ಕರ್ನಾಟಕ ಸರಕಾರ ಕಳೆದ ಎರಡು ವರ್ಷಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತ ಬಂದಿರುವದರಿಂದ ಈ ಪ್ರದೇಶದಲ್ಲಿ ಬಹುತೇಕ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆಯಲ್ಲದೇ, 2019 ಜುಲೈ ತಿಂಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸದೆ ಮಂಡಳಿಯ ಅಧಿಕಾರವನ್ನು ಸರಕಾರ ಯೋಜನಾ ಇಲಾಖೆಯ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದರಿಂದ ಹಾಗೂ ಕೋವಿಡ್-19 ನೆಪದಲ್ಲಿ ಕಳೆದ ವರ್ಷ ಹೊರಡಿಸಿದ ಆದೇಶದ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡುವ ಮೂಲಕ ಈ ಭಾಗದ ಪ್ರಾದೇಶಿಕ ಬೆಳವಣಿಗೆಗೆ ಕಡಿವಾಣ ಹಾಕಲಾಗಿದೆ.

ಒಂದು ಕಡೆ ಈ ಪ್ರದೇಶವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡುತ್ತ, ಮತ್ತೊಂದು ಕಡೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡುವ ಅನುದಾನ ಮತ್ತು ಬಳಕೆಯಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಅನುಚ್ಛೇದ 371ಜೆ ಅನ್ವಯ ಈ ಭಾಗದ ಅಭಿವೃದ್ಧಿಗಾಗಿ ಕಂಡಿದ್ದ ಕನಸು ಭಗ್ನಗೊಳಿಸುವ ಕೆಲಸ ಈಗಿನ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಹೇಳಬಹುದಾಗಿದೆ. ಈಗಿರುವ ಬಿಜೆಪಿ ಸರಕಾರ ಬಂದಾಗಿನಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸದೇ ಕಾನೂನಿನ ವಿರುದ್ಧವಾಗಿ ನಡೆದುಕೊಂಡು ಬಂದಿದೆ.

ಎರಡು ವರ್ಷದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸುವಂತೆ ಸರಕಾರಕ್ಕೆ ಪದೇ ಪದೇ ಒತ್ತಾಯ ಮಾಡುತ್ತ ಬಂದಿದ್ದರೂ ಕ್ಯಾರೆ ಎನ್ನದೇ ನಿರ್ಲಕ್ಷ್ಯ ಮಾಡುತ್ತ ಬರಲಾಗಿತ್ತು. ಆದರೆ ಇತ್ತೀಚಿಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಪಕ್ಷದ ಶಾಸಕರು ನಡೆಸಿದ ಸುದೀರ್ಘ ಚರ್ಚೆ ಮತ್ತು ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರಿಸುತ್ತ, ಮುಂದಿನ 10 ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಲಾಗುವದು ಅಲ್ಲದೇ ಖಾಯಂ ಕಾರ್ಯದರ್ಶಿಯನ್ನೂ ನೇಮಿಸಲಾಗುವದೆಂದು ಭರವಸೆ ನೀಡಿದ್ದರು. ಆದರೆ 20 ದಿನಗಳಾದರೂ ಇಲ್ಲಿಯವರೆಗೆ ಮುಖ್ಯಮಂತ್ರಿಗಳು ನೀಡಿದ ಭರವಸೆ ಹುಸಿಯಾಗಿದೆ ಹಾಗೂ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ಅಂತಹ ಯಾವುದೇ ಪ್ರಕ್ರಿಯೆ ನಡೆಯದೇ ಇರುವದು ಅವರ ಬದ್ಧತೆಯ ಬಗ್ಗೆ ಅನುಮಾನ ಪಡುವಂತಾಗಿದೆ.

