Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-2)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-2)

- Advertisement -
- Advertisement -

ಪ್ರಿನ್ಸ್ ಯೋಚಿಸುತ್ತಾ ನಡೆದುಕೊಂಡು ಹೋದ. ತನಗೆ ವಹಿಸಿದ ಕೆಲಸ ಅವನಿಗೆ ಇಷ್ಟವಿರಲಿಲ್ಲ ಹಾಗೂ ಅಗ್ಲಾಯಳಿಗೆ ಗಾನಿಯಾ ಸಂದೇಶವನ್ನ ಕಳುಹಿಸಿದ ಸಂಗತಿಯೇ ಅವನಿಗೆ ಇಷ್ಟವಾಗಲಿಲ್ಲ; ಅವರಿದ್ದ ಕೋಣೆಯಿಂದ ಎರಡು ರೂಮುಗಳ ಆಚೆ ಅವನಿದ್ದಾಗ, ಏನನ್ನೋ ನೆನಪಿಸಿಕೊಂಡವನಂತೆ ಅಲ್ಲಿಯೇ ನಿಂತುಕೊಂಡ, ಕಿಟಕಿಯ ಬಳಿಗೆ ಬೆಳಕಿದ್ದ ಕಡೆಗೆ ಹೋದ, ತನ್ನ ಕೈಯ್ಯಲ್ಲಿದ್ದ ಭಾವಚಿತ್ರವನ್ನ ಅವಲೋಕಿಸಲು ಶುರುಮಾಡಿದ.

ಮೊದಲ ಬಾರಿಗೆ ನೋಡಿದಾಗ ಆ ಭಾವಚಿತ್ರ ಅವನ ಮೇಲೆ ಉಂಟುಮಾಡಿದ್ದ ಪ್ರಭಾವ ಅವನನ್ನಿನ್ನೂ ಬಿಟ್ಟುಹೋಗಿರಲಿಲ್ಲ; ನಸ್ಟಾಸಿಯಾ ಫಿಲಿಪೋವ್ನಾಳ ಮುಖದ ಒಂದು ರೀತಿಯ ನಿಗೂಢತೆಯನ್ನು ಪತ್ತೆಹಚ್ಚಲು ಕಾತರನಾಗಿದ್ದ. ಅದು ಭಾಗಶಃ ಅವನನ್ನು ಮಂತ್ರಮುಗ್ಧನನ್ನಾಗಿಸಿದ ಅವಳ ಅದ್ಭುತವಾದ ಸೌಂದರ್ಯದ ಕಾರಣದಿಂದ ಮತ್ತು ಭಾಗಶಃ ಬೇರೆಯದೇ ಏನೋ. ಅದು ಅಪಾರವಾದ ಅವಳಲ್ಲಿನ ಹೆಮ್ಮೆಯನ್ನು ಮತ್ತು ದ್ವೇಷದ ಭಾವನೆ ತುಂಬಿದ್ದ ತಿರಸ್ಕಾರದ ನೋಟವನ್ನು ಸೂಚಿಸುತ್ತಿತ್ತು ಮತ್ತು ಏನೋ ಒಂದು ಅಂತರಂಗದ ಭಾವನೆಯನ್ನ ತೋಡಿಕೊಳ್ಳುತ್ತಿರುವಂತಹ ಮುಖಭಾವ ಮತ್ತು ಸಂಪೂರ್ಣತೆಯಿಂದ ಕೂಡಿದಂತಹ ಸರಳತೆಯ ಸ್ವಭಾವ ಕೂಡ ಕಾಣುತ್ತಿತ್ತು. ಆ ಸುಂದರ ಮುಖವನ್ನ ನೋಡುತ್ತಿದ್ದಂತೆಯೇ ಈ ಭಿನ್ನತೆಗಳು ಅವನ ಹೃದಯದಲ್ಲಿ ಅವಳ ಬಗ್ಗೆ ಆಳವಾದ ಸಹಾನುಭೂತಿಯನ್ನ ಹುಟ್ಟಿಸಿತು, ಕಣ್ಣುಕೋರೈಸುವ ಆ ಭಾವಚಿತ್ರದ ಸುಂದರ ರೂಪ ಬಹುತೇಕ ಸಹಿಸಲು ಅಸಾಧ್ಯವಾಗಿತ್ತು, ಈ ಬಿಳಚಿಕೊಂಡ ತೆಳ್ಳನೆಯ ಮುಖ, ಉರಿಯುತ್ತಿರುವಂತೆ ತೋರುವ ತನ್ನ ಕಣ್ಣುಗಳೊಂದಿಗೆ; ಅದೊಂದು ವಿಸ್ಮಯಕರವಾದಂತಹ ಸೌಂದರ್ಯ.

