Homeಅಂಕಣಗಳುಬಹುಜನ ಭಾರತ: ಅಳಿಯದಿರಲಿ ಜನತಂತ್ರ ಉಳಿಯಲಿ ಮೀಡಿಯಾ ಸ್ವಾತಂತ್ರ್ಯ - ಡಿ ಉಮಾಪತಿ

ಬಹುಜನ ಭಾರತ: ಅಳಿಯದಿರಲಿ ಜನತಂತ್ರ ಉಳಿಯಲಿ ಮೀಡಿಯಾ ಸ್ವಾತಂತ್ರ್ಯ – ಡಿ ಉಮಾಪತಿ

- Advertisement -
- Advertisement -

ಆಕ್ರಮಣಕಾರಿ ಚೀನೀ ಸೇನೆ ಭಾರತೀಯ ನೆಲವನ್ನು ನಿಯಂತ್ರಿಸುತ್ತಿರುವ ವರದಿಗಳಿವೆ. ಆದರೆ ದೇಶವನ್ನು ಆಳುವವರು ರೈತರು, ಪತ್ರಕರ್ತರು ಹಾಗೂ ಜಾಗೃತ ಯುವಜನರಲ್ಲಿ ವೈರಿಗಳನ್ನು ಹುಡುಕಿ ಬೇಟೆಯಾಡತೊಡಗಿದ್ದಾರೆ. ಎಂದೋ ತಲೆಯೆತ್ತಬಹುದಾದ ಆಡಳಿತ ವಿರೋಧಿ ಅಲೆಯನ್ನು ಮೊಳಕೆಯಲ್ಲೇ ಚಿವುಟಿ ಎಸೆಯುವ ತವಕ. ಭಿನ್ನಾಭಿಪ್ರಾಯಗಳಿಗೆ ಸಂಕೋಲೆ ತೊಡಿಸಿ ಜೈಲಿಗಟ್ಟಲಾಗುತ್ತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯದ ಅಮಾನುಷ ದಮನ ಕ್ರಮಗಳಿಗೆ ಭೀಮಾ ಕೋರೆಗಾಂವ್ ಪ್ರಕರಣದ ಬಂಧನಗಳೇ ಸಾಕ್ಷಿ. ತಪ್ಪಿತಸ್ಥರೆಂದು ಬಿಂಬಿಸಲು ಸುಳ್ಳು ಸಾಕ್ಷ್ಯಗಳನ್ನು ಆಪಾದಿತರ ಕಂಪ್ಯೂಟರುಗಳಿಗೆ ಅಕ್ರಮವಾಗಿ ತುಂಬಿರುವ ಕುರಿತು ವಾಷಿಂಗ್ಟನ್ ಪೋಸ್ಟ್ ವರದಿ ಅತ್ಯಂತ ಆತಂಕಕಾರಿ.

Steven Levitsky ಮತ್ತು Daniel Ziblatt ಹಾರ್ವರ್ಡ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಇಬ್ಬರು ಪ್ರೊಫೆಸರುಗಳು. ಇವರು ಬರೆದಿರುವ ಪುಸ್ತಕವೊಂದರ ಶೀರ್ಷಿಕೆ- How Democracies Die: What History Reveals About Our Future. ಜನತಂತ್ರವನ್ನು ಬಳಸಿಯೇ ಜನತಂತ್ರದ ಹತ್ಯೆ ಮಾಡಲಾಗುತ್ತಿರುವ ಬಗೆಯನ್ನು ಕಟ್ಟಿಕೊಟ್ಟಿರುವ ಪುಸ್ತಕವಿದು. ಚುನಾವಣೆಯ ಬೆನ್ನೇರಿ ಬಂದ ಸರ್ವಾಧಿಕಾರವು ಕಾಲಕ್ರಮೇಣ, ನವಿರಾಗಿ, ಕಾನೂನಿನ ಪ್ರಕಾರವೇ ಜನತಂತ್ರದ ಸ್ತಂಭಗಳನ್ನು ಬಳಸಿಕೊಂಡು, ಅವೇ ಸ್ತಂಭಗಳನ್ನು ಧ್ವಂಸ ಮಾಡುವ ವಿಪರ್ಯಾಸವನ್ನು ಅನಾವರಣಗೊಳಿಸಿದೆ.

