Homeಕರ್ನಾಟಕಶ್ರದ್ಧಾಂಜಲಿ; ಕಾಮ್ರೆಡ್ ಲಿಂಗಪ್ಪ ಎಂಬ ಪ್ರತಿಭಟನೆಯ ದನಿ

ಶ್ರದ್ಧಾಂಜಲಿ; ಕಾಮ್ರೆಡ್ ಲಿಂಗಪ್ಪ ಎಂಬ ಪ್ರತಿಭಟನೆಯ ದನಿ

- Advertisement -
- Advertisement -

ಕಾಮ್ರೆಡ್ ಲಿಂಗಪ್ಪ ತೊಂಭತ್ತೆಂಟು ವರ್ಷ ತುಂಬು ಜೀವನ ನಡೆಸಿ ತೀರಿಕೊಂಡಿದ್ದಾರೆ. ಪ್ರತಿಭಟನೆಯ ದನಿಯೆಂದು ಶಿವಮೊಗ್ಗದ ಜನತೆ ಯಾವಾಗಲೂ ನೆನೆಸುವ ದನಿ ಈ ಲಿಂಗಪ್ಪನವರದಾಗಿತ್ತು.

ತುಮಕೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿ ಬಾಲ್ಯದಲ್ಲೇ ಬೊಂಬಾಯಿ ಸೇರಿಕೊಂಡು ಅಲ್ಲಿ ಹೋಟೆಲಿನಲ್ಲಿ ಕೆಲಸ ಮಾಡುತ್ತ, ಕಾರ್ಮಿಕ ಚಳವಳಿಗಳಲ್ಲಿ ಭಾಗವಹಿಸುತ್ತ ಬೆಳೆದ ಲಿಂಗಪ್ಪ ಟ್ರೇಡ್ ಯೂನಿಯನ್ ಲೀಡರಾದರು. ಆ ನಂತರ ಶಿವಮೊಗ್ಗಕ್ಕೆ ಬಂದು ಅಂದಿನ ಶಿವಮೊಗ್ಗದ ಲೀಡರುಗಳಾದ ಎಚ್ಚರಿಕೆ ನಾಗೇಂದ್ರಪ್ಪ, ಪುಟ್ಟಪ್ಪ, ಮಹೇಶ್ವರಪ್ಪ ಮುಂತಾದವರ ಜೊತೆ ಸೇರಿಕೊಂಡು ಹೋರಾಟಕ್ಕಿಳಿದರು. ಉಕ್ಕಿನ ದೇಹದ ಲಿಂಗಪ್ಪ ಕೆಂಪು ಟೋಪಿ, ಅದೇ ಬಣ್ಣದ ಬೂಟು ಸಾಕ್ಸು ಧರಿಸುತ್ತಿದ್ದರು; ತಾವು ಓಡಾಡುವ ಲೂನಾದ ಬಣ್ಣವೂ ಕೆಂಪು. ತೊಂಬತ್ತೆಂಟು ವರ್ಷವಾದರೂ ತಲೆಕೂದಲಿಗೆ ಡೈಯಿಂಗ್ ಮಾಡಿಕೊಂಡು ಸುತ್ತಾಡುತ್ತಿದ್ದರು. ಎಣ್ಣೆಗೆಂಪಿನ ಲಿಂಗಪ್ಪ ಆರಂಭದಲ್ಲಿ ಮಾಡಿಕೊಂಡ ಡೈಯಿಂಗ್ ಕಪ್ಪುಗಟ್ಟುತ್ತಾ ವಿಭಿನ್ನವಾಗಿ ಕಾಣುತ್ತಿದ್ದರು. ಇವರ ತರತರದ ಫೋಟೋಗಳು ಕಡಿದಾಳು ಶಾಮಣ್ಣನವರ ಬಳಿ ಇವೆ.

