ಕೊರೊನಾದ ಎರಡನೇ ಅಲೆ ಮತ್ತು ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟದ ನಡುವೆಯೇ ಮತ್ತೊಮ್ಮೆ ಏಪ್ರಿಲ್ ತಿಂಗಳು ಕಳೆದು ಮೇ ತಿಂಗಳಿಗೆ ಕಾಲಿಡಲಿದ್ದೇವೆ. ಮೇ 1 ಈ ದೇಶ ಮಾತ್ರವಲ್ಲದೆ ಇಡೀ ಜಗತ್ತಿನ ಕಾರ್ಮಿಕ ವರ್ಗಕ್ಕೆ ಒಂದು ರೀತಿಯಲ್ಲಿ ಸಂಭ್ರಮಾಚರಣೆಯಾದರೆ, ಕಾರ್ಮಿಕರನ್ನು ಸಂಘಟಿಸುವ ಕೆಲಸದ ದೀರ್ಘ ಪಯಣದ, ತಮ್ಮ ಹಕ್ಕುಗಳಿಗಾಗಿ ಸಂಘರ್ಷ ನಡೆಸಿದ, ಏಳುಬೀಳಿನ ನೆನಪುಗಳ ದಿನವೂ ಇದು.

ಖ್ಯಾತ ಎಡಪಂಥೀಯ ಕಾರ್ಮಿಕ ಸಂಘಟನೆಯ ನಾಯಕಿ, ಸ್ತ್ರೀವಾದಿ ಹಾಗು ಜನಪರ ಚಿಂತಕಿಯಾದ ರೋಸಾ ಲಕ್ಸಂಬರ್ಗ್ ಅವರ ಪ್ರಕಾರ ಕಾರ್ಮಿಕ ದಿನಾಚರಣೆಯ ಹುಟ್ಟು ಆಸ್ಟ್ರೇಲಿಯದಲ್ಲಾಗಿದ್ದು. ಕಾರ್ಮಿಕ ವರ್ಗವು ದಿನಕ್ಕೆ ಎಂಟು ಗಂಟೆಯ ಕೆಲಸದ ಅವಧಿಯ ಹಕ್ಕೊತ್ತಾಯವನ್ನು, ಒಂದು ದಿನದ ಸ್ವಯಂಘೋಷಿತ ರಜೆಯನ್ನು ಮತ್ತು ಆ ದಿನವನ್ನು ಸಭೆ ಹಾಗೂ ಮನರಂಜನೆಯ ಮುಖಾಂತರ ಕಳೆಯಬೇಕೆಂಬ ಬೇಡಿಕೆ ಮುಂದಿಟ್ಟಿದ್ದರಲ್ಲಿ ಮೇ ದಿನದ ಪರಿಕಲ್ಪನೆಯ ಹುಟ್ಟನ್ನು ಕಾಣಬಹುದು ಎನ್ನುತ್ತಾರೆ. 1856ರ ಏಪ್ರಿಲ್ 21ರಂದು ಇದಕ್ಕೆ ಕರೆ ನೀಡಲಾಗಿತ್ತು. ಇದು ನಂತರ ಆಸ್ಟ್ರೇಲಿಯಾದ ಕಾರ್ಮಿಕ ವರ್ಗಕ್ಕೆ ಹೊಸ ಹುರುಪು ನೀಡಿ ದೊಡ್ಡ ಪ್ರಮಾಣದ ಪ್ರಭಾವ ಬೀರಿತು. ಆದಕಾರಣ, ಈ ರೀತಿಯ ಹಕ್ಕೊತ್ತಾಯವನ್ನು ಪ್ರತಿ ವರ್ಷವೂ ಆಚರಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.

