Homeಚಳವಳಿಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆಯವರ ಆಯ್ಕೆ ಅತ್ಯಂತ ಪ್ರಶಸ್ತ

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆಯವರ ಆಯ್ಕೆ ಅತ್ಯಂತ ಪ್ರಶಸ್ತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಪೂರ್ಣಚಂದ್ರ ತೇಜಸ್ವಿಯವರನ್ನು ಬಿಟ್ಟರೆ ವಿಠಲ ಹೆಗ್ಡೆಯವರಿಗೆ ಮಾತ್ರ

- Advertisement -
- Advertisement -

ಶೃಂಗೇರಿಯಲ್ಲಿ ಜನವರಿ 10 ಮತ್ತು 11ರಂದು ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆಯವರ ಆಯ್ಕೆ ಅತ್ಯಂತ ಪ್ರಶಸ್ತವಾದುದು.
ವಿಠಲ ಹೆಗ್ಡೆಯವರು ಸಾಹಿತಿಯಾಗಿ ದೊಡ್ಡ ಹೆಸರೇನೂ ಮಾಡಿಲ್ಲ, ಹೆಚ್ಚು ಕೃತಿಗಳನ್ನೂ ಪ್ರಕಟಿಸಿಲ್ಲ, ನಿಜ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಪೂರ್ಣಚಂದ್ರ ತೇಜಸ್ವಿಯವರನ್ನು ಬಿಟ್ಟರೆ ವಿಠಲ ಹೆಗ್ಡೆಯವರಿಗೆ ಮಾತ್ರ ಎಂಬುದನ್ನು ಗಮನಿಸಿದರೆ ಅವರ ಸಾಹಿತ್ಯ ಕೃಷಿ ‘ಸಣ್ಣ’ದಾದರೂ ಅದರ ಮೌಲಿಕತೆ ಅರ್ಥವಾಗುತ್ತದೆ.

ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಹಾಸುಹೊಕ್ಕಾಗಿ ಬೆರೆತುಹೋಗಿದ್ದಾರೆ. ಪುಸ್ತಕಗಳನ್ನು ಬರೆದು ಪ್ರಕಟಿಸುವುದನ್ನೇ ಪ್ರಧಾನ ವೃತ್ತಿಯಾಗಿ ಅವರು ಮಾಡಿಕೊಂಡಿದ್ದಲ್ಲಿ, ಜಿಲ್ಲೆಯ ಹಾಗೂ ಶೃಂಗೇರಿ ಮತ್ತು ಆ ಪರಿಸರದ ಪ್ರಕೃತಿ, ಬದುಕು ಮತ್ತು ಇತಿಹಾಸದ ಕುರಿತು ಅವರು ಸಂಶೋಧನೆ ಮಾಡಿ ಹಾಕಿಟ್ಟುಕೊಂಡಿರುವ ಟಿಪ್ಪಣಿಗಳೆಲ್ಲ ಕೃತಿ ರೂಪಕ್ಕಿಳಿದಿದ್ದೇ ಆಗಿದ್ದಲ್ಲಿ ಕನಿಷ್ಠ ಅರ್ಧ ಡಜನ್ ಮೌಲಿಕ ಕೃತಿಗಳಿಗೆ ಸಾಕಾಗುತ್ತಿದ್ದವು ಎಂದು ನನ್ನ ನಂಬಿಕೆ.

ವಿಠಲ ಹೆಗ್ಡೆಯವರು ಮಲೆನಾಡಿಗಷ್ಟೇ ಸೀಮಿತರಾಗದೆ, ಕನ್ನಡ ನಾಡು-ನುಡಿ-ಜನಜೀವನ-ಕೃಷಿ-ಪ್ರಕೃತಿ ಸಂಪತ್ತು-ಚಳವಳಿ-ಇತಿಹಾಸ … ಈ ಎಲ್ಲ ರಂಗಗಳಲ್ಲೂ ನಿರಂತರ ಕ್ರಿಯಾಶೀಲವಾಗಿರುವ ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ಜನಜನಿತರಾಗಿದ್ದಾರೆ.

ಅವರ ಕೃತಿಗಳ ವಿಷಯಕ್ಕೆ ಬಂದರೆ, ‘ಮಂಗನ ಬ್ಯಾಟೆ’, ‘ಅಡಿಕೆಯ ಮಾನ’ ಮತ್ತು ‘ಕಾಡು-ಕಿರುಕುಳ’ ಇವು ಅವರ ಪ್ರಕಟವಾಗಿರುವ ಮೂರೇ ಮೂರು ಕೃತಿಗಳು. ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ಮಲೆನಾಡಿನ ಈ ಭಾಗದ ಜನಜೀವನದಲ್ಲಿ ಗಮನಾರ್ಹ ಸಮೃದ್ಧಿಗೆ ಕಾರಣವಾಗಿದ್ದ ಅಡಿಕೆಯ ಬೆಲೆ ಇದ್ದಕ್ಕಿದ್ದಂತೆ ತಥಾಕಥಿತ ‘ಮಾರುಕಟ್ಟೆ’ ಅರ್ಥವ್ಯವಸ್ಥೆ ಮತ್ತು ‘ಮಾರುಕಟ್ಟೆ ರಾಜಕಾರಣ’ದಿಂದಾಗಿ ಯದ್ವಾತದ್ವಾ ಏರುಪೇರಾಗಿ ಅಡಿಕೆ ಸೀಮೆಯಾದ್ಯಂತ ಅತಂತ್ರ ಸೃಷ್ಟಿಸಿದ ಸಂದರ್ಭದಲ್ಲಿ ‘ಅಡಿಕೆಯ ಮಾನ’ ರಚಿತವಾಯಿತು. ‘ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರೂ ಬರೊಲ್ಲ’ ಎಂಬ ಗಾದೆಮಾತು ಈ ಶೀರ್ಷಿಕೆಗೆ ಪ್ರೇರಣೆ.