ಶಾಮಣ್ಣನವರು ಮತ್ತು ಲಿಂಗಪ್ಪ ಗೆಳೆಯರು. ಲಂಕೇಶ್ ಪತ್ರಿಕೆ ಹೊರಬಂದ ಆರಂಭದಲ್ಲಿ ಅದರ ಪ್ರತಿಭಟನೆಯ ದನಿಗೆ ಮಾರುಹೋದ ಲಿಂಗಪ್ಪ ತಮ್ಮ ಪ್ರಾಂತ್ಯದವರೇ ಆದ ಲಂಕೇಶರನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಲು ಬಸವನಗುಡಿಯಲ್ಲಿದ್ದ ಪತ್ರಿಕೆ ಆಫೀಸಿಗೆ ಹೋದರು. ಲಂಕೇಶ್ ಆಫೀಸಿನ ಬಾಗಿಲಲ್ಲಿದ್ದ ಹುಡುಗನಿಗೆ “ಹೋಗಿ ಲಂಕೇಶ್‌ಗೇಳು, ಶಿವಮೊಗ್ಗದಿಂದ ಕಾಮ್ರೆಡ್ ಲಿಂಗಪ್ಪ ಬಂದವುರೆ ಅಂತ” ಎಂದು ಹೇಳಿಕಳಿಸಿದರು. ಆ ಹುಡುಗ ಮಾಹಿತಿ ತಲುಪಿಸಿದ ಕೂಡಲೇ ಲಂಕೇಶ್ “ಒಳಗಡೆ ಕಳಿಸಬೇಡ, ಈಗವುರು ನೋಡಕ್ಕಾಗಲ್ಲ ಅಂತ ಹೇಳು ಅಂದ್ರು”. ಆತ ಬಂದು ಹಾಗೇ ಒಪ್ಪಿಸಿದ. ಸಿಟ್ಟು ಬಂದ ಲಿಂಗಪ್ಪ, “ಓಹೋ ನೀನೇನು ಮಹಾ ಪತ್ರಕರ್ತನೋ, ನನ್ನನ್ನ ನೋಡಕ್ಕಾಗಲವ ನಿನಗೆ, ನಾನ್ಯಾರು ಅಂತ ಗೊತ್ತಿಲ್ಲ ನಿನಿಗೆ. ನಿನ್ನಂಥೋರ ಭಾಳ ಜನ ನೋಡಿದ್ದಿನಿ” ಎಂದು ಜೋರು ಗಂಟಲಿನಿಂದ ಕೂಗಾಡುತ್ತ ಬಂದರು. ಶಿವಮೊಗ್ಗಕ್ಕೆ ಬಂದವರು ಕ್ರಾಂತಿಭಗತ್ ಎಂಬ ಪತ್ರಿಕೆಯಲ್ಲಿ ಲಂಕೇಶರಿಗೆ ಜೋರು ಮಾಡಿ ಬಂದೆ ಎಂದು ಬರೆದುಕೊಂಡರು.

ಲಿಂಗಪ್ಪ ಪತ್ರಕರ್ತರಾಗಿದ್ದರು. ಸಾಮಾನ್ಯ ಜನರ ಸಮಸ್ಯೆ ಹಿಡಿದು ಜಿಲ್ಲಾಧಿಕಾರಿ ಕಚೇರಿ, ತಾಲೂಕೂ ಆಫೀಸು ತಿರುಗುತ್ತಿದ್ದರು. ತಾವು ಪ್ರಿಂಟ್ ಮಾಡಿದ ಪತ್ರಿಕೆಯನ್ನು ತಾವೇ ಹಂಚುತ್ತ ಅಧಿಕಾರಿಯ ಮುಂದೆ ಪತ್ರಿಕೆ ಎಸೆದು ಓದ್‌ಕಳಯ್ಯ ಎನ್ನುತ್ತಿದ್ದರು. ಶಿವಮೊಗ್ಗಕ್ಕೆ ಬಂದ ಎ.ಸಿ, ಡಿ.ಸಿ, ತಹಸೀಲ್ದಾರ್ ಯಾರೇ ಅಧಿಕಾರಿಗಳಿರಲಿ, ಯಾರನ್ನೇ ಮರೆತರೂ ಲಿಂಗಪ್ಪನನ್ನು ಮರೆತಿರಲಾರರು. ಏಕೆಂದರೆ ಅವರು ಒಳ್ಳೆಯವರಾಗಿದ್ದರೆ ಸರಿ, ಇಲ್ಲವಾದರೆ ಅವರ ಜನ್ಮ ಜಾಲಾಡಿರುತ್ತಿದ್ದರು. ಈ ತಹಸೀಲ್ದಾರನನ್ನ ವರ್ಗ ಮಾಡುಸ್ತಿನಿ, ಡಿ.ಸಿ ವಿರುದ್ಧ ತನಿಖೆಗೆ ಲೋಕಾಯುಕ್ತಕ್ಕೆ ಬರೆದಿದ್ದಿನಿ ಎಂದುಕೊಂಡು ಸುತ್ತುತ್ತಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

