Homeಕರ್ನಾಟಕಹಾರೋಹಳ್ಳಿ ಶ್ರೀರಾಮ ಪೂಜೆ; ಸಂಸದ ಪ್ರತಾಪ್ ಸಿಂಹಗೆ ದಲಿತ ಮುಖಂಡರಿಂದ ಘೇರಾವ್

ಹಾರೋಹಳ್ಳಿ ಶ್ರೀರಾಮ ಪೂಜೆ; ಸಂಸದ ಪ್ರತಾಪ್ ಸಿಂಹಗೆ ದಲಿತ ಮುಖಂಡರಿಂದ ಘೇರಾವ್

- Advertisement -
- Advertisement -

ಅಯೋಧ್ಯೆ ರಾಮನ ವಿಗ್ರಹ ಕೆತ್ತನೆಗೆ ಕಪ್ಪು ಶಿಲೆ ಸಿಕ್ಕ ಸ್ಥಳದಲ್ಲಿ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಸಂಘಟನೆ ಮುಖಂಡರು ಘೇರಾವ್ ಹಾಕಿ, ಪೂಜೆಗೆ ಅವಕಾಶ ನೀಡದೆ ವಾಪಸ್ ಕಳುಹಿಸಿದ ಘಟನೆ ಮೈಸೂರಿನ ಹಾರೋಹಳ್ಳಿಯಲ್ಲಿ ಇಂದು ನಡೆದಿದೆ.

ಮೈಸೂರಿನ ಶಿಲ್ಪಿ ಕೆತ್ತನೆ ಮಾಡಿರುವ, ಉತ್ತರ ಪ್ರದೇಶದ ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ಮೂರ್ತಿಯ ಕಪ್ಪು ಶಿಲೆ ಕಲ್ಲು ಹಾರೋಹಳ್ಳಿ ಬಳಿಯ ಗಯಜ್ಜೇಗೌಡನಪುರದ ದಲಿತ ಸಮುದಾಯದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿತ್ತು. ಈ ವಿಚಾರ ಬೆಳಕಿಗೆ ಬಂದ ನಂತರ, ‘ಇಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು’ ಎಂದು ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಭೂಮಿಪೂಜೆ ನಿಗದಿಪಡಿಸಲಾಗಿತ್ತು.

ಪೂಜಾ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಆಗಮಿಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಸಂಘಟನೆಗಳ ಮುಖಂಡರು ಜಮೀನಿಗೆ ಪ್ರವೇಶ ನೀಡದೆ ಘೇರಾವ್ ಹಾಕಿದರು. ‘ಗೋ ಬ್ಯಾಕ್ ಪ್ರತಾಪ್ ಸಿಂಹ’, ‘ದಲಿತ ವಿರೋಧಿ ಪ್ರತಾಪ್ ಸಿಂಹನಿಗೆ ಧಿಕ್ಕಾರ’.. ಇತ್ಯಾದಿ ಘೋಷಣೆಗಳನ್ನು ಕೂಗಿದರು.

ಇದರಿಂದ ಮುಜುಗರಕ್ಕೆ ಒಳಗಾದ ಪ್ರತಾಪ್ ಸಿಂಹ, ಜನರಿಗೆ ಸಮಜಾಯಿಷಿ ನೀಡಲು ಮುಂದಾದರು. ಆದರೆ, ಗ್ರಾಮಸ್ಥರು ಮಾತ್ರ ಅವರ ಮಾತುಕೇಳಲು ಸಿದ್ಧವಿರಲಿಲ್ಲ. ‘ಇಲ್ಲಿಗೆ ನೀವು ಬರುವುದು ಬೇಡ, ಇಲ್ಲಿಂದ ಜಾಗ ಖಾಲಿ ಮಾಡಿ’ ಎಂದು ನಿಷ್ಠೂರವಾಗಿ ಹೇಳಿದರು.

‘ನೀವೊಬ್ಬ (ಪ್ರತಾಪ್ ಸಿಂಹ) ದಲಿತ ವಿರೋಧಿ. ನಿಮ್ಮ ನಡವಳಿಕೆಯಿಂದ ದಲಿತರ ಭಾವನೆಗೆ ಧಕ್ಕೆಯುಂಟಾಗಿದೆ. ಮಹಿಷ ದಸರಾ ಆಚರಣೆ ಸಂದರ್ಭದಲ್ಲಿ ದಲಿತರನ್ನು ತುಳಿದು ಹಾಕಿ ಬಿಡುತ್ತೇನೆ, ಹೊಸಕಿ ಹಾಕಿ ಬಿಡುತ್ತೇನೆ ಎಂದು ಬೆದರಿಸಿದ್ದ ನೀವು ದಲಿತರ ಜಮೀನಿಗೆ ಏಕೆ ಬರುತ್ತೀರಿ? ಇಲ್ಲಿಂದ ಹೊರಡಿ’ ಎಂದು ಮಾಜಿ ತಾಪಂ ಸದಸ್ಯರಾದ ಹಾರೋಹಳ್ಳಿ ಸುರೇಶ್ ಆಕ್ರೋಶ ಹೊರಹಾಕಿದರು.

‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ದಲಿತ ವಿರೋಧಿಯಲ್ಲ’ ಎಂದ ಸಂಸದ ಪ್ರತಾಪ್ ಸಿಂಹ, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡಿದರು. ಆದರೆ, ಸಂಸದರ ಯಾವ ಮಾತಿಗೂ ಸಮಾಧಾನಗೊಳ್ಳದ ಗ್ರಾಮಸ್ಥರು, ‘ನೀವು ಏನು ಹೇಳುವುದು ಬೇಡ, ಇಲ್ಲಿಂದ ವಾಪಸ್ ಹೋಗಿ’ ಎಂದು ಪಟ್ಟು ಹಿಡಿದರು.

ಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ನಡೆಸಿದರು. ಗ್ರಾಮಸ್ಥರು ಮಾತು ಕೇಳಿದಿದ್ದಾಗ, ಸಂಸದ ಪ್ರತಾಪ್ ಸಿಂಹ ಅವರನ್ನೇ ಅಲ್ಲಿಂದ ವಾಪಸ್ ಹೋಗುವಂತೆ ಶಾಸಕರು ಮನವಿ ಮಾಡಿದರು. ಇದರಿಂದ ಬೇಸರಗೊಂಡ ಸಂಸದ ಪ್ರತಾಪ್ ಸಿಂಹ ಅಲ್ಲಿಂದ ಹೊರಟರು. ಆ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.

ಇದನ್ನೂ ಓದಿ; ರೈಡ್ ರದ್ದುಗೊಳಿಸಿದ ಮಹಿಳೆಯ ಮೇಲೆ ಹಲ್ಲೆ; ಆಟೋ ಚಾಲಕನನ್ನು ಬಂಧಿಸಿದ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...