Homeಮುಖಪುಟಆರಂಭದಲ್ಲಿಯೇ ಇಂಜಿನ್ ಟ್ರಬಲ್, ಮತ್ತೆ ಮಧುಚಂದ್ರ! : ನಿಖಿಲ್ ಕೋಲ್ಪೆಯವರ ಜನವಾಹಿನಿ ಪತ್ರಿಕೆಯ ಅನುಭವಗಳು

ಆರಂಭದಲ್ಲಿಯೇ ಇಂಜಿನ್ ಟ್ರಬಲ್, ಮತ್ತೆ ಮಧುಚಂದ್ರ! : ನಿಖಿಲ್ ಕೋಲ್ಪೆಯವರ ಜನವಾಹಿನಿ ಪತ್ರಿಕೆಯ ಅನುಭವಗಳು

- Advertisement -
- Advertisement -

ಜನವಾಹಿನಿಯ ನೆನಪುಗಳು-9
ನಿಖಿಲ್ ಕೋಲ್ಪೆ

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಅದೊಂದು ದಿನ ಪ್ರಾಯೋಗಿಕವಾಗಿ ಮತ್ತೆ ಒಂದು ಸಂಚಿಕೆಯನ್ನು ತರಬೇಕು. ಇದು ವಾಸ್ತವವಾಗಿ ಸುದ್ದಿಮೂಲದಿಂದ ಆರಂಭಿಸಿ, ಪತ್ರಿಕೆಯ ಡೆಸ್ಕನ್ನು ತಲುಪಿ, ಅಲ್ಲಿ ರೂಪುಗೊಂಡು, ಅದೂ ಇದೂ ಆಗಿ, ಎಲ್ಲವೂ ಸರಿಯಾಗಿ ಮುದ್ರಣಗೊಂಡು, ಅಲ್ಲಿಂದ ಬೇರೆ ಬೇರೆ ವಾಹಗಳಲ್ಲಿ ಬೇರೆ ಬೇರೆ ಕಡೆ ತಲುಪಿ ಅಲ್ಲಿಂದ ವಾಹನ ಬದಲಾಯಿಸಿ ಏಜೆಂಟರು, ಸಬ್ ಏಜೆಂಟರು, ಪೇಪರ್ ಮಾರುವ ಹುಡುಗರನ್ನು ತಲುಪಿ, ಕೊನೆಗೆ ಓದುಗರ ಮನೆ ಮತ್ತು ತಲೆಯನ್ನು ತಲುಪಬೇಕು! ವಾರಪತ್ರಿಕೆಗಾಗಲೀ, ಚಿಕ್ಕ ಮಟ್ಟದ ದಿನಪತ್ರಿಕೆಯನ್ನಾಗಲೀ ಈ ರೀತಿಯಲ್ಲಿ ನಿಖರವಾಗಿ ಯೋಜಿಸಿ ತಲುಪಿಸುವುದು ಅನುಭವಿಗಳಿಗೆ ಮಾತ್ರ ಸುಲಭ. ಆದರೆ ದೊಡ್ಡ ಮಟ್ಟದ ಮತ್ತು ಹಿಂದೆಯೂ ಬೇರ್ಯಾರೂ ಮಾಡದಂತಹ ಸಂಖ್ಯೆಯಲ್ಲಿ ಆವೃತ್ತಿ ತೆಗೆಯುವುದೆಂದರೆ?!