ಜನತಂತ್ರದ ಎಲ್ಲ ಸ್ತಂಭಗಳೂ ಶಿಥಿಲಗೊಳ್ಳುತ್ತಿರುವ ಕುರಿತು ದೇಶದ ಚಿಂತಕ ಸಮೂಹ ಆತಂಕ ಪ್ರಕಟಿಸಿದೆ. ಮೀಡಿಯಾದ ಪರಿಸ್ಥಿತಿಯಂತೂ ಜಿಗುಪ್ಸೆ ಹುಟ್ಟಿಸುವಂತಹುದು. ಕೈಯಲ್ಲಿ ಬೆಣ್ಣೆಯನ್ನೂ ಬಗಲಲ್ಲಿ ದೊಣ್ಣೆಯನ್ನೂ ಇರಿಸಿಕೊಂಡು ಮೀಡಿಯಾವನ್ನು ಮಣಿಸಲಾಗಿದೆ. ಬೆಣ್ಣೆ ತಿಂದು ನಿಜ ಸುದ್ದಿಯನ್ನು ಅದುಮಿಡುವುದಲ್ಲದೆ, ಅದರ ಜಾಗದಲ್ಲಿ ಆಳುವವರನ್ನು ರಮಿಸುವ ಹಸಿ ಸುಳ್ಳುಗಳನ್ನು ಬಿತ್ತರಿಸಲು ತೊಡಗಿದೆ ಬಂಡವಾಳಶಾಹಿ ಮೀಡಿಯಾ. ಬೆಣ್ಣೆಯ ಆಮಿಷವನ್ನು ತಿರಸ್ಕರಿಸಿದ್ದರೆ ದೊಣ್ಣೆ ಬೀಸುವುದು ನಿಶ್ಚಿತ. ಬೆಣ್ಣೆ ಸಿಗದಿದ್ದರೂ ಪರವಾಗಿಲ್ಲ ದೊಣ್ಣೆಗೆ ಹೆದರಿ (ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸೀಮಾ ಸುಂಕ ಮುಂತಾದ ದಾಳಿಗಳು, ರಾಜದ್ರೋಹ ಮತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಎಂಬ ಕರಾಳ ಕಾಯಿದೆಯಡಿ ಕ್ರಮಗಳು) ಮಾಧ್ಯಮಗಳು ತಮ್ಮ ಬಾಯಿಗೆ ತಾವೇ ಬೀಗ ಹಾಕಿಕೊಂಡಿವೆ.

ಅಳಿದುಳಿದ ಸ್ವತಂತ್ರ ದನಿಗಳು ಅಂತರ್ಜಾಲ ತಾಣಗಳಲ್ಲೂ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಈಗಲೂ ಕೇಳಿಬರುತ್ತಿವೆ. ಆದರೆ ಅವುಗಳ ದನಿ ಅಡಗಿಸುವ ಎಲ್ಲ ತಯಾರಿಗಳು ಜರುಗಿವೆ. ಆಳುವವರಿಗೆ ಅಪ್ರಿಯವೆನಿಸುವ ಸತ್ಯವನ್ನು ಹೊರಗೆಳೆಯುವ ಯೂಟ್ಯೂಬರ್‌ಗಳು, ಟ್ವೀಟಿಗರನ್ನೂ ಬೇಟೆಯಾಡಲಾಗುತ್ತಿದೆ. ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ಕಾನೂನುಪ್ರಕಾರ ಘೋಷಿಸಲಾಗಿತ್ತು. ಹದಿನೆಂಟು ತಿಂಗಳ ನಂತರ ಅದು ಕೊನೆಯಾಯಿತು ಕೂಡ. ನಡುವೆ ಪತ್ರಿಕೆಗಳ ಮೇಲೆ ಸೆನ್ಸಾರ್ಶಿಪ್ ವಿಧಿಸಿದಾಗ, ಅಚ್ಚು ಮಾಡದೆ ಜಾಗ ಖಾಲಿ ಉಳಿಸುವ ಪ್ರತಿಭಟನೆ ಸಿಡಿದಿತ್ತು. ಈಗಿನದು ಅಘೋಷಿತ ತುರ್ತುಪರಿಸ್ಥಿತಿ. ಅನಿರ್ದಿಷ್ಟ ಕಾಲದ್ದು ಕೂಡ. ಸಮೂಹ ಮಾಧ್ಯಮಗಳು ತಮ್ಮ ಮೇಲೆ ತಾವೇ ಸೆನ್ಸಾರ್ಶಿಪ್ ಹೇರಿಕೊಂಡು ಹಲ್ಲು ಕಿರಿದು ಆಳುವವರ ಅಂಗಾಲು ನೆಕ್ಕತೊಡಗಿವೆ.

