Homeಕರ್ನಾಟಕಆಸ್ಪತ್ರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಕೊರೊನಾ ಮೃತದೇಹಗಳು ಪತ್ತೆ ಪ್ರಕರಣ: ಸಚಿವ ಸುರೇಶ್ ಕುಮಾರ್ ವಿರುದ್ಧ ಎಎಪಿ...

ಆಸ್ಪತ್ರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಕೊರೊನಾ ಮೃತದೇಹಗಳು ಪತ್ತೆ ಪ್ರಕರಣ: ಸಚಿವ ಸುರೇಶ್ ಕುಮಾರ್ ವಿರುದ್ಧ ಎಎಪಿ ಆಕ್ರೋಶ

- Advertisement -
- Advertisement -

ಬೆಂಗಳೂರಿನ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟ 15 ತಿಂಗಳ ಬಳಿಕ ಕೋವಿಡ್‌ ರೋಗಿಗಳ ಮೃತದೇಹಗಳು ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಸುರೇಶ್‌ ಕುಮಾರ್‌ ಸರ್ಕಾರಕ್ಕೊಂದು ಪತ್ರ ಬರೆದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿದೆ.

ESI ಆಸ್ಪತ್ರೆಯ ಶವಾಗಾರದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದ ದುರ್ಗಾ ಸುಮಿತ್ರಾ (40) ಮತ್ತು ಮುನಿರಾಜು (50) ಎಂಬುವವರ ಮೃತದೇಹಗಳನ್ನಿಟ್ಟು ಆಸ್ಪತ್ರೆ ಸಿಬ್ಬಂದಿ ಮರೆತುಬಿಟ್ಟಿದ್ದಾರೆ. ಮೊನ್ನೆ ಶವಾಗಾರ ಸ್ವಚ್ಛಗೊಳಿಸುವ ವೇಳೆ ಸಿಬ್ಬಂದಿಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಎಪಿಯ ಬೆಂಗಳೂರು ನಗರ ಉಪಾಧ್ಯಕ್ಷ ಹಾಗೂ ರಾಜಾಜಿನಗರ ಉಸ್ತುವಾರಿ ಬಿ.ಟಿ.ನಾಗಣ್ಣ, “ಇಎಸ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಇಬ್ಬರು ಕೋವಿಡ್‌ ರೋಗಿಗಳ ಶವವು ಬರೋಬ್ಬರಿ 15 ತಿಂಗಳ ಬಳಿಕ ಪತ್ತೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಕೋವಿಡ್‌ ರೋಗಿಗಳನ್ನು ಸರ್ಕಾರ ಎಷ್ಟು ಹೀನಾಯವಾಗಿ ನೋಡಿಕೊಂಡಿದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆ. ಸುರೇಶ್‌ ಕುಮಾರ್‌ರವರು ಶಾಸಕ ಹಾಗೂ ಸಚಿವರಾಗಿದ್ದ ಸಂದರ್ಭದಲ್ಲೇ ಪ್ರಕರಣ ನಡೆದಿದೆ. ಅವರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದ್ದು, ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊರಬೇಕು” ಎಂದು ಆಗ್ರಹಿಸಿದೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ದೇಶಗಳಲ್ಲಿ ಕೊರೊನಾ ನಾಲ್ಕನೇ ಅಲೆ; ಭಾರತ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆಯೇ?

“ಸುರೇಶ್‌ ಕುಮಾರ್‌ ಅವರು ಉಸ್ತುವಾರಿ ಸಚಿವರಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಒಂದೇ ದಿನ 24 ಮಂದಿ ಮೃತಪಟ್ಟಿದ್ದರು. ಈಗ ಅವರದೇ ಕ್ಷೇತ್ರದ ಇಎಸ್‌ಐ ಅವ್ಯವಸ್ಥೆ ಬಯಲಾಗಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ” ಎಂದು ಆರೋಪಿಸಿದರು.