ಉದಾಹರಣೆಗೆ ಕಾರವಾರ ಆವೃತ್ತಿ ರಾತ್ರಿ 7.30ಕ್ಕೆ ಸಂಪಾದಕೀಯ ವಿಭಾಗದಿಂದ ಹೊರಬೀಳಬೇಕು ಎಂಬುದು ಮೊದಲೇ ನಿಖರವಾಗಿ ಯೋಜಿಸಲಾಗುತ್ತದೆ. ಆಗ ಮಾತ್ರ ಅದು ಬೆಳಗ್ಗೆ ಅಲ್ಲಿಗೆ ತಲುಪಲು ಸಾಧ್ಯ. ನಂತರ ಬೆನ್ನಿಗೆ ಹಿಂದಿಗೊಂದರಂತೆ ಆವೃತ್ತಿಗಳು ಹೊರಬೀಳಬೇಕು. ಈ ಕಾರವಾರ ಆವೃತ್ತಿ 8.30ಕ್ಕೆ ಪ್ರಿಂಟ್ ಆಗಿ, ಪ್ಯಾಕ್ ಹಾಕಿ ಎಲ್ಲಾ ಏಜೆಂಟರುಗಳ ಹೆಸರು, ಡ್ರಾಪಿಂಗ್ ಪಾಯಿಂಟ್ ಸಹಿತ ವಾಹನ ಏರಬೇಕು. ಒಂದು ಚೂರು ಎಡವಟ್ಟಾದರೆ ತಳಹಂತದ ತನಕ ಪತ್ರಿಕೆ ತಲುಪುವುದಿಲ್ಲ. ನಂತರ ಎಲ್ಲಾ ಆವೃತ್ತಿಗಳದ್ದೂ ಇದೇ ಕತೆ. ಇದೊಂದು ಮಿಲಿಟರಿ ಕಾರ್ಯಾಚರಣೆಯ ರೀತಿಯೇ! ಲಾಜಿಸ್ಟಿಕ್ಸ್ ಇಲ್ಲದಿದ್ದರೆ ಸೂಕ್ತ ಬೆಂಬಲ, ಯೋಜನೆ ಇಲ್ಲದೆ ಸೈನಿಕರು ಅನಾವಶ್ಯಕವಾಗಿ ಸಾಯುವುದು, ಮಿಲಿಟರಿ ಮೆಡಲ್ ಪಡೆದ ಮಹಾ ಸೇನಾನಿಗಳೆನಿಸುವ ಡ್ಯುಪ್ಲಿಕೇಟ್‌ಗಳಿಂದ ಅವಗಣನೆ, ವಜಾ, ಸಂಸ್ಥಾದ್ರೋಹಿ ಪಟ್ಟ, ಇತ್ಯಾದಿ ಹೊರಬೇಕಾದ್ದು ಸಾಮಾನ್ಯ. ನಾವು ಶಸ್ತ್ರರಹಿತ ಸಾಮಾನ್ಯ ಸೈನಿಕರು ಅಂತ ನಮಗೆ ಆಗಲೇ ಗೊತ್ತಿತ್ತು! ಅದಕ್ಕೇ ಕಳೆದ ಸಂಚಿಕೆಯಲ್ಲಿ ‘ಶಸ್ತ್ರರಹಿತ ಜನವಾಹಿನಿ ಸೈನಿಕ’ರೆಂಬ ಶೀರ್ಷಿಕೆ ಕೊಟ್ಟಿರುವುದು.

ಮುಂದೆ ಹೀಗೆಯೇ ಆಯಿತು. ಎಲ್ಲವೂ ಎಡವಟ್ಟು. ಇಂತಹ ಹುತಾತ್ಮ ಸೈನಿಕರಲ್ಲಿ ನಾನೂ ಒಬ್ಬ. ಲಾಭ ಪಡೆದವರು ಕೆಲವರು. ಇಂದು ಹಲವರು ಮನೆ ಮಾಡಿಕೊಂಡಿದ್ದಾರೆ. ಸಾಧಾರಣ ಮಟ್ಟದ ರಿಯಲ್ ಎಸ್ಟೇಟ್ ಕುಳ ಇಂದು ಬಹುಕೋಟ್ಯಾಧಿಪತಿಯಾಗಲು ಹೇಗೆ ಸಾಧ್ಯ? ಟ್ರಂಪ್ ಜೊತೆ ಚಹಾ ಕುಡಿದೆನೆಂದು ಬೂಸಿಬಿಡಲು, ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಹೇಗೆ ಸಾಧ್ಯ? ಸೈನಿಕರ ಹೆಸರಲ್ಲಿ ವ್ಯಭಿಚಾರ ಮಾಡುವ ಹಣಬಲ, ಧೂರ್ತತೆ ಇಲ್ಲದಿದ್ದಲ್ಲಿ? ಇಂತಹ ಮಾನ ಮಾರಿಕೊಂಡು ಬಂದವರು ಇಡೀ ಸಮುದಾಯ, ಸಮಾಜ, ರಾಜಕೀಯವನ್ನು ನಿಯಂತ್ರಿಸಲು ಹವಣಿಸುತ್ತಿರುವುದು ಹೇಗೆ ಸಾಧ್ಯ? ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಮಾಡುತ್ತಿದ್ದವರು- ಗಟ್ಟಿಯಾಗಿ ಬೆಳೆದು ನಿಂತಿದ್ದ ಕಬ್ಬಿಣದಂತಹ ಜನವಾಹಿನಿಯನ್ನು ಒಡೆದು ತಮ್ಮ ಉಕ್ಕಿನ ಕೋಟೆ ಕಟ್ಟಲು ಸಾಧ್ಯವಾದದ್ದು ಹೇಗೆ?

ಇವೆಲ್ಲ ನಮಗೆ ಗೊತ್ತಿಲ್ಲದೆ ಇರಲಿಲ್ಲ! ಆದರೆ ಆರಂಭದಲ್ಲಿ ನಮಗೆ ಸೈನಿಕ ನಿಷ್ಠೆ ಇತ್ತೇ ಹೊರತು ಒಳಸಂಚುಗಳು ಮುಂದೆ ನಡೆಯುವುದರ ಸ್ಪಷ್ಟ ಸುಳಿವಿರಲಿಲ್ಲ. ಮುಂದೆ ಇಂತಹ ಸಂಚುಕೋರರೇ ‘ಜನವಾಹಿನಿ’ಯೆಂಬ ಜನಸಾಮಾನ್ಯರ ದನದ ಹಾಲು ಕರೆದೂ ಕರೆದು ಕೊಂದೇ ಬಿಟ್ಟರು! ಅವರ ಕತೆಗಳು ಮುಂದೆ ಬರಲಿವೆ.

