Homeಮುಖಪುಟಇಸ್ರೇಲ್-ಹಮಾಸ್ ಸಂಘರ್ಷ: ಬಿಳಿ ರಂಜಕದ ಬಳಕೆಯ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

ಇಸ್ರೇಲ್-ಹಮಾಸ್ ಸಂಘರ್ಷ: ಬಿಳಿ ರಂಜಕದ ಬಳಕೆಯ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

- Advertisement -
- Advertisement -

ಕಳೆದ ಅಕ್ಟೋಬರ್‌ನಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಗುಂಪಿನ ಮೇಲೆ ನಡೆಸಿದ ದಾಳಿಯಲ್ಲಿ ಇಸ್ರೇಲ್‌ ಸೇನೆ ನಿಷೇಧಿತ ಬಿಳಿ ರಂಜಕವನ್ನು ಬಳಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಕನಿಷ್ಠ ಒಂಬತ್ತು ನಾಗರಿಕರು ಗಾಯಗೊಂಡಿದ್ದರು.

ಯುದ್ಧದ ವೇಳೆ ಬಿಳಿ ರಂಜಕ ಬಳಕೆಯ ಕುರಿತು ಯುಎಸ್‌ನ ಜೊ ಬೈಡೆನ್‌ ಆಡಳಿತ ಕಳವಳ ವ್ಯಕ್ತಪಡಿಸಿದೆ. ಆದರೆ, ಲೆಬನಾನ್‌ನಲ್ಲಿ ಬಿಳಿ ರಂಜಕದ ಕಾನೂನುಬಾಹಿರ ಬಳಕೆಯ ಆರೋಪವನ್ನು ಇಸ್ರೇಲ್ ತಿರಸ್ಕರಿಸಿದೆ.

ಹಾಗಾದರೆ, ಏನಿದು ಬಿಳಿ ರಂಜಕ, ಇದರ ಬಳಕೆಯ ಪರಿಣಾಮಗಳೇನು?, ಅಂತಾರಾಷ್ಟ್ರೀಯ ಮಾನವೀಯ ಕಾನೂನು ಬಿಳಿ ರಂಜಕದ ಬಳಕೆಯ ಕುರಿತು ಏನು ಹೇಳುತ್ತದೆ? ಇದರ ಬಳಕೆಯನ್ನು ಯುದ್ಧ ಅಪರಾಧವೆಂದು ಪರಿಗಣಿಸಬಹುದೇ? ಎಂದು ತಿಳಿಯೋಣ. 

ಏನಿದು ಬಿಳಿ ರಂಜಕ?

ಬಿಳಿ ರಂಜಕವು ರಾಸಾಯನಿಕ ಅಂಶಗಳಿಂದ ಕೂಡಿದ್ದು, ಇದು ಗಾಳಿಯ ಸಂಪರ್ಕಕ್ಕೆ ಬಂದರೆ ಉರಿಯುತ್ತದೆ. ಇದು ಸುಮಾರು 1,500 ಡಿಗ್ರಿ ಫ್ಯಾರನ್‌ಹೀಟ್ (815 ಸೆಲ್ಸಿಯಸ್) ನಲ್ಲಿ ಸುಡುತ್ತದೆ. ಇದು ಮನುಷ್ಯರ ಸಂಪರ್ಕಕ್ಕೆ ಬಂದರೆ ಗಂಭೀರವಾದ ಗಾಯ ಮತ್ತು ಸಾವಿಗೆ ಕಾರಣವಾಗುತ್ತದೆ.

