Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-5; ಕೊನೆಯ ಭಾಗ)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಕೊನೆಯ ಭಾಗ)

- Advertisement -
- Advertisement -

“ಮೂರು ಅಥವ ನಾಲ್ಕು ಗಂಟೆಗಳು ಕಳೆದುಹೋದವು. ಆ ಸಮಯದಲ್ಲಿ ಅಗತ್ಯವಾದ ತಯಾರಿಗಳನ್ನು ಮಾಡಿಕೊಳ್ಳಲಾಯಿತು: ಪಾದ್ರಿ, ತಿಂಡಿ, (ಕಾಫಿ, ಮಾಂಸ, ಮತ್ತು ಸ್ವಲ್ಪ ವೈನ್, ಇವುಗಳನ್ನ ಅವನಿಗೆ ಕೊಟ್ಟರು; ಇದು ನಿಜವಾಗಲೂ ಹಾಸ್ಯಾಸ್ಪದವಲ್ಲವೇ?) ಮತ್ತು ಇನ್ನೂ ನಾನು ನಂಬುವುದು ಈ ಜನ ತಮ್ಮ ಹೃದಯದಲ್ಲಿನ ಕರುಣೆಯ ಕಾರಣಕ್ಕಾಗಿ ಒಳ್ಳೆಯ ತಿಂಡಿಯನ್ನ ಕೊಡುತ್ತಾರೆಂದು ಮತ್ತು ಅವರು ಒಳ್ಳೆಯದನ್ನ ಮಾಡುತ್ತಿದ್ದಾರೆ ಅಂತ ಕೂಡ ನಂಬುತ್ತೇನೆ. ನಂತರ ಅವನಿಗೆ ಉಡುಗೆಯನ್ನ ತೊಡಿಸಲಾಯಿತು, ನಂತರ ಪ್ರಾರಂಭವಾಗಿದ್ದು ಇಡೀ ನಗರದ ಮೂಲಕ ಗಲ್ಲು ಸ್ಥಳಕ್ಕೆ ಅವನ ಮೆರವಣಿಗೆ. ಅವನನ್ನು ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಅವನು ಇನ್ನೂ ಸಹ ನಂಬುವುದು ತನಗೆ ಬದುಕುಳಿಯಲು ಇನ್ನೂ ಕಾಲಾವಕಾಶವಿದೆ ಎಂದು. ಬಹುಶಃ ಅವನು ದಾರಿಯಲ್ಲಿ ಹೋಗುತ್ತಾ ಯೋಚಿಸಿದ್ದು, ’ಓ, ನನಗಿನ್ನೂ ಜಾಸ್ತಿ ಜಾಸ್ತಿ ಸಮಯವಿದೆ. ಇನ್ನೂ ಮೂರು ರಸ್ತೆಗಳಷ್ಟು ಜೀವನ! ನಾವು ಈ ರಸ್ತೆಯನ್ನ ದಾಟಿದ ನಂತರ ಅಲ್ಲಿ ಇನ್ನೊಂದು ರಸ್ತೆಯಿದೆ; ಮತ್ತು ಇನ್ನೊಂದು ಎಲ್ಲಿ ಬೇಕರ್‌ನ ಅಂಗಡಿ ಬಲಕ್ಕೆ ಇದೆಯೊ ಅಲ್ಲಿ; ಮತ್ತು ನಾವಲ್ಲಿಗೆ ಯಾವಾಗ ತಲುಪುತ್ತೇವೆ? ಇನ್ನೂ ಬಹಳಷ್ಟು ಕಾಲ, ಬಹಳಷ್ಟು ಕಾಲ!’ ಅವನ ಸುತ್ತಲೂ ಜನಗಳ ಗುಂಪು ಕೂಗುತ್ತಿದ್ದಾರೆ, ಕಿರುಚುತ್ತಿದ್ದಾರೆ, ಹತ್ತು ಸಾವಿರ ಮುಖಗಳು, ಇಪ್ಪತ್ತು ಸಾವಿರ ಕಣ್ಣುಗಳು. ಇದೆಲ್ಲವನ್ನೂ ಸಹಿಸಿಕೊಳ್ಳಲೇಬೇಕು; ವಿಶೇಷವಾದ ಅವನು ಹೀಗೆ ಯೋಚಿಸಿದ: ’ಇಲ್ಲಿರುವವರು ಹತ್ತು ಸಾವಿರ ಜನ, ಅವರಲ್ಲಿ ಒಬ್ಬನನ್ನೂ ಕೂಡ ಮರಣದಂಡನೆಯ ಶಿಕ್ಷೆಗೆ ಗುರಿಪಡಿಸುವುದಿಲ್ಲ, ಆದರೂ ನಾನು ಮಾತ್ರ ಸಾಯಲೇಬೇಕು.’ ಸರಿ ಅವೆಲ್ಲವೂ ಕೂಡ ಪೂರ್ವಸಿದ್ಧತೆಗಳು.