ಆ ನಿರ್ದಿಷ್ಟ ದಿನ ಒಂದು ಮಿಲಿಟರಿ ಕಾರ್ಯಾಚರಣೆಯಂತೆಯೇ ಇತ್ತು. ಎಲ್ಲರೂ ಸನ್ನದ್ದ. ಅಸ್ತ್ರಗಳೂ ಸಿದ್ಧವಾಗಿವೆ. ನಾವು ಸೇನಾನಿಗಳೂ! ಹೋರಾಟ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಮತ್ತು ಬದಲಾವಣೆಯ ಕಡೆಗೆ. ನಾನೀಗ ಎಲ್ಲರಂತೆ ಯುದ್ಧದ ಭಾಷೆ ಬಳಸುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ. ಆದರೂ ಬಳಸುತ್ತಿರುವುದು ಯಾಕೆಂದರೆ ಇಂದು ಹೆಚ್ಚಿನ ಪತ್ರಿಕೆಗಳ ಕ್ರೀಡಾ ಪುಟಗಳಲ್ಲಿ ಆಟವೂ ಯುದ್ಧವಾಗಿ, ಒಂದು ಸ್ಪರ್ಧೆ ಸೇಡಾಗಿ ಬದಲಾಗಿರುವ ಒಂದು ದುರದೃಷ್ಟಕರ ಸನ್ನಿವೇಶದಲ್ಲಿ ಇದನ್ನು ಹೀಗೆಯೇ ಬರೆಯಬೇಕಾಯಿತು. ನಾವೊಂದು ವ್ಯವಸ್ಥೆಗೆ ಪ್ರತಿ ವ್ಯವಸ್ಥೆ ರೂಪಿಸಲು ಹೊರಟಿದ್ದರೂ, ಈ ‘ಸೇಡು’, ‘ದ್ವೇಷ’, ‘ಟಾಂಗ್’, ‘ಧಮಕಿ’ ಇತ್ಯಾದಿ ಪದಬಳಕೆಗಳಾಗಲೀ, ಉದ್ದೇಶಗಳಾಗಲೀ ನಮ್ಮಲ್ಲಿರಲಿಲ್ಲ.

ಏನೇ ಇದ್ದರೂ ಪತ್ರಿಕೆಯನ್ನು ಹೊರತರುವುದೆಂದರೆ ಒಂದು ವ್ಯವಸ್ಥಿತ ಕಾರ್ಯಾಚರಣೆಯೇ. ಒಂದು ತಪ್ಪಿದರೆ ಇನ್ನೊಂದು ತಪ್ಪಿ, ಎಂತಹ ಮಹಾ ಸೂಕ್ಷ್ಮ ಯೋಜನೆಯೂ ಕುಸಿದು ಬೀಳುತ್ತದೆ. ಮೊದಲ ದಿನ ನಮ್ಮ ಯೋಜನೆ ದಯನೀಯವಾಗಿ ಸೋತಿತು. ಆದರೂ ಸಮಯ ಮೀರಿ ಹೋದರೂ ಗುರಿಯನ್ನು ಮುಟ್ಟಿದ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಿದೆವು. ಇದು ನಮ್ಮಲ್ಲಿ ಮಹಾ ವಿಶ್ವಾಸವನ್ನು ಮೂಡಿಸಿತು. ಆದದ್ದೇನೆಂಬುದನ್ನು ಮುಂದೆ ಓದಿ.

