Homeನ್ಯಾಯ ಪಥಕೋವಿಡ್-19ರ ಭಯಾನಕ ಅಲೆಗಳು; ಮೂರನೇ ಅಲೆಗೆ ಸಿದ್ಧರಾಗಿದ್ದೇವೆಯೇ?

ಕೋವಿಡ್-19ರ ಭಯಾನಕ ಅಲೆಗಳು; ಮೂರನೇ ಅಲೆಗೆ ಸಿದ್ಧರಾಗಿದ್ದೇವೆಯೇ?

- Advertisement -
- Advertisement -

ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ನಡೆದ ಕೆಲವು ಘಟನೆಗಳು ಮತ್ತು ಅಭದ್ರತೆಯ ವಾತಾವರಣದಈ ಅವಧಿಯಲ್ಲಿ ನಮ್ಮ ಜೀವನ ಹೇಗೆ ಬದಲಾಗಿದೆಯೆಂಬುದನ್ನು ನಾವು ನೋಡಿದ್ದೇವೆ. ಯಾವುದು ಅಸಂಭವವೆಂದು ನಂಬಿದ್ದೆವೋ, ಯಾವುದು ಸಿನಿಮಾಗಳಲ್ಲಿ ಮತ್ತು ಕತೆ-ಕಾದಂಬರಿಗಳಲ್ಲಿ ಮಾತ್ರ ಸಾಧ್ಯವೆಂಬಂತೆ ತೋರಿತ್ತೋ, ಆ ಭಯ, ಆ ಬೇಗೆ, ದಮ್ಮುಗಟ್ಟಿದ ಉಸಿರು ಎಲ್ಲವೂ ಒಟ್ಟಾರೆಯಾಗಿ ಸಂಕಟದ ರೂಪದಲ್ಲಿ ಈಗ ನಮ್ಮ ಮುಂದೆ ಧುತ್ತೆಂದು ನಿಂತಿದೆ. ಕೋವಿಡ್-19ರ ಮೊದಲನೆ ಅಲೆಯ ಆಘಾತದಿಂದ ನಾವಿನ್ನೂ ಚೇತರಿಸಿಕೊಳ್ಳುವ ಮೊದಲೇ ಎರಡನೆ ಅಲೆಯು ಅಪ್ಪಳಿಸಿದೆ; ಅಧಿಕಾರಗ್ರಸ್ತ ಆಡಳಿತವು ಸ್ವಹಿತಕ್ಕಾಗಿ ಸೃಷ್ಟಿಸುವ, ಮನುಷ್ಯರ ನಡುವಣ ಜಾತಿ, ಮತ, ಧರ್ಮ, ವರ್ಗ, ಲಿಂಗ ತಾರತಮ್ಯ, ಸಾಮಾಜಿಕ ಸ್ಥಾನಮಾನಗಳ ಅಸಮಾನತೆಯನ್ನು ಪರಿಗಣಿಸದೆ ತನ್ನ ಮಾರಕ ಆಟವನ್ನು ಮುಂದುವರಿಸಿದೆ. ಇದರ ಹೆಡೆಯಡಿ ಸಾವು-ನೋವನ್ನು ಕಾಯುವ ಹೊತ್ತಲ್ಲೇ ಈಗ ಮತ್ತೂ ಒಂದು ಅಲೆ ಅಪ್ಪಳಿಸುತ್ತದೆಂದು ಮತ್ತು ಅದು ಮಕ್ಕಳಲ್ಲಿ ವ್ಯಾಪಕವಾಗಿ ಹಬ್ಬಬಹುದೆಂದು ಆತಂಕದಿಂದ ನಿರೀಕ್ಷಿಸಲಾಗಿದೆ. ಹಾಗಾದರೆ ನಮ್ಮನ್ನು ಬೆಚ್ಚಿಬೀಳಿಸಿದ ಈ ರೋಗದ ವಿಸ್ತಾರವಾದ ಹರಡುವಿಕೆಗೆ ಯಾರು ಮತ್ತು ಏನು ಕಾರಣ?

ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಶಕ್ತಿಮೀರಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದರೆ, ಆಡಳಿತವು ಬರಿಗಣ್ಣಿಗೆ ಗೋಚರಿಸುವಷ್ಟು ಸ್ಪಷ್ಟವಾಗಿ ವಿಫಲವಾಗಿದೆ. ನಗರಗಳು ಕೋವಿಡ್ ಆಕರ್ಷಣೆಯ ಕೇಂದ್ರಗಳಾಗಿದ್ದವು. ಗ್ರಾಮೀಣ ಪ್ರದೇಶಗಳನ್ನು ಕೋವಿಡ್-19 ರಹಿತವೆಂದಲ್ಲದಿದ್ದರೂ ತಕ್ಕಮಟ್ಟಿಗೆ ನಿರ್ಲಕ್ಷಿಸಲಾಗಿತ್ತು. ಈಗ ಅದು ಸರ್ವವ್ಯಾಪಕತೆಯನ್ನು ಪಡೆದಿರುವುದರಿಂದ ಸರಕಾರ, ಅಧಿಕಾರಶಾಹಿ ಮತ್ತು ರಾಜಕೀಯದ

ವಿವಿಧ ಹಂತಗಳಲ್ಲಿ ಪರಸ್ಪರ ಆರೋಪ-ದೂಷಣೆಯ ಸ್ಪರ್ಧೆ ಆರಂಭವಾಗಿದೆ. ಇವೆಲ್ಲ ಅಧಿಕಾರದ ರಕ್ಷಣೆಗಾಗಿ. ನಮ್ಮನ್ನು ನಿದ್ರೆಯಿಂದ ಕೋವಿಡ್ ಎಚ್ಚರಿಸುವವರೆಗೂ ಈ ಸಮಸ್ಯೆಗಳ ಒಳಹೊರಗನ್ನು ಅರ್ಥಮಾಡಿಕೊಳ್ಳದೆಹೋದದ್ದೇಕೆ? ಅಥವಾನಮ್ಮ ರಾಜಕೀಯ ವ್ಯವಸ್ಥೆಯನ್ನು
ಅರ್ಥಮಾಡಿಕೊಳ್ಳುವಷ್ಟು ಶಿಕ್ಷಣವನ್ನು ನಾವು ಪಡೆದಿಲ್ಲವೇ? ನಾಯಕರೆಂದು ಕರೆಸಿಕೊಳ್ಳುವವರು ಪರಸ್ಪರರ ಕೆಸರೆರಚಾಟದಲ್ಲಿ ತೊಡಗಿಕೊಂಡಿರುವಾಗ, ನಮ್ಮ ಮುಂದಿನ ಪೀಳಿಗೆಯ ಉತ್ತಮ ಸಮಾಜ ಮತ್ತು ಒಳ್ಳೆಯ ಭವಿಷ್ಯಕ್ಕಾಗಿ ಅವರ ಜೀವ ಮತ್ತು ಜೀವನೋಪಾಯವನ್ನು ಉಳಿಸಬೇಕಾಗಿರುವ ಕೆಲಸ ತುರ್ತಾಗಿ ಆಗಬೇಕಿದೆ.