ಜಿಲ್ಲೆಯ ಎಲ್ಲ ರಾಜಕಾರಣಿಗಳಿಗೂ ಕಾಮ್ರೆಡ್ ಲಿಂಗಪ್ಪ ಗೊತ್ತಿದ್ದ ವ್ಯಕ್ತಿ. ಅವರು ಪ್ರೆಸ್‌ಮೀಟಿಗೆ ಬಂದರಂತೂ ಲಿಂಗಪ್ಪನವರ ಪ್ರಶ್ನೆಗೆ ಉತ್ತರ ಕೊಡುವರಷ್ಟರಲ್ಲಿ ಉಳಿದ ಪತ್ರಕರ್ತರ ಪ್ರಶ್ನೆ ಹಾಗೇ ಉಳಿಯುತ್ತಿದ್ದವು. ಯಾವ ಮಂತ್ರಿಯ ಬಳಿ ಯಾವ ದೂರು ಹೇಳಬೇಕು, ಯಾವ ಅಧಿಕಾರಿಯ ಬಳಿ ಯಾವ ಸಮಸ್ಯೆ ಎತ್ತಬೇಕೆಂಬ ಅರಿವು ಲಿಂಗಪ್ಪನವರಿಗಿರಲಿಲ್ಲ. ಊರ ಚರಂಡಿಗಳ ವಿಷಯ, ಪಾರ್ಕುಗಳ ವಿಷಯ, ಸೋಮಾರಿ ಅಧಿಕಾರಿಗಳ ವಿಷಯ ಇವುಗಳು ಎಲ್ಲರನ್ನು ಪ್ರಶ್ನೆ ಮಾಡುವ ಸಂಗತಿಗಳಾಗಿದ್ದವು ಅವರಿಗೆ. ಬಂಗಾರಪ್ಪ, ಲಿಂಗಪ್ಪ ಬಂದ ಕೂಡಲೇ “ಹೇಳಿ ಲಿಂಗಪ್ಪ ನಿಮ್ಮ ಪ್ರಶ್ನೆಗಳು ಮುಗುದ ಮ್ಯಾಲೆ ಮಾತಾಡ್ತಿನಿ” ಎನ್ನುತ್ತಿದ್ದರು. ಪಟೇಲರು ಬಂದಾಗ, ಅವರು ಮುಖ್ಯಮಂತ್ರಿಯಾಗಿದ್ದರೂ ಲಿಂಗಪ್ಪನ ದೃಷ್ಟಿಯಲ್ಲಿ ಅವರು ಕೇವಲ ಪಟೇಲರಾಗಿದ್ದರು. ಆದ್ದರಿಂದ ಅವರ ಕೈಗೆ ಪತ್ರಿಕೆ ಕೊಟ್ಟ ಲಿಂಗಪ್ಪ ಅದನ್ನು ಓದಲು ಒತ್ತಾಯ ಮಾಡಿದರು. ಲಿಂಗಪ್ಪನವರನ್ನು ಪೂರ್ಣ ಅರ್ಥಮಾಡಿಕೊಂಡಿದ್ದ ಪಟೇಲರು ಪತ್ರಿಕೆ ಓದುವಂತೆ ನಟಿಸಿ “ಏ ಲಿಂಗ ಇದೇನಲೆ ಕನ್ನಡದ ಕೊಲೆ ಮಾಡ್ತಿಯಲ್ಲೊ ಕಾಗುಣಿತ ಕಲ್ತಗಳಲೆ” ಎಂದು ಗದರಿದರು. ಆಗ ಲಿಂಗಪ್ಪ ಏನೂ ಬೇಸರ ಮಾಡಿಕೊಳ್ಳದೆ, ಅದ್ಯಲ್ಲ ಕಾಮನ್, ಪತ್ರಿಕೆ ತಂದಾಗ ಪ್ರಿಂಟ್ ಮಿಸ್ಟಿಕ್ ಆಯ್ತದೆ, ವಿಷಯ ಮುಖ್ಯ ಎಂದಿದ್ದರು. ಯಾವುದೇ ಪ್ರೆಸ್ ಮೀಟಿಗೆ ಲಿಂಗಪ್ಪ ಬಂದರು ಅವರ ಪ್ರಶ್ನೆ ಮತ್ತು ಅವರು ಕೇಳಿಸಿಕೊಳ್ಳದ ಉತ್ತರದಿಂದ ಕೊನೆಯಾಗುತ್ತಿದ್ದವು. ಹಾಗಾಗಿ ಶಿವಮೊಗ್ಗದ ಪತ್ರಕರ್ತರಲ್ಲೇ ವಿಭಿನ್ನವಾಗುಳಿದ ಲಿಂಗಪ್ಪ ಒಂದರ್ಥದಲ್ಲಿ ಪತ್ರಕರ್ತರಷ್ಟೇ ಆಗಿರಲಿಲ್ಲ. ಅದೊಂದು ಜನಸಾಮಾನ್ಯರ ದೂರಿನ ದನಿಯಾಗಿತ್ತು.

