Homeಮುಖಪುಟದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟ ನರಮನುಷ್ಯರು!

ದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟ ನರಮನುಷ್ಯರು!

- Advertisement -
- Advertisement -

ದೇವರಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ!
-ಕುವೆಂಪು (ಅರ್ಧಚಂದ್ರ)

“ಮಗುವಿನ ಪಾಲಿಗೆ ಗಗನದೊಳಲೆಯುವ ಚಂದಿರನು ದೇವರ ಪೆಪ್ಪರಮೆಂಟು! ಅದು ಎಷ್ಟೇ ತಿಂದರು ಖರ್ಚೇ ಆಗದು..”- ಮಗುವಿನ ಕಲ್ಪನಾ ವಿಲಾಸಕ್ಕೆ ಕುವೆಂಪು ಕೊಟ್ಟ ಅಮೃತ ರೂಪಕ ದೇವರ ಪೆಪ್ಪರಮೆಂಟು! ಆದರೆ ಇದೀಗ ಈ ಭೂತಳದ ಮನುಷ್ಯರು ಆ ದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟಿದ್ದಾರೆ.

ಬಹುಶಃ ಮಾನವನ ಇತಿಹಾಸದಲ್ಲಿ ಚಂದ್ರನ ಕುರಿತು ಬರೆದಿರುವಷ್ಟು ವಿಪುಲ ಸಾಹಿತ್ಯ ಬೇರಾವ ಆಕಾಶಕಾಯಗಳ ಬಗ್ಗೆಯೂ ಇಲ್ಲ. ಕವಿ ಸಮಯಕ್ಕೆ ಚಂದ್ರನೇ ಪ್ರಥಮ ಪುರುಷ. ಚಕೋರ ಪಕ್ಷಿಗೆ ಚಂದ್ರಮನ ಚಿಂತೆ; ಚಂದ್ರನ ಬೆಳಕಿಲ್ಲದೆ ಪ್ರಣಯಿಗಳು ಹಾಡಿ ನಲಿಯರು. ಕಬ್ಬಿನ ತೋಟಕ್ಕೆ ಬೆಳದಿಂಗಳ ಬೆಳಕನ್ನು ಹಾಯಿಸುತ್ತಿದ್ದಾರೆಂದು ಕವಿಯೊಬ್ಬನ ಉತ್ಪ್ರೇಕ್ಷೆ! ಮಂಥರೆ ಮುಕುರದಲ್ಲಿ ತೋರಿಸಿದ ಚಂದ್ರನನ್ನು ಕಂಡು ರಚ್ಚೆ ಹಿಡಿದಿದ್ದ ಶಿಶು ರಾಮ ನಲಿದನಂತೆ. (ಕುವೆಂಪು ರಾಮಾಯಣ)