ನಮ್ಮ ಕುಟುಂಬಗಳು ಮತ್ತು ಮನೆಗಳು ನಮ್ಮ ಸರಕಾರಗಳಂತೆಯೇ ಇವೆ. ನಾವು ಸ್ವಾವಲಂಬಿಗಳು, ಧೈರ್ಯವಂತರು, ಆರ್ಥಿಕವಾಗಿ ಸಬಲರು ಎಂದೆಲ್ಲಾ ನಂಬಿದ್ದೆವು. ಅನಾರೋಗ್ಯಗಳಿಗೆ ರೋಗನಿರೋಧಕ ಗುಳಿಗೆಗಳನ್ನು ಹೊಂದಿರುವಂತೆ ನಾವು ಎಲ್ಲವನ್ನೂ ಮೀರಬಲ್ಲೆವು ಎಂದು ಭಾವಿಸಿದ್ದೆವು. ’ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ’ ಎಂಬ ಮಾತು, ನಮ್ಮ ಸಮಾಜದ ಎಲ್ಲ ಅಂಗಗಳಲ್ಲೂ ಅದನ್ನು ಅನುಸರಿಸಿರುವುದಕ್ಕಿಂತಲೂ, ಅದರ ಸಂಪೂರ್ಣ ನಿರಾಕರಣೆಯಲ್ಲಿ, ವೈಫಲ್ಯತೆಯಲ್ಲಿ ಪ್ರತಿಫಲಿಸುತ್ತಿದೆ. ನಾವು ತಪ್ಪು ನಿರ್ಧಾರವನ್ನು ಆಯ್ಕೆಮಾಡಿದ ನಂತರ ಅದನ್ನು ಸರಿಪಡಿಸಲು ಬಯಸುತ್ತೇವೆ. ಅಂತಿಮವಾಗಿ ನಮಗೆ ಹೆಚ್ಚು ಸಮಯ, ಹಣ, ಶ್ರಮ ವ್ಯಯವಾಗುತ್ತದೆ. ಇದು ಧೂಮಪಾನದಂತಹ ಚಟವಾಗಿರಬಹುದು ಅಥವಾ ನಮ್ಮ ನಾಯಕರನ್ನು ಆಯ್ಕೆ ಮಾಡುವಲ್ಲಿ ಎಸಗಿದ ತಪ್ಪುಗಳಾಗಿರಬಹುದು. 21/05/2021ರ ’ಟೈಮ್ಸ್ ಆಫ್ ಇಂಡಿಯಾ’ಆಂಗ್ಲ ದೈನಿಕದಲ್ಲಿ ಉಲ್ಲೇಖಿಸಿರುವಂತೆ ಕರ್ನಾಟಕ ರಾಜ್ಯದ ಕೋವಿಡ್ ಸನ್ನದ್ಧತೆಯ ಕೋಣೆಯ (ವಾರ್ ರೂಮ್) ಅಂಕಿ-ಅಂಶಗಳ ಪ್ರಕಾರ ಎರಡನೆಯ ಅಲೆಯು 0-9 ವರ್ಷ ವಯಸ್ಸಿನ ನಡುವೆ 143%ರಷ್ಟು ಹೆಚ್ಚು ಸಕಾರಾತ್ಮಕ ಪ್ರಕರಣಗಳನ್ನು, ಮತ್ತು 10-19 ವರ್ಷದೊಳಗಿನ ಹರೆಯದವರಲ್ಲಿ 120% ಹೆಚ್ಚಳವನ್ನು ಕಂಡಿದೆ. ಲಸಿಕೆ ಹಾಕಿಕೊಳ್ಳದ ಜನರಲ್ಲಿ ಈ ಅಂಕಿಅಂಶಗಳು ಇನ್ನಷ್ಟು ಏರಿಕೆಯಾಗಿದೆಯೆಂದು ಶಂಕಿಸಲಾಗಿದೆ. ಜೊತೆಗೇ ಮುಖಕವಚ ಹಾಕದವರ ಸಂಖ್ಯೆ 50%ಕ್ಕೂ ಹೆಚ್ಚೆಂದು ಅಧಿಕೃತವಾಗಿಯೇ ಅಂದಾಜಿಸಲಾಗಿದೆ. ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಪೂರ್ಣವಾಗುವವರೆಗೆ ಈ ಸಂಕಟಕ್ಕೆ ಅಂತ್ಯವಿಲ್ಲದಿರಬಹುದು.