“ಗಲ್ಲು ಸ್ಥಳದಲ್ಲೊಂದು ಏಣಿ ಇದೆ, ಮತ್ತು ಅದರ ಹತ್ತಿರದಲ್ಲಿಯೇ ಅವನ ಕಣ್ಣೀರು ಧಾರಾಕಾರವಾಗಿ ಹರಿಯಲು ಶುರುವಾಯಿತು. ಅವರೆಲ್ಲಾ ಹೇಳುವುದು ಇವನೊಬ್ಬ ಬಲಾಢ್ಯ ಮನುಷ್ಯ ಮತ್ತು ಭಯಂಕರವಾದ ದುಷ್ಟ! ಇಡೀ ಸಮಯ ಅವನ ಜೊತೆಯಲ್ಲಿ ಮಾತನಾಡುತ್ತಾ ಪಾದ್ರಿಯೊಬ್ಬನಿದ್ದ; ಗಾಡಿಯಲ್ಲಿ ಹೋಗುತ್ತಿದ್ದಾಗಲೂ ಕೂಡ, ಅವನು ಮಾತನಾಡುತ್ತಲೇ ಇದ್ದ. ಬಹುಶಃ ಮತ್ತೊಬ್ಬನ ಕಿವಿಯ ಮೇಲೆ ಏನೂ ಬೀಳುತ್ತಿರಲಿಲ್ಲ ಅನ್ನಿಸುತ್ತದೆ, ಅವನು ಒಮ್ಮೊಮ್ಮೆ ಕೇಳಿಸಿಕೊಳ್ಳಲು ಪ್ರಯತ್ನಪಡುತ್ತಿದ್ದ, ಮತ್ತು ಮೂರನೆ ಪದ ಪಾದ್ರಿಯ ಬಾಯಿಂದ ಹೊರಡುವ ಹೊತ್ತಿಗೆ ಹಿಂದಿನದೆಲ್ಲವನ್ನೂ ಮರೆತುಬಿಡುತ್ತಿದ್ದ.