ಪ್ರಿನ್ಸ್ ಅದರ ಕಡೆಗೆ ಒಂದೆರಡು ನಿಮಿಷಗಳ ಕಾಲ ನೆಟ್ಟ ದೃಷ್ಟಿಯಿಂದ ನೋಡಿದ ಮತ್ತು ತನ್ನ ಸುತ್ತ ಒಮ್ಮೆ ಅವಲೋಕಿಸಿದ; ಆತುರದಿಂದ ಆ ಭಾವಚಿತ್ರವನ್ನ ತನ್ನ ತುಟಿಗಳ ಬಳಿಗೆ ಎತ್ತಿಹಿಡಿದ. ಒಂದು ನಿಮಿಷದ ನಂತರ ಅವರೆಲ್ಲಾ ಇರುವ ಕೋಣೆಯ ಬಾಗಿಲ ಬಳಿಗೆ ಹೋದಾಗ, ಅವನ ಮುಖ ಸಾಕಷ್ಟು ನಿರ್ಭಾವುಕವಾಗಿತ್ತು. ಅವನು ಬಾಗಿಲ ಬಳಿಗೆ ಹೋಗುತಿದ್ದಂತೆಯೇ, ಆಚೆ ಬರುತ್ತಿದ್ದ ಅಗ್ಲಾಯಳನ್ನು ಭೇಟಿಮಾಡಿದ.

“ಗವ್ರಿಲ ಅರ್ಡಲಿಯೊನೊವಿಚ್ ಇದನ್ನ ನಿನಗೆ ಕೊಡಲು ನನ್ನನ್ನು ಬೇಡಿಕೊಂಡ” ಆ ಕಾಗದವನ್ನು ಅವಳ ಕೈಗೆ ನೀಡುತ್ತಾ ಹೇಳಿದ.

ಅಗ್ಲಾಯ ಅಲ್ಲಿಯೇ ನಿಂತು, ಕಾಗದವನ್ನ ತೆಗೆದುಕೊಂಡು ಪ್ರಿನ್ಸ್‌ನ ಕಣ್ಣುಗಳನ್ನ ವಿಚಿತ್ರವಾಗಿ ನೋಡಿದಳು. ಅವಳ ಮುಖದಲ್ಲಿ ಯಾವುದೇ ಗೊಂದಲಗಳಿರಲಿಲ್ಲ; ಬಹುಶಃ ಅವಳಿಗೆ ಸ್ವಲ್ಪ ಆಶ್ಚರ್ಯ ಮಾತ್ರ ಉಂಟಾಯಿತು, ಆದರೆ ಅವಳ ಪ್ರತಿಕ್ರಿಯೆ ಅಷ್ಟಕ್ಕೇ ಸೀಮಿತವಾಗಿತ್ತು. ಈ ವಿಷಯದಲ್ಲಿ ಗಾನಿಯಾ ಜೊತೆಯಲ್ಲಿನ ಸಂಬಂಧದ ಬಗ್ಗೆ ವಿವರಣೆ ನೀಡೆಂದು ಪ್ರಿನ್ಸ್‌ಗೆ ಸವಾಲು ಹಾಕಿದಂತಿತ್ತು ಅವಳ ನೋಟ. ಆದರೆ ಅವಳ ಹೊರನೋಟ ಸಂಪೂರ್ಣವಾಗಿ ನಿರಾತಂಕವಾಗಿದ್ದು ಸಮಚಿತ್ತತೆಯಿಂದಿತ್ತು, ಮತ್ತು ದೊಡ್ಡಸ್ತಿಕೆಯಿಂದ ಕೂಡಿತ್ತು.

