Homeನ್ಯಾಯ ಪಥಕರ್ನಾಟಕ ರಾಜ್ಯ ಬಜೆಟ್ ಪ.ಜಾ. ಮತ್ತು ಪ.ಪಂ.ಗಳಿಗೆ ಅನುದಾನದಲ್ಲಿ ಅನ್ಯಾಯ

ಕರ್ನಾಟಕ ರಾಜ್ಯ ಬಜೆಟ್ ಪ.ಜಾ. ಮತ್ತು ಪ.ಪಂ.ಗಳಿಗೆ ಅನುದಾನದಲ್ಲಿ ಅನ್ಯಾಯ

- Advertisement -
- Advertisement -

ಪ್ರಸ್ತಾವನೆ
ಒಕ್ಕೂಟ ಸರ್ಕಾರವು 1970ರ ದಶಕದಲ್ಲಿ ಪ.ಜಾ. ಮತ್ತು ಪ.ಪಂ. ಉಪಯೋಜನೆಗಳು ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ಅಲ್ಲಿಯವರೆಗೆ ದಲಿತರ ಮತ್ತು ಆದಿವಾಸಿಗಳ ಅಭಿವೃದ್ಧಿಯು ಒಟ್ಟು ಅಭಿವೃದ್ಧಿಯ ಜೊತೆಗೇ ನಡೆಯುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅದು ಅನೇಕ ಸಾಮಾಜಿಕ, ಆರ್ಥಿಕ ಮತ್ತು ಚಾರಿತ್ರಿಕ ಕಾರಣಗಳಿಂದ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಪ್ರಯತ್ನದ ಅಗತ್ಯವನ್ನು ಸರ್ಕಾರ ಮನಗಂಡು ಉಪಯೋಜನೆಗಳನ್ನು ಜಾರಿಗೊಳಿಸಿತು. ಆದರೆ ಈ ಉಪಯೋಜನೆಗಳಿಗೆ ಅನುದಾನ ನೀಡುವುದಕ್ಕೆ ಯಾವುದೇ ಮಾನದಂಡಗಳು ಇರಲಿಲ್ಲ. ಒಕ್ಕೂಟ ಸರ್ಕಾರದ ಮಟ್ಟದಲ್ಲಿ ಈಗಲೂ ಉಪಯೋಜನೆಗಳಿಗೆ ಅನುದಾನ ನೀಡುವುದಕ್ಕೆ ಯಾವುದೇ ಮಾನದಂಡವಿಲ್ಲ. ಕರ್ನಾಟಕ ಸರ್ಕಾರ 2013ರಲ್ಲಿ ಉಪಯೋಜನೆಗಳಿಗಾಗಿ ಪ.ಜಾ. ಮತ್ತು ಪ.ಪಂ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುವ ಬಗ್ಗೆ ಕಾಯಿದೆಯನ್ನು ರೂಪಿಸಿತು. ಈಗಲೂ ಈ ಸಮಸ್ಯೆ ಬಗೆಹರಿದಿಲ್ಲ. ಏಕೆಂದರೆ ಇಂದು ರಾಜ್ಯದಲ್ಲಿ ಆಡಳಿತ ಮತ್ತು ನಿರ್ವಹಣೆಯ ವೆಚ್ಚವನ್ನು ಬಿಟ್ಟು ಉಳಿದ ಬಜೆಟ್ ವೆಚ್ಚದಲ್ಲಿ ಶೇ.24.01ರಷ್ಟು ಉಪಯೋಜನೆಗಳಿಗೆ ಅನುದಾನ ನೀಡುವ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಬಜೆಟ್ಟಿನಲ್ಲಾಗಲಿ ಅಥವಾ ಮಧ್ಯಮಾವಧಿ ವಿತ್ತೀಯ ಯೋಜನೆಯ ವರದಿಗಳಲ್ಲಾಗಲಿ ಯಾವ ಆಧಾರದಲ್ಲಿ ಉಪಯೋಜನೆಗಳಿಗೆ ಪ.