Homeಕರ್ನಾಟಕಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ: ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ಕೊಟ್ಟ ಸಿಎಂ

ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ: ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ಕೊಟ್ಟ ಸಿಎಂ

- Advertisement -
- Advertisement -

“ಹಿಂದೂ ದೇವಾಲಯಗಳ ಹಣವನ್ನು ಇತರ ಧರ್ಮೀಯರ ದೇವಾಲಯಗಳಿಗೆ ವರ್ಗಾವಣೆ ಮಾಡಲಾಗಿದೆ. ಹಿಂದೂಗಳ ದೇವಸ್ಥಾನದಿಂದ ಬಂದ ಆದಾಯವನ್ನು ಮುಸ್ಲಿಮರ ವಕ್ಫ್‌ ಬೋರ್ಡ್‌, ಹಜ್ ಭವನ, ಕ್ರೈಸ್ತ ಸಮುದಾಯ, ಹೀಗೆ ಅನ್ಯ ಧರ್ಮ ಮತ್ತು ಅವರ ಸಂಸ್ಥೆಗಳಿಗೆ ನೀಡಲಾಗಿದೆ. ಹಿಂದೂ ದೇವಾಲಯಗಳ ಟ್ರಸ್ಟ್‌ಗಳಿಗೆ ಹಿಂದೂಯೇತರನ್ನು ನೇಮಕ ಮಾಡಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅನುವು ಮಾಡಿ ಕೊಟ್ಟಿದೆ. ದೇವಸ್ಥಾನದ ಆದಾಯದಿಂದ ಕಡ್ಡಾಯವಾಗಿ ಶೇ.10ರಷ್ಟು ತೆರಿಗೆ ಸಂಗ್ರಹಿಸಲು ಆದೇಶಿಸಿದೆ” ಎಂಬಿತ್ಯಾದಿ ಸುದ್ದಿಗಳು ಕಳೆ ಕೆಲ ದಿನಗಳಿಂದ ಭಾರೀ ಚರ್ಚೆಯಲ್ಲಿವೆ.

ಬಿಜೆಪಿಯ ಹೈಕಮಾಂಡ್ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಅನೇಕ ಮಂದಿ ಮೇಲಿನ ವಿಷಯಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಕೆಲ ಸುದ್ದಿ ಮಾಧ್ಯಮಗಳು ಮತ್ತು ಅವುಗಳ ಮುಖ್ಯಸ್ಥರು ಕೂಡ ಇದೇ ವಿಚಾರವನ್ನು ಉಲ್ಲೇಖಿಸಿ ಚರ್ಚೆ ಮಾಡುತ್ತಿದ್ದಾರೆ.

ಹಾಗಾದರೆ, ಬಿಜೆಪಿ ನಾಯಕರ ಆರೋಪವೇನು?, ಅದಕ್ಕೆ ಸಿಎಂ ಸಿದ್ದರಾಮಯ್ಯ ಅಥವಾ ರಾಜ್ಯ ಸರ್ಕಾರ ಕೊಟ್ಟ ಪ್ರತಿಕ್ರಿಯೆ ಏನು? ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದಲ್ಲಿ ಏನಿದೆ? ಎಂಬುವುದರ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ :

ಬಿಜೆಪಿ ನಾಯಕ ಅಮಿತ್ ಮಾಳವೀಯ ಪೋಸ್ಟ್ 

‘ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ದೇವಸ್ಥಾನ ಟ್ರಸ್ಟ್‌ಗೆ ಅನ್ಯ ಧರ್ಮೀಯರನ್ನು ನೇಮಕ ಮಾಡಬಹುದೆಂದು ಕಾನೂನು ತಂದಿದೆ. ಅಲ್ಲದೆ ಹಿಂದೂ ದೇವಾಲಯಗಳು ತಮ್ಮ ಆದಾಯದ ಶೇ.10ರಷ್ಟು ತೆರಿಗೆ ಕಟ್ಟುವುದನ್ನು ಕಡ್ಡಾಯಗೊಳಿಸಿದೆ’ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ಫೆ.20ರಂದು ರಾಜ್ಯ ಸರ್ಕಾರದ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರತಿಯನ್ನು ಜೊತೆಗೆ ಹಂಚಿಕೊಂಡಿದ್ದಾರೆ.