ಅವರು ಒಂದೆರಡು ಕ್ಷಣಗಳ ಕಾಲ ಹಾಗೆಯೇ ಅಲ್ಲಿ ಒಬ್ಬರನ್ನೊಬ್ಬರು ಎದುರಿಸುತ್ತಾ ನಿಂತರು. ನಿಧಾನವಾಗಿ ಅವಳ ಮುಖದ ಮೇಲೆ ಮಸುಕಾದ ನಗುವೊಂದು ಹಾದುಹೋಯಿತು ಮತ್ತು ಅವಳ ಒಂದು ಮಾತನ್ನೂ ಆಡದೇ ಅವನನ್ನು ದಾಟಿಹೋದಳು.

ಮೇಡಮ್ ಎಪಾಂಚಿನ್, ನಸ್ಟಾಸಿಯ ಫಿಲಿಪೊವ್ನಳ ಭಾವಚಿತ್ರವನ್ನ ಕೈಯ್ಯಲ್ಲಿ ದೂರಕ್ಕೆ ಹಿಡಿದುಕೊಂಡು ವಿಮರ್ಶಾತ್ಮಕವಾಗಿ ನೋಡುತ್ತಾ ಸ್ವಲ್ಪ ಹೊತ್ತು ಪರಿಶೀಲಿಸಿದಳು.

“ಹೌದು ಅವಳು ಸುಂದರವಾಗಿದ್ದಾಳೆ,” ಕೊನೆಗೂ ಅವಳ ಬಾಯಿಂದ ಬಂದಿತು, “ತುಂಬಾ ಸುಂದರವಾಗಿದ್ದಾಳೆ ಕೂಡ.” ನಾನವಳನ್ನು ಎರಡು ಬಾರಿ ನೋಡಿದ್ದೇನೆ, ಆದರೆ ದೂರದಿಂದ. ಅಂದರೆ ನೀನು ಈ ರೀತಿಯ ಸೌಂದರ್ಯವನ್ನ ಮೆಚ್ಚಿಕೊಳ್ಳುತ್ತೀಯ, ಹೌದಲ್ಲವೊ?” ಇದ್ದಕ್ಕಿದ್ದಂತೆ ಪ್ರಿನ್ಸ್‌ನನ್ನು ಕೇಳಿದಳು.

“ಹೌದು, ನಾನು ಮೆಚ್ಚಿಕೊಳ್ಳುತ್ತೇನೆ. ಈ ರೀತಿಯಲ್ಲಿ ಕಾಣುವವರನ್ನ.”

“ನೀನು ಹೇಳುವುದರ ಅರ್ಥ ವಿಶೇಷವಾಗಿ ಈ ರೀತಿ ಕಾಣುವವರನ್ನ ಮಾತ್ರ ಎಂದೇ?”

“ಹೌದು, ಈ ರೀತಿ ಕಾಣುವವರನ್ನ ಮಾತ್ರ.”

“ಯಾಕೆ?”

“ಈ ಮುಖದಲ್ಲಿ ಬಹಳಷ್ಟು ಯಾತನೆಯನ್ನ ಅನುಭವಿಸಿದ ಛಾಯೆಗಳಿವೆ,” ಪ್ರಿನ್ಸ್ ಗುನುಗುಟ್ಟಿದ, ಅವಳಿಗೆ ಉತ್ತರಕೊಡುವುದಕ್ಕಿಂತ ಹೆಚ್ಚಾಗಿ ತನಗೆ ತಾನೆ ಮಾತನಾಡಿಕೊಳ್ಳುವ ರೀತಿಯಲ್ಲಿ.

“ನನಗನ್ನಿಸುತ್ತದೆ ಪ್ರಿನ್ಸ್ ನೀನು ಸ್ವಲ್ಪ ಅಸಂಬದ್ಧವಾಗಿ ಮಾತನಾಡುತ್ತಿದ್ದೀಯ ಎಂದು,” ಅವನ ಮುಖವನ್ನ ಬಹಳಹೊತ್ತು ಸಮೀಕ್ಷಿಸಿದ ನಂತರ ಮೇಡಮ್ ಎಪಾಂಚಿನ್ ಹೇಳಿದಳು; ಅವಳು ಆ ಭಾವಚಿತ್ರವನ್ನ ಟೇಬಲ್ಲಿನ ಮೇಲಕ್ಕೆ ಅಹಂಕಾರದಿಂದ ಎಸೆದಳು.

