ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ನಿಧಿಯನ್ನು ನಿಲ್ಲಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ, ನಿಮಗೆ ಇನ್ನಷ್ಟು ಶವಗಳು ಬೇಕೆಂದಿದ್ದರೆ ನಿಧಿ ನಿಲ್ಲಿಸಿ WHO ಮಹಾಕಾರ್ಯದರ್ಶಿ ತೆದ್ರೋಸ್ ಅದನೋಮ್ ಗೆಬ್ರೆಯೇಸಸ್ ಖಾರವಾದ ಪ್ರತಿಕ್ರಿಯೆ ನೀಡಿದ್ದರು. ತದನಂತರ ಮಾತುಕತೆಯ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಎರಡು ಬಣಗಳು ಒಪ್ಪಿಕೊಂಡಿವೆ ಎನ್ನಲಾಗಿದೆ.
‘ಕೋವಿಡ್ ಪಿಡುಗನ್ನು ಕೆಟ್ಟದಾಗಿ ನಿರ್ವಹಿಸಿದೆ ಮತ್ತು ಪಿಡುಗಿಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಮುಚ್ಚಿಹಾಕಲು ಚೀನಾದೊಂದಿಗೆ ಸೇರಿ ಸಂಚು ನಡೆಸುತ್ತಿದೆ’ ಎಂದು ಆರೋಪಿಸಿ, ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ಎಪ್ರಿಲ್ 15ರಂದು ನಿಧಿ ಸ್ಥಗಿತಗೊಳಿಸಿದ್ದಾರೆ.
“ವ್ಯತಿರಿಕ್ತ ವರದಿಗಳು ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳ ಹೊರತಾಗಿಯೂ ಜನವರಿ ಮಧ್ಯಭಾಗಕ್ಕೆ ಮುನ್ನ ಮನುಷ್ಯನಿಂದ ಮನುಷ್ಯನಿಗೆ ರೋಗ ಹರಡುತ್ತಿಲ್ಲ ಎಂಬ ಕಲ್ಪನೆಯನ್ನು ಸಂಸ್ಥೆಯು ಬೆಂಬಲಿಸಿದುದು ಮತ್ತು ಅದನ್ನು ಒಂದು ಸಾರ್ವಜನಿಕ ತುರ್ತುಸ್ಥಿತಿ ಎಂದು ಘೋಷಿಸುವಲ್ಲಿ ಮಾಡಿದ ವಿಳಂಬವು ಯುಎಸ್‌ಎಗೆ ಅಮೂಲ್ಯವಾದ ಸಮಯ ನಷ್ಟವನ್ನು ಉಂಟುಮಾಡಿತು” ಎಂದು ಟ್ರಂಪ್ ಆರೋಪಿಸಿದ್ದಾರೆ.
ನಿಲ್ಲಿಸಲಾಗುವ ನಿಧಿಯ ಮೊತ್ತವನ್ನು ಆತ ಉಲ್ಲೇಖಿಸಿಲ್ಲವಾದರೂ, ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ 5600 ಕೋಟಿ ಡಾಲರ್ ವಾರ್ಷಿಕ ಬಜೆಟಿನಲ್ಲಿ ಯುಎಸ್‌ಎಯ ದೇಣಿಗೆಯು 90 ಕೋಟಿ ಡಾಲರ್‌ಗಳಾಗಿವೆ. ಆದರೆ, ಈ ನಿರ್ಧಾರವು ಜಾರಿಗೆ ಬರುವ ಮೊದಲು ಯುಎಸ್‌ಎಯ ಕಾಂಗ್ರೆಸ್ ಅದನ್ನು ಅಂಗೀಕರಿಸಬೇಕಾಗಿದೆ.
