Homeಕರ್ನಾಟಕಮುಂಬೈ ಕರ್ನಾಟಕ: ಸ್ವಯಂಕೃತ ಯಡವಟ್ಟಿಗೆ ಭದ್ರಕೋಟೆಯಲ್ಲಿಯೇ ಛಿದ್ರವಾದ ಬಿಜೆಪಿ; ಜಯಭೇರಿ ಬಾರಿಸಿದ ಕಾಂಗ್ರೆಸ್

ಮುಂಬೈ ಕರ್ನಾಟಕ: ಸ್ವಯಂಕೃತ ಯಡವಟ್ಟಿಗೆ ಭದ್ರಕೋಟೆಯಲ್ಲಿಯೇ ಛಿದ್ರವಾದ ಬಿಜೆಪಿ; ಜಯಭೇರಿ ಬಾರಿಸಿದ ಕಾಂಗ್ರೆಸ್

- Advertisement -
- Advertisement -

ಮುಂಬೈ ಕರ್ನಾಟಕ ಮೊದಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಇತ್ತಿಚೀನ ದಿನಗಳಲ್ಲಿ ಅದನ್ನು ಬಿಜೆಪಿ ವಶಪಡಿಸಿಕೊಂಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಮಲವನ್ನು ಕಿತ್ತೆಸೆದು ಕಾಂಗ್ರೆಸ್‌ಗೆ ಮಣೆ ಹಾಕಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರಾದ ರಮೇಶ್ ಜಾರಕಿಹೊಳಿ ಹಾಗೂ ಕೆಲವು ಪ್ರಮುಖ ನಾಯಕರು ಗೆದ್ದಿದ್ದು ಬಿಟ್ಟರೆ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇ ಜಯಭೇರಿ ಬಾರಿಸಿದೆ.

ಹಿಂದಿನ ಕೆಲವು ಚುನಾವಣೆಗಳಲ್ಲಿ ಉತ್ತರ ಕರ್ನಾಟಕ ಭಾಗದ ಜನರು ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಡುತ್ತಿದ್ದರು. ಲಿಂಗಾಯತ ಬಾಹುಳ್ಯದ ಈ ಭಾಗದಲ್ಲಿ, ಮಾಸ್ ಲೀಡರ್ ಬಿಎಸ್ ಯಡಿಯೂರಪ್ಪನವರ ಕಾರಣಕ್ಕೆ ಅದು ಸಾಧ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಬಿಜೆಪಿ ಕೆಟ್ಟರೀತಿಯಲ್ಲಿ ನಡೆಸಿಕೊಂಡಿತು ಎಂಬ ಭಾವನೆ ಈ ಭಾಗದ ಲಿಂಗಾಯತ ಮತದಾರರ ಮೇಲೆ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.

ಇನ್ನು ಈ ಭಾಗದಲ್ಲಿ ಮಾಸ್ ಲೀಡರ್ ಎನ್ನಬಹುದಾಗಿದ್ದ ಲಕ್ಷ್ಮಣ ಸವದಿ ಹಾಗೂ ಚಾಣಾಕ್ಷ ರಾಜಕಾರಣಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದಿರುವುದು ಕೂಡ ಈ ಭಾಗದ ಲಿಂಗಾಯತರ ಅದರಲ್ಲೂ ಪಂಚಮಸಾಲಿಗಳ ಕಣ್ಣು ಕೆಂಪಾಗಿಸಿತ್ತು. ಇಬ್ಬರೂ ನಾಯಕರು ಬಿಜೆಪಿಯಿಂದ ತಮಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಸೇರಿದರು. ಆ ಬಳಿಕ ಬಿಜೆಪಿಯ ಒಳಹೂರಣವನ್ನು ಜನರೆದುರು ತೆರೆದಿಟ್ಟರು. ಪಂಚಮಸಾಲಿ ಲಿಂಗಾಯತ ಸಮುದಾಯದ ಉಪಪಂಗಡಗಳಲ್ಲಿ ಒಂದಾದ ಆದಿ ಬಣಜಿಗ ಸಮುದಾಯಕ್ಕೆ ಸೇರಿದ ಸವದಿ, ಹಾಗೂ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಶೆಟ್ಟರ್ ಇಬ್ಬರೂ ಉತ್ತರ ಕರ್ನಾಟಕ ಭಾಗದ ಪಂಚಮಸಾಲಿ ಲಿಂಗಾಯತ ಸಮುದಾಯದ ಮತಗಳನ್ನು ’ಕೈ’ವಶ ಮಾಡುವಲ್ಲಿ ಯಶಸ್ವಿಯಾದರು.

