Homeಕರ್ನಾಟಕಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ...

ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ ಪರಿಶೀಲನೆ ಸಮಿತಿ ಸದಸ್ಯನ ಸಮರ್ಥನೆ

- Advertisement -
- Advertisement -

ರಾಜ್ಯದಾದ್ಯಂತ ಭುಗಿಲೆದ್ದಿರುವ ಪಠ್ಯ ಪುಸ್ತಕ ಮರು ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮರು ಪರಿಷ್ಕರಣೆ ಸಮಿತಿ ಸದಸ್ಯರೊಬ್ಬರು, “ಸಂವಿಧಾನವನ್ನು ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ? ಶಿಲ್ಪಿ ಎಂದರೆ ಒಬ್ಬರು. ಈ ಶಬ್ದವನ್ನು ಯಾರೋ ಒಬ್ಬರು 90ರ ದಶಕದಲ್ಲಿ ಪ್ರಯೋಗ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಸಂವಿಧಾನ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಐದು ಜನರಿದ್ದರು, ಅದನ್ನು ಒಬ್ಬರೇ ಕೂತು ಬರೆದಿರಲು ಸಾಧ್ಯವೇ ಇಲ್ಲ? ಮತ್ತೆ ಯಾಕೆ ಎಂಟು ಜನರ ಕಮಿಟಿ ಮಾಡಿದ್ದರು? ಅವರಿಗೇನು ಬೇರೆ ಕೆಲಸ ಇರಲಿಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.

ಪಠ್ಯ ಪುಸ್ತಕದಲ್ಲಿ ಹಲವು ತಪ್ಪುಗಳಾಗಿವೆ ಎಂಬ ಪ್ರಶ್ನೆಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಅವರು,“ಈಗಾಗಲೇ ಪಠ್ಯ ಪುಸ್ತಕ ಸಮಿತಿ ವಿಸರ್ಜನೆ ಆಗಿದೆ. ಪರಿಷ್ಕರಣೆಯಲ್ಲಿ ‘ತಪ್ಪುಗಳು ಆಗಿದೆ’ ಎಂದು ಹೇಳಲು ನಾವು ತಯಾರಿಲ್ಲ. ನೀವು ಪ್ರಶ್ನೆ ಕೇಳುತ್ತಿರುವಾಗಲೇ ‘ತಪ್ಪುಗಳಾಗಿವೆ’ ಎಂದು ಹೇಳುತ್ತಿದ್ದೀರಿ. ನಾವು ಕೂಡಾ ‘ಎಜುಕೇಟೆಡ್ ಕ್ಲಾಸ್’. ನೀವು ಯಾವುದೋ ಒಂದು ಬಣ್ಣದ ಕನ್ನಡಕ ಇಟ್ಟುಕೊಂಡು, ರಾಜಕೀಯ ಪಕ್ಷದ ಕಡೆಯಿಂದ ಹೇಳಿದರೆ ನಾವು ಏನು ಹೇಳಬೇಕು?” ಎಂದು ಹೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಾನು ನಿವೃತ್ತ ರಾಜಕೀಯ ಶಾಸ್ತ್ರದ ಪ್ರೋಫೆಸರ್‌. ಈ ಬಗ್ಗೆ ನಾನು ಹೆಚ್ಚೇನೂ ಪ್ರತಿಕ್ರಿಯೆ ನೀಡುವುದಿಲ್ಲ. ಜನ – ಮನ ಏನಿದೆಯೋ ಆ ರೀತಿಯಲ್ಲಿ ನಡೆಯಲಿ. ಯಾಕೆಂದರೆ ನಮ್ಮ ಉದ್ದೇಶ ಒಳ್ಳೆಯದಿತ್ತು, ಅದರ ಪ್ರಕಾರವೇ ನಾವು ಮಾಡಿದ್ದೇವೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಆದೇಶ ಇಲ್ಲದೆ ಪಠ್ಯಪರಿಷ್ಕರಣೆ; ಜನಾಕ್ರೋಶದ ನಡುವೆ ‘ಪ್ರಜಾವಾಣಿ’ ವರದಿಗಳಿಗೆ ಸಚಿವ ಬಿ.ಸಿ.ನಾಗೇಶ್ ಗರಂ!

