Homeಕರ್ನಾಟಕಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ!

ಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ!

- Advertisement -
- Advertisement -

ಕರ್ನಾಟಕದ ಹಳ್ಳಿಗಳ ಗೋಡೆಗಳ ಮೇಲೆ ಬಿಜೆಪಿಯೇ ಭರವಸೆ ಎಂಬ ವರ್ಣರಂಜಿತ ಬೋರ್ಡ್‌ಗಳು ರಾರಾಜಿಸುತ್ತಿವೆಯಲ್ಲಾ. ಎಂದಿನಂತೆ ಹಳ್ಳಿಗರು ನಿಂತು ನೋಡಿ ಓದಲು ಯತ್ನಿಸುತ್ತ ಭರವಸೆ ಎಂದರೆ ಏನು, ಅದರಲ್ಲೂ ಬಿಜೆಪಿ ಭರವಸೆ ಯಾವುದು ಎಂಬ ಚರ್ಚೆ ಆರಂಭಿಸಿದ್ದಾರೆ. ಏಕೆಂದರೆ ಭರವಸೆ ಎಂಬುದು ಕೇವಲ ಭರವಸೆ ಎಂಬಂತಾಗಿದೆ, ಅದು ನಿಜವಾದ ಮಾತಲ್ಲ. ಅದು ಸದ್ಯದಲ್ಲಿ ತಮ್ಮ ತೆವಲು ತೀರಿಸಿಕೊಳ್ಳಲು ಕೊಡುವ ಹೇಳಿಕೆ ಎಂಬುದು ಹಳ್ಳಿಗರಿಗೆ ಎಂದೋ ಅರ್ಥವಾದ ಸುಳ್ಳು. ಎಲ್ಲಕ್ಕಿಂತ ಮುಖ್ಯವಾಗಿ ಈ ಬಿಜೆಪಿ ಎಂಬುದು ಭರವಸೆ ಪಾರ್ಟಿ. ಭರವಸೆ ಎಂಬುದು ಸುಲಭವಾದ ಸುಳ್ಳು. ಏನು ಭರವಸೆ, ಯಾವ ಭರವಸೆ, ಅದು ಈಡೇರಲು ಹಾಕಿಕೊಂಡ ಕಾರ್ಯತಂತ್ರವೇನು ಎಂಬ ಯಾವ ವಿವರವೂ ಇಲ್ಲದ ಪುರೋಹಿತ ಮಂತ್ರವಿದ್ದಂತೆ ಅದು ಎಂಬುದು ಹಳ್ಳಿಗರಿಗೆ ಈಗಾಗಲೇ ಮನದಟ್ಟಾದ ಸಂಗತಿಯಾದ್ದರಿಂದ ಮೋದಿ ಪಾರ್ಟಿ ಹಳ್ಳಿಗಳ ಗೋಡೆಯ ಮೇಲೆ ಬರೆದಿರುವ ಭರವಸೆಯ ಬೋರ್ಡನ್ನು ’ಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ’ ಎಂಬ ತೀರ್ಮಾನಕ್ಕೆ ಹಳ್ಳಿಗರು ಬಂದಾಗಿದೆಯಂತಲ್ಲಾ. ಹಳ್ಳಿ ರೈತ ಕೊಡುವ ಒಂದು ಉದಾಹರಣೆ ನೋಡಿದರೆ ಸಾಕು; ಬಸವರಾಜ ಬೊಮ್ಮಾಯಿ ಮಂಡಿಸಿದ ಅದ್ಭುತ ಬಜೆಟ್ಟಿನಲ್ಲಿ ರೈತರಿಗೆ ಐದು ಲಕ್ಷ ಬಡ್ಡಿರಹಿತ ಸಾಲ ಎಂಬ ಭರವಸೆ ಕೊಡಲಾಗಿದೆ. ಐದು ಲಕ್ಷ ಪಡೆಯಬೇಕಾದರೆ ಆತನ ಬಳಿಯಿರುವ ಭೂಮಿ ಇಡಬೇಕು, ಅದರ ಮೇಲೆ ಸುರಿಯುವ ಐದು ಲಕ್ಷ; ಇವೆಲ್ಲವನ್ನು ತರ್ಕಿಸಿದರೆ ಸದರಿ ಸಾಲ ಸುಳ್ಳು ಭರವಸೆಯಾಗಿ ಉಳಿಯಲಿದೆ. ಕರ್ನಾಟಕದ ಯಾವ ರೈತನೂ ಈ ಐದು ಲಕ್ಷದ ಸಹವಾಸಕ್ಕೆ ಹೋಗುವುದಿಲ್ಲವಂತಲ್ಲಾ, ಥೂತ್ತೇರಿ.
*****