ಬಿಳಿ ರಂಜಕವನ್ನು ಫೆನಿಯನ್ (ಐರಿಶ್ ರಾಷ್ಟ್ರೀಯತಾವಾದಿ) ಅಗ್ನಿಶಾಮಕವಾದಿಗಳು 19 ನೇ ಶತಮಾನದಲ್ಲಿ “ಫೆನಿಯನ್ ಫೈರ್” ಎಂದು ಕರೆಯಲ್ಪಡುವ ಸೂತ್ರೀಕರಣದಲ್ಲಿ ಬಳಸಿದರು. ರಂಜಕವು ಕಾರ್ಬನ್ ಡೈಸಲ್ಫೈಡ್‌ನ ದ್ರಾವಣದಲ್ಲಿರುತ್ತದೆ. ಕಾರ್ಬನ್ ಡೈಸಲ್ಫೈಡ್ ಆವಿಯಾದಾಗ ರಂಜಕವು ಜ್ವಾಲೆಯಾಗಿ ಸಿಡಿಯುತ್ತದೆ.

ಬಿಳಿ ರಂಜಕ ಮತ್ತು ನೇಪಾಮ್‌ನಂತಹ ಬೆಂಕಿ ಉಗುಳುವ ರಾಸಾಯನಿಕಗಳು ಮಾನವ ದೇಹದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಪ್ರಸಕ್ತ ಸಶಸ್ತ್ರ ಸಂಘರ್ಷಗಳಲ್ಲಿ ಅವುಗಳನ್ನು ಬಳಸುವ ಅತ್ಯಂತ ಕ್ರೂರ ಆಯುಧಗಳ ಬಳಕೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಪರಿಗಣಿಸಿದೆ.

ಮಾನವ ಹಕ್ಕುಗಳ ಸಂಶೋಧಕರೊಬ್ಬರು “ದಹನಕಾರಿ ಆಯುಧಗಳು ಜನರನ್ನು ಬೆಂಕಿಯಿಂದ ಸುಡುವ ಆಯುಧಗಳಾಗಿವೆ” ಎಂದಿದ್ದು, ಬಿಳಿ ರಂಜಕದಂತಹ ವಸ್ತುಗಳ ಬಳಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಯಾವಾಗ ಬಿಳಿ ರಂಜಕ ಬಳಸಬಹುದು?

ಯುದ್ದದ ಸಂದರ್ಭಗಳಲ್ಲಿ ನೆಲದ ಮೇಲೆ ಸೈನ್ಯದ ಚಲನೆಯನ್ನು ಮರೆಮಾಚಲು, ಯುದ್ಧಭೂಮಿಯನ್ನು ಬೆಳಗಿಸಲು ಅಥವಾ ಸಂಕೇತ ಸಾಧನವಾಗಿ, ಹೊಗೆ ಪರದೆಯಾಗಿ ಬಿಳಿ ರಂಜಕವನ್ನು ಬಳಸಬಹುದು. ಶತ್ರುಗಳನ್ನು ದಿಕ್ಕು ತಪ್ಪಿಸಲು ಮಾತ್ರ ಇದನ್ನು ಬಳಸಬಹುದು.

ಬೆಂಕಿ ಉಗುಳುವ ಆಯುಧಗಳಾದ ಮಾರ್ಟರ್ ಬಾಂಬ್‌, ರಾಕೆಟ್‌ ಮತ್ತು ಫಿರಂಗಿ ಮದ್ದುಗುಂಡುಗಳಲ್ಲಿ ಆಕ್ರಮಣಕಾರಿಯಾಗಿ ಕೂಡ ಇದನ್ನು ಬಳಸಬಹುದು. ಬಿಳಿ ರಂಜಕವನ್ನು ಒಂದನೇ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಶತ್ರು ಸೈನಿಕರು ಮತ್ತು ನಾಗರಿಕರನ್ನು ಸಮಾನವಾಗಿ ಗುರಿಯಾಗಿಸಿಕೊಂಡು ಅನೇಕರು ಬಳಸಿದ್ದರು.