ಅಲೆಕ್ಸಾಂಡ್ರ ಅದನ್ನ ತೆಗೆದುಕೊಂಡಳು, ಮತ್ತು ಅಡಲೈಡ ಕೂಡ ಅವಳ ಹತ್ತಿರಕ್ಕೆ ಬಂದಳು, ಇಬ್ಬರೂ ಹುಡುಗಿಯರು ಭಾವಚಿತ್ರವನ್ನ ಪರೀಕ್ಷಿಸಿದರು, ಅದೇ ಸಮಯಕ್ಕೆ ರೂಮಿನೊಳಕ್ಕೆ ಅಗ್ಲಾಯ ಕೂಡ ಬಂದಳು.

“ಎಷ್ಟೊಂದು ಶಕ್ತಿಯುತವಾಗಿದೆ!” ಅಡಲೈಡ ಇದ್ದಕ್ಕಿದ್ದಂತೆ ಹೇಳಿದಳು, ಅವಳು ಬಹಳ ಶ್ರದ್ಧೆಯಿಂದ ಭಾವಚಿತ್ರವನ್ನ ಅವಳ ಸೋದರಿಯ ಹೆಗಲ ಮೇಲಿನಿಂದ ವೀಕ್ಷಿಸುತ್ತಾ.

“ಯಾರದು, ಯಾವ ಶಕ್ತಿ?” ಅವಳ ತಾಯಿ ಕೋಪಗೊಂಡು ಕೇಳಿದಳು.

“ಈ ರೀತಿಯ ಸೌಂದರ್ಯವೇ ನಿಜವಾದ ಶಕ್ತಿ,” ಅಡೆಲೈಡ ಹೇಳಿದಳು. “ಅಂತಹ ಸೌಂದರ್ಯದಿಂದ ಪ್ರಪಂಚವನ್ನೇ ಬುಡಮೇಲು ಮಾಡಿಬಿಡಬಹುದು,” ಅವಳು ತನ್ನ ಪೇಂಯ್ಟಿಂಗ್ ಸ್ಟಾಂಡ್ ಬಳಿಗೆ ಅಲೋಚನಾಪರವಶಳಾಗಿ ವಾಪಸ್ಸಾದಳು.

ಅಗ್ಲಾಯ ಸುಮ್ಮನೆ ಭಾವಚಿತ್ರದ ಕಡೆಗೆ ಒಂದು ನೋಟ ಬೀರಿದಳು, ಮುಖ ಗಂಟಿಕ್ಕಿಕೊಂಡು ಮೂತಿಯನ್ನ ಸೊಟ್ಟಮಾಡಿಕೊಂಡು ಹೋಗಿ ಸೋಫಾದ ಮೇಲೆ ಕೈ ಕಟ್ಟಿಕೊಂಡು ಕುಳಿತುಕೊಂಡಳು. ಮೇಡಮ್ ಎಪಾಂಚಿನ್ ಕರೆಗಂಟೆಯನ್ನ ಬಾರಿಸಿದಳು.

“ಗವ್ರಿಲ ಅಡ್ರಲಿಯೊನೋವಿಚ್ ನನ್ನು ಇಲ್ಲಿಗೆ ಬರುವಂತೆ ಹೇಳು,” ಬಂದ ಸೇವಕನಿಗೆ ಆಜ್ಞೆ ಮಾಡಿದಳು.

“ಅಮ್ಮ!” ಅಲೆಕ್ಸಾಂಡ್ರ ಅಸಹನೆಯಿಂದಲೇ ಕೂಗಿಕೊಂಡಳು.