ಜಾ. ಮತ್ತು ಪ.ಪಂ.ಗಳ ಜನಸಂಖ್ಯೆ ಶೇ.24.1ಕ್ಕೆ ಅನುಗುಣವಾಗಿ ಅನುದಾನವನ್ನು ಲೆಕ್ಕ ಹಾಕಲಾಗುತ್ತಿದೆ ಎಂಬುದರ ವಿವರವನ್ನು ನೀಡುತ್ತಿಲ್ಲ. ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಸ್ವೀಕೃತಿ ಮತ್ತು ವೆಚ್ಚಗಳ ಎಲ್ಲ ವಿವರಗಳನ್ನು ಚರ್ಚೆ ಮಾಡಲಾಗುತ್ತಿದೆ. ಆದರೆ ಅದರಲ್ಲಿ ಉಪಯೋಜನೆಗಳಿಗೆ ಅನುದಾನ ನೀಡುವ ವಿಧಾನ ಮತ್ತು ವೆಚ್ಚಗಳ ವಿವರಗಳನ್ನು ಚರ್ಚೆ ಮಾಡುತ್ತಿಲ್ಲ. ಒಟ್ಟು ಬಜೆಟ್ ವೆಚ್ಚದ ಸುಮಾರು ಶೇ.10ರಷ್ಟು ಉಪಯೋಜನೆ ಅನುದಾನವಿದೆ. ಇದರ ಬಗ್ಗೆ ಸರ್ಕಾರ ಯಾವುದೇ ಬಜೆಟ್ ಸಂಪುಟಗಳಲ್ಲಿ ಚರ್ಚೆ ಮಾಡುತ್ತಿಲ್ಲ. ಅನುದಾನದ ವಿವರಗಳನ್ನು ನೀಡಿಬಿಟ್ಟರೆ ಸಾಕಾಗುವುದಿಲ್ಲ.

ಇದೇ ರೀತಿಯಲ್ಲಿ ಕರ್ನಾಟಕ ರಾಜ್ಯ ಮಾನವ ಅಭಿವೃದ್ಧಿ ವರದಿ 1999 ಮತ್ತು ವರದಿ 2005ರಲ್ಲಿ ಪ.ಜಾ. ಮತ್ತು ಪ.ಪಂ. ಸ್ಥಾನಮಾನದ ಬಗ್ಗೆ ಎರಡು ಅಧ್ಯಾಯಗಳಲ್ಲಿ ಚರ್ಚಿಸಲಾಗುತ್ತಿತ್ತು. ಇದನ್ನು 2005ರ ವರದಿಯಲ್ಲಿ ಕೈಬಿಡಲಾಗಿದೆ. ಈಗ ಸಿದ್ಧವಾಗುತ್ತಿರುವ 2021ರ ಕರ್ನಾಟಕ ಮಾನವ ಅಭಿವೃದ್ಧಿ ವರದಿಯಲ್ಲಿಯೂ ಇದು ಇದ್ದಂತಿಲ್ಲ. ಕನಾಟಕ ರಾಜ್ಯ ಆರ್ಥಿಕ ಸಮೀಕ್ಷೆಗಳಲ್ಲಿ 2019-20ರವರೆಗೆ ಪ.ಜಾ. ಮತ್ತು ಪ.ಪಂ. ಉಪಯೋಜನೆಗಳ ಅನುದಾನ, ಬಿಡುಗಡೆ ಮತ್ತು ವೆಚ್ಚಗಳ ವಿವರಗಳನ್ನು ನೀಡಲಾಗುತ್ತಿತ್ತು. ಆದರೆ 2020-21ರ ನಂತರ ಈ ವಿವರಗಳು ಸಮೀಕ್ಷೆಯಲ್ಲಿ ಕಾಣುತ್ತಿಲ್ಲ.