ರಾಜ್ಯದ ಮುಖ್ಯಮಂತ್ರಿಯೊಬ್ಬರು ಸದನದಲ್ಲಿ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗದ ಮಟ್ಟಿಗೆ ಪ್ರಜಾಪ್ರಭುತ್ವ ಕುಸಿದಿರುವದು ಅತ್ಯಂತ ಆತಂಕದ ವಿಷಯ ಮತ್ತು ಮುಖ್ಯಮಂತ್ರಿಯ ಆಡಳಿತ ವೈಖರಿಗೆ ಹಿಡಿದ ಕನ್ನಡಿ ಎಂದು ಹೇಳಬಹುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಲು ಸರಕಾರಕ್ಕೆ ಯಾರ ಅನುಮತಿಯೂ ಬೇಕಿಲ್ಲ, ಈಗಿರುವ ಶಾಸಕರಲ್ಲಿ 8 ಜನ ಶಾಸಕರನ್ನು, 2 ವಿಧಾನ ಪರಿಷತ್ ಸದಸ್ಯರನ್ನು, 1 ಲೋಕಸಭಾ ಸದಸ್ಯರನ್ನು, 1 ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು, 1 ನಗರಸಭೆ ಅಧ್ಯಕ್ಷರನ್ನು ಹಾಗೂ 5 ಜನ ವಿಷಯ ತಜ್ಞರನ್ನು ನಾಮನಿರ್ದೇಶನ ಮಾಡಬೇಕಿದೆ. ಇದಕ್ಕೆ ಯಾವುದೇ ಹಣಕಾಸಿನ ಅಲಭ್ಯತೆ ಅಥವಾ ಆರ್ಥಿಕ ಹೊರೆಯೇನು ಸರಕಾರಕ್ಕೆ ಬೀಳುವದಿಲ್ಲ. ಪೂರ್ಣ ಪ್ರಮಾಣದ ಆಡಳಿತ ಮಂಡಳಿ ಕಳೆದ ಎರಡು ವರ್ಷದಿಂದ ಇಲ್ಲದೇ ಇರುವದರಿಂದ ಈ ಭಾಗದ ಅಭಿವೃದ್ಧಿಗಾಗಿ ಯಾವುದೇ ಯೋಜನೆ ರೂಪಿಸಲು ಸಾಧ್ಯಾವಾಗುತ್ತಿಲ್ಲ ಹಾಗೂ ಸ್ಥಳೀಯವಾಗಿ ನೆನೆಗುದಿಗೆ ಬಿದ್ದಿರುವ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯಾವಾಗುತ್ತಿಲ್ಲ.

ಅಲ್ಲದೇ ಸೆಪ್ಟೆಂಬರ್ 2021ಕ್ಕೆ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಈ ಮಂಡಳಿಗೆ ಈಗಾಗಲೇ ಘೋಷಿಸಲಾದ ಅನುದಾನವನ್ನು ಖರ್ಚು ಮಾಡಿದಲ್ಲಿ ಇದೇ ವರ್ಷ 3 ಸಾವಿರ ಕೋಟಿ ರೂ ಹೆಚ್ಚುವರಿ ಅನುದಾನ ನೀಡಲಾಗುವದೆಂದು ಘೋಷಿಸಿದ್ದಾರೆ. ಆಡಳಿತ ಮಂಡಳಿಯೇ ಇಲ್ಲದ ಮೇಲೆ ಅನುದಾನ ಖರ್ಚಾಗುವದು ಹೇಗೆ ಎನ್ನುವದು ಯಕ್ಷ ಪ್ರಶ್ನೆಯಾಗಿದೆ. ಇದು ಗೊತ್ತಿದ್ದೇ ಮುಖ್ಯಮಂತ್ರಿಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎನ್ನುವದು ಸುಲಭವಾಗಿ ತಿಳಿಯುತ್ತದೆ. ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸುವದು ಒಂದು ಆಡಳಿತಾತ್ಮಕ ಆದೇಶ ಮಾತ್ರ, ಅದರಿಂದ ಸರಕಾರಕ್ಕೆ ಯಾವುದೇ ಹಣಕಾಸಿನ ಹೊರೆಯಾಗುವದಿಲ್ಲ ಎನ್ನುವ ಕನಿಷ್ಟ ತಿಳಿವಳಿಕೆ ಸರಕಾರ ನಡೆಸುವ ಜನರಿಗೆ ಇಲ್ಲವಾ? 3 ಸಾವಿರ ಕೋಟಿ ರೂ ಅನುದಾನ ನೀಡುವ ಬಗ್ಗೆ ಪದೇ ಪದೇ ಹೇಳುತ್ತಿರುವ ಮುಖ್ಯಮಂತ್ರಿ ಮಂಡಳಿಗೆ 2021-22ನೇ ಆರ್ಥಿಕ ಸಾಲಿನಲ್ಲಿ ನಿಗದಿಗೊಳಿಸಲಾದ ಅನುದಾನ ಖರ್ಚು ಮಾಡಿದಲ್ಲಿ ನೀಡಲಾಗುವದೆಂದು ಹೇಳುತ್ತಿರುವದು ಹಾಸ್ಯಾಸ್ಪದ ಮತ್ತು ಜನರ ದಾರಿ ತಪ್ಪಿಸುವ ಕೆಲಸ.

