Homeಕರ್ನಾಟಕಕರ್ನಾಟಕದಲ್ಲಿ ದ್ವೇಷದ ಸೋಲಾಗಿದೆ ಆದರೆ ಪ್ರೀತಿಯ ಗೆಲುವಿನ್ನೂ ಆಗಿಲ್ಲ

ಕರ್ನಾಟಕದಲ್ಲಿ ದ್ವೇಷದ ಸೋಲಾಗಿದೆ ಆದರೆ ಪ್ರೀತಿಯ ಗೆಲುವಿನ್ನೂ ಆಗಿಲ್ಲ

- Advertisement -
- Advertisement -

ರಾಜಕೀಯದಲ್ಲಿ ಯಾರು ಎಂಬುದಕ್ಕಿಂತ ದೊಡ್ಡ ಪ್ರಶ್ನೆ ಏನು ಮತ್ತು ಏಕೆ ಎಂಬುದು. ಕರ್ನಾಟಕದ ಚುನಾವಣೆಗಳ ಪರಿಣಾಮದ ನಂತರ ಮಾಧ್ಯಮಗಳು ಯಾರು ಗೆದ್ದರು, ಯಾರು ಸೋತರು ಎಂಬ ಪ್ರಶ್ನೆಯಲ್ಲಿ ನಿರತವಾಗಿವೆ. ಯಾವ ಗೋದಿ (ಪ್ರಭುತ್ವದ ಮುದ್ದಿನ) ಮೀಡಿಯಾ ನಿನ್ನೆಯ ತನಕ ನರೇಂದ್ರ ಮೋದಿಯನ್ನು ಟ್ರಂಪ್ ಕಾರ್ಡ್ ಎಂದು ಬಿಂಬಿಸುವಲ್ಲಿ ನಿರತವಾಗಿದ್ದವೋ, ಇಂದು ಅವುಗಳೇ ಈ ಸೋಲಿನ ಭಾರದಿಂದ ಪ್ರಧಾನಮಂತ್ರಿಯನ್ನು ಉಳಿಸಲು ಮತ್ತು ಅದರ ಹೊಣೆಗಾರಿಕೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸ್ಥಳೀಯ ಬಿಜೆಪಿ ನಾಯಕರ ಮೇಲೆ ಹೊರೆಸುವ ಕೆಲಸದಲ್ಲಿ ಬ್ಯುಸಿಯಾಗಿವೆ. ಅತ್ತ ಮುಖ್ಯಮಂತ್ರಿ ಯಾರು ಆಗುವರು ಎಂಬುದರ ಕಸರತ್ತು ಶುರುವಾಗಿದೆ. ಕರ್ನಾಟಕದ ನಂತರ ರಾಷ್ಟ್ರೀಯ ಮಟ್ಟದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಯಲ್ಲಿ ಯಾರದ್ದು ಎಷ್ಟು ತೂಕ ಇರುತ್ತೆ ಎಂಬುದರ ಅಂದಾಜು ಹಾಕಲಾಗುತ್ತಿದೆ. ಆದರೆ ರಾಜಕೀಯದಲ್ಲಿ ದೀರ್ಘಾವದಿ ತಿಳಿವಳಿಕೆ ಉಳ್ಳವರು ತಮ್ಮ ಗಮನ ಯಾರು ಗೆದ್ದರು ಎಂಬುದರಿಂದ ತೆಗೆದು ಏನು ಗೆದ್ದಿದೆ ಹಾಗೂ ಏನು ಸೋತಿದೆ, ಏಕೆ ಸೋತಿದೆ ಎಂಬುದರ ಮೇಲೆ ಹರಿಸಬೇಕಿದೆ.