ಯಾವ ರಾಜಕಾರಣಿಯನ್ನು ಎಂದೂ ಓಲೈಸಿದವರಲ್ಲ ಲಿಂಗಪ್ಪ. ಎಲ್ಲರಿಗೂ ಒಂದೇ ದೊಣ್ಣೆಯಿಂದ ಬೀಸುತ್ತಿದ್ದ ಅವರನ್ನು ಎಲ್ಲರೂ ಸಹಿಸಿಕೊಂಡು ಸಾಗಹಾಕುತ್ತಿದ್ದರು. ಲಿಂಗಪ್ಪ ಎಲ್ಲ ರಾಜಕಾರಣಿಗಳ ಬಳಿ ಕೂಗಾಡಿದರೂ ಕಾಗೋಡು ತಿಮ್ಮಪ್ಪನವರ ಎದುರು ಹೆಚ್ಚು ಕೆರಳಿ ಮಾತನಾಡುತ್ತಿರಲಿಲ್ಲ. ಒಮ್ಮೆ ಕೊಣಂದೂರಿನಲ್ಲಿ ತಿಮ್ಮಪ್ಪ ಗೋಪಾಲಗೌಡರನ್ನು ಕುರಿತು ಮಾತನಾಡುತ್ತಿದ್ದರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಗೋಪಾಲಗೌಡರ ಕಟುಮಾತುಗಳಿಗೆ ಅಂಜಿ ಸರಿಯಾಗಿ ನಡೆದುಕೊಳ್ಳುತ್ತಿದ್ದರು ಎಂದರು. ಇದರಿಂದ ಸ್ಫೂರ್ತಿಗೊಂಡ ಲಿಂಗಪ್ಪ ಧಿಗ್ಗನೆದ್ದು “ಅದು ಸೋಷಲಿಸ್ಟರ ದನಿಗಿದ್ದ ಶಕ್ತಿ” ಎಂದರು. ತಿಮ್ಮಪ್ಪ ಲಿಂಗಪ್ಪನ ಕಡೆ ಕೈ ತೋರಿ “ಮಂಗ” ಎಂದರು. ಸಭೆ ಒಳಗೊಳಗೆ ನಕ್ಕಿತು. ಬಹುಶಃ ಅಂದಿನಿಂದ ಲಿಂಗಪ್ಪ ತಿಮ್ಮಪ್ಪರೆದುರು ತಮ್ಮ ಧ್ವನಿಯ ವ್ಯಾಲ್ಯೂಂ ಕಡಿಮೆ ಮಾಡಿಕೊಂಡರು.