ಲಕ್ಷ್ಮಣ ಸವದಿ

ಮುಂಬೈ ಕರ್ನಾಟಕ ಜನಸಂಘದ ಮೂಲಕ ಬಿಜೆಪಿಗೆ ಅಡಿಪಾಯ ಹಾಕಿ ಗಟ್ಟಿಗೊಳಿಸಲಾಗಿತ್ತು. ಅದರೆ ಇಂದು ಬಿಜೆಪಿಯ ದುರಾಡಳಿತದಿಂದ ಆ ನೆಲೆ ಛಿದ್ರವಾಗಿದೆ. ಮುಂಬೈ ಕರ್ನಾಟಕದಲ್ಲಿ ಒಟ್ಟು 50 ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿ 30 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಕಾಂಗ್ರೆಸ್ 17, ಜೆಡಿಎಸ್ 2 ಹಾಗೂ ಕೆಡಿಜಿಪಿ 1 ಸ್ಥಾನಗಳಿಸಿತ್ತು. ಹಿಂದಿನ ಸರ್ಕಾರದಲ್ಲಿ 17 ಶಾಸಕರು ರಾಜೀನಾಮೆ ನೀಡಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಉರುಳಿಸಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ರಮೇಶ್ ಜಾರಕಿಹೊಳಿ; ಈ ಭಾಗದಲ್ಲಿ ಕಾಂಗ್ರೆಸ್‌ನ 4, ಓರ್ವ ಪಕ್ಷೇತರ ಶಾಸಕನನ್ನು ಬಿಜೆಪಿಗೆ ಹೋಗಿದ್ದರು. ಅಲ್ಲಿಗೆ ಕಾಂಗ್ರೆಸ್ ಸ್ಥಾನಗಳು 13ಕ್ಕೆ ಇಳಿಯಿತು, ಬಿಜೆಪಿಯದು 35 ಆಗಿತ್ತು.

2018ರ ಚುನಾವಣೆಯಲ್ಲಿ ಮುಂಬೈ ಕರ್ನಾಟಕದ ಫಲಿತಾಂಶ ಹೇಗಿತ್ತು?

2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿ 10 ಸ್ಥಾನಗಳನ್ನು ಗೆದ್ದಿತ್ತು. 2019ರಲ್ಲಿ ನಡೆದ ಆಪರೇಷನ್ ಕಮಲದಲ್ಲಿ ಮತ್ತೆ 3 ಸ್ಥಾನ ಕಸಿದುಕೊಂಡಿತು. ಎಂಟು ಸ್ಥಾನಗಳಿಸಿದ್ದ ಕಾಂಗ್ರೆಸ್ ಪಕ್ಷ ಈ ಸಮಯದಲ್ಲಿ 5 ಸ್ಥಾನಕ್ಕೆ ಕುಸಿಯಿತು.

ಇನ್ನು ವಿಜಯಪುರದಲ್ಲಿ 8 ಕ್ಷೇತ್ರಗಳ ಪೈಕಿ 3 ಬಿಜೆಪಿ, 3 ಕಾಂಗ್ರೆಸ್ ಹಾಗೂ 2ರಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ವಿಜಯಪುರ ಜಿಲ್ಲೆಯ ಸಿಂದಗಿ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಆ ಒಂದು ಸ್ಥಾನವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಅಲ್ಲಿಗೆ ಬಿಜೆಪಿ 4 ಸ್ಥಾನದಲ್ಲಿತ್ತು.

ಬಾಗಲಕೋಟೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 2ರಲ್ಲಿ ಗೆಲುವು ಕಂಡಿದ್ದವು. ಧಾರವಾಡದ 7 ಕ್ಷೇತ್ರಗಳಲ್ಲಿ ಬಿಜೆಪಿ 5 ಕಾಂಗ್ರೆಸ್ 2 ಗೆದ್ದಿದ್ದವು.

