ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

ಗೌರಿ ಸ್ಮಾರಕ ಟ್ರಸ್ಟ್ ನೀಡುತ್ತಿರುವ ‘ಗೌರಿ ಲಂಕೇಶ್ ಸ್ಮಾರಕ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ’ಗೆ ಈ ವರ್ಷದ ದೇಶದ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 22ರಂದು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅದನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್‍ನ ಗೌರವ ಕಾರ್ಯದರ್ಶಿಗಳೂ, ದೇಶದ ಬಹುದೊಡ್ಡ ಭಾಷಾ ವಿದ್ವಾಂಸರೂ ಆದ ಗಣೇಶ್ ಎನ್. ದೇವಿಯವರು ಈ ಲೇಖನ ಬರೆದಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರವೀಶ್‍ಕುಮಾರ್ ದೇಶದ ಸಾಕ್ಷಿಪ್ರಜ್ಞೆಯಾಗಿ ಮೂಡಿದ್ದಾರೆ. ಸುಳ್ಳುಸುದ್ದಿಗಳನ್ನು ಎಲ್ಲೆಡೆ ಹಬ್ಬುತ್ತಾ, ನಿಜವಾದ ಮಾಧ್ಯಮಕ್ಕಿರುವ ಅವಕಾಶ ಕ್ಷೀಣಿಸುತ್ತಿರುವ ಕುರಿತು ಆತಂಕ ಹೊತ್ತಿರುವ ಲಕ್ಷಾಂತರ ಜನರು ಪ್ರತಿನಿತ್ಯ ಸಂಜೆ ಎನ್‍ಡಿಟಿವಿಯ ಮುಂದೆ ಕೂರುವಾಗ ಅವರ ನಿರೀಕ್ಷೆಯನ್ನು ಅವರು ಹುಸಿ ಮಾಡುವುದಿಲ್ಲ. ಅವರ ಮನದಲ್ಲಿನ ಆತಂಕ ಮತ್ತು ಚಿಂತನೆಗಳು ರವೀಶ್‍ರ ಮಾತಿನಲ್ಲಿ ಪ್ರತಿಬಿಂಬಿತವಾಗುತ್ತಿರುತ್ತವೆ. ಜಗತ್ತಿನ ಎಲ್ಲಾ ಖಂಡಗಳಲ್ಲೂ ಅವರಿಗೆ ವೀಕ್ಷಕರಿದ್ದಾರೆ. ಹಿಂದಿ ಬಲ್ಲ ಜನರು ಎಲ್ಲೆಲ್ಲಿದ್ದಾರೋ, ಅಲ್ಲೆಲ್ಲಾ ರವೀಶ್‍ಗೆ ಅಭಿಮಾನಿಗಳಿದ್ದಾರೆ. ಅವರು ಆತನ ನ್ಯೂಸ್‍ಶೋಗಳನ್ನು ನೋಡುತ್ತಾರೆ, ಅವರು ಬರೆದ ಬ್ಲಾಗ್‍ಗಳಿಗೆ ಎಡತಾಕುತ್ತಾರೆ, ಯೂಟ್ಯೂಬ್‍ನಿಂದ ಅವರ ಟಿವಿಶೋಗಳನ್ನು ಸಂಗ್ರಹಿಸಿ ನೋಡುತ್ತಾರೆ ಮತ್ತು ಅವರುಗಳ ಸ್ನೇಹಿತರ ಮಧ್ಯೆ ಅವೆಲ್ಲವನ್ನೂ ಹಂಚಿಕೊಳ್ಳುತ್ತಾರೆ. ಈ ರೀತಿಯಾಗಿ ರವೀಶ್ ಭಾರತದಲ್ಲಿ ಪ್ರತಿನಿತ್ಯದ ಸುದ್ದಿಯಾಗಿಬಿಟ್ಟಿದ್ದಾರೆ.