ಜಾಗತಿಕವಾದ ಈ ಬಿಕ್ಕಟ್ಟನ್ನು ಎದುರಿಸುವ ಕೆಲಸದಲ್ಲಿ ಭಾಗವಹಿಸುತ್ತಿರುವವರು ಈ ಸುದ್ದಿಗೆ ಹರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಮಾಡಿರುವ ಈ ನಿರ್ಧಾರ ಮತ್ತು ಚೀನಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಕುರಿತ ಆತನ ಹಿಂದಿನ ಹೇಳಿಕೆಗಳನ್ನು ಅವರು ಆರೋಪದ ಧ್ವನಿಯಲ್ಲಿ ದೂರಿದ್ದಾರೆ. ವಿಶ್ವದಾದ್ಯಂತ ಅತ್ಯಂತ ಮಹತ್ವದ ಮತ್ತು ಅತ್ಯಗತ್ಯವಾದ ಮಾನವೀಯ ಕೆಲಸಗಳನ್ನು ಮಾಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯನ್ನು ಟ್ರಂಪ್ ರಾಜಕೀಕರಣಗೊಳಿಸುತ್ತಿರುವುದಾಗಿ ಅನೇಕರು ದೂರಿದ್ದಾರೆ- ಅದೂ ಕೂಡಾ, ಅತ್ಯಂತ ಬಡದೇಶಗಳಲ್ಲಿ ಅದರ ಕಾರ್ಯಗಳು ತೀರಾ ಅಗತ್ಯವಾಗಿರುವಾಗ. ಈ ನಿರ್ಧಾರವು ಬಹಳಷ್ಟು ಸಾವುಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಾಯಕರು ಎಚ್ಚರಿಸಿದ್ದಾರೆ.
“ದಯವಿಟ್ಟು ಈ ವೈರಸನ್ನು ರಾಜಕೀಕರಣಗೊಳಿಸಬೇಡಿ. ರಾಷ್ಟ್ರಮಟ್ಟದಲ್ಲಿ ನೀವು ಹೊಂದಿರುವ ಭಿನ್ನಾಭಿಪ್ರಾಯದ ಲಾಭವನ್ನು ಅದು ಎತ್ತುತ್ತದೆ. ನಿಮಗೆ ಹಾಗೆಯೇ ಆಗಬೇಕೆಂದಿದ್ದರೆ, ನಿಮಗೆ ಇನ್ನಷ್ಟು ಶವಪೆಟ್ಟಿಗೆಗಳು ಬೇಕೆಂದಾದರೆ, ಹಾಗೆಯೇ ಮಾಡಿ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾಕಾರ್ಯದರ್ಶಿ ಡಾ. ತೆದ್ರೋಸ್ ಅದನೋಮ್ ಗೆಬ್ರೆಯೇಸಸ್ ಅವರು, ಕಳೆದ ವಾರ ನಿಧಿ ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ ಹೂಡಿದಾಗಲೇ ಎಚ್ಚರಿಕೆ ನೀಡಿದ್ದರು. ಕೊರೋನ ವೈರಸ್ ಹರಡುವಿಕೆಯಲ್ಲಿ ಚೀನಾದ ಪಾತ್ರದ ಬಗ್ಗೆ ಕಾಂಗ್ರೆಷನಲ್ ತನಿಖೆ ನಡೆಸುವ ಯೋಚನೆ ಮಾಡುತ್ತಿರುವುದಾಗಿ ರಿಪಬ್ಲಿಕನ್ ಪಕ್ಷ ಮತ್ತು ಕಾಂಗ್ರೆಸ್ ಘೋಷಿಸಿರುವುದನ್ನು ಗಮನಿಸುವುದು ಕೂಡಾ ಅತ್ಯಗತ್ಯವಾಗಿದೆ.
ಕೊರೋನ ಪಿಡುಗನ್ನು ನಿಯಂತ್ರಿಸಲು ವಿಫಲವಾದ ಬಳಿಕ ಟ್ರಂಪ್ ಆಡಳಿತ ಮತ್ತು ರಿಪಬ್ಲಿಕನ್ನರು ಚೀನಾವನ್ನು ದೂರುವ, ಮತ್ತು ವೈರಸನ್ನು ಬಚ್ಚಿಡಲು ಚೀನಾಕ್ಕೆ ನೆರವಾದುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತಿತರ ಜಾಗತಿಕ ಸಂಸ್ಥೆಗಳನ್ನು ದೂರುವ ವಿವರವಾದ ಯೋಜನೆ ಹಾಕಿಕೊಂಡಿರುವುದಾಗಿ ಟೀಕಾಕಾರರು ಎಚ್ಚರಿಸಿದ್ದಾರೆ. ಈ ತನಕ ಯುಎಸ್‌ಎಯು 34,000ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ.