ತೊಂಭತ್ತೆಂಟು ವರ್ಷವಾದರೂ ಗೋಪಾಳ ಬಡಾವಣೆಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ, ನನ್ನ ಮನೆಯ ಸಾಲಿನ ನಾಲ್ಕನೆ ಮನೆಯಲ್ಲಿದ್ದ ತನ್ನ ಅನಾದಿಕಾಲದ ಗೆಳತಿಯ ಮನೆಗೆ ಬರುತ್ತಿದ್ದ ಲಿಂಗಪ್ಪನವರಿಂದ ಕನಿಷ್ಟ ಎರಡು ದಶಕ ತಪ್ಪಿಸಿಕೊಂಡು ತಿರುಗುತ್ತಿದ್ದೆ ನಾನು. ಅಕಸ್ಮಾತ್ ಸಿಕ್ಕರೆ ಲಿಂಗಪ್ಪನವರ ಸಾಹಸ ಕೇಳಿ ಮುಂದೆ ಹೋಗಬೇಕಿತ್ತು. ಹಿರಿಯ ಜೀವ ಮತ್ತು ಪತ್ರಕರ್ತನ ಮಾತನ್ನು ಕೇಳಿಸಿಕೊಳ್ಳಲೇಬೇಕಿತ್ತು. ಜಿಲ್ಲೆಯಲ್ಲಿ ಅವರು ಮುಂದೆ ತಂದ ರಾಜಕಾರಣಿಗಳು, ಕಲಾವಿದರು, ಕಾರ್ಪೊರೇಟರುಗಳು, ಪಾರ್ಕು, ಚರಂಡಿ, ಕಟ್ಟಡಗಳು, ಪ್ರೆಸ್ ಕಾಲೋನಿ ಇವುಗಳ ವಿಷಯವನ್ನು ಒಂದು ಸಾವಿರ ಬಾರಿಯಾದರೂ ಕೇಳಿದ್ದೇನೆ. ನನ್ನ ಮನೆಯ ಮುಂದಿದ್ದ ಜಾಗವನ್ನು ನೀಟಾದ ಪಾರ್ಕು ಮಾಡಿಸಿ ಅದರ ಉದ್ಘಾಟನೆಗೆ ಎಡೂರಪ್ಪನಿಂದ ಹಿಡಿದು ಊರಿನ ಮುನ್ಸಿಪಾಲಿಟಿ ಮೆಂಬರ್‌ವರೆಗೆ ಹೆಸರುಗಳನ್ನು ಉದ್ಘಾಟನಾ ಶಿಲೆಯ ಮೇಲೆ ಕೆತ್ತಿಸಿ ತಂದೇಬಿಟ್ಟರು. ಯಾವ ರಾಜಕಾರಣಿಯೂ ಬರಲಿಲ್ಲ. ಲಿಂಗಪ್ಪ ಅವಾಚ್ಯ ಮಾತುಗಳಿಂದ ಬೈದು ಗಾರೆಕೆಲಸದವರಿಂದ ಶಿಲಾಫಲಕ ನಿಲ್ಲಿಸಿ ಹೋದರು.

ಶಿವಮೊಗ್ಗದ ಸರಕಾರಿ ಯಂತ್ರ ಲಿಂಗಪ್ಪನವರ ದನಿಗೆ ಹೆದರುತ್ತಿತ್ತು. ಹಾಗಾಗಿ ಅವರು ಬಂದ ಕೂಡಲೇ ಕೆಲಸ ಮುಗಿಸಿ ಕಳುಹಿಸುತ್ತಿದ್ದರು. ಈ ಅವರ ಗುಣದ ಕಾರಣಕ್ಕಾಗಿಯೇ ದಿನ ಬೆಳಗಾಗುವುದರಲ್ಲಿ ಪಾರ್ಕು ರೆಡಿಯಾಗಿ ಅದಕ್ಕೆ ಲೈಟು, ಕಾರಂಜಿ ಮತ್ತು ವಾಕ್ ಮಾಡುವ ದಾರಿ ಎಲ್ಲ ರೆಡಿಯಾದವು. ಆ ಪಾರ್ಕಿಗೆ ಅವರ ಹೆಸರಿಡುವುದು ಸೂಕ್ತ. ಪ್ರತಿಭಟನೆಗಳಿಲ್ಲದಿದ್ದರೆ ಯಾವ ಕೆಲಸವನ್ನು ಮಾಡದೆ ಆರಾಮವಾಗಿರುವ ನಮ್ಮ ಸರ್ಕಾರಿ ಕರ್ಮಚಾರಿಗಳು ಲಿಂಗಪ್ಪನ ದನಿ ಮುಳುಗಿ ಹೋದ ಕಾರಣಕ್ಕೆ ನಿರುಮ್ಮಳವಾಗಿರಬಲ್ಲರು. ಹಾಲಿ ಶಿವಮೊಗ್ಗದ ಪತ್ರಕರ್ತರಿಗೆ ಹೋಲಿಸಿದರೆ ಎಂದೂ ಭ್ರಷ್ಟರಾಗದ ಲಿಂಗಪ್ಪ ಆ ಕಾರಣಕ್ಕಾಗಿಯೂ ಜೋರು ದನಿಯಲ್ಲಿ ಕೂಗಾಡುತ್ತಿದ್ದರು. ಇನ್ನ ಆ ಕೂಗು ಕೇಳಲಾರದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...