ಈ ಕಿಚ್ಚು ಜಗತ್ತಿನೆಲ್ಲೆಡೆಯೂ ಪಸರಿಸಿತು. ತದನಂತರದಲ್ಲಿ ಅಮೆರಿಕನ್ನರು ಇದೇ ರೀತಿಯ ಕರೆಯೊಂದನ್ನು ನೀಡಿ 1886ರ ಮೇ 1ರಂದು ತಮ್ಮ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದರು. ಅಂತೆಯೇ ಅಮೆರಿಕದ ನಗರಗಳಾದ್ಯಂತ ಸುಮಾರು 2 ಲಕ್ಷ ಕಾರ್ಮಿಕರು ತಮ್ಮ ಕೆಲಸವನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿ, ಒತ್ತಾಯಿಸಿದರು. ಪೊಲೀಸರು ಮತ್ತು ಕೆಲವು ಕಾನೂನು ನಿರ್ಬಂಧಗಳು, ಕಾರ್ಮಿಕರು ಸಂಘಟಿತರಾಗಿ ಈ ಮಟ್ಟದ ಹೋರಾಟವನ್ನು ನಡೆಸುವುದಕ್ಕೆ ತಾತ್ಕಾಲಿಕ ತಡೆಯೊಡ್ಡಿತು. ಇದಾಗ್ಯೂ, 1890ರ ಮೇ 1ರಂದು ಇದಕ್ಕಾಗಿ ದೊಡ್ಡ ಹೋರಾಟ ನಡೆಸುವುದಾಗಿ 1888ರಲ್ಲಿ ತೀರ್ಮಾನಿಸಲಾಯಿತು. ತಮ್ಮ ಎಂಟು ಗಂಟೆಗಳ ಕೆಲಸದಾವಧಿಯ ಬೇಡಿಕೆ ಈಡೇರಿದ ನಂತರವೂ ’ಮೇ ಡೇ’ ಅಥವಾ ’ಕಾರ್ಮಿಕರ ದಿನ’ ಆಚರಣೆಯನ್ನು ಕಾರ್ಮಿಕ ವರ್ಗವು ಕೈಬಿಡಲಿಲ್ಲ. ಎಲ್ಲಿಯವರಿಗೆಯೂ ಕಾರ್ಮಿಕ ವರ್ಗದ ಬೇಡಿಕೆಗಳೆಲ್ಲವೂ ಈಡೇರುವುದಿಲ್ಲವೋ, ಎಲ್ಲಿಯವರೆಗೂ ಆಳುವವರ್ಗ ಕಾರ್ಮಿಕರನ್ನು ಶೋಷಿಸುತ್ತಾ ಮುಂದುವರೆಯುತ್ತದೆಯೋ, ಅಲ್ಲಿಯವರೆಗೂ ಕಾರ್ಮಿಕರ ಪ್ರತಿರೋಧ ಮತ್ತು ಹೋರಾಟಗಳೊಂದಿಗೆ ಈ ದಿನದ ಆಚರಣೆ ಮುಂದುವರೆಯಲಿದೆ.

ತೀವ್ರ ಶೋಷಣೆಯ ಈ ಕಹಿ ದಿನಗಳು ಒಂದು ಮಟ್ಟಕ್ಕೆ ಸುಧಾರಣೆ ಕಂಡಮೇಲೆಯೂ, ಕಾರ್ಮಿಕವರ್ಗಕ್ಕೆ ಜಯಸಿಕ್ಕ ನಂತರವೂ ಕಾರ್ಮಿಕ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಮಿಕರು ಹಿಂದೆ ಅನುಭವಿಸಿದ ಕಷ್ಟಗಳು ಮತ್ತು ತೊಂದರೆಗಳನ್ನು ನೆನೆಯುವ ಸಲುವಾಗಿಯಾದರೂ ಮನುಕುಲವು ಈ ದಿನವನ್ನು ಆಚರಿಸಲಿದೆ ಎಂದು ಲಕ್ಸಂಬರ್ಗ್ ಅಭಿಪ್ರಾಯಪಟ್ಟಿದ್ದರು. ಪರಿಸ್ಥಿತಿಯು ಇನ್ನಷ್ಟು ಸುಧಾರಿಸಬಹುದು ಎಂದು ಎಲ್ಲರೂ ನಂಬಿದ್ದರು.
