• ಅಜೊಯ್ ಆಶಿವಾದದ ಮೊಹಾಪ್ರಶಸ್ತ
    (ಕೃಪೆ: ದಿ ವೈರ್)
  • ಅನುವಾದ: ಪಿ.ಕೆ ಮಲ್ಲನಗೌಡರ್

ಮಾಧ್ಯಮ ನಿರ್ವಹಣೆಗೆ ವಿವರವಾದ ಟೂಲ್‌ಕಿಟ್ ಹೊಂದಿರುವ ಸರ್ಕಾರದ ವರದಿಯೊಂದು ಸೋರಿಕೆಯಾಗಿದೆ. ಈ ವರದಿ ತಯಾರಿಕೆಯಲ್ಲಿ ಪಾಲ್ಗೊಂಡ, ಆದರೆ ಅನಾಮಧೇಯರಾಗಿ ಉಳಿಯ ಬಯಸಿದ್ದ ಹಿರಿಯ ಮಂತ್ರಿಗಳು ಮತ್ತು ಪತ್ರಕರ್ತರ ಹೆಸರುಗಳನ್ನು ಈ ಸೋರಿಕೆ ಬಹಿರಂಗ ಮಾಡಿದೆ. 97 ಪುಟಗಳ ವರದಿಯು ನರೇಂದ್ರ ಮೋದಿ ಸರ್ಕಾರವು ಸ್ವಂತಂತ್ರ ಮಾಧ್ಯಮಗಳನ್ನು ನಿಯಂತ್ರಿಸುವುದು ಹೇಗೆ ಎಂದು ಮಂತ್ರಿಗಳ ಗುಂಪಿನ ಕೆಲವು ಸದಸ್ಯರು ಮತ್ತು ಕೆಲವು ಪತ್ರಕರ್ತರು ಚರ್ಚೆ ನಡೆಸಿರುವುದನ್ನು ಬಹಿರಂಗಗೊಳಿಸಿದೆ. ಆದರೆ ನಾವು ಇಂತಹ ಸಭೆಗಳಲ್ಲಿ ಭಾಗವಹಿಸಿಲ್ಲ ಮತ್ತು ಅಂತಿಮ ವರದಿಯನ್ನು ತಾವು ನೊಡಿಲ್ಲ ಎಂದು ಮಂತ್ರಿಗಳು ಮತ್ತು ಪಾಲ್ಗೊಂಡ ಪತ್ರಕರ್ತರು ನಿರಾಕರಿಸುತ್ತಿದ್ದಾರೆ.

ಕೊರೊನಾ ಸಾಂಕ್ರಾಮಿಕ ಉತ್ತುಂಗದಲ್ಲಿದ್ದಾಗ ಕಳೆದ ವರ್ಷ ನಡೆದ ಸರಣಿ ಸಭೆಗಳಲ್ಲಿ, ಕೇಂದ್ರ ಸರ್ಕಾರವು ತನ್ನ ಮಂತ್ರಿಗಳು ಮತ್ತು ಕಾರ್ಯದರ್ಶಿಗಳಿಗೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವಿಮರ್ಶಕರು ಮತ್ತು ಟೀಕಾಕಾರನ್ನು ಗುರುತಿಸಲು, ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ಆದೇಶಿಸಿತ್ತು. ಸರ್ಕಾರದ ಪರ ಕೆಲಸ ಮಾಡುವ ಪತ್ರಕರ್ತರು, ವೆಬ್‌ಸೈಟ್‌ಗಳು ಮತ್ತು ವ್ಯಾಖ್ಯಾನಕಾರರನ್ನು ಉತ್ತೇಜಿಸಲು ಹೇಳಿತ್ತು. ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳು, ನಿವೃತ್ತ ಪತ್ರಕರ್ತರು ಮತ್ತು ಮಾಜಿ ಸೇನಾ ಜನರಲ್‌ಗಳಂತಹ “ಧನಾತ್ಮಕ ಪ್ರಭಾವಶಾಲಿಗಳನ್ನು” ತೊಡಗಿಸಿಕೊಳುವಂತೆ ಮಾಡಲು ಸೂಚಿಸಿತ್ತು.

ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಸಾಂಪ್ರದಾಯಿಕ ಮಾಹಿತಿಯ ಪ್ರಸಾರವು ಸರ್ಕಾರದ ಪರ ಅಭಿಪ್ರಾಯ ರೂಪಿಸುವಲ್ಲಿ ಹಿಂದೆ ಇದೆ. ವಿಶೇಷವಾಗಿ ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ನೀತಿಗಳ ಟೀಕೆಗಳನ್ನು ನಿಯಂತ್ರಿಸುವ ಸಾಧ್ಯತೆ ಕಡಿಮೆ ಎಂದು ಹಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

‘ಸರ್ಕಾರಿ ಸಂವಹನದಲ್ಲಿ ಮಂತ್ರಿಗಳ ಗುಂಪು’ ಎಂಬ ಶೀರ್ಷಿಕೆಯ ವರದಿಯು “ಅಂತರರಾಷ್ಟ್ರೀಯ ಮಾಧ್ಯಮ” ಮತ್ತು ಭಾರತೀಯ ಡಿಜಿಟಲ್ ನ್ಯೂಸ್ ಪ್ಲಾಟ್‌ಫಾರ್ಮ್‌ಗಳಾದ ದಿ ವೈರ್ ಮತ್ತು ಸ್ಕ್ರಾಲ್.ಇನ್‌ ನಂತಹ ಪೋರ್ಟಲ್‌ಗಳ ಪ್ರಭಾವ ತಡೆಯಲು ಸೂಚಿಸಿದೆ. ಪ್ರಭಾವವನ್ನು ನಿಭಾಯಿಸಲು ವಿವಿಧ ಸಚಿವಾಲಯಗಳು ಕೈಗೊಳ್ಳಬೇಕಾದ ಜವಾಬ್ದಾರಿಗಳ ವ್ಯಾಪಕ ಪಟ್ಟಿಯನ್ನು ದಾಖಲಿಸುತ್ತದೆ. ಇವು “ಸುಳ್ಳು ನಿರೂಪಣೆಗಳ” ಮೂಲಕ ಕೇಂದ್ರ ಸರ್ಕಾರದ ಬಗ್ಗೆ ನಕಾರಾತ್ಮಕ ಪ್ರಭಾವ ಬೀರುವ ವರದಿಗಳನ್ನು ಪ್ರಕಟಿಸುತ್ತವೆ ಎಂದು ಹೇಳಲಾಗಿದೆ.