“ಆಘಾತಕಾರಿ ಬೆಳವಣಿಗೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಕೆಳಗಿನ ವಿಷಯಗಳಿಗೆ ಅನುಮತಿಸಿದೆ. ದೇವಸ್ಥಾನ ಟ್ರಸ್ಟ್‌ಗೆ ಹಿಂದೂಯೇತರರನ್ನು ನೇಮಿಸಬಹುದು ಎನ್ನಲಾಗಿದೆ. ಇದು ಯಾವ ರೀತಿಯ ಅಸಂಬದ್ಧ? ಹಿಂದೂಗಳು ತಮ್ಮ ಸಮುದಾಯದ ವ್ಯವಹಾರಗಳನ್ನು ನಿರ್ವಹಿಸಲು ಅಸಮರ್ಥರೇ? ಹಿಂದೂ ದೇವಾಲಯಗಳು ಸ್ವೀಕರಿಸಿದ ದೇಣಿಗೆಯ ಶೇ.10ರಷ್ಟು ತೆರಿಗೆ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮೇಲಿನ ಎರಡು ತಿದ್ದುಪಡಿಗಳು ದೇವಾಲಯದ ಆದಾಯವನ್ನು ಯಾವುದಕ್ಕಾದರೂ ಬಳಸಲು ಅನುಮತಿಸುತ್ತದೆ. ಉದಾಹರಣೆಗೆ, ದೇವಾಲಯದ ನಿಧಿಯನ್ನು ಕಬರ್‌ಸ್ತಾನ (ಮುಸ್ಲಿಮರ ಸ್ಮಶಾನ)ದ ಗೋಡೆಗಳನ್ನು ನಿರ್ಮಿಸಲು ಸಮರ್ಥವಾಗಿ ಬಳಸಬಹುದು” ಎಂದು ಅಮಿತ್ ಮಾಳವೀಯ ಬರೆದುಕೊಂಡಿದ್ದಾರೆ.

“ಹಿಂದೂಗಳು ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಎಂಬ ವಾಸ್ತವದ ಬಗ್ಗೆ ಎಚ್ಚರಗೊಳ್ಳದಿದ್ದರೆ, ಏನೂ ನಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಮತ ಹಾಕುವುದನ್ನು ನಿಲ್ಲಿಸಿ” ಎಂದು ಅಮಿತ್ ಮಾಳವೀಯ ಹೇಳಿದ್ದಾರೆ

ರಾಜ್ಯ ಕಾಂಗ್ರೆಸ್ ಸ್ಪಷ್ಟನೆ: 

ಬಿಜೆಪಿ ನಾಯಕನ ಈ ಪೋಸ್ಟ್‌ಗೆ ರಾಜ್ಯ ಕಾಂಗ್ರೆಸ್‌ ಸ್ಪಷ್ಟನೆ ಕೊಟ್ಟಿದೆ. ಚುನಾವಣೆ ಹತ್ತಿರ ಬರುತ್ತಿರುವಾಗ ಬಿಜೆಪಿ ಹಿಂದೂಗಳ ಭಾವನೆಗಳನ್ನು ತಮ್ಮ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದೆ.

“ಕರ್ನಾಟಕದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸಮಸ್ಯೆಯ ಸತ್ಯ ಇಲ್ಲಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ 1997ರ ಸೆಕ್ಷನ್ 17ರ ಅಡಿಯಲ್ಲಿ ಸಾಮಾನ್ಯ ಸಂಗ್ರಹಣಾ‌ ನಿಧಿ (ಕಾಮನ್ ಪೂಲ್ ಫಂಡ್‌)ಗಾಗಿ ನಿಯಮಗಳನ್ನು ರೂಪಿಸಲಾಗಿದೆ. ಸಾಮಾನ್ಯ ಸಂಗ್ರಹಣಾ‌ ನಿಧಿಯನ್ನು 2003ರಲ್ಲಿಯೇ ಜಾರಿಗೆ ತರಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

2011ರಲ್ಲಿ ಬಿವೈ ವಿಜಯೇಂದ್ರ ಅವರ ತಂದೆ ಬಿಎಸ್‌ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾಮಾನ್ಯ ಸಂಗ್ರಹಣಾ‌ ನಿಧಿ ಅಡಿಯಲ್ಲಿ ಕಡಿಮೆ ಆದಾಯದ ಗುಂಪಿನ ದೇವಾಲಯಗಳಿಗೆ ಸಹಾಯ ಮಾಡಲು ಹೆಚ್ಚಿನ ಆದಾಯದ ಗುಂಪಿನ ದೇವಾಲಯಗಳಿಂದ ಹಣವನ್ನು ಸಂಗ್ರಹಿಸಲು ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯ್ದೆಯ ಸೆಕ್ಷನ್ 17ಕ್ಕೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದೆ.