ರೋಗಲಕ್ಷಣ ಹೊಂದಿರುವವರು, ಸೋಂಕಿನ ಬಗ್ಗೆ ತಿಳಿದ ಆರಂಭದಲ್ಲಿ ಸರ್ಕಾರಗಳಿಗೆ ಸುದ್ದಿಯ ಕೇಂದ್ರವಾಗಿದ್ದರೂ ರೋಗಲಕ್ಷಣವಿಲ್ಲದ ಕೋವಿಡ್-19 ಸೋಂಕಿತರೂ ಸೋಂಕನ್ನು ಹರಡುತ್ತಾರೆ ಎಂದು ಅಧ್ಯಯನಗಳ ಮತ್ತು ಸಂಶೋಧನೆಗಳು ಸೂಚಿಸುತ್ತವೆ. ರೋಗಲಕ್ಷಣವಿರುವವರು ರೋಗವನ್ನು ಹರಡುವ ಸಾಧ್ಯತೆಯನ್ನು ಹೇಗೂ ಅಲ್ಲಗಳೆಯಲಾಗುವುದಿಲ್ಲ. ಇಂತಹ ಕೆಲವು ಗೊಂದಲಗಳು ಪರೀಕ್ಷಾನೀತಿಗಳಿಗೆ ಸವಾಲಾಗಿ ಪರಿಣಮಿಸಿರುವದರಿಂದ ಪರೀಕ್ಷೆಗಳನ್ನು ತ್ವರಿತವಾಗಿ ಹೆಚ್ಚಿಸಲು ಮತ್ತು ನೈಜ ಸಂಖ್ಯೆಗಳನ್ನು ನೀಡಲು ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕಾಗಿದೆ.

ಪ್ರಸ್ತುತ ಕೋವಿಡ್-೧೯ ಎರಡನೆಯ ಅಲೆಯ ಉಲ್ಬಣವು ಮೊದಲಿಗೆ ಮಹಾರಾಷ್ಟ್ರದಲ್ಲಿ ತೀವ್ರ ಏರಿಕೆಯನ್ನು ಕಂಡಿದ್ದು ಕೆಲವೇ ವಾರಗಳಲ್ಲಿ ದೇಶದಾದ್ಯಂತ ಹರಡಲು ಪ್ರಾರಂಭಿಸಿತು. ಕೋವಿಡ್ ಮೊದಲನೆಯ ಅಲೆಯಾದ ಅನಂತರ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಕುಸಿತವಿದೆ ಮತ್ತು ಭಾರತವು ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿದೆಯೆಂದು ನಂಬುವಂತೆ ಮಾಡಿದ ನಂತರ ಕೆಲವೇ ತಿಂಗಳುಗಳಲ್ಲಿ ನಮ್ಮ ಕಣ್ಣುಗಳೆದುರೇ ಇವೆಲ್ಲವೂ ಸಂಭವಿಸಿದವು. ಫೆಬ್ರವರಿಯಲ್ಲಿ ಈ ಪ್ರಕರಣಗಳು ದಿನಕ್ಕೆ 10 ಸಾವಿರಕ್ಕಿಂತ

ಕಡಿಮೆಯಾಗಲಾರಂಭಿಸಿದವು. ಇದರಿಂದಾಗಿ ಸರಕಾರವು ತಾನು ಹೇರಿದ ನಿರ್ಬಂಧಗಳನ್ನು ಸಡಿಲಗೊಳಿಸಿತು ಮತ್ತು ಜನಸಂದಣಿಗಳಿಗೆ ಅವಕಾಶ ಮಾಡಿಕೊಡುವ ಸಭೆ, ಸಮಾರಂಭಗಳನ್ನು, ಚುನಾವಣಾ ರ್‍ಯಾಲಿಗಳನ್ನು ನಡೆಸಿತು. ಧರ್ಮದ ಹೆಸರಿನಲ್ಲಿ ಕುಂಭಮೇಳದಂತಹ ಅಪಾರ ಜನಸಾಗರಕ್ಕೆ ಅನುಮತಿ ನೀಡಿತು. ಇವೆಲ್ಲವೂ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳ ಕ್ರಮಗಳನ್ನು ಗಾಳಿಗೆ ತೂರಿದ ಜನಸ್ತೋಮವನ್ನು ಸೇರಿಸಿತು.
ಪ್ರತಿರಕ್ಷೆಯ ಪರಿಕಲ್ಪನೆ ಮತ್ತು ಶಾಶ್ವತ