ಹೀಗೆ ಸೂರ್ಯನ ಸುಡುಬಿಸಿಲನ್ನು ಪ್ರತಿಫಲಿಸಿ ಇಳೆಗೆ ತಿಂಗಳಾಗುವ ಚಂದ್ರ ಕತ್ತಲೆ ಲೋಕದ ಕಣ್ಣು! ಕವಿಗಳು, ವಿಜ್ಞಾನಿಗಳು ಕಾಲಕಾಲಕ್ಕೆ ಚಂದ್ರನ ಬಗ್ಗೆ ವಿಪುಲ ಸಾಹಿತ್ಯವನ್ನು ರಚಿಸಿದ್ದಾರೆ. ಇಂತಪ್ಪ ಚಂದ್ರನಲ್ಲಿಗೆ ಹೋಗಿ ಅಲ್ಲಿಯೂ ತಂತಮ್ಮ ವಸಾಹತುಗಳನ್ನು ಸ್ಥಾಪಿಸಿ, ಗಣಿಗಾರಿಕೆ ನಡೆಸಿ, ಕೈಗಾರಿಕೆಗಳನ್ನು ವಿಸ್ತರಿಸಿ ಆ ನೈಸರ್ಗಿಕ ಉಪಗ್ರಹವನ್ನೂ ಮುಕ್ಕು ಮಾಡಲು ಹೊರಟಿದ್ದಾರೆ ಈ ನರಮಾನವರು. ಭೂಮಿಯ ಮೇಲ್ಮೈಯ ಹಾಗೂ ಅಂತರ್ಗತ ನಿಸರ್ಗ ಸಂಪನ್ಮೂಲಗಳನ್ನು ಬರಿದು ಮಾಡಿದ್ದಾಯಿತು; ಸಮುದ್ರ ತಳಕ್ಕೆ ಕೊರೆದು ಪೆಟ್ರೋಲ್ ಖನಿಜಗಳನ್ನು ಹೀರಿದ್ದಾಯಿತು; ಈಗ ಗ್ರಹ ತಾರಾನಕ್ಷತ್ರ ಮಂಡಲದಲ್ಲಿ ಏನಾದರೂ ಉಂಟೆ ಎಂದು ಅನ್ವೇಷಣೆಗೆ ಹೊರಟಿದ್ದಾರೆ. ಈ ನಿಟ್ಟಿನ ಅನ್ವೇಷಣೆಯಲ್ಲಿ ಇವರ ಕೈಯೆಟಕಿನಲ್ಲಿ ಮೊದಲು ಸಿಕ್ಕಿದವ ಚಂದ್ರ. ಪ್ರಾಚೀನಕಾಲದಿಂದಲೂ ಸೌರವ್ಯೂಹದ ಗ್ರಹತಾರಾ ನಕ್ಷತ್ರ ಮಂಡಲಗಳ ಚಲನವಲನಗಳ ವಿವರಗಳನ್ನು ಕಂಡುಕೊಂಡ ಮನುಷ್ಯ ತನ್ನ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದ.

17ನೇ ಶತಮಾನದಲ್ಲಿ ಗೆಲಿಲಿಯೋ ದೂರದರ್ಶಕದ ಮೂಲಕ ಈ ಅನ್ವೇಷಣೆಗೆ ನಾಂದಿ ಹಾಡಿದ. ಅಲ್ಲಿಂದ ಇಲ್ಲಿಯವರೆಗೂ ಚಂದ್ರನ ಬಗ್ಗೆ ಊಹಾಪೋಹಗಳು, ಕಲ್ಪನೆಗಳು ಸೃಷ್ಟಿಯಾಗುತ್ತಲೇ ಇವೆ. ಮೊದಮೊದಲಿಗೆ ಭೂಮಿಯ ಮೇಲಿನಂತೆ ಅಲ್ಲಿಯೂ ಗಾಳಿ, ಬೆಳಕು, ಮಳೆ, ಬಿಸಿಲು, ಚಂಡಮಾರುತ, ಜ್ವಾಲಾಮುಖಿಯಂತಹ ನೈಸರ್ಗಿಕ ಕ್ರಿಯೆಗಳೆಲ್ಲಾ ಸಂಭವಿಸುತ್ತವೆ ಎಂದೂ ಅಲ್ಲಿಯೂ ಸಮುದ್ರಗಳಿವೆ, ಜೀವ ಜಂತುಗಳಿವೆ, ಬೆಟ್ಟಗುಡ್ಡಗಳಿವೆ ಎಂದು ಊಹಿಸಿಕೊಳ್ಳಲಾಗಿತ್ತು. ಆದರೆ, ಅಂತಿಮವಾಗಿ ತಿಳಿದುಬಂದುದೇನೆಂದರೆ ಚಂದ್ರನಲ್ಲಿ ಭೂಮಿಯಲ್ಲಿರುವಂತೆ ವಾತಾವರಣವೇ ಇಲ್ಲ ಎನ್ನುವುದು. ಸೋವಿಯತ್ ರಷ್ಯಾ ಮೊಟ್ಟಮೊದಲು ಚಂದ್ರನ ಮೇಲೆ ಸ್ಪುಟ್ನಿಕ್ ಇಳಿಸಿದಾಗ (1959) ಅದರ ಮೇಲ್ಮೈ ಗಟ್ಟಿಯಾಗಿದೆ ಎಂಬುದು ತಿಳಿದು ಬಂತು. ಇದಾದನಂತರ ಆರೇಳು ದಶಕಗಳಿಂದ ರಷ್ಯಾ, ಅಮೆರಿಕ, ಚೀನಾ, ಜಪಾನ್, ಮತ್ತು ಭಾರತವೂ ಸೇರಿದಂತೆ ಚಂದ್ರಾನ್ವೇಷಣೆಗೆ ತೊಡಗಿಕೊಂಡವು.