ಅವರ ಈ ಮಹತ್ವದ ಕೆಲಸವೇ ಅವರಿಗೆ ಹಲವಾರು ಗಣ್ಯಮಾನ್ಯ ಪ್ರಶಸ್ತಿಗಳನ್ನು ತಂದಿದೆ. ತೀರಾ ಇತ್ತೀಚಿನದ್ದೆಂದರೆ ಫಿಲಿಪೈನ್ಸ್ ನಲ್ಲಿನ ಮ್ಯಾಗಸೆಸೆ ಪ್ರತಿಷ್ಠಾನವು ನೀಡುವ ರಾಮನ್ ಮ್ಯಾಗಸೆಸೆ ಪ್ರಶಸ್ತಿ. 2016ರಲ್ಲಿ ಮುಂಬೈ ಪ್ರೆಸ್‍ಕ್ಲಬ್ ಅವರನ್ನು ಅತ್ಯುತ್ತಮ ಪತ್ರಕರ್ತರೆಂದು ಕರೆದು ಸನ್ಮಾನಿಸಿತು. 2013 ಮತ್ತು 2017ರಲ್ಲಿ ಪತ್ರಿಕೋದ್ಯಮದ ವಿಶೇಷ ಸಾಧನೆಗಾಗಿ ರಾಮನಾಥ್ ಗೋಯೆಂಕಾ ಪ್ರಶಸ್ತಿಯು ಲಭಿಸಿತು. ಅದೇ ವರ್ಷ – 2017- ಕುಲದೀಪ್ ನಯರ್ ಪ್ರತಿಷ್ಠಾನದ ಪತ್ರಿಕೋದ್ಯಮದ ಪ್ರಶಸ್ತಿಯನ್ನೂ ರವೀಶ್ ಸ್ವೀಕರಿಸಿದರು. ಇನ್ನೂ ಅದೆಷ್ಟೋ ಅಂತಹ ಪ್ರಶಸ್ತಿಗಳ ಸುರಿಮಳೆಯೇ ಅವರ ಮೇಲೆ ಸುರಿದಿದೆ. ಗೌರಿ ಸ್ಮಾರಕ ಟ್ರಸ್ಟ್ ಈ ವರ್ಷದಿಂದ ನೀಡಲುದ್ದೇಶಿಸಿರುವ ಗೌರಿ ಸ್ಮಾರಕ ಪ್ರಶಸ್ತಿಗೆ ಅರ್ಹವಾದ ವಿಶೇಷ ವ್ಯಕ್ತಿಯನ್ನು ಆರಿಸಲು ನಿಯೋಜಿತವಾದ ಸಮಿತಿಯು ಸರ್ವಾನುಮತದಿಂದ ಆರಿಸಿದ್ದು ಅವರನ್ನೇ. ತನಗೆ ಉದ್ಯೋಗ ಕೊಟ್ಟಿರುವ ಎನ್‍ಡಿಟಿವಿಯ ಸ್ಥಾಪಕ ಪ್ರಣಯ್‍ರಾಯ್‍ಗಿಂತ ಭಿನ್ನವಾಗಿ ಸಂಪೂರ್ಣವಾಗಿ ಭಾರತದಲ್ಲೇ ಶಿಕ್ಷಣ ಪಡೆದುಕೊಂಡು, ಇಂಗ್ಲಿಷಿನಲ್ಲಲ್ಲದೇ ಹಿಂದಿ ಪತ್ರಿಕೋದ್ಯಮದಲ್ಲಿರುವ ಶುದ್ಧ ಭೋಜಪುರಿ ಹಿನ್ನೆಲೆಯಿಂದ ಬಂದ, 43 ವರ್ಷಗಳ ಈ ಯುವಕನಲ್ಲಿ ಇಡೀ ದೇಶದ ಗಮನ ಸೆಳೆಯುವಂಥಾದ್ದು ಏನಿದೆ?