ಊಳಿಗಮಾನ್ಯ ಪದ್ಧತಿಯು ಈ ಜಗತ್ತಿನಲ್ಲಿ ಬಹುಸಂಖ್ಯಾತರಾದ ಕಾರ್ಮಿಕರಿಗೆ ಆರ್ಥಿಕ-ಸಾಮಾಜಿಕ ಮತ್ತು ಮಾನವ ಹಕ್ಕುಗಳನ್ನು ನಿರಾಕರಿಸಿತ್ತು. ಕೈಗಾರಿಕರಣವು ಇದನ್ನು ಸುಧಾರಿಸಬಹುದು ಎಂದು ನಂಬಲಾಗಿತ್ತು. ಆದರೆ, ಹಾಗಾಗಲಿಲ್ಲ. ಬಂಡವಾಳಶಾಹಿ ವ್ಯವಸ್ಥೆಯಲ್ಲೂ ಕಾರ್ಮಿಕರ ತುಳಿತ ಮುಂದುವರೆಯಿತು. ಅದರ ವಿರುದ್ಧವೂ ಕಾರ್ಮಿಕ ಸಂಘಟನೆಗಳು ಸೆಣಸಿದವು. ಪರಿಸ್ಥಿತಿ ಬಹಳಷ್ಟು ಸುಧಾರಿಸಿದರೂ, 20ನೇ ಶತಮಾನದ ಉತ್ತರಾರ್ಧದಲ್ಲಿ ಕಂಡುಬಂದ ನವ ಉದಾರವಾದ ಬೃಹತ್ತಾಗಿ ಬೆಳೆದು, ಜಾಗತೀಕರಣದ ಮತ್ತು ಖಾಸಗೀಕರಣ ಒಟ್ಟಿಗೆ ಸೇರಿ ಜಗತ್ತಿನೆಲ್ಲೆಡೆ ಕಾರ್ಮಿಕರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಅಸಮಾನತೆಯು ನವಉದಾರವಾದಿ ಕಾಲಘಟ್ಟದಲ್ಲಿ ವ್ಯಾಪಕವಾಗಿದೆ ಮತ್ತು ಇನ್ನಷ್ಟು ಆಳವಾಗಿದೆ ಎಂದು ಇತ್ತೀಚಿನ ಸಮೀಕ್ಷೆಗಳೆಲ್ಲವೂ ದೃಢಪಡಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಅಗತ್ಯ ಮತ್ತಷ್ಟು ಹೆಚ್ಚಿದೆ. ಆದರೆ, ಕಾರ್ಮಿಕ ಸಂಘಟನೆಗಳಡಿಯಲ್ಲಿ ಒಂದಾಗಿ ಹೋರಾಟ ನಡೆಸುವ `bargaining power’ನಲ್ಲಿ ಕಾರ್ಮಿಕರ ಹಿತರಕ್ಷಣೆ ಅಡಗಿದೆ ಎಂದು ಚೆನ್ನಾಗಿಯೇ ಅರಿತಿರುವ ಖಾಸಗಿ ವಲಯ ಮತ್ತು ಸರ್ಕಾರಿ ಆಳುವವರ್ಗ, ಕಾರ್ಮಿಕ ಸಂಘಟನೆಗಳ ಮೇಲೆ ನಿರಂತರವಾಗಿ ದಾಳಿಮಾಡುತ್ತಿದೆ. ಅವನ್ನು ಶಕ್ತಿಹೀನವನ್ನಾಗಿ ಮಾಡುತ್ತಾ ಕಾರ್ಮಿಕರ ಸುಲಿಗೆ ಮಾಡುತ್ತಿವೆ.