1969ರಲ್ಲಿ ಅಮೆರಿಕದ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ಼್ ಆಲ್ಡ್ರೀನ್-ಇವರು ಮೊದಲ ಬಾರಿಗೆ ಚಂದ್ರನ ಮೇಲೆ ಕಾಲೂರಿದರು. (ಅಪೊಲೋ-11) ಸುಮಾರು 2-3 ಗಂಟೆಗಳ ಕಾಲ ಇವರು ಚಂದ್ರನ ಮೇಲೆ ನಡೆದಾಡಿ ಅದರ ಮೇಲ್ಮೈನ ಕಲ್ಲು-ಮಣ್ಣುಗಳನ್ನು ಸಂಗ್ರಹಿಸಿಕೊಂಡು, ಆ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದ ಮೈಕ್‌ಕಾಲಿನ್ಸ್ ಜೊತೆಗೂಡಿ ಮೂವರೂ ಸುರಕ್ಷಿತವಾಗಿ ವಾಪಾಸಾದದ್ದು ಒಂದು ಮಹಾದ್ಭುತ! ಇಲ್ಲಿಗೆ ಚಂದ್ರನ ಮೇಲ್ಮೈನ ಕೆಲವು ಖಚಿತ ಮಾಹಿತಿಗಳು ಸಿಕ್ಕಂತಾಯಿತು. ಇವುಗಳ ಆಧಾರದಿಂದ ಭೂಮಿಯ ಮೇಲೆ ಸಿಕ್ಕುವ ಎಲ್ಲಾ ಖನಿಜ-ಲೋಹ ಸಂಪನ್ಮೂಲಗಳು ಚಂದ್ರನಲ್ಲೂ ಇರಬಹುದು ಎಂದಾಯಿತು. ಆದರೆ ಯಾವುದೇ ಜೀವಜಂತುಗಳು ಅರಣ್ಯಗಳು ಅಲ್ಲಿಲ್ಲ ಎಂಬುದೂ ಖಾತರಿಯಾಯಿತು. ಆದರೂ ಚಂದ್ರನಲ್ಲಿ ಮಂಜುಗಡ್ಡೆ ಕಟ್ಟಿಕೊಂಡಿರುವ ನೀರ್‍ದಾಣಗಳ ಆಳದಲ್ಲಿ ಹುದುಗಿರಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಅಲ್ಲಿ ಮುಖ್ಯವಾಗಿ ಗಾಳಿಯೇ ಇಲ್ಲ. ಜೀವಕ್ಕೆ ಉಸಿರೇ ಇಲ್ಲದಮೇಲೆ ಜೀವಿಗಳು ಬದುಕುವುದಾದರೂ ಹೇಗೆ? ಆದ್ದರಿಂದ ಮನುಷ್ಯ ಜೀವಿ ಅಲ್ಲಿ ಬದುಕಲಾರ. ಹೀಗಿದ್ದೂ ಸಹ ಅಲ್ಲಿಗೆ ಹೋಗಿ ಕೃಷಿ, ಗಣಿಗಾರಿಕೆ ಮಾಡಲು ಯೋಚಿಸಿರುತ್ತಾನೆ. ಇನ್ನು ಚಂದ್ರನ ಮೇಲ್ಮೈಯಲ್ಲಿ ಕೆಲವು ಲೋಹಗಳು ಖನಿಜಗಳು ಕಲ್ಲು ಮಣ್ಣುಗಳಲ್ಲಿ ಸಮ್ಮಿಶ್ರಗೊಂಡಿವೆ ಎಂಬುದು ಅಪೊಲೋ-17 ಅನ್ವೇಷಣೆಯಿಂದ ತಿಳಿದು ಬಂತು. ಇದು ಎರಡನೇ ಮಜಲು.