“ಪರಿಷ್ಕರಣೆಯಲ್ಲಿ ನಮ್ಮದೇನೂ ಸ್ವಾರ್ಥ ಇಲ್ಲ. 1947 ರಿಂದ ಇವತ್ತಿನ ವರೆಗೂ ಯಾವ ತಪ್ಪು ಹೆಜ್ಜೆಯಲ್ಲಿ ನಾವು ಹೋಗಿದ್ದೇವೆಯೋ, ಆ ಹೆಜ್ಜೆಯನ್ನು ಸರಿ ಪಡಿಸುವಂತಹ ಒಂದು ಪ್ರಯತ್ನ ಮಾಡಿದ್ದೇವೆ. ಯಾಕೆಂದರೆ ಜಾತ್ಯಾತೀತ ಸಿದ್ದಾಂತವನ್ನು ತುಂಬಿ ಅದನ್ನು ಅಲ್ಪಸಂಖ್ಯಾತರಿಗಾಗಿ ‘ಅವರು’ ಉಪಯೋಗಿಸಿದ್ದಾರೆ. ಈ ಜಾತ್ಯಾತೀತ ಸಿದ್ದಾಂತದ ತುಂಬುವಿಕೆ ಬಹಳ ಆಳವಾಗಿ ಹೋಗಿದೆ. ಆದ್ದರಿಂದ ಅದನ್ನು ನಾವೇನು ಬದಲಾಯಿಸಲು ಹೋಗುವುದಿಲ್ಲ” ಎಂದು ಅವರು ಹೇಳಿದರು.

“ನಾವು ಯಾರ ಜಾತಿ ಸೇರಿದಂತೆ, ಯಾವುದನ್ನೂ ಪರಿಗಣಿಸದೇ, ಒಳ್ಳೆಯ ರೀತಿಯಲ್ಲಿ ಆಗಬೇಕು ಎಂದು ಪರಿಷ್ಕರಿಸಿದ್ದೇವೆ. ಸರ್ಕಾರ ಇನ್ನು ಏನು ಬೇಕಾದರೂ ಮಾಡಲಿ, ನಮಗೆ ಏನೂ ಬೇಜಾರಿಲ್ಲ” ಎಂದು ಅವರು ತಿಳಿಸಿದರು.

ಹಲವು ಮಹನಿಯರು ಮತ್ತು ಚಾರಿತ್ರಿಕ ವ್ಯಕ್ತಿಗಳ ಪಾಠಗಳನ್ನು ತೆಗೆಯಲಾಗಿದ್ದು ಮತ್ತು ಪಠ್ಯದಲ್ಲಿ ಹಲವು ತಪ್ಪುಗಳು ನಡೆದಿರುವ ಬಗ್ಗೆ ಚರ್ಚೆ ನಡೆಯುತ್ತಿರುವುದರ ಬಗ್ಗೆ ಮಾತನಾಡಿದ ಅವರು, “ಈ ಬಗ್ಗೆ ನಾನೇನೂ ಮಾತನಾಡಲು ಹೋಗುವುದಿಲ್ಲ. ನಾವು ಯಾರೂ ಕೂಡಾ ಮಾತನಾಡಲು ಹೋಗುವುದಿಲ್ಲ. ಸಮಿತಿ ವಿಸರ್ಜಿಸಲಾಗಿದೆ. ಆದ್ದರಿಂದ ನೋ ಕಮೆಂಟ್‌‌. ನಾನು ಕಾಲೇಜಿನ ನಿವೃತ್ತ ಪ್ರೊಫೆಸರ್‌. ಬಹಳ ವರ್ಷಗಳ ಹಿಂದೆಯೆ ನಿವೃತ್ತನಾಗಿದ್ದೇನೆ. ಈಗ ನಾನು ಸಾಮಾಜಿಕ ಕಾರ್ಯಗಳಲ್ಲಿ ಜಾಸ್ತಿ ತೊಡಗಿಸಿಕೊಂಡಿದ್ದು, ಆಶ್ರಮವನ್ನೆಲ್ಲಾ ನಡೆಸುತ್ತಾ ಇದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: ನೂತನ ಪಠ್ಯ ಪುಸ್ತಕ: ಐವರು ಬಿಜೆಪಿ ನಾಯಕರಿಂದ ವಿರೋಧ

