ಬಿಜೆಪಿ ಸರ್ಕಾರ ನಡೆಸುತ್ತಿರುವ ಸಾರ್ವಕರ್ ಉತ್ಸವವನ್ನು ಟೀಕಿಸಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕ್ಷಮೆ ಕೇಳಿ ಜೈಲಿಂದ ಬಿಡುಗಡೆಯಾದ ನಂತರ ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಾಟ ನಡೆಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಾಧನೆಗಳಿಲ್ಲದ ಬಿಜೆಪಿ ಸರ್ಕಾರ ವೈಫಲ್ಯ ಮರೆಮಾಚಲು ಜನೋತ್ಸವ ಬದಲಿಗೆ ಈ ಉತ್ಸವಗನ್ನು ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಸಾರ್ವಕರ್ ಸ್ವಾತಂತ್ರ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ? ಸಾರ್ವಕರ್ ಸೆರೆವಾಸದಲ್ಲಿದ್ದಾಗ ಬ್ರಿಟೀಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ?” ಎಂದು ಅವರು ಸರಣಿ ಪ್ರಶ್ನೆಗಳನ್ನು ಮಾಡಿದ್ದಾರೆ.
ಸಾವರ್ಕರ್ ಜೈಲಿಂದ ಬಿಡುಗಡೆಯಾದ ನಂತರ ಎಷ್ಟು ಹೋರಾಟ ಮಾಡಿದರು? ಅದರ ಪರಿಣಾಮಗಳೇನು?ಮುಸ್ಲೀಂ ಲೀಗ್ ಜತೆ ಅವರು ದೇಶದ ಹಲವು ಕಡೆಗಳಲ್ಲಿ ಸರ್ಕಾರ ರಚಿಸಿದ್ದು ಯಾಕೆ? ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಯಾಕೆ? ಧರ್ಮದ ಆಧಾರದ ಮೇಲೆ ನಮ್ಮ ದೇಶ ವಿಭಜನೆ ಮಾಡಬೇಕು ಎಂದು ಮೊದಲು ಧ್ವನಿ ಎತ್ತಿದ ಸಾವರ್ಕರ್ ಪೂಜೆ ಯಾಕೆ ಮಾಡುತ್ತಿದ್ದೀರಿ? ಸಾರ್ವಕರ್ ನಾಸ್ತಿಕರಾಗಿದ್ದರು, ಈಗ ಪ್ರತಿ ಗಣೇಶೋತ್ಸವದ ಪೆಂಡಾಲ್ ನಲ್ಲಿ ಸಾರ್ವಕರ್ ಫೋಟೋ ಇಡುತ್ತಿರುವುದೇಕೆ? ಆ ಮೂಲಕ ದೇವರಿಗೆ ಅಪಮಾನ ಮಾಡುತ್ತಿರುವುದೇಕೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
1940ರ ಮಥುರಾದಲ್ಲಿ ನಡೆದ ಹಿಂದು ಮಹಾಸಭಾ ಅಧಿವೇಶನದಲ್ಲಿ ಸಾರ್ವಕರ್ ಅವರು ನಾನು ಬ್ರಿಟೀಷರ ಸೇನೆಗೆ 1 ಲಕ್ಷ ಯೋಧರನ್ನು ಸೇರಿಸಿದ್ದೇನೆ ಎಂದು ಬಹಿರಂಗವಾಗಿ, ಹೆಮ್ಮೆಯಿಂದ ಹೇಳಿಕೊಂಡಿದ್ದರು. ಎರಡನೇ ಮಹಾಯುದ್ಧದಲ್ಲಿ ಸಾರ್ವಕರ್ ಅವರು ಬ್ರಿಟೀಷರಿಗೆ ಸಹಕಾರ ನೀಡುವುದಾಗಿ ಅಂದಿನ ವೈಸರಾಯ್ ಗಿಲ್ ಲಿತ್ ಗೌ ಅವರಿಗೆ ತಿಳಿಸಿದರು. ಸಾರ್ವಕರ್ ಕ್ಷಮಾಪಣಾ ಪತ್ರ ಬರೆದಿದ್ದು ಮಾಸ್ಟರ್ ಸ್ಟ್ರೋಕ್ ಆದರೆ ಅವರು 1929 ಆ.1ರಿಂದ 1947ರ ವರೆಗೆ ಬ್ರಿಟೀಷರಿಂದ 60 ರೂ. ಪಿಂಚಣಿ ಪಡೆದಿದ್ದು ಯಾಕೆ? ಅಲ್ಲದೆ ತಮಗೆ ತಾವೇ ವೀರ ಸಾರ್ವಕರ್ ಎಂಬ ಬಿರುದು ಕೊಟ್ಟಿಕೊಂಡ ಅವರೆಂಥ ಹೋರಾಟಗಾರ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಅವರು ಮಠಗಳಿಗೆ 30%, ಗುತ್ತಿಗೆದಾರರಿಗೆ 40%, ಬಿಬಿಎಂಪಿಯಲ್ಲಿ 50%, ತಮ್ಮ ಕಾರ್ಯಕರ್ತರಿಗೆ 60% ಕಮಿಷನ್ ನಿಗದಿ ಮಾಡಿದ್ದಾರೆ. ರೈತರು ಕಣ್ಣೀರು ಹಾಕುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಎರಡು ಪತ್ರ ಬರೆಯುತ್ತಿದ್ದಾರೆ. ಎಲ್ಲ ನೇಮಕಾತಿಯಲ್ಲಿ ಅಕ್ರಮ ನಡೆದು ಯುವಕರ ಭವಿಷ್ಯ ನಾಶವಾಗುತ್ತಿದೆ. ಕೋಮುಗಲಭೆ ಸೃಷ್ಟಿಸುತ್ತಿದ್ದೀರ. ಶಿವಮೊಗ್ಗದಲ್ಲಿ ಕೋಮುಗಲಭೆಯಿಂದ ಸಣ್ಣ ವ್ಯಾಪಾರಿಗಳಿಗೆ 300 ಕೋಟಿ ರೂ. ನಷ್ಟವಾಗಿದೆ. ಇವರ ಆಡಳಿತದಲ್ಲಿ ರಸ್ತೆ ಗುಂಡಿಗೆ ಸಾವು ಸಂಭವಿಸುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಬಿಜೆಪಿಯವರಿಗೆ ಸಿದ್ದರಾಮಯ್ಯ ಏನು ತಿಂದರು, ಡಿ.ಕೆ. ಶಿವಕುಮಾರ್ ಏನು ಹೇಳಿದರು ಎಂಬುದರ ಮೇಲೆ ಆಸಕ್ತಿ ಇದೆ. ಕರ್ನಾಟಕದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾರ್ವಕರ್, ಹಿಂದುತ್ವ ಎಂಬಂತೆ ಭಾವಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಹಾರ ವಿಧಾನಸಭೆಯಿಂದ ಹೊರನಡೆದ ಬಿಜೆಪಿ: ವಿಶ್ವಾಸಮತ ಗೆದ್ದ ನಿತೀಶ್ ಕುಮಾರ್