ನಾಟಕದ ಮೂಲಕ ಕೈದಿಗಳಲ್ಲಿನ ಅದ್ಭುತ ಪ್ರತಿಭೆ ಹೊರತೆಗೆದ ಹುಲುಗಪ್ಪ ಕಟ್ಟೀಮನಿ

| ಬಿ. ಚಂದ್ರೇಗೌಡ |

ನಾಟಕ ನಿರ್ದೇಶಕ ಹುಲುಗಪ್ಪ ಕಟ್ಟೀಮನಿಯವರು ಮೈಸೂರಿನ ಜೈಲು ನಿವಾಸಿಗಳಿಗೆ ಕಲಿಸಿದ್ದ ಎರಡು ನಾಟಕಗಳನ್ನು ತಂದು ಶಿವಮೊಗ್ಗದಲ್ಲಿ ಪ್ರದರ್ಶಿಸಿದರು. ನಿಜಕ್ಕೂ ಇದೊಂದು ಅಸಾಮಾನ್ಯ ಸಾಧನೆಯೆಂದೇ ಹೇಳಬೇಕು. ಸಹಜವಾಗಿ ಇಂತಹ ಸಾಹಸಗಳಿಗೆ ಬೆನ್ನೆಲುಬಾಗಿ ನಿಲ್ಲುವ ಜಿಲ್ಲಾಧಿಕಾರಿ ದಯಾನಂದ್‍ರವರು ಮತ್ತು ಮೈಸೂರಿನ ಕಾರಾಗೃಹದ ಸೂಪರಿಂಟೆಂಡೆಂಟ್ ದಿವ್ಯಶ್ರೀಯವರ ಕಾಳಜಿಯ ಫಲವಾಗಿ ಇಂತಹ ಘಟನೆ ಸಂಭವಿಸಿತು.

ಘಟನೆ ಏಕೆಂದರೆ, ಕಾರಾಗೃಹ ವಾಸಿಗಳಿಗೆ, ನಾಟಕ ಕಲಿಸಿ ಅದನ್ನು ಜೈಲಿನಿಂದ ಹೊರಗೆ ತೆಗೆದುಕೊಂಡು ಹೋಗಿ ಅದ್ಭುತ ಪ್ರದರ್ಶನ ನೀಡಿದ್ದಕ್ಕೆ. ಇದು ದೇಶದಲ್ಲೆಲ್ಲೊ ನಡೆಯದೆ ಇರುವ ಸಾಹಸ. ದಿವ್ಯಶ್ರೀ ಈಗ ಶಿವಮೊಗ್ಗದ ಜಿಲ್ಲಾ ಸೂಪರಿಂಟೆಂಡೆಂಟ್ ಆಗಿ ಬಂದಿರುವುದರಿಂದ ಇಲ್ಲೂ ಅಂತಹ ಸಾಹಸ ಜರುಗಬಹುದು.