ಹಾವೇರಿಯ 6 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದರು. ಆದರೆ ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಹಾಗೂ ಪಕ್ಷೇತರ ಶಾಸಕ ಆರ್ ಶಂಕರ್ ಅವರು ಬಿಜೆಪಿ ಸೇರಿದ್ದರಿಂದ ಹಾವೇರಿಯಲ್ಲಿ ಆರೂ ಕ್ಷೇತ್ರಗಳಲ್ಲಿ ಕೇಸರಿ ಧ್ವಜ ಹಾರಾಡಿತ್ತು. ಆದರೆ ಮುಂದೆ 2021ರಲ್ಲಿ ಹಾನಗಲ್ ಶಾಸಕ ಸಿಎಂ ಉದಾಸಿ ಅವರ ನಿಧನದಿಂದ ಮತ್ತೊಂದು ಉಪಚುನಾವಣೆ ನಡೆಯಿತು. ಆಗ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರು.

ಗದಗ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದವು. ಒಟ್ಟಾರೆ ಬಿಜೆಪಿಯು ಕಿತ್ತೂರು ಕರ್ನಾಟಕದ 50 ಕ್ಷೇತ್ರಗಳ ಪೈಕಿ 35 ಸ್ಥಾನಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು.

ಈ ಬಾರಿಯ ಚುನಾವಣೆಯಲ್ಲಿ 33 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ, ಬಿಜೆಪಿ ಕೇವಲ 16 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಇನ್ನು ಜೆಡಿಎಸ್ ಕೇವಲ ಒಂದೇ ಒಂದು ಕಡೆ ಖಾತೆ ತೆರೆಯುವಲ್ಲಿ ಹೈರಾಣಾಗಿದೆ. ಈ ಭಾಗದಲ್ಲಿ ಮತದಾರರು ಪಕ್ಷೇತರರಿಗೆ ಕ್ಯಾರೇ ಎಂದಿಲ್ಲ. ಇದು ಆಡಳಿತ ವಿರೋಧಿ ಅಲೆ ಮಾತ್ರವಲ್ಲ ಲಿಂಗಾಯತರನ್ನು ಬಿಜೆಪಿ ಕಡೆಗಣಿಸಿದರ ಫಲಿತಾಂಶವಾಗಿದೆ.

ವಿರೋಧ ಪಕ್ಷವಾದ ಕಾಂಗ್ರೆಸ್, ಸರ್ಕಾರದ ವಿರುದ್ಧ ಮಾಡಿದ ಆರೋಪಗಳಿಗೆ ಉತ್ತರಿಸುವಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಸೋತಿತ್ತು. ಒಂದು ವೇಳೆ ಅವಧಿಗೂ ಮುನ್ನ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸದೇ ಹೋಗಿದ್ದಲ್ಲಿ ಬಿಜೆಪಿ ಈ ಬಾರಿ ಪೈಪೋಟಿಯನ್ನಾದರೂ ನೀಡಬಹುದಿತ್ತು ಎನ್ನುವ ವಾದವೂ ಒಂದು ಕಡೆ ಇದೆ.

ಇದನ್ನೂ ಓದಿ: ಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

 