“ನಾನು ಅವನಿಗೆ ಬರೀ ಎರಡು ಮಾತುಗಳನ್ನ ಮಾತ್ರ ಹೇಳುತ್ತೇನೆ. ಅಷ್ಟೆ,” ಮಗಳ ನಡವಳಿಕೆ ಸೂಚಿಸುತ್ತಿದ್ದ ಎಲ್ಲಾ ಆಕ್ಷೇಪಣೆಗಳನ್ನೂ ತಳ್ಳಿಹಾಕಿ ಅವಳ ತಾಯಿ ಹೇಳಿದಳು; ಅವಳು ಗಂಭೀರವಾಗಿ ಅಸ್ವಸ್ಥಳಾಗಿದ್ದಳು. “ನೋಡು ಪ್ರಿನ್ಸ್ ನಮಗೆ ಎಲ್ಲವೂ ರಹಸ್ಯವಾಗಿಬಿಟ್ಟಿದೆ, ಈಗ ನಡೆದಿದ್ದೆಲ್ಲವನ್ನೂ ನೋಡು, ಎಲ್ಲವೂ ರಹಸ್ಯ. ನನಗೆ ಅನಿಸುವುದು ಮನೆಯಲ್ಲಿನ ನಡವಳಿಕೆಗಳೇ ರಹಸ್ಯವಾಗಿಬಿಟ್ಟಿವೆಯೆಂದು, ಒಂದಲ್ಲಾ ಒಂದು ಕಾರಣಕ್ಕೆ. ಇದೊಂದು ಮೂರ್ಖತನದಿಂದ ಕೂಡಿದ್ದು, ಅವಿವೇಕತನ, ಅದೂ ತೆರೆದ ಹೃದಯದಿಂದ ಮತ್ತು ಪ್ರಾಮಾಣಿಕತೆಯಿಂದ ಪರಿಗಣಿಸಬೇಕಾದ ವಿಷಯದ ಬಗ್ಗೆ. ಒಂದು ಮದುವೆಯ ಬಗ್ಗೆ ಮಾತುಕತೆ ನಡೆಯುತ್ತಿದೆ, ಮತ್ತು ನನಗೆ ಈ ಮದುವೆ ಇಷ್ಟವಿಲ್ಲ-”

“ಅಮ್ಮ ನೀನೇನನ್ನು ಹೇಳುತ್ತಿದ್ದೀಯ?” ಅಲೆಕ್ಸಾಂಡ್ರ ಆತುರದಿಂದ ಪುನಃ ಕೇಳಿದಳು.

“ಸರಿ, ನಿನಗೇನು, ನನ್ನ ಮಗಳೇ? ನೀನೇ ಬಹುಶಃ ಅದನ್ನ ಇಷ್ಟ ಪಡುತ್ತಿರುವಂತಿದೆ? ಯಾರೊಬ್ಬನಿಗೂ ಪರಿಜ್ಞಾನ ಇರುವುದು ಎಲ್ಲಕ್ಕಿಂತ ಶ್ರೇಷ್ಠವಾದದ್ದಾದರೂ- ಹೃದಯ ಮಾತ್ರ ಅತ್ಯುನ್ನತವಾದದ್ದು, ಮಿಕ್ಕಿದ್ದೆಲ್ಲಾ ಕಸ. ಬಹುಶಃ ಪ್ರಜ್ಞೆ ನಿಜಕ್ಕೂ ದೊಡ್ಡ ಸಂಗತಿ. ಆ ರೀತಿ ನಗಬೇಡ ಅಗ್ಲಾಯ. ನಾನೇನು ನನ್ನ ನಿಲುವನ್ನೇ ವಿರೋಧಿಸುತ್ತಿಲ್ಲ. ಬುದ್ಧಿಯಿಲ್ಲದ ಹೃದಯವಂತನಾದ ಒಬ್ಬ ಮೂರ್ಖ, ಒಬ್ಬ ಹೃದಯವಂತನಲ್ಲದ ಬುದ್ಧಿವಂತನಷ್ಟೇ ಅಸಂತೋಷದಿಂದ ಇರುತ್ತಾನೆ. ನಾನು ಅವೆರಡರಲ್ಲಿ ಒಂದು ಮತ್ತು ನೀವೆಲ್ಲಾ ಇನ್ನೊಂದು. ಆದ್ದರಿಂದ ನಾವುಗಳಿಬ್ಬರೂ ಹಿಂಸೆಯನ್ನ ಅನುಭವಿಸುತ್ತಲೇ ಇರುತ್ತೇವೆ, ನಾವೆಲ್ಲರೂ ಒಟ್ಟಿಗೆ ಅಸಂತೋಷದಿಂದ ಇರುತ್ತೇವೆ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-1)