ದಕ್ಷಿಣ ಅಮೆರಿಕೆಯ ಪುಟ್ಟ ದೇಶ ಪೆರು. 1990ರ ದಶಕದಲ್ಲಿ ಆಲ್ಬರ್ಟೋ ಫೂಜಿಮೊರಿಯ ಹೆಸರಿನಲ್ಲಿ ಈ ದೇಶವನ್ನು ಆಳಿದವನು ಅಲ್ಲಿಯ ರಹಸ್ಯ ಪೊಲೀಸ್ ಮುಖ್ಯಸ್ಥ ವ್ಲಾದಿಮಿರೋ ಮಾಂಟೆಸಿನೋ ಟೋರಿಸ್. ನ್ಯಾಯಮೂರ್ತಿಗಳು, ರಾಜಕಾರಣಿಗಳು ಹಾಗೂ ಪತ್ರಿಕೋದ್ಯಮಕ್ಕೆ ವ್ಯವಸ್ಥಿತವಾಗಿ ಲಂಚ ತಿನ್ನಿಸಿದ್ದ ಮಾಂಟೆಸಿನೋ. ಈ ವ್ಯವಹಾರಗಳ ದಾಖಲೆ ದಸ್ತಾವೇಜುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮಡಗಿದ್ದ ಕೂಡ. ಲಂಚ ಪಡೆದವರು ಅದಕ್ಕೆ ಬದಲಾಗಿ ಏನೇನು ಕೆಲಸ ಮಾಡಬೇಕೆಂಬ ಕುರಿತ ಒಪ್ಪಂದ ಪತ್ರಗಳನ್ನು ಬರೆಯಿಸಿಕೊಂಡಿದ್ದ. ಕೊಟ್ಟಿದ್ದ ಲಂಚಕ್ಕೆ ಪ್ರತಿಯಾಗಿ ರಸೀದಿಗಳನ್ನು ಪಡೆದು ಇಟ್ಟುಕೊಂಡಿದ್ದ. ಈ ಅಕ್ರಮ ವ್ಯವಹಾರಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಕೂಡ.

ಮಾಂಟೆಸಿನೋ ಮತ್ತು ಫೂಜಿಮೊರಿ ಆಡಳಿತ ಜನತಂತ್ರದ ಮುಖವಾಡ ಧರಿಸಿತ್ತು- ಪ್ರಜೆಗಳು ಮತದಾನ ಮಾಡುತ್ತಿದ್ದರು, ನ್ಯಾಯಮೂರ್ತಿಗಳು ನ್ಯಾಯನಿರ್ಣಯ ಮಾಡುತ್ತಿದ್ದರು, ಮೀಡಿಯಾ ವರದಿ ಮಾಡುತ್ತಿತ್ತು. ಆದರೆ ಜನತಾಂತ್ರಿಕ ವ್ಯವಸ್ಥೆಯ ಜೀವರಸವ ಬತ್ತಿಸಿ ಬರಡಾಗಿಸಿತ್ತು ಈ ಜೋಡಿ.

ಟೆಲಿವಿಷನ್ ಚಾನೆಲ್ ಮಾಲೀಕನಿಗೆ ಮಾಂಟೆಸಿನೋ ನೀಡುತ್ತಿದ್ದ ಲಂಚದ ಮೊತ್ತ ಪ್ರತಿಪಕ್ಷಗಳ ರಾಜಕಾರಣಿಗಳಿಗೆ ನೀಡುತ್ತಿದ್ದ ಮೊತ್ತದ ನೂರು ಪಟ್ಟು ದೊಡ್ಡದಿತ್ತು. ರಾಜಕಾರಣಿಗಳಿಗೆ ನೀಡುತ್ತಿದ್ದ ಲಂಚದ ಮೊತ್ತವು ನ್ಯಾಯಾಧೀಶರಿಗೆ ನೀಡುತ್ತಿದ್ದ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿತ್ತು.

ಫೂಜಿಮೊರಿ ಆಡಳಿತವು ಮೋಸ ಮರೆಯ ವಿಧಾನಗಳ ಬಳಸಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವೇ ಅಲ್ಲದೆ ಸುದ್ದಿ ಮಾಧ್ಯಮಗಳ ಮೇಲೂ ಅಧಿಕಾರ ಸ್ಥಾಪಿಸಿತ್ತು.

