Homeಮುಖಪುಟಕರ್ನಾಟಕದಲ್ಲಿ ಎಎಪಿಗೆ ಭ್ರಷ್ಟರು ಸೇರ್ಪಡೆಯಾಗುತ್ತಿದ್ದಾರೆಯೇ?

ಕರ್ನಾಟಕದಲ್ಲಿ ಎಎಪಿಗೆ ಭ್ರಷ್ಟರು ಸೇರ್ಪಡೆಯಾಗುತ್ತಿದ್ದಾರೆಯೇ?

- Advertisement -
- Advertisement -

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭಾರೀ ದಿಗ್ವಿಜಯ ಸಾಧಿಸಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ತನ್ನ ಗೆಲುವಿನ ನಾಗಾಲೋಟ ವಿಸ್ತರಿಸುವತ್ತ ಕ್ರಿಯಾಶೀಲವಾಗಿದೆ. ದೆಹಲಿ ನಂತರ ಪಂಜಾಬ್‌ನಲ್ಲಿ ದೊರೆತ ಗೆಲುವು ಪಕ್ಷದೊಳಗೆ ಭಾರೀ ಚಲನಶೀಲನೆಯನ್ನು ತಂದಿದ್ದು, ದೆಹಲಿಯ ಮೂರು ವಿಭಾಗಗಳ ಮುನ್ಸಿಪಲ್ ಚುನಾವಣೆ ಎದುರಿಸಲು ಬಿಜೆಪಿಯೇ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮರ್ಪಕ ಅನುದಾನ ಹಂಚಿಕೆಯ ದೃಷ್ಟಿಯಿಂದ ಮೂರು ಮುನ್ಸಿಪಲ್‌ಗಳನ್ನು ಮತ್ತೆ ಒಂದುಗೂಡಿಸಬೇಕು ಎಂಬ ವಾದವನ್ನು ಬಿಜೆಪಿ ಮುಂದಿಟ್ಟರೆ, ಚುನಾವಣೆಗೂ ಮುನ್ಸಿಪಲ್‌ಗಳನ್ನು ಒಂದುಗೂಡಿಸುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆಮ್ ಆದ್ಮಿ ಪ್ರತಿಕ್ರಿಯೆ ನೀಡಿದೆ. ಅಷ್ಟರ ಮಟ್ಟಿಗೆ ಪ್ರಬಲವಾಗಿ ಬೆಳೆದಿರುವ ಬಿಜೆಪಿಯನ್ನು ಕೌಂಟರ್ ಮಾಡುತ್ತಿರುವುದನ್ನು ದೆಹಲಿಯ ಜೊತೆಗೆ ದೇಶವೂ ಕಂಡಿದೆ.

’ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಡಿದ ಮಾತುಗಳು ಚರ್ಚೆಗೆ ಗ್ರಾಸವಾಗಿದ್ದವು. “ವಿವೇಕ್ ಅಗ್ನಿಹೋತ್ರಿಯವರು ಕೋಟಿಕೋಟಿ ರೂ. ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಸಿನಿಮಾ ಪೋಸ್ಟರ್ ಅಂಟಿಸುತ್ತಿದ್ದಾರೆ. ಸಿನಿಮಾವನ್ನು ಯೂಟ್ಯೂಬ್‌ಗೆ ಹಾಕಿದರೆ ಎಲ್ಲ ಜನರೂ ಫ್ರೀಯಾಗಿ ನೋಡ್ತಾರೆ. ಎಎಪಿ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರಿ ಪಂಡಿತರಿಗೆ ಉದ್ಯೋಗ ನೀಡಲಾಗಿದೆ” ಎಂದಿದ್ದರು ಕೇಜ್ರಿವಾಲ್. ಆನಂತರ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ಉದ್ರಿಕ್ತ ಗುಂಪೊಂದು ಕೇಜ್ರಿವಾಲ್ ಮನೆಗೆ ನುಗ್ಗುವ ಪ್ರಯತ್ನ ಮಾಡಿತ್ತು. ’ಕೇಜ್ರಿವಾಲ್ ಅವರನ್ನು ಕೊಲೆ ಮಾಡಲು ಬಿಜೆಪಿ ಸಂಚು ರೂಪಿಸಿದೆ’ ಎಂದು ಎಎಪಿ ಆರೋಪಿಸಿತ್ತು. ಹೀಗೆ ಬಿಜೆಪಿಯನ್ನು ಹಲವು ಸ್ತರಗಳಲ್ಲಿ ಸಮರ್ಥವಾಗಿ ಎದುರಿಸುವ ಲಕ್ಷಣಗಳನ್ನು ಎಎಪಿ ತೋರುತ್ತಿದೆ. ಜೊತೆಗೆ ಇತರ ರಾಜ್ಯಗಳಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ. 2023ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆಯಲು ಹಲವು ಗುರಿಗಳನ್ನು ಎಎಪಿ ಹಾಕಿಕೊಂಡಿದೆ. ಪಂಜಾಬ್ ರಾಜ್ಯವನ್ನು ಎಎಪಿ ಗೆದ್ದಿರುವ ಕಾರಣ, ಅನೇಕ ಹಾಲಿ ಮಾಜಿ ರಾಜಕೀಯ ನಾಯಕರು ಆಮ್ ಆದ್ಮಿಯತ್ತ ಮುಖಮಾಡುತ್ತಿರುವ ಸುದ್ದಿಗಳು ಬರುತ್ತಿವೆ.