“ಕೊನೆಗೂ ಅವನು ಮೆಟ್ಟಲುಗಳನ್ನ ಹತ್ತಲು ಪ್ರಾರಂಭಿಸಿದ; ಅವನ ಕಾಲುಗಳನ್ನ ಕಟ್ಟಲಾಗಿತ್ತು, ಆದುದರಿಂದ ಅವನು ಸಣ್ಣಸಣ್ಣ ಹೆಜ್ಜೆಗಳನ್ನು ಇಡಬೇಕಿತ್ತು. ವಿವೇಚನೆಯಿಂದ ಕೂಡಿದ ವ್ಯಕ್ತಿಯಂತೆ ತೋರುತ್ತಿದ್ದ ಪಾದ್ರಿ, ಈಗ ಮಾತನಾಡುವುದನ್ನ ನಿಲ್ಲಿಸಿದ್ದ, ಬರೀ ಕ್ರಾಸ್‌ಅನ್ನು ಮಾತ್ರ ಅಪರಾಧಿಯ ಮುಂದೆ ಅವನು ಚುಂಬಿಸಲೆಂದು ಹಿಡಿದಿದ್ದ. ಏಣಿಯ ಹತ್ತುವ ಮುಂಚೆಯೇ ಅಪರಾಧಿ ಸಾಕಷ್ಟು ಬಿಳಿಚಿಕೊಂಡಿದ್ದ; ಆದರೆ ಅವನು ಮೇಲಕ್ಕೆ ಹತ್ತಿದ ನಂತರ ಗಲ್ಲು ಸ್ಥಳದ ಮೇಲೆ ಕಾಲಿಡುತ್ತಿದ್ದಂತೆ, ಅವನ ಮುಖ ಬಿಳಿಯ ಹಾಳೆಯ ಬಣ್ಣಕ್ಕೆ ತಿರುಗಿತು, ನಿಸ್ಸಂದೇಹವಾಗಿ ಬಿಳಿಯ ಬರೆಯುವ ಕಾಗದದ ಬಣ್ಣಕ್ಕೆ. ಅವನ ಕಾಲುಗಳು ಇದ್ದಕ್ಕಿದ್ದಂತೆ ನಿಸ್ತೇಜಗೊಂಡು ಅಸಹಾಯಕ ಸ್ಥಿತಿಗೆ ಬಂದವೆಂದೆನಿಸುತ್ತದೆ, ಅವನ ಗಂಟಲಲ್ಲಿ ಉಸಿರುಕಟ್ಟಿದಂತಾಯಿತು, ನಿಮಗೆ ತಿಳಿದಿರಬಹುದು, ಒಬ್ಬ ಭಯಾನಕವಾಗಿ ಹೆದರಿದ ಸಂದರ್ಭದಲ್ಲಿ ಅವನ ಭಾವನೆಯು ಹೇಗಿದ್ದಿರಬಹುದೆಂದು, ಅದೂ ಒಬ್ಬ ತನ್ನ ಬುದ್ಧಿಶಕ್ತಿಯನ್ನ ಕಳೆದುಕೊಳ್ಳದೇ ಇದ್ದಾಗ, ಆದರೆ ಸಂಪೂರ್ಣವಾಗಿ ಅಳ್ಳಾಡುವುದಕ್ಕೂ ಕೂಡ ಶಕ್ತಿಹೀನನಾದಾಗ? ಒಂದು ಘೋರವಾದದ್ದು ತಕ್ಷಣದಲ್ಲಿಯೇ ಸಂಭವಿಸುತ್ತಿರುವಾಗ; ಅಂದರೆ ಮನೆಯೊಂದು ಒಬ್ಬನ ಮೇಲೆ ಕುಸಿದುಬೀಳುತ್ತದೆ ಅನ್ನುವ ಸಂದರ್ಭದಲ್ಲಿ; ನಿಮಗೆ ಗೊತ್ತಿರುವಂತೆಯೇ ಆ ಸಮಯದಲ್ಲಿ ಆ ಒಬ್ಬ ಕಣ್ಣುಮುಚ್ಚಿ ಕುಳಿತು ಕಾಯುತ್ತಾ ಕುಳಿತುಕೊಳ್ಳುವುದಿಲ್ಲವೇ? ಸರಿ, ಈ ರೀತಿಯ ಭಯಂಕರವಾದ ಭಾವನೆ ಅವನನ್ನು ಆವರಿಸಿದಾಗ, ಪಾದ್ರಿ ವೇಗವಾಗಿ ತನ್ನ ಕೈಲಿದ್ದ ಕ್ರಾಸ್‌ಅನ್ನು ಅವನ ತುಟಿಗಳಿಗೆ ಒಂದು ಮಾತನ್ನೂ ಆಡದೇ ಒತ್ತಿ ಹಿಡಿದ, ಅದೊಂದು ಪುಟ್ಟ ಬೆಳ್ಳಿಯ ಕ್ರಾಸ್, ಮತ್ತು ಅವನ ತುಟಿಗಳ ಮೇಲೆ ಪ್ರತಿ ಸೆಕೆಂಡಿಗೂ ಒಂದು ಬಾರಿ ಒತ್ತಿ ಹಿಡಿಯುತ್ತಲೇ ಇದ್ದ. ಕ್ರಾಸ್ ಅವನ ತುಟಿಯನ್ನ ಮುಟ್ಟಿದಾಗಲೆಲ್ಲಾ ಅವನು ತನ್ನ ಕಣ್ಣುಗಳನ್ನು ಕ್ಷಣ ಮಾತ್ರ ತೆರೆಯುತ್ತಿದ್ದ, ಅವನ ಕಾಲುಗಳು ಆ ಒಂದು ಬಾರಿ ಮಾತ್ರ ಚಲಿಸುತ್ತಿದ್ದವು, ಮತ್ತು ಆ ಸಮಯದಲ್ಲಿ ಅವನಿಗೆ ಧಾರ್ಮಿಕವಾಗಿ ಆಲೋಚನೆಗಳ್ಯಾವುದೂ ಬರದೇ ಇದ್ದರೂ, ತನಗೆ ನಂತರದಲ್ಲಿ ಯಾವುದೋ ರೀತಿಯಲ್ಲಿ ಉಪಯೋಗಕರವಾಗಬಹುದೆಂದು ಏನನ್ನೋ ಹಿಡಿದುಕೊಳ್ಳುವವನ ಹಾಗೆ, ಅವನು ಕ್ರಾಸ್‌ಅನ್ನು ಅತಿಯಾಸೆಯಿಂದ ಮತ್ತು ತ್ವರಿತತೆಯಿಂದ ಚುಂಬಿಸುತ್ತಿದ್ದ. ಅವನು ಈಗ ನಿಗದಿತ ಸ್ಥಳಕ್ಕೆ ತೆರಳಬೇಕಾಯಿತು.