ಮೈಸೂರಿನಿಂದ ಐವತ್ತು ಜನ ಕೈದಿಗಳನ್ನ ಹೊರತೆಗೆದುಕೊಂಡು ಹೋಗುವುದೇ ಒಂದು ಸಾಹಸ. ಇದಕ್ಕಾಗಿ ಇಲಾಖೆ ಮತ್ತು ಸರಕಾರದ ನಡುವೆ ನಂಬಿಕೆಯ ನಡವಳಿಕೆ ಬೇಕಾಗುತ್ತದೆ. ಇದನ್ನೆಲ್ಲಾ ಸುಗಮಗೊಳಿಸಿ ಹೋದವರು, ಅಂದು ಗೃಹ ಸಚಿವರಾಗಿದ್ದ ಎಂ.ಪಿ ಪ್ರಕಾಶರು. ಅವರೆಂತಹ ವ್ಯಕ್ತಿ ಎಂದರೆ, – ಪೆರೋಲ್ ಮೇಲೆ ಬಿಡುಗಡೆ ಕೇಳಲು ಮನೆಗೆ ಹೋದ ಕೈದಿಯನ್ನ ಕೂರಪ್ಪ ಕೂತುಗೊ” ಎಂದು ಕೂರಿಸಿ, ಕಾಫಿ ಕೊಟ್ಟು ಊರು, ಕೇರಿ, ಮಾಡಿದ ಅಪರಾಧವನ್ನು ಕೇಳಿ ಕಳುಹಿಸುತ್ತಿದ್ದ ಅಪರೂಪದ ವ್ಯಕ್ತಿ. ಅವರ ಕಾಳಜಿಯ ಫಲವಾಗಿ ನಮ್ಮ ನಡುವೆಯಿದ್ದ ರಂಗ ಚಟುವಟಿಕೆ ಜೈಲು ಪ್ರವೇಶಿಸುವಂತಾಯ್ತು. ಅವರ ಮೆಚ್ಚಿನ ವ್ಯಕ್ತಿಯಾಗಿದ್ದ ಹುಲುಗಪ್ಪ ಕಟ್ಟಿಮನಿ, ತಿಂಗಳಾನುಗಟ್ಟಲೆ ಶ್ರಮವಹಿಸಿ, ಅಪರಾಧವೆಸಗಿದ ಕಾರಣಕ್ಕೆ ಖಿನ್ನತೆಗೊಳಗಾಗಿ ಅವಸಾನದ ಮುಖಭಾವದಲ್ಲಿದ್ದ ಕೈದಿಗಳಿಗೆ, ಮರುಜೀವ ಕೊಟ್ಟಿದ್ದಾರೆ.

ಹುಲುಗಪ್ಪ ಕಟ್ಟೀಮನಿ

ಕಟ್ಟಿಮನಿ ನೇರ ನಾಟಕ ಕಲಿಸಿದ, ಅವರಿಗೆಲ್ಲಾ ಯೋಗದ ಶಿಬಿರ ಮತ್ತಿತರ ಚಟುವಟಿಕೆ ಕಲಿಸಿ ಆನಂತರ ಅವರಲ್ಲಿನ ಪ್ರತಿಭೆ ಗುರುತಿಸಿ ನಂತರ ತಾವು ಆರಿಸಿಕೊಂಡ ನಾಟಕದ ಪಾತ್ರಗಳಿಗೆ ಲಗತ್ತಾದ ದೇಹಾಕೃತಿ ಮತ್ತು ಮುಖಚರ್ಯೆ ಗ್ರಹಿಸಿ ಆಯ್ಕೆಮಾಡಿಕೊಂಡಿದ್ದರಿಂದ ಕೈದಿಗಳು ಪಾತ್ರಗಳೇ ಆಗಿ ಹೋಗಿದ್ದರು. ಸಾಮಾನ್ಯವಾಗಿ ಜೈಲು ಸೇರಿದ ಅಪರಾಧಿಗಳು ಉಕ್ಕುವ ಆರೋಗ್ಯವಂತರಾಗಿರುತ್ತಾರೆ. ದಷ್ಟಪುಷ್ಟ ದೇಹದವರಾಗಿರುತ್ತಾರೆ. ಅಪರಾಧವೆಸಗಲು ಇದು ಪ್ರಧಾನ ಕಾರಣ. ಹುಲುಗಪ್ಪ ಕಟ್ಟೀಮನಿ ಕರೆತಂದ ಕೈದಿಗಳೆಲ್ಲರೂ ಆರೋಗ್ಯವಂತರಾಗಿದ್ದರು. ಈ ಪೈಕಿ ಸಂಗ್ಯಾಬಾಳ್ಯಾ ನಾಟಕದ ಸಂಗ್ಯಾನ ಪಾತ್ರಧಾರಿ ನಮ್ಮ ಕಲ್ಪನೆಯ ಸಂಗ್ಯಾನ ಪ್ರತಿರೂಪದಂತಿದ್ದ. ಇಲ್ಲಿನ ಪಾತ್ರಧಾರಿಗಳೆಲ್ಲಾ ಬಹುತೇಕ ಕೊಲೆ ಆಪಾದನೆಯಿಂದ ಜೀವಾವಧಿಗೆ ತುತ್ತಾಗಿದ್ದವರು.