ರವೀಶ್ ಕಿರುಚಾಡುವ ಟಿವಿ ಆ್ಯಂಕರ್ ಅಲ್ಲ. ಆತ ಟಿವಿ ಚರ್ಚೆಯಲ್ಲಿ ನಿರತರಾಗಿರುವ ವ್ಯಕ್ತಿಗಳೊಂದಿಗೆ ಕೂಗಾಡಿದ್ದನ್ನು ಯಾರೂ ನೋಡಿಲ್ಲ. ಭಾರತದಲ್ಲಿ ಹೆಸರುವಾಸಿಯಾದ ಪತ್ರಕರ್ತರಲ್ಲಿ ಈತನೇ ಎಲ್ಲರಿಗಿಂತ ಹೆಚ್ಚು ತಿಳಿವಳಿಕೆಯಿರುವ ವ್ಯಕ್ತಿ ಎಂದೇನಲ್ಲ. ಇಂಡಿಯನ್ ಎಕ್ಸ್‍ಪ್ರೆಸ್ ದಿನಗಳ ಅರುಣ್ ಶೌರಿಯಂತೆ ಅಕ್ಯಾಡೆಮಿಕ್ ಸಾಧನೆಗಳ ಗರಿ ಹೊಂದಿದ ಎಷ್ಟೋ ಜನರಿದ್ದಾರೆ. ರವೀಶ್‍ಗಿರುವ ಸಾಮಥ್ರ್ಯವೆಂದರೆ, ಅವರು ಸಂವಾದಿಸಬಯಸುವವರ ಮಾತುಗಳನ್ನು ಗಮನ ಕೊಟ್ಟು ಕೇಳುತ್ತಾರೆ. ಒಂದು ವಿಚಿತ್ರ ಬಗೆಯ ಸಿನಿಕತನವನ್ನು ಹಿಂದಕ್ಕೆ ತಳ್ಳಿ, ತನ್ನದೇ ಸ್ವತಂತ್ರ ಆಲೋಚನೆಗಳನ್ನು ಹೊರಹೊಮ್ಮಿಸುತ್ತಾರೆ. ತನ್ನೊಂದಿಗೆ ಚರ್ಚೆಗೆ ಕೂತಿರುವವರ ಅಹಂ ಅನ್ನು ಉಬ್ಬಿಸುವ ಅಥವಾ ಅದನ್ನು ಹೀಗಳೆಯಲು ತನ್ನ ಸ್ಥಾನವನ್ನು ಅವರೆಂದಿಗೂ ಬಳಸುವುದಿಲ್ಲ. ಆತ ನಡೆಸಿಕೊಡುವ ಚರ್ಚಾಗೋಷ್ಠಿಗಳಲ್ಲಿ ಆತ ಏಕಕಾಲದಲ್ಲಿ ಜಾಗೃತನಾಗಿಯೂ, ಅಂಟಿಕೊಳ್ಳದಂತೆಯೂ ಇರುತ್ತಾರೆ ಮತ್ತು ಸಂವೇದನಾಶೀಲರಾಗಿಯೂ, ಅನುಮಾನವಿರುವ ವ್ಯಕ್ತಿಯಾಗಿಯೂ ಇರುತ್ತಾರೆ.