ಮುಖ್ಯಮಂತ್ರಿಗಳಿಗೆ ಈ ಭಾಗದ ಬಗ್ಗೆ ಕಾಳಜಿ ಇದ್ದಲ್ಲಿ ಯಾವುದೇ ಪೂರ್ವ ಷರತ್ತು ಇಲ್ಲದೇ ನಿರ್ದಿಷ್ಟ ಯೋಜನೆಗಳಿಗೆ ಅನುದಾನ ನೀಡುವ ಬಗ್ಗೆ ಹೇಳಬಹುದಾಗಿದೆ. ಆದರೆ ಕಾಟಾಚಾರಕ್ಕೆ ಅನುದಾನ ನೀಡುತ್ತೇನೆ ಎಂದು ಸತ್ಯವನ್ನು ಮರೆಮಾಚುವ ಮತ್ತು ತಿರುಚುವ ಹೇಳಿಕೆಯನ್ನು ಮುಖ್ಯಮಂತ್ರಿ ನೀಡುತ್ತಿರುವುದು ದುರಂತ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕಳೆದ 7 ವರ್ಷಗಳಿಂದ ನೀಡಲಾದ ಅನುದಾನದ ಬಗ್ಗೆ ಸರಕಾರ ವಿವಿಧ ಸಂದರ್ಭದಲ್ಲಿ ವಿವಿಧ ರೀತಿಯ ಅಂಕಿಅಂಶಗಳು ನೀಡಿ ಗೊಂದಲ ಉಂಟುಮಾಡುತ್ತಿದೆ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ರಾಜ್ಯ ಸರಕಾರ ಬಿಡುಗಡೆಗೊಳಿಸುವ ಆರ್ಥಿಕ ವರದಿಯಲ್ಲಿ ನವೆಂಬರ್ 2021ರವರೆಗೆ 7385.36 ಕೋಟಿ ರೂ ನಿಗದಿಗೊಳಿಸಿ 6079.86 ಕೋಟಿ ರೂ ಖರ್ಚಾಗಿದೆ ಎಂದು ಹೇಳಲಾಗಿದೆ. ಆದರೆ, ಸರಕಾರ ಸದನದಲ್ಲಿ ಉತ್ತರಿಸುವಾಗ ಒಂದು ರೀತಿಯ ಅಂಕಿಅಂಶಗಳನ್ನು ಹೇಳಿದರೆ, ಮಂಡಳಿ ಕಾರ್ಯದರ್ಶಿ ಇನ್ನೊಂದು ರೀತಿಯ ಅಂಕಿ ಅಂಶಗಳನ್ನು ನೀಡುತ್ತಿರುವದು ಅನುಮಾನ ಹುಟ್ಟಿಸುವಂತಿದೆ.