ಒಂದು ಬೆಳಿಗ್ಗೆ ಎಲ್ಲರೂ ಸಿದ್ಧವಾಗಿದ್ದು ಬೇಗನೇ ಬಂದಿದ್ದರು. ಪತ್ರಿಕೆಗಳಲ್ಲಿ ಶಿಫ್ಟ್ ಇರುತ್ತದೆ. ಒಳಗಿನ ಪುಟಗಳನ್ನು ತಯಾರಿಸುವವರು ಬೆಳಿಗ್ಗೆ ಬರುತ್ತಾರೆ. ಸಾಮಾನ್ಯವಾಗಿ ಸಂಜೆಯ ಹೊತ್ತಿಗೆ ಅವರ ಕೆಲಸ ಮುಗಿದಿರುತ್ತದೆ. ಹೊರಗಿನ ಪುಟಗಳು ಹಾಗೂ ಕ್ರೀಡಾ ಪುಟಗಳನ್ನು ತಯಾರಿಸುವವರು ಬೇಗನೇ ಬಂದರೂ ಅಂತಹ ಪ್ರಯೋಜನವೇನಿಲ್ಲ. ಕ್ರೀಡಾ ಪುಟಗಳವರು ಕೆಲವೊಮ್ಮೆ ತಡರಾತ್ರಿಯ ತನಕ ನಿಲ್ಲಬೇಕಾಗುತ್ತದೆ. ಮುಖಪುಟದವರು ಅತ್ಯಂತ ಕೊನೆಯ ‘Stop-Press’  ಅಂದರೆ ಯಂತ್ರ ನಿಲ್ಲಿಸಿ ಪುಟ ಬದಲಿಸಿ ಕೊಡ ಬೇಕಾಗುವ ಅತ್ಯಂತ ಮಹತ್ವದ ಸುದ್ದಿಯನ್ನೂ ಕೊಡಬೇಕಾಗಿರುವುದರಿಂದ ನಿಶಾಚರಿಗಳಂತೆ ಕಚೇರಿಯಲ್ಲಿ ತಡ ರಾತ್ರಿಯ ತನಕ ಇರಬೇಕಾಗುತ್ತದೆ. ನಾನು ಬಹುಪಾಲು ಇಂತಹ ಬಾವಲಿಗಳ ಮುಖ್ಯಸ್ಥನಾಗಿದ್ದೆ. ವರದಿಗಾರರು ರಾತ್ರಿ 9.00ರ ತನಕವೂ ಸುದ್ಧಿ ಕಳುಹಿಸುತ್ತಾರೆ. ಅದೇ ರೀತಿ ತಾಂತ್ರಿಕ, ಮುದ್ರಣ ಮತ್ತು ಪ್ರಸರಣ ಸಿಬ್ಬಂದಿ.

ಅಂದು ಮಾತ್ರ ಅವರು-ಇವರು ಎನ್ನದೆ ಎಲ್ಲರೂ ಬೇಗನೇ ಹಾಜರಿದ್ದರು. ಎಲ್ಲರೂ ಇರುವೆಗಳಂತೆ ತಮ್ಮ ತಮ್ಮ ಕೆಲಸ ಆರಂಭಿಸಿದರು.

ಮೊದಲ ಆವೃತ್ತಿ ರಾತ್ರಿ 8 ಗಂಟೆಯ ಒಳಗೆ ಮುದ್ರಣವಾಗಬೇಕು. ನಂತರ ಬೇರೆ ಬೇರೆ ಆವೃತ್ತಿಗಳಿವೆ. ನಾವೇನೋ ಮುಖಪುಟ, ರಾಜ್ಯ, ರಾಷ್ಟ್ರೀಯ, ಸಂಪಾದಕೀಯ ಪುಟಗಳನ್ನು ಸಮಯಕ್ಕೆ ಸರಿಯಾಗಿ ಸಿದ್ಧ ಪಡಿಸಿದೆವು. ಆದರೆ ಮೊದಲ ಆವೃತ್ತಿಯ ಎಲ್ಲಾ ಸ್ಥಳೀಯ ಪುಟಗಳು ಏನು ಮಾಡಿದರೂ ಮುಗಿಯುತ್ತಲೇ ಇಲ್ಲ. ಮುಖಪುಟ ಮತ್ತು ದೇಶ-ರಾಜ್ಯ-ಅಂತರ್ರಾಷ್ಟ್ರೀಯ ಸುದ್ದಿಗಳು ಏಜೆನ್ಸಿಗಳ ಮೂಲಕ ಬರುತ್ತವೆ. ಇಂತಹ ಸುದ್ದಿಗಳು ಇರಬಹುದು ಎಂದು ಮೊದಲೇ ಊಹಿಸುತ್ತೇವೆ. ಅನುವಾದ ಮಾಡಿದರೆ ಸಾಕು. ಹೊಸತೇನಾದರೂ ಬಂದರೆ ಬದಲಿಸಬೇಕು. ಈ ವಿಷಯದಲ್ಲಿ ಅನುಭವ ಇದ್ದರೆ ಅದೊಂದು ದೊಡ್ಡ ವಿಷಯವಲ್ಲ.

