Homeಮುಖಪುಟ'ನವೆಂಬರ್‌ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಆದರೆ ಗೌಪ್ಯವಾಗಿಡಲಾಗಿತ್ತು'; ಸಚಿವ ಛಗನ್ ಭುಜಬಲ್ ಅಚ್ಚರಿ...

‘ನವೆಂಬರ್‌ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಆದರೆ ಗೌಪ್ಯವಾಗಿಡಲಾಗಿತ್ತು’; ಸಚಿವ ಛಗನ್ ಭುಜಬಲ್ ಅಚ್ಚರಿ ಹೇಳಿಕೆ

- Advertisement -
- Advertisement -

ಮರಾಠ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ(ಶಿಂಧೆ) ಸರಕಾರ ಒಪ್ಪಿಕೊಂಡಿರುವುದು ಮಹರಾಷ್ಟ್ರದಲ್ಲಿ ಒಬಿಸಿಗಳ ವಿರೋಧಕ್ಕೆ ಕಾರಣವಾಗಿದೆ. ಮರಾಠ ಸಮುದಾಯಕ್ಕೆ ಒಬಿಸಿ ಕೋಟಾವನ್ನು ಹಿಂಬಾಗಿಲ ಮೂಲಕ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್, ನಾನು ರಾಜ್ಯ ಸಚಿವ ಸಂಪುಟಕ್ಕೆ ನವೆಂಬರ್‌ನಲ್ಲೇ ರಾಜೀನಾಮೆ ನೀಡಿದ್ದೇನೆ ಮತ್ತು ಒಬಿಸಿ ಪರವಾಗಿ ಹೋರಾಟವನ್ನು ನಡೆಸುತ್ತೇನೆ ಎಂದು ಹೇಳಿದ್ದಾರೆ.

ಎನ್‌ಸಿಪಿಯ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರಿದ ಭುಜಬಲ್ ಸಾರ್ವಜನಿಕ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ್ದು, ಮರಾಠರಿಗೆ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಅವರಿಗೆ ಒಬಿಸಿ ಕೋಟಾದಡಿ ಮೀಸಲಾತಿ ನೀಡುವುದಕ್ಕೆ ವಿರೋಧವಿದೆ ಎಂದು ಹೇಳಿದ್ದಾರೆ.

ಪ್ರತಿಪಕ್ಷದ ಅನೇಕ ನಾಯಕರು, ನನ್ನ ಸರ್ಕಾರದ ನಾಯಕರು ಕೂಡ ನಾನು ರಾಜೀನಾಮೆ ನೀಡಬೇಕು ಎಂದು ಹೇಳುತ್ತಾರೆ. ಭುಜಬಲ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಯಾರೋ ಹೇಳಿದ್ದರು. ನವೆಂಬರ್ 17ರಂದು ಅಂಬಾಡ್‌ನಲ್ಲಿ ನಡೆದ ಒಬಿಸಿ ಎಲ್ಗರ್ ರ್ಯಾಲಿಗೆ ಮುಂಚಿತವಾಗಿ, ನಾನು ನವೆಂಬರ್ 16ರಂದು ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ್ದೇನೆ ಮತ್ತು ನಂತರ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದೆ ಎಂದು ನಾನು ಪ್ರತಿಪಕ್ಷ, ಸರ್ಕಾರ ಮತ್ತು ನನ್ನ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ.  ಮುಖ್ಯಮಂತ್ರಿ ಮತ್ತು ಡಿಸಿಎಂ ಈ ಬಗ್ಗೆ ಮಾತನಾಡಬೇಡಿ ಎಂದು ಹೇಳಿದ್ದರಿಂದ ಎರಡು ತಿಂಗಳಿನಿಂದ ನಾನು ಮೌನವಾಗಿದ್ದೆ ಎಂದು ಭುಜಬಲ್ ಹೇಳಿದ್ದಾರೆ.