“ನಾವು ಆಂತರಿಕ ಸಲಹೆಗಳನ್ನು ಪಡೆಯುತ್ತಿದ್ದರೂ, ಅಧಿಕಾರದಲ್ಲಿದ್ದರೂ, ದಿ ವೈರ್, ಸ್ಕ್ರಾಲ್ ಮತ್ತು ಕೆಲವು ಪ್ರಾದೇಶಿಕ ಮಾಧ್ಯಮಗಳಂತಹ ಆನ್‌ಲೈನ್ ಮಾಧ್ಯಮಗಳಲ್ಲಿ ನಮ್ಮ ಹಿಡಿತವೇಕಿಲ್ಲ ಎಂದು ವಿವರಿಸಲಾಗಿಲ್ಲ” ಎಂದು ಹಿರಿಯ ಸಚಿವ ರವಿಶಂಕರ್ ಪ್ರಸಾದ್ ವಿಷಾದಿಸುತ್ತಾ, ನಮ್ಮ ಪ್ರಮುಖ ಮಾಧ್ಯಮ ಹಸ್ತಕ್ಷೇಪವು ದೊಡ್ಡದಾಗುತ್ತಿಲ್ಲ ಎಂದಿದ್ದಾರೆ. ರವಿಶಂಕರ್‌ ಪ್ರಸಾದ್ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದಾರೆ. ಐಟಿ ಸಚಿವಾಲಯವು ಕಳೆದ ತಿಂಗಳು ವಿವಾದಾತ್ಮಕ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಈ ಕರಡು ನಿಯಮದಲ್ಲಿ ಡಿಜಿಟಲ್ ಸುದ್ದಿ ವೇದಿಕೆಗಳನ್ನು ‘ನಿಯಂತ್ರಿಸಲು’ ಸರ್ಕಾರಕ್ಕೆ ವ್ಯಾಪಕ ಅಧಿಕಾರ ನೀಡಲಾಗಿದೆ.

ವರದಿಯ ಮುಖ್ಯ ಶಿಫಾರಸುಗಳನ್ನು ಮೊದಲು ಡಿಸೆಂಬರ್‌ನಲ್ಲಿ ಹಿಂದೂಸ್ತಾನ್ ಟೈಮ್ಸ್‌ನ ಅನಿಷಾ ದತ್ತಾ ಬಯಲು ಮಾಡಿದರು. ಬುಧವಾರ, ಕಾರವಾನ್ ನಿಯತಕಾಲಿಕವು ಅದರ ವಿಷಯಗಳ ಬಗ್ಗೆ ವಿವರವಾದ ಸುದ್ದಿಯನ್ನು ಮಾಡಿತು.

ಮಂತ್ರಿಗಳ ಗುಂಪಿನ ವರದಿಯ ನಕಲು ಅಂತರ್ಜಾಲದಲ್ಲಿ ಸೋರಿಕೆಯಾಗಿದೆ, ಅದನ್ನು ದಿ ವೈರ್ ಅಧಿಕೃತವೆಂದು ದೃಢಿಕರಿಸಲು ಸಾಧ್ಯವಾಗಿದೆ.

2020 ರ ಜೂನ್‌‌ ಮತ್ತು ಜುಲೈನಲ್ಲಿ ಮಂತ್ರಿಗಳ ಗುಂಪು ಆರು ಸಭೆಗಳನ್ನು ನಡೆಸಿದ್ದು, ಡಿಸೆಂಬರ್ 3 ರಂದು ‘ಕ್ರಿಯಾ ಯೋಜನೆ’ಯೊಂದಿಗಿನ ವರದಿಯನ್ನು ಅನುಷ್ಠಾನಕ್ಕಾಗಿ ಎಲ್ಲಾ ಸಚಿವಾಲಯಗಳೊಂದಿಗೆ ಹಂಚಿಕೊಳ್ಳಲಾಯಿತು.

ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ಎಸ್.ಜೈಶಂಕರ್, ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಐವರು ರಾಜ್ಯ ಸಚಿವರುಗಳಾದ ಕಿರೆನ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಅನುರಾಗ್ ಠಾಕೂರ್ ಮತ್ತು ಬಾಬುಲ್ ಸುಪ್ರಿಯೋ ಈ ಮಂತ್ರಿಗಳ ಗುಂಪಿನ (ಗ್ರೂಪ್ ಆಫ್ ಮಿನಿಸ್ಟರ್ಸ್) ಸದಸ್ಯರಾಗಿದ್ದಾರೆ.

ಮಂತ್ರಿಗಳು ಸ್ವತಂತ್ರ ಸುದ್ದಿಗಳನ್ನು ‘ತಟಸ್ಥಗೊಳಿಸಲು’ ಬಯಸಿದ ನಂತರ ಮೋದಿ ಸರ್ಕಾರದ ಡಿಜಿಟಲ್ ಮೀಡಿಯಾ ನಿಯಮಗಳು ರೂಪುಗೊಂಡಿವೆ.

ಗಮನಾರ್ಹವಾಗಿ, “ಪ್ರಮುಖ ವ್ಯಕ್ತಿಗಳೊಂದಿಗೆ” ಮೂರು ಸಭೆಗಳನ್ನು ವಿವಿಧ ಕೇಂದ್ರ ಸಚಿವರು ನಡೆಸಿದ್ದಾರೆ . ಸರ್ಕಾರದ ಬಗ್ಗೆ ಮಾಧ್ಯಮಗಳ ಟೀಕೆಗಳನ್ನು ಹೇಗೆ ಒಳಗೊಳ್ಳಬೇಕು ಎಂಬುದರ ಕುರಿತು ಸಲಹೆ ಪಡೆಯಲು ಮತ್ತು ಅನುಕೂಲಕರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂತಹ ಮೊದಲ ಸಭೆಯನ್ನು ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ಜೂನ್ 23, 2020 ರಂದು 12 ಪತ್ರಕರ್ತರೊಂದಿಗೆ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ವರದಿಯು ಪಾಲ್ಗೊಂಡವರನ್ನು ಈ ಕೆಳಗಿನಂತೆ ಪಟ್ಟಿ ಮಾಡುತ್ತದೆ:

ಅಲೋಕ್ ಮೆಹ್ತಾ, ಹಿಂದಿ ಔಟ್‌ಲುಕ್, ನವಭಾರತ್ ಟೈಮ್ಸ್, ನಯಿ ದುನಿಯಾ ಮತ್ತು ದೈನಿಕ್ ಭಾಸ್ಕರ್‌ಗಳ ಮಾಜಿ ಸಂಪಾದಕ.
ಜಯಂತ್ ಘೋಶಾಲ್, ಇಂಡಿಯಾ ಟಿವಿಯ ಮಾಜಿ ರಾಜಕೀಯ ಸಂಪಾದಕ, ಪ್ರಸ್ತುತ ಇಂಡಿಯಾ ಟುಡೆ ಗುಂಪಿನೊಂದಿಗೆ ಇರುವ ಪತ್ರಕರ್ತ.
ಶಿಶಿರ್ ಗುಪ್ತಾ, ಕಾರ್ಯನಿರ್ವಾಹಕ ಸಂಪಾದಕ, ಹಿಂದೂಸ್ತಾನ್ ಟೈಮ್ಸ್.
ಪ್ರಫುಲ್ ಕೇಟ್ಕರ್, ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ ಸಾಪ್ತಾಹಿಕ ಸಂಪಾದಕ.
ಮಹುವಾ ಚಟರ್ಜಿ, ಹಿರಿಯ ಪತ್ರಕರ್ತ, ಟೈಮ್ಸ್ ಆಫ್ ಇಂಡಿಯಾ.
ನಿಸ್ಟುಲಾ ಹೆಬ್ಬಾರ್, ರಾಜಕೀಯ ಸಂಪಾದಕ, ದಿ ಹಿಂದೂ.
ಅಮಿತಾಭ್ ಸಿನ್ಹಾ, ನ್ಯೂಸ್ 18 ಇಂಡಿಯಾದ ರಾಜಕೀಯ ಸಂಪಾದಕ ಎಂದು ನಂಬಲಾಗಿದೆ.
ಅಶುತೋಷ್, ದೈನಿಕ್ ಜಾಗರಣ್ ಬ್ಯೂರೋ ಮುಖ್ಯಸ್ಥ ಎಂದು ನಂಬಲಾಗಿದೆ.
ರಾಮ್ ನರೈನ್, ಹಿರಿಯ ಪತ್ರಕರ್ತ.
ರವಿಶ್ ತಿವಾರಿ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ಪತ್ರಕರ್ತ.
ಹಿಮಾಂಶು ಮಿಶ್ರಾ, ಹಿರಿಯ ಪತ್ರಕರ್ತ, ಆಜ್ ತಕ್.
ರವೀಂದ್ರ ಗೌತಮ್, ನ್ಯೂಸ್ 18 , ಸಿಎನ್‌ಬಿಸಿ ಆವಾಜ್ ಮಾಜಿ ಟಿವಿ ನಿರೂಪಕ.