“ನೀನ್ಯಾಕೆ ಅಷ್ಟೊಂದು ಅಸಂತೋಷದಿಂದ ಇದ್ದೀಯ ಅಮ್ಮ?” ಅಡಲೈಡ ಕೇಳಿದಳು ಮತ್ತು ಎಲ್ಲರಿಗಿಂತಲೂ ಹೆಚ್ಚಾಗಿ ಸಮಚಿತ್ತತೆಯನ್ನ ಮತ್ತು ಉತ್ಸಾಹವನ್ನ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದವಳು ಅವಳೊಬ್ಬಳೇ.

“ಮೊದಲನೆಯದಾಗಿ ಪ್ರತಿ ಹೆಜ್ಜೆಗೂ ಎಚ್ಚರಿಕೆ ವಹಿಸಿ ಚಿಕ್ಕವಯಸ್ಸಿನಿಂದ ಬೆಳೆಸಿದ ಹೆಣ್ಣುಮಕ್ಕಳ ಕಾರಣದಿಂದ” ಮೇಡಮ್ ಎಪಾಂಚಿನ್ ಕಡ್ಡಿ ತುಂಡಾಗುವಂತೆ ಹೇಳಿದಳು; “ಮತ್ತು ನಾನು ಅದನ್ನೇ ನೀನು ಕೇಳಿದ್ದಕ್ಕೆ ಅತ್ಯುತ್ತಮ ಕಾರಣವನ್ನಾಗಿ ಕೊಡುತ್ತೇನೆ, ಅಂದರೆ ಬೇರೆಯವರ ಬಗ್ಗೆ ಸದ್ಯಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಅನ್ನುವುದಕ್ಕೆ. ಸಾಕಷ್ಟು ಮಾತುಗಳನ್ನ ಈಗಾಗಲೇ ಆಡಾಯಿತು! ಈಗ ನಾವು ಪರಿಗಣಿಸಬೇಕಾದದ್ದು ನೀವಿಬ್ಬರೂ (ಅಗ್ಲಾಯಳನ್ನ ಈಗ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ), ನಿಮ್ಮ ವ್ಯವಹಾರಗಳನ್ನು ಜಾಗರೂಕತೆಯಿಂದ ನಿರ್ವಹಿಸುತ್ತೀರ ಎನ್ನುವುದನ್ನ, ಅದರಲ್ಲೂ ನೀನು ಅತ್ಯಂತ ಪೂಜ್ಯನೀಯ ಅಲೆಕ್ಸಾಂಡ್ರ ಇವಾನೊವ್ನ, ನಿನ್ನ ಸಹಚರನ ಜೊತೆ ಸಂತೋಷದಿಂದ ಇರುತ್ತೀಯಾ ಎನ್ನುವುದನ್ನ.”

“ಆ” ಅಂತ ಗಾನಿಯಾ ಇದ್ದಕ್ಕಿದ್ದಂತೆ ರೂಮಿನ ಒಳಗಡೆಗೆ ಬಂದ ತಕ್ಷಣ ಅವ ಹೇಳಿದಳು, “ಇಲ್ಲಿದೆ ಇನ್ನೊಂದು ಮದುವೆಯಾಗಲಿರುವ ಪ್ರಾಣಿ, ಹೇಗಿದ್ದೀಯ?” ಅವಳು ಗಾನಿಯ ಬಗ್ಗಿ ವಂದಿಸಿದ್ದಕ್ಕೆ ಉತ್ತರವಾಗಿ ಮುಂದುವರಿಸಿದಳು. ಆದರೆ ಅವನನ್ನು ಬಂದು ಕುಳಿತುಕೊ ಎಂದು ಸ್ವಾಗತಿಸಲೇ ಇಲ್ಲ. “ನೀನೀಗ ಮದುವೆಯಾಗುತ್ತಿದ್ದೀಯ?”