ಕರ್ನಾಟಕ ಎಎಪಿಯು ಸದಸ್ಯತ್ವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಜನೋಪಯೋಗಿಗಳಲ್ಲ. ಜನರ ನಿಜವಾದ ಸಮಸ್ಯೆಗಳ ಕುರಿತು ಯೋಚಿಸುವ ಪರ್ಯಾಯ ರಾಜಕಾರಣಕ್ಕೆ ಬೆಂಬಲ ನೀಡಬೇಕು ಎಂದು ಎಎಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಪ್ರವರ್ಧಮಾನಕ್ಕೆ ಬಂದ ಎಎಪಿ, ಕರ್ನಾಟಕದಲ್ಲೂ ಅದೇ ಆಂದೋಲನವನ್ನು ಮುಂದುವರಿಸುವ ಮಾತುಗಳನ್ನಾಡುತ್ತಿದೆ. ಆದರೆ ಓಡುವ ಕಾಲಿಗೆ ಕಟ್ಟಿದ ಗುಂಡಿನಂತೆ ಎಎಪಿಗೂ ಭ್ರಷ್ಟರ ಪಡೆ ಸೇರುತ್ತಿದೆ ಎಂದು ಪಕ್ಷದ ಕೆಲವು ಕಾರ್ಯಕರ್ತರು, ಎಎಪಿಯನ್ನು ಗಮನಿಸುತ್ತಿರುವ ಸಾಮಾಜಿಕ ಹೋರಾಟಗಾರರು ಆರೋಪಿಸುತ್ತಿದ್ದಾರೆ.

“ಸಂಡೂರು ಭಾಗದಲ್ಲಿ ಮೈನಿಂಗ್ ನಡೆಯಲು ಅವಕಾಶ ಮಾಡಿಕೊಟ್ಟಿದ್ದ ಆರೋಪವನ್ನು ಅಂದಿನ ಅರಣ್ಯಾಧಿಕಾರಿ ದರಪ್ಪ ನಾಯಕ ಎದುರಿಸುತ್ತಿದ್ದಾರೆ. ಅರಣ್ಯ ಗಡಿಯನ್ನು ತಿದ್ದುಪಡಿ ಮಾಡಿದ್ದರಿಂದಲೇ ಅಕ್ರಮ ಗಣಿಗಾರಿಕೆ ನಡೆಯಿತು. ಜನಾರ್ಧನ ರೆಡ್ಡಿಯವರಿಗೆ ಅನುಕೂಲ ಮಾಡಿಕೊಟ್ಟವರಲ್ಲಿ ದರಪ್ಪ ನಾಯಕ ಕೂಡ ಒಬ್ಬರು. ಇಂಥವರನ್ನು ಎಎಪಿಗೆ ಸೇರಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಬೆಳೆದ ಪಕ್ಷ ಈಗ ಭ್ರಷ್ಟರಿಗೆ ಮಣೆ ಹಾಕುತ್ತಿರುವುದು ವಿಪರ್ಯಾಸ” ಎಂದು ಆರೋಪಿಸುತ್ತಾರೆ ಗಣಿ ಹಗರಣದ ವಿರುದ್ಧ ಹೋರಾಟ ಮಾಡುತ್ತಾ ಬಂದಿರುವ ಸಂಡೂರಿನ ಸಾಮಾಜಿಕ ಹೋರಾಟಗಾರ ಶ್ರೀಶೈಲ್ ಆಲ್ದಹಳ್ಳಿ.