ಮಾಧುಸ್ವಾಮಿ ಗೊಣಗಾಟದ ಪ್ರಕಾರ ಈ ಸರಕಾರದ ಅವಧಿ ಮುಗಿಯುವವರೆಗೆ ಹೇಗೋ ದ್ರವಾಹಾರ ನೀಡುತ್ತ ಮುಂದೂಡಿಕೊಂಡು ಹೋಗುತ್ತಾರಂತಲ್ಲಾ. ಎಂಬ ಗೊಣಗಾಟಕ್ಕೆ ಪೂರಕವಾಗಿ ಬೊಮ್ಮಾಯಿಯ ಬಜೆಟ್ಟು ಮಂಡನೆಯಾಗಿದೆಯಲ್ಲಾ. ಇದರಲ್ಲಿ ಪ್ರಧಾನವಾಗಿ ಕಂಡುಬರುವ ಅಂಶ ಯಾವುದೆಂದರೆ ಬೊಮ್ಮಾಯಿ ಬದುಕಿನ ಆದರ್ಶ ಪುರುಷನಾದ ಎಡೂರಪ್ಪ ಮಠಗಳಿಗೆ ಕೊಟ್ಟ ದಾನ-ಅನುದಾನವನ್ನು ಸಾವಿರ ಕೋಟಿ ಏರಿಸಿರುವುದು; ಸಾವಿರಾರು ಮಠಗಳಿರುವಾಗ ಸಾವಿರ ಕೋಟಿ ಅನುದಾನ ಹೆಚ್ಚಿನದೇನಲ್ಲ. ಮಠದ ಜೋಳಿಗೆಗಳು ಎಷ್ಟು ಕೊಟ್ಟರೂ ಇನ್ನೂ ಅಗಲವಾಗಿ ಬಾಯಿ ತೆರೆಯುವಂತಿವೆ. ವಿಷಯ ಅದಲ್ಲ ಪ್ರಜಾಪ್ರಭುತ್ವದ ಸರಕಾರವೊಂದು ಸಾಮಾನ್ಯವಾಗಿ ತಮಗೆ ಸಂಬಂಧಪಡದ ಮಠಗಳಿಗೆ ಸಾಮಾನ್ಯನ ಬೆವರಿನ ಹಣವನ್ನು ಕೋಟಿಗಟ್ಟಲೆ ಕೊಡುವುದು ಎಷ್ಟು ಸರಿ ಎಂಬುದು. ಬಜೆಟ್ ಮಂಡನೆಯ ಸಮಯದಲ್ಲಿ ಮಠಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳ ಬೇಕಾಗುತ್ತದೆ ಅಂದರೆ ನಮ್ಮ ನಡುವಿನ ಮಠಗಳು ಮಠಗಳಾಗಿ ಉಳಿದಿಲ್ಲ; ಅವು ತಮ್ಮ ಆಚಾರ ವಿಚಾರ ವರ್ತನೆಯಿಂದಲೇ ರಾಜಕೀಯದ ಪಾರ್ಟಿಗಳಿಗೆ ಓಟು ಕೇಳುವ ಬೂತುಗಳಂತಾಗಿ ಕುಳಿತಿವೆ. ಇದನ್ನು ಗ್ರಹಿಸಿದ ಬೊಮ್ಮಾಯಿ ಯಾರದೊ ದುಡ್ಡನ್ನು ಎಲ್ಲಮ್ಮನ ಜಾತ್ರೆಯಲ್ಲಿ ಎರಚಿದಂತೆ ಮಠಗಳಿಗೆ ಸುರಿದಿದ್ದಾರೆ. ಈ ಹಣ ಮಠ ತಲುಪುವ ವೇಳೆಗೆ ಹಲವು ಮಠಾಧೀಶರು ಹೇಗೆ ಖರ್ಚು ಮಾಡಬೇಕೆಂಬ ನೀಲನಕ್ಷೆ ತಯಾರಿಸುತ್ತಿದ್ದಾರಂತಲ್ಲಾ. ಅದರಲ್ಲಿ ಹೊಸ ಕಾರು, ಶಯನಾಗೃಹದ ನವೀಕರಣ ಮತ್ತು ಫಾರಿನ್ ಟೂರ್ ಕೂಡ ಸೇರಲಿವೆಯಂತಲ್ಲಾ, ಥೂತ್ತೇರಿ.
*****