ಹಣಗೆರೆ ಕಟ್ಟೆಯ ಶ್ರೀ ಭೂತರಾಯ ಚೌಡೇಶ್ವರಿ ದೇವಸ್ಥಾನ (ಸೈಯದ್ ಸಾದತ್ ದರ್ಗಾ) ಮತ್ತು ಬಾಬಾ ಬುಡನ್ ಗಿರಿಯಲ್ಲಿ ಮಾತ್ರ ದಶಕಗಳಿಂದ ಎರಡೂ ಧರ್ಮದವರಿಗೆ ಸಮಿತಿಯಲ್ಲಿ ಅವಕಾಶವಿದೆ. ಬಿಜೆಪಿ ಸರ್ಕಾರವಿದ್ದಾಗಲೂ ಎರಡು ಬಾರಿ ಅನ್ಯ ಧರ್ಮದವರನ್ನು ನಾಮನಿರ್ದೇಶನ ಮಾಡಲಾಗಿತ್ತು ಎಂದಿದೆ.

ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿ ಹಿಂದೂಗಳ ಭಾವನೆಗಳನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ. ಅವರು ಅಧಿಕಾರದಲ್ಲಿದ್ದಾಗ, ಹಿಂದೂಗಳು ಅಥವಾ ದೇವಾಲಯಗಳ ಪ್ರಯೋಜನಕ್ಕಾಗಿ ಏನನ್ನೂ ಮಾಡಿಲ್ಲ. ಹಿಂದುತ್ವ ಎನ್ನುವುದು ಬಿಜೆಪಿಯವರಿಗೆ ಮಾರ್ಕೆಟಿಂಗ್ ಕಿಟ್ ಆಗಿಬಿಟ್ಟಿದೆ. ಕೇವಲ ಹಿಂದೂಗಳ ಹೆಸರಿನಲ್ಲಿ ಬ್ಯಾಂಕ್ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಜನತೆ ಬಿಜೆಪಿಯವರಿಗೆ ಅವರ ಜಾಗ ತೋರಿಸಿದ್ದಾರೆ. ಜನರು ಅಭಿವೃದ್ದಿ ಕೇಂದ್ರಿತ ಕಾಂಗ್ರೆಸ್ ಜೊತೆಗಿದ್ದಾರೆ ಎಂದಿದೆ ಎಂದು ಕಿಡಿಕಾರಿದೆ.

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ: 

ತಮ್ಮ ಸರ್ಕಾರದ ವಿರುದ್ದ ಕೇಳಿ ಬಂದಿರುವ ಆರೋಪಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಹಾಕಿರುವ ಅವರು, “ಹಿಂದೂಯೇತರ ಸಮುದಾಯಗಳಿಗೆ ಹಿಂದೂ ದೇವಸ್ಥಾನಗಳ ಹಣವನ್ನು ಬಳಸಲಾಗುತ್ತದೆ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ಅನ್ಯಾಯಯುತ ತೆರಿಗೆ ಹಾಕಲಾಗುತ್ತಿದೆ ಎನ್ನುವ ಬಿಜೆಪಿ ನಾಯಕರ ಆರೋಪ ಸಂಪೂರ್ಣ ಕಪೋಲಕಲ್ಪಿತವಾಗಿದ್ದು, ಅಮಾಯಕ ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ದ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿ ನಾಯಕರು ಇಂತಹ ಕ್ಷುಲಕ ಪ್ರಯತ್ನ ಮಾಡುತ್ತಿದ್ದಾರೆ. ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರವೇ ಬಳಸಲಾಗುತ್ತದೆ. ಈ ನಿಧಿಯು 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ಬಳಕೆಯಾಗುತ್ತಿದ್ದು ಭವಿಷ್ಯದಲ್ಲಿಯೂ ಅದಕ್ಕೆ ಮಾತ್ರವೇ ಬಳಕೆಯಾಗಲಿದೆ. ಬೇರೆ ಯಾವುದೇ ಧರ್ಮದ ಜನರ ಅನುಕೂಲಕ್ಕಾಗಿ ಈ ಹಣವನ್ನು ಬಳಸಲಾಗುವುದಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರವೇ ಬಳಸಬೇಕೆನ್ನುವ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಅಂಗೀಕರಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ರಾಜಕೀಯ ಕಾರಣಗಳಿಗಾಗಿ ತಪ್ಪಾಗಿ ಜನತೆಯ ಮುಂದಿರಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. 1997ರಲ್ಲಿ ಕಾಯಿದೆಯನ್ನು ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಷ್ಟಿಸಬೇಕು ಎನ್ನುವ ನಿಬಂಧನೆ ಕಾಯಿದೆಯಲ್ಲಿಯೇ ಅಡಕವಾಗಿದೆ. ಹೀಗಿದ್ದರೂ ಸಾಮಾನ್ಯ ಸಂಗ್ರಹಣಾ ನಿಧಿಯ ನಿಯಮಾವಳಿಗಳಲ್ಲಿ ಅಡಕವಾಗಿರುವ ಅಂಶಗಳಿಗೆ ವಿರುದ್ಧವಾಗಿ ಇಂತಹ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ. 