ಈ ಪತ್ರಕರ್ತರು “ನರೇಂದ್ರ ಮೋದಿಯವರ ನಾಯಕತ್ವದಿಂದ ಪ್ರಭಾವಿತರಾಗಿದ್ದಾರೆ ಮತ್ತು ಬಿಜೆಪಿ ಪಕ್ಷದಿಂದ ಸೈದ್ಧಾಂತಿಕವಾಗಿ ಪ್ರಭಾವಿತರಾಗಿದ್ದಾರೆ. ನಾವು (ಗ್ರೂಪ್ ಆಫ್‌ ಮಿನಿಸ್ಟರ್‌‌) ಈ ವ್ಯಕ್ತಿಗಳ ವಿಭಿನ್ನ ಗುಂಪುಗಳನ್ನು ರಚಿಸಿ ಅವರೊಂದಿಗೆ ನಿಯಮಿತವಾಗಿ ಸಂವಹನ ಮಾಡಬೇಕು” ಎಂದು ವರದಿ ತಿಳಿಸಿದೆ.

“ಸಂವಹನದ ಕೊರತೆಯಿಂದಾಗಿ ಸಕಾರಾತ್ಮಕ ವಿಷಯಗಳನ್ನು ಪ್ರಭಾವಶಾಲಿ ರೀತಿಯಲ್ಲಿ ಮುಂದಿಡಲಾಗುವುದಿಲ್ಲ. ಯಾವುದೇ ದೊಡ್ಡ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ಅದರ ಉತ್ತಮ ಪ್ರಚಾರಕ್ಕಾಗಿ ಸರ್ಕಾರವು ಕಾರ್ಯಕ್ರಮ/ಯೋಜನೆಯ ಮಾಹಿತಿ/ವಸ್ತುಗಳನ್ನು ಪೋಷಕ ಮಾಧ್ಯಮಗಳಿಗೆ ನೀಡಬೇಕು” ಎಂದು ಹಾಜರಿದ್ದವರು ಮಾಡಿದ ಅವಲೋಕನಗಳನ್ನು ತಿಳಿಸುವಾಗ ವರದಿ ಹೇಳಿದೆ.

ಅಂತಹ ಸಲಹೆಗಳ ಹೊರತಾಗಿ, “ಸರ್ಕಾರದ ಸಂದೇಶಗಳಲ್ಲಿ” ಯಾವುದೇ ವಿರೋಧಾಭಾಸಗಳನ್ನು ತಪ್ಪಿಸಲು ‘ಎಲ್ಲಾ ಸಚಿವಾಲಯಗಳು’ ಒಂದೇ ಧ್ವನಿಯಲ್ಲಿ ಮಾತನಾಡಬೇಕು” ಎಂದು ಭಾಗವಹಿಸುವವರು ಸೂಚಿಸಿದ್ದಾರೆ ಎಂದು ಮಂತ್ರಿಗಳ ಗುಂಪಿನ ವರದಿ ಹೇಳಿದೆ.

“ಸರ್ಕಾರವನ್ನು ಬೆಂಬಲಿಸುವ ಸಂಪಾದಕರು, ಅಂಕಣಕಾರರು, ಪತ್ರಕರ್ತರು ಮತ್ತು ವ್ಯಾಖ್ಯಾನಕಾರರ ಗುಂಪುಗಳನ್ನು ರಚಿಸಬೇಕು ಮತ್ತು ಅವರು ನಿಯಮಿತವಾಗಿ ತೊಡಗಿಸಿಕೊಳ್ಳಬೇಕು. ಮಾಹಿತಿಯು ಕೊನೆಯ ವ್ಯಕ್ತಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರದ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು. ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಅವನ್ನು ಸರಿಪಡಿಸಬೇಕು. ವಿದೇಶಿ ಮಾಧ್ಯಮಗಳೊಂದಿಗಿನ ಸಂವಹನವು ತಿರುಗುಬಾಣವಾಗುವ ಸಾಧ್ಯತೆಯಿರುತ್ತದೆ, ಅದನ್ನು ತಡೆಗಟ್ಟಬೇಕು” ಎಂದು ಭಾಗವಹಿಸಿದ ಪತ್ರಕರ್ತರು ಸಚಿವ ರಿಜಿಜುಗೆ ತಿಳಿಸಿದರು.

ಅಂತಹ ಮತ್ತೊಂದು ಸಭೆಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಜೂನ್ 23, 2020 ರಂದು ಬಲಪಂಥೀಯ ಪರವಿರುವ ಮತ್ತು ಪ್ರಸ್ತುತ ಉನ್ನತ ಮಟ್ಟದ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ ಪತ್ರಕರ್ತರೊಂದಿಗೆ ನಡೆಸಿದರು. ಆ ಪಟ್ಟಿ ಹೀಗಿದೆ:

ಎಸ್. ಗುರುಮೂರ್ತಿ, ಆರೆಸ್ಸೆಸ್ ಸಿದ್ಧಾಂತಿ ಮತ್ತು ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಮಂಡಳಿಯಲ್ಲಿದ್ದಾರೆ.
ಸ್ವಪನ್ ದಾಸ್‌ಗುಪ್ತಾ, ಪ್ರಸ್ತುತ ರಾಜ್ಯಸಭೆಯಲ್ಲಿ ಸಂಸದರಾಗಿರುವ ಪತ್ರಕರ್ತ.
ಕಾಂಚನ್ ಗುಪ್ತಾ, ದಿ ಪಯೋನೀರ್‌ನ ಮಾಜಿ ಸಂಪಾದಕ ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಸಹವರ್ತಿ.
ನಿತಿನ್ ಗೋಖಲೆ, ರಕ್ಷಣಾ ಸಂಬಂಧಿತ ವೆಬ್‌ಸೈಟ್ ನಡೆಸುತ್ತಿರುವ ರಾಷ್ಟ್ರೀಯ ಭದ್ರತಾ ವಿಶ್ಲೇಷಕ .
ಶೇಖರ್ ಅಯ್ಯರ್, ಮಾಜಿ ರಾಜಕೀಯ ಸಂಪಾದಕ, ಡೆಕ್ಕನ್ ಹೆರಾಲ್ಡ್
ಎ. ಸೂರ್ಯ ಪ್ರಕಾಶ್, ಪ್ರಸ್ತುತ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಮತ್ತು ಪ್ರಸಾರ ಭಾರತಿ ಮಾಜಿ ಅಧ್ಯಕ್ಷರು.
ಅಶೋಕ್ ಟಂಡನ್, ಅಟಲ್ ಬಿಹಾರಿ ವಾಜಪೇಯಿ ಅವರ ಮಾಜಿ ಮಾಧ್ಯಮ ಸಲಹೆಗಾರ, ಪ್ರಸ್ತುತ ಪ್ರಸಾರ್ ಭಾರತಿಯಲ್ಲಿ ಸಲಹೆಗಾರರ ಮಂಡಳಿಯಲ್ಲಿದ್ದಾರೆ.
ಅಶೋಕ್ ಮಲಿಕ್, ಭಾರತದ ರಾಷ್ಟ್ರಪತಿಯ ಮಾಜಿ ಪತ್ರಿಕಾ ಕಾರ್ಯದರ್ಶಿ
ಶಶಿ ಶೇಖರ್ ವೆಂಪತಿ, ಪ್ರಸಾರ್ ಭಾರತಿ ಸಿಇಒ.

ಅಂತಹದೆ ಮೂರನೆಯ ಸಭೆಯನ್ನು 2020 ರ ಜೂನ್ 24 ರಂದು ಸ್ಮೃತಿ ಇರಾನಿ ಅವರು ಟೆಲಿವಿಷನ್ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರಕ್ಕೆ “ಸಕಾರಾತ್ಮಕ ನಿರೂಪಣೆ” ಗಳನ್ನು ಉತ್ತೇಜಿಸುವಲ್ಲಿ ಪ್ರಭಾವ ಬೀರುವ ಐವರು ಕಟ್ಟಾ ಹಿಂದುತ್ವ ಪ್ರತಿಪಾದಕರೊಮದಿಗೆ ನಡೆಸಿದರು. ಸ್ವರಾಜ್ಯ ಸಂಪಾದಕ ಆನಂದ್ ರಂಗನಾಥನ್, ಚಲನಚಿತ್ರ ವಿಮರ್ಶಕ ಅನಂತ್ ವಿಜಯ್, ಸ್ವರಾಜ್ಯ ಅಂಕಣಕಾರ ಸುನೀಲ್ ರಾಮನ್, ಒಪಿಇಂಡಿಯಾ ಮುಖ್ಯಸ್ಥ ನೂಪುರ್ ಶರ್ಮಾ ಮತ್ತು ಮೇಲ್ ಟುಡೆ ಮಾಜಿ ಸಂಪಾದಕ ಅಭಿಜಿತ್ ಮಜುಂದರ್ ಈ ಸಭೆಯಲ್ಲಿದ್ದರು.

ಇರಾನಿ ಮತ್ತು ಜಾವಡೇಕರ್ ನಡೆಸಿದ ಸಭೆಗಳಲ್ಲಿ ಭಾಗವಹಿಸಿದವರು ಮಾಡಿದ ಕೆಲವು ಸಲಹೆಗಳು ಹೀಗಿವೆ.

ಸರ್ಕಾರಗಳ ಸುದ್ದಿ “ಸತ್ಯ ಮತ್ತು ಅಸತ್ಯದ ಮಿಶ್ರಣವನ್ನು ಹೊಂದಿರಬೇಕು” ಎಂದು ಅವರು ಹೇಳಿದ್ದಾರೆ. “ನಿರೂಪಣೆಗಳನ್ನು ತಿರುಗಿಸಲು” ಮತ್ತು ವಿರೋಧ ಪಕ್ಷಗಳನ್ನು ಪ್ರಶ್ನಿಸಲು ಮಾಜಿ ಸೇನಾ ಜನರಲ್‌ಗಳನ್ನು ಬಳಸಿಕೊಳ್ಳಬೇಕೆಂದು ಅವರು ಶಿಫಾರಸು ಮಾಡಿದರು. ಪ್ರಧಾನ ಮಂತ್ರಿ, ಗೃಹ ಸಚಿವರು ಮತ್ತು ಇತರ ಹಿರಿಯ ಮಂತ್ರಿಗಳು ಮಾಧ್ಯಮ ಮನೆಗಳಲ್ಲಿನ ಮಾಲೀಕರೊಂದಿಗೆ ಮತ್ತು ಸಂಪಾದಕರೊಂದಿಗೆ “ವಿಶ್ವಾಸವನ್ನು ಬೆಳೆಸಲು” ಮಾತನಾಡಬೇಕೆಂದು ಅವರು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಅನೇಕ ಮಾಧ್ಯಮಗಳು ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಮಾಧ್ಯಮಗಳಿಗೆ “ಸಹಾಯ” ಮಾಡಲು ಇದು ಅತ್ಯುತ್ತಮ ಸಮಯ ಎಂದು ಗುರುಮೂರ್ತಿ ಹೇಳಿದ್ದಾರೆ.

“ಮಾಧ್ಯಮ ಹಗೆತನವನ್ನು” ನಿಭಾಯಿಸಲು ಪೋಖ್ರಾನ್ ತರಹದ ಪರಿಣಾಮವನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದ್ದಾರೆ. ಕೇಂದ್ರ ಸಚಿವ ಪ್ರಸಾದ್ ಅವರು ಅಂತಿಮ ಶಿಫಾರಸುಗಳನ್ನು ಸುಲಭವಾಗಿ ಸಮರ್ಥಿಸಿಕೊಳ್ಳುತ್ತಾರೆ.

ಇದೇ ರೀತಿಯ ಧಾಟಿಯಲ್ಲಿ ಕಾಂಚನ್ ಗುಪ್ತಾ ಅವರು, ವಿದೇಶಿ ಮಾಧ್ಯಮ ಮತ್ತು ಭಾರತೀಯ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು. ಪಕ್ಷದ ಪ್ರಭಾವಿಗಳ ಪಟ್ಟಿಯನ್ನು ನಿಯಮಿತವಾಗಿ ಸಂಪರ್ಕಿಸಬಹುದಾದ ಅಂತಹ ಪತ್ರಕರ್ತರಿಗೆ ನೀಡಬೇಕು’ ಎಂದಿದ್ದಾರೆ.

“ಆನ್‌ಲೈನ್ ಸುದ್ದಿ ವೇದಿಕೆಗಳಾದ ಪ್ರಿಂಟ್, ವೈರ್, ಸ್ಕ್ರಾಲ್, ಹಿಂದೂ, ಇತ್ಯಾದಿಗಳ ಸುದ್ದಿಗಳನ್ನು ಗೂಗಲ್ ಪ್ರಮೋಟ್ ಮಾಡುತ್ತಿದೆ. ಇದನ್ನು ಹೇಗೆ ನಿಭಾಯಿಸುವುದು ಎಂಬುದಕ್ಕೆ ಪ್ರತ್ಯೇಕ ಚರ್ಚೆಯ ಅಗತ್ಯವಿದೆ ಮತ್ತು ಅದನ್ನು ಪರಿಶೀಲಿಸಬೇಕು” ಎಂದು ಅವರು ಹೇಳಿದರು.