ಬಿಜೆಪಿ ಪಾರ್ಟಿಯ ಮೆಂಟಲ್‌ಕೇಸ್ ವಿಭಾಗದಿಂದ ತಪ್ಪಿಸಿಕೊಂಡಂತೆ ಕಾಣುವ ಮುತಾಲಿಕ್ ಎಂಬಾತ ಹಿಂದಿಗಿಂತಲೂ ಮುಸ್ಲಿಮರನ್ನು ಟೀಕಿಸಲು ನಾಲಿಗೆಯನ್ನು ಹರಿತ ಮಾಡಿಕೊಳ್ಳುತ್ತಿದ್ದಾರಲ್ಲಾ. ಈತನ ಮುಸ್ಲಿಂ ಹೆಣ್ಣುಮಕ್ಕಳ ಬಗೆಗಿನ ದ್ವೇಷದ ಮಾತಿಗೆ ಆ ಕಡೆಯಿಂದ ಯಾವ ಪ್ರತ್ಯುತ್ತರವೂ ಬಂದಿಲ್ಲ. ಇದನ್ನ ಅವಮಾನವೆಂದು ಪರಿಗಣಿಸಿದ ಮುತಾಲಿಕ್ ತನ್ನ ಮತೀಯ ಕಿಚ್ಚಿನ ಹೇಳಿಕೆಗಳನ್ನ ಮುಂದುವರಿಸಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ಸೇರಿ ಶಾಸಕನಾಗಿ ಸದನದಲ್ಲಿ ತನ್ನ ಅಮೋಘವಾದ ಭಾಷಣ ಕಟ್ಟುವ ಕನಸು ಕಂಡಿದ್ದ ಮುತಾಲಿಕರನ್ನು ಹಿಂದೊಮ್ಮೆ ಬಿಜೆಪಿ ಪಾರ್ಟಿಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಅಲ್ಲಾಗಲೇ ಪ್ರವರ್ಧಮಾನಕ್ಕೆ ಬಂದಿದ್ದ ಸಿ.ಟಿ ರವಿ, ರೇಣುಕಾಚಾರಿ, ಅಶ್ವತ್ಥನಾರಾಯಣ, ಯತ್ನಾಳ್ ಇಂತಹ ನಾಯಕರ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆಂದು ಬಿಜೆಪಿ ತೀರ್ಮಾನ ತೆಗೆದುಕೊಂಡು ಸೂರ್ಯಾಸ್ತಮಾನಕ್ಕೂ ಮುನ್ನ ಮುತಾಲಿಕರನ್ನು ಪಾರ್ಟಿಯಿಂದ ತೆಗೆದು ಬಿಸಾಡಲಾಯ್ತು. ಇದು ಬಿಜೆಪಿಯ ಒಂದು ದೊಡ್ಡ ದಾಖಲೆಯಾಗಿದೆ. ಏಕೆಂದರೆ ಪಾರ್ಟಿಗೆ ಸೇರಿಸಿಕೊಂಡ ನಾಲ್ಕುಗಂಟೆ ಅವಧಿಯಲ್ಲೇ ಯಾರನ್ನಾದರೂ ಮೂಲೆಗೆಸೆದದ್ದು ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಆದರೇನು? ಮುತಾಲಿಕರ ಮನಸ್ಸು ಅಘಾತಗೊಂಡ ಕಾರಣವಾಗಿ, ಹೆಚ್ಚು ಮುಸ್ಲಿಮರನ್ನ ಬೈದಷ್ಟೂ ತನ್ನ ಬದುಕಿನ ಏಕೈಕ ಧ್ಯೇಯವಾದ ಶಾಸಕತ್ವ ದಕ್ಕುವುದೆಂದು ಭಾವಿಸಿರುವ ಆತ ಮತಿಗೆಟ್ಟಂತೆ ಮಾತನಾಡುತ್ತಿರುವುದು ಸದ್ಯದ ಮನರಂಜನೆಯಾಗಿದೆಯಂತಲ್ಲಾ, ಥೂತ್ತೇರಿ.
*****