ಪಠ್ಯದಲ್ಲಿ ‘ಸಂವಿಧಾನ ಶಿಲ್ಪಿ ಅಂಬೇಡ್ಕರ್‌’ ಎಂಬ ವಾಕ್ಯವನ್ನು ಕತ್ತರಿಸಿ ಬಾಬಾ ಸಾಹೇಬರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಸರಿಯಾದ ಆಧಾರ ಇಟ್ಟು ಈ ಆರೋಪಗಳನ್ನು ಮಾಡಿದರೆ ನಾವು ಅದಕ್ಕೆ ಉತ್ತರ ಹೇಳಬಹುದು. ‘ಸಂವಿದಾನ ಶಿಲ್ಪಿ’ ಎಂಬ ಪದವನ್ನು ತೆಗೆದರೆ ಅದು ಹೇಗೆ ಅವಮಾನ ಆಗೋದು? ಆದರೆ ಈ ಪದವನ್ನು ಯಾವಾಗ ಸೇರಿಸಿದ್ದು ಎಂಬ ಬಗ್ಗೆ ನಿಮಗೆ ಗೊತ್ತಿದೆಯೆ?” ಎಂದು ಪ್ರಶ್ನಿಸಿದರು.

“ಸಂವಿಧಾನದ ಬಗ್ಗೆ ನನಗೆ ತುಂಬಾ ಅಭಿಮಾನ ಇದೆ. ಅಂಬೇಡ್ಕರ್‌ ಬಗ್ಗೆಯೂ ನನಗೆ ಅಭಿಮಾನ ಇದೆ. ಅವರ ಹುಟ್ಟೂರನ್ನು ಕೂಡಾ ನೋಡಿಕೊಂಡು ಬಂದವ ನಾನು. ಸುಮಾರು ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲದಿಂದ ನಾನು ಸಂವಿಧಾನದ ವಿದ್ಯಾರ್ಥಿ. ಆದ್ದರಿಂದ ‘ಸಂವಿಧಾನ ಶಿಲ್ಪಿ’ ಎಂಬ ಶಬ್ಧ… ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಈಗ ಯಾರೊಂದಿಗೆ ಕೇಳಿದರೂ ಹೇಳುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚು ಯಾರಿಗೂ ಗೊತ್ತಿಲ್ಲ. ಯಾರಾದರೂ ಸಂವಿಧಾನ ಬಗ್ಗೆ ಹೇಳಿದರೆ, ‘ಅದು ಒಬ್ಬರೇ ಕತೆ-ಕಾದಂಬರಿ ಬರೆದ ಹಾಗೆ’ ಬರೆದಿದ್ದು ಎಂಬ ರೀತಿಯಲ್ಲಿ ಹೇಳುತ್ತಾರೆ” ಎಂದು ಹೇಳಿದರು.

“ನಮ್ಮ ಜಿಲ್ಲೆಯ ಐದು ಜನರು ಸಂವಿಧಾನ ಶಿಲ್ಪಿಗಳು ಇದ್ದರು. ಅದು ನಿಮಗೆ ಗೊತ್ತಿದೆಯೆ? 299 ಮಂದಿ ಸಂವಿಧಾನ ಸಭೆಯಲ್ಲಿ ಇದ್ದರು ಅದು ನಿಮಗೆ ತಿಳಿದಿದೆಯೆ? ಎಂಟು ಮಂದಿ ಸಂವಿಧಾನ ಕರಡು ಸಮಿತಿಯಲ್ಲಿ ಇದ್ದರು ಅದು ತಿಳಿದಿದೆಯೆ? ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನದ ಬಗ್ಗೆ ನಡೆದ ಚರ್ಚೆಯ ಬಗ್ಗೆ ಐದು ಸಂಪುಟಗಳಲ್ಲಿ ನಾವು ಕಾಣಬಹುದು. ಅಷ್ಟು ಜನರು ಅದಕ್ಕೆ ತಮ್ಮನ್ನು ಧಾರೆಯೆರೆದಿದ್ದಾರೆ. ಹಾಗಿರುವಾಗ, ಸಂವಿಧಾನವನ್ನು ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ? ಶಿಲ್ಪಿ ಎಂದರೆ ಒಬ್ಬರು. ಈ ಶಬ್ದವನ್ನು ಯಾರೋ ಒಬ್ಬರು 90ರ ದಶಕದಲ್ಲಿ ಪ್ರಯೋಗ ಮಾಡಿದ್ದಾರೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪಠ್ಯವಿವಾದ ಡೈವರ್ಟ್ ಮಾಡಲು ಯತ್ನ: ಬಿಜೆಪಿಗೆ ತಿರುಗುಬಾಣವಾದ ಚಡ್ಡಿ ಕಳಿಸುವ ಅಭಿಯಾನ