ಪ್ರಸ್ತುತ ತಿದ್ದುಪಡಿಗೂ ಮುನ್ನ ಈ ನಿಧಿಗೆ ಹಣವು ಈ ಕೆಳಗಿನ ಮಾರ್ಗಗಳಿಂದ ಬರುತ್ತಿತ್ತು: (1). ನಿವ್ವಳ ಆದಾಯ ಹತ್ತು ಲಕ್ಷ ರೂ. ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.10; (2) ನಿವ್ವಳ ವಾರ್ಷಿಕ ಆದಾಯ ಐದು ಲಕ್ಷ ರೂ. ಗಿಂತ ಹೆಚ್ಚಿದ್ದು ಹತ್ತು ಲಕ್ಷ ರೂ. ಮೀರದ ದೇವಸ್ಥಾನಗಳ ವಾರ್ಷಿಕ ಆದಾಯದಿಂದ ಶೇ.5; ಹಾಗೂ (3) ರಾಜ್ಯ ಸರ್ಕಾರದಿಂದ ದೊರೆಯುತ್ತಿದ್ದ ಅನುದಾನ. ತಿದ್ದುಪಡಿಯ ನಂತರ ಸಾಮಾನ್ಯ ಸಂಗ್ರಹಣಾ ನಿಧಿಗೆ ಹಣವು ಇದೇ ಮೂಲದಿಂದ ಬರಲಿದೆ: (1) ಒಂದು ಕೋಟಿ ರೂ. ನಿವ್ವಳ ಆದಾಯ ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ. 10; (2) ಹತ್ತು ಲಕ್ಷ ರೂ ನಿವ್ವಳ ಆದಾಯಕ್ಕಿಂತ ಹೆಚ್ಚಿದ್ದು ರೂ. 1 ಕೋಟಿ ಮೀರದ ಸಂಸ್ಥೆಗಳಿಂದ ಶೇ.5 ಹಾಗೂ (3) ರಾಜ್ಯ ಸರ್ಕಾರದಿಂದ ದೊರೆಯುವ ಅನುದಾನ. ನೂತನ ತಿದ್ದುಪಡಿಯನ್ನು ಸಾಮಾನ್ಯ ಸಂಗ್ರಹಣಾ‌ ನಿಧಿಯನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ದೃಷ್ಟಿಯಿಂದ ಕೇವಲ ಕೋಮು ಧ್ರುವೀಕರಣದತ್ತಲೇ ಗಮನಹರಿಸುತ್ತಿರುವ ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಸಮಾಜದಲ್ಲಿನ ಶಾಂತಿ, ಸಾಮರಸ್ಯವನ್ನು ಕದಡಲು ಇಂತಹ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಅನೈತಿಕ ಹಾದಿ ತುಳಿದಿರುವ ಬಿಜೆಪಿ ನಾಯಕರು ತಮ್ಮ ಸಾರ್ವಜನಿಕ ವರ್ತನೆಗೆ ತಾವೇ ನಾಚಿಕೆಪಡಬೇಕಿದೆ. ಕರ್ನಾಟಕದ ಸಾಮರಸ್ಯವನ್ನು ಕದಡುವ ದ್ರೋಹದ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದು ಇವರ ಈ ಸಂಚನ್ನು ಕನ್ನಡಿಗರು ನಿಷ್ಕ್ರಿಯಗೊಳಿಸಬೇಕಿದೆ ಎಂದಿದ್ದಾರೆ.