ವಿಯೆಟ್ನಾಂ ಯುದ್ಧದಲ್ಲಿ, ಇರಾಕ್‌ನಲ್ಲಿ 2004 ರಲ್ಲಿ ಫಲ್ಲುಜಾಹ್ ಯುದ್ಧದ ಸಮಯದಲ್ಲಿ, ಸಿರಿಯಾ ಮತ್ತು ಇರಾಕ್ ಎರಡೂ ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ನೇಪಾಮ್ ಜೊತೆಗೆ ಬಿಳಿ ರಂಜಕವನ್ನು ಯುಎಸ್ ಬಳಸಿತ್ತು. ಉಕ್ರೇನ್ ಮತ್ತು ಸಿರಿಯಾ ಎರಡರಲ್ಲೂ ನಾಗರಿಕರು ಮತ್ತು ಹೋರಾಟಗಾರರ ವಿರುದ್ಧ ವಿವೇಚನೆಯಿಲ್ಲದೆ ಬಿಳಿ ರಂಜಕವನ್ನು ಬಳಸುತ್ತಿರುವ ಆರೋಪವನ್ನು ರಷ್ಯಾ ಹೊಂದಿದೆ.

2008-09 ರಲ್ಲಿ ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಬಿಳಿ ರಂಜಕವನ್ನು ಬಳಸಿದ್ದನ್ನು ಮಾನವ ಹಕ್ಕುಗಳ ಒಕ್ಕೂಟ ವಿರೋಧಿಸಿತ್ತು. ಇದು ಸಂಭಾವ್ಯ ಯುದ್ಧ ಅಪರಾಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿತ್ತು.

ಇದರಿಂದ ಎಚ್ಚೆತ್ತಗೊಂಡ ಇಸ್ರೇಲಿ ರಕ್ಷಣಾ ಪಡೆಗಳು 2013 ರಲ್ಲಿ ಯುದ್ಧಭೂಮಿಯಲ್ಲಿ ಬಿಳಿ ರಂಜಕವನ್ನು ಬಳಸುವುದನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿತ್ತು. ಬದಲಿಗೆ ಅನಿಲ ಆಧಾರಿತ ಹೊಗೆ ಚಿಪ್ಪುಗಳನ್ನು ಬಳುಸುವುದಾಗಿ ಹೇಳಿತ್ತು.

ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

ಬೆಂಕಿಯಿಡುವ ಆಯುಧಗಳು 1980ರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಒಪ್ಪಂದದ ಅಡಿಯಲ್ಲಿ ಬರುತ್ತವೆ. ಈ ಒಪ್ಪಂದವು ನಿರ್ದಿಷ್ಟವಾಗಿ ಅಪಾಯಕಾರಿ ಎಂದು ಪರಿಗಣಿಸಲಾದ ಕೆಲವು ಶಸ್ತ್ರಾಸ್ತ್ರಗಳ ಬಳಕೆಯನ್ನು ಸೀಮಿತಗೊಳಿಸುವ ಮೂಲಕ ನಾಗರಿಕರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಅಂತಾರಾಷ್ಟ್ರೀಯ ಕಾನೂನು ಮತ್ತು ಸಶಸ್ತ್ರ ಸಂಘರ್ಷದ ಕಾನೂನಿನಡಿಯಲ್ಲಿ ಬಿಳಿ ರಂಜಕವನ್ನು ರಕ್ಷಣಾತ್ಮಕವಾಗಿ ಹೊಗೆ ಪರದೆಯಂತೆ ಅಥವಾ ಯುದ್ಧಭೂಮಿಯ ಪ್ರಕಾಶವಾಗಿ ಬಳಸುವುದು ಅಪರಾಧವಲ್ಲ.

ನಾಗರಿಕರ ವಿರುದ್ಧ ನೇರವಾಗಿ ಬೆಂಕಿಯಿಡುವ ಆಯುಧಗಳ ಉದ್ದೇಶಿತ ಬಳಕೆ ಕಾನೂನುಬಾಹಿರವಾಗಿದೆ. ಇದನ್ನು ಯುದ್ಧ ಅಪರಾಧವೆಂದು ಪರಿಗಣಿಸಬಹುದು. ನಾಗರಿಕ ಪ್ರದೇಶದಲ್ಲಿರುವ ಮಿಲಿಟರಿಯನ್ನು ಗುರಿಯಾಗಿಸಿ ಬೆಂಕಿಯಿಡುವ ಆಯುಧಗಳ (ವಿಮಾನದಿಂದ ಬೀಳಿಸಿದ ಬಿಳಿ ರಂಜಕ) ಬಳಕೆಯನ್ನು ಸಹ ನಿಷೇಧಿಸಲಾಗಿದೆ.