ಆದರೆ, ಗ್ರಾಮೀಣ ಸುದ್ದಿಗಳು ಏಜೆನ್ಸಿಗಳಲ್ಲಿ ಬರುವುದಿಲ್ಲ. ವರದಿಗಾರರು ಕಳಿಸಿಯೇ ಆಗಬೇಕು. ನಾವು ಹಲವು ಆವೃತ್ತಿಗಳನ್ನು ಯೋಜಿಸಿ ಒಂದೊಂದು ಪುಟವನ್ನು ಮೀಸಲಿರಿಸಿದ್ದರೂ ಅದಕ್ಕೆ ತಕ್ಕಂತೆ ವರದಿಗಾರರ ಜಾಲವನ್ನು ಬಲಪಡಿಸಿರಲಿಲ್ಲ. ಇಡೀ ಪುಟ ತುಂಬಿಸುವಷ್ಟು ಸುದ್ದಿಗಳನ್ನು ಪ್ರತಿಯೊಂದು ಪ್ರದೇಶದಿಂದ ವರದಿಗಾರರು ಕಳುಹಿಸಿರಲಿಲ್ಲ. ಆಯಾ ಪುಟಗಳಿಗೆ ನಿಯೋಜಿಸಿದ್ದ ಸಿಬ್ಬಂದಿಗಳು ಕಂಗಾಲು! ಅವರೇನು ಪಾಪ ಸುದ್ದಿಗಳನ್ನು ತಯಾರಿಸಲು ಸಾಧ್ಯವಿದೆಯೇ? ಸಾಮಾನ್ಯವಾಗಿ ವರದಿಗಾರರು ಬೆಳಿಗ್ಗೆಯೇ ಆ ದಿನ ನಿರೀಕ್ಷಿಸಬೇಕಾದ ಸುದ್ದಿಗಳ ಪಟ್ಟಿಗಳನ್ನು ಕಳುಹಿಸುತ್ತಾರೆ. ಮೊದಲ ದಿನವಾದುದರಿಂದ ಯಾರೂ ಅವುಗಳನ್ನು ಕಳುಹಿಸಿರಲಿಲ್ಲ. ತಕ್ಷಣ ಕೆಲವು ಪುಟಗಳನ್ನು ಕಂಬೈನ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಆದರೂ ಕೆಲಸ ಮುಂದೆ ಸಾಗುತ್ತಲೇ ಇಲ್ಲ. ಅಲ್ಲಿ ಇಲ್ಲಿ ಟೈಪ್ ಮಾಡಿದ ಸುದ್ದಿಗಳನ್ನು ಪುಟ ತಯಾರಿಸುವ ಕಂಪ್ಯೂಟರಿಗೆ ಕಳುಹಿಸಬೇಕು. ಆನ್‍ಲೈನ್ ಎಡಿಟಿಂಗ್! ಅಲ್ಲದೆ ಹಲವರು ಹೊಸಬರು. ಕೆಲವರಿಗೆ ವೇಗವಾಗಿ ಟೈಪ್ ಮಾಡಲೂ ಬರುವುದಿಲ್ಲ. ಆನ್‍ಲೈನ್‍ನಲ್ಲಿ ವರದಿಗಾರರು ನೇರವಾಗಿ ಕಳುಹಿಸಿದ ಸುದ್ದಿಗಳನ್ನು ಡೌನ್‍ಲೋಡ್ ಮಾಡಬೇಕು. ಫೋಟೋಗಳನ್ನು ಸ್ಕ್ಯಾನ್ ಮಾಡಿಸಬೇಕು. ಅವುಗಳು ಯಾವ ಕಂಪ್ಯೂಟರಿನ ಯಾವ ಫೋಲ್ಡರಿನಲ್ಲಿವೆ ಗೊತ್ತಿಲ್ಲ! ಗೊತ್ತಾದರೆ ಅದನ್ನು ಇಲ್ಲಿಗೆ ತರುವುದು ಹೇಗೆ ಗೊತ್ತಿಲ್ಲ. ಪುಟ ಸಿದ್ಧವಾದರೆ ಅದರ ಪ್ರಿಂಟ್ ತೆಗೆಯುವುದು ಹೇಗೆ ಮಾರಾಯ್ರೆ? ಗೊತ್ತಿಲ್ಲ. ಯಾರು ಮೊದಲು ಪ್ರಿಂಟ್ ಕಳುಹಿಸಬೇಕು… ಹೀಗೆ ಗೊಂದಲಗಳು. ಎಲ್ಲವೂ ಹೊಸತು, ಜನರೂ ಹೊಸಬರು. ಮೇಲಾಗಿ ಆಡಳಿತ ನಿರ್ದೇಶಕ ಸ್ಯಾಮುಯೆಲ್ ಸಿಕ್ವೇರಾ ಇಲ್ಲಿಯೇ ಓಡಾಡುತ್ತಿದ್ದಾರೆ. ಅವರಲ್ಲದೆ ಸರ್ಕ್ಯೂಲೇಶನ್, ಪ್ರಿಂಟಿಂಗ್ ಮುಖ್ಯಸ್ಥರುಗಳು ಎಲ್ಲಾ ನೋಡುತ್ತಿದ್ದಾರೆ. ಕೆಲವರಿಗೆ ನಿಜಕ್ಕೂ ಬೆವರಿಳಿದಿರಬೇಕು. ಅಂತೂ ಇಂತೂ ಇಡೀ ಕಚೇರಿ ಒಳ್ಳೆಯ ಪ್ರಶರ್ ಕುಕ್ಕರಿನಂತೆಯೇ ಬಿಸಿಯೇರಿತ್ತು, ಆ ಏರ್ ಕಂಡಿಶನ್ಡ್ ವಾತಾವರಣದಲ್ಲೂ! 7.30ಕ್ಕೆ ಮೊದಲ ಆವೃತ್ತಿ ಸಿದ್ಧವಾಗಬೇಕಾಗಿದ್ದದ್ದು ಕೊನೆಗೆ ಹೇಗೋ ರಾತ್ರಿ 10.00ರ ಹೊತ್ತಿಗೆ ಹೇಗೂ ಪ್ರಿಂಟ್ ಹಾಕಬೇಕಾದ ಒಂದು ಎಡಿಷನ್ ಸಿದ್ಧವಾಯಿತು.