“ಭ್ರಷ್ಟರಿಂದ ಯಾವ ಪರ್ಯಾಯ ವ್ಯವಸ್ಥೆಯನ್ನು ನಿರೀಕ್ಷಿಸಬಹುದು? ಎಎಪಿ ಅಕ್ರಮ ಗಣಿಗಾರಿಕೆಯನ್ನು ಒಪ್ಪಿಕೊಳ್ಳುತ್ತದೆಯೇ? ಆ ಮಾಜಿ ಅಧಿಕಾರಿ ಸಿರಗುಪ್ಪ ಬಳಿಯಲ್ಲಿ ಅಕ್ರಮವಾಗಿ ಮರಳುಗಾರಿಕೆಯನ್ನೂ ಮಾಡುತ್ತಿದ್ದಾರೆಂಬ ಆರೋಪವಿದೆ. ನೂರಾರು ಕೋಟಿ ಆಸ್ತಿ ಇವರಿಗೆ ಎಲ್ಲಿಂದ ಬಂತು? ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ರಾಜಕೀಯಕ್ಕೆ ಸೇರುತ್ತಿದ್ದಾರೆ. ಜನರಿಗಾಗಿ ಕೆಲಸ ಮಾಡುತ್ತಾರೆಂದು ಹೇಗೆ ನಂಬುವುದು? ಪಕ್ಷಕ್ಕೆ ಬರುವವರ ಪೂರ್ವಾಪರ ವಿಚಾರ ಮಾಡದೆ ಶಾಲು-ಟೋಪಿ ಹಾಕಿದರಾಯಿತೇ? ಭ್ರಷ್ಟರಿಗೊಂದು ಪಕ್ಷ ಬೇಕಷ್ಟೇ. ನಾಳೆ ಅನುಕೂಲಕ್ಕಾಗಿ ಬೇರೆ ಪಕ್ಷಕ್ಕೆ ಹೋದರೂ ಆಶ್ಚರ್ಯಪಡಬೇಕಿಲ್ಲ. ಅದರಿಂದ ಎಎಪಿಗೆ ನಷ್ಟವಾಗುತ್ತದೆ” ಎನ್ನುತ್ತಾರೆ ಶ್ರೀಶೈಲ್.

ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು ನಿವೃತ್ತಿ ಪಡೆದು ಈಗ ಭ್ರಷ್ಟರ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರಾವಧಿಯಲ್ಲಿಯೇ ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದಾಗ ಭ್ರಷ್ಟಾಚಾರದ ವಿರುದ್ಧ ಮೌನವಾಗಿದ್ದವರವರು. ಅಲ್ಲದೆ, ಬಿಜೆಪಿ ಹಿಂದುತ್ವವನ್ನೂ ಅನುಮೋದಿಸುತ್ತಿದ್ದರು ಎಂಬ ಆರೋಪಗಳು ಸಾಮಾನ್ಯವಾಗಿವೆ. ಈಗ ಅವರೂ ಎಎಪಿಯಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿರುವ ನಾಯಕರಾಗಿದ್ದಾರೆ. ಇನ್ನು ಸ್ಥಳೀಯ ನಾಯಕರನ್ನು ರಾಜ್ಯ ನಾಯಕರು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಪ್ರಾಮಾಣಿಕರು ಪಕ್ಷವನ್ನು ತೊರೆಯುವ ಆತಂಕ ಎದುರಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಭ್ರಷ್ಟಾಚಾರಕ್ಕೆ ವಿನಾಯಿತಿ ಇಲ್ಲ: ಪೃಥ್ವಿ ರೆಡ್ಡಿ