ನನ್ನನ್ನು ಸರಕಾರದಿಂದ ವಜಾ ಮಾಡುವ ಅಗತ್ಯವಿಲ್ಲ, ನಾನು ರಾಜೀನಾಮೆ ನೀಡಿದ್ದೇನೆ. ನಾನು ಕೊನೆಯವರೆಗೂ ಒಬಿಸಿ ಸಮುದಾಯಕ್ಕಾಗಿ ಹೋರಾಡುತ್ತೇನೆ. ನಾವು ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ವಿರೋಧಿಸುವುದಿಲ್ಲ, ಆದರೆ ಅದನ್ನು ಅವರಿಗೆ ಪ್ರತ್ಯೇಕವಾಗಿ ನೀಡಬೇಕು. ಅದನ್ನು ನಮ್ಮ ಒಬಿಸಿ ಕೋಟಾದ ಅಡಿಯಲ್ಲಿ ನೀಡಬೇಡಿ. ಆದರೆ ಮನೋಜ್ ಜಾರಂಗೆ ಒಬಿಸಿ ಕೋಟಾದಿಂದಲೇ ನೀಡಬೇಕು ಎನ್ನುತ್ತಾರೆ ಎಂದು ಭುಜಬಲ್ ಹೇಳಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯ ಮೂಲಕ ಮರಾಠ ಸಮುದಾಯದ ಹಿಂದುಳಿದಿರುವಿಕೆಯನ್ನು ನಿರ್ಧರಿಸಿದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯು ದೋಷಪೂರಿತವಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಒಬಿಸಿಗಳು ಶೇ 54-60, ಎಸ್ಸಿ-ಎಸ್ಟಿಗಳು 20ಶೇ ಮತ್ತು ಬ್ರಾಹ್ಮಣರು 3% ದಷ್ಟಿದ್ದರೆ, ಎಲ್ಲಾ ಶಾಸಕರು ಮತ್ತು ಸಂಸದರು ಮರಾಠ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಭುಜಬಲ್ ಅವರು ಮರಾಠ ಕೋಟಾ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವುದರಿಂದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹ ಕೇಳಿ ಬಂದ ಹಿನ್ನೆಲೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರ ಬೇಡಿಕೆಗಳಿಗೆ ಸರ್ಕಾರ ಮಣಿಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಮೊದಲು ಏಕನಾಥ್ ಶಿಂಧೆ ಪಾಳೆಯದ ಶಿವಸೇನೆ ಶಾಸಕರೊಬ್ಬರು ಮಾತನಾಡಿ, ಸಮಾಜದಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿರುವ ಭುಜಬಲ್ ಅವರನ್ನು ವಜಾಗೊಳಿಸಬೇಕು ಎಂದು ಹೇಳಿದ್ದರು.

ಮರಾಠರಿಗೆ ಕುಂಬಿ ಪ್ರಮಾಣಪತ್ರಕ್ಕೆ ವಿರೋಧ: 

ಒಬಿಸಿ ವರ್ಗದಡಿ ಮರಾಠರಿಗೆ ಮೀಸಲಾತಿ ನೀಡುವುದಕ್ಕೆ ಒಬಿಸಿ ಮುಖಂಡರು ವಿರೋಧಿಸುತ್ತಲೇ ಬಂದಿದ್ದಾರೆ. ಈ ಮೊದಲು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಮರಾಠರಿಗೆ ಕುಂಬಿ ಜಾತಿ ಪ್ರಮಾಣಪತ್ರಗಳನ್ನು ನೀಡುವ ಸರ್ಕಾರದ ಉದ್ದೇಶಿತ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೂಡ ಹೇಳಿದ್ದರು.

ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವಿಭಾಗ) ಅಡಿಯಲ್ಲಿ ಮರಾಠರಿಗೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಮರಾಠರಿಗೆ ಕುಂಬಿ ಪ್ರಮಾಣಪತ್ರಗಳನ್ನು ನೀಡುವುದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಶೀಘ್ರದಲ್ಲೇ ಈ ಬಗ್ಗೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಮತ್ತು ಅಗತ್ಯವಿದ್ದರೆ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಒಬಿಸಿ ನಾಯಕ ಪ್ರಕಾಶ್ ಶೆಂಡ್ಗೆ ಹೇಳಿದ್ದರು.

ಮರಾಠರಿಗೆ ಕುಂಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ರಚಿಸಿರುವ ನ್ಯಾಯಮೂರ್ತಿ ಶಿಂಧೆ ಆಯೋಗಕ್ಕೆ ಯಾವುದೇ ಸಾಂವಿಧಾನಿಕ ಆಧಾರವಿಲ್ಲ ಎಂದು ಪ್ರಕಾಶ್ ಶೆಂಡ್ಗೆ ಹೇಳಿದ್ದರು. ಸಮಿತಿಯು ಯಾರಿಗೂ ಕುಂಬಿ ಪ್ರಮಾಣಪತ್ರಗಳನ್ನು ನೀಡುವ ಸಾಂವಿಧಾನಿಕ ಹಕ್ಕು ಹೊಂದಿಲ್ಲ. ಆ ಸ್ಥಾನಮಾನ ನೀಡಲು ಅದು ಹಿಂದುಳಿದ ವರ್ಗಗಳ ಆಯೋಗವಲ್ಲ. ಮರಾಠರು ಎಂದಿಗೂ ಹಿಂದುಳಿದಿಲ್ಲ ಮತ್ತು ಇದು ಹಲವಾರು ಬಾರಿ ಸಾಬೀತಾಗಿದೆ ಎಂದು ಹೇಳಿದ್ದರು.

ಇದನ್ನು ಓದಿ: ‘ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆ ಬಗ್ಗೆ ಹೆಮ್ಮೆಯಿದೆ’: ಗಾಂಧಿ ಹಂತಕನನ್ನು ಶ್ಲಾಘಿಸಿದ NIT ಪ್ರಾಧ್ಯಾಪಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...