ಅಭಿವೃದ್ಧಿ ಅಂತರಗಳು
’ಅಸಮಾನತೆ’ ಎಂಬ ನುಡಿಯು ಸರ್ಕಾರಕ್ಕೆ ಅಪಥ್ಯವಿದ್ದಂತೆ ಕಾಣುತ್ತದೆ. ಈಗ ಕರ್ನಾಟಕ ಆರ್ಥಿಕ ಸಮೀಕ್ಷೆ ವರದಿಗಳಲ್ಲಿ ಮತ್ತು ಕರ್ನಾಟಕ ಮಾನವ ಅಭಿವೃದ್ಧಿ ವರದಿ 2015ರಲ್ಲಿ ಅಸಮಾನತೆ ನುಡಿಗೆ ಬದಲಾಗಿ ’ಅಂತರವನ್ನು ತುಂಬುವುದು’ (ಬ್ರಿಡ್ಜಿಂಗ್ ದಿ ಗ್ಯಾಪ್) ಎಂಬ ನುಡಿಯನ್ನು ಬಳಸಲಾಗುತ್ತಿದೆ. ’ಅಭಿವೃದ್ಧಿ ಅಂತರ’ಗಳು ಎಂದರೆ ಒಟ್ಟು ಜನಸಂಖ್ಯೆಯ ಅಭಿವೃದ್ಧಿಯ ಸೂಚಿಗಳಿಗೆ ಹೋಲಿಸಿದರೆ ಪ.ಜಾ. ಮತ್ತು ಪ.ಪಂ.ಗಳ ಅಭಿವೃದ್ಧಿ ಸೂಚಿಗಳು ಎಷ್ಟು ಕೆಳ ಮಟ್ಟದಲ್ಲಿವೆ ಎಂಬುದರ ಮಾಪನವಾಗಿದೆ. ಉದಾ: 2011ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆಯ ಸಾಕ್ಷರತೆ ಅನುಪಾತ ಶೇ.75.36. ಆದರೆ ಪ.ಜಾ. ಮತ್ತು ಪ.ಪಂ. ಸಾಕ್ಷರತಾ ಪ್ರಮಾಣ ಕ್ರಮವಾಗಿ ಶೇ.65.32 ಮತ್ತು ಶೇ.62.06. ಇಲ್ಲಿ ಅಭಿವೃದ್ಧಿ ಅಂತರ ಪ.ಜಾ.ಯಲ್ಲಿ ಶೇ.(-)10-04 ಅಂಶಗಳು ಮತ್ತು ಪ.ಪಂ. ದಲ್ಲಿ ಇದು ಶೇ.(-)13.30. ಇದೇ ರೀತಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸೂಚಿಗಳಲ್ಲಿ (ಉದಾ: ಶಿಶು ಮರಣ ಪ್ರಮಾಣ, ಆಯಸ್ಸು, ತಾಯಂದಿರ ಮರಣ ಪ್ರಮಾಣ ಇತ್ಯಾದಿ), ಮಕ್ಕಳು ಮತ್ತು ಮಹಿಳೆಯರಲ್ಲಿನ ಅನಿಮಿಯಾದ ಬಗ್ಗೆ, ವರಮಾನದ ಬಗ್ಗೆ, ಮಾನವ ಅಭಿವೃದ್ಧಿ ಸೂಚ್ಯಂಕದ ಅಂತರಗಳನ್ನು ಗುರುತಿಸಬಹುದು. ಆದರೆ ಈ ಬಗ್ಗೆ ಪ.ಜಾ. ಮತ್ತು ಪ.ಪಂ.ಗಳ ವಿವರಗಳನ್ನು ಪ್ರತ್ಯೇಕವಾಗಿ ಮಾಪನ ಮಾಡುವ ವ್ಯವಸ್ಥೆಯಿಲ್ಲ. ಉದಾ: ನೀತಿ ಆಯೋಗವು 2015-16ರ ಎನ್‌ಎಫ್‌ಎಚ್‌ಎಸ್ (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ)-5 ಸಮೀಕ್ಷೆಯನ್ನು ಆಧರಿಸಿ ಬಾರತದ ರಾಜ್ಯಗಳಲ್ಲಿ ಜಿಲ್ಲಾವಾರು ಬಹುಮುಖಿ ಬಡತನದ ಪ್ರಮಾಣವನ್ನು ಲೆಕ್ಕಹಾಕಿ ವರದಿ ಪ್ರಕಟಿಸಿದೆ. ಆದರೆ ಇದರಲ್ಲಿ ಪ.ಜಾ. ಮತ್ತು ಪ.ಪಂ.ಗಳ ಬಗ್ಗೆ ಮಾಹಿತಿಯಿಲ್ಲ. ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿಯ ಬಗ್ಗೆ, ಅದಕ್ಕೆ ಸಂಬಂಧಿಸಿದ ಸಾಂಖ್ಯಿಕ ವಿವರಗಳ ಬಗ್ಗೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಕಾಳಜಿಯಿಲ್ಲ. ಕರ್ನಾಟಕ ಮಾನವ ಅಭಿವೃದ್ಧಿ ವರದಿ 2015ರಲ್ಲಿ ಪ.ಜಾ. ಮತ್ತು ಪ.ಪಂ.ಗಳ ಕುರಿತ ಅಧ್ಯಾಯಗಳನ್ನು ಕೈಬಿಟ್ಟಿದ್ಯಾಕೆ ಎಂದು ಯಾರೂ ಅಧಿಕಾರಿಗಳನ್ನು ಕೇಳುತ್ತಿಲ್ಲ. ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಉಪಯೋಜನೆಗಳ ವಿವರವಾದ ಬಜೆಟ್ಟಿನಲ್ಲಿ ನೀಡಿದ ಅನುದಾನ, ಅದರಲ್ಲಿ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಹಾಗೂ ವೆಚ್ಚವಾದ ಮೊತ್ತದ ವಿವರಗಳನ್ನು ಏಕೆ ಕೈಬಿಡಲಾಗಿದೆ ಎಂಬುದರ ಬಗ್ಗೆ ಕೂಡ ಯಾರೂ ಅಧಿಕಾರಗಳನ್ನು ಪ್ರಶ್ನೆ ಮಾಡಿಲ್ಲ. ದಲಿತ ಮತ್ತು ಆದಿವಾಸಿ ಶಾಸಕರೂ ಈ ಬಗೆಯ ನಿರ್ಲಕ್ಷ್ಯದ ಬಗ್ಗೆ ಗಮನ ನೀಡುತ್ತಿಲ್ಲ, ಪ್ರಶ್ನೆ ಮಾಡುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಬಂಧದಲ್ಲಿ ಕರ್ನಾಟಕ ಸರ್ಕಾರ ಹೇಗೆ ದಲಿತರಿಗೆ ಮತ್ತು ಆದಿವಾಸಿಗಳಿಗೆ ಉಪಯೋಜನೆಗಳಲ್ಲಿ ಅನುದಾನ ನೀಡುವಲ್ಲಿ ಅನ್ಯಾಯ ಮಾಡುತ್ತಿದೆ ಎಂಬುದನ್ನು ಗುರುತಿಸಲು ಪ್ತಯತ್ನಿಸಲಾಗಿದೆ.

ಟಿಪ್ಪಣಿ: ಅಂಕಣ 3ರಲ್ಲಿನ ಮೊದಲ ಅಂಕಿಗಳು ಪ.ಜಾ. ಉಪಯೋಜನೆ ಅನುದಾನವನ್ನು ಮತ್ತು ಎರಡನೆಯ ಅಂಕಿಯು ಪ.ಪಂ. ಉಪಯೋಜನೆಯ ಅನುದಾನವನ್ನು ಪ್ರತಿನಿಧಿಸುತ್ತವೆ. ಹಾಗೂ ಮೂರನೆಯ ಅಂಕಿಯು ಉಪಯೋಜನೆಗಳು ಒಟ್ಟು ಮೊತ್ತವನ್ನು ಸೂಚಿಸುತ್ತವೆ. ಇದೇ ರೀತಿಯಲ್ಲಿ ಅಂಕಣ 4ರಲ್ಲಿನ ಮೊದಲ ಅಂಕಿಯು ಬಜೆಟ್ಟ ವೆಚ್ಚದಲ್ಲಿ ಪ.ಜಾ. ಉಪಯೋಜನೆಯ ಮೊತ್ತದ ಶೇಕಡ ಪ್ರಮಾಣವನ್ನು, ಎರಡನೆಯ ಅಂಕಿಯು ಬಜೆಟ್ ವೆಚ್ಚದಲ್ಲಿ ಪ.ಪಂ. ಉಪಯೋಜನೆಯ ಅನುದಾನದ ಶೇಕಡ ಪ್ರಮಾಣವನ್ನು ಮತ್ತು ಮೂರನೆಯದು ಒಟ್ಟು ಬಜೆಟ್ ವೆಚ್ಚದಲ್ಲಿ ಒಟ್ಟು ಪ.ಜಾ. ಮತ್ತು ಪ.ಪಂ. ಉಪಯೋಜನೆಯ ಮೊತ್ತದ ಶೇಡಕ ಪ್ರಮಾಣವನ್ನು ಪ್ರತಿನಿಧಿಸುತ್ತದೆ.