’ನಡೆವವರೆಡಹದೆ ಕುಳಿತವರೆಡಹುವರೇ?’ ಎಂಬ ಮಾತನ್ನು ಅನುಮೋದಿಸಿ, ತಮಗೆ ಆರೋಪಿಸಿಕೊಳ್ಳುತ್ತಿರುವಂತೆ, ಎಎಪಿ ಈ ಎಲ್ಲಾ ಆರೋಪಗಳನ್ನು ಎದುರಿಸಿ ಮುನ್ನುಗ್ಗುವ ಪ್ರಯತ್ನ ಮಾಡುತ್ತಿರುವುದನ್ನೂ ರಾಜಕೀಯ ವಿಶ್ಲೇಷಕರು ಗುರುತಿಸುತ್ತಿದ್ದಾರೆ. ಪಕ್ಷನ ವಕ್ತಾರರೂ ಅದನ್ನೇ ಹೇಳುತ್ತಿದ್ದಾರೆ.

“2023ರ ವಿಧಾನಸಭೆ ಚುನಾವಣೆಗೆ ವಿಶಿಷ್ಟ ಕಾರ್ಯಸೂಚಿಗಳನ್ನು ರೂಪಿಸಿಕೊಂಡಿದೆ” ಎನ್ನುವ ಎಎಪಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು, “ಭ್ರಷ್ಟರನ್ನು ಹೊರಗಿಡುವ ಕೆಲಸವನ್ನು ಎಎಪಿ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು.

’ನ್ಯಾಯಪಥ’ದೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಪಕ್ಷ ಬೆಳೆಯುತ್ತಿದೆ. ನಮ್ಮ ಬಳಿ ಸಿಬಿಐ ಥರದ ಯಾವುದೇ ಸಂಘಟನೆಗಳು ತನಿಖೆಗಾಗಿ ಇಲ್ಲ. ಆದರೆ ಯಾರ ವಿರುದ್ಧವಾದರೂ ಭ್ರಷ್ಟಾಚಾರ ಆರೋಪ ಬಂದರೆ ಪಕ್ಷದಲ್ಲಿ ಉಳಿಸಿಕೊಳ್ಳುವುದಿಲ್ಲ. ಪಕ್ಷದ ಸಿದ್ಧಾಂತ ನನಗೂ ಅನ್ವಯವಾಗುತ್ತದೆ” ಎಂದು ತಿಳಿಸಿದರು.

“ಭ್ರಷ್ಟಾಚಾರದ ಆರೋಪ ಹೊತ್ತಿರುವವರು ಎಎಪಿಗೆ ಸೇರಿರಬಹುದು. ಅಂಥವರ ಮಾಹಿತಿಯನ್ನು ಜನ ನೀಡಿದರೆ ಪಕ್ಷ ಕ್ರಮ ಕೈಗೊಳ್ಳುತ್ತದೆ” ಎಂದು ಹೇಳಿದರು.

ಪಕ್ಷ ಸಂಘಟನೆ ಹಾಗೂ ಮುಂದಿನ ಕಾರ್ಯಸೂಚಿಗಳ ಕುರಿತು ವಿವರಿಸಿದ ಅವರು, “ಜನರು ನಮ್ಮ ಕೆಲಸವನ್ನು ಮೊದಲಿನಿಂದಲೂ ನಂಬುತ್ತಿದ್ದರು. ಆದರೆ ದೆಹಲಿ ಬಿಟ್ಟು ಆಚೆ ಎಎಪಿ ವಿಸ್ತರಿಸಲಾರದು ಎಂದು ಭಾವಿಸಿದ್ದರು. ಮಾರ್ಚ್ 10ರ ಚುನಾವಣೆ ಫಲಿತಾಂಶದ ಬಳಿಕ ಪರಿಸ್ಥಿತಿ ಬದಲಾಗಿದೆ. ರಾಜಕೀಯದ ಮೇಲೆ ಆಸಕ್ತಿ ಇರದ ವರ್ಗವೂ ಎಎಪಿಯನ್ನು ಆಶಾಕಿರಣವಾಗಿ ನೋಡುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.