ಬಂಡವಾಳಶಾಹಿ ಹಿತಾಸಕ್ತಿಗಳೂ ಅಧಿಕಾರಶಾಹಿ ಮತ್ತು ರಾಜಕೀಯ ಶಕ್ತಿಗಳೂ ಒಟ್ಟಾಗಿ, ವಿವಿಧ ರೀತಿಗಳಲ್ಲಿ ಮಲೆನಾಡಿನ ಅಪಾರ ವನರಾಶಿಯನ್ನು ಒಳಗೊಂಡ ಅಮೂಲ್ಯ ಪರಿಸರ ಸಂಪತ್ತನ್ನು ಸೂರೆಗೈದು ಬರಿದಾಗಿಸುತ್ತಿದ್ದರೆ, ಅರಣ್ಯಾಧಿಕಾರಿಗಳು ಮತ್ತು ಕೆಲವು ಪಟ್ಟಭದ್ರ ‘ಪರಿಸರ’ ವೃತ್ತಿಪರರು ಸುಪ್ರೀಂ ಕೋರ್ಟಿನ ಸದಾಶಯವನ್ನು ದುರುಪಯೋಗ ಪಡಿಸಿಕೊಂಡು, ಈ ಪರಿಸರ ನಾಶಕ್ಕೆಲ್ಲ ಇಲ್ಲಿನ ರೈತಾಪಿಯೇ ಕಾರಣವೆಂಬಂತೆ ಬಿಂಬಿಸಿ, ರೈತಾಪಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಈ ಒಟ್ಟಾರೆ ವಿದ್ಯಮಾನವನ್ನು ವರ್ಣಿಸಿ ಬರೆದ ಪುಸ್ತಕ ‘ಕಾಡು-ಕಿರುಕುಳ’.

ಹೆಗ್ಡೆಯವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ‘ಮಂಗನ ಬ್ಯಾಟೆ’ ಕೃತಿ ಕುವೆಂಪು ವಿವಿಯ ಮೊದಲ ವರ್ಷದ ಪದವಿ ಕನ್ನಡ ವಿಷಯಕ್ಕೊಂದು ಪಠ್ಯವಾಗಿಯೂ, ಇಂಗ್ಲಿಷ್ ವಿಷಯದಲ್ಲಿ ಒಂದು ಪೂರಕ ಓದಿನ ಕೃತಿಯಾಗಿಯೂ ನಿಗದಿಯಾಗಿದೆ. ಕುವೆಂಪು ಮತ್ತು ತೇಜಸ್ವಿಯವರ ನಂತರ ಮಲೆನಾಡಿನ ಬದುಕಿನ ಚಿತ್ರಣವನ್ನು ಇಷ್ಟು ಸೊಗಸಾಗಿ ಸಮಗ್ರವಾಗಿಯೂ ಪರಿಣಾಮಕಾರಿಯೂ ಆಗಿ ಕಟ್ಟಿಕೊಟ್ಟಿರುವ ಕೃತಿ ಇನ್ನೊಂದಿಲ್ಲ ಎಂದು ಯು.ಆರ್. ಅನಂತ ಮೂರ್ತಿಯವರು ಇದನ್ನು ಶ್ಲಾಘಿಸಿರುವುದು ಸುಮ್ಮನೇ ಅಲ್ಲ. ಮಲೆನಾಡಿನ ‘ಮುಖ್ಯಧಾರೆ’ ಜೀವನ ಚಿತ್ರಣದಿಂದ ಸ್ವಲ್ಪ ‘ಕೆಳ’ಕ್ಕಿಳಿದು ತಳಸಮುದಾಯಗಳ ಬದುಕಿನ ಚಿತ್ರಣವನ್ನು ತುಂಬ ಲವಲವಿಕೆಯ ಶೈಲಿಯಲ್ಲಿ ‘ಮಂಗನ ಬ್ಯಾಟೆ’ ಅತ್ಯಂತ ವಿವರವಾಗಿಯೂ ಆಪ್ತವಾಗಿಯೂ ಬಿಚ್ಚಿಟ್ಟಿದೆ.

ಹೆಗ್ಡೆಯವರ ಬದುಕು ಬರಹ ಹೋರಾಟಗಳ ಕುರಿತು ಬರೆಯಬಹುದಾದ್ದು ಬಹಳಷ್ಟಿದೆ. ಇಂದಿಗೂ ಶೃಂಗೇರಿ ತಾಲೂಕಿನಲ್ಲಿ ದಲಿತರು, ಆದಿವಾಸಿಗಳು ಮತ್ತು ಎಲ್ಲ ತಳ ಸಮುದಾಯಗಳ ಬಡಜನರು ತಮಗೆ ಅನ್ಯಾಯವಾದಾಗ ಮೊದಲು ಆಶ್ರಯಿಸುವುದೇ ವಿಠಲ ಹೆಗ್ಡೆಯವರನ್ನು. ಪತ್ರಕರ್ತರಾಗಿಯೂ ಅವರು ಒಳ್ಳೆಯ ಹೆಸರು ಮಾಡಿದ್ದಾರೆ. ಹೀಗೆ ಸಾಹಿತ್ಯಕ-ಸಾಮಾಜಿಕ-ಸಾಂಸ್ಕೃತಿಕ ರಂಗಗಳೆಲ್ಲದರಲ್ಲೂ ಕ್ರಿಯಾಶೀಲರಾದ ವ್ಯಕ್ತಿಯೊಬ್ಬರನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾಗೂ ಗೆಳೆಯ ಕಲ್ಕುಳಿ ವಿಠಲ ಹೆಗ್ಡೆಯವರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...