ಸಮಾಜದಲ್ಲಿ ತಪ್ಪು ಮಾಹಿತಿಯನ್ನು ಹರಡಿ ಜನರನ್ನು ತಪ್ಪು ಹಾದಿಗೆ ಎಳೆಯುವ ಮೂಲಕ ಈ ದೇಶದ ಜನರ ಅದರಲ್ಲಿಯೂ ವಿಶೇಷವಾಗಿ ಈ ದೇಶದ ಯುವಕರ ವೃತ್ತಿ, ಭವಿಷ್ಯದೊಂದಿಗೆ ಬಿಜೆಪಿ ನಾಯಕರು ಚೆಲ್ಲಾಟವಾಡುತ್ತಿದ್ದಾರೆ. ಯುವಪೀಳಿಗೆ ತಮ್ಮ ಭವಿಷ್ಯವನ್ನು ಬದಿಗೆ ಸರಿಸಿ ಇಂತಹ ಅವಾಸ್ತವಿಕ, ಕಲ್ಪಿತ ಯುದ್ಧಗಳಲ್ಲಿ ತೊಡಗಿಕೊಳ್ಳಲು ಇವರು ಪ್ರೇರೇಪಿಸುತ್ತಿದ್ದಾರೆ. ಇದೆಲ್ಲವನ್ನೂ ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದು ನಾಡಿನ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾಗಲು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರುಡುವ ಸಾಮರ್ಥ್ಯ ಹೊಂದಿರಬೇಕು ಎನ್ನುವಂತಹ ಅಸ್ವಸ್ಥ ನಿಲುವಿಗೆ ಬಿಜೆಪಿ ಇಂದು ಬಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣಕ್ಕಾಗಿ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದಂತೆ ಕಾಣುತ್ತಿದೆ. ಅವರ ಜೊತೆ ಇತರೆ ನಾಯಕರು ಕೂಡಾ ಸುಳ್ಳಿನಲ್ಲಿ ಪೈಪೋಟಿ ನೀಡುತ್ತಿರುವಂತೆ ವರ್ತಿಸುತ್ತಿರುವುದು ಕರ್ನಾಟಕದ ದುರಂತವೇ ಸರಿ. ಇಂತಹ ದುಷ್ಟತನದ ಹುನ್ನಾರಗಳನ್ನು ಅರ್ಥಮಾಡಿಕೊಳ‍್ಳುವಷ್ಟು ಕನ್ನಡಿಗರು ಪ್ರಬುದ್ಧರಾಗಿದ್ದಾರೆ. ನರೇಂದ್ರ ಮೋದಿ ಆಳ್ವಿಕೆಯಲ್ಲಿ ಡಾಲರ್‌ ಎದುರು ರೂಪಾಯಿ ಕುಸಿಯುತ್ತಿರುವಂತೆ ಓರ್ವ ನಾಯಕನಾಗಿ ವಿಜಯೇಂದ್ರ ಅವರ ವಿಶ್ವಾಸಾರ್ಹತೆಯೂ ಕುಸಿಯುತ್ತಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಬಜೆಟ್‌ಗೆ ಕೋಮು ಬಣ್ಣ ಬಳಿದ ಸಂಪಾದಕ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ 16, 2024ರಂದು ತನ್ನ15ನೇ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬೆನ್ನಲ್ಲೇ ನೆಟ್‌ವರ್ಕ್‌ 18ನ ಸಲಹಾ ಸಂಪಾದಕ ರಾಹುಲ್ ಶಿವಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು.

ಅದರಲ್ಲಿ, “ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರವು ತನ್ನ ಬಜೆಟ್‌ನಲ್ಲಿ ವಕ್ಫ್‌ ಆಸ್ತಿಯ ಅಭಿವೃದ್ಧಿಗಾಗಿ, ಮಂಗಳೂರಿನಲ್ಲಿ ಹಜ್ ಭವನಕ್ಕಾಗಿ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ₹330ಕೋಟಿ ಮೀಸಲಿಟ್ಟಿದೆ. ಕರ್ನಾಟಕ ದತ್ತಿ (ಮುಜರಾಯಿ) ಇಲಾಖೆಯಿಂದ ನಿಯಂತ್ರಿಸಲ್ಪಡುವ 400 ‘ಎ ಮತ್ತು ಬಿ’ ವರ್ಗದ ದೇವಾಲಯಗಳಿಗೆ ಹಿಂದೂ ಭಕ್ತರಿಂದ ಬರುವ ವಾರ್ಷಿಕ ದೇಣಿಗೆ ಸರಾಸರಿ ₹450 ಕೋಟಿಯನ್ನು ಜೇಬಿಗಿಳಿಸುವ ರಾಜ್ಯ ಸರ್ಕಾರವು ಇದಾಗಿದೆ” ಎಂದು ಬರೆದುಕೊಂಡಿದ್ದರು.

ಸಂಪಾದಕನ ಸುಳ್ಳು ಆರೋಪಕ್ಕೆ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿಯವರು ಸ್ಪಷ್ಟೀಕರಣ ಕೊಟ್ಟಿದ್ದರು. ಈ ಕುರಿತ ವಿಸ್ಕೃತವಾದ ಸುದ್ದಿಯನ್ನು ನಾನುಗೌರಿ.ಕಾಂ ಪ್ರಕಟಿಸಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...