ಪಕ್ಕದ ಮನೆಯ ಕೆಟ್ಟ ಮನುಷ್ಯನನ್ನೇ ಒಂದೇ ಏಟಿಗೆ ಕೊಂದವನು, ಹೆಂಡತಿ ಕೊಂದವನು, ತಂಗಿಯ ಬಗ್ಗೆ ಕೆಟ್ಟ ಮಾತನಾಡಿದವನನ್ನೇ ಕೊಂದುಹಾಕಿದವನು, ಮುಸ್ಲಿಮನನ್ನು ಹದಿನಾಲ್ಕು ಪೀಸುಗಳಾಗಿ ಕೊಂದ ಭಜರಂಗಿ, ತನ್ನಿಂದ ಇಂತಹ ಕೃತ್ಯವೆಸಗಲು ಪ್ರಚೋದಿಸಿ ಮರೆಯಾದ ಆರೆಸೆಸ್‍ನವರ ಬಗ್ಗೆ ಜೈಲಲ್ಲಿ ಕುದಿಯುತ್ತಿರುವವನು, ಹೀಗೆ, ಅಪರಾಧಗಳ ವಿಭಾಗ ಅಸಂಖ್ಯ. ಇವರೆಲ್ಲರ ಕೃತ್ಯ ಕೇಳುತ್ತಿದ್ದರೆ, ಮನುಷ್ಯನ ಮನಸ್ಸಿನಲ್ಲಿನ ಕ್ರೌರ್ಯದ ವಿರಾಟ ದರ್ಶನವಾಗುತ್ತದೆ. ಅಲ್ಲದೆ ಸಿಟ್ಟೇ ಇಲ್ಲದಿದ್ದರೆ ಮನುಷ್ಯನ ಬಾಳು ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ.

ಹುಲುಗಪ್ಪ ಕಟ್ಟೀಮನಿ ಆರಿಸಿಕೊಂಡ ನಾಟಕ ಜಯಂತರ ತರ್ಜುಮೆಯಾದ “ಜೊತೆಗಿರುವನು ಚಂದಿರ” ಮತ್ತು ಕಂಬಾರರ “ಸಂಗ್ಯಾ ಬಾಳ್ಯಾ”. ಈ ಎರಡೂ ನಾಟಕ ಈ ಹಿಂದೆ ಹಲವು ಪ್ರಯೋಗ ಕಂಡಿದ್ದರೂ ಹುಲುಗಪ್ಪನವರು ಮೂಲ ನಾಟಕದೊಳಕ್ಕೆ ತಮ್ಮ ಪ್ರತಿಭೆಯನ್ನು ಬೆರೆಸಿರುವುದರಿಂದ ಸಮಯ ದ್ವಗುಣಗೊಂಡಿರುವುದಲ್ಲದೆ, ಎಲ್ಲ ಕೈದಿಗಳೂ ಸ್ಟೇಜಿಗೆ ಬಂದು ವಿಜೃಂಭಿಸುವಂತಾಗಿದೆ. ಹಾಗೆ ನೋಡಿದರೆ ಈ ಎರಡೂ ನಾಟಕಗಳು ಐತಿಹಾಸಿಕ ಘಟನೆಗಳು. ಭಾರತ ಪಾಕಿಸ್ತಾನ ಇಬ್ಭಾಗವಾದಾಗಿನ ಒಂದು ಘಟನೆ ಹೇಳುವ ‘ಜತೆಗಿರುವನು ಚಂದಿರ’ವನ್ನು ನೋಡುತ್ತಿದ್ದರೆ ಇದೇ ಘಟನೆಯನ್ನ ಹಿಂದೂ ಕುಟುಂಬಕ್ಕೆ ಬದಲಾಯಿಸಿದರೆ ಎರಡೂ ಒಂದೇ ವೃತ್ತಾಂತವನ್ನು ಹೇಳುತ್ತವೆ.