1990ರಲ್ಲಿ ಪೆರು ತಳಮಳದಲ್ಲಿತ್ತು. ಅಧ್ಯಕ್ಷನಾಗಿ ಚುನಾಯಿತನಾದ ಆಲ್ಪರ್ಟೋ ಫೂಜಿಮೊರಿ ರಾಜಕಾರಣಕ್ಕೆ ಹೊಸಬ. ಆರ್ಥವ್ಯವಸ್ಥೆ ಹೊಲಬುಗೆಟ್ಟಿತ್ತು. ಭಾರೀ ಹಣದುಬ್ಬರ. ಅಭಿವೃದ್ಧಿ ದರ ಪಾತಾಳಕ್ಕೆ ಕುಸಿದಿತ್ತು. ಮಾವೋವಾದಿ ಗೆರಿಲ್ಲಾಗಳ ಬಂಡಾಯ ಅಪಾರ ಸಾವುನೋವುಗಳ ಉಂಟುಮಾಡಿತ್ತು. ತನ್ನ ಸಲಹೆಗಾರನನ್ನಾಗಿಯೂ, ರಾಷ್ಟ್ರೀಯ ಬೇಹುಗಾರಿಕೆ ಸೇವೆಯ ಮುಖ್ಯಸ್ಥನನ್ನಾಗಿಯೂ ಮಾಂಟೆಸಿನೋನನ್ನು ನೇಮಕ ಮಾಡಿದ್ದ ಫೂಜಿಮೊರಿ. ದೇಶದ ಗೋಪ್ಯ ದಾಖಲೆಗಳನ್ನು ಅಮೆರಿಕೆಗೆ ಮಾರಿಕೊಂಡಿದ್ದ ಅಪರಾಧದ ಮೇರೆಗೆ ಅವನನ್ನು ಸೇನೆಯಿಂದ ಮನೆಗೆ ಕಳಿಸಲಾಗಿತ್ತು. 80ರ ದಶಕದಲ್ಲಿ ಕೊಲಂಬಿಯಾದ ಮಾದಕದ್ರವ್ಯ ಡೀಲರುಗಳ ಪರ ವಕೀಲನಾಗಿದ್ದ ಕುಖ್ಯಾತಿ ಆತನದು.

ಮಾವೋವಾದಿ ಗೆರಿಲ್ಲಾಗಳ ಬಂಡಾಯವನ್ನು ಅಡಗಿಸಿದ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮತ್ತೆ ಚಿಗುರಿಸಿದ ಆರಂಭಿಕ ಯಶಸ್ಸಿನ ಗರಿಯನ್ನು ಮುಡಿದಿತ್ತು ಫೂಜಿಮೊರಿ ಸರ್ಕಾರ. ಆರ್ಥಿಕ ಸುಧಾರಣೆಗಳು ವಿದೇಶೀ ಬಂಡವಾಳವನ್ನು ಹರಿಸಿದ್ದವು. ಹಣದುಬ್ಬರ ಅಂಕೆಗೆ ಸಿಕ್ಕಿತ್ತು. ಭಯೋತ್ಪಾದಕರ ನಿಗ್ರಹ ಮತ್ತು ಮುಕ್ತ ಮಾರುಕಟ್ಟೆ ನಿಲುವುಗಳನ್ನು ಅಮೆರಿಕೆ ಮೆಚ್ಚಿತ್ತು. ಮಾದಕದ್ರವ್ಯಗಳ ವಿರುದ್ಧ ಸಮರದ ನೆಪದಲ್ಲಿ ಸಿಐಎ ಹತ್ತಾರು ಲಕ್ಷ ಡಾಲರುಗಳ ಹಣದ ಹೊಳೆ ಹರಿಸಿತ್ತು.