“ಅಂತಹ ಗಳಿಗೆಯಲ್ಲಿ ಅಪರಾಧಿಗಳು ಮೂರ್ಛೆ ಹೋಗದೇ ಇರುವುದು ಅದೆಂತಹ ವಿಚಿತ್ರ! ಅದಕ್ಕೆ ತದ್ವಿರುದ್ಧವಾಗಿ, ಮಿದುಳು ವಿಶೇಷವಾಗಿ ಸಕ್ರಿಯವಾಗಿರುತ್ತದೆ, ಮತ್ತು ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ, ಬಹುಶಃ ಪ್ರಯಾಸದಿಂದ, ಪ್ರಯಾಸದಿಂದ ಪ್ರಯಾಸದಿಂದ- ಸಂಪೂರ್ಣ ಒತ್ತಡಕ್ಕೆ ಒಳಗಾದ ಎಂಜಿನ್ನಿನ ರೀತಿಯಲ್ಲಿ. ನಾನು ಕಲ್ಪಿಸಿಕೊಳ್ಳುವುದೇನೆಂದರೆ, ಅವರ ಮಿದುಳಿನಿಂದ ಪೂರ್ತಿಗೊಳ್ಳದೇ ಇದ್ದ ವಿಷಯಗಳ ಬಗ್ಗೆ, ವಿಚಿತ್ರವಾದ ಮತ್ತು ಪರಿಹಾಸ್ಯದಿಂದ ಕೂಡಿರುವ ಅನೇಕ ಆಲೋಚನೆಗಳು ಜೋರಾಗಿ ಮತ್ತು ವೇಗವಾಗಿ ಹೊಡೆದುಕೊಳ್ಳುತ್ತಿರುತ್ತವೆಂದು. ಇದೇ ರೀತಿ ಉದಾಹರಣೆಗೆ; ’ಆ ಮನುಷ್ಯ ನನ್ನ ಕಡೆಗೆ ನೋಡುತ್ತಿದ್ದಾನೆ, ಮತ್ತು ಅವನ ಹಣೆಯ ಮೇಲೊಂದು ನರಹುಲಿ ಇದೆ! ಮರಣದಂಡನೆಯನ್ನ ಕಾರ್ಯಗತಗೊಳಿಸುವವನ ನಿಲುವಂಗಿಯ ಒಂದು ಕೆಳಗಿನ ಗುಂಡಿಗೆ ತುಕ್ಕು ಹಿಡಿದಿದೆ!’ ಏತನ್ಮಧ್ಯೆ ಅವನು ಎಲ್ಲವನ್ನೂ ಗಮನಿಸಿ ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಅಲ್ಲಿನ ಒಂದು ಅಂಶವನ್ನು ಮಾತ್ರ ಮರೆಯಲಸಾಧ್ಯ, ಅದರ ಸುತ್ತ ಎಲ್ಲವೂ ಕೂಡ ನರ್ತನ ಮಾಡುತ್ತಿರುತ್ತದೆ; ಈ ಅಂಶದ ಕಾರಣಕ್ಕಾಗಿ ಅವನು ಮೂರ್ಛೆ ತಪ್ಪುವುದಿಲ್ಲ, ಈ ಪರಿಸ್ಥಿತಿ ಕೊನೆಯ ಕಾಲು ಸೆಕೆಂಡುಗಳವರೆಗೂ ಚಾಲ್ತಿಯಲ್ಲಿರುತ್ತದೆ, ಆಗ ಅವನ ದುರದೃಷ್ಟಕರ ಕತ್ತನ್ನ ಆ ಚೌಕದಲ್ಲಿ ಇರಿಸಲಾಗುತ್ತದೆ. ಆ ಬಲಿಪಶು ಕೇಳಿಸಿಕೊಳ್ಳುತ್ತಾ ಕಾಯುತ್ತಿರುತ್ತದೆ ಮತ್ತು ಅವನಿಗೆ ಗೊತ್ತು, ಅದೇ ಘಟ್ಟದಲ್ಲಿ, ತಾನು ಇನ್ನೇನು ಸಾಯಲಿದ್ದೇನೆ ಎಂದು, ಮತ್ತು ಮೇಲಿನಿಂದ ಬರುವ ಕಬ್ಬಿಣದ ಅಲುಗಿನ ಶಬ್ದವನ್ನ ಕೇಳಿಸಿಕೊಳ್ಳುತ್ತಾನೆ. ನಾನಲ್ಲಿ ಮಲಗಿದ್ದಿದ್ದರೆ ನಾನೂ ಖಂಡಿತವಾಗಿ ಆ ಕರ್ಕಶ ಶಬ್ದವನ್ನ ಕೇಳಿಸಿಕೊಳ್ಳುತ್ತಿದ್ದೆ, ಮತ್ತು ಅದನ್ನ ಈಗ ಹೊರಗಿನಿಂದ ಕೇಳಿಸಿಕೊಂಡೆ. ಅದನ್ನು ಕೇಳಿಸಿಕೊಳ್ಳುವುದಕ್ಕೆ ಹತ್ತನೇ ಒಂದು ಸೆಕೆಂಡುಗಳ ಸಮಯವಿದ್ದರೂ ಕೂಡ, ಖಂಡಿತವಾಗಿ ಅವನದನ್ನ ಕೇಳಿಸಿಕೊಂಡಿರುತ್ತಾನೆ. ಮತ್ತು ಈಗ ಕಲ್ಪಿಸಿಕೊಳ್ಳಿ, ತಲೆಯು ಹಾರಿ ಹೋಗುವಾಗ, ಹಾರಿಹೋಗುತ್ತಿರುವುದರ ತಲೆಯಲ್ಲಿನ್ನೂ ಕೂಡ ಪ್ರಜ್ಞೆಯು ಅಡಗಿರುತ್ತದೆ ಎಂದು ಕೆಲವು ಜನ ಘೋಷಿಸುತ್ತಾರೆ! ಸುಮ್ಮನೆ ಕಲ್ಪಿಸಿಕೊಳ್ಳಿ, ಗ್ರಹಿಸಿಕೊಳ್ಳಲೇಬೇಕಾದ ಎಂತಹ ಮಹತ್ವದ ವಿಷಯ ಇದೆಂದು! ಊಹಿಸಿಕೊಳ್ಳಿ, ಬರೀ ಐದು ಸೆಕೆಂಡುಗಳಷ್ಟು ಕಾಲ ಮಾತ್ರ ಉಳಿಯುವ ಪ್ರಜ್ಞೆಯ ಬಗ್ಗೆ!