(1) ಈ ಕೋಷ್ಟಕದ ಪ್ರಕಾರ 2017-18ರಿಂದ 2023-24 ರವರೆಗೆ ಬಜೆಟ್ಟಿನ ಒಟ್ಟು ಗಾತ್ರದಲ್ಲಿ ಶೇ.೬೫.೭೨ರಷ್ಟು ಏರಿಕೆಯಾಗಿದ್ದರೆ ಉಪಯೋಜನೆಗಳ ಅನುದಾನ ಇದೇ ಅವಧಿಯಲ್ಲಿ ಶೇ.9.06ರಷ್ಟು ಏರಿಕೆಯಾಗಿದೆ.
(2) ರಾಜ್ಯದ ಒಟ್ಟು ಬಜೆಟ್ಟಿನ ಗಾತ್ರದಲ್ಲಿ ಉಪಯೋಜನೆಗಳ ಅನುದಾನ 2017-18ರಲ್ಲಿ ಶೇ.14.86ರಷ್ಟಿದ್ದುದು 2023-24ರಲ್ಲಿ ಶೇ.9.77ಕ್ಕಿಳಿದಿದೆ. ಪ.ಜಾ. ಮತ್ತು ಪ.ಪಂ. ಉಪಯೋಜನೆಗಳ ಅನುದಾನವು ಇದೇ ಅವಧಿಯಲ್ಲಿ ಅನುಕ್ರಮವಾಗಿ ಶೇ.10.56ರಿಂದ ಶೇ.6.90ಕ್ಕೆ ಮತ್ತು ಶೇ.4.28ರಿಂದ ಶೇ.2.86ಕ್ಕಿಳಿದಿದೆ.
(3) ಒಟ್ಟು ಬಜೆಟ್ಟಿನ ಮೊತ್ತ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ; ಆದರೆ ಉಪಯೋಜನೆಗಳ ಅನುದಾನ ಅದೇ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಇದು ಅನ್ಯಾಯ.
(4) ವಾಸ್ತವವಾಗಿ 2020-21ರ ನಂತರ ಅನುದಾನದ ಒಟ್ಟು ಮೊತ್ತದಲ್ಲಿಯೇ ಕಡಿಮೆಯಾಗುತ್ತಿದೆ. ಉದಾ: 2019-20ರಲ್ಲಿ ಉಪಯೋಜನೆಗಳ ಒಟ್ಟು ಅನುದಾನ ರೂ.30446.99 ಕೋಟಿಯಷ್ಟಿದ್ದುದು 2020-21ರಲ್ಲಿ ಇದು ರೂ. 27699.52 ಕೋಟಿಗೆ, 2021-22ರಲ್ಲಿ ರೂ.26001 ಕೋಟಿಗೆ ಇಳಿದಿದೆ. ಉಪಯೋಜನೆಗಳ 2023-24ರ ಒಟ್ಟು ಅನುದಾನವು 2019-20ರಲ್ಲಿ ನೀಡಿದ ಅನುದಾನಕ್ಕಿಂತ ಕಡಿಮೆಯಿದೆ.

(5) ದಲಿತರು ಮತ್ತು ಆದಿವಾಸಿಗಳ ಬಗ್ಗೆ ಸರ್ಕಾರದ ಆದ್ಯತೆಯು ಮೇಲುಮೇಲಿನದಾಗಿದೆ ಎಂಬುದು ಮೇಲಿನ ವಿವರಗಳಿಂದ ಸ್ಪಷ್ಟವಾಗುತ್ತದೆ.