ರಮೇಶ್ ಜಾರಕಿಹೊಳಿಗೆ ಭಾರೀ ಮುಖಭಂಗ

ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ರಮೇಶ್ ಜಾರಕಿಹೊಳಿ ಅವರೇ ಈ ಬಾರಿ ಪ್ರಯಾಸದ ಗೆಲುವು ಕಂಡಿದ್ದಾರೆ. ಇನ್ನು ರಮೇಶ ಜಾರಕಿಯೊಳಿಯನ್ನ ನಂಬಿಕೊಂಡು ಕಣಕ್ಕಿಳಿದಿದ್ದ ರಮೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ನಾಗೇಶ್ ಮನ್ವಾಳ್ಕರ್ ನೆಲ್ಲಕ್ಕಚ್ಚಿದ್ದಾರೆ. ಅಷ್ಟೇ ಅಲ್ಲ ಇವರೊಂದಿಗೆ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಬಿ.ಸಿ.ಪಾಟೀಲ್, ಆರ್.ಶಂಕರ್ ಕೂಡ ಪರಾಭವಗೊಂಡಿದ್ದಾರೆ. ಪಕ್ಷಾಂತರಿಗಳಿಗೆ ಈ ಭಾಗದ ಮತದಾರರು ತಕ್ಕ ಪಾಠ ಕಲಿಸಿದ್ದು, ಇನ್ನೊಂದು ಸಲ ಜನಾದೇಶಕ್ಕೆ ವಿರುದ್ಧ ನಡೆದುಕೊಂಡರೆ ಅನುಭವಿಸಬೇಕಾದ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಮೊದಲಿನಿಂದಲೂ ಹಾವು-ಮುಂಗುಸಿಯಂತಿದ್ದರು. ಈ ಚುನಾವಣೆ ಇಬ್ಬರಿಗೂ ಭಾರಿ ಪ್ರತಿಷ್ಠೆಯಾಗಿತ್ತು. ಬೆಳಗಾವಿಯ ಕೆಲಭಾಗಗಳಲ್ಲಿ ಜಾರಕಿಹೊಳಿ ಹೇಳಿದವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾಯರಿನ್ನು ಜಾರಕಿಹೊಳಿ ಅವರಿಗೆ ವಹಿಸಲಾಗಿತ್ತು. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ಸೇರಿರುವ ಸವದಿ ಅವರು ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದಾಗಿ ಶಪಥ ಮಾಡಿದ್ದರು; ಮತ್ತು ಯಶಸ್ವಿಯೂ ಆದರು.

ರಮೇಶ್ ಜಾರಕಿಹೊಳಿ

ಬಿಜೆಪಿ ಆರಂಭದಿಂದಲು ಆಡಳಿತ ವಿರೋಧಿ ಅಲೆಯನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಆದರೆ ಬೊಮ್ಮಾಯಿ ಸರ್ಕಾರದಲ್ಲಿ ಅದನ್ನು ತೆಗೆದಿದ್ದು, ಸಿ.ಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ರಕ್ಷಣೆಗೆ ನಿಂತಿದ್ದು, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಹಾದಿ ಬೀದಿಯಲ್ಲಿ ನಿಂತು ಹಗುರವಾಗಿ ಮಾತನಾಡಿದ್ದು- ಇವೆಲ್ಲವೂ ಬಿಜೆಪಿ ಸೋಲಿಗೆ ಕೊಡುಗೆ ನೀಡಿವೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಬಲ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ವಿರುದ್ಧ ರಮೇಶ್ ಜಾರಕಿಹೊಳಿ ಅವರು ನಾಲಿಗೆ ಹರಿಬಿಟ್ಟು ಬೆಳಗಾವಿಯ ಪಂಚಮಸಾಲಿ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಷ್ಟೆಲ್ಲಾ ಅವಾಂತರ ಸೃಷ್ಟಿಸುತ್ತಿರುವ ರಮೇಶ್ ಜಾರಕಿಹೊಳಿಯನ್ನು ತಡೆಯುವ ಪ್ರಯತ್ನವನ್ನು ಬಿಜೆಪಿ ಮಾಡಲೇ ಇಲ್ಲ. ಅದು ಬೆಳಗಾವಿ ಭಾಗದಲ್ಲಿ ಸಾಕಷ್ಟು ಪ್ರಭಾವ ಬೀರಿದೆ.

ಇನ್ನು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಕೂಡ ಬೆಳಗಾವಿ ಜಿಲ್ಲೆಯವರು. ಆ ಪ್ರಕರಣದಲ್ಲೂ ಸರ್ಕಾರ ತಾರತಮ್ಯದ ನಿಲುವು ತಾಳದ್ದು ಪಕ್ಷಕ್ಕೆ ಮುಳುವಾಯಿತು.

ಇನ್ನು ಪಕ್ಷದ ಪ್ರಮುಖರ ವಿರುದ್ಧವೇ ಮಾತನಾಡುತ್ತಿದ್ದ ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ನಿಯಂತ್ರಿಸದೇ ಇದ್ದುದು, ಹಿರಿಯ ಸಂಸದ ರಮೇಶ್ ಜಿಗಜಿಣಗಿ ಸೇರಿದಂತೆ ಹಲವು ಹಿರಿಯರ ನಿರ್ಲಕ್ಷ್ಯ ವಿಜಯಪುರದಲ್ಲಿ ಪಕ್ಷಕ್ಕೆ ಕೈಕೊಟ್ಟಿತು.

ಇನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಮುರುಗೇಶ್ ನಿರಾಣಿ ಅವರು, ವಿಮಾನ ನಿಲ್ದಾಣ ನಿರ್ಮಿಸಲು ಹೋಗಿ ಬಾದಾಮಿ, ಗುಳೇದಗುಡ್ಡ ತಾಲೂಕುಗಳ ರೈತರ ವಿರೋಧ ಕಟ್ಟಿಕೊಂಡರು. ಪ್ರವಾಹ ಸಮಸ್ಯೆ ನಿರ್ಲಕ್ಷಿಸಿದ್ದು ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಯಿತು. ಇತ್ತ ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅಧಿಕಾರದ ಮದದಲ್ಲಿ ತೇಲುತ್ತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು, ಹಿರಿಯರನ್ನೂ ದೂರ ಮಾಡಿಕೊಂಡರು- ಹೀಗೆ ಅಧಿಕಾರದ ಮದವೇ ಬಿಜೆಪಿ ಸೋಲಿಗೆ ಕಾರಣವಾಯಿತು ಎಂಬ ವಿಶ್ಲೇಷಣೆಗಳಿವೆ. ರೋಣ ಶಾಸಕ ಕಳಕಪ್ಪ ಬಂಡಿ ಸಿ.ಡಿ ಪ್ರಕರಣವೂ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಇದು ಪಕ್ಷದ ಮೇಲೂ ಭಾರೀ ಪರಿಣಾಮ ಬೀರಿದೆ.

ಲಕ್ಷ್ಮೀ ಹೆಬ್ಬಾಳ್ಕರ್

ಇನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತಮ್ಮದೇ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಸೋಲಿನ ಭಯ ಎದುರಾಗಿ ಅವರು ಆ ಕ್ಷೇತ್ರಕ್ಕೆ ಸೀಮಿತವಾದರು. ಅವರಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಹೆಚ್ಚಾಗಿತ್ತು. ಹಾಗಾಗಿಯೇ ಜಿಲ್ಲೆಯಲ್ಲಿ ಶಿಗ್ಗಾಂವಿ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಮಣ್ಣುಮುಕ್ಕಿದೆ.

ಹಿಂದಿನ ಚುನಾವಣೆಯಲ್ಲಿ 14 ಸ್ಥಾನ ಹೊಂದಿದ್ದ ಕಾಂಗ್ರೆಸ್ ಈ ಬಾರಿ 33 ಕಡೆ ಗೆದ್ದಿದೆ. ಕಾಂಗ್ರೆಸ್ಸಿನ ಗೆಲುವಿಗೆ ಬಿಜೆಪಿ ನಾಯಕರೂ ಮುಖ್ಯ ಕಾರಣ ಎನ್ನಬಹುದು. ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಸಲೀಂ ಅಹ್ಮದ್, ಲಕ್ಷ್ಮೀ ಹೆಬ್ಬಾಳ್ಕರ್‌ರ ಸಂಘಟಿತ ಪ್ರಯತ್ನ ಕೂಡಾ ಕಾರಣವಾಗಿದೆ. 50 ಸ್ಥಾನಗಳ ಈ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಜೆಡಿಎಸ್ ಬಲ 1 ಸ್ಥಾನಕ್ಕೆ ಸೀಮಿತಗೊಂಡಿದೆ. ಇದರಿಂದಾಗಿ ಭಾರತೀಯ ಜನತಾ ಪಕ್ಷದ ’ಶಿಸ್ತು’ ಕಾಣೆಯಾಗಿ, ಒಳೊಳಗಿನ ಅಸಮಾಧಾನ ಸ್ಫೋಟಗೊಂಡ ಕಾರಣ ಬಿಜೆಪಿ ಮುಂಬೈ ಕರ್ನಾಟಕ ಭಾಗದಲ್ಲಿ ಧೂಳೀಪಟವಾಗಲು ಕಾರಣವಾಗಿದೆ.

ಈ ರೀತಿ ಗೆಲ್ಲಲು ಪ್ರತಿಕೂಲ ವಾತಾವರಣ ನಿರ್ಮಾಣವಾದಾಗ ಅದನ್ನ ಸಮರ್ಥವಾಗಿಯೇ ಬಳಸಿಕೊಂಡ ಕಾಂಗ್ರೆಸ್ ನಾಯಕರು ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...