ಮಂತ್ರಿಗಳ ಗುಂಪಿನ ವರದಿಯ ಪ್ರಕಾರ, ಮಾಧ್ಯಮ ಸಿಬ್ಬಂದಿಗೆ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸೂಚಿಸಲು ನಿತಿನ್ ಗೋಖಲೆ, “ಪತ್ರಕರ್ತರನ್ನು ಬಣ್ಣಗಳಿಂದ ಕೋಡೆಡ್ ಮಾಡಬಹುದು: ಹಸಿರು – ಬೇಲಿ ಮೇಲೆ ಕುಳಿತವರು (ಯಾವ ಕಡೆಗಾದರೂ ಹೋಗಬಲ್ಲವರು); ಕಪ್ಪು – ಸರ್ಕಾರಕ್ಕೆ ವಿರುದ್ಧವಾಗಿರುವವರು; ಮತ್ತು ಬಿಳಿ – ಸರ್ಕಾರನ್ನು ಬೆಂಬಲಿಸುವ ಪತ್ರಕರ್ತರು.. ನಾವು ಅನುಕೂಲಕರ ಪತ್ರಕರ್ತರನ್ನು ಬೆಂಬಲಿಸಬೇಕು ಮತ್ತು ಉತ್ತೇಜಿಸಬೇಕು” ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆದರೂ ಗುರುವಾರ ಅವರು ಮಾಡಿದ ಟ್ವೀಟ್‌ನಲ್ಲಿ ಇದನ್ನು ನಿರಾಕರಿಸಿದ್ದಾರೆ.

ಸಂಪಾದಕ ಮತ್ತು ಸರ್ಕಾರದ ನಡುವಿನ ಸಂಬಂಧವು ಸಾಂಪ್ರದಾಯಿಕವಾಗಿ “ವಿರೋಧಿ” ಆಗಿರುವುದರಿಂದ, ಸರ್ಕಾರವು ವರದಿಗಾರರನ್ನು ಬೆಳೆಸಬಹುದು, ಅವರು ಸರ್ಕಾರದ ಪ್ರಮುಖ ನಿರ್ಧಾರಗಳಿಗೆ ಕಾರಣವಾಗುವ ಸತ್ಯ-ಆಧಾರಿತ ರಚನೆಯನ್ನು ವಿವರಿಸಬಹುದು ಎಂದು ಶೇಖರ್ ಅಯ್ಯರ್ ಹೇಳಿದ್ದಾರೆ. ಇದು ಅವರ ಪ್ರಕಾರ, ವಿರೋಧಿ ವರದಿಯ ಸಮಸ್ಯೆಯನ್ನು ಪರಿಹರಿಸಬಹುದು.

ಡಿಜಿಟಲ್ ಮೀಡಿಯಾದ ವಿರೋಧಿ ವರದಿಯನ್ನು ಹೇಗೆ ಎದುರಿಸುವುದು ಎಂದು ಮಾಜಿ ಪ್ರಸಾರ್ ಭಾರತಿ ಅಧ್ಯಕ್ಷ ಎ. ಸೂರ್ಯ ಪ್ರಕಾಶ್ ಸಲಹೆಗಳನ್ನು ನೀಡಿದ್ದಾರೆ ಎಂದು ವರದಿ ಹೇಳುತ್ತದೆ. “ಡಿಜಿಟಲ್ ಮೀಡಿಯಾ ನಿರೂಪಣೆಗೆ ಪ್ರತಿಯಾಗಿ ಮಾಧ್ಯಮವನ್ನು ನಿರ್ವಹಿಸಲು ಪಕ್ಷದ ವಕ್ತಾರರು ಅಥವಾ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ವಿಶೇಷವಾಗಿ ಸಾಕ್ಷರ ವರ್ಗದೊಂದಿಗೆ ತೊಡಗಿಸಿಕೊಳ್ಳಲು ನಮಗೆ ಪ್ರತ್ಯೇಕ ವೇದಿಕೆ ಬೇಕು. ಆದ್ದರಿಂದ, ಸಾಮಾಜಿಕ ಮಾಧ್ಯಮ / ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದರು.

ಮಂತ್ರಿಗಳು ಪತ್ರಿಕೆಗಳಲ್ಲಿ ಆಪ್-ಎಡ್ ಬರೆಯುವುದನ್ನು ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದ ರಾಷ್ಟ್ರಪತಿಗಳ ಮಾಜಿ ಪತ್ರಿಕಾ ಕಾರ್ಯದರ್ಶಿ ಅಶೋಕ್ ಮಲಿಕ್, ಅಂಥವನ್ನು ಜನ ಗಂಭಿರವಾಗಿ ಓದುವುದಿಲ್ಲ ಎಂದಿದ್ದಾರೆ. ಆದರೆ ಅವರು ಪರ್ಯಾಯವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

“ಸ್ಟೋರಿಗಳನ್ನು ತಿರುಗಿಸಲು ಹಿನ್ನೆಲೆ ಮಾಹಿತಿಯನ್ನು ಒದಗಿಸಲು ಸಚಿವಾಲಯಗಳ ಸಮೂಹಗಳು ವಕ್ತಾರರನ್ನು ಹೊಂದಿರಬೇಕು.. ಉದಾಹರಣೆಗೆ, ಎಂಇಎ, ವಾಣಿಜ್ಯ ಇತ್ಯಾದಿಗಳಂತೆ ಹೊರನೋಟಕ್ಕೆ ಕಾಣುವ ಸಚಿವಾಲಯಗಳು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ ಇತ್ಯಾದಿ ಸಾಮಾಜಿಕ ವಲಯದ ಸಚಿವಾಲಯಗಳು; ಆರ್ಥಿಕ ಸಮೂಹಗಳು: ಸಿಎಎ, ಎನ್‌ಆರ್‌ಸಿ, ಪರಿಸರ ಮತ್ತು ಹಸಿರು ಶಕ್ತಿಯಂತಹ ರಾಜಕೀಯ ನಿರೂಪಣೆಗಳು. ಈ ಕ್ಲಸ್ಟರ್‌ಗಳಲ್ಲಿ ಯಾರಾದರೂ, ಅಂದರೆ ಮಂತ್ರಿಗಳು, ಸಲಹೆಗಾರರು, ಅಕಾಡೆಮಿಶಿಯನ್‌ಗಳು, ಅಧಿಕಾರಿಗಳಾಗಿರಬಹುದಾದ ವಕ್ತಾರರು ಇರಬೇಕು ಮತ್ತು ಅವರು 24 * 7 ಕೆಲಸ ಮಾಡಬೇಕು” ಎಂದು ಅವರು ಹೇಳಿದರು.