ಹಾಗಾಗಿ, ಬಿಳಿ ರಂಜಕದ ಬಳಕೆ ಮಾಡದೆ, ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಹಮಾಸ್ ಮತ್ತು ಹಿಜ್ಬುಲ್ಲಾವನ್ನು ಇಸ್ರೇಲ್ ಗುರಿಯಾಗಿಸಬಹುದು.

ಇಸ್ರೇಲ್ ಮೇಲಿನ ಗಂಭೀರ ಅರೋಪವೇನು?

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್, ಅಕ್ಟೋಬರ್‌ನಲ್ಲಿ ಲೆಬನಾನಿನ ಪಟ್ಟಣವಾದ ಧೀರಾ ಮೇಲೆ ಇಸ್ರೇಲ್ ಬಿಳಿ ರಂಜಕವನ್ನು ಪ್ರಯೋಗಿಸಿದೆ ಎಂದು ಸೂಚಿಸುವ ಪುರಾವೆಗಳನ್ನು ಸಂಗ್ರಹಿಸಿದೆ. ಧೀರಾ ಪಟ್ಟಣದ ನಾಗರಿಕರ ಮೇಲೆ ಇಸ್ರೇಲ್ ಕಾನೂನು ಬಾಹಿರವಾಗಿ ಬಿಳಿರಂಜಕ ಬಳಸಿದೆ ಎಂದು ವಾಷಿಂಗ್ಟನ್ ಪೋಸ್ಟ್‌ಗೆ ಆಮ್ನೆಸ್ಟಿ ತಿಳಿಸಿದೆ.

ಆಮ್ನೆಸ್ಟಿ ಆರೋಪದಂತೆ ಇಸ್ರೇಲ್ ಲೆಬನಾನ್ ಪಟ್ಟಣದ ಮೇಲೆ ಬಿಳಿ ರಂಜಕ ಬಳಸಿದೆಯಾ? ಬಳಿಸಿದ್ದರೆ ಅಂತಾರಾಷ್ಟ್ರೀಯ ಕಾನೂನನ್ನು ಅನುಸಿರಿಸಿದೆಯಾ? ಎಂಬುವುದು ನಿಖರವಾಗಿ ತಿಳಿಯಲು ಸೂಕ್ತ ತನಿಖೆಯ ಅಗತ್ಯವಿದೆ.

ಇಸ್ರೇಲ್ ಒಂದು ವೇಳೆ ನಾಗರಿಕರ ಮೇಲೆ ಬಿಳಿ ರಂಜಕ ಪ್ರಯೋಗಿಸಿದ್ದರೆ, ಅದು 1949 ರ ಜಿನೀವಾ ಒಪ್ಪಂದ ಅಡಿಯಲ್ಲಿ ಯುದ್ದಪರಾಧವಾಗಿದೆ. ಈ ಕುರಿತು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತನಿಖೆ ನಡೆಸಬೇಕಿದೆ. ಆದರೆ, ಇದು ಅಸಾಧ್ಯದ ಮಾತಾಗಿದೆ. ಏಕೆಂದರೆ. ಇಸ್ರೇಲ್ ಅಂತಾರಾಷ್ಟ್ರೀಯ ಕ್ರಿಮಿನಿನಲ್ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ. ಹಮಾಸ್ ಮತ್ತು ಹಿಜ್ಬುಲ್ಲಾ ರಾಜ್ಯೇತರ ಸಂಘಟನೆಗಳಾಗಿವೆ.

ಇದನ್ನೂ ಓದಿ: ಗಾಝಾದಲ್ಲಿ ಕದನ ವಿರಾಮ: ವಿಶ್ವಸಂಸ್ಥೆ ನಿರ್ಣಯ ಬೆಂಬಲಿಸಿದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...