ಪ್ರಪಂಚದ ಯಾವ ದೇಶವೂ ಭಾರತದಂತೆ ಇಬ್ಭಾಗವಾಗಿಲ್ಲ, ಮತ್ತು ಇಷ್ಟು ವರ್ಷಗಳ ನಂತರವೂ ಪರಸ್ಪರ ದ್ವೇಷಿಸುತ್ತಾ ಯುದ್ದ ಮಾಡುತ್ತಾ ಬಂದಿಲ್ಲ. ಆದರೆ ಆ ಸಂದರ್ಭದ ಯಾವ ಪ್ರಜೆಗೂ ಈ ವಿಭಾಗ ಮತ್ತು ವಲಸೆ ಬೇಕಿರಲಿಲ್ಲ. ಆದರೆ ನಡೆದುಹೋಯ್ತು. ವಿಭಾಗ ಮತ್ತು ಹತ್ಯಾಕಾಂಡದ ಆಗಿನ ವಲಸೆ ನೋಡಿದ ಮಹಮದ್ ಅಲಿ ಜಿನ್ನಾ ನಾನು ವಿಭಾಗಿಸಿದ್ದು ಇಂತಹ ವಲಸೆ ನೋಡಲಿಲ್ಲ. ಅಲ್ಲಿಯವರು ಅಲ್ಲಲ್ಲೇ ಇರುತ್ತಾರೆ. ವಿಭಾಗದ ಗಡಿಯಷ್ಟೇ ನಿರ್ಮಾಣವಾಗುತ್ತದೆ ಎಂದು ಭಾವಿಸಿದ್ದನಂತೆ. ಆದರೆ ಆಗಿನ ಸಂದರ್ಭ ಕುರಿತ ಈ ನಾಟಕ ನೋಡುಗರನ್ನ ಆಧ್ರಗೊಳಿಸುತ್ತದೆ.

ಮುಸ್ಲಿಂ ಕುಟುಂಬವೊಂದು ಅನಾಥವಾಗಿ ಭಾರತ ಬಿಟ್ಟು ಹೋಗುತ್ತದೆ. ಹೋಗುವ ಮುನ್ನ ಮನೆಯೊಡತಿ ಮನೆ ಕಸಗುಡಿಸಿ ಹೋಗುತ್ತಾಳೆ. ಇದು ಪ್ರೇಕ್ಷಕನ ಮಧುರಗೊಳಿಸಲು ಆ ಕಾಲದ ಹಿಂದಿ ಸಿನಿಮಾ ಹಾಡುಗಳನ್ನ ಬಳಸಿಕೊಂಡಿದ್ದಾರೆ. ಇದೊಂದು ರೀತಿ ಅರ್ಥಪೂರ್ಣವಾಗಿದೆ. ಅಂದು ವಿಭಾಗದ ವಲಸೆ ಹತ್ಯಾಕಾಂಡ ನಡೆಯುತ್ತಿದ್ದರೆ, ಇತ್ತ ಹಿಂದೂಸ್ತಾನಿ ಸಂಗೀತಗಾರರಾದ ಬಡೇಗುಲಾಂ ಆಲಿ ಖಾನ್‍ರ ಸಂಗೀತ ಮತ್ತು ಪಾಕಿಸ್ತಾನದಿಂದ ಬಂದ ದೇವಾನಂದ್ ದಿಲೀಪ್‍ಕುಮಾರ್ ಇತ್ಯಾದಿ ನಾಯಕ ನಟರು ವಿಜೃಂಭಿಸುತ್ತಿದ್ದರು. ಇಡೀ ಹಿಂದಿ ಚಿತ್ರರಂಗವೇ ಮುಸ್ಲಿಂ ಪ್ರತಿಭಾವಂತರಿಂದ ತುಂಬಿಹೋಗಿತ್ತು. ಅದೊಂದು ವಿಪರ್ಯಾಸಗಳೇ ಮೇಳೈಸಿದ ಕಾಲ ಅನ್ನಬಹುದು.