“ಗಲ್ಲು ಸ್ಥಳವನ್ನ ಚಿತ್ರಿಸುವಾಗ ಏಣಿಯ ಮೇಲಿನ ಒಂದು ಮೆಟ್ಟಲು ಮಾತ್ರ ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಚಿತ್ರಿಸಬೇಕು. ಅಪರಾಧಿ ಅದರ ಮೇಲೆ ಆಗತಾನೇ ಕಾಲಿಡುತ್ತಿರುವಂತೆ, ಅವನ ಮುಖ ಬರೆಯುವ ಬಿಳಿಯ ಕಾಗದಷ್ಟೇ ಬಿಳಿಚಿಕೊಂಡಿರುವ ಹಾಗೆ. ಪಾದ್ರಿ ಅವನ ನೀಲಿವರ್ಣಕ್ಕೆ ತಿರುಗಿದ ತುಟಿಗಳಿಗೆ ಕ್ರಾಸ್ ಒತ್ತುತ್ತಿದ್ದಾನೆ, ಮತ್ತು ಅಪರಾಧಿ ಅದಕ್ಕೆ ಚುಂಬಿಸುತ್ತಿದ್ದಾನೆ. ಎಲ್ಲವನ್ನು ತಿಳಿಯುತ್ತಾನೆ ಮತ್ತು ನೋಡುತ್ತಾ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾನೆ. ಕ್ರಾಸ್ ಮತ್ತು ತಲೆ ಅದೇ ನಿನ್ನ ಕಲಾಕೃತಿಯ ಹೃದಯ; ಪಾದ್ರಿ ಮತ್ತು ಮರಣದಂಡನೆಯನ್ನ ಜಾರಿಗೊಳಿಸುವವ, ಅವನ ಇಬ್ಬರು ಸಹಾಯಕರುಗಳು, ಮತ್ತು ಕೆಳ ಭಾಗದಲ್ಲಿ ಕೆಲವು ತಲೆಗಳು ಮತ್ತು ಕಣ್ಣುಗಳು. ಅದೆಲ್ಲಾ ಮಂಜುಮಂಜಾಗಿ ಕಾಣುವ ಪೂರಕ ಚಿತ್ರಣ. ಇದೇ ನಿನಗೆ ಸಿಕ್ಕಿರುವ ನಿನ್ನ ಕಲಾಕೃತಿಯ ವಿಷಯ”, ಪ್ರಿನ್ಸ್ ಸ್ವಲ್ಪ ನಿಶ್ಯಬ್ದನಾಗಿ ಸುತ್ತಲೂ ನೋಡಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-4)