ಚಂದ್ರನ ಹೊರಮೈ ವಾತಾವರಣದಲ್ಲಿ ಜಲಜನಕ, ಹೀಲಿಯಂ, ಅಮೋನಿಯಾ, ಇಂಗಾಲದ ಡೈ ಆಕ್ಸೈಡ್ ಮತ್ತು ಮಿಥೇನ್ ಮುಂತಾಗಿ ಇರಬಹುದೆಂದು ಕಂಡುಬಂದಿದೆ. ಆದರೂ ಭೂಮಿಯ ಮೇಲಿರುವಂತೆ ಸಾರಜನಕ ಮಾತ್ರ ಇಲ್ಲದೆ ಇರುವುದು ವಿಜ್ಞಾನಿಗಳಿಗೆ ಆಶ್ಚರ್ಯ. ಅಲ್ಲದೆ ಅತ್ಯಂತ ಕಡಿಮೆ ಸಾಂದ್ರತೆಯುಳ್ಳ ಅಪರೂಪದ ಅನಿಲಗಳು ಚಂದ್ರನಲ್ಲಿ ಉಂಟೆಂದೂ ಹೇಳಲಾಗುತ್ತಿದೆ. ಮತ್ತೊಂದು ವಿಶೇಷವೆಂದರೆ ಭುವಿಯಲ್ಲಿರುವಂತೆ ಚಂದ್ರನಲ್ಲೂ ಚಿನ್ನ, ವಜ್ರ, ಕಬ್ಬಿಣದ ಅದಿರು, ಕಲ್ಲಿದ್ದಲು ಮುಂತಾದ ಅಪರೂಪದ ಖನಿಜ ನಿಕ್ಷೇಪಗಳು, ಅದರ ಆಳದಲ್ಲಿ ಹುದುಗಿರಬಹುದು. ಆದರೆ ಅವುಗಳನ್ನು ಹುಡುಕಿ ತೆಗೆದು ಸಂಸ್ಕರಿಸಿ ಭೂಮಿಗೆ ರವಾನಿಸುವುದು ಹೇಗೆ? ಇದಕ್ಕೆ ತಗಲುವ ಖರ್ಚು ಎಷ್ಟಾಗಬಹುದು? ಇದೆಲ್ಲಾ ಗುಡ್ಡ ಕಡಿದು ಇಲಿ ಹಿಡಿಯುವ ಅನ್ವೇಷಣೆ ಎಂಬುದು ಕೆಲವರು ಅಂಬೋಣ!