ವಿಶೇಷವಾಗಿ ಈ ಚುನಾವಣೆಗಳು ಕೇವಲ ಒಂದು ರಾಜ್ಯದ ಮುಂದಿನ ಐದು ವರ್ಷಗಳ ಸರಕಾರ ನಿರ್ಣಯವಾಗುವ ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಗಳು ಮಾತ್ರವಾಗಿರಲಿಲ್ಲ. ಈ ಚುನಾವಣೆಗಳ ಮೇಲೆ ಬಹಳಷ್ಟು ಸಂಗತಿಗಳು ನಿಂತಿದ್ದವು. ಒಂದು ವೇಳೆ ಬಿಜೆಪಿ ಇಲ್ಲಿ ಗೆದ್ದಿದ್ದರೆ, 2024ರ ಲೋಕಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಜೊತೆಗೆ ವಿರೋಧಪಕ್ಷಗಳಿಗೂ ಬಾಗಿಲು ಮುಚ್ಚುವ ವಾತಾವರಣ ಸೃಷ್ಟಿಯಾಗುತ್ತಿತ್ತು. ನಮ್ಮ ಗಣತಂತ್ರದ ಮೇಲೆ ಆಗುತ್ತಿರುವ ದಾಳಿಗೆ ಪ್ರತಿರೋಧ ಒಡ್ಡುವುದು ಅಸಾಧ್ಯವಾಗುತ್ತಿತ್ತು. ಈ ನಿಟ್ಟಿನಲ್ಲಿ ಕರ್ನಾಟಕದ ಚುನಾವಣೆ ಭಾರತದ ಸ್ವಧರ್ಮವನ್ನು ಉಳಿಸಿಕೊಳ್ಳಲು ನಡೆಯುತ್ತಿರುವ ಕುರುಕ್ಷೇತ್ರದ ಯುದ್ಧದಲ್ಲಿ ಒಂದು ಮಹತ್ವಪೂರ್ಣ ಅಧ್ಯಾಯವಾಗಿದೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ನಡೆಸುವ ಯುದ್ಧದಲ್ಲಿ ಇದು ಮೊದಲ ಮುನ್ನಡೆಯಾಗಿದೆ.

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯ ಗೆಲುವು ಎಂದು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಗೆಲುವಿನ ನಂತರ ರಾಹುಲ್ ಗಾಂಧಿಯವರು ಹೇಳಿದರು. ಚುನಾವಣಾ ಗೆಲುವಿನ ಉತ್ಸಾಹದಲ್ಲಿ ಮಾಡಿದ ಈ ಘೋಷಣೆಯಲ್ಲಿ ಒಂದಿಷ್ಟು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ಕರ್ನಾಟಕದ ಚುನಾವಣೆಗಳಲ್ಲಿ ದ್ವೇಷ ಸೋತಿದೆ ಎಂಬುದಂತೂ ನಿಚ್ಚಳವಾಗಿದೆ, ಆದರೆ ಪ್ರೀತಿಯ ಗೆಲುವು ಆಗಿದೆ ಎಂದು ಘೋಷಿಸಲು ಇನ್ನೂ ಸಮಯ ಬಂದಿಲ್ಲ.