“ಮದುವೆ? ಹೇಗೆ, ಯಾವ ಮದುವೆ?” ಗಾನಿಯಾ ಗುನುಗುಟ್ಟಿದ, ಗೊಂದಲಗೊಂಡು ಪರಾಜಿತನಾದವನಂತೆ.

“ನೀನೀಗ ಇನ್ನೇನು ಒಬ್ಬಳು ಹೆಂಡತಿಯನ್ನ ಪಡೆಯುವ ಹಂತ ತಲುಪಿದ್ದೀಯ? ನಾನು ಕೇಳುತ್ತಿದ್ದೇನೆ, ನಾನು ಈ ರೀತಿಯ ಶೈಲಿಯಲ್ಲಿ ಕೇಳುವುದನ್ನ ನೀನು ಇಷ್ಟಪಟ್ಟರೆ.”

“ಇಲ್ಲ, ಇಲ್ಲ, ನಾನು- ಇಲ್ಲ!” ತನ್ನ ಸುಳ್ಳಿನಿಂದ ಮುಖ ಅವಮಾನಗೊಂಡು, ಕೆಂಪಗೆ ಮಾಡಿಕೊಂಡು ಅದನ್ನು ಪ್ರಕಟಪಡಿಸುತ್ತಾ ಅವನು ಹೇಳಿದ. ಅವನು ಸ್ವಲ್ಪ ದೂರದಲ್ಲಿ ಕುಳಿತಿದ್ದ ಅಗ್ಲಾಯಳ ಕಡೆಗೆ ತೀಕ್ಷ್ಣವಾಗಿ ಕಣ್ಣು ಹಾಯಿಸಿ ತಕ್ಷಣ ತನ್ನ ನೋಟವನ್ನ ಕೆಳಗೆ ಮಾಡಿದ.

ಅಗ್ಲಾಯ ನಿರ್ಭಾವುಕತೆಯಿಂದ, ಮನಸ್ಥಿಮಿತದಿಂದ ಮತ್ತು ತೀವ್ರವಾಗಿ ಅವನ ಕಡೆಗೆ ದಿಟ್ಟಿಸಿ ನೋಡಿದಳು, ಅವನ ಮುಖದ ಮೇಲಿನ ತನ್ನ ದೃಷ್ಟಿಯನ್ನ ಬದಲಾಯಿಸದೇ, ಅವನ ಗೊಂದಲಗಳನ್ನ ವೀಕ್ಷಿಸುತ್ತಿದ್ದಳು.

“ಅಥವ ನೀನು ಇಲ್ಲವೇ ಇಲ್ಲ ಅಂತ ಹೇಳುತ್ತೀಯ, ಹೌದಲ್ಲವೊ?” ನಿಷ್ಕರುಣಿಯಾದ ಮೇಡಮ್ ಎಪಾಂಚಿನ್ ಮುಂದುವರಿಸಿದಳು. “ಸರಿ ಹಾಗಾದರೆ, ನೀನಿದನ್ನ ನನ್ನ ಪ್ರಶ್ನೆಗೆ ಉತ್ತರವಾಗಿ ಬುಧವಾರದ ದಿನದ ಬೆಳಿಗ್ಗೆ ಹೇಳಿದೆಯೆಂದು ನಾನೀಗ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ, ಅಂದರೆ ನೀನು ಮದುವೆಯಾಗುವುದಿಲ್ಲ ಎಂದು. ಇವತ್ತು ದಿನ ಯಾವುದು? ಓ ಹೌದು ಬುಧವಾರ, ಹೌದಲ್ಲವೊ?”

“ಹೌದು, ಇಂದು ಬುಧವಾರವೇ!” ಅಡಲೈಡ ಹೇಳಿದಳು.

“ಒಮ್ಮೊಮ್ಮೆ ವಾರದ ದಿನ ಯಾವುದೆಂದು ಗೊತ್ತೇ ಆಗುವುದಿಲ್ಲ; ಇಂದು ತಿಂಗಳ ಎಷ್ಟನೇ ದಿನ?”

“ಇಪ್ಪತ್ತೇಳನೇ ದಿನ,” ಗಾನಿಯಾ ಹೇಳಿದ.