“ಸಮಸ್ಯೆಗಳ ಕುರಿತು ಕೇವಲ ಹೋರಾಟ ಮಾಡಿದರೆ ಸಾಲದು, ನಾವೇ ಅಧಿಕಾರಕ್ಕೆ ಬರಬೇಕು ಎಂಬ ಭಾವನೆ ಜನರಲ್ಲಿ ಬಂದಿದೆ. ನಾವು ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಲಕ್ಷಾಂತರ ಜನರು ಪಕ್ಷಕ್ಕೆ ಸೇರುತ್ತಿದ್ದಾರೆ. ಹೀಗಾಗಿ ಮೊಬೈಲ್ ಆಪ್ ಕೂಡ ಅಭಿವೃದ್ಧಿಪಡಿಸಿದ್ದೇವೆ. ಕಡಿಮೆ ಜನರಿದ್ದರೆ ಮ್ಯಾನ್ಯುವಲ್ ಆಗಿ ಸದಸ್ಯತ್ವ ಮಾಡಬಹುದಿತ್ತು. ಆದರೆ ಹೆಚ್ಚು ಜನರು ಸೇರುತ್ತಿರುವುದರಿಂದ ಗಣಕೀಕೃತ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.

ಪೃಥ್ವಿ ರೆಡ್ಡಿ

“ಪ್ರತಿಯೊಂದು ಕ್ಷೇತ್ರದಿಂದ ಒಬ್ಬರಲ್ಲ ಹಲವಾರು ಜನ ಎಎಪಿಯಿಂದ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಬೇರೆ ಪಕ್ಷಗಳಲ್ಲಿ ಕೆಲಸ ಮಾಡಿ ಅವಕಾಶ ವಂಚಿತರಾದವರು, ಹಾಲಿ ಹಾಗೂ ಮಾಜಿ ಎಂಎಲ್‌ಎಗಳು ನಮ್ಮ ಸಂಪರ್ಕದಲ್ಲಿದ್ದಾರೆ. ನಮಗೆ ಇದನ್ನೆಲ್ಲ ನೋಡಿ ಧೈರ್ಯ ಬಂದಿದೆ. ಮನಸ್ಸು ಮಾಡಿದರೆ ಕರ್ನಾಟಕದಲ್ಲಿ ಗೆಲ್ಲಬಹುದೆಂಬ ಭರವಸೆ ಮೂಡಿದೆ” ಎಂದರು.

“ಜನ ಕಟ್ಟಿರುವ ತೆರಿಗೆ ಹಣ, ಜನರಿಗಾಗಿ (ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಇತ್ಯಾದಿ ಯೋಜನೆಗಳಿಗೆ) ಬಳಕೆಯಾಗಬೇಕು ಎಂಬುದು ನಮ್ಮ ರಾಜಕೀಯ ಅಜೆಂಡಾ. ಕೇವಲ ಪ್ರಣಾಳಿಕೆಯಷ್ಟೇ ಅಲ್ಲ; ಗ್ಯಾರಂಟಿ ಕಾರ್ಡ್‌ಅನ್ನು ಜನರಿಗೆ ನೀಡುತ್ತೇವೆ. ಕೆಲಸ ಮಾಡದೆ ಇದ್ದರೆ ನಮ್ಮ ವಿರುದ್ಧ ಕೋರ್ಟ್‌ಗೆ ಹೋಗಬಹುದೆಂದು ಹೇಳುತ್ತಿದ್ದೇವೆ. ಪ್ರಣಾಳಿಕೆಯನ್ನು ಎಲ್ಲರೂ ಕೊಡುತ್ತಾರೆ, ಆದರೆ ಗ್ಯಾರಂಟಿಯನ್ನು ಯಾರೂ ಕೊಡಲ್ಲ” ಎಂದು ಹೇಳುತ್ತಾರೆ ಪೃಥ್ವಿ ರೆಡ್ಡಿ.