ಸುಮಾರು 6000 ಕಾರ್ಮಿಕರು ಕೆಲಸ ನಿರ್ವಹಿಸುವ ಅಮೆಜಾನ್ ಕಂಪನಿಯ ಅಲಬಾಮ ಉಗ್ರಾಣದಲ್ಲಿ, ಕಾರ್ಮಿಕರನ್ನು ಪ್ರತಿನಿಧಿಸುವ ಸಂಘಟನೆಯಾಗಿ RWDSU(Ritail, Wholrsale and Department Store Union) ಹೊರಹೊಮ್ಮಲು, 2021 ಏಪ್ರಿಲ್ ೮ರಂದು ನಡೆದ ಚುನಾವಣೆಯು ಇದಕ್ಕೆ ಸೂಕ್ತ ಉದಾಹರಣೆಯಾಗಿ ನಿಂತಿದೆ. ಈ ಚುನಾವಣೆಯಲ್ಲಿ RWDSU ಪರ ಹೆಚ್ಚಿನ ಕಾರ್ಮಿಕರು ಮತ ಚಲಾಯಿಸಲಿಲ್ಲ. ಇದಕ್ಕೆ ಕಾರಣ ಅಮೆಜಾನ್ ಕಂಪನಿಯ ಕಾರ್ಮಿಕ ವಿರೋಧಿ ನೀತಿ ಎಂಬುದು ಸ್ಪಷ್ಟವಾಗಿದೆ. ಆದರೂ ಅಮೆರಿಕದ ನೆಲದಲ್ಲಿ, ಈ ಸಂಸ್ಥೆಯಲ್ಲಿ 7 ವರ್ಷಗಳ ನಂತರ ಕಾರ್ಮಿಕರ ತಮ್ಮ ಹಕ್ಕುಗಳಿಗಾಗಿ ನಡೆಸಿದ ಈ ಹೋರಾಟ ಐತಿಹಾಸಿಕ ಬದಲಾವಣೆ ಎಂದು ವಿಶ್ಲೇಷಿಸಲಾಗುತ್ತಿದೆ. 25 ವರ್ಷಕ್ಕೂ ಹೆಚ್ಚು ಕಾಲ ಅಸ್ತಿತ್ವದಲ್ಲಿರುವ ಅಮೆಜಾನ್ ಮತ್ತು ಇನ್ನಿತರ ಬಹುರಾಷ್ಟ್ರೀಯ ಕಂಪನಿಗಳು, ವಿವಿಧ ರೀತಿಯ ಕಾರ್ಮಿಕ ವಿರೋಧಿ ನೀತಿಗಳನ್ನು ಪಾಲಿಸುತ್ತ ಬಂದಿದ್ದು, ಅವರು ಸಂಘಟಿತರಾಗುವುದನ್ನು ತಡೆದಿರುವುದಲ್ಲದೆ, ತಮ್ಮ ಹಕ್ಕುಗಳನ್ನು ಒತ್ತಾಯಿಸದಂತೆ ನೋಡಿಕೊಂಡಿವೆ. ಕಾರ್ಮಿಕರು ತಮ್ಮನ್ನು ತಾವು ಸಂಘಟಿಸಿಕೊಳ್ಳುವ ಮುನ್ಸೂಚನೆಗಳನ್ನು ಪತ್ತೆಹಚ್ಚಿ ಅವನ್ನು ಹೊಸಕಿಹಾಕುವ ತಂತ್ರಗಾರಿಕೆಗಳನ್ನು ರೂಪಿಸಿಕೊಂಡಿದೆ. 2020ರಲ್ಲಿ ಅಮೆಜಾನ್ ಕಂಪನಿಯು ಈ ಕೆಲಸವನ್ನು ನಿರ್ವಹಿಸುವುದಕ್ಕಾಗಿಯೇ ವಿಶ್ಲೇಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದನ್ನು ನಾವು ಗಮನಿಸಬಹುದು. ಅಲ್ಲದೆ, ಕಾರ್ಮಿಕ ಸಂಘಟನೆಯನ್ನು ತಡೆಯುವುದಕ್ಕೆ ಮತ್ತು ಈ ರೀತಿಯ ಪ್ರಯತ್ನಗಳನ್ನು ನಿವಾರಿಸುವುದಕ್ಕೆ ಬಹುತೇಕ ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಾರ್ಯನಿರ್ವಾಹಕರಿಗೆ ತರಬೇತಿಯನ್ನೂ ನೀಡುತ್ತವೆ. ಇವೆಲ್ಲದರ ಫಲವಾಗಿ ಕಾರ್ಮಿಕ ಹಕ್ಕುಗಳ ಪರವಾಗಿ ನೆಪಮಾತ್ರಕ್ಕಾದರೂ ಮಾತನಾಡುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರವರ ಆಡಳಿತದಲ್ಲೂ ಕಾರ್ಮಿಕರು ತಮ್ಮ ಹಕ್ಕನ್ನು ಪಡೆದುಕೊಳ್ಳುವುದಕ್ಕೆ ಕ್ರಮಿಸಬೇಕಾದ ದಾರಿ ದೂರವಿದೆ ಎಂಬುದು ಸ್ಪಷ್ಟ.