ಈ ಚುನಾವಣೆಗಳ ಪರಿಣಾಮ ನೋಡಿ ಇಷ್ಟಂತೂ ಹೇಳಬಹುದು; ಬೆಲೆಏರಿಕೆ, ಬಡತನ ಮತ್ತು ನಿರುದ್ಯೋಗದ ಪ್ರಶ್ನೆಗಳಿಂದ ಬಳಲುತ್ತಿರುವ ಜನತೆಗೆ ಕೋಮು ಉನ್ಮಾದದಿಂದ ಮೂರ್ಖರನ್ನಾಗಿಸುವ ತಂತ್ರದ ಸೋಲಾಗಿದೆ. ಸೌಹಾರ್ದದ ಸಂಸ್ಕೃತಿಯ ಪ್ರತೀಕವಾಗಿರುವ ಕರ್ನಾಟಕದಲ್ಲಿ ಒಮ್ಮೆ ಹಿಜಾಬ್, ಮತ್ತೊಮ್ಮೆ ಆಜಾನ್, ಇನ್ನೊಮ್ಮೆ ಲವ್ ಜಿಹಾದ್ ಮತ್ತೆ ಟಿಪ್ಪು ಸುಲ್ತಾನ್ ನೆಪ ಮಾಡಿ ಹಿಂದೂ ಮುಸ್ಲಿಂ ದ್ವೇಷ ಹರಡಿಸುವ ರಾಜಕೀಯಕ್ಕೆ ಸೋಲುಂಟಾಗಿದೆ. ಕೊನೆಯ ಕ್ಷಣದಲ್ಲಿ ಬಜರಂಗಬಲಿಯ ಆಸರೆ ತೆಗೆದುಕೊಂಡು ಹಿಂದೂ ಭಾವನೆಗಳನ್ನು ಕೆರಳಿಸುವ ಅತ್ಯಂತ ಅಗ್ಗದ ಈ ಆಟದ ಸೋಲಾಗಿದೆ. ಒಂದು ಅಸಮರ್ಥ ಮತ್ತು ಭ್ರಷ್ಟ ಇಮೇಜ್ ಹೊಂದಿರುವ ಸರಕಾರಕ್ಕೆ ಕೊನೆಯ ಕೆಲ ದಿನಗಳಲ್ಲಿ ನರೇಂದ್ರ ಮೋದಿಯ ರೋಡ್ ಶೋ, ಭಾವನೆಗಳನ್ನು ಕೆರಳಿಸುವ ಭಾಷಣ ಹಾಗೂ ಚಾನೆಲ್‌ಗಳ ಮುಖಾಂತರ ಅವುಗಳ ಪ್ರಚಾರದಿಂದ ಗೆಲ್ಲಿಸಬಹುದು ಎಂಬ ಮಿಥ್‌ಅನ್ನು ಮತ್ತೊಮ್ಮೆ ಸುಳ್ಳೆಂದು ಸಾಬೀತುಪಡಿಸಲಾಗಿದೆ.

ಆದರೆ ಪ್ರೀತಿಯ ಗೆಲುವು ಆಗಿದೆ ಎಂದು ಹೇಳಿರುವುದು ಅವಸರದ ಮಾತಾದೀತು. ಮೊದಲನೆಯದಾಗಿ, ಕರ್ನಾಟಕದ ಗೆಲುವು ಇನ್ನೂ ಕಚ್ಚಾ ಗೆಲುವು. ಮುಂದಿನ ವರ್ಷ ಬರುವ ಲೋಕಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಕರ್ನಾಟಕದಲ್ಲಿ ಗೆಲ್ಲಬಹುದು ಎಂದು ಖಚಿತವಾಗಿ ಇನ್ನೂ ಹೇಳಲಾಗುವುದಿಲ್ಲ. ಎರಡನೆಯದಾಗಿ, ಈ ಗೆಲುವಿನ ನೇರ ಪರಿಣಾಮ ಪಕ್ಕದ ತೆಲಂಗಾಣ ಅಥವಾ ಹಿಂದಿ ಪ್ರದೇಶದ ಇತರ ರಾಜ್ಯಗಳಲ್ಲಿ ಆಗುವ ವಿಧಾನಸಭಾ ಚುನಾವಣೆಗಳ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬುದರ ಬಗ್ಗೆಯೂ ಯಾವುದೇ ಖಚಿತತೆ ಇಲ್ಲ. ಇಡೀ ದೇಶದ ಲೋಕಸಭಾ ಚುನಾವಣೆಗಳಲ್ಲಿ ಗೆಲುವಿನ ಮಾತಂತೂ ತುಂಬಾ ದೂರದ ಮಾತಾಗುತ್ತದೆ.