ಹಾಗಾದರೆ ನಿಮ್ಮ ಸಮಿತಿಯು ಅಂಬೇಡ್ಕರ್‌ ಅವರನ್ನು ಸಂವಿಧಾನ ಶಿಲ್ಪಿ ಎಂದು ಒಪ್ಪಿಕೊಳ್ಳುವುದಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ವಾದಗಳನ್ನು ನಾನು ಹೀಗೆ ಮಾಡಿದರೆ, ನಾನು ಹೀಗೀಗೆ ಹೇಳಿದೆ ಎಂದು ನಾಳೆ ದಿನ ನೀವು ಹೇಳುತ್ತೀರಿ. ನಾನು ಎರಡು ಪುಸ್ತಕಗಳನ್ನು ಬರೆದಿದ್ದೇನೆ. ಯಾವತ್ತಾದರೂ ಅದನ್ನು ಒಂಚೂರು ನೋಡಿಕೊಳ್ಳಿ. ನಾನು ಅಲ್ಲಲ್ಲಿ ಸಂವಿಧಾನದ ಬಗ್ಗೆ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಸಂವಿಧಾನದ ಬಗ್ಗೆ ನಾನು ಭಾಷಣ ಮಾಡುತ್ತಾ ಇರುತ್ತೇನೆ” ಎಂದು ತಿಳಿಸಿದರು.

“ಅಂಬೇಡ್ಕರ್‌ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರು ಎರಡು ಸಾವಿರ ಪುಸ್ತಕಗಳನ್ನು ಹಡಗಿನಲ್ಲಿ ತಂದವರು. ಅವರು ಅತ್ಯಂತ ಮೇಧಾವಿ. ಅವರ ಬಗ್ಗೆ ಸಾಕಷ್ಟು ಅಧ್ಯಯನ ನಾನು ಕೂಡಾ ಮಾಡಿದ್ದೇನೆ. ಹಾಗೆಂತ ಒಬ್ಬರನ್ನೇ ಹೇಳಿ…ಅದು ಯಾರೋ ಒಬ್ಬರು ಟಿಪ್ಪುವನ್ನು ಮೈಸೂರಿನ ಹುಲಿ ಎಂದು ಬಳಸಿದರು. ಏನಿದೆಲ್ಲ? ಈ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡಿದ್ದೇವೆ. ಟಿಪ್ಪು ಹುಲಿ ಕೊಂದಿದ್ದಾನೆಯೆ?. ಯಾರೋ ಒಬ್ಬ ಮೈಸೂರು ಹುಲಿ ಎಂದು ಬರೆದ ಎಂದು ಹೇಳಿ ಅದನ್ನೇ ಬರೆಯಲು ನಾವು ತಯಾರಿಲ್ಲ. ಅಂಬೇಡ್ಕರ್‌ ಅವರು ಸಂವಿಧಾನಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಆದರೆ ಮಂಗಳೂರಿನ ಬ್ಯಾರಿಸ್ಟರ್‌‌ ಬೆನಗಲ್‌ ನರಸಿಂಹರಾವ್‌ ಬಗ್ಗೆಯೂ ಮುಕ್ತವಾಗಿ ಅಂಬೇಡ್ಕರ್‌‌ ಅವರೇ ಹೊಗಳಿದ್ದಾರೆ. ಅದಕ್ಕೆ ಏನು ಹೇಳುತ್ತೀರಿ?” ಎಂದು ಅವರು ಪ್ರಶ್ನಿಸಿದರು.