“ಶವಾಗಾರದಲ್ಲಿ ಶವವನ್ನು ಇಟ್ಟ ನಂತರ ಅದರ ಮೇಲೆ ಸ್ಟಿಕ್ಕರ್‌ ಅಂಟಿಸುವ ಪದ್ಧತಿಯನ್ನು ಇಎಸ್‌ಐನಲ್ಲಿ ಅನುಸರಿಸಲಾಗುತ್ತದೆ. ಆದರೆ ಈ ಶವಗಳಿಗೆ ಸ್ಟಿಕ್ಕರ್‌ ಅಂಟಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೋವಿಡ್‌ ಸಾವಿಗೆ ಸಂಬಂಧಿಸಿ ಸುಳ್ಳು ಲೆಕ್ಕ ನೀಡುವ ಉದ್ದೇಶದಿಂದಲೇ ಹೀಗೆ ಮಾಡಿರುವ ಸಂಶಯವಿದೆ. ಆಸ್ಪತ್ರೆಯ ಉನ್ನತ ಅಧಿಕಾರಿಗಳನ್ನು ಬಂಧಿಸಿ ತನಿಖೆ ನಡೆಸಿದರೆ ಮಾತ್ರ ಸತ್ಯ ಹೊರಬರಲಿದೆ. ಇನ್ನೂ ಎಷ್ಟು ಶವಗಳನ್ನು ಮುಚ್ಚಿಡಲಾಗಿತ್ತು, ಇದಕ್ಕೆ ಅಸಲಿ ಕಾರಣವೇನು ಎಂಬುದು ಬೆಳಕಿಗೆ ಬರಬೇಕು” ಎಂದು ಬಿ.ಟಿ.ನಾಗಣ್ಣ ಆಗ್ರಹಿಸಿದರು.

’ಸರ್ಕಾರ ಹಾಗೂ ಆಸ್ಪತ್ರೆಯ ಮೇಲೆ ಭರವಸೆಯಿಟ್ಟು ರೋಗಿಗಳನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್‌ ರೋಗಿ ಮೃತಪಟ್ಟಾಗ ಸೂಕ್ತ ರೀತಿಯಲ್ಲಿ ಗೌರವದಿಂದ ಅಂತ್ಯಕ್ರಿಯೆ ಮಾಡುವುದು ಅಥವಾ ಕುಟುಂಬಕ್ಕೆ ಹಸ್ತಾಂತರಿಸುವುದು ಆಸ್ಪತ್ರೆಯ ಜವಾಬ್ದಾರಿಯಾಗಿದೆ. ಅದರ ಬದಲು ಈ ರೀತಿ 15 ತಿಂಗಳ ಕಾಲ ಕೊಳೆಯುವಂತೆ ಮಾಡಿರುವುದು ಅತ್ಯಂತ ಅಮಾನವೀಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದಿದ್ದಾರೆ.

ಘಟನೆ ಸಂಬಂಧ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಕಾರ್ಮಿಕ ಸಚಿವ ಎ.ಶಿವರಾಮ್ ಹೆಬ್ಬಾರ್ ಅವರಿಗೆ ಪತ್ರ ಬರೆದಿದ್ದು, ಈ ವಿಷಯವನ್ನು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ತಿಳಿಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೂವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರಕ್ಕೊಂದು ಪತ್ರ ಬರೆದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಶಾಸಕ ಸುರೇಶ್ ಕುಮಾರ್ ಯತ್ನಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿದೆ.

————-

ಇದನ್ನೂ ಓದಿ: ಬೆಂಗಳೂರಿನ ESI ಆಸ್ಪತ್ರೆ ನಿರ್ಲಕ್ಷ್ಯ: ಒಂದೂವರೆ ವರ್ಷದ ಬಳಿಕ ಶವಾಗಾರದಿಂದ ಕೊರೊನಾ ಪೀಡಿತರ ಮೃತದೇಹ ಹೊರ ತೆಗೆದ ಸಿಬ್ಬಂದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...