ಚಿತ್ರಹಿಂಸೆ, ಭ್ರಷ್ಟಾಚಾರ, ಹತ್ಯೆಗಳು ಎಗ್ಗಿಲ್ಲದೆ ಜರುಗಿದ್ದವು. ಆದರೂ ಬಲು ಬಲಿಷ್ಠ ಅಧ್ಯಕ್ಷನೆಂದೂ, ಭಯೋತ್ಪಾದಕರಿಂದ ಜನರನ್ನು ರಕ್ಷಿಸಿದವನೆಂದೂ ಫೂಜಿಮೊರಿ ಜನಪ್ರಿಯನಾಗಿದ್ದ. ಈ ಜನಪ್ರಿಯತೆಯ ನಡುವಿನಲ್ಲೇ 1992ರಲ್ಲಿ ಪೆರುವಿನ ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿದ. ನ್ಯಾಯಾಂಗದ ’ಸಹಕಾರ’ದಿಂದ ಉಗ್ರಗಾಮಿಗಳನ್ನು ತೀವ್ರವಾಗಿ ಶಿಕ್ಷಿಸಿದ. 1995ರ ಚುನಾವಣೆಗಳಲ್ಲಿ ಮತ್ತೆ ಆಯ್ಕೆಯಾದ. 2000ದಲ್ಲಿ ಮೂರನೆಯ ಅವಧಿಗೂ ಆರಿಸಿ ಬಂದ. ಎರಡೇ ಅವಧಿಗಳ ಮಿತಿಯನ್ನು ಮೂರು ಅವಧಿಗಳಿಗೆ ಹೆಚ್ಚಿಸಲು ಸಂಸತ್ತಿನ ಅನುಮೋದನೆ ಗಳಿಸಿದ್ದ. ಈ ಚುನಾವಣೆಗಳಲ್ಲಿ ವ್ಯಾಪಕ ಅಕ್ರಮಗಳು ಜರುಗಿದ್ದವು. ಫೂಜಿಮೊರಿ ಪರವಾಗಿರುವಂತೆ ಗೆಲುವನ್ನು ಪಳಗಿಸಲಾಗಿತ್ತು.

ಅಲ್ಲಿಂದ ಕೇವಲ ಮೂರೇ ತಿಂಗಳಲ್ಲಿ ಸರ್ಕಾರ ಬೀಳುತ್ತದೆ. ಮಾಂಟೆಸಿನೋ ಪ್ರತಿಪಕ್ಷದ ಸಂಸದನಿಗೆ ಲಂಚ ನೀಡುತ್ತಿದ್ದ ವಿಡಿಯೋ ಟೇಪೊಂದು ಬಯಲಾಗಿ ಟೆಲಿವಿಷನ್ನಿನಲ್ಲಿ ಬಿತ್ತರಗೊಂಡಿತ್ತು.

ತನ್ನಿಂದ ಲಂಚ ಪಡೆದವರು ಅದಕ್ಕೆ ಪ್ರತಿಯಾಗಿ ತಾನು ಬಯಸಿದ್ದ ಕೆಲಸ ಕಾರ್ಯಗಳನ್ನು ಮಾಡುತ್ತಿರುವರೇ ಇಲ್ಲವೇ ಎಂಬ ಕುರಿತು ಮಾಂಟೆಸಿನೋ ನಿತ್ಯ ನಿಗಾ ಇರಿಸಿದ್ದ. ವಿಡಿಯೋ ಟೇಪುಗಳ ಜೊತೆಗೆ ಲಂಚದ ರಸೀತಿಗಳು, ರಹಸ್ಯ ಒಡಂಬಡಿಕೆಗಳು, ಧ್ವನಿಮುದ್ರಿಕೆಗಳನ್ನೂ ಇರಿಸಿಕೊಂಡಿದ್ದ. ಇಷ್ಟು ಶಿಸ್ತಾಗಿ ಲೆಕ್ಕ ಇಟ್ಟ ಕಾರಣವೇ ಯಾರಿಗೆ ಎಷ್ಟು ಲಂಚ ಕೊಡಲಾಯಿತು ಎಂಬ ಖಚಿತ ವಿವರಗಳು ಆಧಾರ ಸಹಿತ ಬಯಲಾದವು. ಈ ಪೈಕಿ 66 ಪ್ರಕರಣಗಳ ರಸೀದಿಗಳು, ವಿಡಿಯೋಗಳು, ಧ್ವನಿಮುದ್ರಿಕೆಗಳು ಪೆರುವಿನ ಸಂಸತ್ತಿನ ಅಂತರ್ಜಾಲ ತಾಣದಲ್ಲಿ ಲಭ್ಯ ಇವೆ. ಇಂತಹ ವಿಡಿಯೋಗಳ ಸಂಖ್ಯೆ 2000 ಎಂದು ಅಂದಾಜು ಮಾಡಲಾಗಿದೆ. ಆದರೆ ಜೈಲು ಸೇರಿದ ಮಾಂಟೆಸಿನೋ ಪ್ರಕಾರ ಅವುಗಳ ಒಟ್ಟು ಸಂಖ್ಯೆ 30,000.