ಅಲ್ಲದೇ ಈ ಭಾಗದಲ್ಲಿ ಸುಮಾರು 48259 ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ ಸುಮಾರು 15794 ಹುದ್ದೆಗಳು (ಶೇ.32.72ರಷ್ಟು) ಖಾಲಿ ಇವೆ. ಪ್ರೌಢಶಾಲೆಗಳಲ್ಲಿ ಮಂಜೂರಾಗಿರುವ ಹುದ್ದೆಗಳು 12295 ಇದ್ದು, ಅದರಲ್ಲಿ ಸುಮಾರು 2769 ಶಿಕ್ಷಕರ ಹುದ್ದೆಗಳು (ಶೇ.22.52ರಷ್ಟು) ಹುದ್ದೆಗಳು ಖಾಲಿ ಇವೆ. ಅಲ್ಲದೇ ಎಲ್ಲಾ ಇಲಾಖೆಗಳು ಸೇರಿ ಮುಂಬಡ್ತಿಯಿಂದಾಗಿ ಭರ್ತಿಯಾಗಬೇಕಿರುವ 24078 ಹುದ್ದೆಗಳು, ಅದರಲ್ಲಿ ಮುಂಬಡ್ತಿಯಾಗದೇ ಇರುವ ಹುದ್ದೆಗಳು ಸುಮಾರು 7849 (ಶೇ.32.59 ರಷ್ಟು) ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಇಟ್ಟುಕೊಂಡು ಸರಕಾರ ಈ ಭಾಗವನ್ನು ಕಲ್ಯಾಣ ಮಾಡುತ್ತೇವೆ ಎನ್ನುವದು ಹಾಸ್ಯಾಸ್ಪದವಾಗಿದೆ. ಇವರ ಕಾಳಜಿ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಇನ್ನೂ ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಮಂಜೂರಾಗಿರುವ ಬೋಧಕ ಹುದ್ದೆಗಳ ಸಂಖ್ಯೆ 248, ಅದರಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 191 (ಶೇ.77ರಷ್ಟು), ಅದೇ ರೀತಿ ಮಂಜೂರಾಗಿರುವ ಬೋಧಕೇತರ ಹುದ್ದೆಗಳು 707, ಖಾಲಿ ಇರುವ ಹುದ್ದೆಗಳ ಸಂಖ್ಯೆ 502 (ಶೇ.71ರಷ್ಟು) ಈ ಭಾಗದ ಉನ್ನತ ಶಿಕ್ಷಣದ ಗುಣಮಟ್ಟದ ಕುರಿತು ಕಥೆ ಹೇಳುತ್ತದೆ. ಇದೇ ಸ್ಥಿತಿ ಇನ್ನುಳಿದ ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ವಿವಿಧ ಕಚೆರಿಗಳಲ್ಲಿ ಕಾಣಸಿಗುತ್ತದೆ. ಈ ಭಾಗದ ಹಿನ್ನಡೆಗೆ ಭರ್ತಿಯಾಗದ ಹುದ್ದೆಗಳೇ ಮುಖ್ಯ ಕಾರಣವೆಂದು ಹೇಳಬಹುದು.

ಹೆಸರು ಬದಲಿಸಿದರಷ್ಟೇ ಸಾಲದು, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸರಕಾರಗಳಿಗೆ ಬದ್ಧತೆ ಇರುವದು ಬಹಳ ಅವಶ್ಯಕವಾಗಿದೆ. ಬದ್ಧತೆ ಇಲ್ಲದ ರಾಜಕಾರಣದಿಂದ ಈ ಭಾಗ ಹಿಂದುಳಿದಿದೆ ಎನ್ನುವದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳೂ ಸಹ ಸರಕಾರಗಳಿಗೆ ಕಾಲಕಾಲಕ್ಕೆ ಎಚ್ಚರಿಸುವದರ ಮೂಲಕ ಜನರ ಆಶೋತ್ತರಗಳನ್ನು ಸಾಕಾರಗೊಳಿಸುವ ಕೆಲಸವಾಗಬೇಕಿದೆ.

ಡಾ. ರಝಾಕ ಉಸ್ತಾದ

ಡಾ. ರಝಾಕ ಉಸ್ತಾದ
ರಾಯಚೂರಿನವರಾದ ಡಾ.ರಝಾಕ ಉಸ್ತಾದ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರು, ಹಿರಿಯ ಮುಖಂಡರು.


ಇದನ್ನೂ ಓದಿ: 74ನೇ ಕಲ್ಯಾಣ ಕರ್ನಾಟಕ ಉತ್ಸವ: 1,500 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

LEAVE A REPLY

Please enter your comment!
Please enter your name here