Homeಮುಖಪುಟಇಂಡಿಯಾ ಬಣ ಬಿಕ್ಕಟ್ಟು: ಟಿಎಂಸಿ ಸಂಸದರ ವಿರುದ್ಧ ಅಧೀರ್ ರಂಜನ್ ಚೌಧರಿ ವಾಗ್ದಾಳಿ

ಇಂಡಿಯಾ ಬಣ ಬಿಕ್ಕಟ್ಟು: ಟಿಎಂಸಿ ಸಂಸದರ ವಿರುದ್ಧ ಅಧೀರ್ ರಂಜನ್ ಚೌಧರಿ ವಾಗ್ದಾಳಿ

- Advertisement -
- Advertisement -

ಇಂಡಿಯಾ ಮೈತ್ರಿಕೂಟದಿಂದ ಟಿಎಂಸಿ ಹೊರಬರಲು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕಾರಣ ಎಂಬ ಸಂಸದ ಡೆರೆಕ್ ಓಬ್ರಿಯಾನ್ ಹೇಳಿಕೆಗೆ ಕೈ ನಾಯಕ ತಿರುಗೇಟು ನೀಡಿದ್ದಾರೆ. ‘ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಬಣವು ಕೆಲಸ ಮಾಡುತ್ತಿಲ್ಲ; ಡೆರಿಕ್ ಫಬ್ರಿಯಾನ್ ವಿದೇಶಿ’ ಎಂದು ಕಿಡಿಕಾರಿದ್ದಾರೆ.

‘2024ರ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ ನಂತರ, ಸಂಸದ ಡೆರೆಕ್ ಓಬ್ರಿಯಾನ್ ಅವರು ಅಧೀರ್ ರಂಜನ್ ಚೌಧರಿ ವಿರುದ್ಧ ಆರೋಪ ಮಾಡಿದ್ದರು.

‘ಚೌಧರಿ ಅವರು ಭಾರತೀಯ ಜನತಾ ಪಕ್ಷದ ಇಚ್ಛೆಯಂತೆ ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಕಾರ್ಯರೂಪಕ್ಕೆ ಬರದಿರಲು ಅವರೆ ಕಾರಣ’ ಎಂದು ಹೇಳಿದ್ದರು. ಓಬ್ರಿಯಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, ‘ಅವರು ವಿದೇಶಿ, ಅವರು ಹೆಚ್ಚು ತಿಳಿದುಕೊಂಡಿದ್ದಾರೆ, ನೀವು ಅವರನ್ನೆ ಕೇಳಬಹುದು’ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಪಶ್ಚಿಮ ಬಂಗಾಳದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ಕೆಲವು ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಅನುಮತಿ ಪಡೆಯುವಲ್ಲಿ ಕಾಂಗ್ರೆಸ್ ಪಕ್ಷವು ಸಮಸ್ಯೆಗಳನ್ನು ಎದುರಿಸುತ್ತಿದೆ’ ಎಂದು ಅಧೀರ್ ರಂಜನ್ ಚೌಧರಿ ಹೇಳಿಕೊಂಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಭಾರತ್ ಜೋಡೋ ಯಾತ್ರೆಯು ನಿಗದಿತಂತೆ ಮುಂದುವರಿಯುತ್ತದೆ. ಆದರೆ ಕೆಲವು ಸ್ಥಳಗಳಲ್ಲಿ ನಾವು ರಸ್ತೆ ತಡೆಗಳನ್ನು ಎದುರಿಸುತ್ತಿದ್ದೇವೆ. ನಾವು ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಬಯಸಿದ್ದೇವೆ. ಆದರೆ, ವಿವಿಧ ರೀತಿಯ ಪರೀಕ್ಷೆಗಳಿಂದಾಗಿ, ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಗುಣವಾಗಿ ನಮಗೆ ಅನುಮತಿ ಸಿಗುತ್ತಿಲ್ಲ. ಕೆಲವೆಡೆ ಸಡಿಲಿಕೆ ಸಿಗುತ್ತದೆ ಎಂದುಕೊಂಡಿದ್ದೆವು. ಆದರೆ, ಆಡಳಿತದಿಂದ ಬೆಂಬಲ ಸಿಗುತ್ತಿಲ್ಲ, ಅವರೂ ಕೂಡ ಬೆಂಬಲ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಯಾತ್ರೆ ಮುಂದುವರಿಯುತ್ತದೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಚೌಧರಿ ಹೇಳಿದರು.

ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಅಸ್ಸಾಂನಿಂದ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದ ನಂತರ ಎರಡು ದಿನಗಳ ವಿರಾಮವನ್ನು ತೆಗೆದುಕೊಂಡಿತು. ಇದು ಜನವರಿ 28ರಂದು ಪುನರಾರಂಭವಾಗಲಿದೆ. ಇಂಡಿಯಾ ಬಣ ಒಟ್ಟಾಗಿ ‘ಅನ್ಯಾಯ’ದ ವಿರುದ್ಧ ಹೋರಾಡಲಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು.

‘ಪಶ್ಚಿಮ ಬಂಗಾಳಕ್ಕೆ ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಮಾತು ಕೇಳಲು ಮತ್ತು ನಿಮ್ಮೊಂದಿಗೆ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ಬಿಜೆಪಿ-ಆರ್‌ಎಸ್‌ಎಸ್ ದ್ವೇಷ, ಹಿಂಸಾಚಾರ ಮತ್ತು ಅನ್ಯಾಯವನ್ನು ಹರಡುತ್ತಿದೆ. ಆದ್ದರಿಂದ, ಇಂಡಿಯಾ ಒಕ್ಕೂಟವು ಒಟ್ಟಾಗಿ ‘ಅನ್ಯಾಯ’ದ ವಿರುದ್ಧ ಹೋರಾಡಲಿದೆ’ ರಾಹುಲ್ ಹೇಳಿದರು.

ಇದನ್ನೂ ಓದಿ; ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಚಿರಂಜೀವಿ ಸೇರಿದಂತೆ 132 ಜನರಿಗೆ ಪದ್ಮ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read