“ಇಪ್ಪತ್ತೇಳನೆ ದಿನ; ಒಳ್ಳೆಯದಾಯ್ತು, ಈಗ ನೀನಿನ್ನು ಹೊರಡು; ನಿನಗೆ ಮಾಡಲು ತುಂಬಾ ಕೆಲಸವಿದೆ, ನಾನು ಸಿದ್ಧಳಾಗಿ ಈಗ ಹೊರಗೆ ಹೋಗಬೇಕು, ನಿನ್ನ ಆ ಭಾವಚಿತ್ರವನ್ನ ತೆಗೆದುಕೊಂಡು ಹೋಗು. ನಿನ್ನ ನತದೃಷ್ಟ ತಾಯಿ ನೀನ ಅಲೆಕ್ಸಾಂಡ್ರೊವ್ನಳಿಗೆ ನನ್ನ ಗೌರವವನ್ನ ಸಲ್ಲಿಸು. ಸರಿ, ಗುಡ್ ಬೈ ಪ್ರೀತಿಯ ಪ್ರಿನ್ಸ್, ಆಗಾಗ್ಗೆ ನಮ್ಮನ್ನ ನೋಡಲು ಬರುತ್ತಿರು, ನಾನು ವೃದ್ಧ ಪ್ರಿನ್ಸೆಸ್ ಬೀಲೊಕೊನಸ್ಕಿಗೆ ನಿನ್ನ ಬಗ್ಗೆ ಹೇಳುತ್ತೇನೆ. ನಾನು ಯಾವುದೊ ಒಂದು ಕೆಲಸಕ್ಕೋಸ್ಕರ ಅವಳನ್ನ ಹೊಗಿ ನೋಡಬೇಕು. ಮತ್ತೆ ಕೇಳಿಸಿಕೊ ನನ್ನ ಪ್ರೀತಿಯ ಹುಡುಗನೇ, ದೇವರೆ ನಿನ್ನನ್ನು ಸ್ವಿಟ್ಜರ್ಲ್ಯಾಂಡ್‌ನಿಂದ ನನ್ನ ಬಳಿಗೆ ಯಾವುದೋ ಒಂದು ಸದುದ್ದೇಶದಿಂದ ಕಳುಹಿಸಿದ್ದಾನೆ ಅಂತ ನನಗನಿಸುತ್ತದೆ. ಬಹುಶಃ ನಿನಗೆ ಇನ್ನೂ ಮಾಡಲು ಬೇರೆ ಕೆಲಸಗಳೂ ಇರುತ್ತವೆ, ಈಗಿರುವುದಲ್ಲದೇ, ಆದರೆ ನೀನಿಲ್ಲಿ ಬಂದಿರುವುದು ಮುಖ್ಯವಾಗಿ ನನಗೋಸ್ಕರ, ನನಗೆ ಅದರ ಬಗ್ಗೆ ದೃಢವಾದ ನಂಬಿಕೆ ಇದೆ. ದೇವರೇ ನನ್ನ ಬಳಿಗೇ ಕಳುಹಿಸಿರುವುದು! ಗುಡ್ ಬೈ! ಅಲೆಕ್ಸಾಂಡ್ರ ನನ್ನ ಜೊತೆಯಲ್ಲಿ ಬಾ ನನ್ನ ಪ್ರೀತಿಪಾತ್ರಳೇ.”

ಮೇಡಮ್ ಎಪಾಂಚಿನ್ ರೂಮಿನಿಂದ ಆಚೆಗೆ ಹೋದಳು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿಯನ್ನು ಟೀಕಿಸಿರುವ ಉದ್ಧವ್ ಠಾಕ್ರೆಯ ವೈರಲ್ ಭಾಷಣ 2019ರದ್ದು

0
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ರಾಹುಲ್ ಗಾಂಧಿಯನ್ನು ನಾಲಾಯಕ್ (ನಿಷ್ಪ್ರಯೋಜಕ) ಎಂದು ಕರೆದಿರುವುದಲ್ಲದೆ, ಅವರಿಗೆ ಹೊಡೆಯಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಠಾಕ್ರೆ ಅವರು"...