“ಖಂಡಿತವಾಗಿ ನೀನು ಸ್ಥಿತಪ್ರಜ್ಞ ಮನೋಭಾವದವನಲ್ಲ,” ತನಗೆ ಮಾತ್ರ ಕೇಳಿಸುವ ರೀತಿಯಲ್ಲಿ ಅಲೆಕ್ಸಾಂಡ್ರ ಗುನುಗುಟ್ಟಿದಳು.

“ಈಗ ನೀನು ನಿನ್ನ ಪ್ರೇಮ ಪ್ರಸಂಗಗಳ ಬಗ್ಗೆ ಹೇಳು,” ಸ್ವಲ್ಪ ವಿರಾಮದ ನಂತರ ಅಡಲೈಡ ಕೇಳಿದಳು.

ಪ್ರಿನ್ಸ್ ಅವಳ ಕಡೆಗೆ ಎವೆಯಿಕ್ಕದೇ ಆಶ್ಚರ್ಯದಿಂದ ದೃಷ್ಟಿಸಿ ನೋಡಿದ.

“ನಿನಗೆ ಗೊತ್ತಾ,” ಅಡಲೈಡ ಮುಂದುವರಿಸಿದಳು, “ನೀನು ಬೇಸಲ್‌ನ ಚಿತ್ರದ ಬಗ್ಗೆ ನಮಗೆ ವಿವರಿಸುವುದು ಇನ್ನೂ ಬಾಕಿ ಇದೆ; ಆದರೆ ಅದಕ್ಕಿಂತ ಮೊದಲು ನೀನು ಹೇಗೆ ಒಬ್ಬಳ ಪ್ರೇಮದಲ್ಲಿ ಸಿಲುಕಿಕೊಂಡೆ ಅನ್ನುವುದರ ಬಗ್ಗೆ ನಾನು ಕೇಳಲು ಇಷ್ಟ ಪಡುತ್ತೇನೆ. ಸತ್ಯ ಸಂಗತಿಯನ್ನ ನಿರಾಕರಿಸಬೇಡ. ಏಕೆಂದರೆ ನೀನದನ್ನ ಮಾಡಿದ್ದೀಯ. ಅದಲ್ಲದೇ ನೀನು ಏನನ್ನು ಮತ್ತು ಯಾವುದರ ಬಗ್ಗೆ ಹೇಳಿದರೂ ಅದನ್ನ ತತ್ವಶಾಸ್ತ್ರಜ್ಞನಂತೆ ಹೇಳಬೇಡ.”

“ನೀನ್ಯಾಕೆ ನಿನ್ನ ಕಥೆಗಳನ್ನ ಹೇಳಿದ ನಂತರ ಅದರ ಬಗ್ಗೆ ನಾಚಿಕೆಪಟ್ಟವನಂತೆ ಆಡುತ್ತೀಯ?” ಅಗ್ಲಾಯ ಕೇಳಿದಳು.

“ನೀನು ಎಷ್ಟೊಂದು ಪೆದ್ದಳಂತೆ ಮಾತನಾಡುತ್ತೀಯ!” ಮೇಡಮ್ ಎಪಾಂಚಿನ್ ಕೊನೆಯಲ್ಲಿ ಮಾತನಾಡಿದವಳ ಕಡೆಗೆ ಕೋಪಗೊಂಡು ಕೇಳಿದಳು.

“ಹೌದು ಅದೊಂದು ಬುದ್ದಿವಂತಿಕೆಯ ಅಭಿಪ್ರಾಯವಲ್ಲ,” ಅಲೆಕ್ಸಾಂಡ್ರ ಹೇಳಿದಳು.

“ಅವಳ ಮಾತುಗಳಿಗೆ ಪ್ರಾಶಸ್ತ್ಯ ಕೊಡಬೇಡ ಪ್ರಿನ್ಸ್,” ಮೇಡಮ್ ಎಪಾಂಚಿನ್ ಹೇಳಿದಳು, “ಅವಳು ತುಂಟಾಟಕ್ಕೋಸ್ಕರ ಕೆಲವು ಮಾತುಗಳನ್ನಾಡುತ್ತಾಳೆ. ಅವರ ಯಾವುದೇ ಅವಿವೇಕದ ಮಾತುಗಳನ್ನ ಗಂಭೀರವಾಗಿ ಪರಿಗಣಿಸಬೇಡ, ಅವರಾಡುವುದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಅವರು ಕಾಟ ಕೊಡುವುದನ್ನ ಇಷ್ಟಪಡುತ್ತಾರೆ, ಆದರೆ ಅವರೆಲ್ಲಾ ನಿನ್ನನ್ನು ಇಷ್ಟಪಡುತ್ತಾರೆ. ನಾನದನ್ನ ಅವರ ಮುಖಗಳಲ್ಲಿ ಕಾಣುತ್ತಿದ್ದೇನೆ, ಅವರ ಮುಖಭಾವವನ್ನ ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ.”