ಆವತ್ತಿಗೆ ಅಷ್ಟು ಸಾಕು ಎಂದು ನಿರ್ಧರಿಸಲಾಯಿತು. ಎಲ್ಲರೂ, ಅಂದರೆ ಸಂಪಾದಕೀಯ ವಿಭಾಗದವರು ನಿಟ್ಟುಸಿರು ಬಿಟ್ಟರು. ಮನೆಗೆ ಹೋಗುವವರನ್ನು ಕಳುಹಿಸಲಾಯಿತು. ಪ್ರಿಂಟಿಂಗ್‍ನವರದ್ದು, ಸರ್ಕ್ಯೂಲೇಶನ್‌ನವರದ್ದು. ಇನ್ನೊಂದು ಕತೆ. ಆದರೆ, ಪ್ರೆಸ್ಸನ್ನು ಮೊದಲೇ ಹಲವು ಬಾರಿ ಪರೀಕ್ಷಿಸಿದ್ದುದರಿಂದ ಕೆಲವು ಬಾರಿ ಪೇಪರ್ ಕಟ್ ಆದದ್ದು ಬಿಟ್ಟರೆ ದೊಡ್ಡ ಸಮಸ್ಯೆಯೇನೂ ಆಗಲಿಲ್ಲ. ಪೇಪರ್ ಬಂಡಲ್ ಕಟ್ಟುವ ಡ್ರಿಲ್ ನಡೆಸಲಾಯಿತಾದರೂ ಅಂದಿನ ಪತ್ರಿಕೆಯನ್ನು ನನಗೆ ತಿಳಿದಂತೆ ಹೊರಗೆ ಕಳುಹಿಸಲಿಲ್ಲ. ಪತ್ರಿಕೆ ಯಂತ್ರದಿಂದ ಹೊರಬರುತ್ತಿದ್ದಂತೆ ಎಲ್ಲರ ಕೈಯಲ್ಲಿ ಒಂದೊಂದು ಪತ್ರಿಕೆ. ಪತ್ರಿಕೆ ಸಾಕಷ್ಟು ಚೆನ್ನಾಗಿಯೇ ಬಂದಿತ್ತು. ಕೆಲವು ತಪ್ಪುಗಳು ಇದ್ದರೂ ಆಗ ಗಮನಕ್ಕೆ ಬರಲಿಲ್ಲ. ಎಂಡಿಯವರು  “ಸೆಲೆಬ್ರೇಶನ್ ಟೈಮ್. ನಾಳೆಯದ್ದು ನಾಳೆ ನೋಡೋಣ” ಎಂದರು.

ಆಗ ಕ್ಯಾಂಟೀನ್ ಆರಂಭವಾಗಿರಲಿಲ್ಲ. ಆದರೆ, ಹೊರಗಿನಿಂದ ಬಿರಿಯಾನಿ ಇತ್ಯಾದಿ ತರಿಸಿದ್ದರು. ಯಾರೋ ಮಹಾತ್ಮರು ಬಹುಶಃ ಎಂಡಿಯವರ ಒಪ್ಪಿಗೆಯಿಂದಲೇ ಕೆಲವು ಕೇಸ್ ಬಿಯರ್ ತಂದು ಇಟ್ಟಿದ್ದರು! ಹಬ್ಬ ಆರಂಭ! ಕೆಲವರು ಹಾಡು ಹಾಡಿ ಡ್ಯಾನ್ಸ್ ಕೂಡಾ ಮಾಡಿದರು. ಆದರೆ, ನಮಗೆ ಕೆಲವರಿಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ. ನಾಳೆಯಿಂದ ದಿನನಿತ್ಯದ ಹೋರಾಟ!

ಝೈನುದ್ದೀನ್ ಸಾಹೇಬರ ಪೇಚು!

ಪತ್ರಿಕೆಗಳು ಮುಖ್ಯವಾಗಿ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿಗಳಿಗಾಗಿ ನ್ಯೂಸ್ ಏಜನ್ಸಿಗಳನ್ನು ಅವಲಂಬಿಸಿದ್ದವು. ಅವು ಇಂಗ್ಲೀಷಿನಲ್ಲಿ ಇರುವುದರಿಂದ ಭಾಷಾ ಪತ್ರಿಕೆಗಳಿಗೆ ಅವುಗಳನ್ನು ಅನುವಾದಿಸಬೇಕಾದುದು ಅನಿವಾರ್ಯ. ಅದರಲ್ಲೂ ಕೆಲವು ಹೆಸರುಗಳನ್ನು ಉಚ್ಚರಿಸುವುದು ಹೇಗೆ, ಬರೆಯುವುದು ಹೇಗೆ ಎಂಬುದು ಸವಾಲು. ಉದಾಹರಣೆಗೆ ವಿಶ್ವವಿಖ್ಯಾತ ಬೌಲರ್ ಶೇನ್ ವಾನ್ (Shane Warne) ಈತ ಬೇರೆ ಬೇರೆ ಪತ್ರಿಕೆಗಳಲ್ಲಿ ವಾರ್ನ್, ವಾರ್ನೆ ಇತ್ಯಾದಿ ಆಗುತ್ತಿದ್ದರು.