ಇದನ್ನೂ ಓದಿ: ಚಂದ್ರಯಾನ-3 ಉಡಾವಣೆ ಮತ್ತು ಬಾಹ್ಯಾಕಾಶಯಾನ ಇತಿಹಾಸದ ಪಕ್ಷಿನೋಟ

ಇಷ್ಟಾಗಿಯೂ ಚಂದ್ರನ ಮೇಲಿರುವ ಸಂಪನ್ಮೂಲಗಳಿಗೆ ಮೋಹಗೊಂಡಿರುವ ಶ್ರೀಮಂತ ರಾಷ್ಟ್ರಗಳಿಗೆ ನಿದ್ದೆ ಹತ್ತದು. ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಆ ಖನಿಜ ಸಂಪನ್ಮೂಲಗಳನ್ನು ಮುಕ್ಕಿ ಮುಗಿಸಿಬಿಡುವ ತರಾತುರಿಯಲ್ಲಿ ಇವೆ. ಇದು “ನಿಂತ ನೆಲವೆಂದು ಕಡಿಲ್ಯಾಕೊ ಹಡಿಲ್ಯಾಕೊ ಒಡಿಲ್ಯಾಕೊ ಒಡವ್ಯಲ್ಲೋ ಮಗನೆ ಉಸಿರಿದ್ದೊಡಲಂತಾ” (ದ.ರಾ.ಬೇಂದ್ರೆ) ಭೂಮಿತಾಯಿ ಚೀರಿಡುತ್ತಿದ್ದರೂ ಬಿಡದೆ ಬರಿದು ಮಾಡಿದರಲ್ಲ- ಈ ಆಸೆಬುರಕ ಮನುಷ್ಯರು. ಈ ಕ್ಯಾಪಿಟಲಿಸ್ಟರಿಗೆ ಇನ್ನು ಆ ಚಂದ್ರ ಯಾವ ಲೆಕ್ಕ? ಮಲೆನಾಡಿನ ’ಬೃಹತ್ ಗಾತ್ರದ ಹೆಮ್ಮರಗಳನ್ನು ಕಂಡರೆ ನಾಟಾ ಕಳ್ಳರಿಗೆ ತಿಜೋರಿಯ ಹಣ ಕಂಡಂತೆ’ ಎಂದರು ತೇಜಸ್ವಿ. ಹಾಗೆ ಗುರುವಾದರೇನು ಚಂದ್ರನಾದರೇನು? ಮಂಗಳ ಗ್ರಹಕ್ಕೂ ದಾಳಿ ಇಡಬಲ್ಲರು ಇವರು. ಈಗ ಚಂದ್ರನಲ್ಲಿ ಖನಿಜಗಳಿವೆ ಎಂದು ಕೇಳಿಬಂದೊಡನೆ ಬಹುರಾಷ್ಟ್ರೀಯ ಕಂಪನಿಯ ಖದೀಮರು ಅಲ್ಲಿಗೆ ದಾಳಿಯಿಡಲು ಧಾವಂತಪಡುತ್ತಿದ್ದಾರೆ.

ಹಿಂದೆ ಕೊಲಂಬಸ್ ವಾಸ್ಕೋಡಿಗಾಮರು ನೌಕಾಯಾನದಲ್ಲಿ ಹೊಸಹೊಸ ಭೂಖಂಡಗಳನ್ನು ಕಂಡುಕೊಂಡರು. ಅಲ್ಲೆಲ್ಲಾ ಅವರಿಗೆ ಬೇಕಾದ ಹಾಗೆ ನೈಸರ್ಗಿಕ ಸಂಪನ್ಮೂಲಗಳು ಖನಿಜಗಳು ಇವೆಯೆಂದು ಗೊತ್ತಾಯಿತು. ಅವುಗಳ ಕೊಳ್ಳೆಗೆ ಯುರೋಪಿಯನ್ ರಾಷ್ಟ್ರಗಳು ಸಾಲುಗಟ್ಟಿ ಹೊರಟರು. ಅವರ ಲೂಟಿಗೆ ಸಿಕ್ಕಿದ ಲ್ಯಾಟಿನ್ ಅಮೆರಿಕ, ಆಫ್ರಿಕಾ ಹಾಗೂ ಆಗ್ನೇಯ ಏಷಿಯನ್ ರಾಷ್ಟ್ರಗಳು ಬರಿದಾಗಿ ಈಗ ಬರಡು ಗೋವಿನಂತಾಗಿವೆ. ಇಲ್ಲಿನ ಸಮೃದ್ಧ ಖನಿಜಗಳು ಹಾಗೂ ಅರಣ್ಯ ಸಂಪನ್ಮೂಲಗಳನ್ನು ಅಗೆದೂ ಬಗೆದೂ ಕಡಿದೂ ಬರಿದುಮಾಡಿದರು. ಸ್ವಾತಂತ್ರ್ಯಾನಂತರ ಸ್ಥಳೀಯ ಬಂಡವಾಳಶಾಹೀ ಪ್ರಜಾಪ್ರಭುತ್ವದ ಪ್ರಭುಗಳು ಇದೇ ಕೆಲಸವನ್ನು ಮುಂದುವರಿಸಿದರು. ಪರಿಣಾಮವಾಗಿ ಸದ್ಯ ಅತಿವೃಷ್ಟಿ ಅನಾವೃಷ್ಟಿ ಅಧಿಕ ತಾಪಮಾನ ಹಾಗೂ ಜನಸಂಖ್ಯೆಯ ಬಾಹುಳ್ಯದಿಂದ ಈ ಬಡ ರಾಷ್ಟ್ರಗಳು ದಣಿದುಹೋಗುತ್ತಿವೆ. ಇರುವುದೊಂದೇ ಭೂಮಿ ಇನ್ನು ಅಡಗಲು ಸ್ಥಳವೆಲ್ಲಿ? ವಿಜ್ಞಾನ ಮತ್ತು ತಂತ್ರಜ್ಞಾನ ವರವೂ ಆಯಿತು ಶಾಪವೂ ಆಯಿತು.