“ಸಂವಿಧಾನ ಶಿಲ್ಪಿ ಎಂದು ಸೇರಿಸಿದರೆ ಏನೂ ತಪ್ಪಿಲ್ಲ. ಆದರೆ ಯಾರೊಂದಿಗೆ ಕೇಳಿದರೂ ಸಂವಿಧಾನ ಬರೆದಿದ್ದು ಅಂಬೇಡ್ಕರ್‌ ಎಂದೇ ಹೇಳುತ್ತಾರೆ. ಅಂದರೆ ಅದನ್ನು ಕತೆ-ಕಾದಂಬರಿ-ಕಾವ್ಯದ ರೀತಿಯಲ್ಲಿ ಅವರು ಒಬ್ಬರೇ ಬರೆದಿದ್ದಾರೆ ಎಂಬ ಭಾವನೆ ಹೆಚ್ಚಿನ ಜನರಲ್ಲಿ ಇದೆ. ಆದರೆ ಅದು ಹಾಗಲ್ಲ. ಈ ಬಗ್ಗೆ ತಿಳಿಸಿದ್ದಕ್ಕೆ ಉತ್ತರ ಕರ್ನಾಟಕದಲ್ಲಿ ಗಲಾಟೆ ಆಗಿತ್ತು ಎಂದು ವರದಿಯಾಗಿದೆ. ಈ ವಿಚಾರದ ಬಗ್ಗೆ ಬಿಡಿಸಿ-ಬಿಡಿಸಿ ಹೇಳದೇ ಇದ್ದರ ಪರಿಣಾಮವಾಗಿ ಅದು ನಡೆದಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ‘ಹತ್ತು ದಿನದಲ್ಲಿ ಪಠ್ಯದಲ್ಲಿರುವ ಲೋಪ ತಿದ್ದಿ’: ಸರ್ಕಾರಕ್ಕೆ ಗಡುವು ನೀಡಿದ ಲಿಂಗಾಯತ ಮಠಾಧೀಶರು

“ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಎಂದು ಒಪ್ಪಿಕೊಳ್ಳಬೇಕೋ, ಬೇಡವೋ ಎಂದು ನಾನು ಹೆಚ್ಚು ಮಾತನಾಡುವುದಿಲ್ಲ. ಸಂವಿಧಾನ ಶಿಲ್ಪಿ ಎಂಬ ಒಂದು ಶಬ್ಧವನ್ನು ಸೇರಿಸಿದರೆ ಅದು ತಪ್ಪಲ್ಲ. ಆದರೆ ಸಂವಿಧಾನವನ್ನು ಒಬ್ಬರೇ ಕೂತು ಬರೆದರು ಎಂದು ಕೂಡಾ ಅಲ್ಲ. ಮುನ್ನೂರು ಜನ ಸಂವಿಧಾನ ಸಭೆಯ ಜನರು ಯಾಕೆ? ಈ ಬಗ್ಗೆ ಐದು ಸಂಪುಟಗಳಿವೆ. ಅತೀ ಹೆಚ್ಚಿನ ಶಬ್ಧಗಳನ್ನು ತಿದ್ದುಪಡಿ ಮಾಡಿದ್ದು ಹೆಚ್‌ವಿ ಕಾಮತ್‌ ಅವರಾಗಿದ್ದಾರೆ. ಅವರು ನಿವೃತ್ತ ಐಸಿಎಸ್‌ ಆಫಿಸರ್‌ ಆಗಿದ್ದರು. ಅವರು ಎರಡು ಭಾರಿ ಜೈಲಿಗೆ ಹೋಗಿದ್ದರು” ಎಂದು ತಿಳಿಸಿದರು.