ಯುಎಸ್‌ಎಯು ಈ ತನಕ ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಾವಿನ ಸಂಖ್ಯೆಯನ್ನು ದಾಖಲಿಸಿದ್ದು, ಪಿಡುಗು ಇನ್ನಷ್ಟು ಬಿಗಡಾಯಿಸುವುದನ್ನು ತಡೆಯಲು ವಿಫಲವಾಗಿರುವ ಟ್ರಂಪ್ ಆಡಳಿತವು ಚೀನಾದತ್ತ ಬೆರಳು ತೋರಿಸಿ, ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಹಣಕಾಸು ನಿಲ್ಲಿಸುವ ಇತ್ತೀಚಿನ ಕ್ರಮವು- ಕೋವಿಡ್-19 ಬಿಕ್ಕಟ್ಟಿಗೆ ಚೀನಾವನ್ನು ದೂರುವ ದೀರ್ಘಕಾಲೀನ ತನಿಖೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.
ಡಿಸೆಂಬರ್ ನಂತರದಿಂದ ಈ ಪಿಡುಗನ್ನು ಹೇಗೆ ಎದುರಿಸಲಾಯಿತು ಎಂಬ ಕುರಿತು ಹಂತ ಹಂತವಾಗಿ ಮಾಹಿತಿ ನೀಡಲು ಒಂದು ಕಾಲಾನುಕ್ರಮಣಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾದ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ ಮತ್ತು ಚೀನಾದ ಅಧಿಕಾರಿಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಸಹಕಾರವನ್ನು ತೋರಿಸಿದ್ದಾರೆ.
ಒಂದು ವಾರದ ನಂತರ WHO ಮತ್ತು ಅಮೆರಿಕಾ ಸರ್ಕಾರದ ನಡುವೆ ಸಮನ್ವಯ ಬಂದಿದ್ದು ಮಾತುಕತೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿವೆ ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದಾದ್ಯಂತ ತನ್ನ ಮಾನವೀಯ ಕೆಲಸಗಳಿಗಾಗಿ ಹೆಸರುವಾಸಿಯಾಗಿದೆ ಮತ್ತು ಟ್ರಂಪ್ ಆಡಳಿತವು ಅದರ ಮೇಲೆ ಹೊರಿಸಿರುವ- ಈ ಪಿಡುಗಿಗೆ ಸಂಬಂಧಿಸಿದಂತೆ ಅದು ಶಾಮೀಲಾಗಿದೆ ಎಂಬ- ಆರೋಪವು ಅತಿರೇಕದ್ದಾಗಿದೆ. ಒಂದು ವೇಳೆ, ಕೆಲವು ಅಧಿಕಾರಿಗಳು ನಿಜವಾಗಿಯೂ ಯಾವುದಾದರೊಂದು ರೀತಿಯ ಮುಚ್ಚುಮರೆಯಲ್ಲಿ ತೊಡಗಿದ್ದರೂ, ಅದನ್ನು ನಂತರದಲ್ಲಿ ತನಿಖೆ ಮಾಡಬೇಕೇ ಹೊರತು, ಈ ಬಿಕ್ಕಟ್ಟು ತಾರಕಕ್ಕೇರಿರುವ ಈ ಹೊತ್ತಿನಲ್ಲಿ ಆಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅನುವಾದ: ನಿಖಿಲ್ ಕೋಲ್ಪೆ
Please send me your account number I would like to donate 100rs right now
I would like to donate rs 100 please send me your account no valid ifsc code