ಪ್ರತಿಕಾಯಗಳನ್ನು ಉತ್ಪಾದಿಸುವ ಕೋವಿಡ್ ರೋಗಿಗಳ ಕುರಿತು ಸಾಕಷ್ಟು ಮಾಹಿತಿ ಮತ್ತು ಪುರಾವೆಗಳಿಲ್ಲದೆ ಎಲ್ಲವೂ ಸರಿಯಿದೆಯೆಂಬ ಪ್ರಚಾರ ನಡೆಯಿತು. ಪ್ರಕರಣಗಳ ಸಂಖ್ಯೆಯ ಈ ಇಳಿತ ಕಾಕತಾಳೀಯವಾಗಿದ್ದಿರಬಹುದು. ಆದರೆ ಈ ಸಮಯದಲ್ಲಿ ತಪ್ಪಿಸಬಹುದಾಗಿದ್ದ ಚುನಾವಣೆಗಳನ್ನು ನಡೆಸಲು ವಾಸ್ತವವನ್ನು ದೂರವಿಡುವ ರಾಜಕೀಯ ಸ್ವಾರ್ಥ ಮತ್ತು ದುರಾಸೆಯೇ ಇದಕ್ಕೆ ದೊಡ್ಡ ಕಾರಣವೆಂದು ಕಾಣುತ್ತದೆ.

ನಾವೇ ನಮ್ಮ ವೈದ್ಯರಾಗುವುದು, ಔಷಧಿಯನ್ನು ನಾವೇ ನಿರ್ಧರಿಸುವುದು ಸರಿಯಲ್ಲ; ಸಾಧುವೂ ಅಲ್ಲ. ವಾಸ್ತವವಾಗಿ ಈ ಸಮಯದಲ್ಲಿ ಹೆಚ್ಚಿನ ಜನರು ಆರೋಗ್ಯಸೇವೆಯನ್ನು ಬಯಸುವುದರಿಂದ ಆಡಳಿತಕ್ಕೆ, ಅಧಿಕಾರಶಾಹಿಗಳಿಗೆ ನಾಗರಿಕರ ಪ್ರಶ್ನೆಗಳಿಗೆ ಮತ್ತು ಬೇಡಿಕೆಗಳಿಗೆ ಉತ್ತರಿಸಬೇಕಾದ ಹೆಚ್ಚಿನ ಉತ್ತರದಾಯಿತ್ವವಿರುತ್ತದೆ; ಆಡಳಿತವನ್ನು ಸುಧಾರಿಸಲು ತೀವ್ರ ಒತ್ತಡ, ಒತ್ತಾಯವಿರುತ್ತದೆ. ಕೋವಿಡ್-19ರ ಭಾರೀ ದೈತ್ಯಾಕಾರದ ಅಲೆಯು ನಮ್ಮ ದೇಶವನ್ನು ಅಪ್ಪಳಿಸಿದಾಗ ನಾವೆಲ್ಲರೂ ಕಾಣುತ್ತಿರುವ ಸಂಗತಿ ಇದು. ವಿಪತ್ತು ನಿರ್ವಹಣೆ ಮಾತ್ರವಲ್ಲ, ನಾವು ಆರೋಗ್ಯ ನಿರ್ವಹಣೆಯಲ್ಲೂ ವಿಫಲರಾಗಿದ್ದೇವೆ. ಆರೋಗ್ಯ ರಕ್ಷಣೆಯಲ್ಲಿ ಆಡಳಿತವು ಮಾಡಬೇಕಾದ್ದು ಹೆಚ್ಚೇನೂ ಇಲ್ಲವೆಂದು ಆಡಳಿತ ವ್ಯವಸ್ಥೆ ಮತ್ತವರ ಬೆಂಬಲಿಗ ಜನರು ಭಾವಿಸುವುದರಿಂದ ಆಡಳಿತವು ಕೇವಲ ನೆಪವಾಗಿಬಿಟ್ಟಿದೆ. ಸೋಂಕು ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದ ತಜ್ಞರಿಂದ ಅಗತ್ಯವಿರುವಷ್ಟು ಸಲಹೆಗಳನ್ನು ಸ್ವೀಕರಿಸದೆ, ನಮ್ಮನ್ನಾಳುವ ನಾಯಕರು ಹಲವು ನಿರ್ಧಾರಗಳನ್ನು ತೆಗೆದುಕೊಂಡರು. ಇದರ ಪರಿಣಾಮವಾಗಿ ನಾವು ಸೋಂಕು ಪರೀಕ್ಷೆಯಿಂದ ಮೊದಲುಗೊಂಡು ಲಸಿಕಾ ಆಂದೋಲನದವರೆಗೆ ಗೊಂದಲದಲ್ಲಿ ಸಿಲುಕಿದ್ದೇವೆ.