ಅವರಾಡುವ ಮಾತುಗಳ ಮಧ್ಯೆ ಈಗ ತನ್ನದೇ ವಿಶಿಷ್ಟ ಬ್ರಾಂಡ್ ಆಗಿಬಿಟ್ಟಿರುವ ಮುಗುಳ್ನಗೆಯನ್ನು ಹರಿಸುತ್ತಾರೆ. ಅದು ಭಾರತದ ಮಾಧ್ಯಮವು ಇಳಿದಿರುವ ಪಾತಾಳದ ಕುರಿತು ಅರಿವಿರುವ, ಅದು ಗದ್ದಲದಲ್ಲಿ ಮುಳುಗಿ, ಸತ್ವಹೀನ ಭಂಗಿಯನ್ನು ಪ್ರದರ್ಶಿಸುತ್ತಿರುವ ಅದರ ಸ್ಥಿತಿಯ ಬಗ್ಗೆ ವಿಷಾದ ಸೂಚಿಸುವ ಮುಗುಳ್ನಗೆ. ಅದು ಅಪಹಾಸ್ಯ, ಹತಾಶೆ, ವ್ಯಂಗ್ಯ ಮತ್ತು ತನ್ನ ಚಿಂತನೆಯ ಸ್ವಾತಂತ್ರ್ಯದ ಕುರಿತ ವಿಶ್ವಾಸ ಬೆರೆತ ಮುಗುಳ್ನಗೆ. ಅದು ‘ನಿಮ್ಮ ಮಟ್ಟದ ಕುರಿತು ನನಗೆ ಗೊತ್ತಿದೆ, ಆದರೆ ನೀವು ತಪ್ಪು ಎಂಬ ಬಗ್ಗೆ ನನಗೆ ಖಚಿತವಿದೆ’ ಎಂದು ಹೇಳುವಂತೆ ತೋರುತ್ತದೆ.

ರವೀಶ್ ತನ್ನ ಸ್ಟುಡಿಯೋಗೆ ಸಂಪೂರ್ಣ ತಯಾರಿಯೊಂದಿಗೆ ಬರುತ್ತಾರೆ. ಅವರು ಸಾಕಷ್ಟು ಅಧ್ಯಯನಶೀಲರು ಮತ್ತು ಏನನ್ನೇ ಓದಿದರೂ, ಅದನ್ನು ಎಚ್ಚರಿಕೆಯಿಂದ ಓದುವಂತೆ ಕಾಣುತ್ತದೆ. ಒಮ್ಮೆ ಅವರು ಭಾರತದ ಭಾಷಾ ವೈವಿಧ್ಯದ ಕುರಿತ ಚರ್ಚೆಗೆ ಅವರ ‘ಪ್ರೈಮ್‍ಟೈಂ’ ಷೋಗೆ ಕರೆದಿದ್ದರು. ಆ ದಿನ ಬೆಳಿಗ್ಗೆ ದೆಹಲಿಯ ಸಭಾಂಗಣವೊಂದರಲ್ಲಿ ನನ್ನ ಕೆಲವು ಪುಸ್ತಕಗಳು ಬಿಡುಗಡೆಯಾಗಲಿದ್ದವು. ಅವರು ಆ ಕಾರ್ಯಕ್ರಮದುದ್ದಕ್ಕೂ ಇದ್ದುದನ್ನು ನಾನು ಗಮನಿಸಿದ್ದೆ. ಕೊನೆಗೆ ಅವರು ಸದ್ದಿಲ್ಲದೇ ಅಲ್ಲಿಂದ ನಿರ್ಗಮಿಸುವಾಗ ಸ್ನೇಹಿತರೊಬ್ಬರ ಹತ್ತಿರ ನಂಬರ್ ಕೊಟ್ಟು ಕರೆ ಮಾಡಲು ತಿಳಿಸಿದ್ದರು. ನನ್ನ ಪುಸ್ತಕಗಳ ಬಿಡುಗಡೆ ಮುಗಿದನಂತರ ನಾನು ಕರೆ ಮಾಡಿದೆ. ಅವರು ಚರ್ಚೆಯ ರೆಕಾರ್ಡಿಂಗ್‍ಗೆ ಎನ್‍ಡಿಟಿವಿ ಸ್ಟುಡಿಯೋಗೆ ಬರಲು ಕೇಳಿದರು. ಅಂದು ಬೆಳಿಗ್ಗೆ ಅವರು ಕೇಳಿದ್ದ ಉಪನ್ಯಾಸಗಳ ಆಧಾರದ ಮೇಲೆ ಪ್ರಶ್ನೆಗಳಿರುತ್ತವೆ ಎಂದು ನಾನು ತಿಳಿದೆ. ಅಲ್ಲಿಗೆ ನಾನು ಹೋದಾಗ, ಅವರ ಕೈಯ್ಯಲ್ಲಿ ನನ್ನ ಎರಡು ಪುಸ್ತಕಗಳಿದ್ದುದನ್ನು ನೋಡಿ ಆಶ್ಚರ್ಯವಾಯಿತು. ಅಂದು ನಡೆದ ಚರ್ಚೆಯಲ್ಲಿ ಆತ ನನ್ನೆರಡೂ ಪುಸ್ತಕಗಳನ್ನು ಬಹಳ ಆಳವಾಗಿ ಅಧ್ಯಯನ ಮಾಡಿದ್ದುದು ಸ್ಪಷ್ಟವಾಯಿತು. ಅದು ಮೇಲುಮೇಲಿನ ಓದಲ್ಲ. ಅವುಗಳನ್ನು ಕನಿಷ್ಠ ಒಂದು ವಾರ ಕಾಲ ಆತ ಹಚ್ಚಿಕೊಂಡಿರಬೇಕು. ಅದು ನನಗೆ ಬಹಳ ಅಸಾಮಾನ್ಯವೆಂದು ತೋರಿತು. ಹಲವು ಪತ್ರಕರ್ತರು ನನ್ನನ್ನು ಸಂದರ್ಶಿಸಿದ್ದಾರೆ. ಅವರಲ್ಲಿ ಕೆಲವರು ಬಹಳ ಒಳ್ಳೆಯ ತಯಾರಿ ಮಾಡಿಕೊಂಡೇ ಬರುತ್ತಿದ್ದರು. ರವೀಶ್ ಅವರೆಲ್ಲರಲ್ಲಿ ಅತ್ಯುತ್ತಮವಾದವರು ಎಂಬುದರಲ್ಲಿ ಸಂದೇಹವೇ ಇಲ್ಲ.

ಆದರೆ, ಆತನ ಅಂದ-ಚೆಂದ, ಫೋಟೋಜೆನಿಕ್ ಮುಖ, ಮುಗುಳ್ನಗೆ, ಬೌದ್ಧಿಕ ಸಾಮಥ್ರ್ಯ ಅಥವಾ ಪ್ರಶ್ನೆ ಕೇಳುವ ರೀತಿ – ಇವುಗಳು ಇಂದು ಆತ ಏನಾಗಿದ್ದಾರೋ ಅದಕ್ಕೆ ಕಾರಣವಲ್ಲ. ಇವೆಲ್ಲದರೊಂದಿಗೆ, ಆತನಲ್ಲಿ ರಾಜಕೀಯ ಶಕ್ತಿಗಳು ಮತ್ತು ಇಂದು ಆಳುತ್ತಿರುವವರು ಸ್ವಾತಂತ್ರ್ಯವನ್ನು ಅಣಕ ಮಾಡುತ್ತಿದ್ದಾರೆ ಎಂದು ಹೇಳುವ ಧೈರ್ಯವಿದೆ. ಆತನ ಮೇಲೆ ಬೆದರಿಕೆ ಹಾಗೂ ಲೇವಡಿಯ ಮಳೆಯೇ ಪ್ರತಿದಿನ ಸುರಿಯುತ್ತಿದ್ದರೂ, ಒಂದೇ ಒಂದು ಹನಿ ಹೆದರಿಕೆಯೂ ಇಲ್ಲದಂತೆ ತನ್ನ ಗುರಿಸಾಧನೆಯ ಕಡೆಗೆ ನಡೆದಿದ್ದಾರೆ.