ಈ ಆಟಗಾರರಲ್ಲಿ ಅತೀ ಹೆಚ್ಚು ಕಾಡಿಸಿದವರು ಫ್ರೆಂಚ್ ಫುಟ್‍ಬಾಲ್ ತಾರೆ Zendine Zidane! ಮೊದಲೇ ಫ್ರೆಂಚ್ ಹೆಸರುಗಳ ಉಚ್ಛಾರಣೆ ಕಷ್ಟ. ಈತನದು ಕಗ್ಗಂಟು. ಬೇರೆ ಬೇರೆ ಪತ್ರಿಕೆಗಳಲ್ಲಿ ಝಿನಡೈನ್, ಜೆನೆದಿನ್, ಜಿನೆಡೈನ್ ಇತ್ಯಾದಿಯಾಗಿ ಈತನ ಮೊದಲ ಹೆಸರು ಬರೆಯಲಾಗುತ್ತಿದ್ದರೆ ಎರಡನೇ ಹೆಸರು ಝಿದಾನ್, ಜಿಡಾನ್, ಜಿದಾನೆ ಇತ್ಯಾದಿಯಾಗಿ ಬರೆಯಲಾಗುತ್ತಿತ್ತು. ಎರಡೂ ಸೇರಿ ಏನೇನೋ ಆಗುತ್ತಿತ್ತು. ಆಗಲೇ ಕೇಬಲ್‍ಗಳಲ್ಲಿ ಬರುತ್ತಿದ್ದ ಕೆಲವು ಚಾನೆಲ್‍ಗಳನ್ನು ನೋಡುವ ವ್ಯವಧಾನ ಯಾರಿಗಿದೆ? ನಮ್ಮಲ್ಲೂ ಈ ಕುರಿತು ಚರ್ಚೆ ನಡೆಯಿತು ಅನ್ನಿ, ಯಾರಿಗೂ ಸರಿಯಾದ ಉಚ್ಛಾರಣೆ ಗೊತ್ತಿರಲಿಲ್ಲ.

ಕೊನೆಗೂ ಗೊತ್ತಾದುದೇನೆಂದರೆ ಈತ ಅಲ್ಜೀರಿಯಾ ಮೂಲದ ಫ್ರೆಂಚ್ ಪ್ರಜೆ. ಮೂಲತಃ ಮುಸ್ಲಿಂ. ಆತನ ನಿಜ ಹೆಸರು ಝೈನುದ್ದಿನ್ ಝೈದಾನ್! ಫ್ರೆಂಚ್ ಉಚ್ಛಾರಣೆಯಲ್ಲಿ  Zendine Zidane  ಆಗಿದ್ದರು. ಉತ್ತರ ಆಫ್ರಿಕಾದಲ್ಲಿರುವ ಅಲ್ಜೀರಿಯಾ ದೇಶವು ಮೆಡಿಟರೇನಿಯನ್ ಸಮುದ್ರದ ಆಚೆ ಹತ್ತಿರದಲ್ಲಿರುವ ಫ್ರಾನ್ಸ್‌ನ ವಸಾಹತಾಗಿದ್ದು, ನಂತರ ಸ್ವಾತಂತ್ರ್ಯ ಪಡೆಯಿತು. ಅನೇಕ ಅಲ್ಜೀರಿಯನ್ ಕುಟುಂಬಗಳು ಆಗಲೇ ಫ್ರಾನ್ಸ್ ದೇಶದಲ್ಲಿ ನೆಲೆ ನಿಂತಿದ್ದವು. ಈಗಲೂ ಫ್ರಾನ್ಸ್‌ನ ಕ್ರೀಡಾ ಕ್ಷೇತ್ರದಲ್ಲಿ ಅಲ್ಜೀರಿಯನ್ ಮೂಲದವರು ಹಲವರಿದ್ದಾರೆ.
******

‘ಜನವಾಹಿನಿ’ಗೆ ನುಸುಳಿದ ‘ದೊಡ್ಡ ಬೆಕ್ಕು’