ಪರಿಸ್ಥಿತಿ ಹೀಗಿರುವಾಗ ವರದಿಯಾದ ಸಾವಿನ ಪ್ರಮಾಣ, ನದಿಗಳಲ್ಲಿ ತೇಲುವ ಶವಗಳು, ಆಸ್ಪತ್ರೆಯ ಹಾಸಿಗೆಗಳಿಗಿಂತ ಹೆಚ್ಚಿರುವ ಸ್ಮಶಾನಗಳ ಅಂತ್ಯಕ್ರಿಯೆಗಳು, ವೈದ್ಯಕೀಯ ಆಮ್ಲಜನಕದ ಕೊರತೆ ಎಲ್ಲವೂ ಢಾಳಾಗಿ ಕಾಣುತ್ತಿದೆ, ಆದರೆ

ಸ್ವಘೋಷಿತ ನಾಯಕರು ಮತ್ತು ಅವರ ಅನುಯಾಯಿಗಳ ’ಯಾವುದೇ ಸಮಸ್ಯೆಯಿಲ್ಲ, ಅಥವಾ ’ಎಲ್ಲವೂ ಸರಿಯಾಗಿದೆ’ ಎಂಬ ಹೇಳಿಕೆಗಳನ್ನು ನೋಡಿದಾಗ ಆತಂಕವಾಗದೆ ಇರದು. ದೊಡ್ಡ ಜನಸಂಖ್ಯೆಯಿರುವ ದೊಡ್ಡ ದೇಶವೆಂಬ ನೆಪ ಒಡ್ಡಬಹುದು. ಆದರೆ ಇದು ಹೊಸ ಸಂಗತಿಯೇನಲ್ಲ. ಕೋಮುವಾದ, ಬಂಡವಾಳಶಾಹಿಗಳ ಭಂಡ ಆರ್ಥಿಕತೆ ಮತ್ತು ಸೋಂಕಿನ ಅಲೆಗಳು ನಮ್ಮ ಮೇಲೆ ದಾಳಿ ಮಾಡುವ ಮೊದಲೇ ನಮಗಿದು ತಿಳಿದಿತ್ತಲ್ಲವೇ? ನಾವು ಜಾಣ ಕಿವುಡ-ಕುರುಡರಾಗಿದ್ದೆವು. ವೈಯಕ್ತಿಕ ಜವಾಬ್ದಾರಿಯನ್ನು ಕೂಡ ಕಡೆಗಣಿಸಿದೆವು. ಕೋವಿಡ್-೧೯ ಸೋಂಕು ಸುನಾಮಿಯಂತೆ ನಮ್ಮ ಮನೆಯ ಬಾಗಿಲು ಬಡಿಯುವವರೆಗೂ ನಾವದನ್ನು ನಿರ್ಲಕ್ಷಿಸಿದ್ದೇವೆ. ಆದ್ದರಿಂದ ಈಗ ನಾವು ಎಂದಿಗಿಂತಲೂ ಎಚ್ಚರಿಕೆಯಿಂದ ಹಾಗೂ ಭಯ ಮತ್ತು ಆತಂಕಗಳ ನಡುವೆಯೇ ಮೂರನೆಯ ಅಲೆಯನ್ನೆದುರಿಸಲು ಸನ್ನದ್ಧರಾಗಬೇಕು. ಪರಿಸ್ಥಿತಿ ಅರ್ಥ ಮಾಡಿಕೊಂಡು ಜಾಗೃತರಾಗಬೇಕು.