ಭಾರತದ ಕಾರ್ಮಿಕರ ಪರಿಸ್ಥಿತಿಯೂ ಬಹಳ ಭಿನ್ನವಾಗಿಲ್ಲ. ಬದಲಿಗೆ, ಇನ್ನಷ್ಟು ಕ್ಲಿಷ್ಟಕರವಾಗಿದೆ ಮತ್ತು ಸಂಕಷ್ಟದಲ್ಲಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕಾರ್ಮಿಕರ ಜೀವನ ಬಹಳ ಪೆಟ್ಟುತಿಂದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಹಳಷ್ಟು ಫ್ಯಾಕ್ಟರಿ ಮತ್ತು ಕಂಪನಿಗಳು ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದ್ದಲ್ಲದೆ, ವೇತನಗಳನ್ನು ಸರಿಯಾದ ಸಮಯಕ್ಕೆ ನೀಡಿಲ್ಲ. ಇನ್ನು ಬಹಳಷ್ಟು ಕಡೆ ವೇತನವನ್ನು 10-60% ವರೆಗೂ ಕಡಿತಗೊಳಿಸಲಾಗಿದೆ. ಕಾರ್ಮಿಕರು ಮಾತ್ರವಲ್ಲದೆ ಸಣ್ಣ ಉದ್ದಿಮೆಗಳೂ ದೊಡ್ಡ ಮಟ್ಟದ ನಷ್ಟ ಅನುಭವಿಸಿ ಚೇತರಿಸಿಕೊಳ್ಳಲಾಗದಂತ ಪರಿಸ್ಥಿತಿಗೆ ತಲುಪಿವೆ ಅಥವಾ ಈಗಾಗಲೆ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿವೆ.

ಇವೆಲ್ಲದರ ಜೊತೆಗೆ ನೆನಪಿನಲ್ಲಿಡಬೇಕಾದ ಮತ್ತೊಂದು ಸಂಗತಿ ವೇಗವಾಗಿ ಬೆಳೆಯುತ್ತಿರುವ ’ಗಿಗ್ ಆರ್ಥಿಕತೆ’ (Gig Economy). ಇದರಲ್ಲಿ ಉದ್ಯೋಗಿ-ಉದ್ಯೋಗದಾತ ನಡುವೆ ಸಾಮಾನ್ಯವಾಗಿ ಕಂಡುಬರುವ ಸಂಬಂಧಗಳು ಕಾಣಸಿಗುವುದಿಲ್ಲ. ಇದರಲ್ಲಿ ಆಫೀಸುಗಳಾಗಲಿ, ಒಂದೇ ಕಂಪೆನಿಗೆ ದುಡಿಯುವ ಪೂರ್ಣಾವಧಿಯ ಕೆಲಸಗಳು ಇರುವುದಿಲ್ಲ.

ಬದಲಿಗೆ ಶ್ರಮಿಕರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಕಂಪೆನಿಯೊಂದಿಗೆ ಜೊತೆಗೂಡಿ ತಾತ್ಕಾಲಿಕ ಮತ್ತು ಅನಿರ್ಬಂಧಿತ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಾರೆ. ಈ ರೀತಿಯ ಆರ್ಥಿಕತೆಯು ಬಹಳಷ್ಟು ಬಾರಿ ಇಂಟರ್‌ನೆಟ್ ಮತ್ತು ಡಿಜಿಟಲ್ Platformಗಳ ಮೇಲೆ ಅವಲಂಬಿತವಾಗಿರುವ ಕಾರಣ ಅವನ್ನು ’ಪ್ಲಾಟ್ಫಾರ್ಮ್ ಆರ್ಥಿಕತೆ’ (Platform economy) ಎಂದೂ ಕರೆಯುವುದುಂಟು.