ಇನ್ನ ಹುಲುಗಪ್ಪನವರು ನಿರ್ದೇಶಿಸಿರುವ ಸಂಗ್ಯಾ ಬಾಳ್ಯಾ ಹಲವು ನಿರ್ದೇಶಕರ ಕೈಲಿ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದೆ. ನೂರು ವರ್ಷದ ಹಿಂದೆ ನಡೆದ ಈ ಕೊಲೆ ಅಕ್ರಮ ಸಂಬಂಧಕ್ಕೆ ಪ್ರತಿಕಾರವಾಗಿ ನಡೆದದ್ದು, ಇಂದೂ ಕೂಡ ನಡೆಯುತ್ತಿದೆ. ಹಾಗಾಗಿ ಇದೊಂದು ಎಂದೆಂದೂ ಬದುಕಿಕೊಂಡೇ ಇರುವ ಕ್ರೌರ್ಯದ ವಸ್ತು. ತನ್ನ ಹೆಂಡತಿ ಗಂಗಿಯನ್ನ ಇಟ್ಟುಕೊಂಡ ಸಂಗ್ಯನನ್ನ ವೀರಪ್ಪ ಕೊಂದು ಹಾಕುತ್ತಾನೆ. ಜೈಲಿಗೆ ಬರುತ್ತಾನೆ, ಕೈದಿಗಳು ಘಟನೆ ಕುರಿತು ಕೇಳುತ್ತಾರೆ. ಅಂದರೆ ನಾಟಕ ಆರಂಭವಾದ ಅರ್ಧಗಂಟೆಯಲ್ಲೇ ಮುಗಿದುಹೋದ ನಾಟಕ, ಜೈಲಿನ ಮುಖಾಂತರ ಬೆಳೆಯತೊಡಗುತ್ತದೆ. ಖೈದಿಗಳೆಲ್ಲರಿಗೂ ಅವಕಾಶ ಕೊಟ್ಟಿರುವ ಹುಲುಗಪ್ಪ ಕಡೆಯಲ್ಲಿ ವೀರಪ್ಪ ಗಲ್ಲಿಗೇರುವ ದೃಶ್ಯದಲ್ಲಿ ಕೊನೆಗೊಳಿಸಿದ್ದಾರೆ.

ವೀರಪ್ಪನಿಗೆ ನೇಣಿಗೇರಿಸುವ ಅಧಿಕಾರಿಗಳು ಕೊನೆಯಾಸೆ ಕೇಳಿದಾಗ ಆತ “ತನ್ನ ಗಂಗಿಯನ್ನ ತಪ್ಪು ತಿಳಿದೆ, ಸಂಗ್ಯಾನನ್ನ ನಾನು ಕೊಲ್ಲುವಾಗ ಆತನಗುತ್ತಿದ್ದ ನನ್ನನ್ನು ಇಲ್ಲಿಯವರೆಗೂ ಕಾಡಿಸಿದ್ದು ಆತನ ನಗು ವ್ಯಾಪಾರ ಮಾಡಿ ಹಣ ಸಂಗ್ರಹಿಸುವ ಲೋಭಿತನಕ್ಕೆ ಬಿದ್ದ ನಾನು ಗಂಗಿಯನ್ನ ನಿರ್ಲಕ್ಷಿಸಿದೆ” ಎನ್ನುತ್ತಾನೆ. ಆತ ತಪ್ಪು ಒಪ್ಪಿಕೊಂಡು ಪಶ್ಚಾತ್ತಾಪ ಪಡುವ ಸಮಯಕ್ಕೆ ನೇಣು ಬೀಳುತ್ತದೆ. ಕೈದಿಗಳ ಸಮೇತ ಪ್ರೇಕ್ಷಕ ಸಮೂಹ ದಿಗ್ಭ್ರಮೆಗೊಳ್ಳುತ್ತದೆ. ಹುಲುಗಪ್ಪ ಆರಿಸಿರುವ ವೀರಪ್ಪನ ಪಾತ್ರ ಕೂಡ, ಕೊಲೆಯೆಂದರೆ ಫಲವಾಗಿ ಜೈಲು ಸೇರಿದ ವ್ಯಕ್ತಿ. ಆದ್ದರಿಂದ ಅವನ ಅಭಿನಯ ಮನಮುಟ್ಟುವಂತಿತ್ತು.