ಸಾಮಾಜಿಕ ಸಮಸ್ಯೆಗಳಿಗೆ ಒತ್ತು ನೀಡುವ ವಿದೇಶಿ ಮಾಧ್ಯಮಗಳು ಮತ್ತು ದಿ ಪ್ರಿಂಟ್, ದಿ ವೈರ್‌ನಂತಹ ದೇಸಿ ಮಾಧ್ಯಮಗಳ ನಮಗೆ ತೊಡಕಾಗಿವೆ. ಇವನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು ಎಂದು ವರದಿಯಲ್ಲಿ ಉಲ್ಲೇಖಿತವಾಗಿದೆ.

ಸ್ಮೃತಿ ಇರಾನಿಯ ಸಭೆಯಲ್ಲಿ ಭಾಗವಹಿಸಿದವರು ವಿರೋಧಿ ಮಾಧ್ಯಮವನ್ನು ನಿಭಾಯಿಸಲು ಹಿಂದುತ್ವ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುನ್ನಡೆಸುವುದು ಸೂಕ್ತವೆಂದು ಭಾವಿಸಿದ್ದಾರೆ.

ಉದಾಹರಣೆಗೆ, ರಂಗನಾಥನ್, ” ಹಿಂದೂಗಳ ಸರ್ವನಾಶದ ಬಗ್ಗೆ ಟಿಪ್ಪು ಅವರ ಪ್ರಣಾಳಿಕೆ ಕುರಿತು ಮಾತನಾಡಲು ನಮಗೆ ಐತಿಹಾಸಿಕ ನಿರೂಪಣೆ ಇಲ್ಲ” ಎಂದು ಹೇಳಿದ್ದಾರೆ. ಪಿಐಬಿಯನ್ನು “ಎಡ ಸಿದ್ಧಾಂತ” ದೊಂದಿಗೆ ನವೀಕರಿಸಬೇಕು ಎಂದು ಅನಂತ್ ವಿಜಯ್ ಅಭಿಪ್ರಾಯಪಟ್ಟರೆ, ಸುನಿಲ್ ರಾಮನ್ “ಸರಿಯಾದ ನಿರೂಪಣೆಗಳನ್ನು ಸೇರಿಸಲು ಪಠ್ಯ ಪುಸ್ತಕಗಳನ್ನು ಬದಲಾಯಿಸಬೇಕು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕೃತಿಗಳನ್ನು ಡಿಜಿಟಲೀಕರಣಗೊಳಿಸಬೇಕು.” ಎಂದರು. (ಮುಖರ್ಜಿ ಜನಸಂಘದ ಸ್ಥಾಪಕ).

‘ಒಪಿಇಂಡಿಯಾ’ ನ ನೂಪುರ್ ಶರ್ಮಾ, ಸರ್ಕಾರದ ಪರವಾದ ತಮ್ಮ ವೆಬ್‌ಸೈಟ್ ಅನ್ನು ಪ್ರಚಾರ ಮಾಡಬೇಕು, ಉತ್ತೇಜಿಸಬೆಕು ಎಂದು ಹೇಳಿದ್ದಾರೆ. ಮಜುಂದರ್ ಅವರ ಬೇಡಿಕೆಯನ್ನು ಪ್ರತಿಧ್ವನಿಸಿದರು: “ಒಪಿಇಂಡಿಯಾಕ್ಕೆ ಸಹಾಯ ಮಾಡಿ ಮತ್ತು ಒಪಿಇಂಡಿಯಾ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿ.” ಆದರೆ ಸರ್ಕಾರವು ವಿವಿಧ ಸಮುದಾಯಗಳ ವಾಟ್ಸಾಪ್ ಗುಂಪುಗಳನ್ನು ವೀಕ್ಷಿಸಬೇಕು” ಎಂದು ಶಿಫಾರಸು ಮಾಡಿದರು ಎಂದು ವರದಿ ಉಲ್ಲೇಖಿಸಿದೆ.

ಜಿಒಎಂ ವಹಿಸಿದ ಪಾತ್ರವನ್ನು ಪತ್ರಕರ್ತರು ನಿರಾಕರಿಸುತ್ತಿದ್ದಾರೆ!

2020 ರ ಜೂನ್ 23 ರಂದು ರಿಜು ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಪತ್ರಕರ್ತರಲ್ಲಿ ಒಬ್ಬರಾದ ಜಯಂತ್ ಘೋಶಲ್, ಕಾರವಾನ್ ನಿಯತಕಾಲಿಕೆಗೆ ಈ ಸಭೆಯನ್ನು ಜೈಶಂಕರ್ ಕರೆದಿದ್ದಾರೆ ಎಂದು ಹೇಳಿದರು. “ನಾವು ಜೈಶಂಕರ್ ಅವರನ್ನು ಭೇಟಿ ಮಾಡಲು ಅಲ್ಲಿಗೆ ಹೋದೆವು” ಎಂದು ಘೋಶಾಲ್ ಪತ್ರಿಕೆಗೆ ತಿಳಿಸಿದರು. “ಸರ್ಕಾರದೊಂದಿಗೆ ಯಾವುದೇ ಸಂವಹನದ ಬಗ್ಗೆ ನಮಗೆ ತಿಳಿಸಲಾಗಿರಲಿಲ್ಲ ಮತ್ತು ಅಂತಹ ಔಪಚಾರಿಕ ಸಂವಹನ ನಡೆಯಲಿಲ್ಲ. ಅಲ್ಲಿ ಹಾಜರಿದ್ದ ಸಚಿವರ ಪರವಾಗಿ ಯಾರೂ ಟಿಪ್ಪಣಿಗಳನ್ನು ತೆಗೆದುಕೊಂಡಿಲ್ಲ. ಈ ಅವಲೋಕನಗಳೊಂದಿಗೆ ಅವರು ಹೇಗೆ ವರದಿ ಮಾಡಿದರು ಎಂಬುದು ನನಗೆ ತಿಳಿಯುತ್ತಿಲ್ಲ” ಎಂದಿದ್ದಾರೆ.

ಈ ನಡುವೆ, ಜಿಒಎಂ ಕುರಿತ ವರದಿಯ ಕಾರವಾನ್ ವರದಿಗೆ ಪ್ರತಿಕ್ರಿಯೆಯಾಗಿ ನಿತಿನ್ ಗೋಖಲೆ ಟ್ವೀಟ್ ಮಾಡಿದ್ದಾರೆ, ಅದರಲ್ಲಿ ಇದೆಲ್ಲ “ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ.

ಜೂನ್ 23, 2020 ರಂದು ರಿಜಿಜು ಅವರನ್ನು ಭೇಟಿಯಾದ ಹೆಚ್ಚಿನ ಪತ್ರಕರ್ತರನ್ನು ದಿ ವೈರ್ ಸಂಪರ್ಕಿಸಿತು. ಮೇ 2020 ರಲ್ಲಿ ಗಾಲ್ವಾನ್ ಕಣಿವೆಯ ನಂತರ ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿಯನ್ನು ಚರ್ಚಿಸಲು ರಿಜಿಜು ಅವರ ನಿವಾಸದಲ್ಲಿ ನಡೆದ ಸಭೆಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕರೆದಿದ್ದಾರೆ ಎಂದು ತಿಳಿದುಬಂದಿದೆ. ಜೈಶಂಕರ್ ಅಂತಿಮವಾಗಿ ಸಭೆಗೆ ಹಾಜರಾಗಲಿಲ್ಲ ಆದರೆ ರಿಜಿಜು ಮತ್ತು ನಖ್ವಿ ಪತ್ರಕರ್ತರೊಂದಿಗೆ ಮಾತನಾಡಿದರು.

ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳ ಸಂಪಾದಕರ ಅಭಿಪ್ರಾಯಗಳನ್ನು ದಿ ವೈರ್ ಕೋರಿತು, ಅವರ ವರದಿಗಾರರು ಈ ಸಂವಾದದಲ್ಲಿ ಪಾಲ್ಗೊಂಡ ಬಗ್ಗೆ ಕೇಳಲಾಗಿತು. ಇಬ್ಬರು ಸಂಪಾದಕರು, ತಾವು ಇನ್ನೂ ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆಂದು ಹೇಳಿದ್ದರಿಂದ ಅವರನ್ನು ಗುರುತಿಸಬಾರದು ಎಂದು ವಿನಂತಿಸಿದ ಅವರು, ತಮ್ಮ ಸಂಸ್ಥೆಯ ಪತ್ರಕರ್ತರು ಸರ್ಕಾರದ ಮಾಧ್ಯಮ ಕಾರ್ಯತಂತ್ರದ ಬಗ್ಗೆ ರಿಜಿಜು ಅಥವಾ ನಖ್ವಿ ಅವರೊಂದಿಗೆ ಯಾವುದೇ ಚರ್ಚೆ ನಡೆಸಲು ನಿರಾಕರಿಸಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡವರ ಬಗ್ಗೆ ಜಿಒಎಂ ತಪ್ಪಾಗಿ ಆರೋಪಿಸಿರಬಹುದು, ಆದರೆ ಸಂಬಂಧಪಟ್ಟ ಸುದ್ದಿ ಸಂಸ್ಥೆಗಳು ಈ ಬಗ್ಗೆ ಔಪಚಾರಿಕವಾಗಿ ಸರ್ಕಾರಕ್ಕೆ ದೂರು ನೀಡಲು ಉದ್ದೇಶಿಸಿವೆ ಎಂಬುದು ಸ್ಪಷ್ಟವಾಗಿಲ್ಲ.

ಇಮೇಜ್ ಕಾಳಜಿ

ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿನ ವಿಫಲತೆ, ಭಾರತೀಯ ಆರ್ಥಿಕತೆಯನ್ನು ಸ್ಥಿರಗೊಳಿಸಲು ಅಸಮರ್ಥತೆ ಮತ್ತು ಅಪಾರ ನಿರುದ್ಯೋಗ ಸಮಸ್ಯೆ ಕುರಿತು ಕೇಂದ್ರ ಸರ್ಕಾರ ನಿರಂತರ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಸಭೆಗಳು ನಡೆದವು. ವಿಮರ್ಶಾತ್ಮಕ ಪತ್ರಿಕೋದ್ಯಮವನ್ನು ನಿಭಾಯಿಸುವ ಅಥವಾ ಹತ್ತಿಕ್ಕುವ ಮತ್ತು ಅನುಕೂಲಕರ ಮಾಧ್ಯಮಗಳನ್ನು ಪ್ರೋತ್ಸಾಹಿಸುವ ಕಾರ್ಯತಂತ್ರ ರೂಪಿಸುವುದು ಈ ಸಭೆಗಳ ಉದ್ದೇಶವಾಗಿತ್ತು. ಇದು ತನ್ನ ನಕಾರಾತ್ಮಕ ಇಮೇಜ್ ಬಗ್ಗೆ ಸರ್ಕಾರ ಕಳವಳ ಹೊಂದಿದ್ದನ್ನು ತೋರಿಸುತ್ತದೆ.

ಸರ್ಕಾರವು ತುರ್ತಾಗಿ ಮಾಧ್ಯಮಗಳಿಗೆ ಸಕಾರಾತ್ಮಕ ಕಥೆಗಳನ್ನು ನೀಡಬೇಕು ಎಂದು “10 ನಿರೂಪಣೆಗಳನ್ನು” ಜಿಒಎಂ ವರದಿ ಉಲ್ಲೇಖಿಸಿದೆ. ಇದು ಸರ್ಕಾರವನ್ನು ಉತ್ತಮ ಬೆಳಕಿನಲ್ಲಿ ತೋರಿಸುತ್ತದೆ ಎಂದು ವರದಿ ಹೇಳುತ್ತದೆ. ಪತ್ರಿಕೋದ್ಯಮ ಶಾಲೆಗಳೊಂದಿಗೆ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ವರದಿ ಹೇಳುತ್ತದೆ, ಇದರಿಂದಾಗಿ ಉದಯೋನ್ಮುಖ ಪತ್ರಕರ್ತರು ಸಹ ಸರ್ಕಾರದ ಸಂವಹನ ಕಾರ್ಯತಂತ್ರದ ವಾಹಕಗಳಾಗಬಹುದು.

ಚುನಾಯಿತ ಪ್ರತಿನಿಧಿಗಳು ಮತ್ತು ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿನಿಧಿಗಳ ನೇರ ಸಂಪರ್ಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಮನೆಗಳು ಮತ್ತು ಅಕಾಡೆಮಿಗಳೊಂದಿಗೆ ತೊಡಗಿಸಿಕೊಳ್ಳುವುದು ಸೇರಿದಂತೆ ವಿವಿಧ ವಿಧಾನಗಳಿಂದ ಈ 10 ದೊಡ್ಡ ನಿರೂಪಣೆಗಳನ್ನು ಜನರಿಗೆ ಕೊಂಡೊಯ್ಯಲು ಬಹುಮುಖಿ ಕಾರ್ಯತಂತ್ರವನ್ನು ರೂಪಿಸುವುದರ ಮೇಲೆ ಸರ್ಕಾರದ ಚರ್ಚೆಗಳು ಕೇಂದ್ರೀಕೃತವಾಗಿವೆ. ಎಲ್ಲಾ ರೀತಿಯ ಮಾಧ್ಯಮಗಳನ್ನು ಬಳಸುವುದು, ಸಕಾರಾತ್ಮಕ ಸ್ಟೋರಿಗಳನ್ನು ನಿಭಾಯಿಸುವುದು, ರಚನಾತ್ಮಕ ತೊಡಗಿಸಿಕೊಳ್ಳುವಿಕೆಗಳಿಗಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು, ಅತ್ಯುತ್ತಮ ಅಂತರರಾಷ್ಟ್ರೀಯ ಸಾರ್ವಜನಿಕ ಪ್ರಸಾರದ ಮಾರ್ಗದಲ್ಲಿ ಡಿಡಿ ಇಂಟರ್‌ನ್ಯಾಷನಲ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ಡೊಮೇನ್ ತಜ್ಞರ ಸಂಪನ್ಮೂಲ ಪೂಲ್ ಅನ್ನು ಬಲಪಡಿಸುವುದು ” ಮುಖ್ಯ ಎಂದು ವರದಿ ತಿಳಿಸಿದೆ.