ದಿನನಿತ್ಯದ ಕೆಲಸಗಳಿಗೆ ನಾವು ಇವತ್ತು ಅವಲಂಬಿಸಿರುವ Uber, Ola, Swiggy  ಮತ್ತು Zomato ಇದಕ್ಕೆ ಸೂಕ್ತ ಉದಾಹರಣೆಗಳು. ಈ ಗಿಗ್ ಆರ್ಥಿಕತೆಯಲ್ಲಿ ಜೀವನ ಕಂಡುಕೊಂಡಿರುವವರನ್ನು ಕಾರ್ಮಿಕರೆಂದು ಕಾಣುವುದಿಲ್ಲ. ’Partner’ ಎಂದು ಕರೆಸಿಕೊಳ್ಳುವ ಇವರ ಸೇವೆಗಳು ಕಾರ್ಮಿಕ ನೀತಿಗಳಿಗೆ ಒಳಪಡದೇ ಉಳಿದುಬಿಡುತ್ತದೆ. ಆದಕಾರಣ, ಇವರು ಶೋಷಣೆಗೆ ಒಳಪಡುವ ಸಂಭಾವ್ಯತೆ ಹೆಚ್ಚಿದ್ದರೂ ಅದಕ್ಕೆ ಪರಿಹಾರಗಳನ್ನು ಕೇಳುವುದು ಮತ್ತು ಒದಗಿಸುವುದು ಸವಾಲಿನ ವಿಷಯವಾಗಿ ಪರಿಣಮಿಸಿದೆ.

ಏಪ್ರಿಲ್ 2ರಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರತಾಪ್ ಎಂಬ ಚಾಲಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು, ಈ ವಲಯವು ಕಾರ್ಮಿಕರಿಗೆ ಒಡ್ಡಿರುವ ಸಮಸ್ಯೆಗಳನ್ನು ಸೂಚಿಸುತ್ತದೆ. ಕೊರೊನಾ ಕಾಲದಲ್ಲೂ ಈ ಕಾರ್ಮಿಕರ ಕಷ್ಟಗಳು ಹೇಳತೀರದು. ಬರುವ ಅಷ್ಟೋ-ಇಷ್ಟೋ ಆದಾಯವು ಕಡಿಮೆಯಾಗಿದ್ದಲ್ಲದೆ, ಬಹಳಷ್ಟು ಜನರು ಪೊಲೀಸರಿಂದ ಲಾಠಿ ಏಟನ್ನೂ ತಿಂದಿದ್ದಾರೆ. ಆದರೆ ಈ ಗಿಗ್ ಆರ್ಥಿಕತೆಯ ಆಧಾರದಲ್ಲಿ ನಡೆಯುವ ಬಹುರಾಷ್ಟ್ರೀಯ ಡಿಜಿಟಲ್ ಕಂಪನಿಗಳ ಮತ್ತು ದೊಡ್ಡ ಉದ್ದಿಮೆದಾರರ ಲಾಭ ಹೆಚ್ಚಾಗುತ್ತಲೇ ಸಾಗಿದೆ. ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕಿದ್ದ ಸರ್ಕಾರವೂ ಕೂಡ ಬಂಡವಾಳಶಾಹಿ ಉದ್ಯಮಗಳ ಪರವಾಗಿ ನಿಂತು ಫೆಬ್ರವರಿಯಲ್ಲಿ ನಲವತ್ನಾಲ್ಕು ಕಾರ್ಮಿಕ ನೀತಿಗಳನ್ನು ರದ್ದುಗೊಳಿಸಿವೆ. ಬದಲಿಗೆ ಕೇವಲ ನಾಲ್ಕು ಸಂಹಿತೆಗಳನ್ನು ಮುಂದಿಟ್ಟು ಕಾರ್ಮಿಕರನ್ನು ಮತ್ತಷ್ಟು ಆರ್ಥಿಕ-ಸಾಮಾಜಿಕ ಅಭದ್ರತೆಗೆ ನೂಕಿರುವುದು ಮಾತ್ರವಲ್ಲದೆ ಅನಾರೋಗ್ಯದ ಅಂಚಿಗೆ ದೂಡಿವೆ.