“ದಕ್ಷಿಣ ಕನ್ನಡದ ಜಿಲ್ಲೆಯ ಉಳ್ಳಾಲ ಶ್ರೀನಿವಾಸ್ ಮಲ್ಯ, ಬೆನಗಲ್ ಶಿವರಾವ್ ಸೇರಿದಂತೆ ಐದು ಜನರು ಇದ್ದರು. ಇದೆಲ್ಲಾ ದಾಖಲಾಗಿದ್ದು, ಒಬ್ಬರೇ ಕೂತು ಬರೆದಿರಲು ಸಾಧ್ಯವೇ ಇಲ್ಲ ಅಲ್ಲವೆ? ಮತ್ತೆ ಯಾಕೆ ಎಂಟು ಜನರ ಕಮಿಟಿ ಮಾಡಿದ್ದಾರೆ?  ಅವರಿಗೇನು ಬೇರೆ ಕೆಲಸ ಇಲ್ಲವೆ? ಈ ಎಂಟು ಜನರಲ್ಲಿ ಅಂಬೇಡ್ಕರ್‌ ಅವರನ್ನು ಅಧ್ಯಕ್ಷರು ಮಾಡಿ ಎಂದು ಮಹಾತ್ಮ ಗಾಂಧಿ ಹೇಳಿದರು. ಅದರ ಪ್ರಕಾರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು” ಎಂದು ಅವರು ತಿಳಿಸಿದ್ದಾರೆ.

“ಸಮಿತಿಯ ಎಂಟು ಜನರು ಕೂಡಾ ಸಮನಾಗಿ ಕೆಲಸ ಮಾಡಿದ್ದಾರೆ. ನಂತರ ಸ್ಥಿತ್ಯಂತರ, ಪಲ್ಲಟ ನಡೆದು ಕೊನೆಗೆ 90 ದಶಕದ ‘ಸಂವಿಧಾನ ಶಿಲ್ಪಿ, ಒಬ್ಬರೇ ಬರೆದರು’ ಎಂಬ ವಿಚಾರ ಹರಡಿತು. ಪ್ರಾರಂಭದ ಚುನಾವಣೆಯಲ್ಲಿ ಕೂಡಾ ಅಂಬೇಡ್ಕರ್‌ ಅವರು ಸೋತಿದ್ದರು. ಇದುವೇ ಕಾಂಗ್ರೆಸ್‌ನವರು ಅವರನ್ನು ಸೋಲಿಸಿದ್ದರು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿದ ಕೃತಿ ‘ಮನುಸ್ಮೃತಿ’: ಹೊಸ ಪಠ್ಯದಲ್ಲಿ ಉಲ್ಲೇಖ!

ಹರಪ್ಪ ನಾಗರೀಕತೆಯನ್ನು ಸಿಂಧೂ ನಾಗರೀಕತೆ ಎಂದು ಪಠ್ಯದಲ್ಲಿ ತಿದ್ದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ವೇದಗಳ ಬಗ್ಗೆ, ಆರ್ಯರ ಬಗ್ಗೆ ಬರೆದ ಬರಗೂರು ರಾಮಚಂದ್ರಪ್ಪ ಅವರು ತಪ್ಪಿಯು ಕೂಡಾ ‘ಸಂಸ್ಕೃತ’ ಪದ ಎಂಬ ಪ್ರಯೋಗ ಮಾಡಿಲ್ಲ. ಅವರಿಗೆ ಅಷ್ಟೊಂದು ಕಿಚ್ಚಿದೆ. ನಾವು A to Z ಎಲ್ಲವನ್ನೂ ನೋಡಿದ್ದೇವೆ. ಇಂತಹ ಎಷ್ಟೊಂದು ಅಭಾಸ ಮಾಡಿದ್ದಾರೆ ಎಂದರೆ ಎಷ್ಟು ಸಾಧ್ಯವೋ ಅಷ್ಟು ಮಾಡಿದ್ದಾರೆ” ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರೊಂದಿಗೆ ಮಾತನಾಡುತ್ತಿದ್ದಾಗ ಮಧ್ಯೆದಲ್ಲಿ ಶಿಕ್ಷಣ ಸಚಿವರ ಕರೆ ಬಂತು. ಹೀಗಾಗಿ ಅನಿವಾರ್ಯವಾಗಿ ಸಂಭಾಷಣೆಯನ್ನು ಮೊಟುಕುಗೊಳಿಸಬೇಕಾಯಿತು. ನಂತರ ಮತ್ತೆ ಇವರಿಗೆ ಕರೆ ಮಾಡಿದಾಗ, “ನೀವು ಯಾರೆಂದು ನನಗೆ ಗೊತ್ತಿಲ್ಲ. ನೇರವಾಗಿ ಬನ್ನಿ ಮಾತನಾಡೋಣ. ಆಗ ನನ್ನ ವಿಚಾರಗಳನ್ನು ಮಂಡಿಸುತ್ತೇನೆ. ಇಲ್ಲಿನ ಹೇಳಿಕೆಗಳು ಅನಧಿಕೃತ” ಎಂದು ಹೇಳಿದರು. ಹೀಗಾಗಿ ಅವರ ಹೆಸರನ್ನು ಇಲ್ಲಿ ಬಹಿರಂಗಪಡಿಸಿಲ್ಲ.