ಆದರೂ ಈ ರಾಷ್ಟ್ರಗಳೂ ಸಹ ಅಮೆರಿಕ ರಷ್ಯಾ ಮುಂತಾದ ದೇಶಗಳನ್ನೇ ಅನುಸರಿಸಿ ತಾವೂ ಚಂದ್ರನ ಮೇಲೆ ದಾಳಿ ಇಡಲು ಪ್ರಯತ್ನಿಸುತ್ತಿವೆ. ಈ ದಿಸೆಯಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಜುಲೈ 14, 2023ರಂದು ನಮ್ಮ ಚಂದ್ರಯಾನ-3 ನಭೋಮಂಡಲಕ್ಕೆ ಚಿಮ್ಮಿತು. ಈ ಗಗನನೌಕೆ ದೀರ್ಘ ಪಯಣದ ಬಳಿಕ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುತ್ತದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಇನ್ನು ಮುಂದೆ ಬಾಹ್ಯಾಕಾಶ ನಿಲ್ದಾಣಗಳು, ಬಾಹ್ಯಾಕಾಶದಲ್ಲಿ ರಿಯಲ್ ಎಸ್ಟೇಟ್ ದಂಧೆಗಳು, ಪ್ರವಾಸ ಕೇಂದ್ರಗಳು ಆರಂಭವಾಗುವವೇನೋ! ಅಲ್ಲಿಯೂ ವರ್ಗ, ವರ್ಣ, ಪುರುಷ ಪಾರಮ್ಯ, ಜಾತಿ-ಜನಾಂಗಗಳ ದೇವರು ಧರ್ಮ ಗುಡಿಗೋಪುರಗಳು ನಿರ್ಮಾಣವಾಗಬಹುದು. ಕಡೆಗೆ ಅಲ್ಲಿಯೂ ಜನಾಂಗ ಶ್ರೇಷ್ಠತೆಯ ವ್ಯಸನವು ಮೈತಳೆದು ಫ್ಯಾಸಿಸ್ಟ್ ಮನೋಧರ್ಮದ ಹಿಟ್ಲರ್, ಮುಸಲೋನಿಗಳಂತಹ ಸರ್ವಾಧಿಕಾರಿಗಳೂ ಹುಟ್ಟಿಕೊಳ್ಳಬಹುದು.

ಕುರುಕುಲ ಸಾರ್ವಭೌಮ ದುರ್ಯೋಧನನು ಕುರುಕ್ಷೇತ್ರ ಯುದ್ಧದಲ್ಲಿ ಸೋತು ತಾತ ಭೀಷ್ಮನ ಆದೇಶದಂತೆ ವೈಶಂಪಾಯನ ಸರೋವರದಲ್ಲಿ ಒಂದು ದಿನ ಮುಳುಗಿ ತಲೆಮರೆಸಿಕೊಳ್ಳಲು ಅತ್ತ ಆಗಮಿಸುತ್ತಾನೆ. ಅವನ ಆಗಮಿಕೆಯನ್ನು ಕಂಡು ’ಅಲ್ಲಿ ಮನುಕುಲವನ್ನು ಸರ್ವನಾಶ ಮಾಡಿದ ನೀನು ಇಲ್ಲಿಗೂ ಬಂದು ಇಲ್ಲಿ ನೆಮ್ಮದಿಯಿಂದ ಬಾಳ್ವರಂ ಆಳ್ವರಂ ಕದಡದಿರ್ ಇತ್ತ ಬಾರದಿರ್ ಸಾರದಿರ್’ ಎಂಬಂತೆ ಬಕ ಬಾಳಾಕಾನೇಕ ನೀರ್‍ವಕ್ಕಿಗಳು ಉಯ್ಯಲಿಡುತ್ತಾ ಹಾರಿಹೋದುವಂತೆ. (ಪಂಪಭಾರತ) ಮನುಷ್ಯನ ದುರಾಸೆಯ ಫಲ ಹೀಗಾಗುತ್ತದೆ.