ಕರ್ನಾಟಕದಲ್ಲಿ ಬಿಜೆಪಿಯ ಸೋಲಿನಿಂದ ಈ ನಾಡಿನ ದೀರ್ಘ ಹೋರಾಟದ ನೆಲೆಯನ್ನು ಉಳಿಸಿಕೊಂಡಂತಾಗಿದೆ. ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷದ ಈ ಹೀನಾಯ ಸೋಲು ದೇಶದ ಮನಸ್ಥಿತಿ ಮತ್ತು ವಿರೋಧಪಕ್ಷಗಳ ಮನೋಬಲದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಲೋಕಸಭೆಯ ಚುನಾವಣೆಗಳಲ್ಲಿ ಏನಾಗುವುದು ಎಂದು ಈಗಲೇ ಹೇಳಲು ಆಗುವುದಿಲ್ಲ ಆದರೆ ಕರ್ನಾಟಕದ ಈ ಚುನಾವಣಾ ಫಲಿತಾಂಶವು 2024ರಲ್ಲಿ ಅಧಿಕಾರ ಬದಲಾವಣೆಯ ಬಾಗಿಲನ್ನು ತೆರೆದಿಟ್ಟಿದೆ ಎಂಬುದಂತೂ ನಿಚ್ಚಳವಾಗಿದೆ. ವಿಷಕಾರಿಯಾಗುತ್ತಲೇ ಇದ್ದ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಒಂದಿಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಹಳೇ ಮೈಸೂರು ಪ್ರಾಂತ್ಯದಲ್ಲಿ ಬೀಸಿದ ಕಾಂಗ್ರೆಸ್ ಅಲೆ

ಅಷ್ಟೇ ಅಲ್ಲ, ಕರ್ನಾಟಕವು ಈ ಬಾಗಿಲತನಕ ತಲುಪುವ ದಾರಿಯನ್ನೂ ತೋರಿಸಿಕೊಟ್ಟಿದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಗೆಲುವಿನ ಹಿಂದೆ ಬಿಜೆಪಿ ಸರಕಾರದ ಅಸಮರ್ಥತೆ ಮತ್ತು ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನ ನೇತೃತ್ವದಲ್ಲಿ ಒಗ್ಗಟ್ಟು ಮುಂತಾದ ಸಾಮಾನ್ಯ ಕಾರಣಗಳಂತೂ ಇದ್ದವು. ಆದರೆ ಈ ಪರಿಣಾಮದ ಮೂಲದಲ್ಲಿ ಒಂದು ಆಳವಾದ ಸಾಮಾಜಿಕ ಸಂರಚನೆಯೂ ಇದೆ, ಅದು ಇಡೀ ದೇಶಕ್ಕೆ ಒಂದು ಉದಾಹರಣೆಯಾಗಬಲ್ಲದು. ಚುನಾವಣಾ ಪರಿಣಾಮದ ವಿಶ್ಲೇಷಣೆ ತೋರಿಸುವುದೇನೆಂದರೆ, ಕರ್ನಾಟಕದಲ್ಲಿ ಅಂಚಿನಲ್ಲಿರುವ ಬಹುಸಂಖ್ಯಾತ ಸಮುದಾಯಗಳು ಕಾಂಗ್ರೆಸ್ ಪರವಾಗಿ ಸಂಘಟಿತವಾದವು. ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸರಿಸುಮಾರು ಸಮಬಲ ಹೊಂದಿದ್ದವು ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ ಶೇ.10 ರಷ್ಟು ಮತಗಳು ಹೆಚ್ಚುವರಿಯಾಗಿ ಸಿಕ್ಕವು. ಪುರುಷರ ಹೋಲಿಕೆಯಲ್ಲಿ ಕಾಂಗ್ರೆಸ್‌ಗೆ ಮಹಿಳೆಯರ ಎರಡು ಪಟ್ಟು ಹೆಚ್ಚು ಮತಗಳು ಪ್ರಾಪ್ತಿಯಾದವು. ಟಿವಿ ಚಾನೆಲ್‌ಗಳಲ್ಲಿ ಆದ ಚರ್ಚೆಗಳು ಲಿಂಗಾಯತ ಮತ್ತು ಒಕ್ಕಲಿಗ ಮತ ಬ್ಯಾಂಕ್‌ಗಳ ಮೇಲೆ ಕೇಂದ್ರೀಕೃತವಾಗಿದ್ದವು, ಆದರೆ ವಾಸ್ತವದಲ್ಲಿ ಕರ್ನಾಟಕದ ’ಅಹಿಂದ’ ಮತಗಳು ಅಂದರೆ ಹಿಂದುಳಿದ, ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್‌ನ್ನು ಗೆಲ್ಲಿಸಿದವು. ಒಂದು ವೇಳೆ ಬಡವರು ಶ್ರೀಮಂತರು ಎಂಬ ಲೆಕ್ಕದಲ್ಲಿ ನೋಡಿದರೆ, ಸಣ್ಣಪುಟ್ಟ ಶ್ರೀಮಂತ ಭಾಗಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತು ಆದರೆ ಮಧ್ಯಮ ವರ್ಗ, ಬಡವ ಮತ್ತು ಕಡುಬಡತನದ ವರ್ಗಗಳು ಕಾಂಗ್ರೆಸ್ ಮುನ್ನಡೆ ಸಾಧಿಸುವಂತೆ ಮಾಡಿದವು. ಒಂದುವೇಳೆ ಸಮಾಜ ಒಂದು ಪಿರಾಮಿಡ್‌ನಂತೆ ಇದೆ ಎಂದೂ ಊಹಿಸಿಕೊಂಡಲ್ಲಿ, ಪಿರಾಮಿಡ್‌ನ ಮೇಲಿನ ಭಾಗವು ಬಿಜೆಪಿಯ ಜೊತೆಗೆ ಸಾಥ್ ನೀಡಿತು ಹಾಗೂ ಅದರ ಕೆಳಗಿನ ಭಾಗಗಳು ಕಾಂಗ್ರೆಸ್ ಜೊತೆಗೆ. ಒಂದು ವೇಳೆ ಈ ಮಾದರಿಯನ್ನು ಎಲ್ಲಾ ವಿರೋಧ ಪಕ್ಷಗಳು ದೇಶಾದ್ಯಂತ ಅಳವಡಿಸಿಕೊಂಡರೆ 2024ರಲ್ಲಿ ಅಧಿಕಾರ ಬದಲಾವಣೆಯನ್ನು ಖಾತ್ರಿಪಡಿಸಬಹುದು.