ರಾಜಕಾರಣಿಗಳಿಗೆ (ಪ್ರತಿಪಕ್ಷಗಳ) ನೀಡುತ್ತಿದ್ದ ತಲಾ ಮಾಸಿಕ ಲಂಚ 5000 ಡಾಲರುಗಳಿಂದ 20 ಸಾವಿರ ಡಾಲರುಗಳಷ್ಟಿತ್ತು. ತನ್ನ ಪ್ರಧಾನಮಂತ್ರಿಗೂ ತಿಂಗಳಿಗೆ 30 ಸಾವಿರ ಡಾಲರುಗಳಷ್ಟು ಲಂಚ ನೀಡುತ್ತಿದ್ದ ಫೂಜಿಮೊರಿ. ಮಂತ್ರಿಗಳೂ ಈ ಮಾತಿಗೆ ಹೊರತಾಗಿರಲಿಲ್ಲ. ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ತಿಂಗಳಿಗೆ 10 ಸಾವಿರ ಡಾಲರುಗಳ ಲಂಚ ಪಾವತಿಯಾಗುತ್ತಿತ್ತು.

ಲಂಚಕ್ಕೆ ಪ್ರತಿಯಾಗಿ ಈ ಚಾನೆಲ್‌ಗಳು ಪ್ರಸಾರ ಮಾಡುವ ಸುದ್ದಿಯ ಪೂರ್ಣ ನಿಯಂತ್ರಣವನ್ನು ಮಾಂಟೆಸಿನೋಗೆ ನೀಡಲಾಗಿತ್ತು. ಈ ಕುರಿತು ಒಡಂಬಡಿಕೆ ಪತ್ರಗಳಿಗೆ ಮಾಂಟೆಸಿನೋ ಮತ್ತು ಚಾನೆಲ್‌ಗಳ ಮಾಲೀಕರು ಸಹಿ ಮಾಡಿದ್ದರು. ಮಾಂಟೆಸಿನೋನ ಲಿಖಿತ ಅನುಮತಿಯಿಲ್ಲದೆ ಯಾವ ರಾಜಕೀಯ ಸುದ್ದಿಯನ್ನೂ ಬಿತ್ತರಿಸುವಂತಿರಲಿಲ್ಲ. ದಿನನಿತ್ಯದ ಸುದ್ದಿ ಪ್ರಸಾರವಾಗುವ ಸುದ್ದಿಗೂ ಮಾಂಟೆಸಿನೋನ ಪೂರ್ವಾನುಮತಿ ಪಡೆಯಬೇಕಿತ್ತು. ಫೂಜಿಮೊರೋ ಕುರಿತ ವ್ಯತಿರಿಕ್ತ ಸುದ್ದಿಗೆ ಎಡೆಯೇ ಇರಲಿಲ್ಲ.

ಹೀಗೆ ತಿಂಗಳೊಂದಕ್ಕೆ ರಾಜಕಾರಣಿಗಳಿಗೆ ಮೂರು ಲಕ್ಷ ಡಾಲರುಗಳು, ನ್ಯಾಯಾಧೀಶರಿಗೆ ಎರಡೂವರೆ ಲಕ್ಷ ಡಾಲರುಗಳು ಹಾಗೂ ಟೆಲಿವಿಷನ್ ಚಾನೆಲ್‌ಗಳಿಗೆ 30 ಲಕ್ಷ ಡಾಲರುಗಳ ಲಂಚ ಪಾವತಿಯಾಗುತ್ತಿತ್ತು.

ಫೂಜಿಮೊರಿ ಮತ್ತು ಮಾಂಟೆಸಿನೋ ದೇಶ-ಕಾಲವನ್ನು ಮೀರಿ ಅವತರಿಸಬಲ್ಲವರು. ಜನತಂತ್ರಗಳನ್ನು ಕದಿಯಬಲ್ಲವರು. ಹೀಗಾಗಿ ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಸಾರ್ವಕಾಲಿಕ ಮತ್ತು ಸಾರ್ವತ್ರಿಕ. ಆದರೆ ಭಾರತದ ಜನತಂತ್ರದ ಅಡಿಪಾಯ ಪೆರುವಿನಷ್ಟು ಪೇಲವ ಅಲ್ಲ.


ಇದನ್ನೂ ಓದಿ: ಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...