“ಪರಿಷ್ಕೃತ ಪಠ್ಯಪುಸ್ತಕದಲ್ಲಿರುವ ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆಗಳು ಬಂದಲ್ಲಿ ಉತ್ತರಿಸುವ ಜವಾಬ್ದಾರಿ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರದ್ದಾಗಿರುತ್ತದೆ” ಎಂದು ಸರ್ಕಾರ ಹೇಳಿರುವುದಾಗಿ ಪ್ರಜಾವಾಣಿ ವರದಿ ಉಲ್ಲೇಖಿಸಿದೆ. ಅಂದರೆ ತಾನು ನೀಡಿದ ವರದಿಗೆ ಸಮಿತಿಯು ಉತ್ತರಾದಾಯಿತ್ವ ಹೊಂದಿರುತ್ತದೆ. ಯಾರೇ ಕೇಳಿದರೂ ಆಕ್ಷೇಪಗಳಿಗೆ ಉತ್ತರಿಸಬೇಕು. ಆದರೆ ಸಮಿತಿ ಸದಸ್ಯರು ನುಳುಚಿಕೊಳ್ಳುತ್ತಿರುವುದು ಏತಕ್ಕೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

 1. ನಿಮ್ಮ ಸಂಕುಚಿತ ಬ್ರಾಹ್ಮಣ್ಯ ದ ಮೌಲ್ಯ ಇಲ್ಲಾರೂ ಒಪ್ಪಿಕೊಳ್ಳಲು ತಯಾರಿಲ್ಲ. ನಿಮಗೆ ಅರಿವು ಆಗಬೇಕಾದರೆ ಸಂವಿಧಾನ ರಚನೆಯ ಪೂರ್ವ ಮತ್ತು ನಂತರದ ಇತಿಹಾಸ ಓದಿ ಅರಿವು ಮುಡಿಸಿಕೊಳ್ಳಿ.ಬಾಬಾಸಾಹೇಬರ ದಲಿತರು ಅನ್ನೋ ಒಂದೇ ಕಾರಣಕ್ಕೆ ಅವರನ್ನ ಅವಮಾನಿಸಲು ಹೊರಟಿದ್ದೀರಾ, ನೀವು ನಿವೃತ್ತರು ಅಂತ ಬೇರೆ ಹೇಳುತ್ತೀರಾ ಮೊದಲು parliament archives ನಲ್ಲಿ ಸುರಕ್ಷಿತವಾಗಿ ಸಂರಕ್ಷಣೆ ಮತ್ತು ಸಾರ್ವಜನಿಕರವೀಕ್ಷಣೆಗೆ ಇಟ್ಟಿರುವ ದಾಖಲಾತಿಗಳನ್ನ ಅವಲೋಕಿಸಿ, ನಿಮ್ಮ ಅಜ್ಞಾನವನ್ನ ನಮಗೆ ಹೇರುವುದು ಬೇಡ,ಅವರು ಎಂತಾ ಮಹಾಜ್ಞಾನಿ, ಸಂವಿಧಾನ ಶಿಲ್ಪಿಅಂತ ವಿಶ್ವವೇ ಒಪ್ಪಿರುವಾಗ ನೀವಾರು ನಿಮ್ಮ ಅಜ್ಞಾನ ಹೇಳೋದಕ್ಕೆ. ಅದಕ್ಕೆ ನಿಮ್ಮ ಸಮಿತಿ ಬರಕಾಸ್ತು ಮಾಡಿರುವುದು.