(6) ಸರ್ಕಾರವು 2023-24ರ ಬಜೆಟ್ಟಿನಲ್ಲಿ ಒಪ್ಪಿಕೊಂಡಿರುವಂತೆ 2022-23ರ ಬಜೆಟ್ಟಿನ ಒಟ್ಟು ಮೊತ್ತದಲ್ಲಿ ಶೇ.70ರಷ್ಟು ಮಾತ್ರ ಜನವರಿ 2023ರವರೆಗೆ ವೆಚ್ಚವಾಗಿದೆ. ಒಟ್ಟು ಬಜೆಟ್ ವೆಚ್ಚದಲ್ಲಿಯೇ, ಸ್ಥಿತಿ ಹೀಗಿದ್ದರೆ ಉಪಯೋಜನೆಗಳ ಅನುದಾನದ ವೆಚ್ಚ ಸ್ಥಿತಿ ಏನಾಗಿರಬಹುದು. ಒಂದು ವರದಿಯ ಪ್ರಕಾರ ಇದರಲ್ಲಿ ಶೇ.50ರಷ್ಟು ವೆಚ್ಚವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮೂರನೇ ಗ್ಯಾರಂಟಿ: ಬಡ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿ

ನಮ್ಮ ತೀವ್ರ ಹಕ್ಕೊತ್ತಾಯ
ಈ ಮೇಲಿನ ಚರ್ಚೆ ಮತ್ತು ಅಂಕಿಅಂಶಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕೆಳಗಿನ ಒತ್ತಾಯ ಮಾಡಲು ಬಯಸುತ್ತೇವೆ.
(1) ಬಜೆಟ್ಟಿನ ಒಟ್ಟು ವೆಚ್ಚದಲ್ಲಿ  ಪ.ಜಾ. ಮತ್ತು ಪ.ಪಂ. ಉಪಯೋಜನೆಗಳಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಯಾವ ಆಧಾರದಲ್ಲಿ ಅನುದಾನವನ್ನು ನಿಗದಿ ಮಾಡಲಾಗುತ್ತಿದೆ ಎಂಬುದರ ವಿವರವನ್ನು ಬಜೆಟ್ಟಿನಲ್ಲಿ ಅಥವಾ ಅದರ ಸಂಪುಟಗಳಲ್ಲಿ ವಿವರ ನೀಡಬೇಕು. ಅಭಿವೃದ್ಧಿ ವೆಚ್ಚದ ಅಥವಾ ಆಡಳಿತ-ನಿರ್ವಹಣೆ ವೆಚ್ಚ ಕಳೆದು ರಾಜಸ್ವ ಸ್ವೀಕೃತಿಯ ಶೇ.24.1ರಷ್ಟನ್ನು ಉಪಯೋಜನೆಗಳಿಗೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ವಿವರ ಬಜೆಟ್ ಸಂಪುಟಗಳಲ್ಲಿ ಅಥವಾ ಬಜೆಟ್ ಭಾಷಣದಲ್ಲಿ ಇಲ್ಲ.