ಮುಖ ಕವಚವನ್ನು ಧರಿಸುವುದು, ಕೈಗಳನ್ನು ಸಾಬೂನಿನಲ್ಲಿ ಸರಿಯಾಗಿ ತೊಳೆದುಕೊಳ್ಳ್ಳುವುದು, ದೈಹಿಕ ಅಂತರವನ್ನು ಕನಿಷ್ಠ 2 ಮೀಟರಿನಷ್ಟು ಕಾಪಾಡಿಕೊಳ್ಳುವುದು, ಮುಂತಾದ ಮೂಲಭೂತ ಮುಂಜಾಗ್ರತಾ ಕ್ರಮಗಳನ್ನು ಮುಂದುವರೆಸಬೇಕು. ಮೂರನೆಯ ಅಲೆಯನ್ನು ತಡೆಗಟ್ಟುವ ಈ ಮೂಲಭೂತ ತಿಳಿವಳಿಕೆಯ ಜೊತೆಗೆ ನಾವು ನಾಗರಿಕರು ಮತ್ತು ಸಮುದಾಯಗಳು, ನಮ್ಮ ಅನುಕೂಲ ಮತ್ತು ರಕ್ಷಣೆಗಾಗಿ ರೂಪಿಸಲಾಗಿರುವ ಕಾನೂನು ಮತ್ತು ನಿಯಮಗಳನ್ನು ಅವೆಷ್ಟೇ ಕಠಿಣವೆಂದೆನ್ನಿಸಿದರೂ ಪಾಲಿಸಬೇಕು. ಎರಡನೆಯ ಅಲೆಯ ಪ್ರಚಂಡ ಬಿರುಗಾಳಿಯನ್ನು ನಾವು ಅನುಭವಿಸುತ್ತಿದ್ದರೂ, ಮುಂಬರುವ ಅಲೆಗಳ ನಿರೀಕ್ಷಿತ ಆತಂಕಗಳನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ವಿಶ್ಲೇಷಿಸಿ ನಾವು ಮುಂದಡಿಯಿಡಬೇಕಾಗಿದೆ.

A patient suffering from the coronavirus disease (COVID-19) receives treatment inside the emergency ward at Holy Family hospital in New Delhi, India, April 29, 2021. REUTERS/Danish Siddiqui

ವಿಶ್ವಾದ್ಯಂತ ಸೋಂಕುರೋಗಶಾಸ್ತ್ರಜ್ಞರು ಮತ್ತು ವೈರಾಣುಶಾಸ್ತ್ರಜ್ಞರ ಅಭಿಮತದಂತೆ ಕೋವಿಡ್-19 ಸೋಂಕಿನ ಮೂರನೆಯ ಅಲೆಯು ಈಗ ಬದುಕುಳಿಯುವವರ ಬದುಕನ್ನು ಮೂರಾಬಟ್ಟೆಯಾಗಿಸುವ ಸಾಧ್ಯತೆಯಿದೆ. ಸಮಯವನ್ನು ನಿಗದಿಪಡಿಸದಿದ್ದರೂ (ಅದು ಅಸಾಧ್ಯವೂ ಹೌದು) ಎರಡನೆಯ ಅಲೆಯ ಗಾಯಗಳು ವಾಸಿಯಾಗುವ ಮೊದಲೇ ಅದು ಬರಲಿದೆ. ಅಂಕಿ-ಅಂಶಗಳಂತೆ, ತಜ್ಞರ ಊಹೆಯಂತೆ, ಮುಂದಿನ 3-6 ತಿಂಗಳುಗಳಲ್ಲಿ ಮೂರನೆಯ ಅಲೆಯ ಭಯಾನಕ ಚಿತ್ರಗಳು ನಮ್ಮನ್ನೂ ನಮ್ಮ ಮಕ್ಕಳನ್ನೂ ಆವರಿಸಲಿದೆ.
ಆದ್ದರಿಂದ ನಮ್ಮ ಆರೋಗ್ಯದ ಮತ್ತು ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಂಡು, ಸುರಕ್ಷತಾ ನೀತಿ-ನಿಯಮಗಳನ್ನು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಅನುಸರಿಸಬೇಕು. ನಿರ್ಭಯರಾಗಿ ಸರಕಾರದತ್ತ ಸೂಕ್ತ ಪ್ರಶ್ನೆಗಳನ್ನು ಎಸೆಯಲು ಮತ್ತು ಆರೋಗ್ಯ ಸೇವೆಯ ಸತ್ಯಮಾಹಿತಿಗಳನ್ನು ಪಡೆಯಲು ಮರೆಯಬಾರದು. ಲಸಿಕೆಗಳನ್ನು ಸರಿಯಾಗಿ ಪಡೆಯಬೇಕು ಮತ್ತು ಕೋವಿಡ್-19ರ ವಿರುದ್ಧದ ಹೋರಾಟಕ್ಕೆ ಸಿದ್ಧರಾಗಬೇಕು.