 2. ಸರ್ ಹಾಗಾದರೆ ನಮ್ಮಗೆ ಸ್ವತಂತ್ರ ತಂದು ಕೊಟ್ಟವರು ಯಾರು ಸರ್ ಸ್ವತಂತ್ರ ಹೋರಾಟದಲಿ ಬಹಳಷ್ಟು ಜನ ಭಾಗವಹಿಸಿದವರು ಇದ್ದಾರೆ ಅವರ ಹೆಸರು ಪಠ್ಯ ಪುಸ್ತಕಗಳಲ್ಲಿ ಯಾಕ ಇಲ್ಲಾ ಸರ್

 3. ಬ್ರಾಹ್ಮಣ ತಲೆಯಲ್ಲಿ ಮನುವಾದಿ ತಲೆಯಲ್ಲಿ ಡಾ.ಅಂಬೇಡ್ಕರ್ ಸಂವಿಧಾನ ಬರೆದೆ ಇಲ್ಲ ಅಂತ ವಾದ ಮಾಡೋರು ಇದಾರೆ..ಇನ್ನು ಕೆಲವರು ಆ ಒಂದು ಸಬಗೆ ಅಧ್ಯಕ್ಷ ಅಷ್ಟೇ ಅನ್ನೋರು ಇದ್ದಾರೆ, ಯಾರೋ ಹೇಳಿದ್ದಕ್ಕೆ ಅವರನ್ನ ಅಧ್ಯಕ್ಷ ಮಾಡಿದ್ದಾರೆ ಅನ್ನೋರು ಇದ್ದಾರೆ, ನಿಮ್ಮದೇ ಸರಕಾರ ಸಂವಿಧಾನ ದಿನ ಅಂತಾ ಯಾಕೆ ಜಾರಿಗೆ ತಂತು, 26 Jan ದಿನ ಯಾಕೆ ಡಾ.ಅಂಬೇಡ್ಕರ್ ಅವರ ಫೋಟೋ ಇತ್ತು ಪೂಜೆ ಮಾಡಲಾಗುತ್ತೆ. ಡಾ.ಅಂಬೇಡ್ಕರ್ ವ್ಯಾಲ್ಯೂಮ್ 11 ರಲ್ಲಿ ಇದೆ ನೋಡಿ ಸಂವಿಧಾನ ಕಮಿತಿಯಲ್ಲಿ ಎಸ್ಟ್ ಜನ ಇದ್ರು ಯಾರೆಲ್ಲ ಕೈ ಕೊಟ್ಟು ಕಮಿಟಿ ಬಿಟ್ಟು ಹೋದ್ರು ಅಂತ..ಅವಾಗ ಡಾ.ಅಂಬೇಡ್ಕರ್ ಅವರೇ ಒಬ್ಬರೇ ಬರ್ದಿದ್ದು..

 4. It’s right if Kannambadi was built by Vishweshrayya. It does not mean that he alone built the damage himself, there were so many engineers and workers team .
  More over Vodeyars contribution is definitely more than that of Vishwesharayya.
  In the same way, though there was constituent Assembly, most the work, master mind was Ambedkar ‘ s.
  In case Ambedkar belonged to high caste nobody would talk like this

 5. ಅಂಗಾದ್ರೆ
  ಅಮೇರಿಕಾ ಅಂಬೇಡ್ಕರ್ ರವರನ್ನು
  Knowledge of symbol
  ಅಂತ ಹೇಳಿರೋದು ಸುಮ್ನೆ ನಾ
  ಸಂವಿಧಾನ ಸಮಿತಿಯಲ್ಲಿದ್ದ ಆ 300 ಜನಕ್ಕೂ
  Knowledge of symbol’s
  ಅಂತ ಹೇಳ್ಬೋದಿತ್ತಲ್ಲ

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...