ಬಹುತೇಕ ಟಿವಿ ಆ್ಯಂಕರ್‍ಗಳು ವೀಕ್ಷಕರನ್ನು (ಟಿಆರ್‍ಪಿ) ಹೆಚ್ಚಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ಸಿದ್ಧರಾಗಿರುವಾಗ, ರವೀಶ್ ಸ್ಪಷ್ಟ ಮಾತುಗಳಲ್ಲಿ ಟಿವಿಯನ್ನು ಆಫ್ ಮಾಡಿ ಹೊರಗೆ ಹೋಗಿ ಎಂದು ವೀಕ್ಷಕರಿಗೆ ಹೇಳಬಲ್ಲರು. ಟಿವಿ ಸ್ಕ್ರೀನ್‍ಅನ್ನು ಸಂಪೂರ್ಣ ಕಪ್ಪಾಗಿಸಿ, ಇದು ಸತ್ಯವನ್ನು ಹೇಳುವ ಮಾಧ್ಯಮವಾಗಿ ಉಳಿದಿಲ್ಲ ಎಂದು ಹೇಳುವ ಎದೆಗಾರಿಕೆ ಆತನಿಗಿದೆ. ಇಂದು ಆ ವೃತ್ತಿಯಲ್ಲಿರುವ ಬಹುತೇಕರು ಮಾಧ್ಯಮಲೋಕವು ಇಳಿದಿರುವ ಸ್ಥಿತಿಯಿಂದ ಅದನ್ನು ಮೇಲೆತ್ತಲು ಸಾಧ್ಯವಿಲ್ಲವೆಂದು ಒಪ್ಪಿಕೊಂಡುಬಿಟ್ಟಿದ್ದಾರೆ. ಅಂತಹ ಹೊತ್ತಿನಲ್ಲಿ ತನ್ನಂಥವರು ಬಹಳ ಕಡಿಮೆಯಿದ್ದರೂ, ಆತ ಗಟ್ಟಿಯಾಗಿ ನಿಂತಿದ್ದಾನೆ ಮತ್ತು ಸುಳ್ಳು ಸುದ್ದಿಗಳು, ಸುಳ್ಳುಗಳು, ಬೆದರಿಕೆಗಳು, ಗುಂಪು ಹಿಂಸೆಯ ವಿರುದ್ಧ ಸಮರವನ್ನೇ ಸಾರಿದ್ದಾನೆ ಮತ್ತು ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲವೆಂಬ ದೃಢ ಸಂಕಲ್ಪ ಮಾಡಿದ್ದಾನೆ. ಆ ದೃಢ ಸಂಕಲ್ಪ, ಆ ಧೈರ್ಯ ಮತ್ತು ಪ್ರಾಮಾಣಿಕವಾದ ಆ ಜವಾಬ್ದಾರಿಯುತ ನಿಲುವು, ಆತನನ್ನು ನಮ್ಮ ಕಾಲದ ಒಬ್ಬ ಅತಿ ವಿಶಿಷ್ಟ ವ್ಯಕ್ತಿಯನ್ನಾಗಿಸಿದೆ. ಇಂದು ದೇಶವನ್ನಾಳುತ್ತಿರುವವರು ಮುಂದೊಂದು ದಿನ ಇತಿಹಾಸದ ಮರೆತುಹೋದ ಪುಟಗಳಲ್ಲಿ ಸೇರಿಹೋಗುತ್ತಾರೆ. ಆದರೆ ರವೀಶ್ ಪ್ರಜಾತಂತ್ರವು ಅಪಾಯದಲ್ಲಿದ್ದ ಕಾಲದಲ್ಲಿ ನಾಗರಿಕರ ಘನತೆ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಕುರಿತಾಗಿ ರಾಜಿರಹಿತ ಬದ್ಧತೆಯನ್ನು ತೋರಿದ ಸ್ಫೂರ್ತಿದಾಯದ ಉದಾಹರಣೆಯಾಗಿ ನೆನಪಿನಲ್ಲಿರುತ್ತಾರೆ.

ಜಿ.ಎನ್.ದೇವಿ
ಸಂಸ್ಕೃತಿ ಚಿಂತಕರು ಮತ್ತು ಲೇಖಕರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here