(2) ಈ ಉಪಯೋಜನೆಗಳು ಜಾರಿಗೆ ಬಂದು ಸರಿಸುಮಾರು ನಾಲ್ಕು ದಶಕ ಮೀರಿದೆ. ಈ ಅವಧಿಯಲ್ಲಿ ಉಪಯೋಜನೆಗಳಿಂದ ದಲಿತರಿಗೆ ಮತ್ತು ಆದಿವಾಸಿಗಳಿಗೆ ಏನೆಲ್ಲ ಅನುಕೂಲ ದೊರೆತಿದೆ, ಅವರ ಬದುಕನ್ನು ಇವು ಎಷ್ಟರಮಟ್ಟಿಗೆ ಉತ್ತಮಪಡಿಸಿವೆ ಎಂಬುದು ಸ್ಪಷ್ಟವಿಲ್ಲ. ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿ ಇದು ಹೇಗೆ ಅನುಷ್ಠಾನಗೊಳ್ಳುತ್ತಿದೆ ಎಂಬುದರ ಬಗ್ಗೆ ಖಚಿತ ಸೂಚನೆಗಳು ದೊರೆಯುತ್ತಿಲ್ಲ. ಈ ಯೋಜನೆಗಳನ್ನು ರೂಢಿಗತ ರೀತಿಯಲ್ಲಿ ಜಾರಿಮಾಡಿಕೊಂಡು ಬರಲಾಗುತ್ತಿದೆ. ಕಳೆದ 40-50 ವರ್ಷಗಳಲ್ಲಿ ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದಲಿತರ ಮತ್ತು ಆದಿವಾಸಿಗಳ ಸ್ಥಿತಿಗತಿಯೂ ಸಾಕಷ್ಟು ಬದಲಾವಣೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಉಪಯೋಜನೆಗಳ ಮೌಲ್ಯಮಾಪನವಾಗಬೇಕು. ದಲಿತರ ಮತ್ತು ಆದಿವಾಸಿಗಳಿಗೆ ಇವುಗಳಿಂದ ಎಷ್ಟರಮಟ್ಟಿಗೆ ಅನುಕೂಲ ದೊರೆಯುತ್ತಿದೆ ಎಂಬುದರ ಅಧ್ಯಯನ ನಡೆಯಬೇಕು. ಆಗ ಇದರಲ್ಲಿ ಏನೆಲ್ಲ ಬದಲಾವಣೆಗಳಾಗಬೇಕು ಎಂಬುದು ತಿಳಿಯುತ್ತದೆ.
(3) ಸರ್ಕಾರವು ಅಭಿವೃದ್ಧಿಗೆ ಸಂಬಂಧಿಸಿದಂತೆ ಔಟ್‌ಕಮ್ ಸೂಚಿಗಳ ಬಗ್ಗೆ ಮಾತನಾಡುತ್ತದೆ. ಔಟ್‌ಕಮ್ ಸೂಚಿಗಳೆಂದರೆ ಅಭಿವೃದ್ಧಿ ಕಾರ್ಯಕ್ರಮಗಳು ಸಾಧಿಸಿದ ನಿರೀಕ್ಷಿತ ಗುರಿಗಳ ವಿವರ. ಪ.ಜಾ. ಮತ್ತು ಪ.ಪಂ.ಗಳ ಉಪಯೋಜನೆಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಫಲಿತಗಳೇನು ಎಂಬುದನ್ನು ಪ್ರಾಯೋಗಿಕವಾಗಿಯಾದರೂ ಸರ್ಕಾರ ಪ್ರಕಟಿಸಬೇಕು.
(4) ಮುಖ್ಯವಾಗಿ ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಏನೆಲ್ಲ ಅಂಕಿಅಂಶಗಳನ್ನು ಕಲೆಹಾಕಿ ಪ್ರಕಟಿಸಲಾಗುತ್ತದೆಯೋ ಆ ಎಲ್ಲ ಅಂಕಿಅಂಶಗಳನ್ನು ದಲಿತರಿಗೆ ಮತ್ತು ಆದಿವಾಸಿಗಳಿಗೆ ಸಂಬಂಧಿಸಿದಂತೆ ವರದಿಗಳನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಉದಾ: ದಲಿತ ಮತ್ತು ಆದಿವಾಸಿ ಸಮುದಾಯಗಳಲ್ಲಿನ ಶಿಶು ಮರಣ ಪ್ರಮಾಣ, ಆಯಸ್ಸು, ಬಹುಮುಖಿ ಬಡತನದ ಪ್ರಮಾಣ, ಮಹಿಳೆಯರು ಮತ್ತು ಮಕ್ಕಳಲ್ಲಿ ಅನಿಮಿಯ (ರಕ್ತಹೀನತೆ/ಅಪೌಷ್ಟಿಕತೆ), ಕುಡಿಯುವ ನೀರಿನ ಸಂಪರ್ಕ ಇತ್ಯಾದಿ.