“ನನಗೂ ಕೂಡ ಅವರ ಮುಖಗಳ ಬಗ್ಗೆ ಗೊತ್ತು,” ಪ್ರಿನ್ಸ್ ಹೇಳಿದ, ಪದಗಳಿಗೆ ವಿಶಿಷ್ಟವಾದ ಒತ್ತನ್ನು ನೀಡುತ್ತಾ.

“ಅದು ಹೇಗೆ?” ಅಡಲೈಡ ಕುತೂಹಲದಿಂದ ಕೇಳಿದಳು.

“ನಮ್ಮ ಮುಖಗಳ ಬಗ್ಗೆ ನಿನಗೇನು ಗೊತ್ತಿದೆ,” ಇನ್ನಿಬ್ಬರೂ ಒಟ್ಟಿಗೆ ಉದ್ಗರಿಸಿದರು.

ಆದರೆ ಪ್ರಿನ್ಸ್ ಮೌನದಿಂದ ಮತ್ತು ಗಂಭೀರತೆಯಿಂದ ಇದ್ದ. ಎಲ್ಲರೂ ಅವನ ಉತ್ತರದ ನಿರೀಕ್ಷೆಯಲ್ಲಿದ್ದರು.

“ಅದನ್ನು ನಂತರ ಹೇಳುತ್ತೇನೆ,” ಪ್ರಶಾಂತತೆಯಿಂದ ಹೇಳಿದ.

“ಆಹಾ, ನೀನೀಗ ನಮ್ಮ ಕುತೂಹಲವನ್ನ ಕೆರಳಿಸಬೇಕೆಂದಿದ್ದೀಯ!” ಅಗ್ಲಾಯ ಹೇಳಿದಳು. “ಅದರ ಬಗ್ಗೆ ಅದೆಷ್ಟು ಭಯಂಕರವಾದ ಗಂಭೀರತೆಯಿಂದ ನೀನಿದ್ದೀಯ ನೋಡು!”

“ಸರಿ ಹಾಗಾದರೆ,” ಮಧ್ಯೆ ಅಡಲೈಡ ನುಡಿದಳು, “ನೀನು ಅಷ್ಟೊಂದು ನಿಖರವಾಗಿ ಮುಖಗಳನ್ನ ಓದಬಲ್ಲವನಾಗಿದ್ದರೆ, ನೀನು ಯಾರನ್ನೋ ಪ್ರೇಮಿಸುತ್ತಿದ್ದಿರಬೇಕು, ಈಗ ಬಾ; ನಾನು ಊಹಿಸಿದ, ನಿನ್ನ ಆ ರಹಸ್ಯವನ್ನ ನಮಗೆ ತಿಳಿಸು!”

“ನಾನು ಎಂದೂ ಯಾರನ್ನೂ ಪ್ರೀತಿಸಿಲ್ಲ,” ಮೊದಲಿನಂತೆಯೇ ಪ್ರಶಾಂತತೆಯಿಂದ ಮತ್ತು ಗಂಭೀರವಾಗಿ ಪ್ರಿನ್ಸ್ ಹೇಳಿದ. “ನಾನು ಬೇರೇ ರೀತಿಯಲ್ಲಿಯೇ ಸಂತೋಷವಾಗಿದ್ದೆ.”

“ಹೇಗೆ ಹೇಗೆ?”

“ಸರಿ, ನಾನು ನಿಮಗೆ ಹೇಳುತ್ತೇನೆ,” ಸ್ಪಷ್ಟವಾಗಿ ಸ್ವಪ್ನಲೋಕದಲ್ಲಿ ಮಗ್ನನಾದವನಂತೆ ಪ್ರಿನ್ಸ್ ಹೇಳಿದ.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...