ಕೊರೊನಾದಂತಹ ಇಕ್ಕಟ್ಟಿನ ಸಂದರ್ಭದಲ್ಲೂ, ಈ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಶ್ರಮಿಕವರ್ಗ, ರೈತರು ಮತ್ತು ಅವರನ್ನು ಪ್ರತಿನಿಧಿಸುವ ಪ್ರಗತಿಪರ ಸಂಘಟನೆಗಳ ಒಗ್ಗೂಡಿ ಇತಿಹಾಸದಲ್ಲೇ ಜಗತ್ತಿನ ಅತಿದೊಡ್ಡ ಪ್ರತಿಭಟನೆಯನ್ನು 2020 ನವೆಂಬರ್ 25ರಂದು ನಡೆಸಿದರು. ಇದರಲ್ಲಿ 25 ಕೋಟಿಗೂ ಹೆಚ್ಚು ಜನ ಪಾಲ್ಗೊಂಡಿದ್ದರು. ಇದಾಗ್ಯೂ ಸರ್ಕಾರವು ತನ್ನ ನಿಲುವನ್ನ ಬದಲಾಯಿಸಿಕೊಂಡಿಲ್ಲ. ಇಲ್ಲಿ ನಾವು ಗಮನಿಸಬೇಕಾದದ್ದು, ಸರ್ಕಾರದ ನಡೆಯು ನವಉದಾರವಾದದ ಕಾಲಘಟ್ಟದಲ್ಲಿ ಈ ಹಿಂದಿನ ಸಂದರ್ಭಗಳಿಗಿಂತ ವಿಭಿನ್ನವಾಗಿರುತ್ತದೆ. ಬಹಳಷ್ಟು ಬಾರಿ ನಾವು ತಿಳಿದಿರುವಂತೆ ನವಉದಾರವಾದದ ಕಾಲಘಟ್ಟದಲ್ಲಿ ಮಾರುಕಟ್ಟೆಯು ದುಡಿಯುವ ವರ್ಗವನ್ನು ಶೋಷಿಸುವುದನ್ನು ತಪ್ಪಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಮಾತ್ರವಲ್ಲದೆ, ಸರ್ಕಾರವೇ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಿಡುವ ಯಂತ್ರವಾಗುತ್ತದೆ.

ಅದಕ್ಕಾಗಿಯೇ, ಈ ಕಾಲಘಟ್ಟದಲ್ಲಿ ಕಾರ್ಮಿಕ ಸಂಘಟನೆಗಳು ಮತ್ತಷ್ಟೂ ಜವಾಬ್ದಾರಿಯುತವಾಗಿ, ತೀಕ್ಷ್ಣವಾದ ನಡೆಗಳ ಮೂಲಕ ಮಾರುಕಟ್ಟೆ ಮತ್ತು ಅದನ್ನು ಆಳುವ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ನಿಲ್ಲುವುದಲ್ಲದೆ, ತನ್ನ ನೀತಿಗಳ ಮೂಲಕ ಬಂಡವಾಳಶಾಹಿ ಹಿತಾಸಕ್ತಿಗಳನ್ನು ಕಾಪಾಡುವ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಮೆಟ್ಟಿನಿಂತು, ಸರ್ಕಾರಗಳನ್ನೂ ದಿಟ್ಟವಾಗಿ ಎದುರಿಸಬೇಕಾಗುತ್ತದೆ. ಅಂತೆಯೇ ಗಿಗ್ ವಲಯದಲ್ಲಿ ಕೆಲಸಮಾಡುವವರನ್ನೂ ಒಳಗೊಳ್ಳುವ ಕಾರ್ಮಿಕ ಸಂಘಟನಾತ್ಮಕ ಶಕ್ತಿಯನ್ನು ನಾವಿಂದು ತುರ್ತಾಗಿ ಕಂಡುಕೊಳ್ಳುಬೇಕಿದೆ.

ಶಶಾಂಕ್
ಎನ್‌ಐಎಎಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಪ್ರಗತಿಪರ-ಜನಪರ ಚಳವಳಿಗಳ ಬಗ್ಗೆ ಆಸಕ್ತಿ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here