ಎರಡೂ ಮುಕ್ಕಾಲು ಗಂಟೆಯಷ್ಟೇ ಆರಂಭಿಸಿರುವ ಈ ನಾಟಕ ಸಮಯ ಹೋದದ್ದೇ ಗೊತ್ತಾಗದಷ್ಟು ಲವಲವಿಕೆಯಿಂದ ಕೂಡಿದೆ. ಯಾವ ದೃಶ್ಯವನ್ನ ಕೈಬಿಡದಷ್ಟೂ ಬಿಗಿಯಾಗಿ ಕಟ್ಟೀಮನಿ ಕಟ್ಟಿಕೊಟ್ಟಿದ್ದಾರೆ. ಮರುದಿನದ ಸಂವಾದದಲ್ಲಿ ಎಲ್ಲ ಕೊಲೆಗಾರರು ತಮ್ಮ ಕೃತ್ಯಗಳ ಪರಿಣಾಮದಿಂದ ಅನುಭವಿಸುತ್ತಿರುವ ಯಾತನೆಯಿಂದ ಹೊರಬಂದಂತೆ ಕಂಡರು. ಕೆಲವರು ತಮ್ಮ ಕೃತ್ಯ ನೆನೆದು ಅತ್ತರು. ಅಂದರೆ, ತಾವು ಕೊಂದವರ ಕುಟುಂಬ ನೆನೆಸಿಕೊಂಡಲ್ಲ, ತಮ್ಮ ಬಂಧು-ಬಳಗ, ಮಕ್ಕಳು, ಮಡದಿ ನೆನಸಿಕೊಂಡು. ಇಲ್ಲಿನ ಜೀವಾವಧಿಯ ಜನ, ತಾವು ಕೊಂದವರ ಕುಟುಂಬದ ಬಗ್ಗೆ ಯೋಚಿಸಿದಂತೆ ನನಗೆ ಕಾಣಲಿಲ್ಲ. ಹಾಗೇನಾದರೂ ಯೋಚಿಸಿದರೆ, ಅದು ಮಾತ್ರ ಅವರನ್ನ ಮಾನವೀಯ ಆವರಣಕ್ಕೆ ತಂದು ನಿಲ್ಲಿಸುವಂತದ್ದು. ಕೊಂದವನನ್ನೇ ಅಯ್ಯೋ ಪಾಪ ಎಂಥಾ ಕೆಲಸ ಮಾಡಿಬುಟ್ಟ, ಹೋದೊನ ಕತೆ ಇರ್ಲಿ, ಬದುಕಿದೋನ್ನ ಯಂಗಾರ ಮಾಡಿ ಏಳಿಸಿಕೊಬೇಕು ಅನ್ನೋ ಮನೋಭಾವ ನಮ್ಮ ನಡುವೆ ಇದೆ. ಇದಷ್ಟು ಒಳ್ಳೆಯದಲ್ಲ. ಇದರಿಂದ ಸತ್ತವನ ಪರ ಸಾಕ್ಷಿ ಹೇಳಲು ಯಾರೂ ಬರುವುದಿಲ್ಲ. ಇರಲಿ ಕೈದಿಗಳ ಲೋಕ ತೋರಿದ ಕಟ್ಟೀಮನಿಗೆ ಧನ್ಯವಾದಗಳು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here