಕಾರ ಜರುಗಿಸಿದೆ.

2021 ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತಂದು ಫ್ಯಾಕ್ಟ್‌ಚೆಕ್‌ ಸಂಸ್ಥೆಯನ್ನು ರಚಿಸಲು ಮುಂದಾಗಿದೆ.

ಕಾಂಗ್ರೆಸ್ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ಶುಕ್ರವಾರ ಪ್ರತಿಕ್ರಿಯಿಸಿ, “ಮೋದಿ ಸರ್ಕಾರ ಈ ಕ್ರಮವನ್ನು ಹಿಂತೆಗೆದುಕೊಳ್ಳಬೇಕು. ಆರ್‌ಎಸ್‌ಎಸ್ ಜೊತೆಯಲ್ಲಿ ಸೇರಿಕೊಂಡು ಭಾರತದಲ್ಲಿ ನಕಲಿ ಸೃಷ್ಟಿಸುತ್ತಿರುವ ಅತಿದೊಡ್ಡ ನಿರ್ಮಾಪಕ ಬಿಜೆಪಿಯಾಗಿದೆ” ಎಂದು ಟೀಕಿಸಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರತಿಕ್ರಿಯಿಸಿ, “ಸರ್ಕಾರವೇ ನ್ಯಾಯಾಧೀಶರಂತೆ ವರ್ತಿಸುತ್ತಿದೆ, ತೀರ್ಪು ನೀಡುತ್ತಿದೆ, ಶಿಕ್ಷಿಸುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಈ ಸರ್ಕಾರವು ಭಿನ್ನಾಭಿಪ್ರಾಯಗಳಿಗೆ ಹೆದರುತ್ತದೆ. ಪ್ರಶ್ನೆ ಕೇಳುವ ಮೂಲಕ, ಸತ್ಯಗಳನ್ನು ನುಡಿದು ಮೂಲೆಗುಂಪು ಮಾಡುವ ಯಾರಿಗಾದರೂ ಇವರು ಭಯಪಡುತ್ತಾರೆ. ಇದು ನಿಯಮವಾಗದಂತೆ ನಾವು ನಮ್ಮ ಎಲ್ಲಾ ಶಕ್ತಿಯನ್ನು ಮೀರಿ ವಿರೋಧಿಸಬೇಕು” ಎಂದಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವ ಮನೀಶ್ ತಿವಾರಿ ಪ್ರತಿಕ್ರಿಯಿಸಿ, “ತಮ್ಮ ಬಗೆಗಿನ ಸುದ್ದಿಗಳನ್ನು ಪರಿಶೀಲಿಸಲು ಸಂಸ್ಥೆಯನ್ನು ಸ್ಥಾಪಿಸುವ ಕೇಂದ್ರದ ನಿರ್ಧಾರವು ಸೆನ್ಸಾರ್ಶಿಪ್ ವಿಧಿಸುವುದಕ್ಕೆ ಸಮಾನವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಯಾವ ಟೀಕೆ ನಕಲಿ ಮತ್ತು ಯಾವುದು ಅಸಲಿ ಎಂಬುದಕ್ಕೆ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಸುರಕ್ಷತಾ ಕ್ರಮಗಳನ್ನು ಸರ್ಕಾರದ ಅನುಸರಿಸದೆ, ಯಾವುದೇ ಮೇಲ್ಮನವಿ ಇಲ್ಲದೆಯೇ ಸರ್ಕಾರ ಅಂತಿಮ ತೀರ್ಪುಗಾರನಾಗುತ್ತಿರುವುದು ವಿಲಕ್ಷಣವಾಗಿದೆ” ಎಂದು ವಿರೋಧಿಸಿದ್ದಾರೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್ ನೆಪದಲ್ಲಿ ಸತ್ಯಕ್ಕೆ ಮೂಗುದಾರ; ಇದು ಕೇಂದ್ರ ಸರ್ಕಾರದ ಹೊಸತಂತ್ರ

ಐಟಿ ನಿಯಮಗಳಿಗೆ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಒತ್ತಾಯಿಸಿದೆ. ಇದು ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ ಮತ್ತು ಸ್ವೀಕಾರಾರ್ಹವಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಝಾ ಮಾತನಾಡಿ, “ಪ್ರಜಾಸತ್ತಾತ್ಮಕವಲ್ಲದ ಯಾವುದರ ಬಗ್ಗೆಯೂ ಸರ್ಕಾರ ಜಾಗರೂಕರಾಗಿರಬೇಕು. ನಿಮಗೆ ಅಸಹ್ಯಕರವಾದ ಯಾವುದನ್ನಾದರೂ ತೆಗೆದುಹಾಕಲು ನೀವು ಜನರನ್ನು ಒತ್ತಾಯಿಸುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರೇನ್ ಪ್ರತಿಕ್ರಿಯಿಸಿ, “ಬಿಜೆಪಿಯು ನಕಲಿ ಸುದ್ದಿಗಳನ್ನು ಸೃಷ್ಟಿಸುವ ಮಾಸ್ಟರ್. ಆದರೆ ಈಗ ವಿಷಯಗಳನ್ನು ನಿಯಂತ್ರಿಸಲು ಬಯಸುತ್ತಿದೆ” ಎಂದು ಕುಟುಕಿದ್ದಾರೆ.

ಆದರೆ ಪ್ರತಿಪಕ್ಷಗಳ ಟೀಕೆಯನ್ನು ತಳ್ಳಿಹಾಕಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, “ಪ್ರತಿಪಕ್ಷಗಳು ತಪ್ಪು ಮಾಹಿತಿಗಳನ್ನು ಹರಡುತ್ತಿವೆ” ಎಂದು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...