ಈ ಸಾಮಾಜಿಕ ಸಮೀಕರಣ ತನ್ನಿಂದಾಗಿಯೇ ದ್ವೇಷವನ್ನು ಕಡಿತಗೊಳಿಸುವುದಿಲ್ಲ ಎಂದು ನೀವು ಹೇಳಬಹುದು. ಕೊನೆಯ ವ್ಯಕ್ತಿ ಬಿಜೆಪಿಗೆ ಮತ ನೀಡದೇ ಇರಬಹುದು, ಆದರೆ ಆತನ ಮನದಲ್ಲಿಯ ಕೋಮುವಾದದ ವಿಷ ಕೊನೆಯಾಗಿದೆ ಎಂದು ಹೇಳಲಾಗುವುದಿಲ್ಲ. ಈ ಮಾತು ನಿಜ. ಪ್ರೀತಿಯ ಗೆಲುವಿಗಾಗಿ 2024ರ ಚುನಾವಣೆಗಳಲ್ಲಿ ಬಿಜೆಪಿಯ ಸೋಲು ಅವಶ್ಯಕವಿದ್ದರೂ, ಆದರೆ ಅದಷ್ಟೇ ಸಾಕಾಗುವುದಿಲ್ಲ. ಪ್ರೀತಿಯ ಗೆಲುವಿಗಾಗಿ ಜನರ ಹೃದಯ ಮತ್ತು ಮನಸ್ಸನ್ನು ಗೆಲ್ಲಬೇಕಾಗುತ್ತದೆ. ದ್ವೇಷದ ವಿಷವನ್ನು ತೆಗೆದುಹಾಕಲು ಕನಿಷ್ಠ ಒಂದು ತಲೆಮಾರಿನ ದೀರ್ಘ ವೈಚಾರಿಕ ಹೋರಾಟ ನಡೆಸಬೇಕಾಗುತ್ತದೆ. ಚುನಾವಣಾ ರಾಜಕೀಯ ಭಾರತದ ಸ್ವಧರ್ಮದ ರಕ್ಷಣೆಗಾಗಿ ಅವಶ್ಯಕವಾಗಿರುವ ಈ ಆಳವಾದ ಸಾಂಸ್ಕೃತಿಕ ಸಂಘರ್ಷದ ಪ್ರಾರಂಭ ಆಗಬಹುದಷ್ಟೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...