(5) ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಉಪಯೋಜನೆಗಳ ಅನುದಾನ, ಬಿಡುಗಡೆ ಮತ್ತು ವೆಚ್ಚವಾದ ಹಣಕಾಸಿನ ವಿವರಗಳನ್ನು ಪ್ರಕಟಿಸುವುದನ್ನು ಮತ್ತೆ ಆರಂಭಿಸಬೇಕು. ಈಗ 2021-22ರ ಆರ್ಥಿಕ ಸಮೀಕ್ಷೆಯಲ್ಲಿ ಈ ವಿವರಗಳನ್ನು 5 ಪುಟಗಳಲ್ಲಿ ಮುಗಿಸಲಾಗಿದೆ. ಇದರ ಬಗ್ಗೆ ಯೋಜನಾ ಇಲಾಖೆಗೆ ಏಕೆ ನಿರ್ಲಕ್ಷ್ಯ? ಇದೇ ರೀತಿಯಲ್ಲಿ ಕರ್ನಾಟಕ ಮಾನವ ಅಭಿವೃದ್ಧಿ ವರದಿಯಲ್ಲಿ ಕೈಬಿಟ್ಟಿರುವ ಪ.ಜಾ. ಮತ್ತು ಪ.ಪಂ. ಸಮುದಾಯಗಳ ಸ್ಥಿತಿಗತಿ-ಸ್ಥಾನಮಾನದ ಬಗ್ಗೆ ಸಿದ್ಧವಾಗುತ್ತಿರುವ 2021ರ ವರದಿಯಲ್ಲಿ ಅಧ್ಯಾಯಗಳನ್ನು ಪುನರಾರಂಭಿಸಬೇಕು.
(6) ಈಗಾಗಲೆ ಟೀಕೆಗೆ ಒಳಗಾಗಿರುವಂತೆ ಉಪಯೋಜನೆಗಳ ಅನುದಾನವನ್ನು ಸಾಮಾನ್ಯ ವಲಯಗಳಿಗೆ ನೀಡುವುದನ್ನು ನಿಲ್ಲಿಸಬೇಕು. ಮೆಟ್ರೋ ರೈಲಿಗೆ ಉಪಯೋಜನೆ ಬಾಬ್ತು ರೂ.45.28 ಕೋಟಿ ನೀಡಲಾಗಿದೆ ಎನ್ನಲಾಗಿದೆ. ಇದೇ ರೀತಿಯಲ್ಲಿ ಬಸ್ ತಂಗುದಾಣಗಳ, ಹೆದ್ದಾರಿಗಳ, ಚೆಕ್ ಡ್ಯಾಮುಗಳು ಇತ್ಯಾದಿಗಳಿಗೆ ಉಪಯೋಜನೆ ಅನುದಾನವನ್ನು ನೀಡಲಾಗುತ್ತಿದೆ. ಇದಕ್ಕೆ ತಕ್ಷಣ ಸಂಬಂಧಿಸಿದ ಕಾಯಿದೆಯ ಕಲಂ 7(ಸಿ)(ಡಿ)ಗಳಿಗೆ ತಿದ್ದುಪಡಿ ತಂದು ಎಲ್ಲರ ಅನುಕೂಲಕ್ಕಿರುವ ಇಂತಹ ಕಾರ್ಯಕ್ರಮಗಳಿಗೆ ಪ.ಜಾ. ಮತ್ತು ಪ.ಪಂ. ಹೆಸರಿನ ಅನುದಾನ ನೀಡುವುದನ್ನು ನಿಲ್ಲಿಸಬೇಕು.

ಕೊನೆಯದಾಗಿ ಉಪಯೋಜನೆಗಳನ್ನು ಸರ್ಕಾರ ಆನುಷಂಗಿಕವಾಗಿ ಅಥವಾ ಪ್ರಾಸಂಗಿಕವೆಂದು ಪರಿಗಣಿಸಬಾರದು. ಪ್ರಜ್ಞಾಪೂರ್ವಕವಾಗಿ ಚಾರಿತ್ರಿಕವಾಗಿ ಪ್ರತ್ಯೇಕೀಕರಣವನ್ನು ಸಾವಿರಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ಪ.ಜಾ. ಮತ್ತು ಪ.ಪಂ.ಗಳ ಅಭಿವೃದ್ಧಿಗೆ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿ.ಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...