ಮಕ್ಕಳ ಪೆಪ್ಪರಮೆಂಟಿನಂತೆ ‘ನಿಚ್ಚಂ ಪೊಸತಾದ ಚಂದ್ರ’ ಇನ್ನು ಮೇಲೆ ಗಣಿಗಾರಿಕೆಗಳಿಂದ ಧೂಳೆದ್ದು ಮುಕ್ಕಾಗಿ ಹೋಗುವುದರಲ್ಲಿ ಸಂಶಯವಿಲ್ಲ. ಮಿಲಿಯನ್‌ಗಟ್ಟಲೆ ವರ್ಷಗಳಿಂದ ಚಂದ್ರತಾರಾದಿ ಗ್ರಹನಕ್ಷತ್ರಗಳೆಲ್ಲ ಬಾಹ್ಯಾಕಾಶದಲ್ಲಿ ತೇಲಾಡುತ್ತಿದ್ದವು. ಇನ್ನು ಮುಂದೆ ಮನುಷ್ಯರು ಹಾರಿಸುವ ರಾಕೆಟ್ಟುಗಳು ಬಾಹ್ಯಾಕಾಶ ನೌಕೆಗಳು, ಅಂತರಿಕ್ಷ ನಿಲ್ದಾಣಗಳು ಮುಂತಾದವುಗಳಿಂದ ನಭೋಮಂಡಲದಲ್ಲೂ ಟ್ರಾಫಿಕ್ ಜಾಮ್ ಆಗಿ ಸೌರವ್ಯೂಹದ ನಡೆ ನಿಯಂತ್ರಣವೇ ದಿಕ್ಕೆಟ್ಟುಅಸ್ತವ್ಯಸ್ತವಾಗಬಹುದೇನೋ!

ಒಟ್ಟಾರೆ ಮನುಷ್ಯನ ಈ ವಿನಾಶದ ಬುದ್ಧಿ ಎಲ್ಲಿಗೆ ಮುಟ್ಟಬಹುದು? ಅದನ್ನು ತಡೆಯುವ ಬಗೆ ಎಂತು? ಎಂದು ಲೋಕಕಾರುಣ್ಯ ಉಳ್ಳವರು ಚಿಂತಿಸುವ ಕಾಲ ಬಂದಿದೆ. ಹಾಗಾದರೆ ಇದನ್ನು ತಡೆಯುವುದಾದರೂ ಹೇಗೆ? ಹೇಗೆಂದರೆ ಇಲ್ಲಿ ರಾಹು ಕೇತುಗಳಂತೆ ಚಂದ್ರಸೂರ್ಯರನ್ನೂ ನುಂಗಲು ಹೊರಟಿರುವ ಕ್ಯಾಪಿಟಲಿಸಂಗೆ ತಡೆ ಒಡ್ಡಲು ವಿಶ್ವರಾಷ್ಟ್ರಗಳೆಲ್ಲ ಒಂದಾಗಬೇಕು; ವಸುದೈವ ಕುಟುಂಬದ ಕಣ್ಣು ತೆರೆಯ ಬೇಕು! ಆದರೆ ಇದು ಸಾಧ್ಯವಾಗಬೇಕಾದರೆ ವಿಶ್ವನಾಯಕರಿಗೆ ಬ್ರಹ್ಮಾಂಡ ಇಚ್ಛಾಶಕ್ತಿ ಬೇಕು! ಇಲ್ಲವಾದರೆ ನಾಗಸಾಕಿ, ಹಿರೋಶಿಮಾ ನೆನಪಿದೆ ತಾನೆ? ಜಗತ್ಪ್ರಳಯ!

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...