“ಕರ್ನಾಟಕದಲ್ಲಿ ಬೇರೆಬೇರೆ ಭಾಗದಲ್ಲಿ ಬೇರೆಬೇರೆ ಸಮಸ್ಯೆಗಳಿವೆ. ಉತ್ತರ ಕರ್ನಾಟಕದಲ್ಲಂತೂ ಅಭಿವೃದ್ಧಿ ಆಗಿಯೇ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಬೆಂಗಳೂರಿಗೆ ಸೀಮಿತವಾಗಿದೆ. ಇಡೀ ಕರ್ನಾಟಕ ರಾಜ್ಯಕ್ಕೆ ಒಂದು ಸಮಗ್ರ ಪ್ರಣಾಳಿಕೆ ರೂಪಿಸಿದರೆ ಪ್ರತಿಯೊಂದು ಕ್ಷೇತ್ರಕ್ಕೂ ಸ್ಥಳೀಯವಾದ ಪ್ರಣಾಳಿಕೆ ಮಾಡುತ್ತೇವೆ. ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಜನರ ಜೊತೆ ಚರ್ಚೆ ಮಾಡಿ ಜನರ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಇರುವ ಜಾಗದಲ್ಲಿಯೇ ಕೆಲಸ ದೊರಕಿಸುವ ಭರವಸೆಯನ್ನು ಜನರಿಗೆ ನೀಡುತ್ತಿದ್ದೇವೆ” ಎಂದು ತಿಳಿಸಿದರು.

ರಾಜ್ಯದಲ್ಲಿ ಮತೀಯ ಕಲಹಗಳು ಉಂಟಾಗುತ್ತಿವೆ. ಎಎಪಿ ಮೃದು ಹಿಂದುತ್ವವನ್ನು ಪಾಲಿಸುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ಜನರಿಗೆ ತೋರಿಸಲು ಬಿಜೆಪಿ ಯಾವುದೇ ಕೆಲಸವನ್ನು ಮಾಡಿಲ್ಲ. ಅಭಿವೃದ್ಧಿ ಹೆಸರಲ್ಲಿ ಮತ ಕೇಳಲು ಅವರಿಗೆ ಧೈರ್ಯವಿಲ್ಲ. ಜನರ ದಾರಿ ತಪ್ಪಿಸಲು ಕೋಮು ವಿಷಯಗಳನ್ನು ತರುತ್ತಿದ್ದಾರೆ. ಹಿಜಾಬ್ ಮಾತನಾಡುತ್ತಾರೆ. ಆದರೆ 64 ಪರ್ಸೆಂಟ್ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಇಲ್ಲ. ಈ ಸಮಸ್ಯೆಯ ಕಾರಣಕ್ಕೆ ಹಿಂದೂ ಹೆಣ್ಣು ಮಕ್ಕಳೂ ಶಾಲೆಗೆ ಹೋಗುತ್ತಿಲ್ಲ. ಮೊದಲು ಶಿಕ್ಷಣ ವ್ಯವಸ್ಥೆ ಸರಿಪಡಿಸಬೇಕು. ಆದರೆ ಬಿಜೆಪಿಯವರ ಉದ್ದೇಶ ಮತ ರಾಜಕಾರಣವಷ್ಟೇ. ಹೀಗಾಗಿ ಇಲ್ಲದೆ ಇರುವ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಜನರು ಹಸಿವಿನಿಂದ ನರಳುತ್ತಿದ್ದಾರೆ. ಹೀಗಿರುವಾಗ ಯಾವ ಮಾಂಸ ತಿನ್ನಬೇಕು, ಹೇಗೆ ಕತ್ತರಿಸಬೇಕು, ಯಾರಿಂದ ಮಾವಿನ ಹಣ್ಣು ತೆಗೆದುಕೊಳ್ಳಬೇಕು ಎಂದು ಚರ್ಚಿಸುತ್ತಾರೆ. ಇದು ದಾರಿ ತಪ್ಪಿಸುವ ಕೆಲಸ. ನಾವು ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ನೀಡುತ್ತೇವೆ” ಎಂದು ಸ್ಪಷ್ಟಪಡಿಸಿದರು.

“ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲವೂ ಒಂದೇ. ಪರ್ಯಾಯ ಅಂತ ನೋಡುವುದಾದರೆ ಎಎಪಿ ಮಾತ್ರ. ಉಳಿದ ಪಕ್ಷಗಳು ಭಯ ಹಾಗೂ ದ್ವೇಷ ಹುಟ್ಟಿಸುತ್ತಿವೆ. ನಮ್ಮ ಪಕ್ಷದ ರಾಜಕೀಯ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಸೆಕ್ಯುಲರ್ ಎಂದರೆ ಧರ್ಮವನ್ನು ಬಿಡುವುದಲ್ಲ. ಜನರ ಮಧ್ಯೆ ದ್ವೇಷ ಹರಡಬಾರದು. ಹಜ್‌ಗೆ ಹೋಗುವ ಅಲ್ಪಸಂಖ್ಯಾತರಿಗೆ ಸಬ್ಸಿಡಿಯನ್ನು ದೆಹಲಿ ಸರ್ಕಾರ ಮೊದಲಿನಿಂದಲೂ ನೀಡುತ್ತಿದೆ. ಅದನ್ನು ನಾವು ತೆಗೆದುಹಾಕಿಲ್ಲ. ಆದರೆ ಎಲ್ಲರಿಗೂ ಸಬ್ಸಿಡಿ ಸಿಗುವ ಅವಕಾಶವನ್ನು ಮಾಡಿದ್ದೇವೆ. ಎಲ್ಲ ಜಾತಿ, ಧರ್ಮದಲ್ಲೂ ಬಡವರಿರುತ್ತಾರೆ. ನಾವು ಮಾಡುವ ರಾಜಕೀಯ ಎಲ್ಲ ಜಾತಿ, ಧರ್ಮಕ್ಕೂ ಸಮವಾದ ವ್ಯವಸ್ಥೆ ಕಲ್ಪಿಸುತ್ತಿದೆ. ಯಾವುದೇ ಧರ್ಮಕ್ಕೆ ತಾರತಮ್ಯ ಮಾಡುವುದಿಲ್ಲ. ಸಂವಿಧಾನವೇ ನಮ್ಮ ಭರವಸೆ” ಎಂದರು.

ಜೆಡಿಎಸ್‌ಗಿಂತ ಹೆಚ್ಚು ಸೀಟ್ ಸಾಧ್ಯ: ದರ್ಶನ್ ಜೈನ್

ಎಎಪಿ ಮುಖಂಡರಾದ ದರ್ಶನ್ ಜೈನ್ ಮಾತನಾಡಿ, “ಪಂಜಾಬ್ ಗೆಲುವಿನ ನಂತರ ಎಎಪಿಯತ್ತ ಎಲ್ಲರ ಗಮನ ನೆಟ್ಟಿದೆ. ಹಿಂದೆ ಎಂಎಲ್‌ಎ ಆಗಿದ್ದವರು, ಜಿಲ್ಲಾ ಪಂಚಾಯತ್ ಸದಸ್ಯರು ನಮ್ಮೊಂದಿಗೆ ಬರಲಿದ್ದಾರೆ. ವಿವಿಧ ಪಕ್ಷಗಳಲ್ಲಿದ್ದು ಕಡಿಮೆ ಅಂತರದಲ್ಲಿ ಸೋತವರು ಎಎಪಿ ಸೇರಲು ಬಯಸಿದ್ದಾರೆ. ಹೆಸರುಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗಿಂತ ಎಎಪಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದ್ದು, ಸರಿಯಾಗಿ ಪಕ್ಷ ಸಂಘಟನೆ ಮಾಡಬೇಕಷ್ಟೇ” ಎಂದರು.

ದರ್ಶನ್ ಜೈನ್

“ಕರ್ನಾಟಕದಲ್ಲಿ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳಿವೆ. ಭ್ರಷ್ಟಾಚಾರ ಮಿತಿ ಮೀರಿದೆ. ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಆದರೆ ಸಿಂಗಲ್ ಇಂಜಿನ್ ಕೆಲಸವೂ ಆಗುತ್ತಿಲ್ಲ. ನಲವತ್ತು ಪರ್ಸೆಂಟ್ ಕಮಿಷನ್ ಕೇಳಿದ್ದಕ್ಕಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ ಅವರು, “ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ. ಒಂದು ವ್ಯವಸ್ಥೆಯ ವಿರುದ್ಧ” ಎಂದು ಹೇಳಿದರು.

ಭ್ರಷ್ಟಾಚಾರ ವಿಚಾರದಲ್ಲಿ ಪಕ್ಷದ ನಿಲುವನ್ನು ಹೇಳಿಕೊಂಡ ಅವರು, “ನಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿರುವವರನ್ನು ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಉಳಿಸಿಕೊಳ್ಳುವುದಿಲ್ಲ” ಎಂಬ ಮಾತನ್ನೇ ಪುನರಾವರ್ತಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...