ನಮ್ಮಲ್ಲಿ ಹಲವರು ಇಂಗ್ಲೀಷಿನಿಂದ ಕನ್ನಡಕ್ಕೆ ತಕ್ಕ ಮಟ್ಟಿಗೆ ಅನುವಾದ ಮಾಡಬಲ್ಲವರಿದ್ದರೂ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮಾಡುವಷ್ಟು ಆ ಭಾಷೆಯ ಹಿಡಿತವಿರಲಿಲ್ಲ. ನನ್ನನ್ನು ಸೇರಿ ಎಲ್ಲರೂ ಕನ್ನಡ ಮಾಧ್ಯಮದಲ್ಲಿಯೇ ಕಲಿತವರು. ನಾನು ಸ್ವಂತ ಓದಿನಿಂದ ಮತ್ತು ಇಂಗ್ಲೀಷ್ ಪತ್ರಿಕೆಯಲ್ಲಿಯೇ ಕೆಲಸ ಆರಂಭಿಸಿದ್ದುದರಿಂದ ತಕ್ಕ ಮಟ್ಟಿಗೆ ಹಿಡಿತವಿತ್ತು. ಜನರಲ್ ಡೆಸ್ಕಿನ ಮುಖ್ಯಸ್ಥನಾಗಿ ನಾನು ಇಂತಹ ಹಲವು ತಪ್ಪುಗಳನ್ನು ಸರಿಪಡಿಸುತ್ತಿದ್ದೆ. ಮುಖ್ಯವಾಗಿ ವಿದೇಶಿ ವ್ಯಕ್ತಿ, ನಗರಗಳು ಇಲ್ಲಿ ಕುಲಗೆಡುತ್ತಿದ್ದವು. ಇದರಲ್ಲಿ ಮಹಾ ಪಾಪವೇನೂ ಇಲ್ಲ ಬಿಡಿ. ಬ್ರಿಟಿಷರು ನಮ್ಮ ಊರು, ವ್ಯಕ್ತಿಗಳ ಹೆಸರು ಕುಲಗೆಡಿಸಿಲ್ಲವೇ? ಎಲ್ಲಕ್ಕಿಂತ ಹೆಚ್ಚು ಕಷ್ಟವಾಗುತ್ತಿದ್ದುದು ಇಂಗ್ಲೀಷ್ ಆಡುಮಾತುಗಳು ಮತ್ತು ಗಾದೆಗಳು.

ಒಂದು ರಜೆಯ ಮರುದಿನ ಬಂದು ಪೇಪರ್ ಓದುತ್ತೇನೆ, ಒಂದು ಸುದ್ದಿಯಲ್ಲಿ ‘ಭಾರತದಲ್ಲಿ ದೊಡ್ಡ ಬೆಕ್ಕುಗಳ ರಕ್ಷಣೆಗೆ ವಿಶೇಷ ಯೋಜನೆ ಆರಂಭಿಸಲಾಗಿದೆ’ ಎಂದೇನೋ ಇತ್ತು. ನನಗೆ ತಲೆಬುಡ ಅರ್ಥವಾಗಲಿಲ್ಲ. ‘ದೊಡ್ಡ ಬೆಕ್ಕುಗಳನ್ನು ರಕ್ಷಿಸುವುದು?’ ಎಂರದರೇನು? ಚಿಕ್ಕ ಬೆಕ್ಕುಗಳು ಏನು ಪಾಪ ಮಾಡಿದ್ದವು? ಕೊನೆಗೆ ಮೂಲ ಇಂಗ್ಲೀಷ್ ಕಾಪಿ ತೆಗೆದು ನೋಡಿದಾಗ ನಕ್ಕು ನಕ್ಕು ಸುಸ್ತಾದೆ. ‘Programme to protect big cats’ ಎಂಬುದರ ಅನುವಾದ ಈ ‘ದೊಡ್ಡ ಬೆಕ್ಕು’ ಆಗಿತ್ತು. ಇಂಗ್ಲೀಷಿನಲ್ಲಿ ಹುಲಿಗಳನ್ನು ‘big cats’ ಎಂದು ಕರೆಯುತ್ತಾರೆ. ಇಲ್ಲಿ ಅದು ‘ಹುಲಿಗಳ ರಕ್ಷಣೆಗೆ’ ಎಂದಾಗಬೇಕಿತ್ತು. ಪಾಪ ಅನುವಾದಕರಿಗೆ ಅದು ಗೊತ್ತಿಲ್ಲದೆ ಅಕ್ಷರಶಃ ಅನುವಾದ ಮಾಡಿಬಿಟ್ಟಿದ್ದರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಮಾರಾಟವಾಗಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿ ಹೊಡೆದು, ಚಿತ್ರಹಿಂಸೆ ನೀಡಿದ್ದರು: ಟಿಎಂಸಿ ನಾಯಕ ಸಾಕೇತ್ ಗೋಖಲೆ

0
ಬಿಜೆಪಿಗೆ ಸೇರಲು ಅಥವಾ ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ. ದಿ ವೈರ್‌ ಪ್ರಕಟಿಸಿದ ಹಿರಿಯ ವಕೀಲ ಕಪಿಲ್ ಸಿಬಲ್...