Homeಕರ್ನಾಟಕಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಸಿದ ಜಯ ಪ್ರಕಾಶ್ ಹೆಗ್ಡೆ

ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಸಿದ ಜಯ ಪ್ರಕಾಶ್ ಹೆಗ್ಡೆ

- Advertisement -
- Advertisement -

ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಜನ ಗಣತಿ) ವರದಿಯನ್ನು ಹಿಂದುಳಿದ ವರ್ಗಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಭೇಟಿಯಾದ ಜಯಪ್ರಕಾಶ್ ಹೆಗ್ಡೆ, 2015ರಲ್ಲಿ ನಡೆಸಿದ್ದ ಸಮೀಕ್ಷೆಯ ವರದಿ ಸಲ್ಲಿಕೆ ಮಾಡಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ಯಾವುದೇ ದಾಖಲೆಗಳು ಕಳೆದು ಹೋಗಿಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ. ವರದಿಯ ಅಂಶಗಳನ್ನು ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ. ಅದು ಸರ್ಕಾರದ ಕೆಲಸ” ಎಂದರು.

ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಹಾಗೂ ಶಿಫಾರಸುಗಳನ್ನು ಒಳಗೊಂಡ 200 ಪುಟಗಳ ಪ್ರಧಾನ ವರದಿ ಮತ್ತು 48 ಸಂಪುಟಗಳಷ್ಟಿರುವ ದತ್ತಾಂಶದ ವಿವರಗಳನ್ನು ಮುಖ್ಯಮಂತ್ರಿಗೆ ಹಸ್ತಾಂತರ ಮಾಡಲಾಗಿದೆ.

ವರದಿ ಸ್ವೀಕರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ರಾಜ್ಯ ವಿವಿಧ ಸಮುದಾಯಗಳ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಸರ್ಕಾರ 158.47 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಆದರೆ, ಕಾಂತರಾಜು ಆಯೋಗದ ಅವಧಿ ಮುಕ್ತಾಯಗೊಳ್ಳುವ ಮುನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರಲಿಲ್ಲ.

ನಂತರ ಬಿಜೆಪಿ ಸರ್ಕಾರ ಬಂದಿದ್ದರಿಂದ ಸಮೀಕ್ಷೆಯ ವರದಿಯ ಸಲ್ಲಿಸುವ ಕಾರ್ಯ ನಡೆದಿರಲಿಲ್ಲ. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದಿದ್ದು, ಅಂದಿನ ಸಮೀಕ್ಷೆಯ ವರದಿಯನ್ನು ಪಡೆದುಕೊಂಡಿದೆ.

ಜಯಪ್ರಕಾಶ್ ಹೆಗ್ಡೆ ಅವಧಿ ವಿಸ್ತರಣೆ:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಮತ್ತು ಸದಸ್ಯರ ಅವಧಿ ಕಳೆದ ನವೆಂಬರ್‌ನಲ್ಲಿ ಮುಗಿದಿತ್ತು. ಪರಿಷ್ಕೃತ ಸಮಗ್ರ ವರದಿ ಅಂತಿಮಗೊಳಿಸಲು ಕಾಲಾವಕಾಶ ಅಗತ್ಯವಿದೆ ಎಂಬ ಕಾರಣಕ್ಕೆ ಸರ್ಕಾರ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು.

ವರದಿ ಅಂತಿಮಗೊಳಿಸುವ ಹಾಗೂ ಮುದ್ರಣಕ್ಕೆ ಕಾಲಾವಕಾಶದ ಕಾರಣಕ್ಕೆ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿಯನ್ನು 2ನೇ ಬಾರಿಗೆ ಫೆಬ್ರವರಿ 29ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ತಮ್ಮ ಅಧಿಕಾರಾವಧಿಯ ಕೊನೆಯ ದಿನ ಜಾತಿ ಗಣತಿ ವರದಿಯನ್ನು ಜಯಪ್ರಕಾಶ್‌ ಹೆಗ್ಡೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ವಿರೋಧದ ನಡುವೆ ವರದಿ ಸಲ್ಲಿಕೆ:

ಜಾತಿ ಜನಗಣತಿ ಸ್ವೀಕಾರ ಆಕ್ಷೇಪಿಸಿ ಲಿಂಗಾಯತ ಸ್ವಾಮೀಗಳು, ಒಕ್ಕಲಿಗ ಸ್ವಾಮೀಜಿಗಳು, ಮುಖಂಡರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಉಪಮುಖ್ಯಮಂತ್ರಿ ಹಾಗೂ ಒಕ್ಕಲಿಗ ಸಮುದಾಯದ ಮುಖಂಡ ಡಿ.ಕೆ.ಶಿವಕುಮಾರ್ ಅವರ ಸಹಿ ಈ ಪತ್ರದಲ್ಲಿ ಇತ್ತು. ಇದು ಪರ ವಿರೋಧಕ್ಕೆ ಎಡೆಮಾಡಿಕೊಟ್ಟಿತ್ತು. ಹಾಗೆಯೇ ಕಾಂಗ್ರೆಸ್‌ ಲಿಂಗಾಯತ ನಾಯಕರೂ ಕೂಡ ವರದಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ಇದಾದ ನಂತರ ಹಲವು ವೇದಿಕೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವರದಿ ಸ್ವೀಕಾರಕ್ಕೆ ಬದ್ಧ ಎಂದು ಹೇಳಿದ್ದರು. ಈಚೆಗಷ್ಟೇ ಸ್ವತಃ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಕೂಡ, “ವರದಿ ಸ್ವೀಕರಿಸುವ ಬಗ್ಗೆ ಸರಕಾರಕ್ಕೆ ಬದ್ಧತೆ ಇದೆ. ಸ್ವೀಕರಿಸಿಯೇ ತೀರುತ್ತೇವೆ. ಪಲಾಯನದ ಪ್ರಶ್ನೆ ಇಲ್ಲ. ಫೆ. 29ರವರೆಗೆ ಕಾಯಿರಿ” ಎಂದು ಸುಳಿವು ನೀಡಿದ್ದರು.

ಇದನ್ನೂ ಓದಿ : ‘ಆತ್ಮಸಾಕ್ಷಿಗೂ ದರ ಇದೆಯೇ?’ ಎಂದು ಪೋಸ್ಟ್‌ ಮಾಡಿ ಪೇಚೆಗೆ ಸಿಲುಕಿದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...