ಇದನ್ನೂ ಓದಿ: ಹಠಾತ್ ಜನಸಂಖ್ಯೆ ಏರಲು ಕಾರಣವೇನು? – ಯಾಹೂ

ಇತ್ತ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳು ಶಾನೆ ತಮಾಶೆಯಿಂದ ಕೂಡಿವೆಯಂತಲ್ಲಾ. ಈ ಮಹೇಶ ಜೋಶಿ ಎಂಬ ಸಾಹಿತ್ಯ ಪರಿಷತ್ ವಿದೂಶಕನ ವಿಷಯ ಬಂದಾಗಲೆಲ್ಲಾ ಪತ್ರಕರ್ತರು ನಾಡೋಜ ಮಹೇಶ ಜೋಷಿ ಎಂದು ಬರೆಯತೊಡಗಿವೆ. ಇದು ಈತನ ಬೇಡಿಕೆಯೋ ಅಥವ ಮಾರಿಕೊಂಡ ಪತ್ರಕರ್ತರ ಚೇಷ್ಟೆಯೋ ಎಂಬುದು ನಿಗೂಢವಾಗಿದೆ. ಇದು ಹಾಳುಬಿದ್ದು ಹೋಗಲಿ, ಸಾಹಿತ್ಯ ಪರಿಷತ್‌ನ ದತ್ತಿನಿಧಿ ಪ್ರಶಸ್ತಿಗಾಗಿ ಜೋಶಿ ಮುಂದಾಳತ್ವದ ತಂಡ 53 ಕೃತಿಗಳನ್ನ ಆರಿಸಿದೆ. ಈ ಅದ್ಭುತ ಕೃತಿಗಳ ಪ್ರಶಸ್ತಿ 250ರೂಗಳಿಂದ ಹಿಡಿದು ಹತ್ತು ಸಾವಿರದವರೆಗೂ ಇದೆಯಂತೆ. 250ರೂ ಪಡೆಯಲು ಯಾವ ಅಳುಕೂ ಇಲ್ಲವಾಗಿ, ಸದರಿ ಕೃತಿಕಾರರು 250ರೂ ತೆಗೆದುಕೊಂಡು ಅನತಿ ದೂರದಲ್ಲಿರುವ ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆ ತಿಂದು ಮನೆಗೆ ಬರುವ ತೀರ್ಮಾನ ತೆಗೆದುಕೊಂಡಿದ್ದಲ್ಲದೆ ಈ ಮಹೇಶ್ ಜೋಶಿ ಸಾಹಿತ್ಯಾಭಿರುಚಿಗೆ ಅಚ್ಚರಿಕೊಂಡಿದ್ದಾರಂತೆ. ಸಾಹಿತ್ಯಕ್ಕೂ ಇವರಿಗೂ ದೂರದ ಸಂಬಂಧ ಎಂಬುದು ಈತ ಸಾಹಿತ್ಯ ಪರಿಷತ್ ಪರಿಚಾರಕ ಹುದ್ದೆಗೆ ಮಂತ್ರಿ ಮಹೋದಯರ ಸವಲತ್ತು ಬೇಕೆಂದು ರಚ್ಚೆ ಹಿಡಿದಾಗಲೇ ತಿಳಿದಿತ್ತು. ಈಗ ಈತ ದತ್ತಿನಿಧಿ ಪ್ರಶಸ್ತಿಯೊಂದಕ್ಕೆ ಆಯ್ಕೆ ಮಾಡಿದ ಕೃತಿಗಳಲ್ಲಿ ಇಡ್ಲಿ ಸಾಂಬರ್ ಮತ್ತು ವಡೆ ಪ್ರಸ್ತಾಪ ಐದು ಪುಟಕೋಮ್ಮೆ ದಾಖಲಾಗಿದೆ; ಈ ಕೃತಿಯನ್ನ ಜೋಶಿ ತಂಡ ಜೊಲ್ಲು ಸುರಿಸುತ್ತಲೇ ಆಯ್ಕೆ ಮಾಡಿದೆಯಂತಲ್ಲಾ. ಅಂತಹ ವಿವರಗಳನ್ನುಳ್ಳ ಪುಸ್ತಕವನ್ನ ಪ್ರಶಸ್ತಿಗೆ ಆಯ್ಕೆ ಮಾಡುವುದರಲ್ಲಿ ಯಾವ ಅಚ್ಚರಿಯೂ ಇಲ್ಲವಂತಲ್ಲಾ, ಥೂತ್ತೇರಿ.

ಯಾಹೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...