ಸೆನ್ಸಾರ್‌ಶಿಪ್ ಮತ್ತು ಸ್ಪಿನ್ ವೈದ್ಯರು

ಕುತೂಹಲಕಾರಿಯಾಗಿ, ಹಿರಿಯ ಪತ್ರಕರ್ತರು ಮಾಧ್ಯಮಗಳನ್ನು ಸೆನ್ಸಾರ್ ಮಾಡುವ ಪ್ರಯತ್ನದಲ್ಲಿ ಕೇಂದ್ರಕ್ಕೆ ಸಹಾಯ ಮಾಡುವ ಉದ್ದೇಶದಿಂದ ತಮ್ಮ ವೃತ್ತಿಪರ ಬೇಡಿಕೆಗಳಿಂದ ಹೊರಬಂದಿದ್ದಾರೆ. ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸಲು ಕೇಂದ್ರವು ಅಧಿಸೂಚಿಸಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು ಈ ಕಾರ್ಯತಂತ್ರದ ನೇರ ಪರಾಕಾಷ್ಠೆಯಾಗಿ ಕಂಡುಬರುತ್ತವೆ. ನಿಯಮಗಳು ಮೂರು ಹಂತದ ರಚನೆಯನ್ನು ಜಾರಿಗೆ ತಂದಿದ್ದು, ಇದು ಪ್ರಕಾಶಕರಿಗೆ ಸರಿಯಾದ ವಿಚಾರಣೆಯನ್ನು ನೀಡದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅಭೂತಪೂರ್ವ ಅಧಿಕಾರವನ್ನು ನೀಡುತ್ತದೆ.

ಮೇಲ್ನೋಟಕ್ಕೆ, ಜಿಒಎಂ ವರದಿಯು “ಸುಳ್ಳು ನಿರೂಪಣೆಗಳು” ಮತ್ತು “ನಕಲಿ ಸುದ್ದಿಗಳನ್ನು” ಒಳಗೊಂಡಿರುವ ಕಡೆಗೆ ಸಜ್ಜಾಗಿದೆ. ಹೇಗಾದರೂ, ವರದಿಯ ತಿರುಳು “ಮಾಧ್ಯಮಗಳ ಹಗೆತನವನ್ನು” ನಿಭಾಯಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಸರ್ಕಾರದ ನೀತಿಗಳ ಯಾವುದೇ ನಿರ್ಣಾಯಕ ವ್ಯಾಪ್ತಿಯನ್ನು ಸುಳ್ಳು ಅಥವಾ ನಕಲಿ ಎಂದು ಪರಿಗಣಿಸಲು ಆದೇಶಿಸುತ್ತದೆ.

ಕನಿಷ್ಠ ಒಬ್ಬ ಕೇಂದ್ರ ಸಚಿವರಾದರೂ (ನಖ್ವಿ) ವರದಿಯಲ್ಲಿ ಇದನ್ನು ಸಾಕಷ್ಟು ಸ್ಪಷ್ಟಪಡಿಸಿದ್ದಾರೆ. “ಸರ್ಕಾರದ ವಿರುದ್ಧ ಬರೆಯುತ್ತಿರುವ ಜನರನ್ನು ಸತ್ಯಗಳಿಲ್ಲದೆ ತಟಸ್ಥಗೊಳಿಸಲು ಮತ್ತು ಸುಳ್ಳು ನಿರೂಪಣೆಗಳನ್ನು / ನಕಲಿ ಸುದ್ದಿಗಳನ್ನು ಹರಡಲು ನಾವು ತಂತ್ರವನ್ನು ಹೊಂದಿರಬೇಕು” ಎಂದು ಅವರು ಹೇಳಿದರು.

ಸರ್ಕಾರದ ಹೊಸ ಸಂವಹನ ಕಾರ್ಯತಂತ್ರದ ಭಾಗವಾಗಿ ವಿವಿಧ ಸಚಿವಾಲಯಗಳಿಗೆ ನಿಯೋಜಿಸಲಾದ “ಜವಾಬ್ದಾರಿ” ವಿಭಾಗವು ಇದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

ಐ ಮತ್ತು ಬಿ ಸಚಿವಾಲಯಕ್ಕೆ “ಒಪಿಇಂಡಿಯಾದಂತಹ ಬೆಂಬಲಿತ ಆನ್‌ಲೈನ್ ಪೋರ್ಟಲ್‌ಗಳನ್ನು ಉತ್ತೇಜಿಸುವ” ಕಾರ್ಯವನ್ನು ವಹಿಸಲಾಗಿದೆ. ಏಕೆಂದರೆ “ಅಸ್ತಿತ್ವದಲ್ಲಿರುವ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಹೆಚ್ಚಿನವು [ಸರ್ಕಾರವನ್ನು] ಟೀಕಿಸುತ್ತವೆ” ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಸರ್ಕಾರವನ್ನು “ಅಪಖ್ಯಾತಿ” ಮಾಡುವ “50 ನಕಾರಾತ್ಮಕ ಪ್ರಭಾವಶಾಲಿ ಮಾಧ್ಯಮಗಳನ್ನು” ಪತ್ತೆಹಚ್ಚಲು ಸಚಿವಾಲಯವನ್ನು ಕೇಳಲಾಗಿದೆ. ಅದೇ ಸಮಯದಲ್ಲಿ, “ಸರ್ಕಾರದ ಕೆಲಸವನ್ನು ಸಕಾರಾತ್ಮಕವಾಗಿ ಯೋಜಿಸುವ” ಕನಿಷ್ಠ 50 ಸಕಾರಾತ್ಮಕ ಮಾಧ್ಯಮಗಳು ಸಚಿವಾಲಯವು “ಪ್ರೋತ್ಸಾಹಿಸಬೇಕು” ಮತ್ತು ಅವರಿಗೆ “ಅಗತ್ಯವಾದ ಮಾಹಿತಿಯನ್ನು ಒದಗಿಸಬೇಕು” ಎಂದು ವರದಿ ಹೇಳಿದೆ.

“ಒಂದೇ ಸತ್ಯವನ್ನು ವಿಭಿನ್ನ ನಿರೂಪಣೆಗಳೊಂದಿಗೆ ಪ್ರಸ್ತುತಪಡಿಸಬಹುದು. ಆದ್ದರಿಂದ, ಸರ್ಕಾರಕ್ಕಾಗಿ ಇದನ್ನು ಮಾಡಬಲ್ಲ ಸ್ಪಿನ್ ವೈದ್ಯರ ಗುಂಪನ್ನು ಗುರುತಿಸಿ ಬಳಸಿಕೊಳ್ಳಬೇಕು” ಎಂದು ವರದಿಯು ಐ ಮತ್ತು ಬಿ ಸಚಿವಾಲಯಕ್ಕೆ ಜವಾಬ್ದಾರಿ ವಹಿಸಿದೆ.


ಇದನ್ನೂ ಓದಿ: ರೈತ ಹೋರಾಟ: ಬಿಜೆಪಿಗೆ ಮತ ನೀಡದಂತೆ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಲಿರುವ ಟಿಕಾಯತ್‌‌

LEAVE A REPLY

Please enter your comment!
Please enter your name here