ಕೇಂದ್ರ ಆರೋಗ್ಯ ಇಲಾಖೆಯು ಮೂರನೆಯ ಅಲೆಯು ಅನಿವಾರ್ಯ ಮತ್ತು ಇನ್ನಷ್ಟು ಭೀಕರವಾಗಿರುತ್ತದೆಂದು ಪ್ರಕಟಿಸಿತು. ಅದಿನ್ನೂ ಸುದ್ದಿಯಾಗುತ್ತಿರುವಾಗಲೇ ’ಹಾಗೇನಿಲ್ಲ ಎಂಬ ಧ್ವನಿಯೊಂದಿಗೆ ಅದನ್ನು ತರಾತುರಿಯಲ್ಲಿ ಹಿಂದೆ ಪಡೆಯಲು ಹೊರಟಿತು. ಇದಕ್ಕೆ ಕಾರಣವಾದ ರಾಜಕೀಯ ಹಿತಾಸಕ್ತಿ ಮೇಲ್ನೋಟಕ್ಕೇ ಗೋಚರಿಸುತ್ತದೆ. ಈಗ ದೇಶದ ಶಿಶುತಜ್ಞರ ಸಂಘಟನೆಯು ಕೂಡಾ ’ಹಾಗೇನಿಲ್ಲ ಧೋರಣೆಯ ಹೇಳಿಕೆಯನ್ನೆ ಪುನರುಚ್ಚರಿಸಿದೆ. ನಮ್ಮ ಮೇಲೆ ಹೇಗೆ ಕೋವಿಡ್-19 ದಾಳಿಯಿಟ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಮಕ್ಕಳ ಮೇಲೆ ದಾಳಿಯಿಡಬಹುದೇ ಹೊರತು ಅದರಲ್ಲಿ ವಿಶೇಷ ವ್ಯತ್ಯಾಸವಿರಲಿಕ್ಕಿಲ್ಲವೆಂದು ಹೇಳಿದೆ. ಇಂತಹ ಹೇಳಿಕೆಗಳು ಇನ್ನಷ್ಟು ಗೊಂದಲವನ್ನು ಸೃಷ್ಟಿಸಿವೆಯೇ ಹೊರತು ಪರಿಹಾರ, ಸಮಾಧಾನವನ್ನಲ್ಲ. ಹೇಗಿದ್ದರೂ ನಮ್ಮ ಮುಂದಿನ ತಲೆಮಾರನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆಯೆಂಬುದನ್ನು ಇವು ತಪ್ಪಿಸಲಾರವು.
ನಮ್ಮ ಮಕ್ಕಳು ತಮ್ಮ ಮುಗ್ಧ ಕಣ್ಣುಗಳಿಂದ ನಮ್ಮನ್ನು ನೋಡುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಆದರೆ, ನಾವು ಬಿತ್ತಿದ್ದನ್ನೇ ಕೊಯ್ಯಬೇಕಲ್ಲವೇ?

 

ಡಾ. ಅನಿರುದ್ಧ ಕಂಜರ್ಪಣೆ
ದಂತ ವೈದ್ಯ ಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗ ತಜ್ಞರು. ಜಾಗತಿಕ ಆರೋಗ್ಯದ ಕುರಿತ ವಿಶೇಷ ಆಸಕ್ತಿಯುಳ್ಳ ಅನಿರುದ್ಧ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ಉನ್ನತ ಅಧ್ಯಯನ ನಡೆಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...